ಕಲ್ಲು

(ಬಂಡೆ ಇಂದ ಪುನರ್ನಿರ್ದೇಶಿತ)

ಕಲ್ಲು, ಭೂಶಾಸ್ತ್ರದ ಪ್ರಕಾರ, ನೈಸರ್ಗಿಕವಾಗಿ ದೊರಕುವ ಖನಿಜ ಪದಾರ್ಥಗಳ ಸಮಷ್ಟಿ. ಭೂಮಿಹೊರ ಪದರವಾದ "ಲಿಥೋಸ್ಫಿಯರ್" ಪ್ರಮುಖವಾಗಿ ಕಲ್ಲುಗಳಿಂದ ನಿರ್ಮಿತವಾಗಿದೆ. ಸಾಮಾನ್ಯವಾಗಿ ಕಲ್ಲನ್ನು ವೈಜ್ಞಾನಿಕವಾಗಿ ಇಗ್ನಿಯಸ್ ಕಲ್ಲು, ಸೆಡಿಮೆಂಟರಿ ಕಲ್ಲು ಮತ್ತು ಮೆಟಾಮಾರ್ಫಿಕ್ ಕಲ್ಲು ಎಂದು ವಿಂಗಡಿಸಲಾಗುತ್ತದೆ.

ಕೊಲೊರಾಡೊ ಪ್ರದೇಶದ ಒಂದು ಕಲ್ಲಿನ ಬಂಡೆ


ಕಲ್ಲು : ಕಟ್ಟಡಗಳನ್ನು ನಿರ್ಮಿಸಲು ಯೋಗ್ಯ ಗುಣಗಳಿರುವ ಹಾಗೂ ನಿಸರ್ಗದಲ್ಲಿ ವಿಪುಲವಾಗಿ ದೊರೆಯುವ ಬಂಡೆಗಳಿಗೆ ಕಟ್ಟಡದ ಕಲ್ಲು ಅಥವಾ ಸರಳವಾಗಿ ಕಲ್ಲು ಎಂದು ಹೆಸರು. ಪ್ರಸಕ್ತ ಲೇಖನದಲ್ಲಿ ಎಂಜಿನಿಯರಿಂಗ್ ದೃಷ್ಟಿಕೋನದಿಂದ ಕಲ್ಲಿನ ಗುಣಗಳನ್ನು ಪರಿಶೀಲಿಸಿದೆ. ಕಲ್ಲಿನ ಭೂವೈಜ್ಞಾನಿಕ ಗುಣಗಳನ್ನು ತಿಳಿಯಲು (ನೋಡಿ- ಶಿಲೆ). ಭೂಗರ್ಭದ ರಚನೆ, ರಾಸಾಯನಿಕ ಸಂಯೋಜನೆಗಳ ದೃಷ್ಟಿಯಿಂದ ಕಲ್ಲನ್ನು ಎರಡು ವಿಧವಾಗಿ ವರ್ಗೀಕರಿಸಬಹುದು.

ಭೂಗರ್ಭರಚನೆ ಬದಲಾಯಿಸಿ

ಕಲ್ಲಿನಲ್ಲಿ ಮೂರು ಬಗೆಯ ಭೂಗರ್ಭದ ರಚನೆಯನ್ನು ಕಾಣಬಹುದು : (೧) ಅಗ್ನಿಜನ್ಯ ಶಿಲೆ (೨) ಜಲಜ ಶಿಲೆ (೩) ಪರಿವರ್ತಿತ ಶಿಲೆ

