ಬದ್ರೀನಾಥ್ ಕಿ ದುಲ್ಹನಿಯಾ (ಚಲನಚಿತ್ರ)

ಹಿಂದಿ ಚಲನಚಿತ್ರ

ಬದ್ರೀನಾಥ್ ಕಿ ದುಲ್ಹನಿಯಾ (ಅನುವಾದ: ಬದ್ರೀನಾಥ್‍ನ ವಧು) ೨೦೧೭ರ ಒಂದು ಹಿಂದಿ ಪ್ರಣಯ ಹಾಸ್ಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಶಶಾಂಕ್ ಖೆಯ್ತಾನ್ ಬರೆದು ನಿರ್ದೇಶಿಸಿದ್ದಾರೆ. ಕರನ್ ಜೋಹರ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.[] ಇದರಲ್ಲಿ ವರುಣ್ ಧವನ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಕಥೆಯು ಒಬ್ಬ ಸ್ವತಂತ್ರ ಗಗನಸಖಿಯಾಗಲು ಬಯಸುವ ಗ್ರಾಮೀಣ ಭಾರತದ ಹುಡುಗಿಯನ್ನು ಅನುಸರಿಸುತ್ತದೆ. ಇವಳು ತನ್ನ ಅತ್ಯಭಿಮಾನಿ ನಿಶ್ಚಿತ ವರನ ಪಿತೃಪ್ರಧಾನ ನಿರೀಕ್ಷೆಗಳನ್ನು ಅನುಸರಿಸಲು ನಿರಾಕರಿಸುತ್ತಾಳೆ. ಚಿತ್ರದಲ್ಲಿ ರಿತುರಾಜ್ ಸಿಂಗ್, ಯಶ್ ಸಿನ್ಹಾ, ಶ್ವೇತಾ ಬಾಸು ಪ್ರಸಾದ್, ಗೌರವ್ ಪಾಂಡೆ, ಅಪಾರ್‌ಶಕ್ತಿ ಖುರಾನಾ, ಸಾಹಿಲ್ ವೆಯ್ದ್ ಮತ್ತು ಸ್ವಾನಂದ್ ಕಿರ್ಕಿರೆ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಬದ್ರೀನಾಥ್ ಕಿ ದುಲ್ಹನಿಯಾ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಶಶಾಂಕ್ ಖೆಯ್ತಾನ್
ನಿರ್ಮಾಪಕಹೀರೂ ಯಶ್ ಜೋಹರ್
ಕರನ್ ಜೋಹರ್
ಅಪೂರ್ವ ಮೆಹ್ತಾ
ಲೇಖಕಶಶಾಂಕ್ ಖೆಯ್ತಾನ್
ಪಾತ್ರವರ್ಗವರುಣ್ ಧವನ್
ಆಲಿಯಾ ಭಟ್
ಸಂಗೀತ
  • ಹಿನ್ನೆಲೆ ಸಂಗೀತ:
  • ಜಾನ್ ಸ್ಟೂವರ್ಟ್ ಎಡೂರಿ
  • ಹಾಡುಗಳು:
  • ಅಖಿಲ್ ಸಚ್‍ದೇವ
  • ತನಿಷ್ಕ್ ಬಾಗ್ಚಿ
  • ಅಮಾಲ್ ಮಲಿಕ್
ಛಾಯಾಗ್ರಹಣನೇಹಾ ಪಾರ್ತಿ ಮಟಿಯಾನಿ
ಸಂಕಲನಮಾನನ್ ಸಾಗರ್
ಸ್ಟುಡಿಯೋಧರ್ಮಾ ಪ್ರೊಡಕ್ಷನ್ಸ್
ವಿತರಕರುಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್
ಬಿಡುಗಡೆಯಾಗಿದ್ದು
  • 10 ಮಾರ್ಚ್ 2017 (2017-03-10) (India)
ಅವಧಿ139 ನಿಮಿಷಗಳು[]
ದೇಶಭಾರತ
ಭಾಷೆಹಿಂದಿ
ಬಂಡವಾಳ39 ಕೋಟಿ[]
ಬಾಕ್ಸ್ ಆಫೀಸ್೨೦೬ ಕೋಟಿ[]

ಇದು ದುಲ್ಹನಿಯಾ ಚಿತ್ರಸಂಗ್ರಹದಲ್ಲಿನ ಎರಡನೇ ಕಂತಾಗಿದೆ (ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಮೊದಲನೇ ಕಂತು). ಪ್ರಧಾನ ಛಾಯಾಗ್ರಹಣವು ಮೇ ೨೦೧೬ರಲ್ಲಿ ಆರಂಭವಾಯಿತು. ಚಿತ್ರೀಕರಣವು ಪನ್ವೇಲ್, ಸಿಂಗಾಪುರ ಮತ್ತು ಕೋಟಾದಲ್ಲಿ ನಡೆಯಿತು. ನಿರ್ಮಾಣ ಬಂಡವಾಳವು ೩೭೦ ದಶಲಕ್ಷದಷ್ಟಿತ್ತು; 120 ದಶಲಕ್ಷವನ್ನು ಚಿತ್ರದ ಪ್ರಚಾರ, ಮುದ್ರಣ ಮತ್ತು ಜಾಹೀರಾತು ವೆಚ್ಚಗಳಿಗೆ ಖರ್ಚು ಮಾಡಲಾಯಿತು. ಚಿತ್ರದ ಹಾಡುಗಳಿಗೆ ಗೊತ್ತುಮಾಡಿಕೊಂಡ ಗಾಯಕರ ಪೈಕಿ ಅರ್ಜಿತ್ ಸಿಂಗ್ ಇದ್ದರು.

