ಕುಂದಾಪುರದಿಂದ ಸುಮಾರು ೩೫ ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.

ಸ್ಥಳ ಪುರಾಣ

ಬದಲಾಯಿಸಿ

ಕ್ಷೇತ್ರಕ್ಕೆ ಕಮಲಶಿಲೆ ಎಂದು ಹೆಸರು ಬಂದ ಬಗ್ಗೆ ಹಲವು ಕಥೆಗಳಿವೆ.

ಸ್ಕಂಧಪುರಾಣದ ಸಹ್ಯಾದ್ರಿ ಕಾಂಡದ ಕಥೆ

ಬದಲಾಯಿಸಿ

ಸ್ಕಂಧ ಪುರಾಣದ ಸಹ್ಯಾದ್ರಿ ಕಾಂಡದ ಪ್ರಕಾರ ಕೈಲಾಸ ಪರ್ವತದಲ್ಲಿ ಪಿಂಗಳ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಅವಳು ತನ್ನ ಅಹಂಕಾರದಿಂದ ತಾನು ನರ್ತಿಸಲೊಲ್ಲೆ ಎಂದಾಗ ಪಾರ್ವತಿ ಭೂಲೋಕದಲ್ಲಿ ಕುರೂಪಿಯಾದ ಹೆಣ್ಣಾಗಿ ಹುಟ್ಟು ಎಂದು ಶಪಿಸುತ್ತಾಳಂತೆ. ತನ್ನ ತಪ್ಪಿನ ಅರಿವಾದ ಪಿಂಗಳೆಯು ಕ್ಷಮೆಯಾಚಿಸಲು ಕರಟಾಸುರನ ದುಷ್ಕೃತ್ಯಗಳಿಂದ ಪರಿತಪಿಸುತ್ತಿರೋ ಭೂಲೋಕವಾಸಿಗಳ ಉದ್ದಾರಕ್ಕೆ ತಾನೇ ಅವತರಿಸುತ್ತೇನೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಋಕ್ಷ್ವಮುನಿಯ ಆಶ್ರಮದ ಬಳಿಯಲ್ಲಿ ಕಮಲಶಿಲೆಯ ರೂಪದ ಲಿಂಗದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಳಂತೆ. ಪಿಂಗಳೆ ಭೂಮಿಗೆ ಅವತರಿಸಿದ್ದು ಕುಬ್ಜೆಯೆಂಬ ಕುರೂಪಿಯಾಗಿ. ಕುಬ್ಜೆ ತನ್ನ ಈ ಜನ್ಮದ ಮೋಕ್ಷಕ್ಕಾಗಿ ಈ ಕ್ಷೇತ್ರದಲ್ಲಿರೋ ಸುಪಾರ್ಶ್ವ ಗುಹೆಯಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಈ ತಪಸ್ಸಿನಿಂದ ಪ್ರಸನ್ನಳಾಗೋ ಪಾರ್ವತಿ ಸುಪಾರ್ಶ್ವಗುಹೆಯಲ್ಲಿ ಹುಟ್ಟೋ ನಾಗತೀರ್ಥ ಮತ್ತು ಈಗಿನ ಕುಬ್ಜಾನದಿಯ ಸಂಗಮಸ್ಥಳದಲ್ಲಿ ಕಮಲಶಿಲೆಯ ಲಿಂಗವಾಗಿ (ಈಗಿನ ದುರ್ಗಾಪರಮೇಶ್ವರಿ ದೇವಸ್ಥಾನವಿರುವ ಕಡೆ) ಪ್ರತ್ಯಕ್ಷಳಾಗುತ್ತಾಳೆ. ದೇವಿಯು ಶ್ರೀಕೃಷ್ಣನ ಸ್ಪರ್ಷದಿಂದ ನಿನ್ನ ಪಾಪಪರಿಹಾರವಾಗುವುದೆಂಬ ವಿಧಿಲಿಖಿತವಿರೋದ್ರಿಂದ ನೀನು ಮಥುರೆಗೆ ತೆರಳು ಎಂದು ಕುಬ್ಜೆಗೆ ತಿಳಿಸುತ್ತಾಳೆ. ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಪಶ್ಚಿಮದ ಕಡಲೆಡೆಗೆ ಸಾಗೋ ನದಿ ಕುಬ್ಜೆಯ ನೆನಪಲ್ಲಿ ಕುಬ್ಜಾ ನದಿಯೆಂದೇ ಹೆಸರು ಪಡೆಯುತ್ತದೆ ಎಂದು ತಿಳಿಸುತ್ತಾಳೆ. ಈ ಕಥೆ ಶ್ರೀಕೃಷ್ಣನ ಸ್ಪರ್ಷದಿಂದ ಗೂನುಬೆನ್ನಿನ ಅಜ್ಜಿಯೊಬ್ಬಳು ಶಾಪಪರಿಹಾರಗೊಂಡು ತನ್ನ ಮೊದಲ ರೂಪ ಪಡೆಯೋ ಕಥೆಯನ್ನು ಭಾಗವತದ ಕಥೆಯೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು.