ಅಗ್ನಿಜನ್ಯ ಶಿಲೆ ಜಲಜ ಶಿಲೆಗಿಂತ ಬಲಿಷ್ಠವಾಗಿರುತ್ತದೆ. ಸಿಲಿಕೇಟುಗಳು ಹೆಚ್ಚಾಗಿರುವ ಕಲ್ಲು ಸುಣ್ಣ. ವಿಶಿಷ್ಟವಾಗಿರುವವುಗಳಿಗಿಂತ ಮಳೆ ಬಿಸಿಲುಗಳನ್ನು ಚೆನ್ನಾಗಿ ತಡೆಯುತ್ತದೆ. ಸ್ಫಟಿಕಾಕೃತಿಯ (ಕ್ರಿಸ್ಟಲೈನ್) ಕಲ್ಲುಗಳು ಇತರ ಬಗೆಗಳಿಗಿಂತ ಗಟ್ಟಿಯಾಗಿರುತ್ತವೆ. ಹೊಸದಾಗಿ ಸೀಳಿದ ಕಲ್ಲಿನ ಮುಖ ಸ್ಫುಟವಾಗಿ ಚೊಕ್ಕಟವಾಗಿರಬೇಕು. ಕಲ್ಲನ್ನು ನಯಮಾಡಬೇಕಾದರೆ ಅದು ಸಣ್ಣ ಕಣಗಳಿಂದ ಕೂಡಿ ಬಾಳಿಕೆ ಬರುವ ಹಾಗಿರಬೇಕು. ಅದರ ಸಾಪೇಕ್ಷ ಸಾಂದ್ರತೆ (೨.೭)ಕ್ಕಿಂತ ಕಡಿಮೆಯಾಗಿರಬಾರದು.

ರಾಸಾಯನಿಕ ಸಂಯೋಜನೆ ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

ಇಲ್ಲಿಯೂ ಮೂರು ಬಗೆಯ ರಚನೆಗಳಿವೆ : ೧ ಸಿಲಿಕಾನ್ ಡೈ ಆಕ್ಸೈಡ್ ಹೆಚ್ಚಾಗಿರುವವು. ಉದಾಹರಣೆಗೆ ಗ್ರಾನೈಟ್, ಮರಳು ಕಲ್ಲು ; ೨ ಕ್ಯಾಲ್ಸಿಯಂ ಕಾರ್ಬೊನೇಟ್ (ಸುಣ್ಣ) ಹೆಚ್ಚಾಗಿರುವವು, ಉದಾಹರಣೆಗೆ ಸುಣ್ಣಕಲ್ಲು, ಅಮೃತಶಿಲೆ ; ೩ ಮಣ್ಣು ಹೆಚ್ಚಾಗಿರುವವು, ಉದಾಹರಣೆಗೆ ಸ್ಲೇಟ್, ಲ್ಯಾಟರೈಟ್.