ಬದ್ರೀನಾಥ್ ಕಿ ದುಲ್ಹನಿಯಾ ಭಾರತದ ಚಿತ್ರಮಂದಿರಗಳಲ್ಲಿ ೧೦ ಮಾರ್ಚ್ ೨೦೧೭ರಂದು ಬಿಡುಗಡೆಯಾಯಿತು.[] ಈ ಚಿತ್ರವು ಬಾಕ್ಸ್ ಆಫ಼ಿಸ್‌ನಲ್ಲಿ ೧.೯೦ ಶತಕೋಟಿಗಿಂತ ಹೆಚ್ಚು ಹಣಗಳಿಸಿ ಆರ್ಥಿಕ ಯಶಸ್ಸೆನಿಸಿಕೊಂಡಿತು.[] ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ,[] ಇದು ಅತ್ಯುತ್ತಮ ಚಲನಚಿತ್ರ, ಖೆಯ್ತಾನ್‍ರಿಗೆ ಅತ್ಯುತ್ತಮ ನಿರ್ದೇಶಕ, ಧವನ್‍ರಿಗೆ ಅತ್ಯುತ್ತಮ ನಟ ಮತ್ತು ಭಟ್‍ರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಎಂಟು ವರ್ಗಗಳಲ್ಲಿ ನಾಮನಿರ್ದೇಶಿತವಾಯಿತು; ಇದು ಸಿಂಗ್‍ರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು.

ಕಥಾವಸ್ತು

ಬದಲಾಯಿಸಿ

ಬದ್ರೀನಾಥ್ "ಬದ್ರಿ" ಬನ್ಸಲ್ (ವರುಣ್ ಧವನ್) ಝ್ಞಾಸಿಯ ಒಂದು ಶ್ರೀಮಂತ ಕುಟುಂಬದಲ್ಲಿ ಕಿರಿಯ ಮಗನಾಗಿರುತ್ತಾನೆ. ಹಿನ್ನೋಟದ ನಿರೂಪಣೆಯಲ್ಲಿ, ಬದ್ರಿಯ ಅಣ್ಣ ಅಲೋಕ್‍ನಾಥ್ "ಅಲೋಕ್" ಬನ್ಸಲ್ (ಯಶ್ ಸಿನ್ಹಾ) ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದು ತನ್ನ ತಂದೆ ಒಪ್ಪದ ಕಾರಣದಿಂದ ಅವಳಿಗಾಗಿ ತನ್ನ ಕುಟುಂಬವನ್ನು ಬಿಡಲು ಹೊರಟಿದ್ದನು, ಆದರೆ ಅವರ ತಂದೆ ಅಂಬರ್‌ನಾಥ್ "ಅಂಬರ್" ಬನ್ಸಲ್‍ನ (ರಿತುರಾಜ್ ಸಿಂಗ್) ಮೊದಲ ಹೃದಯಾಘಾತದ ನಂತರ ಹಾಗೆ ಮಾಡದಂತೆ ನಿರ್ಧರಿಸಿದನು ಎಂದು ತೋರಿಸಲಾಗುತ್ತದೆ. ಈಗ ಅಲೋಕ್ ನಿಶ್ಚಿತ ವಿವಾಹದ ಮೂಲಕ ಉರ್ಮಿಳಾ ಶುಕ್ಲಾಳನ್ನು (ಶ್ವೇತಾ ಬಾಸು ಪ್ರಸಾದ್) ವಿವಾಹವಾಗಿರುತ್ತಾನೆ. ಅವಳು ಸ್ವತಃ ಅಲೋಕ್‍ಗಿಂತ ಬಹಳ ಜಾಣೆ ಮತ್ತು ವೃತ್ತಿಪರವಾಗಿ ಹೆಚ್ಚು ತರಬೇತಿಪಡೆದಿದ್ದರೂ ಅವಳಿಗೆ ಕೆಲಸಮಾಡಲು ಅನುಮತಿ ಇರುವುದಿಲ್ಲ. ತನ್ನ ಪ್ರೀತಿಯನ್ನು ಬಿಟ್ಟು ವಿವಾಹವಾಗಲು ಒತ್ತಾಯಕ್ಕೊಳಗಾಗಿದ್ದಕ್ಕಾಗಿ ಅಲೋಕ್ ಕೂಡ ಖಿನ್ನನಾಗಿರುತ್ತಾನೆ. ಹಾಗಾಗಿ ಅವನು ಬಹಳ ಸಮಯ ಕುಡಿಯುವುದರಲ್ಲಿ ಕಳೆಯುತ್ತಿರುತ್ತಾನೆ. ಬದ್ರಿ ತನಗೂ ಅದೇ ಗತಿ ಆಗುವುದೆಂದು ಹೆದರುತ್ತಾನೆ. ಹಾಗಾಗಿ ಅವಳ ತಂದೆ ಮಯಾಂಕ್ (ಸ್ವಾನಂದ್ ಕಿರ್ಕಿರೆ) ನೋಡಿಕೊಳ್ಳುತ್ತಿದ್ದನೆಂದು ನಂಬಲಾದ ಒಂದು ವಿವಾಹದಲ್ಲಿ ಅವನು ಸುಂದರ ಹಾಗೂ ಸುಶಿಕ್ಷಿತ ವೈದೇಹಿ ತ್ರಿವೇದಿಯನ್ನು (ಆಲಿಯಾ ಭಟ್) ನೋಡಿದಾಗ ಅವನು ಅವಳ ಅಗಾಧ ಸೌಂದರ್ಯ ಮತ್ತು ರೂಪಕ್ಕೆ ಶರಣಾಗುತ್ತಾನೆ. ಅಂತಿಮವಾಗಿ ಅವಳು ಅವನ ಮನವನ್ನೆಲ್ಲ ಆವರಿಸುತ್ತಾಳೆ ಮತ್ತು ಅಂಬರ್‌ನ ಒಪ್ಪಿಗೆಯೊಂದಿಗೆ ಅವಳನ್ನು ಮದುವೆಯಾಗುವುದನ್ನು ತನ್ನ ಗುರಿ ಮಾಡಿಕೊಳ್ಳುತ್ತಾನೆ.