ಬ್ರಹ್ಮ ಲಿಂಗೇಶ್ವರನ ಕಥೆ

ಬದಲಾಯಿಸಿ

ಕಮಲ ಶಿಲೆಯ ಲಿಂಗ ಪ್ರಪಂಚದ ಸೃಷ್ಟಿಯ ಸಂದರ್ಭದಲ್ಲೇ ಉತ್ಪತ್ತಿಯಾಯಿತೆಂದೂ , ಇದು ಆದಿ ಬ್ರಹ್ಮನ ಸ್ವರೂಪವೆಂದೂ ಬ್ರಹ್ಮ ಲಿಂಗೇಶ್ವರನೆಂದೂ ಜನ ಪೂಜಿಸುತ್ತಿದ್ದಂತೆ. ನಂತರದಲ್ಲಿ ಇದು ಶ್ರೀ ದುರ್ಗಾಪರಮೇಶ್ವರಿಯೆಂದು ಬದಲಾಯಿತೆಂದೂ ಜನ ತಿಳಿಸುತ್ತಾರೆ

ಕಮಲಶಿಲೆಯಲ್ಲಿ ದರ್ಶಿಸಬಹುದಾದ ದೇಗುಲಗಳು/ವಿಗ್ರಹಗಳು

ಬದಲಾಯಿಸಿ

ಕುಬ್ಜಾ ನದಿಯ ದಂಡೆಯಲ್ಲಿರುವ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿಯಲ್ಲದೇ ಅದೇ ಪ್ರಾಂಗಣದಲ್ಲಿ ಗಣಪತಿ, ಹೊಸಮ್ಮ ದೇವಿ, ವೀರಭದ್ರ, ಈಶ್ವರ, ಮುಂದಂತಾಯ ದೇವತೆ, ನಾಗದೇವತೆ, ನವಗ್ರಹಗಳು, ವಿಷ್ಣು ಮುಂತಾದ ದೇವತೆಗಳಿವೆ. ಇವುಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಒಂದೊಂದು ಕತೆಗಳಿವೆ. ಅವೆಂದರೆ

ವೀರಭದ್ರ

ಬದಲಾಯಿಸಿ

ಈತ ಈ ಕ್ಷೇತ್ರದ ಕ್ಷೇತ್ರಪಾಲ. ಗರ್ಭಗೃಹದ ದುರ್ಗಾಪರಮೇಶ್ವರಿಗೆ ಎಷ್ಟು ಬಾರಿ ಪೂಜೆ, ನೈವೇದ್ಯಗಳಾಗುತ್ತವೆಯೋ ಆಗೆಲ್ಲಾ ವೀರಭದ್ರ ಸ್ವಾಮಿಗೂ ಪೂಜಾ ನೈವೇದ್ಯಗಳಾಗುತ್ತವೆ.

