ಪೂರಣಚಂದ ಜೋಶಿ(1907-1980)- ಭಾರತದ ಕಮ್ಯೂನಿಸ್ಟ್ ಪಕ್ಷದ ಹಿರಿಯ ಕಾರ್ಯಕರ್ತ.

೧೯೩೭ರ ಚಿತ್ರ

ಆರಂಭಿಕ ಜೀವನ ಬದಲಾಯಿಸಿ

ಉತ್ತರ ಪ್ರದೇಶದ ಆಲ್ಮೋರಾದಲ್ಲಿ 1907ರಲ್ಲಿ ಜನನ. ಪೂಣ್ ಹೆಸರು ಪೂರಣ ಚಂದರ ಜೋಶಿ. ಇವರ ತಂದೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಗಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಎಂ. ಎ. ಮುಗಿಸಿದ ತರುವಾಯ ಪದವಿ ಪಡೆದರು (1929). 1928-29ರ ಅವಧಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಚರಿತ್ರೆಯ ಅಧ್ಯಾಪಕರಾಗಿದ್ದರು. ವಿಶ್ವವಿದ್ಯಾಲಯದಲ್ಲಿರುವಾಗಲೇ ವಿದ್ಯಾರ್ಥಿಗಳ ಮತ್ತು ಉತ್ತರ ಪ್ರದೇಶದ ಯುವಕಸಂಘದ ಮುಖಂಡರಾಗಿದ್ದರು.

