ಬಾಬಾ ಅಮ್ಟೆ
ಮುರಳೀಧರ ದೇವಿದಾಸ ಆಮ್ಟೆ ಮಹಾತ್ಮ ಗಾಂಧಿಯವರ ಅನುಯಾಯಿ. ಕುಷ್ಟ ರೋಗಿಗಳು ಮತ್ತು ಅಂಗವಿಕಲರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಸಮಾಜಸೇವಕ.
ಮುರಳೀಧರ್ ದೇವ್ ದಾಸ್ ಆಮ್ಟೆ | |
---|---|
Born | [೧] | ೨೬ ಡಿಸೆಂಬರ್ ೧೯೧೪
Died | 9 February 2008 ಆನಂದವನ, ಮಹಾರಾಷ್ಟ್ರ, ಭಾರತ | (aged 94)
Nationality | ಭಾರತೀಯ |
Spouse | ಸಾಧನ ಆಮ್ಟೆ |
Children | ವಿಕಾಸ್ ಆಮ್ಟೆ ಪ್ರಕಾಶ್ ಆಮ್ಟೆ |
Signature | |
ಹುಟ್ಟು: ಡಿಸೆಂಬರ್ ೨೬, ೧೯೧೪ ನಿಧನ : ಫೆಬ್ರವರಿ ೯, ೨೦೦೮
ಹುಟ್ಟು ಮತ್ತು ಬಾಲ್ಯ
ಬದಲಾಯಿಸಿಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗಣಘಾಟ್ ಎಂಬಲ್ಲಿಯ ಬ್ರಾಹ್ಮಣ ಜಮೀನುದಾರರ ಕುಟುಂಬದಲ್ಲಿ, ಹಿರಿಯ ಮಗನಾಗಿ ಜನನ. ಹೊರ ಜಗತ್ತಿನ ಪರಿಚಯವೇ ಆಗದಂತಹ ಪರಿಸರದಲ್ಲಿ ಬಾಲ್ಯ ಕಳೆಯಿತು. ೧೪ ವರ್ಷ ವಯಸ್ಸಿನಲ್ಲಿಯೇ ತನ್ನದೇ ಬಂದೂಕಿನಲ್ಲಿ ಅಕ್ಕಪಕ್ಕದ ಕಾಡುಗಳಲ್ಲಿ ಕಾಡುಹಂದಿ, ಜಿಂಕೆ ಹೊಡೆಯುವಂತಹ ಶ್ರೀಮಂತ ಜೀವನಮಟ್ಟ. ಮುಂದೆ ನಾಗಪುರದಲ್ಲಿ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಸೀಟುಗಳಿಗೆ ಚಿರತೆಯ ಚರ್ಮ ಹೊಚ್ಚಿದ್ದ ಸಿಂಗರ್ ಸ್ಪೋರ್ಟ್ಸ್ ಕಾರಿನಲ್ಲಿ ಓಡಾಟ. ಸಿನೆಮಾ ಬಗ್ಗೆ ಬಹಳ ಹುಚ್ಚು. ಪತ್ರಿಕೆಗಳಲ್ಲಿ ಚಲನಚಿತ್ರಗಳ ವಿಮರ್ಶೆ ಬರೆಯುವ ಹವ್ಯಾಸ. ಸಿನೆಮಾ ನೋಡಲಿಕ್ಕೆ ಹೋದರೆ ಎರಡು ಟಿಕೀಟು ಕೊಳ್ಳುವುದು- ಒಂದು ಕೂರಲಿಕ್ಕೆ, ಇನ್ನೊಂದು ಕಾಲು ನೀಡಲಿಕ್ಕೆ !. ಅಂದಿನ ಖ್ಯಾತ ಹಾಲಿವುಡ್ ತಾರೆಗಳು ಗ್ರೇಟಾ ಗಾರ್ಬೋ ಮತ್ತು ನೋರ್ಮಾ ಶಿಯರರ್ ರೊಂದಿಗೆ ಪತ್ರವ್ಯವಹಾರ.
