ಬೆಳ್ಕಲ್ ತೀರ್ಥ ಜಲಪಾತ
ಬೆಳ್ಕಲ್ ತೀರ್ಥ ಜಲಪಾತವು ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಜಡ್ಕಲ್ ಎಂಬ ಗ್ರಾಮದಲ್ಲಿದೆ. ಇದು ಕುಂದಾಪುರದಿಂದ ೫೦ ಕಿ.ಮೀ. ದೂರದಲ್ಲಿರುವ ಕೊಲ್ಲೂರಿನಿಂದ ೧೪ ಕಿ.ಮೀ. ದೂರದಲ್ಲಿದೆ ಹಾಗೂ ಜಡ್ಕಲ್‌ನಿಂದ ೧೨ ಕಿ.ಮೀ. ಹಾಗೂ ಮುದೂರು ಹಳ್ಳಿಯಿಂದ ೮ ಕಿ.ಮೀ. ದೂರದಲ್ಲಿರುವ ಕಾಡಿನ ಮಧ್ಯೆ ಇದೆ.[೧] ಇಲ್ಲಿಗೆ ಸಾಗಬೇಕಾದರೆ ಕಾಲು ದಾರಿಯಲ್ಲಿ ಸುಮಾರು ೫ ಕಿ.ಮೀ. ಕಾಡಿನಲ್ಲಿ ಗುಡ್ಡ, ಬಂಡೆಗಳ ನಡುವೆ ಸುಮಾರು ಒಂದು ಗಂಟೆ ಕಾಲ್ನಡಿಗೆಯ ಮೂಲಕ ತೀರ್ಥದ ಬಳಿ ತಲುಪಬೇಕಾಗಿದೆ. ೫೦೦ಕ್ಕೂ ಅಧಿಕ ಅಡಿ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತವು ಉಡುಪಿಯಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.
ವಿಶೇಷತೆ
ಬದಲಾಯಿಸಿಈ ಬೆಳ್ಕಲ್ ತೀರ್ಥ ಜಲಪಾತ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಎಳ್ಳಮಾವಾಸ್ಯೆಯ ದಿನದಂದು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಅದರಂತೆ ಸಾವಿರಾರು ಭಕ್ತರು ಎಳ್ಳಮಾವಾಸ್ಯೆಯ ದಿನದಂದು ಇಲ್ಲಿಗೆ ಆಗಮಿಸಿ ಎತ್ತರದಿಂದ ಧುಮುಕುತ್ತಿರುವ ಜಲಪಾತದಲ್ಲಿ ಸ್ನಾನ ಮಾಡುತ್ತಾರೆ.[೨] ಈ ಜಲಪಾತವನ್ನು ಗೋವಿಂದ ತೀರ್ಥ ಎಂದೂ ಕರೆಯುತ್ತಾರೆ. ಕೊಡಚಾದ್ರಿಯ ವಿಸ್ತರಣೆಯಾಗಿರುವ ಕೊರ್ಶಿ ಎಂಬ ಬೆಟ್ಟದಿಂದ ೫೦೦ ಅಡಿ ಕೆಳಗೆ ನೀರು ಬೀಳುತ್ತದೆ.[೩]
ಕಾರಣೀಕ ಸ್ಥಳ
ಬದಲಾಯಿಸಿಬೆಳ್ಕಲ್ ತೀರ್ಥ ಜಲಪಾತವು ಒಂದು ಕಾರಣೀಕ ಸ್ಥಳವಾಗಿದೆ. ಈ ತೀರ್ಥ ಸ್ಥಳದಿಂದ ೫ ಕಿ.ಮೀ ಹಿಂದೆ ವಿಶ್ವಂಭರ ಮಹಾಗಣಪತಿ ಗೋವಿಂದ ಮತ್ತು ಕೋಟಿಲಿಂಗೇಶ್ವರ ದೇವಸ್ಥಾನವಿದೆ. ಈ ದೇವಾಲಯವು ಹಲವು ವರ್ಷದ ಹಿಂದೆ ಬೆಳ್ಕಲ್ ತೀರ್ಥ ಜಲಪಾತವಿರುವ ಸ್ಥಳದಲ್ಲಿಯೇ ಇತ್ತು. ಜಲಪಾತ ಇರುವ ಸ್ಥಳವು ತುಂಬಾ ದುರ್ಗಮವಾಗಿದ್ದರಿಂದ ಭಕ್ತರಿಗೆ ದೇವರ ದರ್ಶನ ಪಡೆಯಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಅಲ್ಲಿರುವ ದೇಗುಲವನ್ನು ಸುಮಾರು ೫ ಕಿ.