ಪ್ರೊಟೆರೊಜೋಯಿಕ್ ಕಲ್ಪ
ನಾಲ್ಕು ಕಲ್ಪಗಳು
೫೪೧ - ೦* | ಫನರೊಜೋಯಿಕ್ |
೨೫೦೦-೫೪೧* | ಪ್ರೊಟೆರೊಜೋಯಿಕ್ |
೪೦೦೦ -೨೫೦೦ * | ಆರ್ಕಿಯನ್ |
೪೬೦೦- ೪೦೦೦ * | ಹಡೇಯನ್ |
*ದಶಲಕ್ಷ ವರುಷಗಳ ಹಿಂದೆ
ಪ್ರೊಟೆರೊಜೋಯಿಕ್ ಕಲ್ಪವು (ಆದಿಜೀವಯುಗ)[೧] ಭೂಗೋಳಿಕ ಕಾಲಮಾನದಲ್ಲಿ ಎರಡನೆಯ ಕಲ್ಪ ಮತ್ತು ಇದರ ಕಾಲಮಾನ ೨೫೦೦ ರಿಂದ ೫೪೨ ±೧.೦ ದಶಲಕ್ಷ ವರುಷಗಳ ಹಿಂದೆ. ಇದನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಎಂದು ಮೂರು ಯುಗಗಳನ್ನಾಗಿ ವಿಭಜಿಸಲಾಗಿದೆ. ಆದಿಜೀವಯುಗ ಕೊನೆಗೊಂಡೊಡನೆ (ಅಂದರೆ ಸುಮಾರು 600 ದಶಲಕ್ಷ ವರ್ಷಗಳ ಹಿಂದೆ) ಪುರಾತನ ಜೀವಯುಗದ ಕೇಂಬ್ರಿಯನ್ ಕಲ್ಪ (ಇಪಕ್) ಪ್ರಾರಂಭವಾಯಿತು. ಆಗ ರೂಪುಗೊಂಡ ಶಿಲಾಶ್ರೇಣಿಗಳ ತಳದಲ್ಲಿರುವ ಅಗಾಧ ಶಿಲಾಸಮುದಾಯಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದು ಹೆಸರು. ಇದು ಭೂಮಿಯ ಇತಿಹಾಸ ಕಾಲದ ಸುಮಾರು ಮುಕ್ಕಾಲು ಭಾಗವನ್ನು ನಿರೂಪಿಸುತ್ತದೆ. ಈ ಶಿಲಾಸಮುದಾಯ ಸಂಪೂರ್ಣವಾಗಿ ಜೀವಾವಶೇಷರಹಿತವಾಗಿದೆ. ಇವುಗಳ ಮೇಲೆ ಸಂಚಯನಗೊಂಡಿರುವ ಶಿಲಾರಾಶಿಗಳಿಂದ ಕಾಲವನ್ನು ಸುಲಭವಾಗಿ ಗುರುತಿಸಬಹುದು.
ಪ್ರೀ ಕೇಂಬ್ರಿಯನ್ ಶಿಲಾರಾಶಿ
ಬದಲಾಯಿಸಿಪ್ರೀ ಕೇಂಬ್ರಿಯನ್ ಶಿಲಾರಾಶಿಯನ್ನು ಕೆಳಭಾಗ ಮತ್ತು ಮೇಲ್ಭಾಗ ಎಂದು ಎರಡು ಭಾಗಗಳನ್ನಾಗಿ ವಿಭಜಿಸಬಹುದು. ಕೆಳಭಾಗ ಮುಖ್ಯವಾಗಿ ಗ್ರಾನೈಟ್ ಮತ್ತು ನೈಸ್ ಮುಂತಾದ ಅಗ್ನಿಶಿಲೆಗಳಿಂದಲೂ, ರೂಪಾಂತರಪಡೆದ ಜಲಜಶಿಲೆಗಳಿಂದಲೂ ಕೂಡಿದೆ. ಮೇಲ್ಭಾಗ ಬಹುಭಾಗ ಜಲಜಶಿಲೆಗಳಿಂದ ಆಗಿದೆ. ಈ ಜಲಜಶಿಲೆಗಳು ನೊರಜುಶಿಲೆ, ಪೆಂಟು ಶಿಲೆ, ಮರಳ ಶಿಲೆ, ಜೇಡು ಶಿಲೆ ಮತ್ತು ಸುಣ್ಣ ಶಿಲೆಗಳಾಗಿವೆ. ಇವುಗಳಲ್ಲಿ ಪ್ರವಾಹ ಪದರ, ನಕಲ ಪದರ ಮುಂತಾದ ಸಾಗರ ಶಿಲೆ ರಚನೆಗಳನ್ನು ಕಾಣಬಹುದು. ಈ ಶಿಲಾಸಮುದಾಯಗಳಲ್ಲಿ ಕೆಳಭಾಗಕ್ಕೆ ಆರ್ಷೇಯ ಶಿಲಾಸಮುದಾಯವೆಂದೂ, ಮೇಲ್ಭಾಗಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದೂ ಹೆಸರು. ಇದು ಅಮೆರಿಕ ದೇಶದ ಅಲ್‍ಗಾಂಕಿಯನ್ ಸಮುದಾಯಕ್ಕೆ ಸಮವಾದುದು. ಕಡಪ ಮತ್ತು ವಿಂಧ್ಯಾ ಶಿಲಾವರ್ಗಗಳು ಈ ಸಮುದಾಯದ ಭಾಗಗಳು. ಇದು ಆದಿ ಜೀವಯುಗದ ಶಿಲಾಸಮುದಾಯ. ಆದಿ ಜೀವಯುಗದ ಶಿಲಾಸ್ಥೋಮ ಆದರ್ಶ ಜಲಜ ಶಿಲೆಗಳಿಂದ ಕೂಡಿ ಸಾವಿರಾರು ಅಡಿಗಳಷ್ಟು ಎತ್ತರವಿರುವ ಶಿಲಾಪದರಗಳ ಗುಂಪು. ಇವಕ್ಕೂ ಮತ್ತು ಆರ್ಷೇಯ ಯುಗದ ಶಿಲಾಸಮುದಾಯಗಳಿಗೂ ಮಧ್ಯದಲ್ಲಿ ದೊಡ್ಡ ಅನನುರೂಪತೆ ಇದೆ. ಇದಕ್ಕೆ ಈವಾರ್ಕೀಯನ್ ಅನನುರೂಪತೆಯೆಂದು ಹೆಸರು. ಈ ಕಾಲದ ಶಿಲಾರಾಶಿಯಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಅನನುರೂಪತೆಗಳಿವೆ. ಶಿಲಾನಿಕ್ಷೇಪದ ಕಾರ್ಯಗಳು ಅನೇಕ ಬಾರಿ ಪುನರಾವರ್ತಿಸಿರುವುದು ತಿಳಿಯುತ್ತದೆ. ಈ ಯುಗದ ಶಿಲೆಗಳು ವರ್ತಮಾನ ಕಾಲದಲ್ಲಿ ನಡೆಯುತ್ತಿರುವ ಶಿಥಿಲೀಕರಣ ಮತ್ತು ಶಿಲಾಸಂಚಯನ ಕಾರ್ಯಗಳಿಂದಲೇ ರೂಪುಗೊಂಡುವು. ಆದರೆ ಇವು ಜೀವಾವಶೇಷ ರಹಿತ. ಈ ಕಾಲದಲ್ಲಿ ಜೀವಿಗಳು ಇದ್ದುವು ಎಂಬುದಕ್ಕೆ ಸಹಜವಾದ ಸಾಕ್ಷ್ಯಗಳಿಲ್ಲ. ಆದರೆ ಅಪ್ರತ್ಯಕ್ಷ ಸಾಕ್ಷ್ಯಗಳಿಂದ ಇಂಥ ಜೀವಿಗಳಿದ್ದುವೆಂದು ಪುಷ್ಟೀಕರಿಸಬಹುದು.