ಮನಃಪರಿವರ್ತನೆ
ಬದಲಾಯಿಸಿಶಾಂತಿನಿಕೇತನದ ಭೇಟಿ. ರವೀಂದ್ರನಾಥ ಠಾಕೂರರ ಕಾವ್ಯ , ಸಂಗೀತಗಳ ಪ್ರಪಂಚದ ಪರಿಚಯ. ಮುಂದೆ ಗಾಂಧೀಜಿಯವರ ಸಂಪರ್ಕ. ಇವೆಲ್ಲವುಗಳಿಂದ ಮನಃಪರಿವರ್ತನೆ. ಠಾಕೂರರ ಕವಿಜಗತ್ತು ಬಾಬಾರನ್ನು ಹೊರಜಗತ್ತಿಗೆ ಸೂಕ್ಷ್ಮವಾಗಿ ಸ್ಪಂದಿಸುವಂತೆ ಮಾಡಿತು. ಗಾಂಧೀಜಿ ಸತ್ಯ , ಪ್ರೀತಿ, ನೀತಿ ಮತ್ತು ನಿರ್ಭಯ ಪ್ರವೃತ್ತಿಯಿಂದ ದೈವೀ ಸಂಬಂಧವನ್ನು ಅರ್ಥ ಮಾಡಿಕೊಂಡಿದ್ದ ಪರಿಯಿಂದ ತೀವ್ರ ಪ್ರಭಾವ. ತನ್ನ ಸುಭದ್ರ ಜೀವನವನ್ನು ತ್ಯಜಿಸಿ , ದೀನದಲಿತರ ಸೇವೆಗೆ ಮುಡಿಪಾಗಿಸಲು ಸಂಕಲ್ಪ.
ಮಧ್ಯ ಪ್ರದೇಶದ ದುರ್ಗದಲ್ಲಿ ಲಾಯರ್ ಆಗಿ ಉದ್ಯೋಗ ಪ್ರಾರಂಭ. ಶ್ರೀಮಂತ ಕಕ್ಷೀದಾರರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗ. ಅವರ ಅಪರಾಧಗಳನ್ನು ಮುಚ್ಚಹಾಕಲು ಸುಳ್ಳು ವಾದ ಮಾಡುವಂತೆ ಒತ್ತಡ. ಅತ್ಯಾಚಾರ ಮಾಡಿದ್ದನ್ನು ಬಾಬಾರೊಂದಿಗೆ ಒಪ್ಪಿಕೊಂಡಿದ್ದರೂ, ಕೋರ್ಟಿನಲ್ಲಿ ನಿರ್ದೋಷಿಯೆಂದು ವಾದ ಮಾಡಿ ಗೆಲ್ಲಿಸಲು ಒತ್ತಡ.
ಜನಸೇವೆ
ಬದಲಾಯಿಸಿಅಂದಿನ ಸಾಮಾಜಿಕ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಹರಿಜನರೊಂದಿಗೆ, ತಮ್ಮದೇ ಜಮೀನಿನಲ್ಲಿ ಕಾರ್ಯ ಪ್ರಾರಂಭ ಮಾಡಿದರು. ಹಿಂದಿನ ಜನ್ಮದ ಪಾಪದ ಫಲ ಎಂದೇ ನಂಬಲಾಗುತ್ತಿದ್ದ ಕುಷ್ಟ ರೋಗದಿಂದ , ಪೀಡಿತರಾದವರನ್ನು ಸಮಾಜ ತಾತ್ಸಾರ ಮಾಡಿ ದೂರವಿಡುತ್ತಿದ್ದ ಆ ಕಾಲದಲ್ಲಿ, ಬಾಬಾ ಆರು ಜನ ಕುಷ್ಟ ರೋಗಿಗಳೊಂದಿಗೆ ಮಹಾರೋಗಿ ಸೇವಾ ಸಮಿತಿಯನ್ನು ೧೯೪೯ರಲ್ಲಿ ಸ್ಥಾಪಿಸಿದಾಗ ಅವರಲ್ಲಿದ್ದು ೧೪ ರೂಪಾಯಿ ಮತ್ತು ಒಂದು ಕುಂಟ ಗೋವು ಮಾತ್ರಾ ಇತ್ತು.