ರಾಜಕೀಯದಲ್ಲಿ ಬದಲಾಯಿಸಿ

1928ರಲ್ಲಿ ಇವರು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗುಪ್ತ ಭೂಗತ ಕಮ್ಯೂನಿಸ್ಟ ಗುಂಪುಗಳ ರಚನೆಯಲ್ಲಿ ತೊಡಗಿದರು. 1929ರ ಮಾರ್ಚ್ 20ರಂದು ಮೀರತ್ ಪಿತೂರಿ ಮೊಕದ್ದಮೆಯಲ್ಲಿ ಇವರನ್ನು ದಸ್ತಗಿರಿ ಮಾಡಲಾಯಿತು. ಮಾರ್ಚ್ 1929-ಆಗಸ್ಟ್ 1933ರಲ್ಲಿ ಮೀರತ್ ಸೆರೆಮನೆಯಲ್ಲಿದ್ದ ಇವರು ಅಲ್ಲಿಂದ ಬಿಡುಗಡೆಯಾದೊಡನೆ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಧುಮುಕಿ ಜಿ. ಆಧಿಕಾರಿಯವರೊಡನೆ ಸೇರಿಕೊಂಡು ಕಮ್ಯೂನಿಸ್ಟ್ ಚಳವಳಿಯ ಸಂಘಟನೆಯ ಕಾರ್ಯದಲ್ಲಿ ನಿರತರಾದರು. ಅನಂತರ ಪಕ್ಷದ ಕೇಂದ್ರ ಸಮಿತಿಗೆ ಅಧಿಕಾರಿಯವರೊಡನೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾನ್ಪುರದಲ್ಲಿ 1934ರಲ್ಲಿ ನಡೆದ ಬಟ್ಟೆ ಗಿರಿಣಿ ಕಾರ್ಮಿಕರ ಮುಷ್ಕರದಲ್ಲಿ ಅದರ ನಾಯಕರಾಗಿದ್ದ ಜೋಶಿಯವರನ್ನು ಬಂಧಿಸಿ ಎರಡೂವರೆ ವರ್ಷ ಜೈಲಿನಲ್ಲಿಡಲಾಯಿತು. ಜೋಶಿಯವರು ಆದರ್ಶ ಕೈದಿಯಂತೆ ನಡೆದುಕೊಂಡು ಶಿಕ್ಷೆಯಿಂದ ಪರಮಾವಧಿ ರಿಯಾಯಿತಿ ಪಡೆದು ಬಹುಬೇಗ ಬಿಡುಗಡೆ ಹೊಂದಿದರು (1936). ಪುನಃ ಗುಪ್ತ ಚಟುವಟಿಕೆಗಳಲ್ಲಿ ನಿರತರಾದರು. ಇದೇ ಸಮಯದಲ್ಲಿ ಅಧಿಕಾರಿಯವರು ದಸ್ತಗಿರಿಯಾದುದರಿಂದ ಚದರಿಹೋಗಿದ್ದ ಪ್ರಾಂತೀಯ ಕಮ್ಯೂನಿಸ್ಟ್ ಗುಂಪುಗಳ ಸಂಪರ್ಕ ಬೆಳೆಸಿ ಅವನ್ನು ಒಂದುಗೂಡಿಸುವ ಕೆಲಸದಲ್ಲಿ ಇವರು ತೊಡಗಬೇಕಾಯಿತು. ಅನಂತರ ಜೋಶಿಯವರು ಪಕ್ಷದ ಕೇಂದ್ರ ಪಾಲಿಟ್ ಬ್ಯೂರೋವನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾದರು. 1935ರ ಪ್ರಪಂಚ ಕಮ್ಯೂನಿಸ್ಟ್ ಅಂತರರಾಷ್ಟ್ರೀಯದ ಏಳನೆಯ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಧರಿಸಲಾದ ನೀತಿಯನ್ನನುಸರಿಸಿ ಭಾರತದ ಕಮ್ಯೂನಿಸ್ಟ್ ಪಕ್ಷವೂ ಜೋಶಿಯವರ ನೇತೃತ್ವದಲ್ಲಿ ಇತರ ರಾಜಕೀಯ ಪಕ್ಷಗಳೊಡನೆ ಒಕ್ಕೂಟ ಸ್ಥಾಪಿಸಿ ಕಾಂಗ್ರೆಸ್ ಪಕ್ಷದ ಜೊತೆ ರಾಜಕೀಯ ಹೊರಾಟದಲ್ಲಿ ಭಾಗವಹಿಸಿತು. ಆದರೂ ತನ್ನ ಸ್ವತಂತ್ರ ನಿಲುವನ್ನು ಬಿಡದೆ, ಕಾಂಗ್ರೆಸ್ ಸಮಾಜವಾದಿಗಳನ್ನು ಮತ್ತು ಇತರ ಎಡಪಕ್ಷದ ಕಾರ್ಮಿಕ ಮುಖಂಡರನ್ನು ಒಟ್ಟುಗೂಡಿಸಿ ಅಖಿಲಭಾರತ ವಿದ್ಯಾರ್ಥಿ ಫೆಡರೇಷನ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿತು. ಕಾಂಗ್ರಸ್ಸಿನ ಮೊದಲ ಮಂತ್ರಿಮಂಡಲ ರಚನೆಯಾದಾಗ ಕಮ್ಯೂನಿಸ್ಟ ಪಕ್ಷ ತನ್ನ ಮೊದಲನೆಯ ಮಲುಪತ್ರವಾದ ನ್ಯಾಷನಲ್ ಫ್ರಂಟ್ ಎಂಬ ಸಾಪ್ತಾಹಿಕ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿತು. ಜೋಶಿಯವರು ಅದರ ಸಂಪಾದಕರಾಗಿದ್ದರು. ಎರಡನೆಯ ಮಹಾಯುದ್ಧದ ಮೊದಲ ವರ್ಷಗಳಲ್ಲಿ (1939-41) ಬ್ರಿಟಿಷರ ವಿರುದ್ಧ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಜೋಶಿ ಅನೇಕ ಚಳವಳಿಗಳನ್ನು ನಡೆಸಿದರು. ಭಾರತದ ಒಂದು ಕಾಸೂ ಯುದ್ಧಕ್ಕೆ ನಿವಿಯೋಗವಾಗಬಾರದು. ಭಾರತದ ಒಬ್ಬ ಯೋಧನೂ ಬ್ರಿಟಿಷ್ ಸೈನ್ಯಕ್ಕೆ ಸೇರಬಾರದು ಎನ್ನುವುದು ಜೋಶಿಯವರ ನಿಲುವಾಗಿತ್ತು. ಯುದ್ಧ ಮುಗಿದ ಅನಂತರ ಕಮ್ಯೂನಿಸ್ಟ್ ಪಕ್ಷ ಸ್ಪಷ್ಟವಾದ ಸಾಮ್ರಾಜ್ಯ ಶಾಹಿವಿರುದ್ಧ ನೀತಿ ರೂಪಿಸಿಕೊಂಡಿತು. ಜೋಶಿಯವರ ನಾಯಕತ್ವದಲ್ಲಿ ಕಮ್ಯೂನಿಸ್ಟ್ ಪಕ್ಷ ಕಾರ್ಮಿಕರಲ್ಲಿ, ರೈತರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ಆಶ್ರಿತ ಸಂಸ್ಥಾನಗಳ ಜನತೆಯಲ್ಲಿ ತನ್ನ ಪ್ರಭಾವ ಬೆಳೆಸಿಕೊಂಡು ಅನೇಕ ಚಳವಳಿಗಳನ್ನು ನಡೆಸಿತು. ಕಾಶ್ಮೀರ ಬಿಟ್ಟು ತೊಲಗಿ ಚಳವಳಿ, ನಿಜಾಮರ ವಿರುದ್ಧ ನಡೆಸಿದ ತೆಲಂಗಾಣ ಚಳವಳಿ, ಸಿ. ಪಿ. ರಾಮಸ್ವಾಮಿ ಅಯ್ಯರ್ ವಿರುದ್ಧ ತಿರುವಾಂಕೂರಿನಲ್ಲಿ ನಡೆಸಿದ ಚಳವಳಿ-ಇವು ಜೋಶಿಯವರ ನೇತೃತ್ವದಲ್ಲಿ ನಡೆದ ಕೆಲವು ಮುಖ್ಯ ಅಂದೋಲನಗಳು. ಇವೆಲ್ಲಕ್ಕಿಂತ ಕ್ರಾಂತಿಕಾರಿ ಚಳವಳಿಯೆಂದರೆ ಸಶಸ್ತ್ರ ಪಡೆಗಳಲ್ಲಿ ಪ್ರಭಾವವನ್ನು ಬೀರಿ ಬ್ರಿಟಿಷ್ ಆಡಳಿತ ವಿರುದ್ಧ ಆರ್.ಐ.ಎನ್. ದಂಗೆಯನ್ನು ಪ್ರಚೋದಿಸಿದ್ದು. ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಜೋಶೀಯವರ ಮುಂದಾಳುತನವನ್ನು ಎಡಗುಂಪಿನ ರಣದಿವೆಯವರು ವಿರೋಧಿಸಿದರು. ಕಲ್ಕತ್ತದಲ್ಲಿ ನಡೆದ ಕಮ್ಯೂನಿಷ್ಟ್ ಪಕ್ಷದ ಅಧಿವೇಶನದ (1948) ತೀರ್ಮಾನದ ಪ್ರಕಾರ ಇವರನ್ನು ಪಕ್ಷದಿಂದ ತೆಗೆದುಹಾಕಲಾಯಿತು (1949). ಆದರೆ ಒಂದೆರಡು ವರ್ಷಗಳಲ್ಲಿ ರಣದಿವೆಯವರ ನಾಯಕತ್ವ ಕುಸಿದು ಬಿದ್ದು ಜೋಶಿಯವರನ್ನು ಯಾವ ಷರತ್ತೂ ಇಲ್ಲದೆ 1950-51ರಲ್ಲಿ ಪಕ್ಷಕ್ಕೆ ಮತ್ತು ಸೇರಿಸಿಕೊಳ್ಳಲಾಯಿತು. ಆದರೆ ಇವರು ಹೊಸ ನಾಯಕತ್ವದಲ್ಲಿ ಭಾಗವಹಿಸಲು ನಿರಾಕರಿಸಿ ಪಕ್ಷದಲ್ಲಿದ್ದ ಗುಂಪುಗಾರಿಕೆ ಮತ್ತು ಪಂಥಾಭಿಮಾನ ನೀತಿಗಳ ವಿರುದ್ಧ ಹೋರಾಟ ನಡೆಸಿದರು. 1956ರ ವೇಳೆಗೆ ಪಕ್ಷದ ನೀತಿಯಲ್ಲಿ ಸಾಕಷ್ಟು ಪರಿವರ್ತನೆ ನಡೆದು ಅದೇ ವರ್ಷ ಪಾಲ್‍ಘಾಟಿನಲ್ಲಿ ನಡೆದ ಅಧಿವೇಶನದಲ್ಲಿ ಜೋಶಿ ಮತ್ತು ಅವರ ಅನುಯಾಯಿಗಳು ಪಕ್ಷದ ನಾಯಕತ್ವದಲ್ಲಿ ಪಾಲುಗೊಂಡರು. ಆದರೆ ಪಕ್ಷದಲ್ಲಿ ಒಳಜಗಳಗಳು ನಡೆಯುತ್ತಲೇ ಇದ್ದವು. ಇವು 1964ರಲ್ಲಿ ಪಕ್ಷ ಇಬ್ಭಾಗವಾಗಿ ಒಡೆದಾಗಲೂ ಪೂರ್ಣವಾಗಿ ನಿಲ್ಲಲಿಲ್ಲ. 1967ರಲ್ಲಿ ನಡೆದ ಪಾಟ್ನ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಜನಸಂಘ ಮತ್ತು ಸ್ವತಂತ್ರ ಪಕ್ಷಗಳೊಡನೆ ಒಕ್ಕೂಟವನ್ನು ಸ್ಥಾಪಿಸಬೇಕೆಂಬ ಸಮಯಸಾಧಕ ನೀತಿಯನ್ನು ಕಮ್ಯೂನಿಷ್ಟ ಪಕ್ಷ ಒಪ್ಪಿಕೊಂಡಾಗ ಜೋಶಿಯವರು ಅದನ್ನೊಪ್ಪದೆ ಕಾರ್ಯರಂಗದಿಂದ ಹಿಂದೆ ಸರಿದರು. ಅನಂತರ ಪಕ್ಷದಲ್ಲಿ ಸದಸ್ಯತ್ವವನ್ನು ಉಳಿಸಿಕೊಂಡು ಅಲ್ಮೋರಾದಲ್ಲಿ ಪಕ್ಷದ ನಿಷ್ಠಾವಂತ ಕೆಲಸಗಾರರಾಗಿ ಮುಂದುವರಿದರು. ಕಮ್ಯೂನಿಷ್ಟ ಪಕ್ಷ ಇಬ್ಭಾಗವಾದಾಗ ಆ ದುರಂತಕ್ಕೆ ಮತ್ತು ಭಾರತದ ಕಮ್ಯೂನಿಸ್ಟ್ ಪಕ್ಷದ ಚರಿತ್ರೆಯಲ್ಲಿ ಸಂಶೋಧನೆ ನಡೆಸಿದರು.. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ತಮ್ಮ ಗ್ರಂಥ ಭಂಡಾರವನ್ನು, ಪತ್ರಾಗಾರವನ್ನು ಸ್ಥಾಪಿಸಿ ಭಾರತದ ಕಮ್ಯೂನಿಸ್ಟ್ ಪಕ್ಷದ ಸಾಧಾರಣ ಚರಿತ್ರೆಯನ್ನು ಬರೆಯುವ ಕಾರ್ಯದಲ್ಲಿ ತೊಡಗಿದರು. ಜೋಶಿಯವರು ಪಕ್ಷದ ನಿಯತಕಾಲಿಕಗಳ ಸಂಪಾದಕರಾಗಿ 1948ರ ವರೆಗೂ ಕೆಲಸ ಮಾಡಿದರು. ಅವರು ಆಯಕರಾಗಿದ್ದಾಗ ಅನೇಕ ಕಿರುಹೊತ್ತಗೆಗಳನ್ನು ಪ್ರಕಟಿಸಿದುದಲ್ಲದೆ ನ್ಯೂ ಏಜ್ ಮಾಸಿಕ ಮತ್ತು ನ್ಯೂ ಏಜ್ ಸಾಪ್ತಾಹಿಕಗಳ ಸಂಪಾದಕರೂ ಆಗಿದ್ದರು. ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ವೈಯಕ್ತಿಕ ಜೀವನ ಬದಲಾಯಿಸಿ

