ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ

ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ. ಇದು ಉಡುಪಿ ಜಿಲ್ಲೆಯ ಕುಂದಾಪುರದಿಂದ ೩೫ ಕಿ.ಮೀ ದೂರದಲ್ಲಿದೆ.[೧] ಕಮಲಶಿಲೆಯು ಸುಂದರವಾದ ಪರ್ವತಗಳು ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಅದರ ಪಕ್ಕದಲ್ಲಿ ಕುಬ್ಜಾ ನದಿ ಹರಿಯುತ್ತದೆ.[೨] ಕಮಲಶಿಲೆಯು ಗ್ರಾಮದ ಹೃದಯಭಾಗದಲ್ಲಿರುವ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ

ದೇವಸ್ಥಾನದ ಬಗ್ಗೆ ಬದಲಾಯಿಸಿ

ಕಲ್ಲಿನ ಲಿಂಗದಿಂದ ಈ ಸ್ಥಳಕ್ಕೆ ಕಮಲಶಿಲೆ ಎಂಬ ಹೆಸರು ಬಂದಿದೆ. ಇಲ್ಲಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.[೩] ಇದು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ ದೇವಿಯರ ಸಂಗಮವಾಗಿದೆ. ೧೯೬೮ ರಲ್ಲಿ, ಕುಬ್ಜಾ ನದಿಯಿಂದ ಪ್ರವಾಹದ ನೀರು ದೇವಾಲಯವನ್ನು ಮುಳುಗಿಸಿತು ಮತ್ತು ನೀರಿನ ಮಟ್ಟವು ಸುಮಾರು ೨೦ ಅಡಿಗಳಿಗೆ ಏರಿತು. ಇದರಿಂದ ನದಿಯ ಕಡೆ ಇರುವ ಗೋಡೆ ಕುಸಿಯಿತು. ನಂತರ ೧೯೯೦ ರಲ್ಲಿ ಇಡೀ ದೇವಾಲಯವನ್ನು ಪುನರ್ನಿರ್ಮಿಸಲಾಯಿತು. ಇಡೀ ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಮರವು ಹಲಸು ಮತ್ತು ಭೋಗಿಯ ಮಿಶ್ರಣವನ್ನು ಮಾತ್ರ ಒಳಗೊಂಡಿದೆ. ಮುಸ್ಲಿಂ ದೊರೆಗಳಾದ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಅವರಿಗೆ ಗೌರವಾರ್ಥವಾಗಿ "ಸಲಾಮ್ ಪೂಜೆ" ಎಂದು ಕರೆಯಲ್ಪಡುವ ವಿಶೇಷ ಪೂಜೆಯನ್ನು ಪ್ರತಿದಿನ ಸಂಜೆ ನಡೆಸಲಾಗುತ್ತದೆ. ಈ ಪದ್ಧತಿಯು ಬಹಳ ಹಿಂದಿನಿಂದಲೂ ಇದೆ.[೪]

ದ್ವಜ ಸ್ತಂಭ ಬದಲಾಯಿಸಿ

ಧ್ವಜವು ಬುಡದಿಂದ ತುದಿಯವರೆಗೆ ಸರಿಸುಮಾರು ೭೫ ಅಡಿಗಳಷ್ಟು ಉದ್ದವಿದೆ. ಇದನ್ನು ಕುಬ್ಜಾ ನದಿಯ ದಡದಿಂದ ವಿಶೇಷವಾಗಿ ಆಯ್ಕೆ ಮಾಡಲಾದ ಏಕಮರ(ಭೋಗಿ ಮರ)ದಿಂದ ಮಾಡಲಾಗಿದೆ. ದ್ವಜ ಸ್ತಂಭಕ್ಕೆ ಲೇಪನ ಮಾಡಲು ಸುಮಾರು ೨೦೦ ಕೆಜಿ ಬೆಳ್ಳಿಯನ್ನು ಬಳಸಲಾಗಿದೆ. ಅದನ್ನು ದೇವಾಲಯದ ಭಕ್ತರು ಕೊಡುಗೆಯಾಗಿ ನೀಡಿದ್ದಾರೆ. ೨ನೇ ಏಪ್ರಿಲ್ ೨೦೧೦ ರಂದು ಧ್ವಜವನ್ನು ಉದ್ಘಾಟಿಸಲಾಯಿತು. ಇದನ್ನು ದ್ವಜಾರೋಹಣ ದಿನವೆಂದು ಪರಿಗಣಿಸಲಾಗಿದೆ.

