ಬಾಗಲಕೋಟ ಜಿಲ್ಲೆ ವಿಶೇಷತೆ

ಬಾಗಲಕೋಟೆ ಜಿಲ್ಲೆಯ ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಆಚಾರ- ವಿಚಾರಗಳನ್ನು ಮಾತುಗಳಲ್ಲಿ ವರ್ಣಿಸಲು ಆಗದು. ಶಿಲ್ಪಕಲಾ ವೈಭವ, ಕಲಾದಗಿಯ ದಾಳಿಂಬೆ, ಚಿಕ್ಕು ಹಣ್ಣುಗಳು, ಅಮೀನಗಡದ ಕರದಂಟು; ಮಹಾಕೂಟ ಹಾಗೂ ಬನಶಂಕರಿಯಲ್ಲಿ ‘ಅನ್ನಪೂರ್ಣೆ’ಯರು ಉಣಬಡಿಸುವ ಖಡಕ್‌ರೊಟ್ಟಿ, ಕೆನೆಮೊಸರು, ಶೇಂಗಾ ಚಟ್ನಿಯ ಸವಿ ಜಿಲ್ಲೆಯ ವಿಶೇಷಗಳು.

ಕನ್ನಡ ಸಾಹಿತ್ಯ, ರಂಗಭೂಮಿ, ಸಂಶೋಧನೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸಂಖ್ಯೆ ದೊಡ್ಡದು. ಬಾಗಲಕೋಟೆ ಎಂದಾಕ್ಷಣ ನೆನಪಾಗುವ ಕೆಲವು ಹೆಸರುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲೆಯಲ್ಲಿ ದೊರೆತ ಶಾಸನಗಳ ಸಾಹಿತ್ಯವನ್ನು ರಚನೆ ಮಾಡಿದವರಲ್ಲಿ ರವಿಕೀರ್ತಿ, ಅಚಲನ್, ವೈಜನಾಥರು ಪ್ರಮುಖರು. ವಚನ ಸಾಹಿತ್ಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಗೋರಕ್ಷ, ಶಂಕರ ದಾಸಿಮಯ್ಯನವರ ಹೆಸರು ಉಲ್ಲೇಖನೀಯ. ಕಪ್ಪೆ ಅರಭಟ್ಟನ ಮೂಲಕ ಆರಂಭಗೊಳ್ಳುವ ಈ ಜಿಲ್ಲೆಯ ಕಾವ್ಯ ಪರಂಪರೆ ದೊಡ್ಡದು. ‘ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ....’ ಎಂಬ ಕಪ್ಪೆ ಅರಭಟ್ಟನ ಈ ತ್ರಿಪದಿಯು ಕನ್ನಡ ಛಂದಸ್ಸಿನ ತಾಯಿಬೇರು ಎನ್ನಲಾಗಿದೆ.

ಮುಧೋಳದ ಜೈನ ಕುಟುಂಬದಲ್ಲಿ ಜನಿಸಿದ ರನ್ನ ಮಹಾಕವಿ ‘ಗದಾಯುದ್ಧ’ ಕಾವ್ಯದ ಮೂಲಕ ಕನ್ನಡದ ರತ್ನತ್ರಯರಲ್ಲಿ ಒಬ್ಬನೆಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಕವಿಚಕ್ರವರ್ತಿ ‘ರನ್ನ ನಮ್ಮವ’ ಎಂಬ ಅಭಿಮಾನ ಜಿಲ್ಲೆಯದು. ದಾಸ ಸಾಹಿತ್ಯ ಪರಂಪರೆಯಲ್ಲಿ ಕಾಖಂಡಕಿ ಮಹಿಪತಿ ದಾಸರು, ಪ್ರಸನ್ನ ವೆಂಕಟದಾಸರ ಹೆಸರು ಪ್ರಮುಖವಾದವು. ಜಾನಪದ ಸಾಹಿತ್ಯದಲ್ಲಿ ಗಾಯನ ಪ್ರಧಾನವಾದ ಸೋಬಾನ, ಹಂತಿಪದಗಳು, ಚೌಡಕಿ ಪದಗಳು, ಲಾವಣಿ, ಗೀಗೀ ಪದಗಳನ್ನು ಜಿಲ್ಲೆಯ ಕವಿಗಳು ರಚಿಸಿದ್ದಾರೆ.

ಪ್ರದರ್ಶನ ಕಲೆಗಳಲ್ಲಿ ಲೋಕಾಪುರದಲ್ಲಿ ಪಾರಿಜಾತ ಪ್ರಮುಖವಾದದು. ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಪ್ರಥಮ ಮಹಿಳಾ ಕಲಾವಿದೆ. ರಬಕವಿ, ಬನಹಟ್ಟಿ, ಮಹಾಲಿಂಗಪುರ, ಬೆಣ್ಣೂರ, ಬಾದಾಮಿ ಹಾಗೂ ಬೇಲೂರಗಳಲ್ಲಿ ಕರಡಿಮಜಲು ಪ್ರಸಿದ್ಧ. ಇದರೊಂದಿಗೆ ಹಲಗೆ ಮಜಲು ಕಂಡುಬರುತ್ತದೆ. ಜಾನಪದ ಸಾಹಿತ್ಯಕ್ಷೇತ್ರದಲ್ಲಿ ದುಡಿದವರಲ್ಲಿ ಡಾ.ಶ್ರೀರಾಮ ಇಟ್ಟಣ್ಣವರ,ಗಣಪತಿ ಬಾಪು ಖಾಡೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ, ಡಾ.ಮೃತ್ಯುಂಜಯ ಹೊರಕೇರಿ, ಡಾ.ಪ್ರಕಾಶ ಖಾಡೆ ಡಾ. ವೀರೇಶ ಬಡಿಗೇರ ಪ್ರಮುಖರು.

