ಬಸವಪ್ಪ ಶಾಸ್ತ್ರಿ

(ಬಸವಪ್ಪಶಾಸ್ತ್ರಿ ಇಂದ ಪುನರ್ನಿರ್ದೇಶಿತ)

"ಮೈಸೂರಿನ ಮಹಾರಾಜರಾದ ಹತ್ತನೆ ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಜಿ.ಸಿ.ಎಸ್.ಐ ಅವರ ಆಳ್ವಿಕೆಯ ಕಾಲದಲ್ಲಿ ಪ್ರಪ್ರಥಮವಾಗಿ ಈ ರಾಜ್ಯ ಗೀತೆಯನ್ನು ರಚಿಸಲಾಯಿತು. ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವಾ ಗೌರಿಯನ್ನು ಪ್ರಾರ್ಥಿಸುವ ಈ ರಾಜ್ಯಗೀತೆಯನ್ನು ರಚಿಸಿದವರು ಆಸ್ಥಾನ ಸಾಹಿತಿ ವಿದ್ವಾನ್ ಬಸವಪ್ಪ ಶಾಸ್ತ್ರಿ. ಕನ್ನಡ-ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಪ್ರಭುತ್ವ ಪಡೆದ ಪ್ರಕಾಂಡ ಪಂಡಿತರು. ಪ್ರತಿಭಾಸಂಪನ್ನರು. "ಅಭಿನವಕಾಳಿದಾಸ "ಎಂಬ ಬಿರುದು ಧರಿಸಿ ಖ್ಯಾತರಾದವರು. ಕನ್ನಡದ ಉಡುಗೆ ತೊಟ್ಟ ಸಂಸ್ಕೃತದ ಈ ಗೀತೆ ಮೈಸೂರಿನ ಪ್ರಜಾಕೋಟಿಯ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿತ್ತು."[]

ಬಸವಪ್ಪ ಶಾಸ್ತ್ರಿಯವರು ರಚಿಸಿದ ರಾಜ್ಯ ಗೀತೆ:-

"ಕಾಯೌ ಶೀಗೌರಿ ಕರುಣಾಲಹರೀ

ತೋಯಜಾಕ್ಷಿ ಶಂಕರೀಶ್ವರೀ ||ಪ||

ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ

ಸೀಮಾತಿಗ ಭೂಮಾಸದೆ ಕಾಮಿಕ ಫಲದೇ ||೧||

ಶುಂಭಾದಿಮದಾಂಬೋಧಿನಿ ಕುಂಭಜನಿಭೆ ದೇವೀ

ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ ||೨||

ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜ ಚಾಮ

ನಾಮಾಂಕಿತ ಭೂಮೀಂದ್ರ ಲಾಮನ ಮುದದೇ ||೩||"

ಬಸವಪ್ಪ ಶಾಸ್ತ್ರಿಯವರು ೨ನೇ ಮೇ ೧೮೪೩ರಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು 'ನಾರಸಂದ್ರ' ಗ್ರಾಮದಲ್ಲಿ ಜನಿಸಿದರು. ಇವರು ನಾರಸಂದ್ರದ ರುದ್ರಾಕ್ಷಿಮಠದ ಮುರುಡು ಬಸವಸ್ವಾಮಿಗಳ ಮೊಮ್ಮಕ್ಕಳು, ಮುಮ್ಮಡಿ ಕೃಷ್ಣರಾಜ ಒಡೆಯರ ಸಮ್ಮುಖ ಪುರೋಹಿತರಾದ ಮಹಾದೇವಶಾಸ್ತ್ರಿ ಮತ್ತು ಬಸವಮ್ಮನವರ ಏಕಮಾತ್ರ ಪುತ್ರರು. ಜಗದ್ಗುರು ರೇಣುಕಾಚಾರ್ಯ ಸಂಪ್ರದಾಯಕ್ಕೆ ಸೇರಿದ ವೀರಮಾಹೇಶ್ವರ ವಂಶಸ್ಥರು. ಹುಟ್ಟಿದ್ದು ಶುಭಕೃತುನಾಮ ಸಂವತ್ಸರದ ವೈಶಾಖ ಶುದ್ಧ ಬಿದಿಗೆಯಂದು (ಕ್ರಿ.ಶ. 1843). ಚಿಕ್ಕಂದಿನಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡ ಇವರ ಮೇಲೆ ಅರಮನೆಯ ರಾಜಕವಿಗಳಾದ ಅಳಿಯ ಲಿಂಗರಾಜರ ಕೃಪಾದೃಷ್ಟಿ ಬಿತ್ತು. ಅನಂತರ ಅರಮನೆಯ ಉದಾರಾಶ್ರಯದಲ್ಲಿ ಬೆಳೆದು ವಿದ್ಯಾವಂತರಾದರು. ಬಸವಪ್ಪ ಶಾಸ್ತ್ರಿಯವರ ತಂದೆಯ ಹೆಸರು ಮಹಾದೇವಶಾಸ್ತ್ರಿ, ಇವರು ಪಂಡಿತರಾಗಿದ್ದರು ಮತ್ತು ಇವರ ತಾಯಿಯವರ ಹೆಸರು ಬಸವಾಂಬಿಕೆ.

