ಪಂಜಾಬಿ ಸಾಹಿತ್ಯ
ಪ್ರದೇಶ, ಜನ ಮತ್ತು ಭಾಷೆ
ಬದಲಾಯಿಸಿಪಂಚನದಿಗಳ ರಾಜ್ಯವಾದ ಪಂಜಾಬ್, ಭಾರತ ಮತ್ತು ಪಾಕಿಸ್ತಾನಗಳಿಗೆ ಹಂಚಿಹೋಗಿರುವ ಅಚ್ಚ ಹಸಿರು ಪ್ರದೇಶ. ಸಿಂಧೂ ನದಿಯ ದೊಡ್ಡ ಉಪನದಿಗಳಾದ ರಾವೀ, ಬಿಯಾಸ್, ಚೀನಾಬ್, ಜೀಲಂ, ಮತ್ತು ಸಟ್ಲೆಜ್‍ಗಳಿಂದ ಆ ಹೆಸರು ಪ್ರಾಪ್ತವಾಗಿದೆ. ಈ ನದಿಗಳು ಮಂಜುಗಡ್ಡೆಯಿಂದ ಸದಾ ಆವೃತವಾಗಿರುವ ಹಿಮಾಲಯ ಪರ್ವತಶೇಣಿಯಲ್ಲಿ ಜನಿಸಿ, ಶಿಲಾವೃತ ಭೂಭಾಗವನ್ನು ಸೀಳಿ ಮಾರ್ಗವನ್ನು ನಿರ್ಮಿಸಿ ಸಿಂಧೂನದಿಯ ದಿಕ್ಕಿಗೆ ರಭಸದಿಂದ ಧಾವಿಸಿ, ಗುರಿ ಮುಟ್ಟುವ ವರೆಗೆ ಮೈದಾನ ಪ್ರದೇಶದಲ್ಲಿ ವೇಗವಾಗಿ ಪ್ರವಹಿಸುತ್ತವೆ.
ಸಿಂಧೂನದಿಯ ಉಪನದಿಗಳಿಂದ ನೀರಾವರಿ ಅಚ್ಚುಕಟ್ಟಿಗೆ ಒಳಗಾದ ಕಣಿವೆ ಪ್ರದೇಶ ಪ್ರಪಂಚದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲೊಂದರ ತವರು ಎನ್ನುವುದು ಸುವೇದ್ಯ. ಕ್ರಿ.ಪೂ. 4000ದ ವೇಳೆಗಾಗಲೇ ಗಮನಾರ್ಹ ಮಟ್ಟದ ನಗರಜೀವನಕ್ರಮವನ್ನು ರೂಢಿಸಿಕೊಂಡ, ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿದ ಉತ್ಪನ್ನಶೀಲ ಚಟುವಟಿಕೆಗಳಿಂದ ಕೂಡಿದ, ಪರಿಷ್ಕøತ ವರ್ಗ ಸಮಾಜದ ಆಧಾರದ ಮೇಲೆ ಹರಪ್ಪ ಸಂಸ್ಕøತಿ ವಿಕಾಸನಗೊಳ್ಳುತ್ತಿತ್ತು. ಅನಂತರ ಕ್ರಿ.ಪೂ. 2000ದ ವೇಳೆಗೆ ಆರ್ಯರೆಂದು ಕರೆಸಿಕೊಳ್ಳುವ ಒಂದು ಬುಡಕಟ್ಟಿನ ಜನ ಸಿಂಧೂ ಕಣಿವೆಯ ತಪ್ಪಲಿನಲ್ಲಿ ನೆಲಸಲು ಬಂದರು. ಕಾಲಕ್ರಮೇಣ ಅವರ ಪಂಚನದಿ ಪ್ರದೇಶದ ಸ್ಥಳೀಕರೊಡನೆ ಒಂದಾಗ ಸೇರಿದರು. ಆಗ ಆ ಪ್ರದೇಶದ ಅಭಿವೃದ್ಧಿ ಕಾರ್ಯದಲ್ಲಿ ಒಂದು ಪರ್ವಕಾಲ ಪ್ರಾರಂಭವಾಯಿತು. ಕ್ರಿ.ಪೂ. 1000ರ ವೇಳೆಗೆ ಈ ಬುಡಕಟ್ಟು ಜನಾಂಗ ವ್ಯವಸ್ಥಿತವಾಗಿ ನೆಲೆಸಿ, ಬೇರೆ ಬೇರೆ ರಾಜ್ಯಗಳು ಮೂಡಿದುವು. ಇಂದಿನ ಪಂಜಾಬಿಗಳ ಪೂರ್ವಜರ ಸಂಸ್ಕೃತಿಯ ಪ್ರಥಮ ಅಧಿಕೃತ ಸೂಚನೆಗೂ ಇಂಥ ರಾಜ್ಯಗಳಲ್ಲಿ ಒಂದೆನಿಸಿದ್ದ ತಕ್ಷಶಿಲೆಗೂ ಸಂಬಂಧವನ್ನು ಕಲ್ಪಿಸಲಾಗಿದೆ. ಆರ್ಯರ ಕಾಲದಿಂದಲೂ ಪಂಜಾಬ್ ವಿದೇಶೀಯರ ಆಕ್ರಮಣಕ್ಕೆ ಮತ್ತೆ ಮತ್ತೆ ತುತ್ತಾಗುತ್ತಲೇ ಬಂದಿರುವುದರಿಂದ ಅದನ್ನು ಭಾರತದ ಹೆಬ್ಬಾಗಿಲು ಎಂದು ಕರೆದಿರುವುದು ಸಮುಚಿತವಾಗಿದೆ.
ಪಂಜಾಬಿ ಭಾಷೆ
ಬದಲಾಯಿಸಿಪಂಜಾಬಿ ಭಾಷೆಯು ಇಂಡೋ-ಆರ್ಯನ್ ಭಾಷಾ ಸಮೂಹದಲ್ಲಿ ಒಂದು. ಇತ್ತೀಚಿನ ಸಮೀಕ್ಷೆಯ ಪ್ರಕಾರ (ಗಿಲ್ : 1962) ಅದು ಪೂರ್ವ ಪಂಜಾಬ್ (ಇಂಡಿಯ) ಮತ್ತು ಪಶ್ಚಿಮ ಪಂಜಾಬ್ (ಪಾಕಿಸ್ತಾನ) ಗಳಿಗೆ ಸೇರಿದಂತೆ ಒಟ್ಟು 36 ಮಿಲಿಯ ಜನರ ಭಾಷೆಯಾಗಿದೆ. ಹಿಂದಿಯ ಜೊತೆಗೆ ಪಂಜಾಬಿ ಪೂರ್ವ ಪಂಜಾಬಿನ ಅಧಿಕೃತ ರಾಜ್ಯ ಭಾಷೆಯಾಗಿದೆ. ಈ ರಾಜಕೀಯ ಹಾಗೂ ಭೌಗೋಳಿಕ ವಿಭಜನೆ ಏನೇ ಇರಲಿ, ಪಶ್ಚಿಮ ಪಂಜಾಬಿನ ಜನ ಆಡುವ ಭಾಷಾರೂಪಗಳನ್ನು ಲಹಂದಾ ಎಂದು ಕರೆಯಲಾಗಿದೆ. ಇವನ್ನು ಇಂಡೋ-ಆರ್ಯನ್ ಭಾಷಾಸಮೂಹದ ಪ್ರತ್ಯೇಕ ಶಾಖೆಯೆಂದೇ ಪರಿಗಣಿಸಲಾಗಿದೆ. ಆದರೆ ಇದನ್ನು ಪುನಃ ಪರಿಶೀಲಿಸಬೇಕೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. (ಗಿಲ್ :1962) ಈ ಭಾಷಾರೂಪಗಳನ್ನು ಸುನೀತಿ ಕುಮಾರ ಚಟರ್ಜಿ ಅವರು ಲಹಂದಾ ಮತ್ತು ಹಿಂದ್ಕೀ ಎಂದು ಕರೆಯುತ್ತಾರೆ. ಅವರ ಹೇಳಿಕೆಯನ್ನು ಗಮನಿಸೋಣ :
“ಹಿಂದ್ಕೀ ಅಥವಾ ಲಹಂದಾ ಅಥವಾ ಪಶ್ಚಿಮ ಪಂಜಾಬಿ ಒಂದು ಭಾಷೆಯಾಗಿಲ್ಲ. ಅದು ಎಂದಿಗೂ ಒಂದು ಸಾಮಾನ್ಯ ಸಾಹಿತ್ಯಿಕ ಭಾಷೆಯ ಹೆಸರಿನಲ್ಲಿ ಒಂದುಗೂಡಿಸಲಾಗದ ಭಿನ್ನ ಭಾಷಾರೂಪಗಳ ಗುಂಪು. ಈ ಭಾಷಾರೂಪಗಳು ಪಶ್ಚಿಮ ಪಂಜಾಬಿನಲ್ಲಿ ಮತ್ತು ವಾಯವ್ಯ ಗಡಿನಾಡುಗಳಲ್ಲಿ ಪ್ರಚಲಿತವಾಗಿವೆ. ಷಹಪುರ ಜಿಲ್ಲೆಯ ಭಾಷೆಯಾದ ಮುಲ್ತಾನಿ, ಔಟ್ಟಕ್‍ನ ಪರಿಸರದ ನುಡಿ ಹಾಗೂ ಆಫ್‍ಘಾನಿಸ್ತಾನದಲ್ಲಿ ನೆಲೆಸಿದ ಹಿಂದೂಗಳು ಆಡುವ ಪಶ್ಚಿಮ ಪಂಜಾಬಿ - ಇವು ವಾಯುವ್ಯ ಪ್ರಾಕೃತಕ್ಕೆ ಸೇರಿದ ಮಾದರಿ ಭಾಷೆಗಳಾಗಿವೆ. ಆ ಪ್ರದೇಶಕ್ಕೆ ಹಿಂದೆ ಗಾಂಧಾರ ಎಂಬ ಹೆಸರಿದ್ದುದರಿಂದ ವಾಯವ್ಯ ಪ್ರಾಕೃತವನ್ನು ಎಚ್.ಡಬ್ಲು. ಬೇಲಿ ಅವರು ಗಾಂಧಾರೀ ಎಂದು ಕರೆದಿದ್ದಾರೆ. (1963)”