ಶಿಲಾನಿಕ್ಷೇಪರಾಶಿಯನ್ನು ವರ್ತಮಾನಕಾಲ
ಬದಲಾಯಿಸಿಶಿಲಾನಿಕ್ಷೇಪರಾಶಿಯನ್ನು ವರ್ತಮಾನಕಾಲದ ಭೂ ಇತಿಹಾಸದ ಆದಿಯವರೆಗೆ ಸ್ಥೂಲವಾಗಿ ಅವಲೋಕಿಸಿದರೆ ಜೀವವೃಕ್ಷ ಕೇಂಬ್ರಿಯನ್ ಕಾಲದ ಆದಿಯವರೆಗೆ ನಿರಾತಂಕವಾಗಿ ಬೆಳೆದಿರುವುದನ್ನು ಕಾಣಬಹುದು. ಆದರೆ ಇದಕ್ಕೆ ಹಿಂದಿನ ಕಾಲದಲ್ಲಿ ರೂಪುಗೊಂಡ ಶಿಲೆಗಳಲ್ಲಿ ಜೀವಾವಶೇಷದ ಕುರುಹೇ ಇಲ್ಲ. ಕೇಂಬ್ರಿಯನ್ ಯುಗದ ಪ್ರಾರಂಭದಲ್ಲಿ ಸಿಕ್ಕಿರುವ ಜೀವಾವಶೇಷಗಳು ಜೀವವೃಕ್ಷದ ಪ್ರಾರಂಭ ಕಾಲದವಲ್ಲ ಎಂಬುದು ನಮಗೆ ವ್ಯಕ್ತವಾಗುತ್ತದೆ. ಏಕೆಂದರೆ ಕೇಂಬ್ರಿಯನ್ ಕಾಲದ ಜೀವರಾಶಿ ಬಹು ಮುಂದುವರಿದಿದ್ದು ಬೆನ್ನೆಲುಬಿಲ್ಲದ ಎಲ್ಲ ಪ್ರಾಣಿಗಳಿಂದಲೂ ಪ್ರತಿನಿಧಿಸಲ್ಪಟ್ಟಿದೆ. ಆ ಮಟ್ಟವನ್ನು ಮುಟ್ಟಲು ಜೀವಿ ಬಹುಕಾಲದವರೆಗೆ ಸತತವಾಗಿ ವಿಕಾಸಹೊಂದಿದ ಅನಂತರವೇ ಸಾಧ್ಯ. ಅಂದರೆ ಕೇಂಬ್ರಿಯನ್ ಯುಗದಿಂದ ಈಗಿನವರೆಗೆ ಕಾಲಾವಧಿಯ ಪ್ರಮಾಣ ಎಷ್ಟೇ ಆದರೂ ಜೀವರಾಶಿ ಕೇಂಬ್ರಿಯನ್ ಕಾಲಕ್ಕಿಂತ ಬಹಳ ಮುಂಚಿತವಾಗಿ ಇದ್ದು ಅಧಿಕ ವಿಕಾಸ ಹೊಂದಿರಬೇಕು ಎಂಬುದನ್ನು ಶಾಸ್ತ್ರಜ್ಞರು ನಿರ್ಧರಿಸುವರು.
ಭೂ ಇತಿಹಾಸ
ಬದಲಾಯಿಸಿಭೂ ಇತಿಹಾಸದ ಅನೇಕ ಘಟನೆಗಳ ವಿಚಾರದಲ್ಲಿ ನಾವು ಅಜ್ಞರು. ಅವುಗಳಲ್ಲಿ ಆದಿಜೀವಿಗಳ ವಿಚಾರದಲ್ಲಿ ನಮ್ಮ ಅಜ್ಞಾನ ಹೆಚ್ಚು. ಆ ಕಾಲದ ಶಿಲಾಪರಂಪರೆಗಳು ಅಂದಿನ ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾಗಿದ್ದುದೇ ಇದರ ಕಾರಣ. ಇದಕ್ಕೆ ವಿವರಣೆ ನೀಡಲು ಅನೇಕ ವಿಜ್ಞಾನಿಗಳು ಪ್ರಯತ್ನಿಸಿರುವರು. ಅವುಗಳನ್ನು ಈ ರೀತಿ ವರ್ಗೀಕರಿಸಬಹುದು : 1. ಆದಿ ಸಾಗರ; ಈಗಿನ ಸಾಗರಕ್ಕಿಂತ ಬಹು ಭಿನ್ನವಾಗಿತ್ತು. ಆದ್ದರಿಂದ ಆ ಕಾಲದಲ್ಲಿ ನಿಕ್ಷೇಪಗೊಂಡ ಶಿಲೆಗಳು ಜೀವಾವಶೇಷಗಳನ್ನು ಕಾಪಾಡಿ ಕಾದಿರಿಸಲು ಅಸಮರ್ಥವಾಗಿದ್ದುವು. 2. ಆ ಕಾಲದ ಜೀವರಾಶಿ ಬಹಳ ಪುರಾತನವಾಗಿದ್ದುದರಿಂದ ಅವುಗಳಲ್ಲಿ ಗಟ್ಟಿ ಭಾಗಗಳಿರಲಿಲ್ಲ. ಆದ್ದರಿಂದ ಅವುಗಳ ಅವಶೇಷಗಳು ಶಿಲೆಗಳಲ್ಲಿ ಉಳಿಯಲಿಲ್ಲ. 3. ಆ ಕಾಲದ ಸಾಗರಗಳ ನೀರಿನಲ್ಲಿ ವಿಲೀನಗೊಂಡ ಕ್ಯಾಲ್ಸಿಯಂ ಕಾರ್ಬೋನೇಟ್, ಸಿಲಿಕಾ ಮತ್ತು ಇತರ ಅಗತ್ಯವಾದ ವಸ್ತುಗಳಿರಲಿಲ್ಲ. ಆದ್ದರಿಂದ ಅಂದಿನ ಜೀವಿಗಳಿಗೆ ಗಟ್ಟಿ ಭಾಗಗಳನ್ನು ರಚಿಸಿಕೊಳ್ಳಲಾಗಲಿಲ್ಲ. 4. ಆದಿಜೀವಯುಗದ ಶಿಲೆಗಳು ಬಹಳ ಪುರಾತನ. ಅವು ಬಹುವಾಗಿ ರೂಪಾಂತರ ಹೊಂದಿ ಒಂದು ಪಕ್ಷ ಅವುಗಳಲ್ಲಿ ಜೀವಾವಶೇಷಗಳಿದ್ದರೂ ಅವೆಲ್ಲ ಈ ಕಾರಣದಿಂದ ನಾಶವಾಗಿ ಹೋಗಿವೆ.