ಪ್ರಗಾಥ - ಗ್ರೀಕ್ ದೇಶದಲ್ಲಿ ಹುಟ್ಟಿ ತುಂಬ ಪ್ರಚಾರದಲ್ಲಿದ್ದ, ಹಾಡಿನ ರೂಪದ ದೊಡ್ಡ ಕವಿತೆ (ಓಡ್). ನರ್ತನಕ್ಕೆ ಮೇಳಗಾನವಾಗಿ ಇದನ್ನು ಲೈರ್ ಎಂಬ ತಂತೀವಾದ್ಯದೊಂದಿಗೆ ಹಾಡುತ್ತಿದ್ದರು. ಗ್ರೀಕಿನಲ್ಲಿ ಓಡ್ ಎಂದರೆ ಹಾಡು ಎಂದರ್ಥ.

ಪ್ರಗಾಥದ ಚರಿತ್ರೆಸಂಪಾದಿಸಿ

ಕ್ರಿ.ಪೂ. 7 ನೆಯ ಶತಮಾನದ ಆಲ್ಸ್‍ಮನ್ ಇದಕ್ಕೆ ಸ್ಪಷ್ಟವಾದ ರೂಪುಕೊಟ್ಟ. ಸ್ಟೆಸಿಕಾರಸೆ (ಕ್ರಿ.ಪೂ. 640-550)

ಪ್ರಗಾಥದ ವಿಭಾಗಸಂಪಾದಿಸಿ

ಇದರ ಮೂರೂ ನುಡಿಗಳಾದ ಸ್ಟ್ರೋಫಿ, ಆಂಟಿಸ್ಟ್ರೋಫಿ ಮತ್ತು ಈಪೋಡುಗಳ ಸ್ಪಷ್ಟ ವಿಭಜನೆ ಮಾಡಿದ. ಈತ ಹಾಕಿಕೊಟ್ಟ ನಿಯಮವನ್ನು ಅನುಸರಿಸಿ ಪ್ರಗಾಥಗಳನ್ನು ರಚಿಸಿ ಪ್ರಖ್ಯಾತನಾದವ ಪಿಂಡಾರ್ (ಕ್ರಿ.ಪೂ. 518-443). ಅನಂತರ ಬ್ಯಾಕಿಲೈಡಿಸ್ ಸ್ಯಾಫೊ ಮುಂತಾದವರು ಪ್ರಗಾಥಗಳನ್ನು ಬರೆದು ಪ್ರಖ್ಯಾತರಾದರು. ಗ್ರೀಕ್ ನಾಟಕಗಳಲ್ಲಿ ಮೇಳಗಾನಕ್ಕೆ ಪ್ರಗಾಥಗಳನ್ನೇ ಬಳಸುತ್ತಿದ್ದರು.