ವೈದೇಹಿ ಜಾಣ ಯುವತಿಯಾಗಿದ್ದು ಬದ್ರಿಗಿಂತ ಹೆಚ್ಚು ಶಿಕ್ಷಿತಳಾಗಿರುತ್ತಾಳೆ. ಅವಳು ತನ್ನ ಪದವಿ ಶಿಕ್ಷಣವನ್ನು ಮುಗಿಸಿ ವಿಮಾನ ಪರಿಚಾರಕಿಯಾಗಲು ರಹಸ್ಯವಾಗಿ ತರಬೇತಿ ಪಡೆಯುತ್ತಿರುತ್ತಾಳೆ. ಬದ್ರಿ ಕೇವಲ ಹತ್ತನೆ ತರಗತಿಯನ್ನು ತೇರ್ಗಡೆಯಾಗಿರುತ್ತಾನೆ. ಆರಂಭದಲ್ಲಿ ಅವಳು ಮದುವೆಯಾಗುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ ಮತ್ತು ಅವನ ಮದುವೆ ಪ್ರಸ್ತಾಪದಿಂದ ಅಸಂತೋಷಗೊಳ್ಳುತ್ತಾಳೆ. ಆದರೆ ಬದ್ರಿ ವೈದೇಹಿಯ ಅಕ್ಕ ಕೃತಿಕಾ‍ಗೆ (ಸುಖ್‍ಮಣಿ ಲಾಂಬಾ) ಭೂಷಣ್ ಮಿಶ್ರಾನಂಥ (ಅಪಾರ್‌ಶಕ್ತಿ ಖುರಾನಾ) ಗಂಡನನ್ನು ಹುಡುಕಲು ನೆರವಾದಾಗ ಮತ್ತು ಭೂಷಣ್‌ನ ತಂದೆ ಜಿತೇಂದ್ರ ಮಿಶ್ರಾನೊಂದಿಗಿನ (ರಾಜೇಂದ್ರ ಸೇಠಿ) ವರದಕ್ಷಿಣೆ ಬಿಕ್ಕಟ್ಟನ್ನೂ ಪರಿಹರಿಸಿದಾಗ, ವೈದೇಹಿ ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಅವರ ಮದುವೆಯ ದಿನದಂದು, ವೈದೇಹಿ ಬರುವುದಿಲ್ಲ. ಬದ್ರಿಯ ಹೃದಯ ಒಡೆಯುತ್ತದೆ ಮತ್ತು ಅಂಬರ್ ಬಹಳ ಸಿಟ್ಟಾಗುತ್ತಾನೆ. ಅವಳಿಗೆ ಶಿಕ್ಷೆ ನೀಡಲು ವೈದೇಹಿಯನ್ನು ಪತ್ತೆಹಚ್ಚಿ ವಾಪಸು ಕರೆದುಕೊಂಡು ಬರುವಂತೆ ಅಂಬರ್ ಬದ್ರಿಗೆ ಆದೇಶಿಸುತ್ತಾನೆ. ಅಂಬರ್‌ನ ಮಾತುಗಳಿಂದ ಹೆದರಿಯೂ ವೈದೇಹಿಯನ್ನು ಹುಡುಕಲು ಬದ್ರಿ ಮುಂಬೈ‍ಗೆ ಹೋಗುತ್ತಾನೆ. ಅವಳು ವಿಮಾನ ಪರಿಚಾರಕಿ ತರಬೇತಿ ಕಾರ್ಯಕ್ರಮಕ್ಕಾಗಿ ಆಗಲೇ ಸಿಂಗಾಪುರಕ್ಕೆ ಹೋಗಿದ್ದಾಳೆ ಎಂದು ಅಲ್ಲಿ ಅವನಿಗೆ ಗೊತ್ತಾಗುತ್ತದೆ.