ಈ ವಿವರಣೆಗಳನ್ನು ಪರೀಕ್ಷಿಸೋಣ. ಆದಿಜೀವಯುಗದ ಶಿಲೆಗಳು ಅವುಗಳ ಅನಂತರ ಸಂಚಯನಗೊಂಡ ಶಿಲೆಗಳಂತೆಯೇ ಸಾಗರಜನಿತ ಶಿಲೆಗಳು. ಇವುಗಳಲ್ಲಿ ಅನೇಕ ಶಿಲೆಗಳು, ಅದರಲ್ಲಿಯೂ ಭಾರತದ ಕಡಪ ಮತ್ತು ವಿಂಧ್ಯ ಕಾಲದ ಶಿಲೆಗಳು ಸೂಕ್ಷ್ಮಕಣ ಶಿಲೆಗಳಾಗಿದ್ದು ಜೀವಾವಶೇಷಗಳನ್ನು ಕಾದಿರಿಸಲು ಬಹಳ ಯೋಗ್ಯವಾಗಿವೆ. ಆದ್ದರಿಂದ ಈ ಕಾಲದ ಶಿಲೆಗಳು ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾದುವು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಆದಿಜೀವಿ ಕಾಲದ ಜೀವಿಗಳ ದೇಹಗಳ ಗಟ್ಟಿ ಭಾಗಗಳನ್ನು ಕುರಿತ ವಾದ. ಈ ಯುಗ ಮುಗಿದೊಡನೆ ಬರುವ ಕೇಂಬ್ರಿಯನ್ ಕಲ್ಪದ ಪ್ರಾರಂಭದಲ್ಲೇ ಜೀವಿಗಳಿಗೆ ಗಟ್ಟಿ ಭಾಗ ಉಂಟಾದದ್ದು ಹೇಗೆ? ಅಂಥ ಸನ್ನಿವೇಶ ಹೇಗೆ ಉಂಟಾಯಿತು? ಈ ಆಕ್ಷೇಪಗಳಿಗೆ ಸಮರ್ಥ ವಿವರಣೆ ಇಲ್ಲ. ಆದ್ದರಿಂದ ಈ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೂರನೆಯ ವಾದ ಜೀವಾವಶೇಷಗಳು ರೂಪಾಂತರ ಪಡೆದು ನಾಶವಾಗಿವೆ ಎಂದು. ಇದನ್ನು ಎಲ್ಲ ಪ್ರದೇಶದ ಶಿಲಾ ಸಮುದಾಯಕ್ಕೂ ಅನ್ವಯಿಸಲಾಗುವುದಿಲ್ಲ. ಏಕೆಂದರೆ ಭಾರತದ ಕಡಪ ಮತ್ತು ವಿಂಧ್ಯ ಶಿಲಾಸಮುದಾಯಗಳು ಹೆಚ್ಚು ಚಲನೆಗೂ ರೂಪಾಂತರಕ್ಕೂ ಒಳಗಾಗಿಲ್ಲ. ಇವುಗಳಿಂದ ಆದಿಜೀವಯುಗದ ಶಿಲಾಸಮುದಾಯಗಳು ಜೀವಾವಶೇಷರಹಿತವಾಗಿರುವುದು ಒಂದು ದೊಡ್ಡ ಆಶ್ಚರ್ಯಕರ ಸಂಗತಿ. ಈ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.
ಆಮ್ಲಜನಕ ಪೇರಿಕೆಯ ಘಟನೆ
ಬದಲಾಯಿಸಿಮೊದಲ ಹಿಮಯುಗದ ಪುರಾವೆಗಳು ದೊರೆಯುತ್ತವೆ. ನಿಯೊಪ್ರೊಟೆರೊಜೋಯಿಕ್ ಅವಧಿಯಲ್ಲಿ ಕನಿಷ್ಠ ನಾಲ್ಕು ಹಿಮಯುಗಗಳಿವೆ. ಈ ಕಲ್ಪದಲ್ಲಿನ ಅತಿ ದೊಡ್ಡ ಘಟನೆಯೆಂದರೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಪೇರಿಸಲ್ಪಡುವುದು. ವಾಸ್ತವದಲ್ಲಿ ಆಮ್ಲಜನಕದ ಬಿಡುಗಡೆ ದ್ಯುತಿಸಂಶ್ಲೇಷಣೆಯ ಕಾರಣಕ್ಕೆ ಆರ್ಕಿಯನ್ ಕಲ್ಪದಲ್ಲಿಯೇ ಆದಾಗಲೂ ಸಲ್ಪರ್ ಮತ್ತು ಕಬ್ಬಿಣದ ಆಕ್ಸಿಡೈಜ್ ಆಗುವವರೆಗೂ ಹೆಚ್ಚಾಗಲಿಲ್ಲ. ಸುಮಾರು ೨೩೦೦ ದಶಲಕ್ಷ ವರುಷಗಳ ಹಿಂದಿನವರೆಗೂ ವಾತಾವರಣದಲ್ಲಿ ಆಮ್ಲಜನಕ ಇಂದಿನ ಮಟ್ಟದ ಶೇ ೧ ಅಥವಾ ೨ರಷ್ಟು ಮಾತ್ರವೇ ಇತ್ತು.[೨] 323 ಮಾನವನ ಬಳಕೆಯ ಬಹುಭಾಗದ ಕಬ್ಬಿಣ ಅದಿರು ಒದಗಿಸುವ ಕಬ್ಬಿಣ ಪಟ್ಟಿ ಶಿಲೆ (ಬ್ಯಾಂಡೆಡ್ ಐರನ್ ಫಾರ್ಮೇಶನ್) ಆಮ್ಲಜನಕ ಬಳಸುವ ಪ್ರಮುಖ ಆಕರವಾಗಿತ್ತು. ಇದು ೧.೯ ಶತಕೋಟಿ ವರುಷಗಳ ಹಿಂದೆ ಆಮ್ಲಜನಕ ಹೆಚ್ಚಳ ಅಥವಾ ಹೆಚ್ಚು ಸಂಭವನೀಯ ಸಾಗರ ನೀರಿನೊಂದಿಗಿನ ಮಿಶ್ರಣದ ಕಾರಣಕ್ಕೆ ನಿಂತಿತು.[೨] 324</sup. ಆಮ್ಲಜನಕ ಹೆಚ್ಚಳವು ರಾಸಾಯನಿಕ ಮುಳುಗುವಿಕೆ ಮುಚ್ಚಿಹೋದ ಕಾರಣಕ್ಕೆ ಮತ್ತು ಇಂಗಾಲದ ಹೂತುಹೋಗುವಿಕೆ (ಇಲ್ಲದಿದ್ದಲ್ಲಿ ಈ ಸಾವಯವ ಪದಾರ್ಥ ಆಕ್ಸಿಡೈಸ್ ಆಗಬೇಕಾಗಿತ್ತು) ಕಾರಣಕ್ಕೆ ಉಂಟಾಯಿತು.[೨] 325
