ಬಿ ಡಿ ಗಣಪತಿ
ಬಿ ಡಿ ಗಣಪತಿ (ಜನನ: ೧೬ನೇ ಜೂನ್ ೧೯೨೦ - ನಿಧನ: ೧೬ನೇ ಜೂನ್ ೧೯೯೮)ಯವರು, ಕೊಡಗು ಮತ್ತು ಕೊಡವ ಜನಾಂಗದ ಕುರಿತು ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ ಸಾಹಿತಿಗಳು ಹಾಗೂ ಪತ್ರಕರ್ತರು. ಕೊಡವ ತಕ್ಕ್, ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ದೀರ್ಘಾವಧಿಯವರೆಗೆ ಇವರ ಸಂಪಾದಕತ್ವದಲ್ಲಿ ನಡೆದ ‘ಕೊಡಗು’ ಕನ್ನಡ ವಾರಪತ್ರಿಕೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಮೋಘ ಸೇವೆ ಸಲ್ಲಿಸಿತ್ತು.
ಶ್ರೀ ಬಾಚಮಾಡ ದೇವಯ್ಯ ಗಣಪತಿ* | |
---|---|
ಜನನ | ಜೂನ್ ೧೬, ೧೯೨೦* ಬೆಸಗೂರು, ಪೊನ್ನಂಪೇಟೆಯ ಬಳಿ, ಕೊಡಗು ಜಿಲ್ಲೆ |
ಮರಣ | ಜೂನ್ ೧೬,೧೯೯೮ ಮಡಿಕೇರಿ, ಕೊಡಗು ಜಿಲ್ಲೆ |
ವೃತ್ತಿ | ಪತ್ರಿಕೋದ್ಯಮಿ, ಸಾಹಿತಿ |
ರಾಷ್ಟ್ರೀಯತೆ | ಭಾರತೀಯ |
ಕಾಲ | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
ಪ್ರಕಾರ/ಶೈಲಿ | ಕಥೆ, ಕವನ, ಕಾದಂಬರಿ, ಪ್ರಬಂಧ, ಇತ್ಯಾದಿ |
ವಿಷಯ | ಕೊಡಗು, ಕೊಡವರು, ಜೀವನ |
ಬಾಳ ಸಂಗಾತಿ | ಶ್ರೀಮತಿ ಲೀಲಾ |
ಮಕ್ಕಳು | ಇಬ್ಬರು |
ಪ್ರಭಾವಗಳು |
ಜನನ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಗಣಪತಿಯವರು ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಸಮೀಪದ ಬೆಸಗೂರು ಗ್ರಾಮದಲ್ಲಿ ೧೬ನೇ ಜೂನ್ ೧೯೨೦ರಂದು ಬಾಚಮಾಡ ಮನೆತನದಲ್ಲಿಜನಿಸಿದ ಕೊಡವರು. ಇವರ ತಂದೆ ದೇವಯ್ಯನವರು ಮತ್ತು ತಾಯಿ ಮಾಚವ್ವನವರು.
ಬೆಸಗೂರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿಆರಂಭಿಸಿ, ಪೊನ್ನಂಪೇಟೆಯ ಮಾಧ್ಯಮಿಕ ಶಾಲೆ ಮತ್ತು ವೀರಾಜಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಇದಿಷ್ಟು ತಂದೆಯವರ ಮಿತ ಆದಾಯದಲ್ಲಿ ನಾಲ್ಕು ಗೋಡೆಗಳ ನಡುವಿನ ಕಟ್ಟಡಗಳಲ್ಲಿ ಸಂಪಾದಿಸಿದ ವಿದ್ಯೆ. ಇದಲ್ಲದೆ ಹೊರ ಜಗತ್ತಿನಲ್ಲಿ ಅವರು ಆರ್ಜಿಸಿದ ವಿದ್ಯೆ ಅಮೋಘ.
ದೈವ ಭಕ್ತರೂ ಧರ್ಮಭೀರುಗಳೂ ಆಗಿದ್ದ ತಂದೆಯವರ ಮಾರ್ಗದರ್ಶನದಲ್ಲಿ ಆದರ್ಶಮಯ ಹಾಗೂ ಸಮಾಜಸೇವಾ ಮನೋಭಾವದ ಜೀವನವನ್ನು ನಡೆಸಬೇಕೆಂದು ಕಲಿತರು. ಪೊನ್ನಂಪೇಟೆಯ ಶಾರದಾ ಆಶ್ರಮದಲ್ಲಿದ್ದ ಪುಸ್ತಕ ಭಂಡಾರದಲ್ಲಿ ಅವರಿಗೆ ದೊರೆತ ಅತ್ಯಮೂಲ್ಯ ಪುಸ್ತಕಗಳು ಅವರ ಜೀವನಾದರ್ಶಕ್ಕೆ ದಾರಿದೀಪವನ್ನು ತೋರಿದವಲ್ಲದೆ, ಆಶ್ರಮವನ್ನು ಸೇರಿ ಸಮಾಜ ಸೇವೆಯನ್ನು ನಡೆಸಬೇಕೆಂಬ ಮನೋಭಾವವನ್ನು ಅವರಲ್ಲಿ ಬಿತ್ತಿದವು.
ಉದ್ಯೋಗ
ಬದಲಾಯಿಸಿಗಣಪತಿಯವರು ಸಾಹಿತಿಯಾಗಬೇಕೆಂಬ ಕನಸು ಕಾಣಲಾರಂಭಿಸಿದರು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಇವರ ಸಹಾಯವು ಅಗತ್ಯವಾದ ಕಾರಣ ನೌಕರಿಯನ್ನು ಆಶ್ರಯಿಸಬೇಕಾಯಿತು. ತಮ್ಮ ಹದಿನೇಳನೇ ವಯಸ್ಸಿಗೆ ಸಹಕಾರೀ ಸಂಘವೊಂದರ ಮೇಲ್ವಿಚಾರಕನ ಹುದ್ದೆ ದೊರೆಯಿತು. ತಿಂಗಳಿಗೆ ಐವತ್ತು ರೂಪಾಯಿಯ ಸಂಬಳ; ಆದರೆ ಜವಾಬ್ದಾರಿ ಅದರ ಹತ್ತು ಪಟ್ಟು.
ಪತ್ರಿಕೋದ್ಯಮ
ಬದಲಾಯಿಸಿಭಾರತದ ಸ್ವಾತಂತ್ರ್ಯ ಸಂಗ್ರಾಮವು ತೀವ್ರಗತಿಯಲ್ಲಿ ನಡೆಯುತ್ತಿದ್ದ ಆ ಸಮಯದಲ್ಲಿ, ‘ಕೊಡಗು’ ವಾರಪತ್ರಿಕೆಯು ಕೊಡಗಿನಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸಿತ್ತು. ಅದರ ಸ್ಥಾಪಕ ಸಂಪಾದಕರಾಗಿದ್ದ ಶ್ರೀ ಪಂದ್ಯಂಡ ಬೆಳ್ಯಪ್ಪನವರ ಪಾತ್ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಮುಖ್ಯವಾಗಿದ್ದು, ಪತ್ರಿಕೆಯನ್ನು ನಡೆಸಲು ಯೋಗ್ಯ ಸಹಾಯಕರೊಬ್ಬರ ಅವಶ್ಯವಿತ್ತು. ಸಾಹಿತ್ಯೋಪಾಸನೆಯ ಆರಂಭಿಕ ದಿನಗಳಲ್ಲಿದ್ದ ಗಣಪತಿಯವರಿಗೆ ಇದು ಸದವಕಾಶವಾಗಿ ಕಂಡಿತು. ಪತ್ರಿಕಾರಂಗದಲ್ಲಿ ಬಹಳಷ್ಟನ್ನು ಸಾಧಿಸಬಹುದೆಂದು ಆಶಿಸಿ, ತಮ್ಮಲ್ಲಿ ಒಳತೋಟಿಯಾಗಿ ಹರಿಯುತ್ತಿದ್ದ ಸಾಹಿತ್ಯದ ಚಿಲುಮೆ, ಪುಟಿಯುತ್ತಿರುವ ದೇಶಪ್ರೇಮ, ತುಂಬಿಕೊಂಡಿದ್ದ ಆದರ್ಶಗಳಿಗೆ ಮೂರ್ತರೂಪವನ್ನೀಯಲು, ಪತ್ರಿಕಾರಂಗವನ್ನು ಪ್ರವೇಶಿಸಿದರು. ಇಲ್ಲಿ ಸಂಬಳ ಇಪ್ಪತ್ತೈದೇ ರೂಪಾಯಿಗಳಾದರೂ ಮನಸ್ಸಂತೃಪ್ತಿಯಿತ್ತು. ಮೊದಲಿದ್ದ ಸಹಕಾರೀ ಸಂಘದಲ್ಲಿ ಅವರ ಸಹೋದ್ಯೋಗಿಗಳಾಗಿದ್ದವರು ಉನ್ನತೋನ್ನತ ಪದವಿಗೇರಿದರು. ಗಣಪತಿಯವರ ಸಂಬಳ ನೂರು ರೂಪಾಯಿಗಳಿಗೇರಲು ಇಪ್ಪತ್ತು ವರ್ಷಗಳೇ ಬೇಕಾದವು. ಇದಕ್ಕಾಗಿ ಅವರು ಎಂದೂ ಕಿಂಚಿತ್ತೂ ಪರಿತಪಿಸಲಿಲ್ಲ.
