ಬಾನಂದೂರು ಕೆಂಪಯ್ಯ
ಬಾನಂದೂರು ಕೆಂಪಯ್ಯ ೧೯೫೧ ಜೂನ ೧೪ರಂದು ರಾಮನಗರ ತಾಲೂಕಿನ ಬಾನಂದೂರಿನಲ್ಲಿ ಜನಿಸಿದರು. ಇವರ ತಾಯಿ ಹುಚ್ಚಮ್ಮ ಜನಪದ ಗಾಯಕಿ ; ತಂದೆ ವೆಂಕಟಯ್ಯ ಜನಪದ ಕಲೆಗಾರರು. ಈ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಕೆಂಪಯ್ಯನವರೆ ಕಿರಿಯರು. ಇವರ ಅಣ್ಣ ಆರು ನಗಾರಿ ಬಾರಿಸುವ ಪರಿಣತಿ ಪಡೆದು ನಗಾರಿ ಸಿದ್ದಯ್ಯನೆಂದೇ ಖ್ಯಾತರಾದವರು.
ಶಿಕ್ಷಣ
ಬದಲಾಯಿಸಿಇವರ ಪ್ರಾಥಮಿಕ ಶಿಕ್ಷಣ ಬಾನಂದೂರಿನಲ್ಲಿನಲ್ಲಿ ಹಾಗು ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಜರುಗಿತು. ೧೯೮೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಹಂಪಿ ವಿಶ್ವವಿದ್ಯಾಲಯದಿಂದ ಕರ್ನಾಟಕ ದಲಿತ ಜಾನಪದ ಸಂಗೀತದಲ್ಲಿ ಡಿ.ಲಿಟ್. ಪದವಿ ಪಡೆದರು.
ಉದ್ಯೋಗ
ಬದಲಾಯಿಸಿಬಾನಂದೂರು ಕೆಂಪಯ್ಯನವರು ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ, ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡಿದ ಬಳಿಕ, ೧೯೮೦ರಲ್ಲಿ ಮೈಸೂರಿನಲ್ಲಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇರಿದರು. ೨೦೦೦ದಿಂದ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರೆಂದು ಕೆಲಸ ಮಾಡುತ್ತಿರುವರು.
ಸಾಹಿತ್ಯ
ಬದಲಾಯಿಸಿಕೆಂಪಯ್ಯನವರು ಬಯಲು ಸೀಮೆಯ ಜಾನಪದ ಕಥೆಗಳ ಸಂಕಲನ ಹೊರ ತಂದಿದ್ದಾರೆ. ‘ಚೆಂದುಳ್ಳಿ ಪದವ ಕಲಸವ್ವ’ ಹಾಗು ‘ಮೊಗ್ಗಾಗಿ ಬಾರೊ ತುರುಬಿಗೆ’ ಎಂಬ ಹೆಸರಿನ ಜನಪದ ಗೀತೆಗಳ ಸಂಗ್ರಹ ಪ್ರಕಟಿಸಿದ್ದಾರೆ. ‘ನನ್ನ ಈ ನೆಲದಲ್ಲಿ’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ‘ಸುಡುಗಾಡ ಸಿದ್ದರು’ ಎನ್ನುವ ಜನಾಂಗೀಯ ಅಧ್ಯಯನ ಕೃತಿಯನ್ನು ಪ್ರಕಟಿಸಿದ್ದಾರೆ. ಕನ್ನಡ ನಾಡಿನ ಜನಪದ ಕಲಾವಿದರನ್ನು ಹಾಗು ಅವರ ಜನಪದ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿದ್ದಾರೆ.
ಜನಪದ ಸಂಗೀತಗಾರ
ಬದಲಾಯಿಸಿಕೆಂಪಯ್ಯನವರು ಹೈಸ್ಕೂಲಿನಲ್ಲಿದ್ದಾಗಲೆ ತಮ್ಮ ಜನಪದ ಹಾಡುಗಾರಿಕೆಗಾಗಿ ಬಹುಮಾನ ಪಡೆಯುತ್ತ ಬಂದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಯೋಜಿತರಾಗಿದ್ದರು. ಭಾರತದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಸಣ್ಣಾಟ, ದೊಡ್ಡಾಟ, ಗೊಂಬೆಯಾಟಗಳಿಗೆ ಸಂಗೀತ ಒದಗಿಸಿದ್ದಾರೆ. ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಶ್ರೀಮತಿ ಮಂಜುಳಾ ಗುರುರಾಜ್ ಹಾಗು ಕಸ್ತೂರಿ ಶಂಕರ್ ಜೊತೆಗೆ ಹಾಡಿದ್ದಾರೆ. ಈ ಧ್ವನಿಸುರಳಿಗಳಲ್ಲಿ 'ಬಣ್ಣದ ಬಳೆಗಾರ' ವಿಶೇಷವಾಗಿ ಜನಪ್ರಿಯವಾಗಿದೆ. ಕೆಂಪಯ್ಯನವರು ಜನಪ್ರಿಯಗೊಳಿಸಿದ ಮತ್ತೊಂದು ಜನಪದ ಗೀತೆಯೆಂದರೆ ನಾನಾರಿಗಲ್ಲದವಳು ಬಿದಿರು.
ಸಂಗೀತ ನಿರ್ದೇಶಕ
ಬದಲಾಯಿಸಿಕೆಂಪಯ್ಯನವರು ಗುರುರಾಜ ಕಾಟೆ ನಿರ್ದೇಶನದ ‘ಬಂಗಾರದ ಗೂಳಿ’ ಚಲನಚಿತ್ರಕ್ಕೆ ಗುಣಸಿಂಗ ಜೊತೆಗೆ ಸಂಗೀತ ನಿರ್ದೇಶಿಸಿದ್ದಾರೆ. ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ್ದಾರೆ.
ಗೌರವ
ಬದಲಾಯಿಸಿ- ೧೯೮೫ರಲ್ಲಿ ಕೆಂಪಯ್ಯನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು.
- ೧೯೮೬ರಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ ದೊರೆಯಿತು.
- ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ ಲಭಿಸಿದೆ.
- ಮೈಸೂರಿನ ಜೇಸೀಸ್ ಸಂಸ್ಥೆಯ ಪ್ರತಿಭಾವಂತ ಯುವ ಗಾಯಕ ಪ್ರಶಸ್ತಿ
- ಶಿವರಾಮ ಕಾರಂತ ದೀಪ ಪ್ರಶಸ್ತಿ
- ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ
- ಪಂಡಿತ ಪುಟ್ಟರಾಜ ಗವಾಯಿಗಳಿಂದ 'ಸಂಗೀತ ಲೋಕದ ಧ್ರುವತಾರೆ' ಎನ್ನುವ ಬಿರುದು
ಕೌಟುಂಬಿಕ
ಬದಲಾಯಿಸಿಕೆಂಪಯ್ಯನವರ ವಿವಾಹ ೧೯೮೦ರಲ್ಲಿ ಬೆಂಗಳೂರಿನ ಸುಚಿತ್ರಾ ಎನ್ನುವರೊಡನೆ ಜರುಗಿತು. ಈ ದಂಪತಿಗಳಿಗೆ ಸ್ನೇಹಾ, ಚೇತನ ಹಾಗು ಸಚಿನ ಎನ್ನುವ ಮೂವರು ಮಕ್ಕಳಿರುವರು.