ಒಳ್ಳೆಯ ಕಟ್ಟಡದ ಕಲ್ಲಿನಲ್ಲಿ ಕೆಳಕಂಡ ಗುಣಗಳಿರಬೇಕು. . ಖನಿಜದ ಶುದ್ಧತೆ : ಇದರಲ್ಲಿ ಇರುವ ಖನಿಜಗಳು ಸಾಮಾನ್ಯವಾದ ಪರಿಸ್ಥಿತಿಯಲ್ಲಿ ವಿಭಜನೆಯಾಗಬಾರದು. ಬೆಣಚುಕಲ್ಲು ತುಂಬ ಗಟ್ಟಿಯಾಗಿದೆ. ಫೆಲ್ಸ್ಪಾರುಗಳು ಕೆಲವು ಸಂದರ್ಭಗಳಲ್ಲಿ ವ್ಯತ್ಯಾಸವನ್ನು ಹೊಂದಬಹುದು. ೨. ಅದುಮುವ ಬಲ : ಕಟ್ಟಡದ ಮೇಲೆ ಹೊರೆ ಬಂದಾಗ ಈ ಗುಣ ಮುಖ್ಯ. ಕಲ್ಲಿನ ಚಚ್ಚೌಕದ ಮೇಲೆ ತೂಕ ಹೇರಿ ಪ್ರಯೋಗಶಾಲೆಯಲ್ಲಿ ಈ ಗುಣವನ್ನು ಅಳೆಯುತ್ತಾರೆ. ಸುಮಾರಾಗಿ ಚದರ ಅಂಗುಲಕ್ಕೆ ಒಡೆಯುವ ತೂಕ (೨೦,೦೦೦) ಪೌಂಡುಗಳಿದ್ದರೆ ಉತ್ಕೃಷ್ಟ. (೧೫,೦೦೦) ದಿಂದ (೨೦,೦೦೦)ದ ವರೆಗೆ ಎಲ್ಲ ಕೆಲಸಗಳಿಗೂ ಉಪಯೋಗಿಸಬಹುದು. (೧೦,೦೦೦) ದಿಂದ (೧೫,೦೦೦) ವರೆಗೆ ಚಿಂತೆ ಇಲ್ಲ. (೫,೦೦೦) ದಿಂದ (೧೦,೦೦೦)ದ ವರೆಗೆ ಎಲ್ಲ ಕಡೆಗಳಲ್ಲಿಯೂ ಉಪಯೋಗಿಸುವ ಹಾಗಿಲ್ಲ. ಅದಕ್ಕಿಂತ ಕಡಿಮೆಯಾದರೆ ಉಪಯೋಗವಿಲ್ಲ. ೩. ನೀರನ್ನು ಹೀರುವಿಕೆ : ನೀರನ್ನು ಹೆಚ್ಚಾಗಿ ಹೀರಿದರೆ ಮಳೆಗಾಲದಲ್ಲಿ ಕಲ್ಲು ಸವೆದು ಹೋಗಬಹುದು. ತನ್ನ ತೂಕದಲ್ಲಿ ಎಷ್ಟು ಭಾಗ ನೀರನ್ನು ಕಲ್ಲು ಹೀರುತ್ತದೆ ಎಂದು ಅಳತೆ ಮಾಡುತ್ತಾರೆ. ಗಟ್ಟಿ ಕಲ್ಲು ೧,೦೦೦ ಕ್ಕೆ ೧ ಭಾಗ ನೀರನ್ನೂ ಹೀರುವುದಿಲ್ಲ. ೧೦೦ ಕ್ಕೆ ೧ ಭಾಗವನ್ನು ಹೀರಿದರೆ ಚಿಂತೆಯಿಲ್ಲ. ೨ಳಿ ಪಾಲಿಗಿಂತ ಹೆಚ್ಚಾಗಿ ಹೀರಬಾರದು. ೪. ತೂಕ : ಇದು ಕಲ್ಲಿನ ಮುಖ್ಯ ಗುಣ. ಕಗ್ಗಲ್ಲು ಘನ ಅಡಿಗೆ ೧೬೦ ರಿಂದ ೧೭೦ ಪೌಂಡು ತೂಗುತ್ತದೆ. ಬೆಸಾಲ್ಟ್‌ ಇನ್ನೂ ಭಾರ. ಸುಣ್ಣಕಲ್ಲಿನ ತೂಕ ೧೩೫ ರಿಂದ ೧೫೦ ಪೌಂಡು. ಘನ ಅಡಿಗೆ ಸುಮಾರು ೧೨೦ ಪೌಂಡು ತೂಕದ ಕಲ್ಲು ಸಾಮಾನ್ಯ. ೫. ಗಾಳಿ, ಮಳೆಗೆ ನಿರೋಧ : ಇದು ಕಲ್ಲಿನ ರಚನೆಯ ಮೇಲೆ ಹೋಗುತ್ತದೆ. ಗಟ್ಟಿಯಾದ ಕಲ್ಲಿನಲ್ಲಿ ಮೆತುವಾದ ಪೊರೆಗಳಿದ್ದರೆ ಪೊರೆಗಳು ನೀರಿನಲ್ಲಿ ಕರಗಿ ಹೋಗುತ್ತವೆ. ಬಿರುಕುಗಳು, ಮೆದುವಾದ ಖನಿಜಗಳು, ಡೊಗರುಗಳು ಇದ್ದರೆ ಒಳಕ್ಕೆ ನೀರು ನುಗ್ಗುವ ಅಪಾಯ ಹೆಚ್ಚು.