ವೀರಭದ್ರ ಅಂದರೆ ಶಿವನ ಜಟೆಯಿಂದ ಹುಟ್ಟಿದವನು. ದಕ್ಷಯಜ್ಞದ ಸಮಯದಲ್ಲಿ ಪತಿಯ ಬಗೆಗಿನ ಅಪಮಾನವನ್ನು ತಾಳಲಾರದೇ ಬೆಂಕಿಗೆ ಹಾರಿ ಸತಿ ಆತ್ಮಾಹುತಿ ಮಾಡಿಕೊಳ್ಳುತ್ತಾನೆ. ಆಗ ಕೋಪದಿಂದ ಕುದಿಯೋ ಶಿವ ತನ್ನ ಜಟೆಯಿಂದ ಕೂದಲನ್ನು ಕಿತ್ತು ಎಸೆಯುತ್ತಾನೆ. ಅದರಿಂದ ಹುಟ್ಟಿದ ವೀರಭದ್ರ ಬೃಹದಾಕಾರ ತಾಳಿ ದಕ್ಷನನ್ನು ಸಂಹರಿಸುತ್ತಾನೆ ಎಂದು ಕತೆ ಮುಂದುವರಿಯುತ್ತದೆ. ವೀರಭದ್ರನ ಕೋಪದ ಕಿರಣಗಳಿಂದ, ಕೆಟ್ಟ ದೃಷ್ಟಿಯಿಂದ ಕ್ಷೇತ್ರಕ್ಕೇನೂ ಆಗದಿರಲೆಂದು ವೀರಭದ್ರನ ಎದುರಿಗೆ ವಿಘ್ನನಿವಾರಕನಾದ, ಸೌಮ್ಯಮೂರ್ತಿಯಾದ ಗಣನಾಥನನ್ನು ಪ್ರತಿಷ್ಟಾಪಿಸಲಾಗಿದೆ ಎಂದು ಸ್ಥಳೀಯರು ನಂಬುತ್ತಾರೆ

ಹೊಸಮ್ಮ ದೇವಿ

ಬದಲಾಯಿಸಿ

ಹಿಂದೆ ಆರ್ಭಟಿ, ಧಾರ್ಭಟಿ ಮತ್ತು ಶಾಸ್ತಾರರೆಂಬ ದೇವಿಯರು ಶಿವನ ವಾಹನವಾದ ನಂದಿಕೇಶ್ವರನೊಂದಿಗೆ ಇಲ್ಲಿಗೆ ಬಂದರಂತೆ. ಇಲ್ಲಿಯೇ ನೆಲೆಸಲು ಅನುಮತಿ ಕೇಳಿದ ಅವರು ಪ್ರತೀ ವರ್ಷ ಬರೋ ಹೊಸ ಫಸಲಲ್ಲಿ ಮಾತ್ರ ತಮಗೆ ನೈವೇದ್ಯ ಮಾಡಬೇಕೆಂದು ಕೇಳಿದರಂತೆ. ಹಾಗಾಗಿ ಇವರಿಗೆ ಹೊಸಮ್ಮ ದೇವಿಯೆಂದು ಹೆಸರಂತೆ

ಮುಂದಂತಾಯ ದೇವತೆ

ಬದಲಾಯಿಸಿ

ಹೆಸರು ದೇವತೆ ಅಂತಿದ್ದರು ಮುಂದಂತಾಯ ಅನ್ನೋದು ದೇವರಲ್ಲ. ಮುಂದಂತಾಯ ಅನ್ನೋನು ಕೇರಳದಿಂದ ಇಲ್ಲಿಗೆ ಬಂದ ಮಾಂತ್ರಿಕನಂತೆ. ಆತ ದೇವಿಯ ಶಕ್ತಿಯನ್ನು ಸೆರೆಹಿಡಿಯಲು ಇಲ್ಲಿಗೆ ಬಂದರೂ ತನ್ನ ಕಾರ್ಯದಲ್ಲಿ ಯಶಸ್ವಿಯಾಗದೇ ಕೊನೆಗೆ ದೇವಿಗೆ ಶರಣಾಗಿ ಇಲ್ಲೇ ನೆಲಸುತ್ತಾನಂತೆ. ಆತ ಈ ಕ್ಷೇತ್ರವನ್ನು ಕಾಯಲಿ ಎಂಬ ಕಾರಣದಿಂದ ಆತನಿಗೆ ಕಲ್ಪಿಸಿದ ನೆಲೆಯೇ ಈ ಮುಂದಂತಾಯ ಮೂರ್ತಿಯಾಯಿತು ಎಂದು ಸ್ಥಳೀಯರು ನಂಬುತ್ತಾರೆ

