ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನ
ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನವು ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದಲ್ಲಿದೆ. ತೇತ್ರಾಯುಗದ ಕ್ಷತ್ರಿಯ ಸಂಹಾರಕ ಭಗವಾನ್ ಪರಶುರಾಮರು ತನ್ನ ಕೊಡಲಿಯನ್ನೆಸೆದು ಸೃಷ್ಟಿಸಿದ ಪವಿತ್ರ ಸ್ಥಳ ಈ ತುಳು ನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ದೇವರಗುಡ್ಡೆ ಎಂಬ ಎತ್ತರವಾದ ಗುಡ್ಡದಲ್ಲಿರುವ ಶ್ರೀ ಕ್ಷೇತ್ರದಲ್ಲಿ "ಅಂಬಾ(ಪಾರ್ವತಿ)ಗಣಪತಿ" ಸಮೇತರಾಗಿ 'ಶಿವ ದೇವರು' ನೆಲೆಸಿರುವುದರಿಂದ "ಸಾಂಬಸದಾಶಿವ" ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಿದ್ದು, ಶ್ರೀ ಕ್ಷೇತ್ರವು ಕಾರಣಿಕ ಹಿನ್ನಲೆಯುಳ್ಳ ಪರಮ ಪವಿತ್ರ ಕ್ಷೇತ್ರವಾಗಿದೆ.
ಇತಿಹಾಸ
ಬದಲಾಯಿಸಿಸಾವಿರಾರು ವರ್ಷಗಳ ಹಿಂದೆ ಭಗವಾನ್ ಪರಶುರಾಮ ದೇವರು ಈ ಎತ್ತರವಾದ ಗುಡ್ಡ ಪ್ರದೇಶದಲ್ಲಿ ತಪಸ್ಸನ್ನಾಚರಿಸಿದರು. ತದನಂತರ ಋಷಿಮುನಿಗಳು ಈ ಪ್ರದೇಶದಲ್ಲಿ ಹಲವು ಕಾಲ ಯಾಗ, ಯಜ್ಞ, ತಪಸ್ಸುಗಳನ್ನು ಮಾಡಿದ ತಪೋಭೂಮಿಯಾಯಿತು. ನಂತರದ ಕಾಲದಲ್ಲಿ ಇಲ್ಲಿಯ ಮೂಲ ನಿವಾಸಿಗಳು ತಮಗೆ ಬಂದ ತೊಂದರೆಗಳನ್ನು ಕಂಡು, ಈ ಪ್ರದೇಶದಲ್ಲಿ ದೈವಿ ಶಕ್ತಿಯಿದೆಯೆಂದು ತಿಳಿದು ತಮ್ಮದೇ ರೀತಿಯಲ್ಲಿ ದೇವಿ ಶಕ್ತಿ/ಕಾಳಿಶಕ್ತಿಯನ್ನು ಪೂಜಿಸಿ ಆರಾಧಿಸಿಕೊಂಡು ಬಂದಿದ್ದರು. ತದನಂತರ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ತಮಗೆ ಗಂಡು ಸಂತಾನ ಇಲ್ಲದೇ ದತ್ತು ಸ್ವೀಕಾರ ಮಾಡಬೇಕಾಗಿ ಬಂದ ಸಂದರ್ಭದಲ್ಲಿ ಪ್ರಾಯಶ್ಚಿತವಾಗಿ ಈ ಪ್ರದೇಶದ ಕೆಲವು ಕೃಷಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು, ಇಲ್ಲಿ ವಾಸವಿರುವಂತೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಸದ್ರಿ ಬ್ರಾಹ್ಮಣರಿಗೆ ಈ ಎತ್ತರದ ಪ್ರದೇಶದಲ್ಲಿರುವ ಪವಿತ್ರ ಚೈತನ್ಯವು ಗೋಚರಕ್ಕೆ ಬಂದು ಶ್ರೀ ಗಣಪತಿ ದೇವರನ್ನು ಆರಾಧಿಸಿಕೊಂಡು ಬಂದರು. ನಂತರದ ವರ್ಷಗಳಲ್ಲಿ ರಾಜರುಗಳ ಮುಂದಾಳತ್ವದಲ್ಲಿ ಇಲ್ಲಿ ಅಂಬಾಗಣಪತಿ ಸಮೇತನಾದ ಶ್ರೀ ಸಾಂಬಸದಾಶಿವ ದೇವಸ್ಥಾನವನ್ನು ನಿರ್ಮಿಸಿ ಪೂಜಾಧಿಗಳನ್ನು ಬಹಳ ವೈಭವದಿಂದ ನಡೆಸಿಕೊಂಡು ಬಂದರು. ನಂತರದ ಕಾಲದ ಸಹೋದರತ್ವದಲ್ಲಿ ಸ್ವಂತಿಕೆಗಾಗಿ ವೈರತ್ವ ಉಂಟಾಗಿ ಯುದ್ಧ ನಡೆದು ಕಷ್ಟ-ನಷ್ಟಗಳಾಗಿ, ಕಾಲಕ್ರಮೇಣ, ಕಾರಣಾಂತರದಿಂದ ಶ್ರೀ ಸಾಂಬಸದಾಶಿವ ದೇವಸ್ಥಾನವು ಶಿಥಿಲಗೊಂಡಿತೆಂದು ತಿಳಿದುಬಂದಿದೆ. ತದನಂತರ ಸುಮಾರು ೮೦೦ ವರ್ಷಗಳ ಹಿಂದೆ, ಶಿಥಿಲಗೊಂಡಿರುವ ಈ ಕ್ಷೇತ್ರದ ಪವಿತ್ರ ಶಿವಲಿಂಗವನ್ನು ಚೌಟರ ಅರಸರ ಆಡಳಿತದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪ್ರತಿಷ್ಠೆ ಮಾಡಲಾಯಿತೆಂದು ತಿಳಿದುಬಂದಿದೆ.
ಸುಮಾರು ವರ್ಷಗಳ ಹಿಂದೆ ದೇವರಗುಡ್ಡೆ ಎಂಬ ಹೆಸರಿದ್ದ ಈ ಎತ್ತರದ ಕಾಡು ಪ್ರದೇಶದಲ್ಲಿ ಶಿವ ದೇವಾಲಯವಿದ್ದ ಕುರುಹುಗಳು ಲಭಿಸಿದವು. ಸದ್ರಿ ಕ್ಷೇತ್ರವನ್ನು ನವ ನಿರ್ಮಾಣಗೊಳಿಸಬೇಕೆಂದು ಸಂಕಲ್ಪ ಮಾಡಿ, ಶ್ರೀ ಎಮ್.ಕಾಂತಪ್ಪ ಶೆಟ್ಟಿಯವರ ಮುಂದಾಳತ್ವದಲ್ಲಿ ಶ್ರೀ ಮಿಜಾರು ಗುತ್ತು ಆನಂದ ಆಳ್ವ ಇವರ ಘನ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ.ಐ.ರಾಮ ಆಸ್ರಣ್ಣ ಅವರ ಆಶೀರ್ವಚನದೊಂದಿಗೆ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿದರು.[೧] ಕಾರ್ಯಪ್ರವೃತರಾಗಿ, ಪ್ರಕೃತವಿರುವ ಗರ್ಭಗುಡಿಯೊಂದಿಗೆ ಈ ಹಿಂದೆ ಇದ್ದ ಸುತ್ತು ಪೌಳಿಯೊಂದಿಗೆ ಶ್ರೀ ಸಾಂಬಸದಾಶಿವ ದೇವಸ್ಥಾನವು ನಿರ್ಮಾಣವಾಯಿತು.[೨][೩][೪]
ಉತ್ಸವಗಳು
ಬದಲಾಯಿಸಿಶ್ರೀ ಕ್ಷೇತ್ರದಲ್ಲಿ ಭಜನೆಗಳು, ರಂಗಪೂಜೆಗಳು, ನಿತ್ಯನಂದಾದೀಪ ಸೇವೆ, ಮಾಸ ಶಿವರಾತ್ರಿ, ಶಿವ ಜಾಗರಣೆ, ಚೌತಿ, ದೀಪಾವಳಿ ಆಚರಣೆ, ಹೋಮ-ಹವನಗಳು, ಅನ್ನದಾನದಿ ಸೇವೆಗಳು, ತ್ರಿಕಾಲ ಪೂಜಾ ಸೇವೆಗಳು ನಡೆಯುತ್ತವೆ.
ಉಲ್ಲೇಖಗಳು
ಬದಲಾಯಿಸಿ