೧೯೪೦ರ ದಶಕದ ಮೊದಲಲ್ಲಿ ವರೋರಾ ಎಂಬಲ್ಲಿ ಆನಂದವನವನ್ನು ಸ್ಥಾಪಿಸಿದರು. ಇದು ಕುಷ್ಟ ರೋಗಿಗಳು ಮತ್ತು ಇತರ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲಾ ಸೌಲಭ್ಯಗಳನ್ನೂ ಹೊಂದಿದ್ದ ಮೊಟ್ಟಮೊದಲ ಪ್ರಯತ್ನವಾಗಿತ್ತು. ಇಂದು (೨೦೦೮) ೧೭೬ ಹೆಕ್ಟೇರಿನಲ್ಲಿ ಹಬ್ಬಿರುವ ಆನಂದ ವನದಲ್ಲಿ ೩೦೦೦ ನಿವಾಸಿಗಳಿದ್ದಾರೆ. ಈ ಮೂಲಕ ಬಾಬಾ ಅಂಗವಿಕಲರೂ , ಕುಷ್ಟ ರೋಗಿಗಳು ತಮ್ಮ ಕಾಲಮೇಲೆ ನಿಂತು ಸ್ವಾಭಿಮಾನದ ಬದುಕನ್ನು ಬಾಳಬಲ್ಲರು ಎಂದು ಸಿದ್ಧ ಮಾಡಿದರು.
ನಿವಾಸಿಗಳ ಅಗತ್ಯವನ್ನು ಸದಾ ಚಿಂತಿಸುತ್ತಿದ್ದ ಬಾಬಾ, ಆಶ್ರಮದ ಕುರುಡರು ಗುಲಾಬಿ ಹೂವು ಕೊಯ್ಯುವಾಗ ಮುಳ್ಳು ಚುಚ್ಚಬಾರದು ಎಂದು ಮುಳ್ಳಿಲ್ಲದ ಗುಲಾಬಿಯನ್ನು ಅಭಿವೃದ್ಧಿಪಡಿಸಿದರು. ಬಾಬಾ ಕಟ್ಟಿದ ಕುರುಡ, ಹೆಳವ, ಮೂಕ ಇತ್ಯಾದಿ ಅಂಗವಿಕಲ ೧೫೦ ನಿವಾಸಿಗಳ ಸಂಗೀತ ತಂಡವು, ತನ್ನ ಪ್ರತಿಭಾ ಪ್ರದರ್ಶನದಿಂದ ನೋಡುಗರನ್ನು ದಂಗುಬಡಿಸುತ್ತದೆ.
ಅವರೊಂದಿಗೆ ಈ ಕಾರ್ಯದಲ್ಲಿ ಹೆಗಲು ಕೊಟ್ಟ ಅವರ ಪತ್ನಿ ಸಾಧನಾತಾಯಿಯವರೊಂದಿಗೆ ಬಾಬಾ ಸೋಮನಾಥ, ನಾಗೇಪಲ್ಲಿ, ಹೇಮಲ್ಕಾಸ ಮತ್ತು ಅಶೋಕವನ ಎಂಬಲ್ಲಿ ಆಶ್ರಮಗಳನ್ನು ಸ್ಥಾಪಿಸಿದರು. ಈ ಮೂಲಕ ಮಹಾರಾಷ್ಟ್ರದ ಗಢಾಚಿರೋಲಿ ಪ್ರದೇಶದ ಜನಸಂಪರ್ಕದಿಂದ ದೂರ ವಾಸಿಸುತ್ತಿರುವ ಆದಿವಾಸಿಗಳು, ಬಡಬಗ್ಗರ ಉಪಯೋಗಕ್ಕಾಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಇವುಗಳ ಸೌಲಭ್ಯಗಳನ್ನು ಮಾಡಿಕೊಟ್ಟರು.
ಅವರ ವೈದ್ಯ ಮಕ್ಕಳು ವಿಕಾಸ್ ಮತ್ತು ಪ್ರಕಾಶ್ , ತಮ್ಮಂತೆ ವೈದ್ಯರಾದ ಪತ್ನಿ, ಪುತ್ರರೊಂದಿಗೆ ಬಾಬಾರ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪ್ರಶಸ್ತಿಗಳು, ಗೌರವಗಳು
ಬದಲಾಯಿಸಿತಮ್ಮ ಕಾರ್ಯಕ್ಕಾಗಿ ಬಾಬಾ ಪಡೆದ ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಿಂದ ಗಳಿಸಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.