ವಿದ್ಯಾಭ್ಯಾಸ

ಬದಲಾಯಿಸಿ

ಬಸವಪ್ಪ ಶಾಸ್ತ್ರಿಗಳು ಆಸ್ಥಾನ ಪಂಡಿತರಾಗಿದ್ದ ಗರಳಪುರಿ ಶಾಸ್ತ್ರಿಗಳ ಬಳಿ ಅಭ್ಯಾಸ ಮಾಡಿ ಹಳೆಗನ್ನಡದಲ್ಲೂ , ಸಂಸ್ಕೃತ ಸಾಹಿತ್ಯದಲ್ಲೂ , ಸಂಗೀತ ಮತ್ತು ವೇದಾಂತ ದರ್ಶನದಲ್ಲೂ ಅಪಾರ ಪಾಂಡಿತ್ಯ ಪಡೆದರು.

ವೃತ್ತಿ ಮತ್ತು ಚಟುವಟಿಕೆ

ಬದಲಾಯಿಸಿ

ಇವರು ೧೮ನೇ ವಯಸ್ಸಿನಲ್ಲಿ ' ಕೃಷ್ಣರಾಜಾಭ್ಯುದಯ' ಎಂಬ ಕಾವ್ಯವನ್ನು ರಚಿಸಿ ಪ್ರಖ್ಯಾತರಾದರು. ಸಂಗೀತದಲ್ಲೂ ಉತ್ತಮ ಜ್ಞಾನವನ್ನು ಗಳಿಸಿಕೊಂಡ ಇವರು ಕಾಳಿದಾಸನ ಪ್ರತಿಭೆಗೆ ಕುಂದಿಲ್ಲದಂತೆ ಸಂಸ್ಕೃತ ಮೂಲದ ಕಾಳಿದಾಸನ ನಾಟಕ 'ಶಾಕುಂತಲ'ವನ್ನು ೧೮೮೩ರಲ್ಲಿ ಮೂಲದ ಸೌಂದರ್ಯ , ಲಾಲಿತ್ಯ , ಓಜಸ್ಸುಗಳಿಗೆ ಚ್ಯುತಿ ಬಾರದಂತೆ ಕನ್ನಡಕ್ಕೆ ಭಾಷಾಂತರಿಸಿದರು. 'ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಇವರ ಅನೇಕ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಿತು. ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಬಸವಪ್ಪ ಶಾಸ್ತ್ರಿಗಳ ಹೆಸರನ್ನು ಚಿರಸ್ಥಾಯಿಯಾಗಿಸಿತು. ಇವರ ವಿದ್ವತ್ ಪ್ರತಿಭೆಗೆ ಅಳಿಯ ಲಿಂಗರಾಜು ಅರಸರ ಪ್ರೋತ್ಸಾಹ ಅಪಾರವಾಗಿತ್ತು.