ಕ್ರಿ.ಶ. ಐದನೆಯ ಶತಮಾನದಲ್ಲಿದ್ದ ಸುಪ್ರಸಿದ್ಧ ಸಂಸ್ಕøತ ವೈಯಾಕರಣಿಯಾದ ಪಾಣಿನಿ ಪಶ್ಚಿಮ ಪಂಜಾಬಿನವನೆಂದು ಹೇಳಲಾಗಿದೆ. ಪಂಜಾಬಿ ಭಾಷೆಗೆ ಸೇರಿದ ಈ ಪಶ್ಚಿಮ ಭಾಷಾರೂಪಗಳು ಜನಪದ ಸಾಹಿತ್ಯದಂಥ ತೋಂಡೀ ಸಂಪ್ರದಾಯದ ಸಾಹಿತ್ಯವನ್ನು ಹೊಂದಿವೆಯಲ್ಲದೆ ಗ್ರಾಂಥಿಕ ಸಾಹಿತ್ಯವನ್ನು ಹೊಂದಿಲ್ಲವೆಂದು ಇತ್ತೀಚಿನವರೆಗೂ ವಿದ್ವಾಂಸರು ನಂಬಿದ್ದರು. ಉದಾಹರಣೆಗೆ ಆ ಪ್ರದೇಶದ ಪ್ರಸಿದ್ಧ ಕಾಲ್ಪನಿಕ ಕಥಾನಾಯಕನಾದ ರಾಜಾ ರಿಸಾಲೂನ ಸಾಹಸ ಕೃತ್ಯಗಳನ್ನು ವರ್ಣಿಸುವ ಪ್ರಸಿದ್ಧ ಕಥೆಗಳು, ಲಾವಣಿಗಳು, ಮತ್ತಿತರ ಪದ್ಯಗಳು ಅತ್ಯಂತ ಜನಪ್ರಿಯವಾಗಿರುವುದನ್ನು ನೋಡಬಹುದು. ಈ ಬಗ್ಗೆ ಆರ್.ಸಿ. ಟೆಂಪಲ್ ವ್ಯಾಪಕವಾಗಿ ನಡೆಸಿರುವ (1884) ಸಂಶೋಧನೆ ಉಪಲಬ್ಧವಿದೆ. ಪಶ್ಚಿಮ ಪಂಜಾಬಿಯ ಭಾಷಾ ರೂಪಗಳು ಲಾವಣಿಗಳಂಥ ತೋಂಡೀ ಸಂಪ್ರದಾಯದ ಸಾಹಿತ್ಯವನ್ನು ಒಳಗೊಂಡಿದ್ದುವಲ್ಲದೆ ಗ್ರಾಂಥಿಕ ಸ್ವರೂಪವನ್ನು ಇತ್ತೀಚಿನ ಕಾಲದವರೆಗೂ ಪಡೆದುಕೊಳ್ಳಲಿಲ್ಲವೆಂಬುದನ್ನು ಒಪ್ಪಿಕೊಳ್ಳುವಾಗ, ಪಂಜಾಬಿಯ ಒಂದು ಒಳಪ್ರಭೇದವಾದ ಹಿಂದ್ಕೀ ರೂಪದಲ್ಲಿ ಕ್ರಿ.ಶ. 16 ನೆಯ ಶತಮಾನದಲ್ಲಿ ರಚಿತವಾಗಿರುವ ಜನಮ್-ಸಾಖೀಯಂಥ ಪ್ರಾರಂಭಕಾಲದ ಶ್ರೇಷ್ಠಕೃತಿಯನ್ನು ಯಾರೂ ಕಡೆಗಣಿಸುವಂತಿಲ್ಲ[೧]. ಇದು ಸಿಖ್ ಧರ್ಮಸ್ಥಾಪಕನಾದ ಗುರುನಾನಕ್ ದೇವನ ಜೀವನವನ್ನು ಕುರಿತ ಕೃತಿ. ಈ ಜೀವನಚರಿತ್ರೆಯನ್ನು ನಾನಕ್‍ನ ಶಿಷ್ಯರಲ್ಲಿ ಒಬ್ಬನಾದ ಬಾಲಾ ಎಂಬಾತ ರಚಿಸಿದ್ದಾನೆ. ಪ್ರಾಚೀನ ಪಂಜಾಬಿ ಸಾಹಿತ್ಯ ಚರಿತ್ರೆಯಲ್ಲಿ ಗ್ರಾಂಥಿಕ ಸಾಹಿತ್ಯವಿದ್ದುದಕ್ಕೆ ಇದೊಂದು ಪ್ರಮುಖ ನಿದರ್ಶನವಾಗಿದೆಯೆಂದು ಇಂದಿಗೂ ಪರಿಗಣಿತವಾಗುತ್ತಿದೆ.
ಆರಂಭಕಾಲ - ಕ್ರಿ.ಶ. 1600ರ ವರೆಗೆ
ಬದಲಾಯಿಸಿದೇಶಭಾಷೆಯಲ್ಲಿ ರಚಿತವಾದ ಅತ್ಯಂತ ಪ್ರಾಚೀನ ಕಾವ್ಯಬಂಧದ ಮಾದರಿಯೆಂದರೆ, ಮುಲ್ತಾನಿನ ಬಾಬಾ ಫರೀದುದ್ದೀನ್ ಗಂಜೆಶಕರ್ ಬಗ್ಗೆ (1173-1226) ಪಂಜಾಬಿ ಕವಿಯಿಂದ ರಚಿತವಾದ ಎರಡು ಭಕ್ತಿಗೀತೆಗಳು. ಆದರೆ ಅವುಗಳ ಭಾಷೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ಆ ಕಾಲದ ಪೂರ್ವ ಪಂಜಾಬ್ ಪ್ರದೇಶದಲ್ಲಿ ಆಡುತ್ತಿದ್ದ ಭಾಷೆಯಂತಾಗಲೀ ಪಂಜಾಬಿಯಂತಾಗಲೀ ಇಲ್ಲವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಪಂಜಾಬಿ ಸಾಹಿತ್ಯದಲ್ಲಿ ನಾಗರೀ ಅಥವಾ ಶೌರಸೇನೀ ಅಪಭ್ರಂಶದ ನಡುನಾಡಿನ ನುಡಿಯ ಪ್ರಾಧಾನ್ಯವನ್ನು ಕ್ರಿ.ಶ. 14ನೆಯ ಶತಮಾನದವರೆಗೂ ಅನಂತರ ವ್ರಜಭಾಷೆಯ ಕಡೆಕಡೆಗೆ ಹಿಂದುಸ್ತಾನೀ (ಖಡೀಬೋಲೀ ಅಥವಾ ಹಿಂದೀ-ಉರ್ದು) ಭಾಷೆಯ ಪ್ರಾಧಾನ್ಯವನ್ನು ಗುರುತಿಸಬಹುದು. ಪಂಜಾಬ್ ಮತ್ತು ಸಿಂಧ್ ಪ್ರದೇಶಗಳ ಭಾಷಾರೂಪಗಳನ್ನು ನಾಗರೀಭಾಷೆಯ ಸೋದರ ಭಾಷೆಯಾದ ಲಂಡ ಎಂಬುದರ ವರ್ಣಮಾಲೆಯ ಬೇರೆ ಬೇರೆ ರೂಪಗಳಲ್ಲಿ ಬರೆಯಲಾಗುತ್ತಿತ್ತು. ಇದನ್ನು ಈಗಲೂ ಪಶ್ಚಿಮ ಭಾರತದ ಕೆಲವು ವ್ಯಾಪಾರಿಗಳು ಬಳಸುತ್ತಾರೆ. ಹದಿನಾರನೆಯ ಶತಮಾನದಲ್ಲಿ ಸಿಖ್ ಗುರುಗಳು ಕಾಶ್ಮೀರದ ಶಾರದಾ ಲಿಪಿಗೆ ಅತಿ ಸಮೀಪವೂ ನಾಗರೀ ಬರವಣಿಗೆಯ ವಿಧಾನದಿಂದ ಪ್ರಭಾವಿತವೂ ಆದ ವರ್ಣಮಾಲೆಯನ್ನು ಆಧಾರವಾಗಿಟ್ಟುಕೊಂಡು ಗುರುಮುಖಿ ವರ್ಣಮಾಲೆಯನ್ನು ರೂಪಿಸಿದರು. ಇದರಲ್ಲಿಯೇ ಸಿಖ್ಖರು ತಮ್ಮ ಧಾರ್ಮಿಕ ಗ್ರಂಥಗಳನ್ನು ಬರೆದಿದ್ದಾರೆ. ಇದೇ ಈಗ ಪಂಜಾಬಿ ಭಾಷೆಯ ಅಧಿಕೃತ ಲಿಪಿಯಾಗಿ ಸ್ವೀಕೃತವಾಗಿದೆ.