೧೯೪೧ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ತೀವ್ರಗತಿಯಲ್ಲಿದ್ದಾಗ ‘ಕೊಡಗು’ ಪತ್ರಿಕೆಯ ಸಂಪಾದಕ ಬೆಳ್ಯಪ್ಪನವರು ಸೆರೆಮನೆಗೆ ಕಳುಹಿಸಲ್ಪಟ್ಟ ಸಂದರ್ಭದಲ್ಲಿ ಇವರು ಸಂಪಾದಕತ್ವವನ್ನು ವಹಿಸಿಕೊಂಡರು. ಒಂದೇ ವರ್ಷದೊಳಗೆ ಆಂಗ್ಲ ಸರಕಾರದ ವಿರುದ್ಧ ಬರೆದ ಸಂಪಾದಕೀಯ ಅವರಿಗೆ ಆರು ತಿಂಗಳ ಸೆರೆವಾಸವನ್ನು ತಂದು ಕೊಟ್ಟಿತು. ಪತ್ರಿಕೆಯ ಪ್ರಕಟಣೆಯೂ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಬಿಡುಗಡೆಯಾಗಿ ಬಂದ ಮೇಲೆ ‘ಕೊಡಗು ಕಂಪೆನಿ’ಯಲ್ಲಿ ಬಂಡವಾಳ ಕಡಿಮೆಯಾಗಿರುವದನ್ನು ಗಮನಿಸಿ, ಗಣಪತಿಯವರು ಕೊಡಗಿನ ಎಲ್ಲೆಡೆ ಸಂಚರಿಸಿ ಅತ್ಯಧಿಕ ಸಂಖ್ಯೆಯಲ್ಲಿ ‘ಕೊಡಗು’ ಪತ್ರಿಕೆಗೆ ಚಂದಾದಾರರನ್ನು ಮಾಡಿದರು. ಅಲ್ಲಿಂದ ಅವರು ‘ಕೊಡಗು’ ಪತ್ರಿಕೆಯ ಆತ್ಮಶಕ್ತಿಯಾಗಿದ್ದುಕೊಂಡು ಅದನ್ನು ಬೆಳೆಸಿಕೊಂಡು ನಡೆಸಿದರು.
ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕಾರಂಗದಲ್ಲಿದ್ದ ಗಣಪತಿಯವರು ಆಂಗ್ಲ ಪತ್ರಿಕೆಗಳಾದ ‘ದ ಹಿಂದು’, ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ಮಲಯಾಳಮ್ ಪತ್ರಿಕೆ ‘ಮಾತೃಭೂಮಿ’ಯ ಬಾತ್ಮಿದಾರರೂ ಆಗಿದ್ದರು.
ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಜಕೀಯ
ಬದಲಾಯಿಸಿಗಣಪತಿಯವರು ತಮ್ಮ ಇಪ್ಪತ್ತನೇ ವಯಸ್ಸಿಗೇ ಕೊಡಗು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೫೨ರಲ್ಲಿ ಅಸೆಂಬ್ಲಿ ಸ್ಥಾನಕ್ಕೆ ಸ್ಪರ್ಧಿಸಿದ ಅವರಿಗೆ ರಾಜಕೀಯದಿಂದ ಒಬ್ಬ ವ್ಯಕ್ತಿಯ ನೈತಿಕ ಮೌಲ್ಯಗಳ ವಿನಾಶವಾಗುತ್ತದೆ ಎಂದು ಮನದಟ್ಟಾಯಿತು. ಬಳಿಕ ಯಾವದೇ ಅಧಿಕಾರ, ಸ್ಥಾನ, ಪಕ್ಷಗಳಿಂದ ದೂರವಾಗಿ, ಸಾಮಾನ್ಯ ಪ್ರಜೆಯಾಗಿ ಬಾಳಿದರು. ನಿಷ್ಠ ಗಾಂಧೀವಾದಿಯಾಗಿದ್ದ ಇವರು ಅವರ ತತ್ತ್ವಗಳನ್ನು ಆಮರಣಪರ್ಯಂತ ಪಾಲಿಸಿದರು.
ನಿರಪೇಕ್ಷ ಸೇವೆ
ಬದಲಾಯಿಸಿಗಣಪತಿಯವರ ಆದರ್ಶ, ಶ್ರದ್ಧೆ ಮತ್ತು ಕಾರ್ಯದಕ್ಷತೆಯನ್ನು ಗಮನಿಸಿದ ಇತರ ಪತ್ರಿಕೆಯವರು ಅವರನ್ನು ಸಂಪಾದಕರ ಹುದ್ದೆಗೆ ಹೆಚ್ಚಿನ ಸಂಬಳಕ್ಕೆ ಆಹ್ವಾನಿಸಿದ್ದರು. ದೆಹಲಿಯಿಂದ ಆಲ್ ಇಂಡಿಯಾ ರೇಡಿಯೊದಿಂದಲೂ ಕರೆಬಂದಿತ್ತು. ಎಲ್ಲವನ್ನೂ ವಿನಯಪೂರ್ವಕವಾಗೇ ನಿರಾಕರಿಸಿದರು. ಸ್ವಾತಂತ್ರ್ಯ ದೊರೆತ ಬಳಿಕ ಸರಕಾರವು ಪತ್ರಿಕಾರಂಗದಲ್ಲಿಯೂ, ಸ್ವಾತಂತ್ರ್ಯ ಹೋರಾಟದಲ್ಲೂ ಗಣಪತಿಯವರ ತ್ಯಾಗಮಯ ದುಡಿಮೆಯನ್ನು ಗಮನಿಸಿ ಅವರಿಗೆ ಹತ್ತು ಎಕ್ರೆ ಜಾಗವನ್ನು ಮಂಜೂರು ಮಾಡಿದಾಗಲೂ ಅದನ್ನೂ ಬೇಡವೆಂದರು.
ತಮ್ಮ ಅನುಭವ ಮತ್ತು ಆದರ್ಶಗಳ ಆಧಾರದಲ್ಲಿ ತಾವು ಸರಿಕಂಡದ್ದನ್ನು ಪತ್ರಿಕೆಯಲ್ಲಿ ಸಾರಿದರು. ಇನ್ನೊಬ್ಬರ ಬಲವಂತ-ಬೆದರಿಕೆ, ಆಸೆ-ಆಮಿಷಗಳಿಗೆ ಅವರೆಂದೂ ತಲೆಬಾಗಲಿಲ್ಲ. ‘ಕೊಡಗು’ ವಾರಪತ್ರಿಕೆ ಕೊಡಗಿನ ದಾರಿದೀಪವಾಗಿ ೮೦ರ ದಶಕದವರೆಗೂ ಬಾಳಿತು. ಅವರ ಮಾರ್ಗದರ್ಶನದಲ್ಲಿ ‘ಕೊಡಗು ದೈನಿಕ’ವೂ ಆರಂಭವಾಯಿತು. ಕೊಡವ ತಕ್ಕ್ ನ ಪ್ರಪ್ರಥಮ ಪತ್ರಿಕೆ ‘ಬ್ರಹ್ಮಗಿರಿ’ಯ ಜನ್ಮಕ್ಕೂ ಅವರ ಕೊಡುಗೆ ಅತ್ಯಪೂರ್ವ.
