ಫ್ರಾನ್ಸಿಸ್ ದಾಂತಿ

ಹಿರಿಯ ಸಮಾಜಸೇವಕ ಫ್ರಾನ್ಸಿಸ್ ದಾಂತಿಯವರು ‘’’ಶ್ರೀದಾಂತಿ’’’ ಎಂಬ ಕಾವ್ಯನಾಮದಲ್ಲಿ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು.

ಪ್ರೀತಿಯ ಶಿಕ್ಷಕ

ಬದಲಾಯಿಸಿ

೩೦-೦೬-೧೯೨೨ರಲ್ಲಿ ಜನಿಸಿದ ಫ್ರಾನ್ಸಿಸರು ಹರೆಯಕ್ಕೆ ಕಾಲಿಡುವ ವೇಳೆಗಾಗಲೇ ತಂದೆಯವರು ತೀರಿಕೊಂಡಿದ್ದರಿಂದ ಕುಟುಂಬದ ಸಂಪೂರ್ಣ ಹೊಣೆ ಇವರ ಮೇಲೆ ಬಿತ್ತು. ಆಗ ಅವರ ಶಿಕ್ಷಣ ಎಂಟನೇ ತರಗತಿಯವರೆಗಿನ ಓದು ಅಷ್ಟೇ. ಹೆಚ್ಚಿನ ಶಿಕ್ಷಣಕ್ಕೆ ಊರಲ್ಲಿ ಅವಕಾಶವಿರಲಿಲ್ಲ. ಗೇಣಿಕೃಷಿಯನ್ನೇ ನಂಬಿ ಬದುಕುವ ಹಾಗೂ ಇರಲಿಲ್ಲ. ತಾತ್ಕಾಲಿಕವಾಗಿ ಅವರು ಅಲೆವೂರಿನ ಸುಬೋಧಿನಿ ಕಿರಿಯ ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ಸೇರಿ ಸುಮಾರು ಎರಡು-ಮೂರು ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಅವರು ಶಿಕ್ಷಕ ತರಬೇತಿಗಾಗಿ ಮಂಗಳೂರಿನ ಟೀಚರ್ಸ್ ಟ್ರೇನಿಂಗ್ ಸ್ಕೂಲನ್ನು ಸೇರಿ ಎಲ್ಲರೂ ಅಚ್ಚರಿ ಪಡುವಂತೆ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿಯೇ ಪ್ರಥಮ ಸ್ಥಾನ ಪಡೆದು ಸ್ವರ್ಣಪದಕವನ್ನು ಪಡೆದರು. ಶಿಕ್ಷಕ ತರಬೇತಿ ಪೂರೈಸಿದ ಶ್ರೀ ದಾಂತಿಯವರು ಅಲೆವೂರಿನ ಸುಬೋಧಿನಿ ಶಾಲೆ, ಮೂಡುಬೆಳ್ಳೆ ಚರ್ಚ್ ಶಾಲೆ, ಕುತ್ವಾಡಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಮ್ಮತನ ಮೆರೆದು ಊರ ಜನಕ್ಕೆ ಪ್ರೀತಿಯ ದಾಂತಿ ಮಾಸ್ಟ್ರು ಆದರು.

ಸಮಾಜಮುಖಿ

ಬದಲಾಯಿಸಿ

ದಾಂತಿಯವರು ಸಾರ್ವಜನಿಕರೊಂದಿಗೆ ವ್ಯವಹರಿಸುವ ಚತುರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಟಿ.ಏ.ಪೈಯವರು ೧೯೬೦ರಲ್ಲಿ ಅವರನ್ನು ಸಿಂಡಿಕೇಟ್ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಹಾಗೂ ಪ್ರಚಾರ ಅಧಿಕಾರಿಯಾಗಿ ಸೇರಿಸಿಕೊಂಡರು. ಇಪ್ಪತ್ತು ವರ್ಷಗಳ ಕಾಲ ಲವಲವಿಕೆಯಿಂದ ವೃತ್ತಿ ನಿರ್ವಹಿಸಿದ ದಾಂತಿಯವರು ಬ್ಯಾಂಕನ್ನು ಜನಸಾಮಾನ್ಯರೆಡೆಗೆ ಒಯ್ದರು. ತಾನು ಸಮಾಜದಿಂದ ಬೆಳೆದಿದ್ದೇನೆ; ಸಮಾಜದ ಬೆಳವಣಿಗೆಯಲ್ಲಿ ತಾನೂ ಪಾಲುಗೊಳ್ಳಬೇಕು ಎಂಬ ತುಡಿತವೇ ಅವರನ್ನು ಸಮಾಜಮುಖಿಯನ್ನಾಗಿ ರೂಪಿಸಿತ್ತು. ಯಾವುದೇ ಸಮಸ್ಯೆ ಇರಲಿ, ಜಗಳ ಇರಲಿ ದಾಂತಿ ಮಾಸ್ಟರಲ್ಲಿಗೆ ಹೋದರೆ ಸಮರ್ಪಕ ಪರಿಹಾರ ಸಿಗುತ್ತದೆ ಎಂಬುವಂತೆ ಅವರು ಜನಜನಿತರಾಗಿದ್ದರು.