ಪಂಚಮುಖಿ ನಾಗರಾಜ

ಬದಲಾಯಿಸಿ

ಇಲ್ಲಿರುವ ನಾಗರಾಜ ಪಂಚಮುಖಿ ನಾಗರಾಜ ಅಥವಾ ಐದು ಹೆಡೆಗಳಿರೋ ನಾಗರಾಜ. ಇದರ ಹಿಂದಿರೋ ಹುತ್ತ ಪ್ರತಿವರ್ಷವೂ ಬೆಳೆಯುತ್ತಾ ಸಾಗಿ ಈಗ ಸುಮಾರು ಹತ್ತು ಅಡಿಗಳಷ್ಟು ಬೆಳೆದು ನಿಂತಿದೆ

ಸಲಾಂ ಪೂಜೆ

ಬದಲಾಯಿಸಿ

ಈ ದೇಗುಲದಲ್ಲಿ ಪ್ರತೀ ಸಂಜೆ ನಡೆಯೋ "ಸಲಾಂ ಪೂಜೆ" ಎನ್ನೋ ಆಕರ್ಷಣೆಯೊಂದಿದೆ. ಮುಸ್ಲಿಂ ರಾಜರಾಗಿದ್ದ ಹೈದರಾಲಿ ಮತ್ತವನ ಮಗ ಟಿಪ್ಪುವಿನ ನೆನಪಿಗೋಸ್ಕರ ಇದನ್ನು ಇನ್ನೂ ನಡೆಸಿಕೊಂಡು ಬರಲಾಗುತ್ತಿದೆಯಂತೆ. ಇಲ್ಲಿಂದ ಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿರೋ ಶಂಕರನಾರಾಯಣ ದೇವಸ್ಥಾನದಲ್ಲಿ ಟಿಪ್ಪು ದೇವಸ್ಥಾನಕ್ಕೆ ನೀಡಿದ್ದೆನ್ನಲ್ಲಾದ ದೊಡ್ಡ ಘಂಟೆಯೊಂದಿದೆ. ಈ ದೇವಸ್ಥಾನಕ್ಕೆ ಟಿಪ್ಪುವಾಗಲಿ, ಹೈದರಾಲಿಯಾಗಲಿ ನೀಡಿದಂತಹ ಕಾಣಿಕೆ ಎದುರಿಗೆ ಕಾಣದಿದ್ದರೂ ಆ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ

ಆದಿ ಸ್ಥಳ ಗುಹಾಲಯ, ಕಮಲಶಿಲೆ

ಬದಲಾಯಿಸಿ

ಕಮಲಶಿಲೆಯಿಂದ ಸುಮಾರು ೨.ಕಿ.ಮೀ ದೂರದಲ್ಲಿ ಆದಿಸ್ಥಳ ಗುಹಾಲಯವಿದೆ. ಈ ಗುಹೆಯಲ್ಲಿರೋ ವೀಕ್ಷಣೀಯ ಸ್ಥಳಗಳೆಂದರೆ

ಹುಲಿಗಳು ಭೇಟಿ ನೀಡೋ ಸ್ಥಳ/ಹುಲಿಚಾವಡಿ

ಬದಲಾಯಿಸಿ

ಕಮಲಶಿಲೆಯಿಂದ ಕುಂದಾಪುರ/ಹಳ್ಳಿಹೊಳೆ ಕಡೆ ಸಾಗೋ ರಸ್ತೆಯಲ್ಲಿ ಎಡಕ್ಕೆ ಆದಿಸ್ಥಳ ಗುಹಾಲಯ ಎಂಬ ಬೋರ್ಡು ಕಾಣುತ್ತೆ. ಅದರಲ್ಲಿ ಎಡಕ್ಕೆ ತಿರುಗಿ ಒಂದು ನೂರು ಮೀಟರ್ ದೂರಲ್ಲಿ ಒಂದು ಬಸ್ಟಾಂಡ್ ಕಂಡ ಹಾಗೆ ಕಾಣುತ್ತೆ. ಅದರ ಬಳಿ ಸಾಗಿದ್ರೆ ನಾವು ಸಾಗಿದ ದಿಕ್ಕಿನ ವಿರುದ್ದ ದಿಕ್ಕಿನಲ್ಲಿ, ನಮ್ಮ ಕಾಲ ಕೆಳಗೇ ಗುಹೆಯೊಂದು ಇದ್ದಿದ್ದು ಪಟ್ಟನೆ ಗೋಚರಿಸುತ್ತೆ. ವಾಸ್ತವದಲ್ಲಿ ದೂರದಿಂದ ಬಸ್ಟಾಂಡಂತೆ ಕಂಡದ್ದು ಬಸ್ಟಾಂಡಲ್ಲ. ಅದೊಂದು ಯಜ್ಞಕುಂಡ. ಇಲ್ಲಿಗೆ ಆಗಾಗ ರಾತ್ರಿ ವೇಳೆ ಹುಲಿಗಳು ಭೇಟಿ ನೀಡುತ್ತವೆಯೆಂದೂ ರಥೋತ್ಸವದ ಸಂದರ್ಭದಲ್ಲಿ ಹುಲಿಗಳು ಭೇಟಿ ನೀಡಿ ಘರ್ಜಿಸುತ್ತವೆಯೆಂದೂ ಪ್ರತೀತಿಯಿದೆ.