ಸಾಹಿತ್ಯ ಕೃಷಿ
ಬದಲಾಯಿಸಿಪತ್ರಿಕೋದ್ಯಮದ ಜತೆಯಲ್ಲೇ ಸಾಹಿತ್ಯರಂಗದಲ್ಲೂ ಗಣಪತಿಯವರು ಅತ್ಯುತ್ತಮ ಸೇವೆ ಸಲ್ಲಿರುವರು. ಕತೆ, ಕಾದಂಬರಿ, ಕವನ, ಪ್ರಬಂಧ, ನಾಟಕ, ವೈಚಾರಿಕ ಲೇಖನಗಳೇ ಅಲ್ಲದೆ, ತಮ್ಮ ಜನ್ಮಭೂಮಿಯಾದ ಕೊಡಗು ಮತ್ತು ಅಲ್ಲಿಯ ಜನ ಜೀವನವನ್ನು ಕುರಿತು ಕೊಡವ, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಉತ್ತಮ ಕೃತಿಗಳನ್ನು ರಚಿಸಿದರು. ಅವರು ರಚಿಸಿ ಪ್ರಕಟಿಸಿದ ಕೃತಿಗಳು ಸುಮಾರು ಮೂವತ್ತು. (ಅವುಗಳ ವಿವರಗಳಿಗೆ ಇಲ್ಲಿ click ಮಾಡಿ:--> ಶ್ರೀ ಬಿ ಡಿ ಗಣಪತಿಯವರ ಕೃತಿಗಳು)
ಪ್ರಶಸ್ತಿಗಳು
ಬದಲಾಯಿಸಿ೧೯೮೨ರಲ್ಲಿ ‘ಕೊಡವರು, ಅವರ ಸಂಸ್ಕೃತಿ ಮತ್ತು ಸಂಪ್ರದಾಯ’ ಹಾಗೂ ‘ಮಾನವ’ ಎಂಬ ಎರಡು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾದೆಮಿ ಪ್ರಶಸ್ತಿ ದೊರಕಿತು. ಪತ್ರಿಕೋದ್ಯಮದಲ್ಲಿ ಅವರ ಅನುಪಮ ಸೇವೆಗೆ ಪತ್ರಿಕಾ ಅಕಾದೆಮಿ ಪ್ರಶಸ್ತಿಯನ್ನಿತ್ತರು.
ವೈಯಕ್ತಿಕ ಜೀವನ
ಬದಲಾಯಿಸಿ‘ಕೊಡಗಿನ ಗಾಂಧಿ’ ಎಂದು ಹೆಸರು ಪಡೆದಿದ್ದು, ‘ಕೊಡಗು’ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ಶ್ರೀ ಪಂದ್ಯಂಡ ಬೆಳ್ಯಪ್ಪನವರ ಪುತ್ರಿ ಶ್ರೀಮತಿ ಲೀಲ ಅವರನ್ನು ಮದುವೆಯಾದ ಗಣಪತಿವರಿಗೆ ಇಬ್ಬರು ಮಕ್ಕಳು: ಮಗಳು ಗಂಗಮ್ಮ (ಲಾಜವಂತಿ)ಮತ್ತು ಮಗ ದೇವಯ್ಯ(ಲಹರ್).
ನಿಧನ
ಬದಲಾಯಿಸಿಅಧಿಕಾರ, ಪದವಿ, ಐಶ್ವರ್ಯಗಳಿಗಿಂತಲೂ ಆದರ್ಶ, ತತ್ತ್ವಗಳೇ ಮನುಷ್ಯನ ಜೀವನಕ್ಕೆ ಮುಖ್ಯ ಎಂದು ನಂಬಿದ್ದ ಗಣಪತಿಯವರು ೧೯೯೮ರಲ್ಲಿ ನಿಧನರಾದರು.
ಹೆಚ್ಚಿನ ಅಭ್ಯಾಸಕ್ಕೆ
ಬದಲಾಯಿಸಿ- Kodavas, ಬಿ ಡಿ ಗಣಪತಿ, ಜ್ಯೋತಿ ಪ್ರಕಾಶನ, ಮಡಿಕೇರಿ, ೧೯೮೦
- ಶ್ರೀ ಬಾಚಮಾಡ ಡಿ ಗಣಪತಿ, ಐನಂಡ ಧನು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ, ೨೦೦೨.
- ಎತ್ತರಕ್ ಪತ್ತ್‌ನವು, ಅಪ್ಪಚೆಟ್ಟೋಳಂಡ ವನು ವಸಂತ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ, ೨೦೦೫