ಕ್ರಿಯಾಶೀಲ ವ್ಯಕ್ತಿತ್ವ

ಬದಲಾಯಿಸಿ

ದಾಂತಿಯವರೆಂದರೆ ಎಲ್ಲರಿಗೂ ಪ್ರೀತಿ. ಇವರಿಗೂ ಪ್ರೀತಿಗಿಂತ ದೊಡ್ಡ ವಸ್ತು ಬೇರೆ ಯಾವುದೂ ಇರಲಿಲ್ಲ. ’’ನಿನ್ನನ್ನು ನೀನು ಪ್ರೀತಿಸುವಷ್ಟೆ ನಿನ್ನ ನೆರೆಯವರನ್ನೂ ಪ್ರೀತಿಸು; ನಿನಗೆ ಬೇರೆಯವರು ಯಾವುದನ್ನು ಮಾಡಬಾರದು ಎಂದು ಇಚ್ಛಿಸುವಿಯೊ ಅದನ್ನು ನೀನೂ ಬೇರೆಯವರಿಗೆ ಮಾಡಬೇಡ”’ ಇತ್ಯಾದಿ ಯೇಸುವಿನ ನುಡಿಗಳನ್ನು ತಮ್ಮ ಹೃದಯಕ್ಕೆ ತಂದುಕೊಂಡವರು ದಾಂತಿಯವರು. ತಮ್ಮ ಮನೆಯಲ್ಲಿ ಕ್ರೈಸ್ತ ಹಬ್ಬಗಳ ಜೊತೆಗೆ ಇತರ ಹಬ್ಬಗಳನ್ನೂ ಆಚರಿಸುತ್ತಿದ್ದರು. ದೀಪಾವಳಿಯಂದು ದೀಪ ಹಚ್ಚುತ್ತಿದ್ದರು, ಗೋಪೂಜೆಯಂದು ಗೋವುಗಳನ್ನು ಸಿಂಗರಿಸುತ್ತಿದ್ದರು. ಒಟ್ಟಿನಲ್ಲಿ ಅವರದು ಸರ್ವಧರ್ಮ ಸಮದೃಷ್ಟಿ. ದಾಂತಿಯವರು ಕಲಾಸಂಪನ್ನರಾಗಿದ್ದರು. ಸಾಹಿತ್ಯ, ಸಂಗೀತ, ಯಕ್ಷಗಾನ, ಭೂತಕೋಲ ಇವೆಲ್ಲ ಅವರಿಗೆ ಪ್ರಿಯವೆ. ಯಾವುದು ಬದುಕನ್ನು ಸಮೃದ್ಧಗೊಳಿಸುತ್ತದೆ ಅದೆಲ್ಲ ನಮಗೆ ಬೇಕು ಎಂಬ ಜಾಯಮಾನದವರು ಅವರು.

ಸಾಹಿತ್ಯದ ಹೊಂಬೆಳಕು

ಬದಲಾಯಿಸಿ

ದಾಂತಿಯವರು ಪ್ರಗತಿಶೀಲ ಚಳವಳಿಯ ಪ್ರಮುಖ ಕತೆಗಾರರಲ್ಲಿ ಒಬ್ಬರು. ೧೯೪೦-೬೦ರ ಅವಧಿಯಲ್ಲಿ ಸಾಹಿತ್ಯ ಕೃಷಿ ನಡೆಸಿ ಸಮಾಜದ ತಲ್ಲಣಗಳಿಗೆ ಹೆಚ್ಚು ಸ್ಪಂದಿಸಿದ್ದಾರೆ. ‘ರಾಯರ ಬಾವಿ’, ‘ಕನಸು’, ‘ನಮ್ಮ ಹಣೆಬರಹ, ‘ಕಣ್ಣೀರ ಕಾರಣ’, ‘ಇಗೋ ಹಾಕಿಕೋ ಚೂರಿ’, ‘ಮೇರಿಬಾಯಿ’ ಇತ್ಯಾದಿ ಕತೆಗಳು ಅಂದಿನ ಸಮಾಜದ ವೈಪರೀತ್ಯಗಳಿಗೆ ಅವರು ತೋರಿದ ಪ್ರತಿಕ್ರಿಯೆಯೇ ಆಗಿದೆ.ಅಳಿಯದ ಮಹಾಚೇತನ ಯೇಸು ಪುಸ್ತಕದಲ್ಲಿ ದಾಂತಿಯವರ ಪ್ರತಿಭೆ, ವಿದ್ವತ್ತು, ಭಾಷಾ ಪ್ರೌಡಿಮೆ, ಜೀವಪರ ಚಿಂತನೆ, ಮಾನವ ಪ್ರೇಮ, ಆಧ್ಯಾತ್ಮದ ಒಲವು, ತಂತ್ರ ಕೌಶಲ ಇವೆಲ್ಲ ಸಮರ್ಥವಾಗಿ ದುಡಿದುಕೊಂಡಿವೆ. ೧೯೫೨ರಲ್ಲಿ ಸುಬೋಧಿನಿ ಪುಸ್ತಕ ಮಾಲೆಯನ್ನು ಆರಂಭಿಸಿ ನಾಟಕ, ಜೀವನ ಚರಿತ್ರೆ, ಮಕ್ಕಳ ಪದ್ಯಗಳನ್ನು ಪ್ರಕಟಿಸಿ ಮಕ್ಕಳ ಮನಸ್ಸನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಅವರೇ ಆಡಿಸುತ್ತಿದ್ದ ಕವಿವರ ಕಾಳಿದಾಸ, ವೀರಬಾದಳ, ತ್ಯಾಗಮಯಿ ಪನ್ನಾದಾಸಿ, ಲವಕುಶ, ಸತ್ಯ ಹರಿಶ್ಚಂದ್ರ, ಮುತ್ತಿನ ನತ್ತು (ಭಕ್ತ ಪುರಂದರದಾಸರು) ಸತ್ಯವಾನ್ ಸಾವಿತ್ರಿ, ಸಿಪಾಯಿ ದಂಗೆ, ಟಿಪ್ಪು ಸುಲ್ತಾನ್, ಸಂತ ಲಾರೆನ್ಸರು ಇತ್ಯಾದಿ ನಾಟಕಗಳು ಅತ್ಯಂತ ಜನಪ್ರಿಯವಾಗಿದ್ದವು.