ಭೂಚಿಪ್ಪು ತಳಸೇರುವಿಕೆ ಪ್ರಕ್ರಿಯೆ
ಬದಲಾಯಿಸಿಈ ಕಲ್ಪವು ಭೂಫಲಕಗಳ ಚಟುವಟಿಕೆಯ ದೃಷ್ಟಿಯಿಂದಲೂ ಪ್ರಮುಖ. ನಂತರದ ಆರ್ಕಿಯನ್ ಮತ್ತು ಆರಂಭಿಕ ಪ್ರೊಟೆರೊಜೋಯಿಕ್ ಕಾಲಮಾನಗಳು ತಳಸೇರುವಿಕೆಯ (ನೋಡಿ ಭೂಫಲಕ ಸಿದ್ಧಾಂತ) ಮೂಲಕ ಭೂಚಿಪ್ಪಿನ ಮರುಬಳಕೆ ಹೆಚ್ಚಾದ ಕಾಲ. ೨.೬ ಶತಕೋಟಿ ವರುಷಗಳ ನಂತರದಲ್ಲಿ ಹುಟ್ಟಿದ ಹಳೆಯ ಗ್ರಾನೈಟ್ ಕಲ್ಲು ವಿಫುಲವಾಗಿರುವುದು ತಳಸೇರುವಿಕೆ ಹೆಚ್ಚಾದ ಬಗೆಗಿನ ಪುರಾವೆಯನ್ನು ನೀಡುತ್ತದೆ.[೩] ತಳಸೇರುವಿಕೆಯ ಕಾರಣಕ್ಕೆ ಬಸಾಲ್ಟ್ ಸಾಗರದ ಭೂಚಿಪ್ಪು ಮರುಕರಗುವಿಕೆಯಿಂದಾಗಿ ಮೊದಲ ಖಂಡಗಳ ತಿರುಳು ಭೂಚಿಪ್ಪುಗಳ ಮರುಬಳಕೆ ಪ್ರಕ್ರಿಯೆಯ ನಡುವೆಯೂ ಉಳಿದುಕೊಂಡಿತು. ಈ ಕ್ರೆಟಾನ್‌ಗಳ (ಖಂಡಗಳ ಶಿಲಾಗೋಳದ ಹಳೆಯ, ಸ್ಥಿರ ಭಾಗ) ದೀರ್ಘಕಾಲೀನ ಭೂಫಲಕ ಸ್ಥಿರತೆಯು ಖಂಡಗಳ ಭೂಚಿಪ್ಪು ಕೆಲವು ಶತಕೋಟಿ ವರುಷಗಳವರೆಗೂ ಇರುವುದಕ್ಕೆ ಕಾರಣ.[೪] ಆಧುನಿಕ ಖಂಡಗಳ ಭೂಚಿಪ್ಪು ಶೇ ೪೩ ಪ್ರೊಟೆರೊಜೋಯಿಕ್ ಕಲ್ಪದಲ್ಲಿಯೂ, ಶೇ ೩೯ ಆರ್ಕಿಯನ್ ಕಲ್ಪದಲ್ಲಿಯೂ ಮತ್ತು ಕೇವಲ ಶೇ ೧೮ ಫನೆರೊಜೋಯಿಕ್ ಕಲ್ಪದಲ್ಲಿಯೂ ರೂಪಗೊಂಡಿದೆ ಎಂದು ಭಾವಿಸಲಾಗಿದೆ.[೩] ಕ್ಯಾಂಬ್ರಿಯನ್ ಪೂರ್ವದ ಭೂಮಿಯು ಹಲವು ವಿಲ್ಸನ್ ಚಕ್ರಗಳು ಉಂಟಾದವು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.[೩] ತಡವಾದ ಪ್ರೊಟೆರೊಜೋಯಿಕ್‌ನಲ್ಲಿ ಪ್ರಮುಖ ಸೂಪರ್ ಖಂಡ ರೊಡಿನಿಯ (ಸುಮಾರು ೧೦೦೦-೭೫೦ ದಶಲಕ್ಷ ವರುಷಗಳ ಹಿಂದೆ ಅಥವಾ ದವಹಿಂ) ಆಗಿತ್ತು. ಇಲ್ಲಿ ಹಲವು ಖಂಡಗಳು ಅನುಕ್ರಮದಲ್ಲಿ ಸೇರಿ ಕೇಂದ್ರ ಕ್ರೆಟಾನ್ ಲಾಂರೆಟಿಯ ರೂಪಗೊಂಡಿತ್ತು. ರೂಡಿನಿಯ ರೂಪಗೊಳ್ಳುವುದರೊಂದಿಗೆ ಹೊಂದಿಕೊಂಡ ಬೆಟ್ಟಗಳ ಉಗಮಕ್ಕೆ ಉದಾಹರಣೆ ಉತ್ತರ ಅಮೆರಿಕದ ಪೂರ್ವದಲ್ಲಿನ ಗ್ರೆನೆವಿಲ್ಲೆ ಬೆಟ್ಟಗಳ ಉಗಮ. ಕೊಲಂಬಿಯ ವಿಘಟನೆಯ ನಂತರ ರೊಡಿನಿಯ ರೂಪತಳೆಯಿತು ಮತ್ತು ಮಹಾ ಖಂಡ ಗೊಂಡ್ವಾನಕ್ಕೂ (ಸುಮಾರು ೫೦೦ ದವಹಿಂ) ಮುಂಚೆ ರೂಪಗೊಂಡಿತು.[೫] ಗೊಂಡ್ವಾನ ರೂಪಗೊಳ್ಳುವುದನ್ನು ಸೂಚಿಸುವ ಬೆಟ್ಟಗಳ ಉಗಮ ಆಫ್ರಿಕಾ, ದಕ್ಷಿಣ ಅಮೆರಿಕ, ಅಂಟಾರ್ಕಿಟಿಕ, ಆಸ್ಟ್ರೇಲಿಯಗಳ ಡಿಕ್ಕಿಯಿಂದ ಉಂಟಾದ ಪಾನ್ ಆಫ್ರಿಕಾ ಬೆಟ್ಟಗಳ ಉಗಮ. ಕೊಲಂಬಿಯವು ಆರಂಭಿಕ ಮತ್ತು ಮಧ್ಯದ ಪ್ರೊಟೆರೊಜೋಯಿಕ್ ಕಾಲಮಾನದಲ್ಲಿ ಪ್ರಮುಖವಾಗಿತ್ತು.[೬] ಆದಕ್ಕೂ ಮುಂಚೆ ಇದ್ದ ಖಂಡಗಳ ಸ್ವರೂಪದ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲ.
