ತಿರುಪತಿ ಗಿರಿವಾಸ ಶ್ರೀವೆಂಕಟೇಶ ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ... ಎಂಬ ಗೀತೆಯನ್ನು ಕೇಳಿದ್ದೀರಲ್ಲವೇ. ತಿರುಪತಿಯಲ್ಲಿ ನೆಲೆಸಿರುವ ಶ್ರೀನಿವಾಸ, ವೆಂಕಟೇಶ, ವೆಂಕಟೇಶ್ವರ, ಗೋವಿಂದ ಎಂಬೆಲ್ಲಾ ಹೆಸರಿನಿಂದ ಭಕ್ತರನ್ನು ಹರಸಲು ತಿರುಮಲೆಯ ಮೇಲೆ ನೆಲೆ ನಿಂತಿದ್ದಾರೆ.

ಆದರೆ ಎಲ್ಲರಿಗೂ ತಿರುಪತಿಗೆ ಹೋಗಿ ಗೋವಿಂದನ ದರ್ಶನ ಪಡೆಯುವುದು ಸಾಧ್ಯವಿಲ್ಲದ ಮಾತು. ಹೀಗಾಗೇ ಶ್ರೀನಿವಾಸದೇವರು ನಾನಾ ಪುಣ್ಯಕ್ಷೇತ್ರಗಳಲ್ಲಿ ನೆಲೆ ನಿಂತಿದ್ದಾರೆ ಎನ್ನುತ್ತದೆ ಪುರಾಣ. ಬ್ರಹ್ಮಾನಂದ ಪುರಾಣದ ರೀತ್ಯ ಇರುವುದು ಒಂದೇ ಒಂದು ತಿರುಪತಿಯಲ್ಲ. ಭರತವರ್ಷದಲ್ಲಿ ೧೦೮ ತಿರುಪತಿಗಳಿವೆ ಎನ್ನುತ್ತದೆ ಪುರಾಣ.

ಇಂಥ ೧೦೮ ತಿರುಪತಿಗಳಲ್ಲಿ ಬಂಗಾರ ತಿರುಪತಿ ಎಂದು ಖ್ಯಾತವಾದ ಗುಟ್ಟಹಳ್ಳಿಯೂ ಒಂದು. ಕೋಲಾರಜಿಲ್ಲೆಯ ಕೆ.ಜಿ.ಎಫ್.ಗೆ ಸನಿಹದಲ್ಲಿರುವ ಗುಟ್ಟಹಳ್ಳಿಯ ಬೆಟ್ಟದ ಮೇಲೆ ಪದ್ಮಾವತಿ ಸಮೇತವಾಗಿ ಶ್ರೀನಿವಾಸ ನೆಲೆಸಿದ್ದಾರೆ ಹಾಗು ಭಕ್ತರನ್ನು ಹರಸುತ್ತಿದ್ದಾರೆ. ಹೀಗಾಗೇ ಈ ಕ್ಷೇತ್ರಕ್ಕೆ ಬಂಗಾರು ತಿರುಪತಿ ಎಂಬ ಹೆಸರೂ ಬಂದಿದೆ.

ಈ ಕ್ಷೇತ್ರದಲ್ಲಿ ಶ್ರೀನಿವಾಸದೇವರು ಒಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಲಕ್ಷ್ಮೀ ಹಾಗು ಪದ್ಮಾವತಿಯರು ಮತ್ತೊಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಈ ಕ್ಷೇತ್ರದಲ್ಲಿ ಭೃಗು ಮಹರ್ಷಿಗಳು ತಪವನ್ನಾಚರಿಸಿದರು ಎನ್ನುತ್ತದೆ ಇತಿಹಾಸ. ಇಲ್ಲಿರುವ ಬಾಲಾಜಿಯ ಮೂರ್ತಿ ಮನೋಹರವಾಗಿದ್ದು, ಇಲ್ಲಿ ವೆಂಕಟರಮಣ ಏಕಾಂತ ಶ್ರೀನಿವಾಸ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಿದ್ದಾರೆ.

ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ದಟ್ಟವಾದ ಅರಣ್ಯವೂ ಇದ್ದು, ಹಚ್ಚ ಹಸುರಿನ ವನರಾಶಿಯ ಸುಂದರ ತಾಣದಲ್ಲಿ ಶ್ರೀನಿವಾಸ ದೇವರು ಕಲಿಯುಗದ ಆರಂಭದಲ್ಲೇ ನೆಲೆನಿಂತನೆನ್ನುತ್ತಾರೆ ಇಲ್ಲಿನ ಅರ್ಚಕರು.