ಕೈಗಾರಿಕಾ ಕ್ಷೇತ್ರಗಳಲ್ಲಿ ಗಂಧಕದ ಅನಿಲಗಳಿಂದ ಕಲ್ಲು ವಿಭಜನೆಯಾಗುವ ಸಂಭವವಿದೆ. ನೀರಿನಲ್ಲಿ ವಿಲೀನವಾಗುವ ಲವಣಗಳು ಕಲ್ಲಿನಲ್ಲಿ ಇರಬಾರದು. ಕಟ್ಟಡದ ಮೇಲೆ ಸಸ್ಯಗಳು ಬೆಳೆದರೆ ಅಪಾಯ. ಕೆಲವು ಕಲ್ಲುಗಳು ಒಂದೇ ದಿಕ್ಕಿನಲ್ಲಿ ಸೀಳುತ್ತವೆ. ಕೆಲವು ಎರಡು ಮೂರು ದಿಕ್ಕುಗಳಲ್ಲಿ ಸೀಳುವುದೂ ಉಂಟು. ಒರೆಗಳಿರುವ ಕಲ್ಲುಗಳು ಸುಲಭವಾಗಿ ಸೀಳುತ್ತವೆ. ಬಂಡೆಯಿಂದ ಕಲ್ಲನ್ನು ಸೀಳಿ ತೆಗೆಯುವಾಗ ಎಲ್ಲಿ ದೌರ್ಬಲ್ಯವಿದೆಯೆಂದು ನೋಡಬೇಕು. ಒಂದೊಂದು ಬಗೆಯ ಕಲ್ಲಿನಲ್ಲಿ ಕೆಲಸ ಮಾಡುವುದರಲ್ಲಿಯೂ ಕೆಲವು ವೈಲಕ್ಷಣ್ಯಗಳಿವೆ. ಇವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಕು. ಕೆಲವು ಮಾದರಿಗಳು ಹೊರಗೆ ನೋಡುವುದಕ್ಕೆ ಅಲಂಕಾರವಾಗಿರುತ್ತವೆ. ಇವುಗಳಲ್ಲಿ ಬಣ್ಣವೇ ಮುಖ್ಯ. ಅಮೃತಶಿಲೆಯಲ್ಲಂತೂ ಅನೇಕ ನಮೂನೆಗಳಿವೆ. ಕೊರೆದು ನಯಮಾಡಿದಾಗ ಇವುಗಳ ಸೊಬಗು ಎದ್ದು ಕಾಣುತ್ತದೆ. ಕೆಲವು ಬಗೆಯ ಕಲ್ಲುಗಳನ್ನು ಉಜ್ಜಿದಾಗ ಮೇಲ್ಮೈಗೆ ಹೊಳಪು ಬರುತ್ತದೆ. ಇಂಥ ಕಲ್ಲುಗಳನ್ನು ದೇವಾಲಯಗಳಲ್ಲಿಯೂ ಅರಮನೆಗಳಲ್ಲಿಯೂ ಉಪಯೋಗಿಸುತ್ತಾರೆ. ಇವುಗಳಲ್ಲಿ ಕೆಲವನ್ನು ಸೂಚಿಸಿದೆ : ೧ ಬೆಂಗಳೂರಿನ ಹತ್ತಿರ ಸಾರಕ್ಕಿ ಬಂಡೆಯ ಬೂದು ಬಣ್ಣದ ಗ್ರಾನೈಟ್, ೨ ಚಿತ್ರದುರ್ಗ, ಚಾಮುಂಡಿ ಮತ್ತು ಶಿವಗಂಗೆಯ ಬೆಟ್ಟಗಳಲ್ಲಿ ಸಿಕ್ಕುವ ಗುಲಾಬಿ ಬಣ್ಣದ ಪಾರ್ಫಿರಿಟಿಕ್ ಗ್ರಾನೈಟ್, ೩ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಕ್ಕುವ ಹಸಿರು ಬಣ್ಣದ ಕಲ್ಲುಗಳು, ೪ ತುರುವೇಕೆರೆ, ಬಾಣಸಂದ್ರ, ಮೈಸೂರು-ಈ ಪ್ರದೇಶಗಳಲ್ಲಿ ದೊರೆಯುವ ಅಚ್ಚ ಕಪ್ಪಾದ ಕಲ್ಲು, ೫ ಅಲ್ಲಲ್ಲಿ ದೊರೆಯುವ ಅಮೃತಶಿಲೆ, ಈಚೆಗೆ ಅಲಂಕಾರದ ಕಲ್ಲುಗಳನ್ನು ಕೃತಕವಾಗಿ ತಯಾರಿಸುತ್ತಿದ್ದಾರೆ.