ದೇವತೆಯ ಬಗ್ಗೆ ಬದಲಾಯಿಸಿ

ದೈವತ್ವವು ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಯಾಗಿದೆ. ಇದು ಮಹಾಕಾಳಿ ದೇವಿ, ಸರಸ್ವತಿ ದೇವಿ ಮತ್ತು ಲಕ್ಷ್ಮಿ ದೇವಿಯ ಏಕೀಕೃತ ಅಭಿವ್ಯಕ್ತಿಯಾಗಿದೆ.

ದಂತಕಥೆ ಮತ್ತು ಕಥೆಗಳು ಬದಲಾಯಿಸಿ

ಸಹ್ಯಾದ್ರಿ ಕಾಂಡದ ಸ್ಕಂದ ಪುರಾಣದ ಪ್ರಕಾರ ಪಿಂಗಳಾ ಎಂಬ ಅಪ್ಸರೆಯು ಕೈಲಾಸ ಪರ್ವತದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆಸ್ಥಾನದಲ್ಲಿ ನರ್ತಕಿಯಾಗಿದ್ದಳು. ಒಂದು ದಿನ ತನ್ನ ಅಹಂಕಾರದಿಂದ ಅವಳು ನೃತ್ಯ ಮಾಡಲು ನಿರಾಕರಿಸಿದಳು. ಇದರಿಂದ ಕೊಪಗೊಂಡ ಪಾರ್ವತಿ ದೇವಿಯ ಶಾಪವನ್ನು ನೀಡಿದಳು. ಇದರಿಂದ ಅವಳು ತನ್ನ ಸೌಂದರ್ಯವನ್ನು ಕಳೆದುಕೊಂಡಳು ಮತ್ತು ಭೂಲೋಕದಲ್ಲಿ ಕುಬ್ಜ ಆಗಿ ಜನಿಸಿದಳು. ತನ್ನ ತಪ್ಪಿನ ಅರಿವಾಗಿ ಪಿಂಗಳಾ ಶಾಪದಿಂದ ಮುಕ್ತಿಯನ್ನು ಬೇಡಿಕೊಂಡಾಗ ಪಾರ್ವತಿ ದೇವಿಯು ಖರಾಸುರನ ಎಲ್ಲಾ ದುಷ್ಕೃತ್ಯಗಳನ್ನು ತೊಡೆದುಹಾಕಲು ಭೂಲೋಕಕ್ಕೆ ಬರುವುದಾಗಿ ಮತ್ತು ಸಂಹಾರದ ನಂತರ ಮುಂದೆ ಲಿಂಗದ ರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದಳು. ಸಹ್ಯಾದ್ರಿ ಅರಣ್ಯದಲ್ಲಿರುವ ಋಷಿ ಆಶ್ರಮದ ಬಳಿ ಲಿಂಗವು ಕಮಲಶಿಲೆಯ ರೂಪದಲ್ಲಿರುತ್ತದೆ ಎಂದು ತಿಳಿಸಿದರು. ಪಾರ್ವತಿ ದೇವಿಯು ಕುಬ್ಜಳಿಗೆ ಸುಪಾರ್ಶ್ವ ಗುಹೆಯ ಬಳಿ ಹೋಗಿ ದೇವಿಯು ಮೋಕ್ಷವನ್ನು ನೀಡುವವರೆಗೆ ತಪಸ್ಸು ಮಾಡುವಂತೆ ಹೇಳಿದಳು. ನಂತರ ಕುಬ್ಜಳಿಂದ ಸಂತೋಷಗೊಂಡ ಪಾರ್ವತಿ ದೇವಿಯು ಕಮಲಶಿಲೆ (ಲಿಂಗ) ರೂಪದಲ್ಲಿ ರೈಕ್ವಾ ಋಷಿ ಆಶ್ರಮದ ಮುಂಭಾಗದಲ್ಲಿರುವ ಕುಬ್ಜಾ ನದಿ ಮತ್ತು ನಾಗ ತೀರ್ಥದ ಸಂಗಮದಲ್ಲಿ ಕಾಣಿಸಿಕೊಂಡಳು. ಕುಬ್ಜಳಿಗೆ ಮಥುರಾಕ್ಕೆ ಹೋಗಿ ಶ್ರೀಕೃಷ್ಣನಿಗಾಗಿ ಕಾಯಲು ಹೇಳಲಾಯಿತು ನಂತರ ಶ್ರೀಕೃಷ್ಣನ ಸ್ಪರ್ಶದಿಂದ ಅವಳು ತನ್ನ ಶಾಪವಿಮೋಚನೆಯನ್ನು ಪಡೆಯುತ್ತಾಳೆ. ಸಹ್ಯಾದ್ರಿ ಅರಣ್ಯದಿಂದ ಹುಟ್ಟಿ ಪಶ್ಚಿಮ ಕರಾವಳಿಯ ಕಡೆಗೆ ಹರಿಯುವ ನದಿಗೆ ತನ್ನ (ಕುಬ್ಜಾ) ಹೆಸರಿಡುವಂತೆ ಬೇದಿಕೊಂಡಳು. ಪ್ರತಿ ವರ್ಷ ಪ್ರವಾಹ ರೂಪದಲ್ಲಿ ಬಂದು ಲಿಂಗವನ್ನು ಸ್ಪರ್ಶಿಸಿ ಪೂಜಿಸು ಎಂದು ದೇವಿಯು ಅವಳಿಗೆ ಹೇಳಿದಳು. ಕಮಲಶಿಲೆ (ದೇವತೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿಯ) ಲಿಂಗವು ಪ್ರಪಂಚವನ್ನು ಸೃಷ್ಟಿಸಿದಾಗ ಅದೇ ಸಮಯದಲ್ಲಿ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ಕಮಲಶಿಲೆ (ಲಿಂಗ) ಬ್ರಹ್ಮ ಲಿಂಗೇಶ್ವರ ಎಂದು ಪೂಜಿಸಲ್ಪಟ್ಟಿತು. ನಂತರ ಜನರು ಸಾಕ್ಷಾತ್ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ಎಂದು ತಿಳಿದುಕೊಂಡರು.