ಹಿಂದೂ ಧರ್ಮಸುಧಾರಕನೂ ಕಬೀರನಂತೆ ಜ್ಞಾನ ಮತ್ತು ಭಕ್ತಿಗಳಿಗೆ ಪ್ರಾಧಾನ್ಯ ನೀಡಿದ ದೊಡ್ಡ ಸಂತನೂ ಭಕ್ತನೂ ರಚನಾತ್ಮಕ ಧಾರ್ಮಿಕ ನಾಯಕನೂ ಆಗಿದ್ದ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್‍ನಿಂದ (1469-1538) ಪಂಜಾಬಿ ಸಾಹಿತ್ಯಕ್ಕೆ ಹೊಸ ಚಾಲನೆ ದೊರೆಯಿತು. ಗುರುನಾನಕ್‍ನ ರಚನೆಗಳು ವ್ರಜಭಾಷೆಯೊಡನೆ ಸೇರಿದ ಒಂದು ತೆರನ ಹಳೆಯ ಹಿಂದೀ ಭಾಷೆಯಲ್ಲಿವೆಯೇ ವಿನಾ ಶುದ್ಧ ಪಂಜಾಬಿಯಲ್ಲಿಲ್ಲವೆಂದು ನಂಬಲಾಗಿದೆ. ನಾನಕ್‍ನ ಅನಂತರದ ಐದನೆಯ ಗುರುವಾದ ಅರ್ಜನದೇವ ಕ್ರಿ.ಶ. 1605 ರ ಸರಿಸುಮಾರಿನಲ್ಲಿ ಗುರುನಾನಕನ ನಂತರದ ನಾಲ್ವರ ಗುರುಗಳ ಗೀತೆಗಳನ್ನು ಮತ್ತು ಕಬೀರದಾಸ್, ರೈದಾಸ್ ಮೊದಲಾದ ಅನೇಕ ನಾನಕ ಪೂರ್ವ ನಿರ್ಗುಣೋಪಾಸಕರ ಹಿಂದಿ ಕೀರ್ತನೆಗಳನ್ನು ಬೃಹತ್ ಸಂಪುಟದಲ್ಲಿ ಸಂಗ್ರಹಿಸಿದ. 3,384 ಕೀರ್ತನೆಗಳು ಮತ್ತು 15,575 ವೃತ್ತಪದ್ಯಗಳಿರುವ ಈಕೃತಿ ಒಂದು ರೀತಿಯಲ್ಲಿ ಪಂಜಾಬಿನ ಮಧ್ಯಯುಗದ ಋಗ್ವೇದವಾಗಿದೆ. ಈ ಸಂಗ್ರಹ ಇನ್ನೂ ಕೆಲವು ಸೇರ್ಪಡೆಗಳಿಂದ ಕೂಡಿ ಸಿಖ್ಖರ ಧರ್ಮಗ್ರಂಥವೆನಿಸಿದ ಆದಿಗ್ರಂಥವಾಗಿದೆ. ಇನ್ನೂ ಸರಿಯಾಗಿ ಹೇಳುವುದಾದರೆ ಇಡೀ ಸಿಖ್ಖರ ಜನಪ್ರಿಯ ಕೃತಿ ಗುರುಗ್ರಂಥಸಾಹಬ್. ಇದು ಮಧ್ಯಯುಗದ ಉತ್ತರ ಭಾರತದ (ಹಳೆಯ ಹಿಂದೀ) ಭಕ್ತಿ ಕಾವ್ಯವನ್ನು ಒಳಗೊಂಡ ಶ್ರೇಷ್ಠ ಕೃತಿ. ಖಚಿತವಾಗಿ ಹೇಳುವುದಾದರೆ ಇದು ಪಂಜಾಬಿ ಭಾಷೆಯಲ್ಲಿಲ್ಲ. (ಚಟರ್ಜಿ - 1963) ಅರ್ಜನ್ ದೇವನ ಅನಂತರ ಸಿಖ್ಖರ ಹತ್ತನೆಯ ಹಾಗೂ ಕಡೆಯ ಗುರುವಾದ ಗೋವಿಂದಸಿಂಗ್‍ನವರೆಗೆ (1666-1708) ಯಾವ ಸಿಖ್ ಗುರುಗಳೂ ಉತ್ಕøಷ್ಟ ಕೃತಿರಚನೆ ಮಾಡಲಿಲ್ಲ. ಆತನ ಕೆಲವು ಸಮಕಾಲೀನ ಕವಿಗಳು ಅನೇಕ ಧಾರ್ಮಿಕ ಕೃತಿಗಳನ್ನು ಪದ್ಯರೂಪದಲ್ಲಿ ರಚಿಸಿದ್ದಾರೆ. ಅವೆಲ್ಲವೂ ಬಹುಪಾಲು ಹಿಂದೂ ಪೌರಾಣಿಕ ಸತ್ತ್ವದಿಂದ ಕೂಡಿ ಹಳೆಯ ಹಿಂದೀ ಭಾಷೆಯಲ್ಲಿವೆ. ಆದರೆ ಯುದ್ಧದೇವತೆಯಾದ ಚಂಡಿಯ ಸ್ತುತಿರೂಪದಲ್ಲಿರುವ ಚಂಡಿ ದೀವಾರ್ ಎಂಬ ಕಾವ್ಯ ಖಚಿತವಾಗಿ ಪಂಜಾಬಿಯಲ್ಲಿದೆ. ಇದೇ ಕಾಲದಲ್ಲಿ ಸಿವಸಿಂಗ್ ಎಂಬ ಕವಿ ಇನ್ನೊಂದು ಜನಮ್-ಸಾಖೀಯನ್ನು ಪೂರ್ವಪಂಜಾಬಿ ಭಾಷೆಯಲ್ಲಿ ರಚಿಸಿದ. ಮೂರನೆಯ ಜನಮ್-ಸಾಖೀ ಕೃತಿ ಇದೇ ಭಾಷಾರೂಪದಲ್ಲಿ ಮಣಿಸಿಂಗನಿಂದ ರಚಿತವಾಯಿತು. (1737)
ಮಧ್ಯಯುಗದ ಪಂಜಾಬಿ ಸಾಹಿತ್ಯ
ಬದಲಾಯಿಸಿಕ್ರಿ.ಶ. 1600-1850. 