ಸುಪಾರ್ಶ್ವ ಗುಹೆ

ಬದಲಾಯಿಸಿ

ಅದರ ಎದುರಿಗೆ ಗುಹೆಯ ಬಾಯಿ, ಕೆಳಕ್ಕಿಳಿಯಲು ಮೆಟ್ಟಿಲುಗಳು ಕಾಣಿಸುತ್ತೆ. ಈ ಗುಹೆಗೆ ಸುಪಾರ್ಶ್ವ ಗುಹೆ ಎಂದು ಹೆಸರು ಬರೋ ಹಿಂದೆಯೂ ಒಂದು ಕಥೆಯಿದೆ. ಕೃತಯುಗದಲ್ಲಿ ಸುಪಾರ್ಶ್ವ ಅನ್ನೋ ರಾಜ ತಪಸ್ಸನ್ನಾಚರಿಸಲು ಸೂಕ್ತ ಸ್ಥಳವನ್ನರಸಿ ಈ ಜಾಗಕ್ಕೆ ಬರುತ್ತಾನಂತೆ. ಇಲ್ಲಿನ ಪ್ರಶಾಂತತೆಯಿಂದ ಇಲ್ಲೇ ನೆಲಸೋ ಆತ ತನ್ನ ತಪಸ್ಸು ನಿರ್ವಿಘ್ನವಾಗಿ ನೆರವೇರುವಂತೆ ಆಶೀರ್ವದಿಸು ಎಂದು ಪರಶಿವನನ್ನು ಬೇಡುತ್ತಾನಂತೆ. ಆ ಕಾರಣಕ್ಕಾಗಿ ಸುಪಾರ್ಶ್ವ ಗುಹೆ ಎಂದು ಹೆಸರು ಪಡೆಯುತ್ತದೆಯಂತೆ. ಆತನ ಕೋರಿಕೆಯನ್ನು ಮನ್ನಿಸೋ ಶಿವ ಈ ಗುಹೆಯಲ್ಲಿ ನೆಲಸಿ ರಾಜನ ತಪಸ್ಸಿನ್ನು ಕಾಯುವಂತೆ ತನ್ನ ಗಣಗಳಲ್ಲೊಬ್ಬನಾದ ಭೈರವನಿಗೆ ಆದೇಶಿಸುತ್ತಾನಂತೆ. ಸುಪಾರ್ಶ್ವ ರಾಜ ,ಸುಪಾರ್ಶ್ವ ಮುನಿಯಾಗಿ ಆರಾಧಿಸಿದನೆಂದು ನಂಬಲಾದ ಶಿವಲಿಂಗವನ್ನು, ಆದರ ಎದುರಿಗಿನ ನಂದಿಕೇಶ್ವರನನ್ನು ಗುಹೆಯ ಪ್ರವೇಶದ್ವಾರದಲ್ಲಿ ಕಾಣಬಹುದು.

ಮಹಾಕಾಳಿ ಮಹಾಲಕ್ಷ್ಮಿ, ಮಹಾಸರಸ್ವತಿ ಉದ್ಭವಲಿಂಗಗಳು

ಬದಲಾಯಿಸಿ

ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ನಮ್ಮ ಎಡಭಾಗದಲ್ಲಿ ಮಹಾಕಾಳಿ,ಮಹಾಲಕ್ಷ್ಮಿ, ಮಹಾಸರಸ್ವತಿಯ ಉದ್ಭವಲಿಂಗಗಳು ಮತ್ತು ಭೈರವೇಶ್ವರ ರೂಪವಾದ ಲಿಂಗವನ್ನು ಕಾಣಬಹುದು. ಈ ಗುಹೆಗೆ ಭೈರವ ಬಂದ ಕಥೆ ಮೇಲಿದೆ