ಜೀವಿಗಳು
ಬದಲಾಯಿಸಿಮೊದಲ ಮುಂದುವರೆದ ಯುಕ್ಯಾರಿಯೋಟ್ ಏಕಕೋಶ ಜೀವಿಗಳು ಮತ್ತು ಬಹುಕೋಶ ಜೀವಿಗಳ ವಿಕಾಸವು ಆಮ್ಲಜನಕ ಸ್ವತಂತ್ರವಾಗಿ ವಾತಾವರಣದಲ್ಲಿ ಪೇರುವುದರೊಂದಿಗೆ ಆರಂಭವಾಗುತ್ತದೆ.[೭] ಈ ಕಾಲಮಾನದಲ್ಲಿಯೇ ಮೈಟೊಕಾಂಡ್ರಿಯನ್ ಮತ್ತು ಕ್ಲೊರೋಪಾಸ್ಟ್ ಹಾಗೂ ಅವುಗಳ ಅತಿಥೇಯರ ನಡುವೆ ಕೂಡುಬಾಳ್ವೆ (ಸಿಮ್‌ಬಯೊಸಿಸ್) ವಿಕಾಸವಾಯಿತು.[೨] 321-2 ಯುಕ್ಯಾರಿಯೋಟ್‌ಗಳ ವಿಕಾಸ ಸೈನೊಬ್ಯಾಕ್ಟಿರೀಯದ ವಿಸ್ತರಣೆಗೆ ಅಡ್ಡಿಯಾಗಲಿಲ್ಲ. ವಾಸ್ತವದಲ್ಲಿ ಸ್ಟ್ರೊಮೊಲೈಟ್‌ಗಳು ತೀರ ಹೆಚ್ಚಳವನ್ನು ಮತ್ತು ವೈವಿಧ್ಯತೆಯ ಉತ್ತುಂಗವನ್ನು ಪ್ರೊಟೆರೊಜೋಯಿಕ್ ಕಾಲಮಾನ ೧೩೦೦ ದವಹಿಂ ಪಡೆದವು.[೨] 321-3 ಪ್ರೊಟೆರೊಜೋಯಿಕ್ ಮತ್ತು ಫನೆರೊಜೋಯಿಕ್ ಕಲ್ಪಗಳ ನಡುವಿನ ಗಡಿಯನ್ನು ಕ್ಯಾಂಬ್ರಿಯನ್ ಅವಧಿಯೆಂದು ಗುರುತಿಸಲಾಗಿದ್ದು ಇಲ್ಲಿಯೇ ಮೊದಲ ಪ್ರಾಣಿಗಳ ಪಳಿಯುಳಿಕೆಗಳು (ಟ್ರೈಲೊಬೈಟ್ ಮತ್ತು ಆರ್ಕಿಯೊಸಯಾಥಿಡ್‌ಗಳು) ಕಂಡುಬರುತ್ತವೆ.
ಆದಿಜೀವಯುಗದಲ್ಲಿ ಜೀವಿಗಳು ಇದ್ದುವೆಂಬುದನ್ನು ಸ್ಥಿರಪಡಿಸುವುದಕ್ಕೆ ನಮಗೆ ಸಾಕಾದಷ್ಟು ಆಧಾರ ದೊರಕಿದೆ. ಅತ್ಯಧಿಕ ಪ್ರಮಾಣದಲ್ಲಿ ಸುಣ್ಣಶಿಲೆ ನಿಕ್ಷೇಪ, ಗ್ರಾಫೈಟ್, ಇಂಗಾಲಾಂಶ, ಗ್ಲಾಕೊನೈಟ್ ಪಟ್ಟಿಯಿರುವ ಕಬ್ಬಿಣದ ಅದುರು ನಿಕ್ಷೇಪ ಮತ್ತು ಲ್ಯಾಟರೈಟ್ ಮುಂತಾದ ನಿಕ್ಷೇಪಗಳು ಜೀವಿಗಳು ಇರುವುದನ್ನು ಸಾರುತ್ತವೆ. ಇವೆಲ್ಲ ಅಪ್ರತ್ಯಕ್ಷ ಪ್ರಮಾಣಗಳು. ಈ ಕಾಲದ ಸುಣ್ಣ ಶಿಲೆಯಲ್ಲಿ ಕೆಲವು ಭಾಗವಾದರೂ, ಜೀವಿಗಳ ಅದರಲ್ಲೂ ಆಲ್ಗೇ ಎಂಬ ಸಸ್ಯಗಳ ಕಾರ್ಯಾಚರಣೆಯಿಂದ ಆದಂಥವು ಎಂದು ಕೆಲವರ ವಾದ. ಆದರೆ ಈ ಸುಣ್ಣ ಶಿಲೆಗಳಲ್ಲಿ ಆಲ್ಗೇಗಳ ಅವಶೇಷಗಳಿಲ್ಲ. ಆದ್ದರಿಂದ ಅವು ಜೀವಿಗಳ ಕಾರ್ಯಾಚರಣೆಯಿಂದ ಆದಂಥವೋ ಅಥವಾ ರಾಸಾಯನಿಕ ಕ್ರಿಯೆಯಿಂದ ಆದಂಥವೋ ಎಂಬ ಶಂಕೆ ಇನ್ನೂ ವಿಜ್ಞಾನಿಗಳನ್ನು ಪೀಡಿಸುತ್ತಿದೆ.