ಸಿಂಗಾಪುರದಲ್ಲಿ ಬದ್ರಿ ವೈದೇಹಿಯ ಮನೆಬಾಗಿಲಿಗೆ ಆಗಮಿಸಿ ತನ್ನ ಕಾರ್‌ನಲ್ಲಿ ಅವಳನ್ನು ಎಳೆದು ಅಪಹರಿಸುತ್ತಾನೆ. ದಾರಿಯಲ್ಲಿ, ಅವನು ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿ ಕಾರ್‌ನ ಢಿಕ್ಕಿಯಿಂದ ಅವಳನ್ನು ಹೊರತಂದು ಅವರು ಭಾವನಾತ್ಮಕ ಆದರೆ ಬಿಸಿಯೇರಿದ ವಾದ ನಡೆಸುತ್ತಾರೆ. ತನ್ನನ್ನು ಯಜ್ಞಕುಂಡದ ಮುಂದೆ ಬಿಟ್ಟು ಹೋಗಿದ್ದಕ್ಕಾಗಿ ಬದ್ರಿ ಅವಳ ಬಗ್ಗೆ ಸಿಟ್ಟಾಗುತ್ತಾನೆ. ಅವಳು ಕ್ಷಮೆಯಾಚಿಸಿ ಅವನ ಕಾರಣದಿಂದ ತಾನು ಬಿಟ್ಟು ಬರಲ್ಲಿಲವೆಂದು ಅವನಿಗೆ ಭರವಸೆ ಕೊಡಲು ಪ್ರಯತ್ನಿಸುತ್ತಾಳೆ. ಅವಳ ಕತ್ತನ್ನು ಹಿಡಿದು ಅವಳ ಮೇಲೆ ತನ್ನ ಎಲ್ಲ ನಿರಾಶೆ ಮತ್ತು ಸಿಟ್ಟನ್ನು ಹೊರಹಾಕುವಾಗ, ಒಂದು ಪೋಲಿಸ್ ಕಾರ್ ಪಕ್ಕಕ್ಕೆ ಬಂದು ವೈದೇಹಿಯನ್ನು ಹಿಂಸಾತ್ಮಕವಾಗಿ ಸಮೀಪಿಸಿದ್ದಕ್ಕೆ ಇನ್ನೇನು ಬದ್ರಿಯನ್ನು ಬಂಧಿಸುವುದರಲ್ಲಿರುತ್ತದೆ. ಅವಳು ಅವನನ್ನು ರಕ್ಷಿಸುತ್ತಿರುವಾಗ ಅವರಿಬ್ಬರ ಮೇಲೂ ಸಂದೇಹಪಡಲಾಗುತ್ತದೆ. ಬದ್ರಿಯನ್ನು ಪೋಲಿಸ್ ಠಾಣೆಗೆ ಕರೆದೊಯ್ಯಲಾಗುತ್ತದೆ. ಸಾಕ್ಷಿಹೇಳಲು ವೈದೇಹಿ ಅವನ ಜೊತೆ ಹೋಗುತ್ತಾಳೆ. ಪೋಲಿಸ್ ಠಾಣೆಯಲ್ಲಿ ವೈದೇಹಿ ಬದ್ರಿಯ ತಪ್ಪನ್ನು ಮುಚ್ಚಿಹಾಕುತ್ತಾಳೆ. ಮುಂದಿನ ಕೆಲವು ದಿನಗಳಂದು, ಬದ್ರಿ ವೈದೇಹಿಯನ್ನು ಹಿಂಬಾಲಿಸುತ್ತಾನೆ. ಅಲೋಕ್ ಕರೆಮಾಡಿ ಅಂಬರ್ ಇತರ ವಧುಗಳಿಗೆ ಹುಡುಕಲಾರಂಭಿಸಿದ್ದಾನೆಂದು ಅವನಿಗೆ ಹೇಳುತ್ತಾನೆ. ಇದು ಬದ್ರಿಗೆ ಭಯಹುಟ್ಟಿಸುತ್ತದೆ ಮತ್ತು ಅವನು ವೈದೇಹಿಯ ಕಾರ್ಯಸ್ಥಳದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಾನೆ. ಅವಳು ಅವನನ್ನು ತಡೆದು ತಾನು ಸಿಂಗಾಪುರದಲ್ಲಿ ಕೆಲಸಮಾಡುವಂತೆ ಮತ್ತು ಇರುವಂತೆ ಅಂಬರ್‌ನ ಮನವೊಲಿಸಿದರೆ ಮಾತ್ರ ತಾನು ಅವನನ್ನು ಮದುವೆಯಾಗುವೆನು ಎಂದು ಹೇಳುತ್ತಾಳೆ. ಆ ರಾತ್ರಿ ಬದ್ರಿ ಕುಡಿದು ವೈದೇಹಿಯ ಮನೆಯ ಕಟ್ಟಡದ ಹೊರಗೆ ಗಲಾಟೆ ಎಬ್ಬಿಸಿದಾಗ ಪೋಲಿಸರು ಮತ್ತೊಮ್ಮೆ ಅವನನ್ನು ಬಂಧಿಸುತ್ತಾರೆ. ಈ ಸಲ ಅವನಿಗೆ ಜಾಮೀನು ಕೊಡಿಸಲು ವೈದೇಹಿ $೧೫೦೦ ರಷ್ಟು ಪಾವತಿಸಬೇಕಾಗುತ್ತದೆ.