ಕೃಷ್ಣರಾಜಾಭ್ಯುದಯ ಎಂಬ ಕೃತಿಯನ್ನು ಚಂಪೂವಿನಲ್ಲಿ ರಚಿಸಿ ರಾಜಮನ್ನಣೆಗೆ ಪಾತ್ರರಾಗಿ ಆಸ್ಥಾನಕವಿ ಎನಿಸಿದರು. ಅನಂತರ ದಿವಾನ್ ರಂಗಾಚಾರ್ಯರ ಕಾರುಣ್ಯದಿಂದ ಬಾಲಕರಾಗಿದ್ದ ಚಾಮರಾಜ ಒಡೆಯರಿಗೆ ವಿದ್ಯಾಗುರುಗಳಾದರು. ಅಲ್ಲಿಂದಾಚೆಗೆ ಶಾಸ್ತ್ರಿಗಳ ಅಭ್ಯುದಯದ ಬಾಗಿಲು ತೆರೆಯಿತು. ಮೈಸೂರು ಅರಮನೆಯಲ್ಲಿ ರಾಜಗುರುಗಳು, ಆಸ್ಥಾನ ವಿದ್ವಾಂಸರು, ರಾಜಪುರೋಹಿತರು ಆದರು. ಅಳಿಯ ಲಿಂಗರಾಜರಿಗೂ ದಿವಾನ್ ರಂಗಾಚಾರ್ಯರಿಗೂ ನಾಟಕದ ಗೀಳು ಬಹಳವಿದ್ದುದರಿಂದ, 1882ರಲ್ಲಿ ಸ್ಥಾಪಿತವಾದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಕಂಪನಿಗೆ ಹಲವು ನಾಟಕಗಳನ್ನು ಭಾಷಾಂತರಿಸಿ ಕೊಟ್ಟು ಕನ್ನಡ ರಂಗಭೂಮಿಗೂ ಅಮೂಲ್ಯ ಸೇವೆ ಸಲ್ಲಿಸಿದರು. ಕನ್ನಡದಲ್ಲಿ ಅಭಿನಯ ನಾಟಕಗಳೇ ಇಲ್ಲದಿದ್ದಾಗ ಶಾಸ್ತ್ರಿಗಳು ಕನ್ನಡಿಸಿದ ರತ್ನಾವಳಿ ವಿಕ್ರಮೋರ್ವಶೀಯ, ಉತ್ತರರಾಮಚರಿತ ಮತ್ತು ಚಂಡಕೌಶಿಕ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡು ಜನರ ಮನ್ನಣೆ ಪಡೆದವು. ಕೇವಲ ಸಂಸ್ಕೃತ ನಾಟಕಗಳನ್ನಲ್ಲದೆ ಇಂಗ್ಲಿಷ್‍ನಿಂದ ಷೇಕ್ಸ್‍ಪಿಯರ್‍ನ ಒಥೆಲೊ ನಾಟಕವನ್ನು ಶೂರಸೇನ ಚರಿತ್ರೆ ಎಂಬ ಹೆಸರಿನಲ್ಲಿ ಕನ್ನಡಿಸಿದ ಕೀರ್ತಿಯೂ ಇವರದೆ.