ಅಂತರರಾಷ್ಟ್ರೀಯ
ಬದಲಾಯಿಸಿ- ರೇಮನ್ ಮ್ಯಾಗ್ಸೇಸೆ - ೧೯೮೫ ( ಕುಷ್ಟ ರೋಗಿಗಳ ಅಭಿವೃದ್ದ್ಹಿಗಾಗಿ ಮಾಡಿದ ಕೆಲಸಕ್ಕಾಗಿ)
- ಡೇಮಿಯನ್ ಡಟ್ಟನ್ ಪ್ರಶಸ್ತಿ , ಯು ಎಸ್ ಎ - ೧೯೮೩ . ಕುಷ್ಟ ರೋಗಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಕೊಡ ಮಾಡುವ ಅತ್ಯುಚ್ಚ ಅಂತರರಾಷ್ಟ್ರೀಯ ಪ್ರಶಸ್ತಿ.
- ವಿಶ್ವ ಸಂಸ್ಥೆಯ ಮಾನವತಾ ಹಕ್ಕು ಪ್ರಶಸ್ತಿ (United Nations Human Rights Prize) ೧೯೯೮
- ಅಂತರರಾಷ್ಟ್ರೀಯ ಜಿರಾಫೆ ಪ್ರಶಸ್ತಿ, ಯು ಎಸ್ ಎ ೧೯೮೯
- ಧರ್ಮಾಭಿವೃದ್ಧಿ ಕಾರ್ಯಕ್ಕಾಗಿ ಟೆಂಪಲ್ಟನ್ ಬಹುಮಾನ ,ಯು ಎಸ್ ಎ ೧೯೯೦
- ವಾತಾವರಣದಲ್ಲಿ ಸಾಧನೆಗಾಗಿ ವಿಶ್ವ ಸಂಸ್ಥೆಯ ರೋಲ್ ಆಫ್ ಆನರ್ ೧೯೯೧
- ರೈಟ್ ಲೈವ್ಲೀಹುಡ್ ಅವಾರ್ಡ್, ಸ್ವೀಡನ್ - ೧೯೯೧. ಇದನ್ನು ಪರ್ಯಾಯ ನೋಬೆಲ್ ಎಂದೂ ಕರೆಯಲಾಗುತ್ತದೆ. ನರ್ಮದಾ ಬಚಾವ್ ಅಂದೋಲನಕ್ಕಾಗಿ ಮೇಧಾ ಪಾಟ್ಕರ್ ರೊಂದಿಗೆ ಜಂಟಿಯಾಗಿ
ಭಾರತೀಯ
ಬದಲಾಯಿಸಿ- ಪದ್ಮಶ್ರೀ ೧೯೭೧
- ಪದ್ಮವಿಭೂಷಣ ೧೯೮೬
- ಅಂಗಹೀನರ ಹಿತರಕ್ಷಣಾ ಪ್ರಶಸ್ತಿ (Welfare of the Disabled Award) ೧೯೮೬
- ಗಾಂಧಿ ಶಾಂತಿ ಪ್ರಶಸ್ತಿ ೧೯೯೯
- ಸಾಮಾಜಿಕ ಸುಧಾರಣೆಗಾಗಿ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಪ್ರಶಸ್ತಿ ೧೯೯೯
ಇತರೆ
ಬದಲಾಯಿಸಿ- ಭರತವಾಸ ಪ್ರಶಸ್ತಿ ೨೦೦೮
- ಮಹಾರಾಷ್ಟ್ರ ಸರಕಾರದ ದಲಿತ ಮಿತ್ರ ಪ್ರಶಸ್ತಿ ೧೯೭೪
- ರಾಷ್ಟ್ರೀಯ ಭೂಷಣ ಪ್ರಶಸ್ತಿ ೧೯೭೮
- ಜಮ್ನಾಲಾಲ್ ಬಜಾಜ್ ಪ್ರಶಸ್ತಿ ೧೯೭೯
- ಎನ್ ಡಿ ದಿವಾನ್ ಪ್ರಶಸ್ತಿ ೧೯೮೦ (National Society for Equal Opportunities for the ‘Handicapped’ (NASEOH), Mumbai)