ಸುಪಾರ್ಶ್ವ ಗುಹೆ ಬದಲಾಯಿಸಿ

ಕೃತಯುಗದಲ್ಲಿ ರಾಜ ಸುಪಾರ್ಶ್ವ ತಪಸ್ಸು ಮಾಡಲು ಮತ್ತು ಮೋಕ್ಷವನ್ನು ಪಡೆಯಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದಾಗ ಅವನು ಈ ಗುಹೆಯನ್ನು ಕಂಡನು ಮತ್ತು ತಪಸ್ಸಿಗೆ ಇದು ಸೂಕ್ತವೆಂದು ಕಂಡುಕೊಂಡನು. ಈ ಗುಹೆಗೆ ರಾಜ ಸುಪರ್ಶನ ಹೆಸರನ್ನು ಇಡಲು ಇದು ಕಾರಣವಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ತಪಸ್ಸು ಮಾಡಲು ಅನುಗ್ರಹಿಸುವಂತೆ ರಾಜ ಸುಪಾರ್ಶ್ವ ಶಿವನನ್ನು ಪ್ರಾರ್ಥಿಸುತ್ತಾನೆ. ರಾಜನ ತಪಸ್ಸಿಗೆ ಭಂಗ ಬರದಂತೆ ನೋಡಿಕೊಳ್ಳಲು ಭಗವಾನ್ ಶಿವನು ತನ್ನ ಗಣಗಳಾದ ಭೈರವನನ್ನು ಗುಹೆಯ ಪ್ರವೇಶದ್ವಾರದಲ್ಲಿ ಶಾಶ್ವತವಾಗಿ ಉಳಿಯಲು ನೇಮಿಸುತ್ತಾನೆ. ಬಹಳಷ್ಟು ಋಷಿಗಳು ಮತ್ತು ಮಹಾರಾಜರು ಈ ಗುಹೆಗೆ ತಪಸ್ಸು ಮಾಡಲು ಬಂದಿದ್ದಾರೆ. ಮತ್ತು ಅವರಲ್ಲಿ ಒಬ್ಬರು ವರದಾಪುರದ ಶ್ರೀ ಶ್ರೀಧರ ಸ್ವಾಮೀಜಿ. ಇದು ಹಳ್ಳಿಹೊಳ್ಳೆ ರಸ್ತೆಯಲ್ಲಿರುವ ದೇವಸ್ಥಾನದಿಂದ ಸುಮಾರು ೨ ಕಿ.ಮೀ ದೂರದಲ್ಲಿದೆ. ಗುಹೆಯ ಪ್ರವೇಶದ್ವಾರದಲ್ಲಿ ಭೈರವ ಸ್ವಾಮಿಯ ವಿಗ್ರಹವನ್ನು ಪೂಜಿಸಲಾಗುತ್ತದೆ. ಗುಹೆಯಲ್ಲಿ ಎಡಕ್ಕೆ ಒಂದು ಚಿಕ್ಕ ೩ ಪ್ರತ್ಯೇಕ ಲಿಂಗಗಳಿವೆ ಇದನ್ನು ಕೂಡ ತ್ರಿ-ಶಕ್ತಿ ಲಿಂಗ ಎಂದು ಕರೆಯಲಾಗುತ್ತದೆ - ಕಾಳಿ, ಲಕ್ಷ್ಮಿ, ಸರಸ್ವತಿ. ಮತ್ತಷ್ಟು ಬಲಕ್ಕೆ ರಾಜ ಸುಪಾರ್ಶ್ವ, ಆದಿ-ಶೇಷ ಮತ್ತು ಶ್ರೀ ಶ್ರೀಧರ ಸ್ವಾಮಿಗಳು ತಿಂಗಳು ಮತ್ತು ವರ್ಷಗಳ ಕಾಲ ತಪಸ್ಸು ಮಾಡಿದ ಸ್ಥಳವಾಗಿದೆ. ಗುಹೆಯೊಳಗೆ ಸ್ವಲ್ಪ ಕೆಳಗೆ ನಾಗ ತೀರ್ಥದ ಜನ್ಮ ಸ್ಥಳವನ್ನು ನೋಡಬಹುದು. ಇದು ಬಂಡೆಗಳ ನಡುವೆ ಹರಿಯುತ್ತದೆ ಮತ್ತು ಕಮಲಶಿಲೆ ದೇವಸ್ಥಾನದ ಬಳಿ ಕುಬ್ಜಾ ನದಿಯನ್ನು ಸೇರುತ್ತದೆ. ಮುಂದೆ ಒಳಭಾಗದಲ್ಲಿ ನಾಗ ಸನ್ನಿದಿ ಇದೆ. ಇಲ್ಲಿ ಎತ್ತರದ ಗುಮ್ಮಟವಿದ್ದು ಅಲ್ಲಿ ನೂರಾರು ಬಾವಲಿಗಳು ನೆಲೆಸಿರುವುದನ್ನು ಕಾಣಬಹುದು. ಬಹಳ ಹಿಂದೆಯೇ ಗರುಡನಿಂದ ಸಾಯುವ ಭಯದಿಂದ ಆದಿಶೇಷನು ತನಗಿದ್ದ ಶಾಪದಿಂದ ಮುಕ್ತಿ ಕೋರಿ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಯ ಬಳಿಗೆ ಬಂದನು ಎಂದು ಹೇಳಲಾಗುತ್ತದೆ. ದೇವಿಯು ಆದಿಶೇಷನಿಗೆ ಮರಣವನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ವಿಷ್ಣು ದೇವರಿಗೆ ಹಾಸಿಗೆಯಾಗಲು ತಿಳಿಸಿದಳು. ಇತರ ಎಲ್ಲಾ ನಾಗಗಳು ದೇವಿಯನ್ನು ಬೇಡಿಕೊಂಡರು ಎಂದು ಹೇಳಲಾಗುತ್ತದೆ. ದೇವಿಯು ಅವರನ್ನು ಸುಪರ್ಶ ಗುಹೆಯಲ್ಲಿ ಬಂದು ಅಡಗಿಕೊಳ್ಳಲು ತಿಳಿಸಿದರು. ಇದರಿಂದ ಅವರು ಗರುಡನಿಂದ ರಕ್ಷಣೆ ಪಡೆಯಬಹುದೆಂಬ ಮಾರ್ಗವನ್ನು ತಿಳಿಸಿದರು. ದೇವಿಯ ವಾಹನವಾದ ಹುಲಿಯು ಸುಪಾರ್ಶ್ವ ಗುಹೆಯ ಬಳಿ ವಿಶ್ರಾಂತಿ ಪಡೆಯಲು ಬರುತ್ತದೆ. ಹುಲಿಯು ತನ್ನನ್ನು ಬೆಚ್ಚಗಾಗಿಸಲು ಗುಹೆಯ ಬಳಿ ಬರುತ್ತದೆ ಆದ್ದರಿಂದ ಗುಹೆಯ ಮುಂಭಾಗದ ಸ್ಥಳದಲ್ಲಿ ಬೆಂಕಿಯನ್ನು ಬೆಳಗಿಸುವುದು ಒಂದು ಪದ್ಧತಿಯಾಗಿದೆ. ಸುಪಾರ್ಶ್ವ ಗುಹೆಯನ್ನು ಭೇಟಿ ಮಾಡಲು ದೇವಾಲಯದ ಸಿಬ್ಬಂದಿಯೊಬ್ಬರ ಸಹಾಯವನ್ನು ಪಡೆಯಿರಿ ಮತ್ತು ತಪ್ಪದೆ ಟಾರ್ಚ್ ಅನ್ನು ಒಯ್ಯಿರಿ.