ಮೀ ಹಿಂದೆ ನಿರ್ಮಿಸಲಾಯಿತು ಎನ್ನಲಾಗುತ್ತದೆ.[೪] ಎಳ್ಳಮಾವಾಸ್ಯೆಯ ದಿನದಂದು ತೀರ್ಥಸ್ನಾನದ ಬಳಿಕ ಈ ದೇವಾಲಯದಲ್ಲಿಯೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಬರುವ ಭಕ್ತರಿಗಾಗಿ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಬೆಳ್ಕಲ್ ತೀರ್ಥಸ್ನಾನ ಹಾಗೂ ದೇವರ ದರ್ಶನದ ಬಳಿಕ ಇಲ್ಲಿಗೆ ಬರುವ ಭಕ್ತರು ಈ ಕ್ಷೇತ್ರದಿಂದ ಸುಮಾರು ೧೫ ಕಿ.ಮೀ. ದೂರದ ಕೆರಾಡಿ ಸಮೀಪದ ಕೆರಾಡಿ ಮೂಡುಗಲ್ಲು ಗುಹಾಂತರ ದೇವಾಲಯಕ್ಕೆ ಸಾಗುತ್ತಾರೆ. ಇಲ್ಲಿ ತೀರ್ಥಸ್ನಾನವಾದ ನಂತರ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎನ್ನುವ ನಂಬಿಕೆಯ ಮೇರೆಗೆ ಈ ದೇವಸ್ಥಾನಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಬೆಳ್ಕಲ್ ತೀರ್ಥಕ್ಕೆ ಗೋವಿಂದ ತೀರ್ಥ ಎಂಬ ಹೆಸರು ಬರಲು ಕಾರಣವೂ ಇದೆ. ಜಲಪಾತದ ಕೆಳಗೆ ನಿಂತು ಮೀಲಕ್ಕೆ ಮುಖಮಾಡಿ 'ಗೋವಿಂದಾ' ಎಂದು ಗೋವಿಂದನ ನಾಮವನ್ನು ಜಪ ಮಾಡಿದಾಗ ಜಲಧಾರೆಯ ನೀರು ಮೇಲಿನಿಂದ ವೇಗವಾಗಿ ಹರಿದುಬಂದು ಆಶೀರ್ವಾದದ ರೂಪದಲ್ಲಿ ತಲೆಯ ಮೇಲೆ ಬಂದು ಸುರಿಯುತ್ತದೆ ಎನ್ನುವ ನಂಬಿಕೆ ಇದೆ.[೫]. ಕೆಲವೊಮ್ಮೆ ಕೆಳಕ್ಕೆ ಸುರಿಯುವ ತೀರ್ಥವು ತನ್ನ ಪಥವನ್ನು ಬದಲಾಯಿಸುವುದರಿಂದ, ಮೇಲಿನಿಂದ ಕೆಳಕ್ಕೆ ಧುಮುಕುವ ತೀರ್ಥವು ಕೆಳಗಡೆ ಇರುವ ಎಲ್ಲರ ಮೇಲೆ ಬೀಳುತ್ತದೆ ಎಂದು ಹೇಳಲಾಗದು.[೬]
ಉಲ್ಲೇಖಗಳು
ಬದಲಾಯಿಸಿ- ↑ https://shantharajubk.blogspot.com/2018/10/BelkalFalls.html
- ↑ https://www.suddi9.com/archives/19930
- ↑ https://mytrip.guide/belkal-theertha-falls/
- ↑ https://www.suddi9.com/archives/19930
- ↑ "ಆರ್ಕೈವ್ ನಕಲು". Archived from the original on 2022-12-24. Retrieved 2022-12-24.
- ↑ https://www.suddi9.com/archives/19930