ಗ್ರಾಫೈಟ್ ಶಿಲೆ ಬಳ್ಳಿ
ಬದಲಾಯಿಸಿಗ್ರಾಫೈಟ್ ಶಿಲೆ ಬಳ್ಳಿ ಬಳ್ಳಿಯಾಗಿಯೂ ಕಣವಾಗಿಯೂ ಸಿಗುತ್ತದೆ. ಕೆನಡ ದೇಶದ ಭೂವಿಜ್ಞಾನಿ ಜೆ. ಡಬ್ಲ್ಯು. ಡಾಸನ್ ಗ್ರಾಫೈಟ್ ಪದರವನ್ನು ಕಾರ್ಬ್‍ನಿಫೆರಸ್ ಕಾಲದ (ಇಂಗಾಲಯುಗ) ಕಲ್ಲಿದ್ದಲು ಪದರಗಳಿಗೆ ಹೋಲಿಸಿ ಇಷ್ಟು ಪ್ರಮಾಣದ ಇಂಗಾಲಾಂಶ ಜೀವಿಗಳ ಮೂಲಕ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟಿರುವನು. ಆದರೆ ಗ್ರಾಫೈಟ್ ಶಿಲೆ ಯಾವುದನ್ನು ತೆಗೆದುಕೊಂಡರೂ ಅದು ಜೀವಿಜನಿತವೆಂದು ನಿಖರವಾಗಿ ಪ್ರತಿಪಾದಿಸಲಾಗುವುದಿಲ್ಲ. ಹಾಗೆಯೇ ಪದರವಿರುವ ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು ಮತ್ತು ಲ್ಯಾಟರೈಟ್‍ಗಳೂ ಬ್ಯಾಕ್ಟೀರಿಯ ಜೀವಿಗಳ ಕಾರ್ಯಾಚರಣೆಯಿಂದ ನಿಕ್ಷೇಪಗೊಂಡವೆಂದು ಕೆಲವರ ಅಭಿಪ್ರಾಯ. ಆದರೆ ಯಾವ ನಿಕ್ಷೇಪವೂ ನಿರ್ದಿಷ್ಟವಾಗಿ ಹೀಗೆಯೇ ಆದುದು ಎಂದು ಸಮರ್ಥಿಸಲು ಸಾಧ್ಯವಿಲ್ಲ. ಅವು ರಾಸಾಯನಿಕವಾಗಿಯೂ ರೂಪುಗೊಳ್ಳಲು ಸಾಧ್ಯ.
ಆದಿಜೀವಯುಗದ ಶಿಲಾಸಮೂಹ
ಬದಲಾಯಿಸಿಆದಿಜೀವಯುಗದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಹುಡುಕಲು ಕೆಲವು ಭೂವಿಜ್ಞಾನಿಗಳಿಂದ ಬಹಳ ಪ್ರಯತ್ನ ನಡೆದಿದೆ. 1858ರಲ್ಲಿ ಲೋಗಾನ್, ಕೆನಡಾದ ಲಾರೆನ್ಷಿಯನ್ ನೈಸೆ ಶಿಲೆಯಲ್ಲಿ ಒಂದು ಕುತೂಹಲಕರ ಖನಿಜ ಶೇಖರಣೆಯನ್ನು ಕಂಡುಹಿಡಿದ. ಅದರಲ್ಲಿ ಕ್ಯಾಲಸೈಟ್ ಮತ್ತು ಸರ್‍ಪೆಂಟೈನ್ ಎಂಬ ಖನಿಜಗಳು ಒಂದರಮೇಲೊಂದರಂತೆ ಅನೇಕ ಪಟ್ಟಿಗಳಾಗಿ ನಿಕ್ಷೇಪಗೊಂಡಿದ್ದುವು. ಕ್ಯಾಲಸೈಟ್ ಪ್ರಧಾನವಾಗಿಯೂ ಸರ್‍ಪೆಂಟೈನ್ ಗೂಡುಗಳನ್ನು ತುಂಬಿದಂತಿದ್ದುವು. ಇಂಥ ರಚನೆ ಖನಿಜದಲ್ಲಿರುವುದು ಬಹಳ ವಿರಳ. ಆದುದರಿಂದ ಇದಕ್ಕೆ ಜೀವಿ ಸಂಬಂಧವಿರಬೇಕೆಂದು ಲೋಗನ್ ನಿರ್ಧರಿಸಿದುದಲ್ಲದೆ ಇದಕ್ಕೆ ಒಂದು ಹೊಸ ಹೆಸರನ್ನೂ ಕೊಟ್ಟ (ಇಯೋಜೋವನ್‍ಕೆನಡನ್ಸೀಸ್). ಇದರ ವಿಚಾರವಾಗಿ ಇನ್ನೂ ಹೆಚ್ಚು ವಿವರಗಳನ್ನು ಡಬ್ಲ್ಯು. ಬಿ. ಕಾರ್ಪೆಂಟ್ ವರದಿ ಮಾಡಿದ. ಆದರೆ ಇತರ ವಿದ್ವಾಂಸರು ಇಯೋಜೋವನ್‍ಕೆನಡನ್ಸೀಸ್ ಜೀವಿಜನ್ಯವಾದುದಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಖನಿಜ ಪ್ರಪಂಚದಲ್ಲಿ ಇಯೋಜೋವನ್‍ಕೆನಡನ್ಸೀಸ್‍ನಂಥ ರಚನೆಯಿರುವುದು ಎಲ್ಲೂ ಕಂಡುಬಂದಿಲ್ಲ. ಆದರೆ ಇಷ್ಟು ಚಲನೆಗೂ ರೂಪಾಂತರಕ್ಕೂ ಒಳಗಾದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಕಾದಿರಿಸುವುದೂ ಅಸಂಭವ. ಆದ್ದರಿಂದ ನಿಖರವಾದ ಜೀವಿಸಂಬಂಧ ವಸ್ತುಗಳನ್ನಲ್ಲದೆ ಬೇರಾವುದನ್ನೂ ಅಂಗೀಕರಿಸುವುದು ಸಾಧುವಲ್ಲ.