ಜಾತ್ರೆ ಮತ್ತು ಹಬ್ಬಗಳು ಬದಲಾಯಿಸಿ

ಚಾಂದ್ರಮಾನ ಯುಗಾದಿ ಹಬ್ಬ: ಚೈತ್ರ ಮಾಸ ಶುದ್ಧ ಪಾಡ್ಯದ ದಿನದಂದು ಪಂಚಾಂಗವನ್ನು ಓದುವ ಮೂಲಕ ಮತ್ತು ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಗೆ ಪೂರ್ಣಫಲ (ತೆಂಗಿನಕಾಯಿ) ಅರ್ಪಿಸುವ ಮೂಲಕ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಬ್ರಹ್ಮ ರಥೋತ್ಸವ / ಜಾತ್ರೆ: ಚೈತ್ರ ಮಾಸ - ಏಪ್ರಿಲ್ ತಿಂಗಳ ಸಮಯದಲ್ಲಿನ ಧ್ವಜಾರೋಹಣವು ವಾರ್ಷಿಕ ಜಾತ್ರೆಯ ಪ್ರಾರಂಭವನ್ನು ಸೂಚಿಸುತ್ತದೆ. ವಾರ್ಷಿಕ ಜಾತ್ರೆಯು ಚೈತ್ರ ಮಾಸದ ಬಹುಳ ಮೂಲ ನಕ್ಷತ್ರದ ದಿನಕ್ಕೆ ೬ ದಿನಗಳ ಮೊದಲು ಪ್ರಾರಂಭವಾಗುತ್ತದೆ. ವಾರ್ಷಿಕ ಜಾತ್ರೆಯು ೬ ದಿನಗಳವರೆಗೆ ನಡೆಯುತ್ತದೆ. ಬ್ರಹ್ಮ ರಥದ ಮೇಲೆ ರಾಮಾಯಣ ಮತ್ತು ಮಹಾಭಾರತ ಕಥೆಗಳ ಕೆತ್ತನೆಗಳನ್ನು ನೋಡಬಹುದು. ಅದರ ಮೇಲೆ ಸುಂದರವಾದ ವಿಗ್ರಹಗಳನ್ನು ಕೆತ್ತಲಾಗಿದೆ. ಬ್ರಹ್ಮ ರಥವು ೬ ಚಕ್ರಗಳನ್ನು ಹೊಂದಿದೆ. ಈ ಎಲ್ಲಾ ೬ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ಪೂಜೆಗಳು ನಡೆಯುತ್ತವೆ:

ದಿನ ೧ - ಶಿಭಿಕಯನೋತ್ಸವ
ದಿನ ೨ - ಪುಷ್ಪಕ ವಾಹನೋತ್ಸವ
ದಿನ ೩ - ಸಿಂಹ ವಾಹನೋತ್ಸವ
ದಿನ ೪ - ಬ್ರಹ್ಮ ರಥೋತ್ಸವ
ದಿನ ೫ - ಚೂರ್ನೋತ್ಸವ
ದಿನ ೬ - ಕುಂಭ ಅಭಿಷೇಕ
ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ವಾಹನ ಹುಲಿ ಸುತ್ತಲಿನ ೭ ಗ್ರಾಮಗಳಿಗೆ ತೆರಳಿ ೭ ದಿನ ಘರ್ಜಿಸುತ್ತಾ ವಾರ್ಷಿಕ ಜಾತ್ರೆಗೆ ಸಿದ್ಧತೆ ನಡೆಸುತ್ತದೆ ಎಂದು ಹೇಳಲಾಗುತ್ತದೆ.

  1. ವೀರಭದ್ರ ವರ್ದಂತೋತ್ಸವ: ಜೇಷ್ಠ ಮಾಸದ ಶುದ್ದ ಬಿದಿಗೆಯಂದು ವೀರಭದ್ರ ಸ್ವಾಮಿಗೆ ಎಣ್ಣೆ ಸ್ನಾನವನ್ನು ನೀಡಲಾಗುತ್ತದೆ ನಂತರ ಮಹಾ ಅಭಿಷೇಕವನ್ನು ಮಾಡಲಾಗುತ್ತದೆ.
  2. ಏಕಾದಶ ರುದ್ರ ಅಭಿಷೇಕ: ಇದು ಶ್ರಾವಣ ಮಾಸದಲ್ಲಿ ನಡೆಯುತ್ತದೆ ಮತ್ತು ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆಯನ್ನು ೧ ತಿಂಗಳು ಪೂರ್ತಿ ಮಾಡಲಾಗುತ್ತದೆ.
  3. ನವರಾತ್ರಿ: ಆಶ್ವೀಜ ಮಾಸ ಶುದ್ಧ ಪಾಡ್ಯದ ದಿನದಿಂದ ದಶಮಿ ದಿನದವರೆಗೆ ಶರನ್ನವರಾತ್ರಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯ ಎಲ್ಲಾ ೧೦ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.
  4. ಲಕ್ಷ ದೀಪೋತ್ಸವ: ಇದು ಕಾರ್ತಿಕ ಬಹುಳ ಅಮಾವಾಸ್ಯೆಯಂದು ದೇವಿಯ ಮುಂದೆ ೧ ಲಕ್ಷ ದೀಪಗಳನ್ನು ಬೆಳಗಿಸುವ ಪೂಜೆಯಾಗಿದೆ.
  5. ತೊಡಗು ಬಲಿ: ವೃಶ್ಚಿಕ ಬಹುಳ ಪಂಚಮಿಯಂದು ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. https://shivallibrahmins.com/tulunaadu-temples/kundapura-taluk/shri-brahmi-durgaparameshwari-temple-kamalashile/
  2. https://vijaykarnataka.com/religion/temples/know-the-history-importance-and-puja-timings-of-sri-brahmi-durgaparameshwari-temple-kamalashile/articleshow/88087914.cms
  3. https://www.udupilive.in/city-guide/kamalashile-village-in-udupi
  4. https://www.google.com.pk/travel/entity/key/ChoIxeiW6c_W87ioARoNL2cvMTFkZjJyOGs3bhAE?ved=0CAAQ5JsGahcKEwj4yI_ejJL8AhUAAAAAHQAAAAAQAw&ts=CAESABoECgIaACoECgAaAA