ಬದ್ರಿ ವೈದೇಹಿಯ ಅಪಾರ್ಟ್‌ಮೆಂಟ್‍ನಲ್ಲಿರಲು ಆರಂಭಿಸುತ್ತಾನೆ. ಅಲ್ಲಿ ಅವಳು ಅವನ ಆರೈಕೆ ಆರಂಭಿಸಿ ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಅವನಿಗಾಗಿ ಅಡುಗೆ ಮಾಡುತ್ತಾಳೆ. ಇದು ಅವನ ಜಂಭ ಇಳಿಸುತ್ತದೆ. ಅವರು ಸ್ನೇಹಿತರ ಜೊತೆ ಕಾಲ ಕಳೆದು ಒಟ್ಟಾಗಿ ಸಿಂಗಾಪುರ ಪ್ರವಾಸವನು ಮಾಡುತ್ತಾರೆ. ಕಾಲ ಕಳೆದಂತೆ ಬದ್ರಿ ವೈದೇಹಿಯ ಸ್ವಾತಂತ್ರ್ಯವನ್ನು ಗೌರವಿಸಲಾರಂಭಿಸುತ್ತಾನೆ ಮತ್ತು ಅವಳ ಕೆಲಸ ಹಾಗೂ ಜಾಣತನದಿಂದ ಪ್ರಭಾವಿತನಾಗುತ್ತಾನೆ. ಅವನು ಉರ್ಮಿಳಾಳನ್ನೂ ನೆನಪಿಸಿಕೊಂಡು ಅವಳಿಗೆ ಕೆಲಸಮಾಡುವ ಅವಕಾಶ ಸಿಗುವುದಿಲ್ಲವೆಂದು ಮರುಗುತ್ತಾನೆ. ಉರ್ಮಿಳಾ ವೈದೇಹಿ ಬಗ್ಗೆ ಹೆಮ್ಮೆಪಡುತ್ತಿದ್ದಳೆಂದು ಅವಳಿಗೆ ಹೇಳುತ್ತಾನೆ. ಬದ್ರಿ ಮತ್ತು ವೈದೇಹಿ ಒಟ್ಟಾಗಿ ಹೆಚ್ಚು ಕಾಲಕಳೆಯಲು ಆರಂಭಿಸುತ್ತಾರೆ. ಇದು ಅವರು ಹತ್ತಿರವಾಗುವಂತೆ ಮಾಡುತ್ತದೆ. ಅಂಬರ್ ಕರೆಮಾಡಿದಾಗ, ತನಗಿನ್ನೂ ವೈದೇಹಿ ಸಿಕ್ಕಿಲ್ಲವೆಂದು ಬದ್ರಿ ಸುಳ್ಳು ಹೇಳುತ್ತಾನೆ. ಹಾಗಾಗಿ ಮನೆಗೆ ವಾಪಸಾಗುವಂತೆ ಅಂಬರ್ ಬದ್ರಿಗೆ ಹೇಳುತ್ತಾನೆ. ಬದ್ರಿಗೆ ತನ್ನ ಪಾಸ್‍ಪೋರ್ಟ್ ವಾಪಸು ಸಿಕ್ಕಾಗ, ತನ್ನೊಂದಿಗೆ ಮತ್ತು ತನ್ನ ಹೊಸ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ವೈದೇಹಿ ಅವನನ್ನು ಆಹ್ವಾನಿಸುತ್ತಾಳೆ. ಆ ರಾತ್ರಿಯಂದು ಆಮೇಲೆ, ವೈದೇಹಿ ಯಾರನ್ನು ಮದುವೆಯಾಗುವಳೊ ಅವನು ಬಹಳ ಅದೃಷ್ಟವಂತನೆಂದು ಬದ್ರಿ ಹೇಳುತ್ತಾನೆ. ಆದರೆ, ಕುಡಿದಾಗ ಅವನು ಬಹಳ ಮಾತನಾಡುತ್ತಾನೆಂದು ಅವಳು ಹೇಳುತ್ತಾಳೆ. ಮರುದಿನ ಬದ್ರಿ ಝ್ಞಾಸಿಗೆ ಹೊರಟುಹೋಗುತ್ತಾನೆ. ಅವನ ಅನುಪಸ್ಥಿತಿಯಿಂದ ಖಿನ್ನಳಾಗಿ ವೈದೇಹಿ ಅವನಿಗಾಗಿ ಪರಿತಪಿಸಲು ಶುರುಮಾಡುತ್ತಾಳೆ.

ಝಾನ್ಸಿಗೆ ಹಿಂತಿರುಗಿದಾಗ, ಉರ್ಮಿಳಾ ಗರ್ಭಿಣಿಯಾಗಿರುತ್ತಾಳೆ ಮತ್ತು ಗಂಡುಮಗುವಾಗುವಂತೆ ಅಂಬರ್ ಮಹಾಪೂಜೆಯನ್ನು ಆಯೋಜಿಸುತ್ತಾನೆ. ಬದ್ರಿಗೆ ಒಂದೇ ಸಮಯದಲ್ಲಿ ಅವಳ ಬಗ್ಗೆ ಅನುಕಂಪವಾಗಿ ವೈದೇಹಿಗಾಗಿ ಪರಿತಪಿಸುತ್ತಾನೆ. ಅವಳು ಏಕೆ ಓಡಿಹೋದಳೆಂದು ಕೊನೆಗೂ ಅವನಿಗೆ ಅರ್ಥವಾಗುತ್ತದೆ. ಪೂಜೆಯ ಮೊದಲು, ಅವನು ಬಹಳವಾಗಿ ಕುಡಿದು ಅಗೌರವಯುತವಾಗಿರುವುದಕ್ಕೆ ಅಂಬರ್‌ಗೆ ಬಯ್ಯುತ್ತಾನೆ. ತನಗೆ ವೈದೇಹಿ ಸಿಗದಿರುವುದಕ್ಕೆ ಅಂಬರ್ ಕಾರಣನೆಂದು ದೂಷಿಸುತ್ತಾನೆ. ತಕ್ಷಣ ಅವನು ತನ್ನ ಕಣ್ಣಂಚಿನಿಂದ ವೈದೇಹಿಯನ್ನು ನೋಡುತ್ತಾನೆ. ತಾನು ಅವನನ್ನು ಪ್ರೀತಿಸುತ್ತಿದ್ದು ಅವನನ್ನು ಮದುವೆಯಾಗಲು ಬಯಸುತ್ತೇನೆ ಎಂದು ಅವಳು ಹೇಳುತ್ತಾಳೆ. ಒಟ್ಟಾಗಿ ಅವರಿಬ್ಬರೂ ಅಂಬರ್‌ನ ಆಸೆಯನ್ನು ಆಕ್ಷೇಪಿಸಿ ತಾವು ಮದುವೆಯಾಗುವೆವು ಮತ್ತು ಅವನು ಒಪ್ಪಿದರೂ ಒಪ್ಪದಿದ್ದರೂ ವೈದೇಹಿ ತನಗಿಷ್ಟಬಂದಂತೆ ಕೆಲಸ ಮಾಡುವಳು ಎಂದು ಅವರು ಹೇಳುತ್ತಾರೆ.