- ಮಧ್ಯ ಪ್ರದೇಶ ಸರಕಾರದ ಇಂದಿರಾ ಗಾಂಧಿ ಪುರಸ್ಕಾರ ೧೯೮೫
- ರಾಜಾ ರಾಮ ವೋಹನರಾಯ್ ಪ್ರಶಸ್ತಿ ೧೯೮೭
- ಜಿ ಡಿ ಬಿರ್ಲಾ ಅಂತರರಾಷ್ಟ್ರೀಯ ಪ್ರಶಸ್ತಿ ೧೯೮೮
- ಮಹಾರಾಷ್ಟ್ರ ಸರಕಾರದ ಆದಿವಾಸಿ ಸೇವಕ್ ಪ್ರಶಸ್ತಿ ೧೯೯೧
- ಕುಮಾರ ಗಂಧರ್ವ ಪುರಸ್ಕಾರ ೧೯೯೮
- ಜಸ್ಟಿಸ್ ಕೆ ಎಸ್ ಹೆಗ್ಡೆ ಪ್ರಶಸ್ತಿ , ಕರ್ನಾಟಕ ೧೯೯೮
- ಮಹಾರಾಷ್ಟ್ರ ಸರಕಾರದ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ೧೯೯೮
- ಗೌರವ ಡಿ.ಲಿಟ್ - ನಾಗಪುರ ವಿಶ್ವವಿದ್ಯಾನಿಲಯ ೧೯೮೦
- ಗೌರವ ಡಿ.ಲಿಟ್ - ಪುಣೆ ವಿಶ್ವವಿದ್ಯಾನಿಲಯ ೧೯೮೫-೮೬
- ದೇಶಿಕೋತ್ತಮ (ಗೌರವ ಡಾಕ್ಟರೇಟು) ೧೯೮೮ -ವಿಶ್ವಭಾರತಿ, ಶಾಂತಿ ನಿಕೇತನ , ಪಶ್ಚಿಮ ಬಂಗಾಳ
ನಿಧನ
ಬದಲಾಯಿಸಿ೨೦೦೫ರಲ್ಲಿ ಕ್ಯಾನ್ಸರ್ ರೋಗವಿರುವುದು ಪತ್ತೆಯಾದರೂ, ರಕ್ತದೊತ್ತಡವಿದ್ದರೂ, ಬಾಬಾ , ಪ್ರತಿಕ್ಷಣವನ್ನೂ ಪೂರ್ಣವಾಗಿ ಬದುಕಿ ಅನುಭವಿಸುತ್ತಿದ್ದ, ತನ್ನ ಜೀವನ ಶೈಲಿಯನ್ನು ಬದಲಾಯಿಸಲಿಲ್ಲ. ಬೆಳಿಗ್ಗೆ ೪ ಘಂಟೆಗೆ ಏಳುವುದರಿಂದ ಪ್ರಾರಂಭವಾಗುತ್ತಿದ್ದ ಚಟುವಟಿಕೆಗಳನ್ನು ಕಡಿಮೆಮಾಡಲಿಲ್ಲ.
ಇಂಥಾ ಅಪರೂಪದ ವ್ಯಕ್ತಿ ಫೆಬ್ರವರಿ ೯ರ ಮುಂಜಾನೆ ೪ ಘಂಟೆಗೆ ಪ್ರಾಣತ್ಯಾಗ ಮಾಡಿದರು. ತನ್ನ ಶರೀರವನ್ನು ಅಗ್ನಿಗಾಹುತಿ ಮಾಡಬಾರದು. ಭೂಮಿಯಲ್ಲಿಯೇ ಗೊಬ್ಬರವಾಗುವಂತೆ ಹೂಳಬೇಕು ಎಂಬುದು ಅವರ ಕೊನೆಯಾಸೆಯಾಗಿತ್ತು.
ಉಲ್ಲೇಖಗಳು
ಬದಲಾಯಿಸಿ- ↑ "India daily obituary". Archived from the original on 2010-06-17. Retrieved 2013-11-17.