ಗ್ರೀಕ್ ಪ್ರಗಾಥದ ಲಕ್ಷಣಗಳುಸಂಪಾದಿಸಿ

ಇದು ಪೂರ್ಣವಾದ ಒಂದು ನರ್ತನದ ಹಾಡು. ಬೇರೆ ಬೇರೆ ನುಡಿಗಳಿದ್ದು ಸಾಮಾನ್ಯವಾಗಿ ಎರಡೆರಡು ನುಡಿಗಳು ಜೋಡಿಯಾಗಿರುತ್ತವೆ. ಈ ಜೋಡಿ ನುಡಿಗಳೇ ಸ್ಟ್ರೋಫಿ ಮತ್ತು ಆ್ಯಂಟಿಸ್ಟ್ರೋಫಿ. ಈ ಎರಡು ನುಡಿಗಳ ಛಂದಸ್ಸು ಲಯ ರಾಗ ಮತ್ತು ನೃತ್ಯದ ನಡೆಗಳು ಒಂದೇ ಆಗಿವೆ. ದೇವ ಪೀಠದ ಮುಂದೆ ಮೇಳದ ಜಾಗವಾದ ಆರ್ಕೆಸ್ಟ್ರಾದಲ್ಲಿ ಮಧ್ಯಬಿಂದುವಿನ ಬಲಗಡೆಗೆ ನರ್ತನದ ಹೆಜ್ಜೆಯಿಡುತ್ತ ಹಾಡುವ ನುಡಿ ಸ್ಟ್ರೋಫಿ. ಅದೇ ಹೆಜ್ಜೆಗಳಂತೆ ನಡೆಯನ್ನು ಪುನರಾವರ್ತಿಸಿ ಹಿಂದಿರುಗಿದ ಮಧ್ಯಬಿಂದುವನ್ನು ಮುಟ್ಟುವಾಗ ಹಾಡುವ ಹಾಡು ಆ್ಯಂಟಿಸ್ಟ್ರೋಫಿ (ಇವು ನಮ್ಮ ಸಂಗೀತದ ಆರೋಹಣ, ಅವರೋಹಣ ಮತ್ತು ನೃತ್ಯದ ನಡೆಗಳಂತೆಯೆ ಒಂದಕ್ಕೊಂದು ಪೂರಕವಾಗಿವೆ). ಈ ಜೋಡಿ ನುಡಿಗಳು ಬಲಗಡೆಗೆ ಆದಂತೆ, ಮತ್ತೊಂದು ಜೋಡಿ ನುಡಿಗಳ ನಡೆಗೆ ಬಳಕೆಯಾಗುತ್ತವೆ. ಈ ನಾಲ್ಕು ನುಡಿಗಳೂ ಸೇರಿ ನೃತ್ಯ ಮತ್ತು ಹಾಡಿನಲ್ಲಿ ಆವರ್ತ ಆಗುತ್ತಿತ್ತು. ಇಂಥ ನುಡಿಗಳ ಆವರ್ತಗಳ ಮಧ್ಯದಲ್ಲಿ ಬಂದ ಬಿಡಿನುಡಿಗೆ ಮೀಸೋಡ್ ಎಂದೂ ಆವರ್ತಗಳೆಲ್ಲ ಕಳೆದ ಮೇಲೆ ಕೊನೆಯಲ್ಲಿ ಬರುವುದಕ್ಕೆ ಈ ಪೋಡ್ ಎಂದೂ ಹೆಸರು. ಸ್ಟ್ರೋಫಿ, ಆ್ಯಂಟಿಸ್ರೋಫಿ, ಮೀಸೋಡ್ ಮತ್ತು ಈಪೋಡ್ ಎಲ್ಲ ಸೇರಿ ಒಂದು ಪ್ರಗಾಥ ಆಗುತ್ತಿತ್ತು. ಗ್ರೀಕ್ ನಾಟಕಗಳಲ್ಲಿ ನಾಯಕ ನಾಯಕಿಯರ ಚರ್ಯೆ, ಸನ್ನಿವೇಶಗಳ ಬಗ್ಗೆ ಮೇಲದವರ ಚಿಂತನೆ ವಿಮರ್ಶನಗಳಿಗೆ ಪ್ರಗಾಥ ಬಳಕೆಯಾಗುತ್ತಿತ್ತು.

ಪ್ರಗಾಥದ ಸಂಶ್ಲಿಷ್ಟ ಮತ್ತು ಕಷ್ಟತರ ಛಂದೋನಿಯಮಗಳು ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ. ಲ್ಯಾಟಿನ್ ಕವಿ ಹಾರಿಸ್ ನಾಲ್ಕು ಸಾಲಿನ ನುಡಿಗಳನ್ನು ಸೇರಿಸಿ ಬರೆದ ಕವಿತೆಯನ್ನೇ ಪ್ರಗಥಗಳೆಂದು ಕರೆದ. ಹೀಗಾಗಿ ಪಿಂಡಾರಿಕ್ ಮತ್ತು ಹಾರಿಸಿಯನ್ ಪ್ರಗಾಥಗಳೆಂಬ ವ್ಯತ್ಯಾಸ ಏರ್ಪಟ್ಟಿತು. ತೀವ್ರ ಚಿಂತನೆ, ಗಂಭೀರ ನಡೆ, ಘನವಾದ ಶೈಲಿ, ಸಾಮಾನ್ಯವಾಗಿ ಉತ್ಸಾಹ ಪೂರ್ಣವೂ ಗಂಭೀರ ವಸ್ತುವಿನ ಬಗ್ಗೆ ಪ್ರೌಢವಾದ ನಡೆಯುಳ್ಳದ್ದೂ ಎಂದು ಪ್ರಗಾಥವನ್ನು ವಿದ್ವಾಂಸರು ನಿರ್ದೇಶಿಸಿದ್ದಾರೆ. ಬೈಬಲಿನಲ್ಲಿ ಬರುವ ಮೋಸಸ್ಸನ ಹಾಡುಗಳು, ಮೆಕ್ಕಾದ ಮಸೀದಿಯಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆದು ತೂಗು ಹಾಕಿರುವ ಅರಬ್ಬೀಭಾಷೆಯ ಏಳು ಕಸೀದಾಗಳೂ (ಕ್ರಿ.ಶ. 6ನೆಯ ಶತಮಾನ) ಈ ರೀತಿಯ ಪ್ರಗಾಥಗಳೇ.

