ಫರ್ಡಿನಂಡ್ ಝಿರ್ಕೆಲ್

ಫರ್ಡಿನಂಡ್ ಝಿರ್ಕೆಲ್ (1838-1912). ಜರ್ಮನಿಯ ಸುಪ್ರಸಿದ್ಧ ಭೂ, ಖನಿಜ ಮತ್ತು ಶಿಲಾವಿಜ್ಞಾನಿ.

1838ರ ಮೇ ತಿಂಗಳ 20ರಂದು ಬಾನ್ ನಗರದಲ್ಲಿ ಜನನ. ಅಲ್ಲಿಯ ವಿಶ್ವವಿದ್ಯಾಲಯವನ್ನು 1855ರಲ್ಲಿ ಪ್ರವೇಶಿಸಿ ಗಣಿ ಎಂಜಿನಿಯರ್ ಆಗುವ ಉದ್ದೇಶದಿಂದ ಖನಿಜ ಮತ್ತು ರಸಾಯನ ವಿಜ್ಞಾನಗಳನ್ನು ಅಭ್ಯಸಿಸಿದ. 1859-1860ರ ಅವಧಿಯಲ್ಲಿ ಫಾರೋದ್ವೀಪಗಳನ್ನೂ ಐಸ್‍ಲೆಂಡ್, ಇಂಗ್ಲೆಂಡ್ ಮತ್ತು ಸ್ಕಾಟ್‍ಲೆಂಡುಗಳನ್ನೂ ಸಂದರ್ಶಿಸಿದ. ಐಸ್‍ಲೆಂಡಿನಲ್ಲಿ ತಾನು ನಡೆಸಿದ ಪರಿಶೀಲನೆಯನ್ನು ಆಧರಿಸಿ ಮಹಾ ಪ್ರಬಂಧವೊಂದನ್ನು ಬರೆದು ಬಾನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನುಗಳಿಸಿದ (1861). ಪ್ರಾರಂಭದಲ್ಲಿ ಕೆಲಕಾಲ ವಿಯೆನ್ನಾದಲ್ಲಿ ಭೂ ಮತ್ತು ಖನಿಜ ವಿಜ್ಞಾನಿಗಳ ಅಧ್ಯಾಪಕನಾಗಿ ಕೆಲಸಮಾಡಿ 1863ರಲ್ಲಿ ಲೆಂಬರ್ಗ್ ವಿಶ್ವವಿದ್ಯಾಲಯದಲ್ಲಿ ಭೂ ಮತ್ತು ಖನಿಜ ವಿಜ್ಞಾನಿಗಳ ಪ್ರೊಫೆಸರ್ ಹುದ್ಧೆಗೆ ನೇಮಕಗೊಂಡ. ಅನಂತರ 1868 ಮತ್ತು 1870ರಲ್ಲಿ ಅನುಕ್ರಮವಾಗಿ ಕೀಲ್ ಮತ್ತು ಲೀಪ್‍ಜಿಗ್ ವಿಶ್ವವಿದ್ಯಾಲಯಗಳ ಪ್ರಾಚಾರ್ಯ ಸ್ಥಾನವನ್ನು ಪಡೆದ. 1909ರಲ್ಲಿ ಸೇವೆಯಿಂದ ವಿಶ್ರಾಂತನಾಗಿ ಬಾನ್‍ಗೆ ಮರಳಿದ. 1912ರ ಜೂನ್ 11ರಂದು ತನ್ನ ಹುಟ್ಟೂರಿನಲ್ಲಿಯೇ ಮರಣಹೊಂದಿದ.