ಕಟ್ಟಡಗಳನ್ನು ಕಟ್ಟಲು ಗ್ರಾನೈಟ್, ಟ್ರ್ಯಾಪ್, ಬೆಸಾಲ್ಟ್‌, ಕ್ವಾಟೈ ಕ್ವಾರ್ಟ್ಜೈಟುಗಳು, ಲ್ಯಾಟರೈಟುಗಳು, ಷಿಸ್ಟುಗಳು, ಸಣ್ಣಕಲ್ಲುಗಳು, ಮರಳು ಕಲ್ಲುಗಳು, ಬಳಪದ ಕಲ್ಲುಗಳು, ಸ್ಲೇಟುಗಳು-ಇವನ್ನು ಉಪಯೋಗಿಸುತ್ತಾರೆ.

ಗ್ರಾನೈಟ್ ಶ್ರೇಷ್ಠವಾದ ಕಲ್ಲು. ಈ ಸ್ಫಟಿಕ ರೂಪದ ಕಲ್ಲಿನಲ್ಲಿ ಕ್ವಾಟ್ರ್ಜ್‌, ಫೆಲ್ಸ್ಪಾರ್, ಅಭ್ರಕ-ಈ ಖನಿಜಗಳು ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುತ್ತವೆ. ಇದು ಅಗ್ನಿಜನ್ಯ ಶಿಲೆ. ಇದರಲ್ಲಿರುವ ಫೆಲ್ಸ್ಪಾರುಗಳ ಬಣ್ಣವನ್ನು ಅನುಸರಿಸಿ ಇದು ಕೆಂಪು ಅಥವಾ ಬೂದು ಬಣ್ಣವಾಗಿರುತ್ತದೆ. ಇದರಲ್ಲಿನ ಕಣಗಳ ಗಾತ್ರಗಳು ತುಂಬ ವ್ಯತ್ಯಾಸವಾಗುತ್ತವೆ. ಈ ಸಾಪೇಕ್ಷ ಸಾಂದ್ರತೆ ೨.೬೭. ಸಾಮಾನ್ಯವಾದ ಗ್ರಾನೈಟ್ನಲ್ಲಿ ಖನಿಜಗಳು ಈ ಪ್ರಮಾಣದಲ್ಲಿರುತ್ತವೆ: ಕ್ವಾಟ್ರ್ಜ್‌ ಶೇ. ೩೨.೬; ಆರ್ಥೋಕ್ಲೇಸ್ ಫೆಲ್ಡ್‌ಸ್ಪಾರ್ ಶೇ. ೩೪.೫; ಪ್ಲೇಜಿಯೋಕ್ಸೇಸ್ ಶೇ. ೧೯.೨; ಮಸ್ಕೊವೈಟ್ ಶೇ. ೪.೫. ಆದರೆ ಕೆಲವು ಮಾದರಿಗಳಲ್ಲಿ ಮೈಕ್ರೋಕ್ಲೀನ್ ಫೆಲ್ಸ್ಪಾರ್, ಹಾರ್ನ್ಬ್ಲೆಂಡ್ ಇಲ್ಲವೆ ಆಗೈಟ್ ಸೇರಿರುತ್ತವೆ. ಪ್ಲೇಜಿಯೋಕ್ಲೆಸ್ ಹೆಚ್ಚಾಗಿರುವ ಕಲ್ಲನ್ನು ಗ್ರಾನೊಡಯೊರೈಟ್ ಎನ್ನುತ್ತಾರೆ. ಕೆಲವು ವೇಳೆ ಫೆಲ್ಸ್ಪಾರ್ ಮತ್ತು ಅಭ್ರಕಕ್ಕೆ ಬದಲಾಗಿ ಟೊರ್ಮಲೀನ್ ಇರುವುದೂ ಉಂಟು. ಚಿಲ್ಲರೆ ಖನಿಜಗಳಲ್ಲಿ ಮ್ಯಾಗ್ನಟೈಟ್, ಅಪಟೈಟ್, ಗಾರ್ನೆಟ್, ಎಪಿಡೋಟ್, ಸಿರ್ಕಾನ್-ಇವು ಮುಖ್ಯವಾದವು.