ಕೃತಿಗಳು

ಬದಲಾಯಿಸಿ

'ಶಾಕುಂತಲ , ವಿಕ್ರಮೋರ್ವಶೀಯ' , 'ರತ್ನಾವಳಿ' ಭವಭೂತಿಯ 'ಉತ್ತರ ರಾಮಚರಿತೆ' , 'ಮಾಲತೀ ಮಾಧವ' ಶ್ರೀ ಹರ್ಷನ 'ರತ್ನಾವಳಿ' ಸಂಸ್ಕ್ರತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷ್ ಭಾಷಾ ಜ್ಞಾನ ಇಲ್ಲದಿದ್ದರೂ ಶೇಕ್ಸ್ ಪಿಯರ್ ಬರೆದಿರುವ ಓಥೆಲೊ ನಾಟಕವನ್ನು ಸಿ.ಸುಬ್ಬರಾವ್ ಎಂಬುವರಿಂದ ಓದಿಸಿ ತಿಳಿದುಕೊಂಡು ಕನ್ನಡಕ್ಕೆ ಭಾಷಾಂತರಿಸಿ 'ಶೂರಸೇನ ಚರಿತ್ರೆ' ಎಂದು ನಾಮಕರಣ ಮಾಡಿದರು. 'ಶಿವಾಷ್ಟಕಮ್' , 'ತ್ರಿಷಷ್ಠಿ ಪುರಾತನಸ್ತವ' , 'ಶಾರದಾ ದಂಡಕಮ್' , 'ಬಿಲ್ವವೃಕ್ಷ' 'ಪೂಜಾವಿಧಿ' , 'ಆರ್ಯ ಶತಕಮ್' , 'ಶಿವಭಕ್ತಿ ಸುಧಾತರಂಗಿಣಿ' , ಸಂಸ್ಕೃತ ಕೃತಿಗಳನ್ನೂ , 'ದಮಯಂತಿ ಸ್ವಯಂವರ' , 'ವಿಕ್ರಮೋರ್ವಶೀಯ' , 'ನೀತಿಸಾರ ಸಂಗ್ರಹ' , 'ಕೃಷ್ಣರಾಜಾಭ್ಯುದಯ' , 'ಸಾವಿತ್ರೀ ಚರಿತ್ರೆ' ಕನ್ನಡ ಕೃತಿಗಳನ್ನು ಸ್ವತಂತ್ರವಾಗಿ ರಚಿಸಿದ್ದಾರೆ. ಕ್ಷೇಮೇಂದ್ರನ 'ಚಂಡ ಕೌಶಿಕ' ನಾಟಕದ ಭಾಷಾಂತರವನ್ನು ಆರಂಭಿಸಿದ್ದರಾದರೂ ಅದನ್ನು ಪೂರ್ಣಗೊಳಿಸುವುದರೊಳಗಾಗಿ ನಿಧನರಾದ ಪ್ರಯುಕ್ತ ಅಪೂರ್ಣವಾಗಿದ್ದ ಆ ಕೃತಿಯನ್ನು ದೇವಶಿಖಾಮಣಿ ಅಳಸಿಂಗಾಚಾರ್ಯರು ಪೂರ್ಣಗೊಳಿಸಿದರು.

ಭಾಷಾಂತರಗಳು

ಬದಲಾಯಿಸಿ

ಕಾಳಿದಾಸನ ಅಭಿಜ್ಞಾನಶಾಕುಂತಲ, ವಿಕ್ರಮೋರ್ವಶೀಯ, ಭವಭೂತಿಯ ಉತ್ತರರಾಮಚರಿತ್ರೆ, ಮಾಲತೀ ಮಾಧವ; ಶ್ರೀ ಹರ್ಷನ ರತ್ನಾವಳಿ; ಕ್ಷೇಮೀಶ್ವರನ ಚಂಡಕೌಶಿಕ, ಭರ್ತೃಹರಿಯ ನೀತಿಶತಕ, ಶೃಂಗಾರಶತಕ, ವೈರಾಗ್ಯ ಶತಕ; ಬಾಣನ ಹರ್ಷಚರಿತ; ಷೇಕ್ಸ್‍ಪಿಯರನ ಒಥೆಲೊ ನಾಟಕದ ಕನ್ನಡ ರೂಪವಾದ ಶೂರಸೇನ ಚರಿತ್ರೆ.

ಸ್ವತಂತ್ರ ಕೃತಿಗಳು-ಕನ್ನಡ

ಬದಲಾಯಿಸಿ

ಕೃಷ್ಣರಾಜಾಭ್ಯುದಯ (ಕೃತಿ ಉಪಲಬ್ಧವಿಲ್ಲ); ಸಾವಿತ್ರೀ ಚರಿತ್ರೆ; ನೀತಿಸಾರಸಂಗ್ರಹ; ಶ್ರೀ ರೇಣುಕ ವಿಜಯ (ಅಪೂರ್ಣ); ದಮಯಂತೀ ಸ್ವಯಂವರ.

ಸಂಸ್ಕೃತ

ಬದಲಾಯಿಸಿ

ಅನುಪಲಬ್ಧ ಕೃತಿಗಳು: ಬಿಲ್ವವೃಕ್ಷ ಪೂಜಾವಿಧಿ, ಶಂಕರೀ ನಕ್ಷತ್ರ ಮಾಲಾ, ಬಸವೇಶಾಷ್ಟಕ, ಅಷ್ಟಮೂರ್ತಿ ತನಯಾಷ್ಟಕ, ದಕ್ಷಿಣಾಮೂತ್ರ್ಯಷ್ಟಕ, ಶಂಕರ ಶತಕ.