1943 ರಲ್ಲಿ, ಅವರು ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿಯಲ್ಲಿ ಭಾಗವಹಿಸಿದ ಕ್ರಾಂತಿಕಾರಿ ಕಲ್ಪನಾ ದತ್ತ (1913-1995) ಅವರನ್ನು ವಿವಾಹವಾದರು. ಅವರಿಗೆ ಚಂದ್ ಮತ್ತು ಸೂರಜ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಚಾಂದ್ ಜೋಶಿ (1946-2000) ಒಬ್ಬ ಪ್ರಸಿದ್ಧ ಪತ್ರಕರ್ತ, ಅವರು ಹಿಂದುಸ್ತಾನ್ ಟೈಮ್ಸ್ ನಲ್ಲಿ ಕೆಲಸ ಮಾಡಿದರು. ಅವರು ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದರು, ಭಿಂದ್ರನ್ ವಾಲೆ: ಮಿಥ್ ಅಂಡ್ ರಿಯಾಲಿಟಿ (1985). ಚಾಂದ್ ಅವರ ಎರಡನೇ ಪತ್ನಿ ಮಾನಿನಿ (ನೀ ಚಟರ್ಜಿ, ಬಿ 1961) ಕೂಡ ಪತ್ರಕರ್ತೆ, ಅವರು ಟೆಲಿಗ್ರಾಫ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾನಿನಿ ಚಟರ್ಜಿ ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿಯ ಕುರಿತು ಒಂದು ಪುಸ್ತಕವನ್ನು ಬರೆದಿದ್ದಾರೆ, ಶೀರ್ಷಿಕೆ, ಡು ಅಂಡ್ ಡೈ: ದಿ ಚಿತ್ತಗಾಂಗ್ ದಂಗೆ 1930-34 (1999). [೧]


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "This above All". The Tribune. 5 February 2000. Retrieved 19 May 2010.