ನಾಗತೀರ್ಥ

ಬದಲಾಯಿಸಿ

ಅಲ್ಲಿಂದ ಹಾಗೇ ಮೆಟ್ಟಿಲುಗಳಲ್ಲಿ ಇಳಿಯುತ್ತಾ ಮುಂದೆ ಸಾಗಿದಂತೆ ಕೆಳಗೆ ಬಲದಲ್ಲಿ ನಾಗತೀರ್ಥ ಸಿಗುತ್ತದೆ. ಈ ನೀರು ಹಾಗೇ ಸಾಗಿ ಕುಬ್ಜಾ ನದಿಯನ್ನು ಸೇರುವ ಬಗ್ಗೆ ಓದಿದ್ದೆವು. ಮಳೆಗಾಲದಲ್ಲಿ ತುಂಬಿಹರಿಯೋ ಕುಬ್ಜಾ ನದಿ ದೇವಿಯ ಪಾದಗಳವರೆಗೂ ಬಂದು ಲಿಂಗವನ್ನು ತೊಳೆಯುತ್ತದೆ ಎಂಬ ಪ್ರತೀತಿಯಿದೆ

ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಜಾಗ

ಬದಲಾಯಿಸಿ

ಅಲ್ಲಿಂದ ಮುಂದೆ ಸಾಗುತ್ತಿದ್ದ ಹಾಗೆ ಬಲಭಾಗದಲ್ಲಿ ಸಣ್ಣ ಪೊಟರೆಯಂತಹ ಜಾಗ ಕಾಣುತ್ತದೆ. ಅರ್ಧ ಶಂಕುವಿನಾಕಾರಾದ ಸುರುಳಿಗಳಿರೋ ಆ ಜಾಗದಲ್ಲಿ ವರದಹಳ್ಳಿಯ ಶ್ರೀಧರ ಸ್ವಾಮಿಗಳು ಬಂದು ತಪಸ್ಸು ಮಾಡಿದ್ದರಂತೆ. ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲೂ ೧೯೫೨ರಲ್ಲಿ ಶ್ರೀಧರ ಸ್ವಾಮಿಗಳು ಬಂದ ಬಗ್ಗೆ ಉಲ್ಲೇಖಗಳಿವೆ

ನಾಗದೇವತೆಗಳ ಸ್ಥಳ

ಬದಲಾಯಿಸಿ

ಅಲ್ಲಿಂದಲೂ ಮುಂದೆ ಸಾಗಿದರೆ ಸ್ವಲ್ಪ ದೂರದಲ್ಲಿ ನಾಗದೇವತೆಗಳ ಸ್ಥಳ ಸಿಗುತ್ತದೆ. ಮಳೆಗಾಲದಲ್ಲಿ ಇಲ್ಲೆಲ್ಲಾ ಕೆಸರಾಗಿ ಇಲ್ಲಿಯವರೆಗೆ ಬರೋದು ತುಂಬಾ ಕಷ್ಟವಂತೆ. ನಾವು ಹೋದಾಗಲೂ ಜಾಗವೆಲ್ಲಾ ಕೆಸರಾಗಿದ್ದರೂ ಮೂಲೆಯ ಕಲ್ಲುಗಳ ಬಳಿಯಿಂದ ನಾಗದೇವತೆಗಳ ಬಳಿ ಸಾಗಿ ನಮಸ್ಕರಿಸೋಕೆ ಸಾಧ್ಯ.ಅಲ್ಲಿಂದ ಮುಂದೆ ಸಾಗೋ ಕಿರಿದಾದ ಹಾದಿ ಕಾಶಿಗೆ ಹೋಗುತ್ತೆ ಎಂಬ ಪ್ರತೀತಿಯಿದೆ. ನಾಗದೇವತೆಗಳ ಮೇಲಿನ ಗುಹೆಯಲ್ಲಿ ಸಾವಿರಾರು ಬಾವಲಿಗಳು ನೇತಾಡುತ್ತಿರುತ್ತವೆ. ಅಷ್ಟೆಲ್ಲಾ ಬಾವಲಿಗಳಿದ್ದರೂ ಅವು ಬರುವ ಮಾತಿಗಾಗಲಿ, ಬ್ಯಾಟರಿ ಬೆಳಕಿಗಾಗಲಿ ಗಾಬರಿಗೊಂಡ, ಹಾರಾಡಿ ಬಂದವರಿಗೆ ಗಾಬರಿಪಡಿಸಿದಂತಹ ಪ್ರಸಂಗಗಳಿಲ್ಲ ಎನ್ನುತ್ತಾರೆ ಸ್ಥಳೀಯರು. ಇಲ್ಲಿನ ಗೈಡುಗಳ ಪ್ರಕಾರ ಬಾವಲಿಗಳಿಗೆ ಇಲ್ಲಿಗೆ ಬರುವ ಜನಗಳು, ಅವರ ಬ್ಯಾಟರಿ ಬೆಳಕು ಸಹಜವೆನ್ನುವಂತೆ ಅಭ್ಯಾಸವಾಗಿಬಿಟ್ಟಿದೆಯಂತೆ.