16ನೆಯ ಶತಮಾನದ ಕೊನೆಯವರೆಗೂ ಪಂಜಾಬಿ ಸಾಹಿತ್ಯದ ಬೆಳವಣಿಗೆ ನಿರ್ದಿಷ್ಟವಾದ ಗೊತ್ತು ಗುರಿಯಿಲ್ಲದೆ ಅಡ್ಡಾದಿಡ್ಡಿಯಾಗಿರುವುದಂತೂ ತಿಳಿದೇ ಇದೆ. ಆದರೆ 17ನೆಯ ಶತಮಾನದ ಉದಯದೊಡನೆ ಪಂಜಾಬಿ ಸಾಹಿತ್ಯದ ಭವಿಷ್ಯವೇ ಸಂಪೂರ್ಣವಾಗಿ ಬದಲಾಯಿತು. ಈ ಅವಧಿಯ ಪಂಜಾಬಿ ಸಾಹಿತ್ಯ ವಸ್ತು ಮತ್ತು ರೂಪಗಳೆರಡರಲ್ಲಿಯೂ ಎಷ್ಟು ಬೆಳೆಯಿತೆಂದರೆ, ಇದನ್ನು ಪಂಜಾಬಿ ಸಾಹಿತ್ಯದ ಸುವರ್ಣಯುಗವೆಂದು ಕರೆಯುವ ಆಸೆ ಯಾರಿಗಾದರೂ ಉಂಟಾಗದೆ ಇರದು. ಈ ಅವಧಿಯಲ್ಲಿ ಪ್ರತಿಭಾವಂತ ಸಾಹಿತಿಗಳು ಜನಾಂಗ, ಮತ ಮುಂತಾದ ಭೇದಗಳನ್ನು ಮರೆತು ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಈಕಾಲದಲ್ಲಿ ಗುರುಮುಖಿ, ಪಾರಸೀ-ಅರಬ್ಬೀ ಮತ್ತು ನಾಗರಿ ಬರವಣಿಗೆಯ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದು ಇನ್ನೊಂದು ಗಮನಾರ್ಹ ಲಕ್ಷಣವಾಗಿದೆ. ಅಕ್ಬರನ ಸಮಕಾಲೀನನಾದ ದಾಮೋಧರನ ಹೀರ್-ರಂಝಾ, ಮತ್ತು ಚಂದರ್‍ಭಾನನ ಕೃತಿಗಳನ್ನೂ ಪ್ರಸಿದ್ಧ ಮುಸ್ಲಿಮ್ ಕವಿ ಅಬ್ದುಲ್ಲಾನ (1617-1666) ಗಮನಾರ್ಹ ಕೃತಿಗಳನ್ನೂ ನೋಡಬಹುದು. 9,000 ದ್ವಿಪದಿಗಳಿಂದ ಕೂಡಿದ ಆತನ ಬಾರಾ ಅನ್ವಾ (ಹನ್ನೆರಡು ಆಶ್ವಾಸಗಳು) ಎಂಬ ಕೃತಿಯನ್ನು ಪಂಜಾಬಿ ಸಾಹಿತ್ಯ ಚರಿತ್ರೆಯಲ್ಲಿ ಒಂದು ಪ್ರಮುಖ ಮೈಲಿಕಲ್ಲೆಂದು ಪರಿಗಣಿಸಲಾಗಿದೆ. ಇದು ಇಸ್ಲಾಮ್ ಧರ್ಮದ ಪ್ರತಿಪಾದನೆಯನ್ನು ಒಳಗೊಂಡಿದ್ದರೂ ಸೊಗಸಾದ ಪಂಜಾಬಿ ಭಾಷೆಯಲ್ಲಿದೆ. ಇದೇ ರೀತಿ ಕರ್ಬಲಾ ಯುದ್ಧವನ್ನು ವರ್ಣಿಸುವ ಮಕ್‍ಬಿಲನ ಜಂಗ್‍ನಾಮಾ ಕೃತಿಯೂ ಈ ಕಾಲದ ಒಂದು ಉತ್ತಮ ಸತ್ತ್ವಪೂರ್ಣ ಸಾಹಿತ್ಯಕೃತಿಯಾಗಿದೆ. ಸಂಪೂರ್ಣವಾಗಿ ಭಾರತೀಯ ಮತ್ತು ಪಂಜಾಬಿ ಅಂತಃಸ್ತತ್ವದಿಂದಲೂ ನಿರ್ವಹಣೆಯಿಂದಲೂ ಕೂಡಿದ ಮುಸ್ಲಿಂ ಸೂಫೀ ಕವಿಗಳ ಕೃತಿಗಳು ಈ ಕಾಲದ ಸಾಹಿತ್ಯದ ಮುಖ್ಯಭಾಗವಾಗಿವೆ. ಈ ಕಾಲದ ಅತ್ಯಂತ ಪ್ರಸಿದ್ಧ ಸೂಫೀ ಕವಿ ಬುಲ್ಲೆಹೀಷಾಹನ (1680-1758) ಕಾಫೀಗಳು ಅಥವಾ ಚಿಕ್ಕ ಕವನಗಳು ಸುಮಾರು ಆರಾರು ವೃತ್ತಪದ್ಯಗಳಿಂದ ಕೂಡಿ ಮೆಚ್ಚುಗೆಗೆ ಪಾತ್ರವಾಗಿದೆ. ಬುಲ್ಲೆಹೀಷಾಹ್‍ನ ಸಮಕಾಲೀನನಾದ ಅಲೀ ಹೈದರ್ (1689-1776) 30 ವೃತ್ತಪದ್ಯಗಳಿಂದ ಕೂಡಿದ ಅನೇಕ ಸಿ-ಹಫೀಸ್‍ಗಳನ್ನು ರಚಿಸಿದ್ದಾನೆ. ಸೂಫೀ ದರ್ಶನದ ಜೊತೆಗೆ ವೈದಿಕ, ಪೌರಾಣಿಕ, ಆಲೋಚನಾಧಾರೆಯೂ ಈ ಕಾಲದ ಸಾಹಿತ್ಯದ ವಸ್ತುಗಳ ಮೇಲೆ ಬಹಳ ಪ್ರಭಾವವನ್ನು ಬೀರಿದೆ. 88 ವೃತ್ತಪದ್ಯಗಳಿಂದ ಕೂಡಿದ, ಜಸೋದನಂದನನ ಲವ-ಕುಶ-ದಿಯಾ-ಪೌಡಿಯಾ ಎಂಬ ಕವನ ರಾಮಾಯಣದ ಪದ್ಯಾತ್ಮಕ ಕಥನ, ಪಂಜಾಬಿ ಭಾಷೆಯಲ್ಲಿ ಪುನರ್ನಿರೂಪಿತವಾದ ಈ ಕಥನ ಆ ಪ್ರದೇಶದ ವಿಶಿಷ್ಟ ಗ್ರಾಮೀಣ ಪರಿಸರದ ಹಿನ್ನೆಲೆಯನ್ನು ಹೊಂದಿದೆ. ಗುರುನಾನಕ್ ಮತ್ತು ಆತನ ಉತ್ತರಾಧಿಕಾರಿಗಳಿಂದ ಪ್ರವರ್ತಿತವಾದ ಸಾಹಿತ್ಯ ಮಾರ್ಗವೂ ಈ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಉದಾಹರಣೆಗೆ ಗುರುದಾಸ ಗುರುಗ್ರಂಥಸಾಹಬ್‍ಗೆ ಅನುಬಂಧವೆನ್ನಬಹುದಾದ 40 ವಾರ್‍ಗಳನ್ನು ರಚಿಸಿದ. ಈ ವಾರ್‍ಗಳು ಸರಳ ಜನಪದ ಶೈಲಿಯಲ್ಲಿ ರಚಿತವಾದ ಕಥೆ ಮತ್ತು ನೀತಿಕಥೆಗಳ ಮೂಲಕ ನೀತಿಬೋಧೆ ಮಾಡುವ ಉಪದೇಶಾತ್ಮಕ ಕವನಗಳು.
ಪಂಜಾಬಿ ಸಾಹಿತ್ಯ ತೋಂಡೀ ಸಂಪ್ರದಾಯದ ರೊಮ್ಯಾಂಟಿಕ್ ಲಾವಣಿ ಕಾವ್ಯ ರೂಪದ ಆಸ್ತಿಯನ್ನು ಬಹಳ ಹಿಂದಿನಿಂದಲೂ ಪಡೆದುಕೊಂಡಿತ್ತು. ಪ್ರಾರಂಭ ಕಾಲದ ಪಂಜಾಬಿ ಸಾಹಿತ್ಯದ ಪ್ರಮುಖ ಒಲವು ಧಾರ್ಮಿಕ ಚಿಂತನದ ಪರವಾಗಿ ಇದ್ದದರಿಂದ ರೊಮ್ಯಾಂಟಿಕ್ ಲಾವಣಿ ಕಾವ್ಯ ವಿದ್ವಾಂಸರ ಗಮನವನ್ನು ಹೆಚ್ಚಾಗಿ ಸೆಳೆಯಲಿಲ್ಲ. 18ನೆಯ ಶತಮಾನದ ಮಧ್ಯಭಾಗದ ವೇಳೆಗೆ ಧಾರ್ಮಿಕ ಆವೇಶದ ಅಲೆಗಳ ಉಬ್ಬರ ನಿಧಾನವಾಗಿ ಇಳಿಯುತ್ತ ಬಂದಂತೆ ರೊಮ್ಯಾಂಟಿಕ್ ಕಾವ್ಯದ ಅರುಣೋದಯವಾಗತೊಡಗಿತು. ಅನಂತರ ಅದು ಬಹುತೇಕ ಶ್ರೇಷ್ಠ ಸಾಹಿತ್ಯ ಕೃತಿಗಳ ಪ್ರಧಾನವಸ್ತುವಾಗಿ ಪರಿಣಮಿಸಿತು. ಜಾನಪದ ಸಾಹಿತ್ಯ ಅಂಥ ಸಾಹಿತ್ಯ ಕೃತಿಗಳಿಗೆ ಮೂಲದ್ರವ್ಯವನ್ನು ಒದಗಿಸಿತು. ಉದಾಹರಣೆಗೆ ಕಾಳಿದಾಸ್ ಮತ್ತು ಖಾದಿರ್‍ಯಾರ್ ಎಂಬ ಕವಿಗಳು ಪ್ರಖ್ಯಾತ ಜಾನಪದ ನಾಯಕರುಗಳಾದ ರಾಜಾ ರಿಸಾಲೂ ಮತ್ತು ಆತನ ಸಹೋದರ ಪೂರಣ್ ಭಗತ್ ಎಂಬ ಇಬ್ಬರನ್ನು ಕುರಿತು ರಚಿಸಿರುವ ಸುಂದರವಾದ ಕಾವ್ಯಗಳನ್ನು ನೋಡಬಹುದು. ಲಾಹೋರಿನ ಸಿಖ್ ದೊರೆ ರಣಜಿತ್‍ಸಿಂಗನ ಆಸ್ಥಾನ ಕವಿಯಾಗಿದ್ದ ಖಾದಿರ್ ಯಾರ್ ಮಹಮ್ಮದನ ಸ್ವರ್ಗಾರೋಹಣದ ವಸ್ತುವನ್ನು ಕುರಿತ ಪೂರಾಜ್ ನಾಮ ಎಂಬ ಕೃತಿಯನ್ನು ರಚಿಸಿದ. ಅದೇ ರೀತಿ ಹೀರ್ ಮತ್ತು ರಾಂಜಾಗೆ ಸಂಬಂಧಿಸಿದ ಜನಪದ ಕಥೆಗಳು ಈ ಯುಗದ ಅನೇಕ ಶ್ರೇಷ್ಠ ಸಾಹಿತ್ಯ ಕೃತಿಗಳ ಪ್ರಧಾನವಸ್ತುಗಳಾದವು. 16ನೆಯ ಶತಮಾನದ ದಾಮೋಧರನ ಅನಂತರ ಕುರುಡನಾದ ಮಕ್‍ಬಿಲ್ ಕವಿ ಅದೇ ವಸ್ತುವಿನ ಮೇಲ 500 ದ್ವಿಪದಿಗಳಿಂದ ಕೂಡಿದ ಕಾವ್ಯವನ್ನು ರಚಿಸಿದ. ಆದರೆ ಹೀರ್ ರಾಂಜಾ ಕಥೆಯ ಬಗ್ಗೆ ವಾರಿಸ್ ಷಾಹನು ರಚಿಸಿದ ಕಾವ್ಯವು ಅತ್ಯಂತ ಪ್ರಸಿದ್ಧವೂ ಜನಪ್ರಿಯವೂ ವ್ಯಾಪಕವೂ ಆಗಿದೆ. ಇದನ್ನು ಪಂಜಾಬಿ ಸಾಹಿತ್ಯದ ಕ್ಲಾಸಿಕ್‍ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮಾನವನ ಸೂಕ್ಷ್ಮಸಂವೇದನಾಶೀಲತೆಯನ್ನು ಒಳಗೊಂಡ ಈ ಹೃದಯಸ್ಪರ್ಶಿ ಕಥೆಯ ಬಗ್ಗೆ ರಚಿತವಾದ ಪೂರ್ವಕೃತಿಗಳು ಯಾವುದೋ ಕೊರತೆಯಿಂದ ಕೂಡಿವೆಯೆಂದು ಚೆನ್ನಾಗಿ ತಿಳಿದ ವಾರಿಸ್ ಷಾಹ ಆ ಕೊರತೆಯನ್ನು ಹೋಗಲಾಡಿಸಲು ಇಚ್ಛಿಸಿದ. ಅದರ ಪರಿಣಾಮವೇ ಈ ಪ್ರಸಿದ್ಧ ಮಹಾಕಾವ್ಯ.
ಮೊದಲೇ ಹೇಳಿದಂತೆ ಈ ಕಾಲದ ಸಾಹಿತ್ಯಕ್ಷೇತ್ರವನ್ನು ಪ್ರೇಮ ಪ್ರಣಯಗಳಿಗೆ ಸಂಬಂಧಿಸಿದ ವಸ್ತುಗಳೇ ಆಕ್ರಮಿಸಿಕೊಂಡಿದ್ದರಿಂದ ಸಹಜವಾಗಿಯೇ ವಾರಿಸ್‍ಷಾಹ್ ಮಾತ್ರವಲ್ಲದೆ ಪಿಲೂ, ಹಾಪಿಜ್‍ಬರ್‍ಖುರ್‍ದಾರ್ ಮುಂತಾದ ಇತರ ಕವಿಗಳೂ ಅದೇ ರೀತಿಯ ಪ್ರೇಮ ಕಥೆಗಳನ್ನು ಆಧರಿಸಿದ ಕಾವ್ಯಗಳನ್ನು ರಚಿಸಿದರು. ಹೀರ್ ಮತ್ತು ರಾಂಜಾದಂತೆ ದುರಂತ ಪ್ರೇಮಕಥೆಯಾದ ಮಿರ್ಜಾ ಸಾಹಿಬಾ(ನ್)ಅನ್ನು ಕುರಿತು ಇಬ್ಬರೂ ಕಾವ್ಯಗಳನ್ನು ರಚಿಸಿದರು. ಈ ಕಾಲದಲ್ಲಿ ಇಂಥ ಕಾವ್ಯಗಳ ರಚನೆಗೆ ಕಾರಣವಾದ ಇತರ ಪ್ರೇಮ ಕಥೆಗಳೆಂದರೆ ಸೊಹ್ನಿ-ಮಹಿವಾಲ್, ಸಸ್ಸೀ ಪನ್‍ಹೂ(ನ್) ಮುಂತಾದವು. ಸಸ್ಸೀ ಪನ್‍ಹೂ(ನ್)ಅನ್ನು ಕುರಿತು 500 ಪದಗಳಿರುವ ಶ್ರೇಷ್ಠ ಕಾವ್ಯವನ್ನು ಫಜóಲ್ ಷಾಹ್ ಮತ್ತು ಸಯ್ಯದ್ ಹಾಷಿಮ್‍ಷಾಹ್ ಇಬ್ಬರೂ ಬರೆದಿದ್ದಾರೆ. ಭಾರತೀಯ ಪ್ರೇಮ ಕಥೆಗಳ ಜೊತೆಗೆ ಅನ್ಯ ಸಂಸ್ಕøತಿಗಳಿಗೆ ಸೇರಿದ ಇಂಥ ಕಥೆಗಳನ್ನೂ ಬಳಸಿಕೊಳ್ಳಲಾಯಿತು. ವಿಶೇಷವಾಗಿ ಇಸ್ಲಾಮಿನ ಪೌರಾಣಿಕ ವಿಚಾರಧಾರೆಯನ್ನು ಅವಲಂಬಿಸಿ, ಸೂಫೀ ಪಂಥದ ತಾತ್ತ್ವಿಕ ಸಂದೇಶವನ್ನು ಕೇಂದ್ರವಾಗಿರಿಸಿ ಕಾವ್ಯಗಳನ್ನು ರಚಿಸಲಾಯಿತು. ಭಾವಲ್‍ಪುರದ ಅಬ್ದುಲ್ ಹಕೀಂ ಕವಿ (1803) ನೂರುದ್ದೀನ್ ಜಾಮೀಯ ಕೃತಿಯನ್ನು ಆಧರಿಸಿ ಯೂಸುಫ್-ಜುಲೇಖಾ (ಹೆ) ಬಗ್ಗೆ ಪಂಜಾಬಿನಲ್ಲಿ ಕಾವ್ಯವನ್ನು ರಚಿಸಿದ. ಅನಂತರ ಅದೇ ವಸ್ತುವನ್ನು ಆಧರಿಸಿ 1873ರಲ್ಲಿ ಗುಲಾಮ್ ರಸೂಲನೂ 1907 ರಲ್ಲಿ ಹಬೀಬ್ ಆಲಿಯೂ ಅನುಕ್ರಮವಾಗಿ 6,666 ಮತ್ತು 18,000 ದ್ವಿಪದಿಗಳನ್ನು ರಚಿಸಿದರು. ಈ ಯುಗದಲ್ಲಿ ರೊಮ್ಯಾಂಟಿಕ್ ವಸ್ತುಗಳ ಮೇಲಿನ ಅತಿಮೋಹ ಇತರ ವಸ್ತುಗಳನ್ನು ಕುರಿತು ರಚಿಸಲು ಮಹಾಕವಿಗಳಿಗೆ ಆಸ್ಪದವೀಯಲಿಲ್ಲವೆನ್ನುವುದು ತಪ್ಪಾಗುತ್ತದೆ. ಉದಾಹರಣೆಗೆ ನಿಜಾಬತ್‍ನ ಸುದೀರ್ಘ ಕಥನಕವನ ವಾರ್‍ಗೆ ನಾದಿರ್‍ಷಾಹನ ಆಕ್ರಮಣ ವಸ್ತುವಾಯಿತು. ಅದೇ ರೀತಿ ಮತಾಂತರಕ್ಕೆ ಒಪ್ಪದೆ ಕೊಲೆಯಾದ ಹಿಂದೂ ಹುತಾತ್ಮ ಹಕೀಕತ್‍ರಾಯನ ಪಾಡನ್ನು ಅಗ್ರಸೇಥೀ ಮತ್ತು ಕಾಳಿದಾಸ್ ಕವಿಗಳು ಸೊಗಸಾದ ಕಾವ್ಯಶೈಲಿಯಲ್ಲಿ ವರ್ಣಿಸಿದ್ದಾರೆ. ಈ ಪ್ರಮುಖ ಕೃತಿಗಳ ಜೊತೆಗೆ ಅರೂರ್, ರಾಯ್, ಈಶ್ವರ್‍ದಾಸ್, ಕಿಸನ್‍ಸಿಂಗ್, ಅರಿಫ್, ಹಿದಾಯತ್ ಉಲ್ಲಾ ಮತ್ತು ಮೊಹಮ್ಮದ್ ಬೂಟ ಕವಿಗಳೂ ಲೌಕಿಕ ಉಪದೇಶಾತ್ಮಕ, ಸೂಫೀ ದಾರ್ಶನಿಕ ಮುಂತಾದ ವಸ್ತುಗಳನ್ನಾಧರಿಸಿ ಕಾವ್ಯಗಳನ್ನು ರಚಿಸಿದ್ದಾರೆ.