ಹಿನ್ನುಡಿಯಲ್ಲಿ, ವೈದೇಹಿ ಭಾರತಕ್ಕೆ ಮರಳಿ ತನ್ನ ಸ್ವಂತದ ವಿಮಾನ ಪರಿಚಾರಕಿ ತರಬೇತಿ ಕೇಂದ್ರವನ್ನು ಆರಂಭಿಸುವ ಮುನ್ನ ಸಿಂಗಾಪುರದಲ್ಲಿ ತನ್ನ ತರಬೇತಿ ಕಾರ್ಯಕ್ರಮವನ್ನು ಮುಗಿಸುತ್ತಿರುವಾಗಲೇ ಬದ್ರಿ ಹಾಗೂ ವೈದೇಹಿ ದೂರದ ಸಂಬಂಧವನ್ನು ಮುಂದುವರಿಸುತ್ತಾರೆ ಎಂದು ತೋರಿಸಲಾಗುತ್ತದೆ. ಉರ್ಮಿಳಾ ಅವಳಿ ಜವಳಿ ಮಕ್ಕಳಿಗೆ, ಒಬ್ಬ ಹುಡುಗ ಮತ್ತು ಹುಡುಗಿಗೆ ಜನ್ಮನೀಡುತ್ತಾಳೆ. ಇಲ್ಲಿಯವರೆಗೆ ಅಂಬರ್ ಇಬ್ಬರನ್ನೂ ಸಮಾನವಾಗಿ ಕಂಡಿರುತ್ತಾನೆ ಎಂದು ತೋರಿಸಲಾಗುತ್ತದೆ. ಅವಳು ಅಲೋಕ್ ಜೊತೆಗೆ ಕುಟುಂಬದ ಕಾರ್ ಪ್ರದರ್ಶನ ಕೊಠಡಿಯಲ್ಲಿ ಕೆಲಸಮಾಡಲು ಶುರುಮಾಡುತ್ತಾಳೆ ಮತ್ತು ಅವಳಿಗೆ ಸ್ವಂತದ ಕೋಣೆಯೂ ಸಿಗುತ್ತದೆ. ತಮ್ಮ ಯಾವುದೇ ಮಕ್ಕಳಿಗೆ ಯಾವುದೇ ವರದಕ್ಷಿಣೆಯನ್ನು ಸಂಗ್ರಹಿಸುವುದಿಲ್ಲವೆಂದು ಬದ್ರಿ ಮತ್ತು ವೈದೇಹಿ ಪ್ರಮಾಣ ಮಾಡುತ್ತಾರೆ. ಸಂತೋಷವಾಗಿ ಪುನಃ ಒಂದಾಗಿ ಬದ್ರಿ ಮತ್ತು ವೈದೇಹಿ ಅವನ ಮೋಟರ್‌ಬೈಕ್ ಮೇಲೆ ಹೋಗುತ್ತಿರುವುದರೊಂದಿಗೆ ಚಿತ್ರವು ಮುಗಿಯುತ್ತದೆ.

ಪಾತ್ರವರ್ಗ

ಬದಲಾಯಿಸಿ
  • ಬದ್ರೀನಾಥ್ "ಬದ್ರಿ" ಬನ್ಸಲ್ ಪಾತ್ರದಲ್ಲಿ ವರುಣ್ ಧವನ್
  • ವೈದೇಹಿ ತ್ರಿವೇದಿ ಪಾತ್ರದಲ್ಲಿ ಆಲಿಯಾ ಭಟ್
  • ಅಂಬರ್‌ನಾಥ್ "ಅಂಬರ್" ಬನ್ಸಲ್ ಪಾತ್ರದಲ್ಲಿ ರಿತುರಾಜ್ ಸಿಂಗ್
  • ಅಲೋಕ್‍ನಾಥ್ "ಅಲೋಕ್" ಬನ್ಸಲ್ ಪಾತ್ರದಲ್ಲಿ ಯಶ್ ಸಿನ್ಹಾ
  • ಉರ್ಮಿಳಾ ಶುಕ್ಲಾ ಬನ್ಸಲ್ ಪಾತ್ರದಲ್ಲಿ ಶ್ವೇತಾ ಬಾಸು ಪ್ರಸಾದ್
  • ಮಯಾಂಕ್ ತ್ರಿವೇದಿ ಪಾತ್ರದಲ್ಲಿ ಸ್ವಾನಂದ್ ಕಿರ್ಕಿರೆ
  • ಮನಸ್ವಿ ತ್ರಿವೇದಿ ಪಾತ್ರದಲ್ಲಿ ಕಾನುಪ್ರಿಯಾ ಪಂಡಿತ್
  • ಸೋಮ್‍ದೇವ್ ಮಿಶ್ರಾ ಪಾತ್ರದಲ್ಲಿ ಸಾಹಿಲ್ ವೆಯ್ದ್
  • ಕೃತಿಕಾ ತ್ರಿವೇದಿ ಪಾತ್ರದಲ್ಲಿ ಸುಖ್‍ಮಣಿ ಲಾಂಬಾ
  • ಭೂಷಣ್ ಮಿಶ್ರಾ ಪಾತ್ರದಲ್ಲಿ ಅಪಾರ್‌ಶಕ್ತಿ ಖುರಾನಾ
  • ಜಿತೇಂದ್ರ ಮಿಶ್ರಾ ಪಾತ್ರದಲ್ಲಿ ರಾಜೇಂದ್ರ ಸೇಠಿ
  • ಕಿರನ್ ಕಕ್ಕರ್ ಪಾತ್ರದಲ್ಲಿ ಆಕಾಂಕ್ಷಾ ಸಿಂಗ್
  • ಗುರ್ಮೀತ್ ಸಿಂಗ್ ಲಾಂಬಾ ಪಾತ್ರದಲ್ಲಿ ಗೌರವ್ ಪಾಂಡೆ
  • ಲಕ್ಷ್ಮಿ ಶಂಕರ್ ಪಾತ್ರದಲ್ಲಿ ಗೌಹರ್ ಖಾನ್
  • ಸಾಗರ್ ಪಾತ್ರದಲ್ಲಿ ಅತುಲ್ ನಾರಂಗ್