ಪರಿವರ್ತಿತ ಕಲ್ಲುಗಳಲ್ಲಿ ನೀಸ್ ಮುಖ್ಯವಾದದ್ದು. ಸ್ಫಟಿಕಾಕೃತಿಯಾದ ಮೇಲೆ ಈ ಕಲ್ಲು ಪದರ ಪದರವಾಗುತ್ತದೆ. ಟ್ರ್ಯಾಪ್ ಮತ್ತು ಬೆಸಾಲ್ಟ್‌ ಸಣ್ಣ ಕಣಗಳುಳ್ಳ ಸ್ಫಟಿಕಾಕೃತಿಯ ಕಲ್ಲುಗಳು. ಮರಳು ಕಲ್ಲಿನ ಪರಿವರ್ತನೆಯಿಂದ ಕ್ವಾರ್ಟೈಜರುಗಳು ಉತ್ಪತ್ತಿಯಾಗುತ್ತಿವೆ. ಮಲೆನಾಡಿನಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ವಿಶೇಷವಾಗಿ ದೊರೆಯುವ ಜಮ್ಮಿಟ್ಟಿಗೆಯಲ್ಲಿ ಮಣ್ಣು ಕಬ್ಬಿಣವೂ ಹೆಚ್ಚಾಗಿ ಬೆರೆತಿರುತ್ತವೆ.; ಇದನ್ನು ಇಟ್ಟಿಗೆಗಳಿಗೆ ಬದಲಾಗಿ ಕಟ್ಟಡದ ಗೋಡೆಗಳಲ್ಲಿಯೂ ತಳಪಾಯದಲ್ಲಿಯೂ ಬಳಸುತ್ತಾರೆ.