ಪಿಂಡಾರನನ್ನು ಅನುಸರಿಸುವುದು ಕಷ್ಟವಾಗಿ ಕಂಡದ್ದರಿಂದ ಇಂಗ್ಲಿಷ್ ಕವಿಗಳೂ ಫ್ರೆಂಚ್ ಕವಿಗಳೂ ಸುಲಭಶೈಲಿಯ ಪ್ರಗಾಥಗಳನ್ನು ಬರೆದರು. ಲೂಯಿಗಿ ಅಲಮನ್ನಿ (ಕ್ರಿ.ಶ. 1495-1556) ಇಟಾಲಿಯನ್ ಭಾಷೆಯಲ್ಲಿ ಪ್ರಗಾಥವನ್ನು ಮೊದಲು ಬರೆದ ಕವಿ. ಕ್ರಿ.ಶ. 1550ರಲ್ಲಿ ಫ್ರೆಂಚ್ ಕವಿ ಪ್ಯಾರ್‍ದ ರಾನ್ಸಾರ್ಡ್ ತನ್ನ ಪ್ರಗಾಥಗಳನ್ನು ಪ್ರಕಟಿಸಿದ. ಪ್ಯಾಂಡೋಕಾ ಎಂಬ ಪ್ರಗಾಥಗಳ ಸಂಗ್ರಹವನ್ನು 1584 ರಲ್ಲಿ ಇಂಗ್ಲೆಂಡಿನ ಜಾನ್ ಸದರ್ನ್ ಪ್ರಕಟಿಸಿದ. ಏಬ್ರಹಾಂ ಕೌಲಿ ಅನಿಯತ ಪ್ರಗಾಥಗಳನ್ನು ಬರೆದು ಪಿಂಡಾರಿಕ್ ಓಡುಗಳೆಂದು ಅವನ್ನು ಕರೆದು ಅನಿಯತ ರೂಪಕ್ಕೇ ಆ ಹೆಸರು ತಪ್ಪಾಗಿ ಅಂಟಿಕೊಳ್ಳುವಂತೆ ಮಾಡಿದ. ಗ್ರೇ, ಕೋಲ್‍ರಿಡ್ಜ್, ಡ್ರೈಡನ್ ಮುಂತಾದವರು ಪ್ರಗಾಥಗಳನ್ನು ಬರೆದರು. ವರ್ಡ್ಸ್‌ವರ್ತ್ಓಡ್ ಆನ್ ದಿ ಇಂಟಿಮೇಷನ್ಸ್ ಆಫ್ ಇಮ್ಮಾರ್ಟಾಲಿಟಿ, ಷೆಲ್ಲಿಓಡ್ ಟು ದಿ ವೆಸ್ಟ್ ವಿಂಡ್ ಜಗದ್ವಿಖ್ಯಾತವಾಗಿವೆ.