ಉಪಲಬ್ಧಕೃತಿಗಳು: ಶಿವಾಷ್ಟಕಮ್, ಶಿವಭಕ್ತಿ ಸುಧಾತರಂಗಿಣೀ, ತ್ರಿಷಷ್ಠಿ ಪುರಾತನಸ್ತವ, ಅಂಬಾಷೋಡಶ ಮಂಜರೀ ಆರ್ಯಾಶತಕಮ್, ಶಾರದಾ ದಂಡಕಮ್ ಇವರ ಭಾಷಾಂತರ ಕೃತಿಗಳಲ್ಲಿ ಅಮೂಲ್ಯವಾದುದು ಶಾಕುಂತಲ. ಅಚ್ಚುಕಟ್ಟಾದ ಭಾಷಾಂತರ. ಇದುವರೆವಿಗೂ ಭಾಷಾಂತರವಾಗಿರುವ ಪ್ರಪಂಚದ ಎಲ್ಲ ಭಾಷೆಗಳ ಭಾಷಾಂತರಕ್ಕಿಂತ ಕನ್ನಡ ಶಾಕುಂತಲ, ಉತ್ತಮೋತ್ತಮವೆಂದು ಪಂಡಿತರಿಂದ ಪರಿಗಣಿತವಾಗಿದೆ. ಈ ಕೃತಿರತ್ನವನ್ನು ಮೆಚ್ಚಿದ ದಿವಾನ್ ರಂಗಾಚಾರ್ಯರು ಶಾಸ್ತ್ರಿಗಳಿಗೆ ಅಭಿನವ ಕಾಳಿದಾಸನೆಂಬ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಮತ್ತು ಪುರಸ್ಕಾರ

ಬದಲಾಯಿಸಿ

ದಿವಾನ್ ರಂಗಾಚಾರ್ಲುರಂತಹ ಮೇಧಾವಿಗಳಿಂದಲೂ ಮಹಾನ್ ಪಂಡಿತೋತ್ತಮರಿಂದಲೂ, ಅಪಾರ ರಸಿಕ ಸಮೂಹದಿಂದಲೂ ಕೂಡಿದ್ದ ರಾಜಸಭೆಯಲ್ಲಿ 'ಅಭಿನವ ಕಾಳಿದಾಸ' ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಮ್ಮೆ ವಾಯುವಿಹಾರಾರ್ಥವಾಗಿ ಕುದುರೆ ಗಾಡಿಯಲಿ ಕುಳಿತು ಹೋಗುತ್ತಿರುವಾಗ ೧೮೯೧ರ ಫೆಬ್ರವರಿ ತಿಂಗಳಲ್ಲಿ ತಮ್ಮ ೪೮ನೇ ವಯಸ್ಸಿನಲ್ಲಿ ಅಪಘಾತಕ್ಕೊಳಗಾಗಿ ಈ ಪಾಂಡಿತ್ಯಪೂರ್ಣ ಪ್ರತಿಭೆ ಇನ್ನಿಲ್ಲವಾಯಿತು.