ಹಾರ್ನ್‌ಬ್ಲೆಂಡ್, ಕ್ಲೋರೈಟ್, ಕ್ಯಾಲ್ಸೈಟ್ ಮತ್ತು ಅಭ್ರಕ ಇವುಗಳ ಷಿಸ್ಟುಗಳು ಪದರ ಪದರವಾಗಿ ನಯವಾದ ಪರಿವರ್ತನೆಯಾದ ಕಲ್ಲುಗಳು. ಇವು ಅಗ್ನಿಜನ್ಯವಾಗಿದ್ದರೂ ಇರಬಹುದು. ಜಲಜನ್ಯಗಳಾಗಿದ್ದರೂ ಇರಬಹುದು. ಕ್ಯಾಲ್ಸಿಯಂ ಕಾರ್ಬೊನೇಟ್ ಇರುವ ಕಲ್ಲುಗಳು ಸುಣ್ಣಕಲ್ಲುಗಳು. ಹಾಗೆಯೇ ಸಿಲಿಕ ವಿಶೇಷವಾಗಿರುವವು ಮರಳು ಕಲ್ಲುಗಳು. ಸ್ಲೇಟುಗಳಲ್ಲಿ ನಯವಾದ ಪದರಗಳಿರುತ್ತವೆ. ಕಟ್ಟಡಗಳಲ್ಲಿ ಉಪಯೋಗಿಸುವ ಕಲ್ಲುಗಳನ್ನು ಬಂಡೆಗಳಿಂದ ಕೆಳಗೆ ಕಂಡ ಕ್ರಮಗಳಲ್ಲಿ ತೆಗೆಯುತ್ತಾರೆ. ೧. ಬಂಡೆಯ ಮೇಲೆ ಬೆಂಕಿಯನ್ನು ಹಾಕಿ ಸುಡುವುದು. ೨. ಕರಿಯ ಮದ್ದು, ಡೈನಮೈಟ್, ಮೊದಲಾದ ಸ್ಫೋಟಕಗಳನ್ನು ಬಳಸುವುದು. ೩. ಉಳಿಗಳಿಂದಲೂ ಸೀಳಬಹುದು. ಬಂಡೆಯಿಂದ ತೆಗೆದ ಕಲ್ಲುಗಳನ್ನು ಉಪಯೋಗಕ್ಕೆ ತಕ್ಕಹಾಗೆ ನಯವಾಗಿ ಮಾಡಬೇಕು. ಕಟ್ಟಡಗಳಲ್ಲಿ ಬಳಸುವ ಕಲ್ಲುಗಳ ತಳ ಮಟ್ಟವಾಗಿಯೂ ಪಕ್ಕಗಳು ಲಂಬವಾಗಿಯೂ ಇರುವಂತೆ ಉಳಿಗಳಿಂದ ನಯವಾಗಿ ಮಾಡಬೇಕು. ಈ ಕಲ್ಲುಗಳಲ್ಲಿ ಉಬ್ಬುಗಳು ೧/೮ ಅಂಗುಲದಷ್ಟಿದ್ದರೆ ಒಂದು ನೂಲಿನ ನಯವೆಂದೂ ೧/೧೬ ಅಂಗುಲವಿದ್ದರೆ ಎರಡು ನೂಲಿನ ನಯವೆಂದೂ ೧/೨೪ ಅಂಗುಲವಿದ್ದರೆ ಮೂರು ನೂಲಿನ ನಯವೆಂದೂ ವಾಡಿಕೆಯಾಗಿ ಹೇಳುತ್ತಾರೆ.

ನಯವಾದ ಕಂಬಗಳ ಪೀಠಗಳು, ಕಂಬಗಳು, ತಲೆಗಲ್ಲುಗಳು ಕಟ್ಟಡಗಳ ಮೂಲೆಕಲ್ಲುಗಳು, ಕಮಾನಿನ ಕಲ್ಲುಗಳು-ಇವನ್ನು ಹೆಚ್ಚಿನ ಶ್ರಮದಿಂದ ನುರಿತ ಕೆಲಸಗಾರರು ತಯಾರಿಸುತ್ತಾರೆ. ಕಟ್ಟಡಗಳ ಹೊರಭಾಗಗಳಲ್ಲಿ ಉಪಯೋಗಿಸಿರುವ ಕಲ್ಲುಗಳು ಬಿಸಿಲು, ಮಳೆ, ಗಾಳಿಗಳ ಹೊಡೆತದಿಂದ ಕಾಲಾನುಕ್ರಮದಲ್ಲಿ ಕ್ಷೀಣವಾಗುತ್ತವೆ. ಹಳೆಯ ದೇವಸ್ಥಾನಗಳಲ್ಲಿ ಕಲ್ಲುಗಳ ಸಂದುಗಳಲ್ಲಿ ಗಿಡಗಳು ಹುಟ್ಟಿ ಬೆಳೆದು ಅನಾಹುತಗಳನ್ನು ಮಾಡುತ್ತವೆ. ಹೀಗಾಗಿ ಎಷ್ಟೊ ದೇವಾಲಯಗಳು ಬಿದ್ದುಹೋಗಿವೆ. ಇಲ್ಲೆಲ್ಲ ಸೂಕ್ತ ರಕ್ಷಣೋಪಾಯಗಳು ಅಗತ್ಯ. (ಎಚ್.ಸಿ.ಕೆ.)

ಉಲ್ಲೇಖ ಬದಲಾಯಿಸಿ

"https://kn.wikipedia.org/w/index.php?title=ಕಲ್ಲು&oldid=849301" ಇಂದ ಪಡೆಯಲ್ಪಟ್ಟಿದೆ