ಝಿರ್ಕೆಲನು ಸೂಕ್ಷ್ಮದರ್ಶಕೀಯ ಶಿಲಾವಿಜ್ಞಾನದ (ಮೈಕ್ರಾಸ್ಕೋಪಿಕ್ ಪೆಟ್ರೊಗ್ರಫಿ) ತಾಂತ್ರಿಕ ಜ್ಞಾನವನ್ನು ಪಡೆಯುವುದಕ್ಕಿಂತ ಮುನ್ನ ಲೆಹರ್ ಬುಕ್ ಡೆರ್ ಪೆಟ್ರ್ರೊಗ್ರಫಿ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದ. 1868ರಲ್ಲಿ ಇಂಗ್ಲೆಂಡನ್ನು ಪುನಃ ಸಂದರ್ಶಿಸಿದಾಗ ಸಾರ್ಬಿಯಿಂದ ಈ ಹೊಸ ತ್ರಾಂತ್ರಿಕ ಜ್ಞಾನವನ್ನು ಕಲಿತು, “ಯೂಬರ್ ದಿ ಮೈಕ್ರಾಸ್ಕೋಪಿಶೆ ಜುಸಾಮೆನ್‍ಸೆಟ್‍ಜುಂಗ್ ಉಂಟ್‍ಸ್ಟ್ರಕ್ಚರ್ ಡೆರ್ ಬೆಸಾಲ್ಟ್‍ಗೆಸ್ಟೈನ್” ಎಂಬ ಬಹುಮುಖ್ಯ ಕೃತಿಯನ್ನು 1870ರಲ್ಲಿ ಪ್ರಕಟಿಸಿ ತನ್ನ ಗುರುವಾದ ಸಾರ್ಬಿಗೆ ಅರ್ಪಿಸಿದ. ಇವನಿಗಿಂತಲೂ ಪೂರ್ವದಲ್ಲಿ ಸೂಕ್ಷ್ಮದರ್ಶಕೀಯ ಶಿಲಾವಿಜ್ಞಾನದಲ್ಲಿ ಸಾರ್ಬಿ, ಓಶೌಟ್ಜ್, ಫಾಮ್‍ರಾಥ್ ಮುಂತಾದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರೂ ಈ ವಿಶಿಷ್ಟ ಬಗೆಯ ತಾಂತ್ರಿಕ ಜ್ಞಾನಕ್ಕೆ ಭೂವಿಜ್ಞಾನದಲ್ಲಿ ಒಂದು ಮಹತ್ತ್ವದ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಝಿರ್ಕೆಲ್‍ಗೆ ಸಲ್ಲುತ್ತದೆ. 1873ರಲ್ಲಿ ಪ್ರಕಟಗೊಂಡ “ಮೈಕ್ರಾಸ್ಕೋಪಿಶೆ ಬೆಶಾಫೆನ್ ಹೈತ್‍ದರ್ ಮಿನ್‍ರಾಲಿಯನ್ ಉಂಟ್ ಗೆಸ್ಟೈನ್” ಎಂಬ ಈತನ ಕೃತಿಯ ಮೂಲಕ ಈ ನವೀನ ಜ್ಞಾನ ಎಲ್ಲರಿಗೂ ಲಭ್ಯವಾಯಿತು. “ಗಿಯೊಲೊಗಿಶೆ ಶ್ಕಿಟ್ಜೆ ಫಾನ್ ಡೆರ್ ವೆಸ್ಟ್‍ಕುಸ್ಟೆ ಸ್ಕಾಟಲ್ಯಾಂಡ್ಸ್” ಎಂಬ ಕೃತಿಯಲ್ಲಿ ಆರಾನ್ ನಡುಗಡ್ಡೆಯಲ್ಲಿಯ ಹಲವು ಬಗೆಯ ಶಿಲಾಸಮುದಾಯಗಳ ಸೂಕ್ಷ್ಮದರ್ಶಕೀಯ ಗುಣಗಳನ್ನು ಮೊದಲ ಬಾರಿಗೆ ಝಿರ್ಕೆಲ್ ವಿವರಿಸಿದ್ದಾನೆ (1871). ಕ್ಲೇರೆನ್ಸೆ ಕೀಂಗ್ ಎಂಬಾತ ಝಿರ್ಕೆಲ್‍ನನ್ನು ಪಶ್ಚಿಮ ಅಮೆರಿಕ ಸಂಯುಕ್ತಸಂಸ್ಥಾನಗಳ 40ನೆಯ ಅಕ್ಷಾಂಶ ಶಿಲಾಸಮುದಾಯಗಳನ್ನು ವಿವರಿಸುವುದಕ್ಕಾಗಿ ನೇಮಿಸಿದ. ಝಿರ್ಕೆಲ್ ಬರೆದ ಮೈಕ್ರಾಸ್ಕೋಪಿಕ್ ಪೆಟ್ರೊಗ್ರಫಿ ಎಂಬ ವರದಿ ಈ ಹೊಸ ಜ್ಞಾನವನ್ನು ಅಮೆರಿಕನ್‍ರಿಗೆ ಪರಿಚಯ ಮಾಡಿಕೊಟ್ಟಿತು.

ಝಿರ್ಕೆಲ್ ತನ್ನ ಲೆಹರ್ ಬುಕ್‍ನ್ನು ಹೊಸ ಅನುಭವ ಹಾಗೂ ಜ್ಞಾನದ ಹಿನ್ನೆಲೆಯಲ್ಲಿ ತಿದ್ದಿ, ಅಭಿವೃದ್ಧಿಗೊಳಿಸಿ, ಹೊಸ ಅವೃತ್ತಿಯನ್ನು ಪ್ರಕಟಿಸಿದ (1895-94). ಈ ಗ್ರಂಥ ಅಭಿಜಾತ ಕೃತಿಯೆಂದು ಪರಿಗಣಿತವಾಯಿತು. ಇವನು ಅಗ್ನಿಜನ್ಯ (ಇಗ್ನಿಯಸ್) ಶಿಲೆಗಳನ್ನು ಸಪ್ತವರ್ಗಗಳಾಗಿ ವರ್ಗೀಕರಿಸಿದ. ಪ್ರತಿಯೊಂದು ವರ್ಗವನ್ನೂ ಸಮಕಣರಚನೆಯುಳ್ಳ ಮತ್ತು ಪಾರ್ಫಿರಿ ಹಾಗೂ ಗ್ಲಾಸಿ ಶಿಲೆಗಳೆಂದು ಎರಡು ಭಾಗಗಳಲ್ಲಿ ವಿಭಾಗಿಸಿದ. ಅವನ ವರ್ಗೀಕರಣದಲ್ಲಿ ಕೆಲವು ನ್ಯೂನತೆಗಳಿದ್ದರೂ ಆಗಿನ ಕಾಲದ ಗಮನಾರ್ಹವಾದ ಕೃತಿಗಳಲ್ಲಿ ದಿ ಸ್ಟ್ರಕ್ಚರ್ ಡೆರ್ ವೆರಿಯೋಲೈಟ್ (1875). ಲಿಮೈತ್ ಅವುಸ್ ಡೆರ್ ವೆಲ್ಲಿ ದಿ ಲೆಸ್‍ಪೊನ್ನೆ (1979), ಊಬರ್ ಡೆನ್ ಜಿರ್‍ಕಾನ್ (1880) ಎಂಬುವು ಪ್ರಮುಖ ಕೃತಿಗಳು.

ಸುಪ್ರಸಿದ್ಧ ಶಿಲಾ ವಿಜ್ಞಾನಿಗಳಾದ ಕ್ರಾಸ್, ವಾಶಿಂಗ್ಟನ್, ಪೈನ್‍ಶೆಂಕ್ ಮತ್ತು ವಾನ್‍ವುಲ್ಫ್ ಇವನ ವಿದ್ಯಾರ್ಥಿಗಳು.