"ಭಾಷಾಂತರ ರೂಪಾಂತರ ಕಾರ್ಯಗಳು , ಉತ್ತಮ ನಾಟಕ ರಚನೆ , ಶ್ರೇಷ್ಠವಾದ ರಂಗಭೂಮಿ ಪರಂಪರೆಗಳು ಬೆಳೆಯಲು ಬೇಕಾದ ಕೃಷಿ ನಡೆಸಿ , ಅತ್ಯವಶ್ಯವಾಗಿದ್ದ ಸಿದ್ದತೆ ಮಾಡಿದವರೆನ್ನಬೇಕು , ಈ ಭಾಷಾಂತರ ಯುಗದಲ್ಲಿ ರೂಪ ಕಳೆದ , ಸದಭಿರುಚಿ ತುಂಬಿದ ಒಂದು ಅಪರೂಪದ ಕೃತಿ ಬಸವಪ್ಪ ಶಾಸ್ತ್ರಿಗಳ 'ಕನ್ನಡ ಶಾಕುಂತಲ' ಅಲ್ಲಿವರೆಗೆ ನಡೆದ ಭಾಷಾಂತರ ಕಾರ್ಯದಲ್ಲಿ ಸಂಪೂರ್ಣಯಶಸ್ಸು ದೊರೆತದ್ದು ಇದೊಂದು ಕೃತಿಗೇ , ಇವರೆ ಮಾಡಿದ ಇನ್ನುಳಿದ ಹಲವು ಭಾಷಾಂತರ ರೂಪಾಂತರಗಳನ್ನು ಗಮನಿಸಿ ಹೇಳುವುದಾದರೂ , ಎಲ್ಲ ಕೃತಿಗಳ ಪೈಕಿ ಸಂಪೂರ್ಣ ಯಶಸ್ಸು ದೊರೆಕಿಸಿಕೊಂಡ ಕೃತಿಯೂ ಇದೊಂದೆ. ಇವರು ಸಂಸ್ಕೃತ ನಾಟಕಗಳಂತೆ ಇಂಗ್ಲಿಷ್ ನಾಟಕಗಳಿಗೂ ಕನ್ನಡದ ಬಣ್ಣ ಹಚ್ಚಿ ಉಡುಪು ತೊಡಿಸುವ ಪ್ರಯತ್ನ ಮಾಡಿದರು. ಸಂಸ್ಕೃತ ನಾಟಕಕಾರರಲ್ಲಿ ಕಾಳಿದಾಸನ ಕಡೆ ಅವರ ದೃಷ್ಟಿ ಹರಿದಂತೆ ಇಂಗ್ಲಿಷ್ ನಾಟಕಕಾರರಲ್ಲಿ ಷೇಕ್ಸ್ ಪಿಯರ್ ಕಡೆ ಅವರ ಗಮನ ಸುಳಿದುದು ಆಶ್ಚರ್ಯವೇನಲ್ಲ "-ಹೆಚ್.ಕೆ.ರಾಮಚಂದ್ರಶಾಸ್ತ್ರಿ.


ಬಸವಪ್ಪ ಶಾಸ್ತ್ರಿಗಳು ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಜಿ.ಸಿ.ಎಸ್.ಐ ಅವರ ಆಳ್ವಿಕೆಯಲ್ಲಿ ರಚಿಸಿದ ರಾಜ್ಯಗೀತೆಯನ್ನು ಇಂದಿಗು ಸಹ ಅರಮನೆಯ ಸಂಗೀತ ವಿದ್ವಾಂಸರು ಹಾಡುತ್ತಾರೆ. ಈ ಹಾಡಿನಲ್ಲಿ ಮೈಸೂರು ಕುಲದೇವತೆ ಚಾಮುಂಡೇಶ್ವರಿ ಅಥವ ಗೌರಿಯನ್ನು ಸ್ತುತಿಸುವ ರಾಜ್ಯಗೀತೆಯನ್ನು ಇಂದಿಗು ಪರಿಪಾಠವನ್ನಾಗಿ ಇಟ್ಟುಕೊಂಡಿದ್ದಾರೆ. ಅಂದಿನಂತೆಯೆ ಇಂದಿಗು ಆ ಹಾಡನ್ನು ಹಾಡುತ್ತ ಬಸವಪ್ಪ ಶಾಸ್ತ್ರಿಗಳ ಆ ರಾಜ್ಯಗೀತೆಯನ್ನು ಮೈಸೂರಿನ ಜನರು ಇಂದಿಗು ನೆನಪಿಸಿಕೊಳ್ಳುತ್ತಾರೆ. ಕನ್ನಡ ನಾಡಿನ ಸಂಸ್ಕೃತಿ , ಭಾಷೆ ಇರುವ ವರೆಗು ಬಸವಪ್ಪ ಶಾಸ್ತ್ರಿಗಳನ್ನು ಜನ ಮರೆಯುವುದಿಲ್ಲ. ಈ ರೀತಿ ಬಸವಪ್ಪ ಶಾಸ್ತ್ರಿಗಳು ಕನ್ನಡದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿ ಪ್ರಸಿಧ್ಧರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