ಆಧುನಿಕ ಕಾಲ 1850 ರ ಅನಂತರ
ಬದಲಾಯಿಸಿ1848ರ ಹೊತ್ತಿಗಾಗಲೇ ಪಂಜಾಬ್ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಅದರ ಮಧ್ಯಯುಗದ ಸ್ವರೂಪ ಮುಂದಿನ ಕೆಲವು ದಶಕಗಳವರೆಗೆ ಹಾಗೆಯೇ ಉಳಿದಿತ್ತು. ಈ ಅವಧಿಯಲ್ಲಿ ಇಂಗ್ಲೀಷ್ ವಾಙ್ಮಯ ಕ್ರಮೇಣ ತನ್ನ ಪ್ರಭಾವವನ್ನು ಬೀರತೊಡಗಿತು. ಇಸ್ಲಾಂ ಪುನರುಜ್ಜೀವನದಿಂದ ಉರ್ದು, ಅರಬ್ಬಿ, ಪಾರಸಿ ಭಾಷೆಗಳಿಗೆ ಪ್ರೋತ್ಸಾಹ ದೊರೆಯಿತು. ಹಿಂದೂ ಪುನರುಜ್ಜೀವನಕ್ಕೆ ಸಂಬಂಧಿಸಿದ ಆರ್ಯಸಮಾಜ, ಸನಾತನ ಧರ್ಮ, ಬ್ರಹ್ಮಸಮಾಜ (ಪರಿಮಿತ ವಲಯದಲ್ಲಿ) ಮತ್ತು ವಿಜ್ಞಾನದ ತಳಹದಿಯ ಮೇಲೆ ನಿಂತ ವಿಚಾರ ಪ್ರಧಾನ ದೇವಸಮಾಜ (ಇನ್ನೂ ಪರಿಮಿತ ವಲಯದಲ್ಲಿ) ಮುಂತಾದ ಚಳವಳಿಗಳು ಹಿಂದಿಯನ್ನು ನಾಗರೀ ಲಿಪಿಯಲ್ಲಿ ಬರೆಯುವುದನ್ನು ದೃಢೀಕರಿಸಿದುದೇ ಅಲ್ಲದೆ, ಕಳೆದ ಶತಮಾನದ ಎಂಟನೆಯ ದಶಕದಿಂದೀಚೆಗೆ ಪಂಜಾಬಿನ ಹಿಂದೂ ಸಮಾಜದಲ್ಲಿ ಸಂಸ್ಕøತದ ಅಧ್ಯಯನವನ್ನು ಮತ್ತೆ ಸ್ಥಾಪಿಸಿದವು (ಚಟರ್ಜಿ : 1963) ಸಿಖ್ಖರು ಮಾತ್ರ ಪಂಜಾಬಿ ಭಾಷೆಯನ್ನು ಗುರುಮುಖೀ ಲಿಪಿಯ ಮೂಲಕವೇ ಓದಿ ಬರೆಯತೊಡಗಿದರು. ಸರ್ಕಾರ ಹಾಗೂ ಕಾಲೇಜುಗಳು ಉರ್ದುವಿಗೆ ಮಾತ್ರ ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟವು. ಕೋರ್ಟು ಕಛೇರಿಗಳಲ್ಲಿಯೂ ಇಂಗ್ಲಿಷನ್ನು ಬಿಟ್ಟರೆ ಉರ್ದುಭಾಷೆಯೇ ಬಳಕೆಯಲ್ಲಿದ್ದಿತು.
ಕ್ರಿ.ಶ. 1915 ರಷ್ಟು ತಡವಾಗಿ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಮತ್ತು ಕಾಲೇಜುಗಳಲ್ಲಿ ಪಂಜಾಬಿಯ ಅಧ್ಯಯನ ನೆಲೆಗೊಳ್ಳತೊಡಗಿತು. ಇದರಿಂದಾಗಿ ಪಂಜಾಬಿಯ ಪುನರುಜ್ಜೀವನಕ್ಕೆ ಬಲವಾದ ಪ್ರೇರಣೆ ದೊರೆತಂತಾಗಿ ಆಧುನಿಕ ಸಾಹಿತ್ಯ ನಿರ್ಮಾಣಕ್ಕೆ ಉತ್ತೇಜನ ದೊರೆಯಿತು. ಆದ್ದರಿಂದ ಆಧುನಿಕ ಪಂಜಾಬಿ ಸಾಹಿತ್ಯ ಭಾರತದಲ್ಲಿ ಈಚೀಚೆಗೆ ಬೆಳೆದುಬಂದ ಸಾಹಿತ್ಯಗಳಲ್ಲಿ ಒಂದೆನಿಸಿಕೊಂಡಿದೆ. ಅಷ್ಟೇ ಅಲ್ಲ ಇದು ಖಡೀ-ಬೋಲಿಗಿಂತಲೂ ಕಿರಿಯದು. ಭಾರತದ ವಿಭಜನೆಯಾಗಿ ಪಾಕಿಸ್ತಾನದ ಸ್ಥಾಪನೆಯಾದುದು ಪಂಜಾಬಿಯ ಬೆಳವಣಿಗೆಗೆ ದೊಡ್ಡ ಆಘಾತವನ್ನೆ ಉಂಟು ಮಾಡಿತು. ಪಶ್ಚಿಮ ಪಂಜಾಬಿನಲ್ಲಿ ಪಂಜಾಬಿ ಭಾಷೆ ಮತ್ತು ಸಾಹಿತ್ಯಗಳ ಅಭಿವೃದ್ಧಿಗೆ ಇದ್ದ ಮುಕ್ತದ್ವಾರ ಎಂದೆಂದಿಗೂ ಮುಚ್ಚಿಹೋಯಿತು. ಆದರೆ ಗಮನಾರ್ಹ ಸಂಖ್ಯೆಯಲ್ಲಿ ಸಿಖ್ಖರು ಇದ್ದ ಪೂರ್ವ ಪಂಜಾಬಿನಲ್ಲಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪಂಜಾಬಿ ಸಾಹಿತ್ಯದ ಅಭಿವೃದ್ಧಿ ತ್ವರಿತವಾಗಿ ನಡೆಯಿತು.