ಕನ್ನಡದಲ್ಲಿ ಪ್ರಗಾಥ ರಚನೆಸಂಪಾದಿಸಿ

ಮೊದಲು ಪ್ರಕಟವಾದುದು ಶ್ರೀ ಕೃಷ್ಣ ಸೂಕ್ತಿ ಪತ್ರಿಕೆಯಲ್ಲಿ 1913 ರ ಜುಲೈ ತಿಂಗಳ ಸಂಚಿಕೆಯಲ್ಲಿ ಎನ್. ರಾಜಗೋಪಾಲಕೃಷ್ಣರಾಯರು ಓಡ್ ಆನ್ ಕಾರೊನೇಷನ್ ಎಂದು ಇಂಗ್ಲಿಷಿನಲ್ಲೂ ಪಟ್ಟಾಭಿಷೇಕಾಷ್ಟಕಂ ಎಂದು ಕನ್ನಡದಲ್ಲೂ ಹೆಸರು ಕೊಟ್ಟ ಏಳು ವೃತ್ತಗಳ ಮತ್ತು ಎರಡು ಕಂದ ಪದ್ಯಗಳ ಒಂದು ಮಂಗಳಾಶಾಸನ ಕವಿತೆ ಅಚ್ಚಾಯಿತು. ಆದರೆ ಸರಿಯಾಗಿ ಕನ್ನಡಕ್ಕೆ ಪ್ರಗಾಥವನ್ನು ತಂದು ಅದಕ್ಕೆ ತಕ್ಕ ಹೆಸರನ್ನು ಸಂಸ್ಕøತದಿಂದ ತಂದುಕೊಟ್ಟವರು ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು. ಗೇಯ ಗುಣವುಳ್ಳ ಗಾಥಾ ರೀತಿಯ ಓಡಿಗೆ ಸಂಸ್ಕೃತ ವೈಧಿಕ ಛಂದೋರೂಪವಾದ, ಗಾಂಭೀರ್ಯದ ನಡೆಯುಳ್ಳ ಪ್ರಗಾಥ ಎಂಬ ಹೆಸರನ್ನು ಕೊಟ್ಟವರು ಅವರೇ. ಬೇಂದ್ರೆಯವರು ಈ ರೂಪವನ್ನು ಓ ಹಾಡು ಎಂದು ಕರೆದದ್ದು ಇದು ಸಂಬೋಧಾನತ್ಮಕವಾಗಿರುತ್ತದೆಂಬ ಲಕ್ಷಣವನ್ನು ಗಮನಿಸಿ ಮತ್ತು ಓಡ್ ಎಂಬುದರ ರೂಪಾನುಕರಣೆಯಿಂದ. ಕನ್ನಡದಲ್ಲಿ ಅನೇಕ ಕವಿಗಳು ಪ್ರಗಾಥಗಳನ್ನು ಬರೆದಿದ್ದಾರೆ. ಪ್ರಮುಖವಾಗಿ ಡಿ.ವಿ.ಜಿ. ಅವರ ಶಿಲಾಬಾಲಿಕೆಯರು, ಗೋವಿಂದ ಪೈ ಅವರ ಶ್ರೀ ಗೊಮ್ಮಟ ಜಿನಸ್ತುತಿ, ಶ್ರೀ ಅವರ ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ ಮತ್ತು ಕನ್ನಡ ತಾಯ ನೋಟ. ಕುವೆಂಪು ಅವರ ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ ಮತ್ತು ಕೆ.ಎಸ್.ನರಸಿಂಹಸ್ವಾಮಿಯವರ ಡೊಮಿನಿಯನ್ ಜನನ ಇವನ್ನು ಹೆಸರಿಸಬಹುದು[೧].

ಹೊರಗೆ ವಿಚಾರವಾಹಿನಿ, ಒಳಗೆ ಭಾವ ಪ್ರವಾಹ, ಅತ್ಯಂತ ವಿಚಾರಯುತವೂ ಪ್ರಜ್ಞಾಪೂರ್ವಕವಾದ ಕಲೆಗಾರಿಕೆಯೂ ಉಳ್ಳ ಭಾವಗೀತೆಯ ರೂಪವಾದ ಪ್ರಗಾಥ ಎಲ್ಲ ಭಾಷೆಗಳಲ್ಲೂ ಎಲ್ಲ ಕವಿಗಳಿಗೂ ಎಲ್ಲ ಜನರಿಗೂ ಪ್ರಿಯವಾದ ಕಾವ್ಯರೂಪವಾಗಿದೆ[೨].

ಬಾಹ್ಯ ಕೊಂಡಿಸಂಪಾದಿಸಿ

  1. ವಿಶ್ವವಿದ್ಯಾನಿಲಯ ವಿಶ್ವಕೋಶ|ಪ್ರಗಾಥ

ಉಲ್ಲೇಖಸಂಪಾದಿಸಿ

  1. http://doddarangegowda.com/ಪ್ರಗಾಥ-ಪ್ರತಿಭೆ/
  2. https://www.prajavani.net/article/ಪ್ರಗಾಥ
"https://kn.wikipedia.org/w/index.php?title=ಪ್ರಗಾಥ&oldid=913641" ಇಂದ ಪಡೆಯಲ್ಪಟ್ಟಿದೆ