ಗುಹೆಗೆ ಹೋಗೋ ಮೊದಲು ತಿಳಿದಿರಬೇಕಾದ ಸಂಗತಿಗಳು

ಬದಲಾಯಿಸಿ

ಆದಿ ಗುಹಾಲಯಕ್ಕೆ ನಿತ್ಯ ಬಂದು ಪೂಜೆ ಮಾಡುವವರು ಬಳೆಗಾರರು. ಗುಹೆಯ ಒಳಗೆ ಪೂರ್ಣ ಕತ್ತಲಿರೋದ್ರಿಂದ ಕಮಲಶಿಲೆ ದೇವಸ್ಥಾನದಲ್ಲಿಯೇ ಈ ಗುಹೆಗೆ ಹೋಗಬೇಕು ಎಂದು ತಿಳಿಸಿದರೆ ಬ್ಯಾಟರಿಗಳ ಸಮೇತ ಈ ಗುಹೆಯ ಬಗ್ಗೆ ತಿಳಿದಿರುವವರನ್ನು ಅವರೇ ಕಳುಹಿಸಿ ಕೊಡುತ್ತಾರೆ. ತೀರಾ ಅಪಾಯಕರ ಸ್ಥಳಗಳೇನೂ ಇಲ್ಲದಿದ್ದರೂ ಮೊದಲ ಬಾರಿ ಬರುವವರು ಇಲ್ಲಿಯ ಪರಿಸರ ಗೊತ್ತಿಲ್ಲದೇ ಒಳಗೆ ಜಾರಿ ಪೆಟ್ಟು ಮಾಡಿಕೊಳ್ಳೋ ಸಾಧ್ಯತೆಗಳು ಜಾಸ್ತಿಯಿರುವುದರಿಂದ ಒಬ್ಬೊಬ್ಬರೇ ಬಾರದಿರುವುದು ಕ್ಷೇಮ. ದೇಗುಲದ ಬಗೆಗಿನ ಹೆಚ್ಚಿನ ಮಾಹಿತಿಗೆ, ಅಲ್ಲಿನ ಅರ್ಚನೆ, ಉಳಿದುಕೊಳ್ಳೋದ್ರ ಬಗ್ಗೆ ,ಇನ್ನಿತರ ಮಾಹಿತಿಗಳಿಗೆ ದೇಗುಲದ []ವನ್ನು ಸಂಪರ್ಕಿಸಬಹುದು.


ಕಮಲಶಿಲೆಗೆ ತಲುಪುವ ಬಗೆ

ಬದಲಾಯಿಸಿ

ಸಿದ್ದಾಪುರದಿಂದ ಆರು ಕಿ.ಮೀ ಮತ್ತು ಕುಂದಾಪುರದಿಂದ ೩೫ ಕಿ.ಮೀ ದೂರವಿರುವ ಕಮಲಶಿಲೆಗೆ ಹೋಗಲು ಬಸ್ಸುಗಳ ವ್ಯವಸ್ಥೆಯಿದೆ

ಉಲ್ಲೇಖಗಳು

ಬದಲಾಯಿಸಿ
  1. [www.kamalashile.org ಜಾಲತಾಣ]


"https://kn.wikipedia.org/w/index.php?title=ಕಮಲಶಿಲೆ&oldid=1249911" ಇಂದ ಪಡೆಯಲ್ಪಟ್ಟಿದೆ