ಸಿಖ್ ಕವಿ ಭಾಯೀ ವೀರ್ ಸಿಂಗ್(1877-1957) ಅವರ ಕೃತಿಗಳೊಡನೆ ಆಧುನಿಕ ಪಂಜಾಬೀ ಸಾಹಿತ್ಯ ಪ್ರಾರಂಭವಾಯಿತು. ಅವರು ಶ್ರೀಖಂಡೀ ಛಂದ್ ಎಂಬ ಒಂದು ರೀತಿಯ ಸರಳ ರಗಳೆಯಲ್ಲಿ ರಚಿಸಿರುವ (1905) 13,000 ಸಾಲುಗಳ ರಾಣಾ ಸೂರತ್ ಸಿಂಗ್ ಎಂಬ ಸುದೀರ್ಘ ಕಥನ ಕವನ ಆಧುನಿಕ ಪಂಜಾಬಿ ಸಾಹಿತ್ಯದಲ್ಲಿಯೇ ಒಂದು ಪ್ರಮುಖ ಕೃತಿ. ಇದರ ಕಥೆ ರೊಮ್ಯಾಂಟಿಕ್ ಸ್ವರೂಪದ್ದಾಗಿ ಕಂಡರೂ ಸೂಫೀ ದರ್ಶನದ ಅತೀಂದ್ರಿಯ ರಹಸ್ಯಕ್ಕೆ ಒಡ್ಡಿದ ಪ್ರತಿಮಾ ರೂಪವಾಗಿದೆ. ಡಾಂಟೆಯ ಮಹಾಕೃತಿಯ ಮಾದರಿಯಲ್ಲಿ ಭವ್ಯತಾದರ್ಶನ ಮತ್ತು ಪರಿಶುದ್ಧತೆಗಳಿಗಾಗಿ ಹಂಬಲಿಸುವ ಆತ್ಮದ ಸಾಹಸಯಾತ್ರೆಯನ್ನು ಕುರಿತ ಮಹಾ ಕಾವ್ಯವಿದು. ಹೆಚ್ಚುಕಡಿಮೆ ಆದಿಗ್ರಂಥದ ಧಾರ್ಮಿಕ ಸೂತ್ರಗಳ ಆಧಾರದ ಮೇಲೆ ನಿಂತ ಧಾರ್ಮಿಕ ಅತೀಂದ್ರಿಯ ರಹಸ್ಯವನ್ನು ಒಳಗೊಂಡ ಕೃತಿ ಇದು. ವೀರಸಿಂಗ್ ಆಧುನಿಕ ಪಂಜಾಬಿ ಕಾದಂಬರಿ ರಚನಾ ಮಾರ್ಗ ನಿರ್ಮಾಪಕನೂ ಹೌದು. ಅವನ ಸುಂದರೀ ಕಾದಂಬರಿ ಪಂಜಾಬಿ ಭಾಷೆಯ ಪ್ರಥಮ ಕಾದಂಬರಿಗಳಲ್ಲಿ ಒಂದೆನಿಸಿಕೊಂಡಿದೆ. ಇದರಲ್ಲಿ ಸಿಖ್ ಸಾಹಸದ ದುರಂತ ಕಥೆ ಪದರ ಪದರಗಳಾಗಿ ತೆರೆಯುತ್ತ ಹೋಗುವುದನ್ನು ಕಾಣಬಹುದು. ವೀರಸಿಂಗ್ ರಚಿಸಿರುವ ಗುರುನಾನಕ್ ಮತ್ತು ಗುರುಗೋವಿಂದ ಸಿಂಗ್ ಅವರ ಜೀವನ ಚರಿತ್ರೆಗಳು ಆಧುನಿಕ ಪಂಜಾಬಿ ಸಾಹಿತ್ಯದಲ್ಲಿಯೇ ಅತ್ಯಂತ ಜನಪ್ರಿಯ ಕೃತಿಗಳಾಗಿವೆ. ಆತ ಚಿಕ್ಕ ಕವನಗಳನ್ನೂ ಧಾರ್ಮಿಕ ಐತಿಹಾಸಿಕ ವಿಷಯಗಳನ್ನೊಳಗೊಂಡ ಕೃತಿಗಳನ್ನೂ ರಚಿಸಿ ಬಹುಶಃ ಒಂದು ಸಂಸ್ಥೆಯೆಂದೇ ಪರಿಗಣಿತನಾಗಿದ್ದಾನೆ. ವಸ್ತುವಿಗೆ ಸಂಬಂಧಿಸಿದಂತೆ ಆತ ಹೊಸ ಸಾಹಿತ್ಯ ಮಾರ್ಗಗಳನ್ನು ಸ್ಥಾಪಿಸಿದುದೇ ಅಲ್ಲದೆ, ಹೊಸ ಕಾವ್ಯಭಾಷೆ ಮತ್ತು ಶೈಲಿಗಳನ್ನು ನಿರ್ಮಿಸಿ ಆಧುನಿಕ ಪಂಜಾಬಿ ಸಾಹಿತ್ಯಕ್ಕೆ ನವಚೇತನವನ್ನು ತಂದು ಕೊಟ್ಟಿದ್ದಾನೆಬುದನ್ನು ಮರೆಯುವಂತಿಲ್ಲ. ಪಂಜಾಬಿನ ದೇಶಿ ಸಂಪ್ರದಾಯಗಳ ಮೂಲಗಳಿಂದ ಸತ್ತ್ವವನ್ನು ಹೀರಿಕೊಂಡು ಛಂದಸ್ಸಿನ ಕ್ಷೇತ್ರದಲ್ಲಿ ಆತ ನಡೆಸಿದ ಪ್ರಯೋಗಗಳ ಫಲವಾಗಿ ಹೊಸರೀತಿಯ ಕಾವ್ಯ ಭಾಷೆ ಸಂಸ್ಕಾರಗೊಂಡು ವಿಕಾಸವಾಗಿ ಒಟ್ಟಾರೆ ಶುದ್ಧವೂ ಭಾವೊದ್ದೀಪ್ತವೂ ಆಗಲು ಸಾಧ್ಯವಾಯಿತು. ಪ್ರರಣ್‍ಸಿಂಗ್ ಮತ್ತೊಬ್ಬ ಪ್ರತಿಭಾವಂತ ದಾರ್ಶನಿಕ ಭಾವಗೀತ ಕವಿ. ಈತ ಷೆಲ್ಲಿಯ ಕಲ್ಪನಾಶಕ್ತಿ ಮತ್ತು ಭಾವತೀವ್ರತೆಯನ್ನೂ ವಾಲ್ಟ್‍ವಿಟ್ಮನ್ನ್‍ನ ಶಕ್ತಿ ಮತ್ತು ನಿರರ್ಗಳ ಓಟವನ್ನೂ ಮೈಗೂಡಿಸಿಕೊಂಡುದರ ಜೊತೆಗೆ ವಿಟ್ಮನ್ನನ ಲಯಸಮನ್ವಿತ ಗದ್ಯಾತ್ಮಕ ಕಾವ್ಯರಚನಾ ತಂತ್ರವನ್ನು ತನ್ನ ಕೃತಿಗಳಿಗೆ ಅಳವಡಿಸಿಕೊಂಡ. ಭಾವತೀವ್ರತೆಯಿಂದ ಸ್ಪಂದಿಸುವ ಚೈತನ್ಯಪೂರ್ಣ ದಾರ್ಶನಿಕ ಪದ್ಯಾತ್ಮಕ ಗದ್ಯವನ್ನೂ ಸಾಕಷ್ಟು ಪ್ರಮಾಣದಲ್ಲಿ ಈತ ರಚಿಸಿದ್ದಾನೆ. ಈತನಲ್ಲಿ ಕಂಡುಬರುವ ಸಹಾನುಭೂತಿ, ಮಾನವ ಪ್ರೇಮ ತುಂಬುಹೃದಯದ ಭಾವಪ್ರಕಟಣೆ, ಸೂಕ್ಷ್ಮಸಂವೇದನಾಕ್ಷಮತ್ವ ಮತ್ತು ಭಾರತೀಯ ಗ್ರಾಮಜೀವನದ ಶಿವ ಹಾಗೂ ಸುಂದರ ಮುಖಗಳ ಬಗ್ಗೆ ತೀವ್ರತಮ ಒಲವು ಮುಂತಾದ ಲಕ್ಷಣಗಳನ್ನು ಇತರ ಪಂಜಾಬಿ ಸಾಹಿತ್ಯಗಳಲ್ಲಿ ಕಾಣುವುದು ಅತ್ಯಂತ ಅಪರೂಪವೇ ಸರಿ. ಪ್ರಬಂಧಕಾರನೂ ಆದ ಈತ ತನ್ನ ಖುಲೇ ಲೇಖ್ (1929) ಎಂಬ ಕೃತಿಯಲ್ಲಿ ಪಂಜಾಬೀ ಭಾಷೆಯ ಅಂತಃಸತ್ತ್ವವನ್ನು ತಾತ್ತ್ವಿಕ ಬರವಣಿಗೆಗಳಿಗೂ ಹೇಗೆ ದುಡಿಸಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟಿದ್ದಾನೆ.
