ಪುಂಗನೂರು (ಗೋವಿನ ತಳಿ)

ಪುಂಗನೂರು ತಳಿಯ ಹುಟ್ಟೂರು ಚಿತ್ತೂರು ಜಿಲ್ಲೆಯ ಪುಂಗನೂರು. ಅಲ್ಲಿಯ ರಾಜರು ಈ ತಳಿಯನ್ನು ಅಭಿವೃಧ್ಧಿಪಡಿಸಿದರೆಂದು ಪ್ರತೀತಿ. ಪುಂಗನೂರು ತಳಿಯ ಹಸುಗಳು ಉತ್ತಮ ಹೈನುಗಾರಿಕಾ ತಳಿಗಳು ಮಾತ್ರವಲ್ಲ, ಹುಡಿಮಣ್ಣಿನ ಭೂಮಿಯಲ್ಲಿ ಉತ್ತಮ ಕೆಲಸಗಾರ ತಳಿ ಕೂಡ ಹೌದು. ಎತ್ತುಗಳನ್ನು ಟಾಂಗಾಗಳಿಗೆ ಮುಖ್ಯವಾಗಿ ಬಳಸುತ್ತಾರೆ. ಕಡಿಮೆ ತೂಕದ ಗುಡ್ಡಗಾಡಿನ ಕೆಲಸಗಳಿಗೆ ಸೂಕ್ತವಾದ ೩ ತಳಿಗಳಲ್ಲಿ (ಮಲೆನಾಡು ಗಿಡ್ಡ, ವೇಚೂರ್, ಪುಂಗನೂರು) ಇದೂ ಒಂದೆಂಬುದು ಇದರ ಹೆಗ್ಗಳಿಕೆ. ಪಲಮನೇರ್ ಆಸುಪಾಸಿನ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಬತ್ತದ ಹುಲ್ಲು, ಕಬ್ಬಿನ ಸಿಪ್ಪೆ ಇತ್ಯಾದಿಗಳನ್ನು ಇವುಗಳ ಆಹಾರವಾಗಿ ನೀಡಲಾಗುತ್ತದೆ. ಶೇಂಗಾ ಹಿಂಡಿ ಕೂಡ ಪ್ರಚಲಿತವಿರುವ ಮೇವು. ಪುಂಗನೂರು ತಳಿಗಳು ಬಿಳಿ, ಬೂದು ಹಾಗು ಕೌಲು ಬಣ್ಣದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಬಿಳಿದನಗಳ ಮೇಲೆ ಅರೆಗಪ್ಪು ಬಣ್ಣದ ಪಟ್ಟೆಗಳಿರುವ ಹಸುಗಳು ಅಪರೂಪವೇನಲ್ಲ. ಈ ತಳಿಯ ಹಸುಗಳು ಮಧ್ಯಮ ಗಾತ್ರದವಾದರೂ ತುಂಬ ಸಧೃಡ ಎನ್ನುತ್ತಾರೆ ರೈತರು.

ಪುಂಗನೂರು
ತಳಿಯ ಹೆಸರುಪುಂಗನೂರು
ಮೂಲಆಂಧ್ರಪ್ರದೇಶ
ವಿಭಾಗಉಭಯ, ಮಧ್ಯಮ ಗಾತ್ರ
ಬಣ್ಣಬಿಳಿ, ಬೂದು ಹಾಗೂ ಕೌಲು
ಮುಖಅಗಲ ಹಣೆ
ಕೊಂಬುಗಿಡ್ಡ ಗೋಪುರಾಕೃತಿ
ಕಾಲುಗಳುಸಣ್ಣ

ಅಗಲ ಹಣೆ, ಗಿಡ್ಡ ಗೋಪುರಾಕೃತಿಯ ಕೆಲವೊಮ್ಮೆ ಹಿಂಬಾಗಿದ ಕೋಡು, ಉದ್ದ ಕತ್ತು, ಪುಟ್ಟ ಕಾಲುಗಳು ಇತ್ಯಾದಿ ಇವುಗಳ ದೈಹಿಕ ಲಕ್ಷಣಗಳು. ಇದನ್ನು ಪ್ರಪಂಚದ ಅತಿ ಗಿಡ್ಡ ತಳಿ ಎಂದೂ ಕರೆಯಬಹುದು. ಇವುಗಳ ಎತ್ತರ ೬೦ರಿಂದ ೧೦೦ ಸೆ.ಮೀ. ಮಾತ್ರ. ಇವುಗಳ ತೂಕ ೧೧೫ರಿಂದ ೨೦೦ ಕೆ.ಜಿ. ಇಷ್ಟುಚಿಕ್ಕವಾದರೂ ಇವುಗಳ ಹಾಲು ನೀಡುವ ಸಾಮರ್ಥ್ಯ ಅಗಾಧ. ಇವು ದಿನಕ್ಕೆ ೩ರಿಂದ ೫ ಲೀ. ಹಾಲು ನೀಡಬಲ್ಲವು.

ಭಾರತೀಯ ಗೋವಂಶದ, ಅಳಿವಿನಂಚಿಗೆ ಅತ್ಯಂತ ವೇಗವಾಗಿ ಜಾರುತ್ತಿರುವ ತಳಿಗಳಲ್ಲಿ ಪುಂಗನೂರು ಕೂಡ ಒಂದು. ಒಂದು ಕಾಲದಲ್ಲಿ ಅಂದ್ರಪ್ರದೇಶದ ವಯಲ್ಪಾಡು, ಮದನಪಲ್ಲಿ, ಪಲಮನೇರ್ ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಮನೆಮನಗಳಲ್ಲಿ ತುಂಬಿದ್ದ ಇದು, ಇಂದು ತನ್ನ ಹುಟ್ಟೂರಿನಲ್ಲಿಯೇ ಬೆರಳೆಣಿಕೆಯ ಸಂಖ್ಯೆಗಿಳಿದಿದೆ. ೨೦೦೫ರಲ್ಲಿ ಆಚಾರ್ಯ ಎನ್.ಜಿ. ರಂಗ ಕೃಷಿ ವಿಶ್ವವಿದ್ಯಾಲಯವು ಪುಂಗನೂರು ತಳಿಯ ಪ್ರಾಬಲ್ಯವಿದ್ದ ಪ್ರದೇಶಗಳಲ್ಲಿನ ೧೫೦ ಹಳ್ಳಿಗಳಲ್ಲಿ ನಡೆಸಿದ ಗಣತಿಯಲ್ಲಿ ಕೇವಲ ೨೧ ಶುಧ್ಧ ಪುಂಗನೂರು ತಳಿಯ ಗೋವುಗಳು ಪತ್ತೆಯಾದವು! ಈ ತಳಿಯ ಉಳಿವಿಗಾಗಿ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಪ್ರಯತ್ನಿಸಿದೆ.

ಆಧಾರ/ಆಕರ

ಬದಲಾಯಿಸಿ

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.