ಸತ್ಯಕಾಮ ಕಾವ್ಯನಾಮದಿಂದ ಪ್ರಖ್ಯಾತರಾದ ಅನಂತ ಕೃಷ್ಣಾಚಾರ್ಯ ಶಹಪೂರ, ಪಿ.ವಿ. ವಜ್ರಮಟ್ಟಿ, ದು.ನಿಂ.ಬೆಳಗಲಿ, ರಾವ್ ಬಹದ್ದೂರ, ಬ.ಗಿ.ಯಲ್ಲಟ್ಟಿ, ಈಶ್ವರ ಸಣಕಲ್ಲ, ಆಧುನಿಕ ಕನ್ನಡ ಕಾವ್ಯದಲ್ಲಿ ಆನಂದ ಝಂಜರವಾಡ, ಸತ್ಯಾನಂದ ಪಾತ್ರೋಟ, ಅಶೋಕ ನರೋಡೆ, ಮಲ್ಲಿಕಾ ಘಂಟಿ, ಕಥಾ ಪ್ರಕಾರದಲ್ಲಿ ಅಬ್ಬಾಸ್ ಮೇಲಿನಮನಿ, ಕಾದಂಬರಿಯಲ್ಲಿ ರೇಖಾ ಕಾಖಂಡಕಿ, ಡಾ.ಪ್ರಕಾಶ ಖಾಡೆ ಜಿಲ್ಲೆಗೆ ಕೀರ್ತಿ ತಂದವರು.

ಕನ್ನಡದ ಷೇಕ್ಸ್‌ಪಿಯರ್ ಎಂದೇ ಖ್ಯಾತರಾದ ಕಂದಗಲ್ ಹನುಮಂತರಾಯ, ದಿ. ಪಿ.ಬಿ. ಧುತ್ತರಗಿ, ಬಿ.ಆರ್. ಅರಿಷಣಗೋಡಿ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಸಂಶೋಧನಾ ಕ್ಷೇತ್ರದಲ್ಲಿ ಸಂಗಮೇಶ ಬಿರಾದಾರ, ಡಾ.ಬಿ.ಕೆ. ಹಿರೇಮಠ, ಜಾನಪದ ಸಂಶೋಧಕ ಡಾ.ಬಿ.ಎಸ್.ಗದ್ದಗಿಮಠ ಇದೇ ಜಿಲ್ಲೆಯವರು. ವಿವಿಧ ರಂಗಗಳಲ್ಲಿ ದುಡಿದು ಹೆಸರಾದ ಅನೇಕರು ಜಿಲ್ಲೆಯಲ್ಲಿದ್ದಾರೆ.

ಸಾಧಕರುದೇಶದ ಖ್ಯಾತ ನೇತ್ರ ತಜ್ಞ ಡಾ.ಎಂ.ಸಿ.ಮೋದಿ [ಡಾ. ಎಂ. ಸಿ. ಮೋದಿ ಯವರನ್ನು ಕಣ್ಣು ಕೊಡುವ ಅಣ್ಣ ಎಂದು ಸಹ ಕರೆಯುತ್ತಾರೆ ]ಬಾಗಲಕೋಟೆ ಜಿಲ್ಲೆಯ ಬೀಳಗಿಯವರು. ಸುಮಾರು ಆರು ದಶಕಗಳಲ್ಲಿ 7 ಲಕ್ಷ ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿದ ಸಾಧಕರು. ಮೋದಿ ಅವರಿಗೆ ಭಾರತ ಸರ್ಕಾರವು ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತದ ಪ್ರಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಗುರುನಾಥ ಬೇವೂರ ಹಾಗೂ ಭಾರತೀಯ ಸೈನ್ಯದ ಮಹಾದಂಡನಾಯಕರಾಗಿದ್ದ ಅವರ ಮಗ ಗೋಪಾಲ್ ಬೇವೂರ ಜಿಲ್ಲೆಯ ಬೇವೂರ ಗ್ರಾಮದವರು. ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ಇದೇ ಜಿಲ್ಲೆಯ ಮುರುಗಯ್ಯ ಜಂಗೀನ್ ಅವರದು. ಜಿಲ್ಲೆಯು ಸೈಕ್ಲಿಂಗ್ ಕಾಶಿ ಎಂದು ಗುರುತಿಸಿಕೊಂಡಿದೆ. ಜಿಲ್ಲೆಯ ಅನೇಕ ಸೈಕ್ಲಿಸ್ಟ್‌ಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.