ಕನ್ನಡ ಪ್ರೇಮ

ಬದಲಾಯಿಸಿ

ಕೊಂಕಣಿ ಮಾತ್ಯಭಾಷೆಯವರಾದರೂ ದಾಂತಿಯವರ ಕನ್ನಡ ಪ್ರೇಮ ಅನನ್ಯವಾದುದು. ಕರ್ನಾಟಕದವರು ಕನ್ನಡವನ್ನು ಪ್ರೀತಿಸಬೇಕು, ಕನ್ನಡದ ಬಗ್ಗೆ ಗೌರವ ತಾಳಬೇಕು, ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎಂಬ ಧೋರಣೆಯವರಾಗಿದ್ದರು ಅವರು. ಮನೆಯಲ್ಲಿ ತಮ್ಮ ಮಕ್ಕಳು ಶುದ್ಧಗನ್ನಡ ಬಳಸುವಂತೆ ಎಚ್ಚರ ವಹಿಸುತ್ತಿದ್ದರು. ಸಾಹಿತ್ಯ ಅವರಿಗೆ ಸದಾ ಸುಖಕೊಡುವ ಸಾಧನವಾಗಿತ್ತು. ಮಂಗಳೂರಿನ ಕಥೋಲಿಕ್ ಸಭೆಯು ದಾಂತಿ ಸ್ಮಾರಕ ಸಾಹಿತ್ಯ ಟ್ರಸ್ಟ್ನ್ನು ಸ್ಥಾಪಿಸಿ ಪ್ರತಿ ವರುಷ ಶ್ರೇಷ್ಠ ಕನ್ನಡ ಸಾಹಿತ್ಯ ಪುರಸ್ಕಾರವನ್ನು ನೀಡುತ್ತಿದೆ. ೨೩-೧೧-೧೯೯೧ರಂದು ಯೇಸುವಿನ ಪಾದ ಸೇರಿದ ಶ್ರೀ ದಾಂತಿಯವರು ಇಂದು ನಮ್ಮೊಂದಿಗಿಲ್ಲ ಅದಕ್ಕಿಂತ ವಿಷಾದವೆಂದರೆ ಅವರು ರಚಿಸಿದ ಎಲ್ಲ ಸಾಹಿತ್ಯ ಕೃತಿಗಳು ನಮಗೀಗ ಲಭ್ಯವಿಲ್ಲ. ಇರುವಷ್ಟು ಕೃತಿಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಡಾ. ಸಬೀಹ ಭೂಮಿಗೌಡರು ಕರಾವಳಿ ಕತೆಗಳು ಎಂಬ ತಮ್ಮ ಸಂಶೋಧನೆ ಸಂದರ್ಭದಲ್ಲಿ ದಾಂತಿಯವರ ಕತೆಗಳನ್ನು ಬಳಸಿಕೊಂಡಿರುವುದು ಮತ್ತು ಡಾ. ಬಿ ಜನಾರ್ದನ ಭಟ್ಟರು ತಾವು ಸಂಪಾದಿಸಿದ ಶತಮಾನದ ಕತೆಗಳು ಸಂಪುಟದಲ್ಲಿ ಅವರ ಎರಡು ಕತೆಗಳನ್ನು ಸೇರಿಸಿರುವುದು ಇಲ್ಲಿ ಉಲ್ಲೇಖನೀಯ.