ತಯಾರಿಕೆ

ಬದಲಾಯಿಸಿ

ಬದ್ರೀನಾಥ್ ಕಿ ದುಲ್ಹನಿಯಾ ಪ್ರಣಯಪ್ರಧಾನ ಹಾಸ್ಯಚಿತ್ರ ಹಂಪ್ಟಿ ಶರ್ಮಾ ಕಿ ದುಲ್ಹನಿಯಾ (೨೦೧೪) ಆರಂಭವಾದ ಚಿತ್ರಸಂಗ್ರಹದ ಎರಡನೇ ಕಂತಾಗಿದೆ. ಆನ್‍ಲೈನ್ ಚಲನಾ ಭಿತ್ತಿಪತ್ರದ ಬಿಡುಗಡೆಯೊಂದಿಗೆ. ಈ ಚಿತ್ರವನ್ನು ಮೊದಲು ೩ ಮೇ ೨೦೧೬ರಂದು ಘೋಷಿಸಲಾಯಿತು ಪ್ರಧಾನ ಛಾಯಾಗ್ರಹಣವೂ ಅದೇ ದಿನ ಶುರುವಾಯಿತು. ರಾಜಸ್ಥಾನದ ಕೋಟಾದಲ್ಲಿ ಕೆಲವು ದೃಶ್ಯಗಳನ್ನೂ ಚಿತ್ರೀಕರಿಸಲಾಯಿತು.[]

ಧ್ವನಿವಾಹಿನಿ

ಬದಲಾಯಿಸಿ

ಚಿತ್ರದ ಸಂಗೀತವನ್ನು ಅಮಾಲ್ ಮಲಿಕ್, ತನಿಷ್ಕ್ ಬಾಗ್ಚಿ ಮತ್ತು ಅಖಿಲ್ ಸಚ್‍ದೇವ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್, ಶಬ್ಬೀರ್ ಅಹಮದ್, ಅಖಿಲ್ ಸಚ್‍ದೇವ, ಬಾದ್‍ಶಾ ಮತ್ತು ಇಂದೀವರ್ ಬರೆದಿದ್ದಾರೆ.[] ಧ್ವನಿವಾಹಿನಿಯನ್ನು ಟೀ-ಸೀರೀಸ್ ೧೪ ಫ಼ೆಬ್ರುವರಿ ೨೦೧೭ರಂದು ಬಿಡುಗಡೆ ಮಾಡಿತು.[೧೦]

"ತಮ್ಮಾ ತಮ್ಮಾ ಅಗೇನ್" ೧೯೯೦ರ ಚಲನಚಿತ್ರ ಥಾನೇದಾರ್‌ಗೆ ಬಪ್ಪಿ ಲಹಿರಿ ತಯಾರಿಸಿದ "ತಮ್ಮಾ ತಮ್ಮಾ" ಹಾಡಿನ ಮರುಸೃಷ್ಟಿಯಾಗಿದೆ.

ಶೀರ್ಷಿಕೆ ಗೀತೆಯಾದ "ಬದ್ರಿ ಕಿ ದುಲ್ಹನಿಯಾ" ತೀಸ್ರಿ ಕಸಮ್ (೧೯೬೬) ಚಿತ್ರದ "ಚಲತ್ ಮುಸಾಫ಼ಿರ್" ಹಾಡಿನಿಂದ ಸ್ಫೂರ್ತಿಪಡೆದಿದೆ ಎಂದು ತೋರುತ್ತದೆ.[೧೧] ೨೦೧೮ರ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅರಿಜೀತ್ ಸಿಂಗ್ "ರೋಕೆ ನಾ ರುಕೆ ನೆಯ್ನಾ" ಹಾಡಿನ ತಮ್ಮ ಗಾಯನಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಗೆದ್ದರು.[೧೨]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ಆಶಿಕ್ ಸರೆಂಡರ್ ಹುವಾ"ಶಬ್ಬೀರ್ ಅಹಮದ್ಅಮಾಲ್ ಮಲಿಕ್ಅಮಾಲ್ ಮಲಿಕ್, ಶ್ರೇಯಾ ಘೋಷಾಲ್4:10
2."ರೋಕೆ ನಾ ರುಕೆ ನೆಯ್ನಾ"ಕುಮಾರ್ಅಮಾಲ್ ಮಲಿಕ್ಅರಿಜೀತ್ ಸಿಂಗ್4:39
3."ಹಮ್‍ಸಫ಼ರ್"ಅಖಿಲ್ ಸಚ್‍ದೇವಅಖಿಲ್ ಸಚ್‍ದೇವಅಖಿಲ್ ಸಚ್‍ದೇವ, ಮಂಶೀಲ್ ಗುಜ್ರಾಲ್4:29
4."ಬದ್ರಿ ಕಿ ದುಲ್ಹನಿಯಾ (ಶೀರ್ಷಿಕೆ ಗೀತೆ)" ತನಿಷ್ಕ್ ಬಾಗ್ಚಿದೇವ್ ನೇಗಿ, ನೇಹಾ ಕಕ್ಕರ್, ಮೊನಾಲಿ ಠಾಕುರ್, ಇಕ್ಕಾ3:27
5.Untitledಬಾದ್‍ಶಾ, ಇಂದೀವರ್ ಬಪ್ಪಿ ಲಹಿರಿ, ಅನುರಾಧಾ ಪೌಡ್ವಾಲ್, ಬಾದ್‍ಶಾ೩:೧೯
6."ಹಮ್‍ಸಫ಼ರ್" (ಆಲಿಯಾ ಭಟ್ ಆವೃತ್ತಿ)ಅಖಿಲ್ ಸಚ್‍ದೇವಅಖಿಲ್ ಸಚ್‍ದೇವಆಲಿಯಾ ಭಟ್, ಅಖಿಲ್ ಸಚ್‍ದೇವ2:50
ಒಟ್ಟು ಸಮಯ:22:54