ಚಿತ್ರಭೃಗು ಮಹರ್ಷಿ ಅಹಂಕಾರದಿಂದ ನಾರಾಯಣನ ವಕ್ಷಸ್ಥಳಕ್ಕೆ ಒದ್ದಾಗ, ಕುಪಿತಗೊಂಡ ಲಕ್ಷ್ಮೀ ಕರವೀರಪುರಕ್ಕೆ ಹೋಗಿ ನೆಲೆಸುತ್ತಾಳೆ. ಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬಂದ ವಿಷ್ಣು, ಶ್ರೀನಿವಾಸನಾಗುತ್ತಾನೆ. ತ್ರೇತಾಯುಗದಲ್ಲಿ ರಾಮನಾಗಿದ್ದಾಗ, ವೇದಾವತಿಗೆ ಕೊಟ್ಟ ವರವನ್ನು ಈಡೇರಿಸಲು ಪದ್ಮಾವತಿಯನ್ನು ವರಿಸುತ್ತಾನೆ.

ನವದಂಪತಿಗಳು ಶೇಷಾಚಲದಲ್ಲಿ ವಿಹರಿಸುತ್ತಿದ್ದಾಗ, ಅಲ್ಲಿಗೆ ಬಂದ ಲಕ್ಷ್ಮೀ – ಪದ್ಮಾವತಿಯರ ನಡುವೆ ಕಲಹವೇರ್ಪಡುತ್ತದೆ. ಆಗ ಏನೂ ಮಾತನಾಡದೆ ನಿಂತ ವಿಷ್ಣುವನ್ನು ಲಕ್ಷ್ಮೀ ಏಕೆ ಕಲ್ಲಾಗಿ ನಿಂತಿದ್ದೀರಿ ಎನ್ನಲು ಶ್ರೀನಿವಾಸ ಶೇಷಾಚಲದಲ್ಲಿ ಕಲ್ಲಾಗಿ ನಿಲ್ಲುತ್ತಾನೆ. ಹೀಗೆ ನೆಲೆನಿಂತ ಬಂಗಾರದ ನಿಕ್ಷೇಪದಿಂದ ಕೂಡಿದ ಶೇಷಾಚಲವೇ ತಿರುಪತಿ, ಅದುವೇ ಬಂಗಾರು ತಿರುಪತಿ ಎಂಬುದು ಭಕ್ತರ ನಂಬಿಕೆ.

ಇಲ್ಲಿ ನೆಲೆನಿಂತಿರುವ ಶ್ರೀನಿವಾಸ ದೇವರನ್ನು ಉಡುಪಿಯ ಶ್ರೀಕೃಷ್ಣನನ್ನು ಕನಕನ ಕಿಂಡಿಯಲ್ಲಿ ನೋಡುವಂತೆ ನೋಡಬೇಕು. ವೆಂಕಟೇಶನನ್ನು ಹೀಗೆ ನೋಡುವುದಕ್ಕೆ ನೇತ್ರ ದರ್ಶನ ಎಂದೂ ಹೆಸರುಂಟು. ಪ್ರತಿವರ್ಷ ಮಾಘ ಮಾಸದಲ್ಲಿ ಈ ಕ್ಷೇತ್ರದಲ್ಲಿ 9 ದಿನಗಳ ಕಾಲ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಬೆಟ್ಟದ ಮೇಲಿರುವ ಶ್ರೀನಿವಾಸದೇವರ ಕಾಣಲು ಮೆಟ್ಟಿಲುಗಳನ್ನೇರಿ ಹೋಗಬೇಕು. ಮಾರ್ಗದಲ್ಲಿ ಗಣಪತಿ, ಆಂಜನೇಯನ ದರ್ಶನ ಪಡೆದು ಸಾಗಿದರೆ ಬೆಟ್ಟದ ಮೇಲೆ ಶ್ರೀನಿವಾಸನ ಕಾಣಬಹುದು. ಅಲ್ಲಿಂದ ಇಳಿದು ಬಂದು ಎದುರು ಇರುವ ಮತ್ತೊಂದು ಬೆಟ್ಟವನ್ನೇರಿದರೆ ಅಲ್ಲಿ ತಾಯಿ ಶ್ರೀಲಕ್ಷ್ಮೀ ಹಾಗೂ ಪದ್ಮಾವತಿಯರ ದರ್ಶನ ಭಾಗ್ಯ ಲಭ್ಯ. ಬೆಟ್ಟದ ದೇವಾಲಯದಲ್ಲಿ ಸುಂದರವಾದ ಗರುಡನ ಮೂರ್ತಿ ಗಮನಸೆಳೆಯುತ್ತದೆ.

ಇಲ್ಲಿಗೆ ಬರುವ ಭಕ್ತಾದಿಗಳು ಕಲ್ಯಾಣಿಯಲ್ಲಿ ಇದ್ದು ದೇವರ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ನಿಂತು ಸುಂದರ ಪ್ರಕೃತಿಯನ್ನು ನೋಡುವುದೇ ಒಂದು ಸೊಬಗು. (ourtemples.in ನಲ್ಲಿ ಟಿ.ಎಂ. ಸತೀಶ್ ಅವರು ಬರೆದ ಲೇಖನ ಇದು. http://www.ourtemples.in/bangaratirupati.html Archived 2018-08-06 ವೇಬ್ಯಾಕ್ ಮೆಷಿನ್ ನಲ್ಲಿ.