ಜೇಮ್ಸ್ ಹಾಲ್
ಬದಲಾಯಿಸಿ1885ರಲ್ಲಿ ಜೇಮ್ಸ್ ಹಾಲ್ ಆದಿಜೀವಯುಗದ ಶಿಲೆಗಳಲ್ಲಿ ಎಳೆಕೋಸಿನಂಥ ರಚನೆಯನ್ನು ಪ್ರಾಣಿಯ ಅವಶೇಷವೆಂದು ಅಭಿಪ್ರಾಯಪಟ್ಟು ಅದನ್ನು ಕ್ರಿಪ್ಟೊಜೋವಸ್ ಎಂದು ಹೆಸರಿಸಿದ. ಇದೇ ರೀತಿಯ ರಚನೆ ಗ್ರೀನ್‍ಲ್ಯಾಂಡ್ ಮತ್ತು ಗೋಬಿ ಮರುಭೂಮಿ ಪ್ರದೇಶಗಳಲ್ಲಿ ಇರುವುದು ವರದಿಯಾಗಿದೆ. ಈ ರಚನೆಗಳು ಆಲ್ಗೇ ಎಂಬ ಸಸ್ಯದ ಅವಶೇಷವೆಂದು ವಾದಿಸಲಾಗಿದೆ. ವಾಲ್‍ಕಾಟ್ ಈ ಕಾಲದ ಶಿಲಾಸಮುದಾಯಗಳಲ್ಲಿ ಅನೇಕ ರೀತಿಯ ರಚನೆಗಳನ್ನು ವರದಿ ಮಾಡಿದ್ದಾನೆ. ಇತ್ತೀಚೆಗೆ ಭಾರತದ ಕಡಪ ಶಿಲೆಗಳಲ್ಲಿರುವ ಸುಣ್ಣ ಶಿಲೆಗಳಲ್ಲಿ ಎಂ. ಆರ್. ಶ್ರೀನಿವಾಸರಾಯರು ಈ ರೀತಿಯ ರಚನೆಯನ್ನು ವರದಿ ಮಾಡಿದ್ದಾರೆ. ಆದರೆ ಜೀವಕಣ ರಚನೆಗಳು ಇಲ್ಲದಿರುವುದರಿಂದ ಇವುಗಳನ್ನು ಜೀವಾವಶೇಷಗಳೆಂದು ಪರಿಗಣಿಸುವುದು ಬಹಳ ಕಷ್ಟ. ಅಲ್ಲದೆ ಪ್ರಯೋಗಶಾಲೆಗಳಲ್ಲಿ ಇದೇ ರೀತಿಯ ರಚನೆಗಳನ್ನು ರಾಸಾಯನಿಕ ವಿಧಾನಗಳಿಂದ ಉತ್ಪತ್ತಿ ಮಾಡಬಹುದೆಂದು ಲೆನಿಗಾಂಗ್ ತೋರಿಸಿದ್ದಾನೆ. ವಿಂಧ್ಯಶಿಲಾಸಮುದಾಯದಲ್ಲಿ ರಾಮಪುರದ ಹತ್ತಿರ ಕೊಂಬು ವಸ್ತುವಿನ ಇಂಗಾಲಾಂಶದ ಅವಶೇಷಗಳನ್ನು ಹೆಚ್. ಸಿ. ಜೋನ್ಸ್ ವರದಿ ಮಾಡಿದ್ದಾರೆ. ಆದರೆ ಇದನ್ನು ವರ್ಗೀಕರಿಸುವುದು ಬಹಳ ಕಷ್ಟ. ಇವುಗಳ ಜೊತೆಗೆ ಎಂ. ಆರ್. ಸಾಹನೀಯವರು ಕೆಲವು ಹುಳುಗಳ ಜೇಡುಗಳು ಮತ್ತು ಅಚ್ಚನ್ನು ವರದಿ ಮಾಡಿರುತ್ತಾರೆ. ಹೀಗೆ ವಿಂಧ್ಯ ಮತ್ತು ಇತರ ಪ್ರೀ ಕೇಂಬ್ರಿಯನ್ ಕಾಲದಲ್ಲಿ ಜೀವಿಗಳಿದ್ದುವೆಂಬುದಕ್ಕೆ ಅಸ್ಪಷ್ಟ ಅವಶೇಷಗಳು ಅಪ್ರತ್ಯಕ್ಷ ಪ್ರಮಾಣಗಳೂ ದೊರೆತಿವೆ ಎಂಬುದರಲ್ಲಿ ಸಂಶಯವಿಲ್ಲ.
ಪ್ರೊಟೆರೊಜೋಯಿಕ್ ಯುಗಗಳು
ಬದಲಾಯಿಸಿಪ್ರೊಟೆರೊಜೋಯಿಕ್ ಕಲ್ಪವನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಯುಗಗಳಾಗಿ ವಿಭಜಿಸಲಾಗಿದೆ.
ಇದರ ಕಾಲಮಾನ ೨೫೦೦ ರಿಂದ ೧೬೦೦ ದವಹಿಂ. ಪಾಲಿಯೊಪ್ರೊಟೆರೊಜೋಯಿಕ್ ಯುಗವನ್ನು ಸೈಡೇರಿಯನ್, ರಯೇಶಿಯನ್, ಒರೊಸಿರಿಯನ್ ಮತ್ತು ಸ್ಟಾಥೇರಿಯನ್ ಅವಧಿಗಳಾಗಿ ವಿಭಜಿಸಲಾಗಿದೆ. ಈ ಕಾಲಮಾನದಲ್ಲಿ ಮೊದಲ ಸಲ ಖಂಡಗಳು ಸ್ಥಿರವಾದವು. ಭೂಮಿಯ ಪರಿಭ್ರಮಣದ ಬಗೆಗಿನ ಪ್ರಾಚೀನ ಇತಿಹಾಸವು ೧.೮ ಶತಕೋಟಿ ವರುಷಗಳ ಹಿಂದೆ (೧೮೦೦ ದವಹಿಂ) ವರುಷಕ್ಕೆ ೪೫೦ ದಿನಗಳು ಮತ್ತು ದಿನಕ್ಕೆ ೨೦ ಗಂಟೆಗಳು ಇದ್ದವೆಂದು ಸೂಚಿಸುತ್ತವೆ. ವಾತಾವರಣದಲ್ಲಿ ಆಮ್ಲಜನಕ ಇಲ್ಲದ ಕಾಲಮಾನದಲ್ಲಿ ಅನೆರೋಬಿ ಜೀವಿಗಳು (ಈ ಜೀವಿಗಳು ಬದುಕಲು ಆಮ್ಲಜನಕದ ಅಗತ್ಯವಿಲ್ಲ) ಬದುಕುತ್ತಿದ್ದವು. ವಾಸ್ತವದಲ್ಲಿ ಆಮ್ಲಜನಕವು ಈ ಜೀವಿಗಳಿಗೆ ವಿಷಕಾರಿಯಾಗಿತ್ತು. ಹೀಗಾಗಿ ಆಮ್ಲಜನಕದ ಹೆಚ್ಚಳದೊಂದಿಗೆ ಅನೆರೋಬಿ ಜೀವಿಗಳು ಅಳಿದವು. ಹೀಗೆ ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕ ಬಿಡುಗಡೆ ಮಾಡುವ ಸೈನೊಬ್ಯಾಕ್ಟೀರಿಯ ಅತಿದೊಡ್ಡ ಸಾಮೂಹಿಕ ಅಳಿವಿನ ಘಟನೆಗೂ ಕಾರಣವಾಗಿತ್ತು. ಸೈನೊಬ್ಯಾಕ್ಟೀರಿಯಗಳು ನೀರನಲ್ಲಿಯಷ್ಟೇ ಅಲ್ಲ ಭೂಮಿಯ ಮೇಲೆಯೂ ಕಂಡಬಂದಿವೆ. [೯]
ಈ ಯುಗದ ಕಾಲಮಾನ ೧೬೦೦ ರಿಂದ ೧೦೦೦ ದವಹಿಂ. ಈ ಯುಗವನ್ನು ಕ್ಯಾಲಿಮಿಯನ್, ಎಕ್ಟೇಸಿಯನ್ ಮತ್ತು ಸ್ಟೇನಿಯನ್ ಅವಧಿಗಳಾಗಿ ವಿಭಜಿಸಲಾಗಿದೆ. ಇಲ್ಲಿಯ ಪ್ರಮುಖ ಘಟನೆಗಳು ಕೊಲಂಬಿಯ ಮಹಾ ಖಂಡದ ವಿಘಟನೆ ಮತ್ತು ರೊಡಿನಿಯ ಮಹಾ ಖಂಡದ ರೂಪಗೊಳ್ಳುವಿಕೆ. ಈ ಕಾಲಮಾನದಲ್ಲಿ ಲೈಂಗಿಕ ಸಂತಾನೋತ್ಪತ್ತಿ ವಿಕಾಸವಾಯಿತು. ಬಹುಕೋಶ ಜೀವಿಗಳಲ್ಲಿ ಸಾಮೂಹಿಕ ಜೀವನ ಆರಂಭ. ಸ್ಟ್ರೊಮಾಟೊಲೈಟ್‌ಗಳು (ಸಾಗರದ ಸೂಕ್ಷ್ಮಜೀವಿಗಳು ವಿಶೇಷವಾಗಿ ಸೈನೊಬ್ಯಾಕ್ಟಿರಿಯಾಗಳಿಂದ ಆದ ಪದರಗಳ ಪಳಿಯುಳಿಕೆಗಳು) ವಿಕಾಸವಾಗಿ ನಿಯೊಪ್ರೊಟೆರೊಜೋಯಿಕ್ ಯುಗದಲ್ಲಿ ಕಡಿಮೆಯಾಗುತ್ತವೆ. ಈ ಯುಗದಾದ್ಯಂತ ವಾತಾವರಣದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಯಿತು. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಬಹುಶ ಇಂದಿನ ಮಟ್ಟದ ಶೇ ೧ರಷ್ಟಕ್ಕೆ ಈ ಕಾಲಮಾನದಲ್ಲಿ ಹೆಚ್ಚಿತು. ಮೊದಲ ದೊಡ್ಡ ಮಟ್ಟದ ಬೆಟ್ಟಗಳ ಉಗಮ ಗ್ರೆನ್‌ವಿಲ್ಲೆ ಈ ಕಾಲಮಾನದಲ್ಲಿ ಆಯಿತು.
ಈ ಯುಗದ ಕಾಲಮಾನ ೧೦೦೦ ದಿಂದ ೫೪೧ ದವಹಿಂ. ಈ ಕಲ್ಪದ ಕೊನೆಯ ಯುಗ ನಿಯೊಪ್ರೊಟೆರೊಜೋಯಿಕ್‌ನ್ನು ಟೋನಿಯನ್, ಕ್ರಯೊಜೆನಿಯನ್ ಮತ್ತು ಇಡಿಯಕರನ್ ಅವಧಿಗಳಾಗಿ ವಿಭಜಿಸಲಾಗಿದೆ. ಭೂಗೋಳಿಕ ದಾಖಲೆಗಳಲ್ಲಿನ ತೀರ ತೀವ್ರವಾದ ಹಿಮಯುಗವು ಈ ಕಾಲಮಾನದಲ್ಲಿ ನಡೆಯಿತು. ತೀರ ಪ್ರಾಚೀನ ಪ್ರಾಣಿಗಳನ್ನೂ ಒಳಗೊಂಡು ಮೊದಲ ಬಹುಕೋಶ ಜೀವಿಗಳು ಇಡಿಯಕರನ್ ಅವಧಿಯಲ್ಲಿ ದೊರೆಯುತ್ತವೆ. ಈ ಯುಗದ ಆರಂಭದಲ್ಲಿ ಮೀಸೊಪ್ರೊಟೆರೊಜೋಯಿಕ್‌ನಲ್ಲಿ ರೂಪಗೊಂಡ ರೊಡಿನಿಯ ಮಹಾ ಖಂಡವು ಇತ್ತು. ಟೋನಿಯನ್ ಅವಧಿಯಲ್ಲಿ ಇದು ಬಿಡಿ ಬಿಡಿ ಖಂಡಗಳಾಗಿ ವಿಭಜನೆಗೊಂಡಿತು.
ಟಿಪ್ಪಣಿಗಳು ಮತ್ತು ಉಲ್ಲೇಖಗಳು
ಬದಲಾಯಿಸಿ- ↑ ಇಂಗ್ಲೀಶ್ ವಿಕಿಪೀಡಿಯ “Pretorzoic” ಪುಟದ ಭಾಗಶ ಅನುವಾದ, ಪ್ರಾಪ್ತಿಯ ದಿನಾಂಕ 2016-08-17
- ↑ ೨.೦ ೨.೧ ೨.೨ ೨.೩ ೨.೪ Stanley, Steven M. (1999). Earth System History. New York: W.H. Freeman and Company. ISBN 0-7167-2882-6.
- ↑ ೩.೦ ೩.೧ ೩.೨ Kearey, P., Klepeis, K., Vine, F., Precambrian Tectonics and the Supercontinent Cycle, Global Tectonics, Third Edition, pp. 361–377, 2008.
- ↑ Mengel, F., Proterozoic History, Earth System: History and Variablility, volume 2, 1998.
- ↑ Condie, K., O’Neil, C., The Archean-Proterozoic Boundary: 500My of Tectonic transition in Earth’s History, American Journal of Science, Volume 310, 2010
- ↑ Huntly, C., The Mozambique Belt, Eastern Africa: Tectonic Evolution of the Mozambique Ocean and Gondwana Amalgamation. The Geological Society of America. 2002.
- ↑ El Albani, Abderrazak; Bengtson, Stefan; Canfield, Donald E.; Bekker, Andrey; Macchiarelli, Reberto; Mazurier, Arnaud; Hammarlund, Emma U.; Boulvais, Philippe; et al. (July 2010). "Large colonial organisms with coordinated growth in oxygenated environments 2.1 Gyr ago". Nature. 466 (7302): 100–104. Bibcode:2010Natur.466..100A. doi:10.1038/nature09166. PMID 20596019.
- ↑ ಇಂಗ್ಲೀಶ್ ವಿಕಿಪೀಡಿಯ “Paleoprotorzoic” ಪ್ರಾಪ್ತಿಯ ದಿನಾಂಕ 2016-08-17
- ↑ ಇಂಗ್ಲೀಶ್ ವಿಕಿಪೀಡಿಯ “Great Oxygenation Event” ಪ್ರಾಪ್ತಿಯ ದಿನಾಂಕ 2016-08-17
- ↑ ಇಂಗ್ಲೀಶ್ ವಿಕಿಪೀಡಿಯ “Mesoproterzoic” ಪ್ರಾಪ್ತಿಯ ದಿನಾಂಕ 2016-08-17
- ↑ ಇಂಗ್ಲೀಶ್ ವಿಕಿಪೀಡಿಯ “Neoproterzoic” ಪ್ರಾಪ್ತಿಯ ದಿನಾಂಕ 2016-08-17