ಬಾಕ್ಸ್ ಆಫ಼ಿಸ್

ಬದಲಾಯಿಸಿ

ಭಾರತದಲ್ಲಿ ಚಿತ್ರದ ಒಟ್ಟು ಹಣಸಂಗ್ರಹ೧೬೨ ಕೋಟಿಯಷ್ಟಾಗಿತ್ತು ಮತ್ತು ವಿದೇಶದ ಮಾರುಕಟ್ಟೆಗಳಲ್ಲಿ ಜೀವಮಾನದ ಒಟ್ಟು ಹಣಸಂಗ್ರಹ₹೪೪.೮೫ crore೪೪.೮೫ ಕೋಟಿಯಷ್ಟಾಗಿತ್ತು.[೧೩] ಹಾಗಾಗಿ ವಿಶ್ವಾದ್ಯಂತದ ಒಟ್ಟು ಹಣಸಂಗ್ರಹ206 ಕೋಟಿಯಷ್ಟಾಗಿತ್ತು.[೧೪]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ಫಿಲ್ಮ್‌ಫೇರ್ ಪ್ರಶಸ್ತಿಗಳು - ೨೦ ಜನೆವರಿ ೨೦೧೮

  • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ದೇಶಕ - ಶಶಾಂಕ್ ಖೆಯ್ತಾನ್ - ನಾಮನಿರ್ದೇಶಿತ
  • ಅತ್ಯುತ್ತಮ ನಟ - ವರುಣ್ ಧವನ್ - ನಾಮನಿರ್ದೇಶಿತ
  • ಅತ್ಯುತ್ತಮ ನಟಿ - ಆಲಿಯಾ ಭಟ್ - ನಾಮನಿರ್ದೇಶಿತ
  • ಅತ್ಯುತ್ತಮ ಸಂಗೀತ ಧ್ವನಿಸುರುಳಿ ಸಂಗ್ರಹ - ಅಖಿಲ್ ಸಚ್‍ದೇವ, ಅಮಾಲ್ ಮಲಿಕ್, ತನಿಷ್ಕ್ ಬಾಗ್ಚಿ - ನಾಮನಿರ್ದೇಶಿತ
  • ಅತ್ಯುತ್ತಮ ಹಿನ್ನೆಲೆ ಗಾಯಕ - ಅಖಿಲ್ ಸಚ್‍ದೇವ ("ಹಮ್‍ಸಫ಼ರ್" ಹಾಡಿಗಾಗಿ) - ನಾಮನಿರ್ದೇಶಿತ
  • ಅತ್ಯುತ್ತಮ ಹಿನ್ನೆಲೆ ಗಾಯಕ - ಅರಿಜೀತ್ ಸಿಂಗ್ ("ರೋಕೆ ನಾ ರುಕೆ ನೆಯ್ನಾ" ಹಾಡಿಗಾಗಿ) - ಗೆಲುವು
  • ಅತ್ಯುತ್ತಮ ಸಂಗೀತ ನಿರ್ದೇಶನ - ಗಣೇಶ್ ಆಚಾರ್ಯ ("ಬದ್ರಿ ಕಿ ದುಲ್ಹನಿಯಾ" ಹಾಡಿಗಾಗಿ) - ನಾಮನಿರ್ದೇಶಿತ

ಉಲ್ಲೇಖಗಳು

ಬದಲಾಯಿಸಿ
  1. "LIVE: Badrinath Ki Dulhania Movie Review, Story, Synopsis, Trailer, Songs, Cast & Crew". Times of India. 10 March 2017. Retrieved 10 March 2017.
  2. "Badrinath Ki Dulhania – Movie – Box Office India". www.boxofficeindia.com.
  3. https://www.bollywoodhungama.com/movie/badrinath-ki-dulhania/box-office/
  4. "'Badrinath Ki Dulhania' different from Humpty: Varun Dhawan". The Indian Express. PTI. 16 July 2016. Retrieved 2016-09-03.
  5. "In Pics: Alia Bhatt & Varun Dhawan Have a Working Sunday". The Quint. 20 January 2017. Retrieved 20 January 2017.
  6. Hungama, Bollywood (2017-07-05). "Box Office: Salman Khan's Tubelight is the 2nd highest worldwide grosser of 2017, unlikely to beat Raees – Bollywood Hungama". Bollywood Hungama (in ಅಮೆರಿಕನ್ ಇಂಗ್ಲಿಷ್). Retrieved 2018-01-20.
  7. "Filmfare Awards 2018: Complete list of nominations". The Indian Express (in ಅಮೆರಿಕನ್ ಇಂಗ್ಲಿಷ್). 2018-01-18. Retrieved 2018-01-20.
  8. "Badrinath Ki Dulhania Shooting Locations". Bollylocations. Archived from the original on 2020-01-05. Retrieved 2020-09-13.
  9. "Badrinath Ki Dulhania Cast List". Bollywood Hungama. Retrieved 18 April 2019.
  10. "Badrinath Ki Dulhania (Original Motion Picture Soundtrack) – EP by Amaal Mallik, Akhil Sachdeva, Tanishk Bagchi & Bappi Lahiri on Apple Music". iTunes Store. 14 February 2017.
  11. musice೪ news|url=https://www.dnaindia.com/entertainment/report-badrinath-ki-dulhaniya-title-song-inspired-2316693%7Ctitle=Badrinath Ki Dulhaniya title song inspired !|date=9 February 2017|work=Daily News and Analysis|access-date=೧೮ April ೨೦೧೯}}
  12. https://www.financialexpress.com/entertainment/filmfare-awards-2018-full-list-of-winners-with-nominees/1023391/
  13. "Box office Worldwide collection and day wise break up of Badrinath Ki Dulhania". Bollywood Hungama. 5 July 2017. Retrieved 15 August 2017.
  14. "Top day 1 India 2017". Box office India. 28 April 2017. Retrieved 16 May 2017.

ಹೊರಗಿನ ಕೊಂಡಿಗಳು

ಬದಲಾಯಿಸಿ