ಧನೀರಾಮ್ ಛಾತ್ರಿಕ್ ಪಂಜಾಬಿ ಕಾವ್ಯ ಕ್ಷೇತ್ರದಲ್ಲಿ ಕೇಳಿಬರುವ ಮತ್ತೊಂದು ದೊಡ್ಡ ಹೆಸರು. ಇವನ ಕಾವ್ಯದ ಒಂದೊಂದು ಸಾಲೂ ಸುಸಂಸ್ಕøತ ಅಭಿರುಚಿಯನ್ನು ಪ್ರಕಟಿಸುತ್ತವೆ. ತನ್ನ ಗೇಯಾತ್ಮಕ ಕಾವ್ಯರಚನೆಗೆ ಬೇಕಾದ ಸ್ಫೂರ್ತಿಯನ್ನು ಈಗ ಪಂಜಾಬಿನ ಸಮೃದ್ಧ ಜನಪದ ಸಂಗೀತದಿಂದ ಪಡೆದುಕೊಂಡಿದ್ದಾನೆ. ಇವನ ಕಾವ್ಯಾತ್ಮಕ ಅಭಿವ್ಯಕ್ತಿ ಹಿಂದಿ-ಪಾರಸೀ ಸಂಪ್ರದಾಯಗಳ ಹಾಗೂ ವಿಭಿನ್ನ ಸಾಂಸ್ಕøತಿಕ ಹಿನ್ನೆಲೆಗಳ ಬೆಸುಗೆಯನ್ನು ಆಧರಿಸಿ ರೂಪಗೊಂಡಿದೆ. ಅದನ್ನು ಈತ ದುಡಿಸಿಕೊಳ್ಳುವ ರೀತಿಯೂ ಕಾವ್ಯಾತ್ಮಕ ಉಕ್ತಿಗೆ ಹೆಚ್ಚು ಶಕ್ತಿಯನ್ನು ತಂದು ಕೊಟ್ಟಿದೆ. ಹಿಮಾಲ, ಗಂಗಾ ಮತ್ತು ರಾತ್ ಎಂಬುವು ಇವನ ಗಮನಾರ್ಹ ಕೃತಿಗಳು. ಮತಾಚಾರಗಳ ವೈವಿಧ್ಯದಿಂದಾಗಿಯೇ ಮಾನವತ್ವವನ್ನು ಒಡೆಯುವುದರ ವಿರುದ್ಧ ಹೊಮ್ಮಿದ ತೀವ್ರವೇದನಾಪೂರ್ಣ ಕೂಗೇ ವಾಸ್ತವವಾಗಿ ಇವನ ಕೈಲಿ ಕೋರಾ ಕಾದಿರ್ ಎಂಬ ಸೊಗಸಾದ ಕಾವ್ಯರೂಪವನ್ನು ತಾಳಿದೆ.
ಕಿರ್ಪಾಲ್‍ಸಿಂಗ್ (1879-1939) ಚಾರಿತ್ರಿಕ ಮತ್ತು ಸಾಹಸಾತ್ಮಕ ವಸ್ತುವಿನ ಹಿನ್ನೆಲೆಯಿಂದ ಕೂಡಿದ ಲಕ್ಷ್ಮೀದೇವಿ (1920-21) ಎಂಬ ಸುದೀರ್ಘ ರೋಮ್ಯಾಂಟಿಕ್ ಕವನದಿಂದ ಪ್ರಸಿದ್ಧನಾಗಿದ್ದಾನೆ. ಇವನ ಭಾಷೆ ಜನರ ಆಡುಮಾತಿಗೆ ಸಮೀಪವಾಗಿ ಸರಳತೆಯಿಂದ ಕೂಡಿದೆಯೆಂಬ ಕೀರ್ತಿಯನ್ನು ಗಳಿಸಿಕೊಂಡಿದೆ. ಪಂಜಾಬೀ ಸಾಹಿತ್ಯದ ಒಂದು ವಿಶಿಷ್ಟ ಲಕ್ಷಣವೇ ಆಗಿರುವ ಪ್ರಕೃತಿಯ ಸೂಕ್ಷ್ಮವ್ಯಾಪಾರ ವರ್ಣನಾಕೌಶಲ ಮತ್ತು ಕಲ್ಪನಾ ಶಕ್ತಿಗಳಿಂದಾಗಿ ಇವನ ಕಾವ್ಯಗಳು ಮೆಚ್ಚಗೆಯನ್ನು ಪಡೆದಿವೆ.
ಮೋಹನ್‍ಸಿಂಗ್ ಮಾಹಿರ್ ಇಂದಿನ ಅತ್ಯಂತ ಜನಪ್ರಿಯ ಪಂಜಾಬಿ ಕವಿಗಳಲ್ಲಿ ಒಬ್ಬ. ಈತ ಸಮಕಾಲೀನ ಪಂಜಾಬಿ ಸಾಹಿತ್ಯದ ಕೇಂದ್ರಬಿಂದುವೆನಿಸಿಕೊಂಡಿದ್ದಾನೆ. ಆಧುನಿಕ ಕಾಲದ ಪಂಜಾಬಿ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುತ್ತಿರುವ ಆಧುನಿಕ ದೃಷ್ಟಿಯ ಮಾರ್ಗಪ್ರವರ್ತಕರಲ್ಲಿ ಈತ ಒಬ್ಬನಾಗಿದ್ದಾನೆ. ಅಮೃತಾ ಪ್ರೀತಮ್ ಮತ್ತು ಪ್ರೀತಮ್‍ಸಿಂಗ್ ಸಫೀರ್ ಇವರು ಇನ್ನಿಬ್ಬರು ಗಮನಾರ್ಹ ಕವಿಗಳು. ಅಮೃತಾ ಪ್ರೀತಮ್ ನಾಡಿ ನಾಡಿಯಲ್ಲೂ ಉಜ್ಜ್ವಲ ಹಂಬಲದಿಂದ ಕಿಡಿಕಾರುವ, ಭಗ್ನಪ್ರೇಮದ ಭಾವೋದ್ದೀಪ್ತ ನಿರೂಪಣೆಯ ಕವಿಯಿತ್ರಿ. ಈಕೆ ತನ್ನ ಕನಸುಗಳನ್ನು ಗುರಿತಪ್ಪದ ಸಹಜ ಕೌಶಲದಿಂದ ಸೂಕ್ಷ್ಮ ಸಂವೇದನೆಯ ಕಾವ್ಯವನ್ನಾಗಿಸುತ್ತಾಳೆ. ಈಕೆಯ ಕಲೆ ಕ್ರಮೇಣ ದಾರ್ಶನಿಕ ದೃಷ್ಟಿಯನ್ನು ಪಡೆಯುತ್ತಿರುವಂತೆ ತೋರುತ್ತದೆ. ಈಕೆಯ ಕವನಗಳು ಪಂಜಾಬಿನ ಅದರಲ್ಲೂ 1947 ರಲ್ಲಾದ ದೇಶವಿಭಜನೆ ಅನಂತರದ, ಪಂಜಾಬಿನ ನೋವು ಸಂಕಟಗಳನ್ನು ಕರೆ ಮೊರೆಗಳನ್ನು ಪ್ರತಿಬಿಂಬಿಸುತ್ತವೆ. ಆಖಾನ್ ವಾರಿಸ್ ಷಾಹ್ (ವಾರಿಸ್‍ಷಾಹನಿಗೆ ಪ್ರಾರ್ಥನೆ) ಎಂಬ ಕವನ ದೇಶ ವಿಭಜನೆಯಾದಾಗ ನೊಂದು ಬೆಂದ ಪಂಜಾಬಿನ ಮಹಿಳೆಯರ ಅನುಭವಗಳನ್ನೂ ಹೃದಯದ ಭಾವನೆಗಳನ್ನೂ ಸುಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಜೀವನದಿಂದಲೇ ಹೊಮ್ಮಿದ ಭಾವಾವೇಶ ಅಮೃತಾ ಪ್ರೀತಮಳ ಕಾವ್ಯದಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದೆ. ಈಕೆ ಆತಿಶಯ ಪ್ರಮಾಣದಲ್ಲಿ ಗದ್ಯರಚನೆಯನ್ನೂ ಮಾಡಿದ್ದಾಳೆ. ಇವಳ ಕೃತಿರಾಶಿಯಲ್ಲಿ ಅನೇಕ ಕಾದಂಬರಿಗಳು, ಸಣ್ಣ ಕತೆಗಳು, ಶಿಶುಸಾಹಿತ್ಯ ಮತ್ತು ಜನಪದ ಗೀತ ಸಂಗ್ರಹಗಳು ಸೇರಿವೆ. ಪಂಜಾಬಿ ಸಾಹಿತ್ಯದ ನವ ಚೈತನ್ಯ ಸಂತ್‍ಸಿಂಗಾ ಸೆಖೋನ್, ಗೋಪಾಲ್‍ಸಿಂಗ್ ದರ್ದೀ, ಕರ್ತಾರ್ ಸಿಂಗ್ ದುದ್ದಲ್, ಕುಲವಂತ್‍ಸಿಂಗ್ ವಿರ್ಕ್, ದೇವೇಂದ್ರ ಸತ್ಯಾರ್ಥೀ ಮತ್ತು ಸ್ಮರಿಂದರ್‍ಸಿಂಗ್ ನರೂಲಾ ಇವರಲ್ಲಿ ಪ್ರಾತಿನಿಧಿಕವಾಗಿ ಕಾಣಿಸಿಕೊಂಡಿದೆ. ನರೂಲಾ ಪಂಜಾಬಿನ ಕೌಟುಂಬಿಕ ಜೀವನ ಮತ್ತು ಬಾಂಧವ್ಯದ ಚಿತ್ರವನ್ನು ಪ್ಯೋ ಪುತ್ತರ (ತಂದೆ ಮತ್ತು ಮಗ) ಎಂಬ ಕಾದಂಬರಿಯಲ್ಲಿಯೂ ಮಧ್ಯಮ ಮರ್ಗದ ಸಮಾಜದ ಚಿತ್ರವನ್ನು ರಂಗ್‍ಮಹಲ್ ಎಂಬ ಕಾದಂಬರಿಯಲ್ಲಿಯೂ ಕುಸಿದು ಬೀಳುತ್ತಿರುವ ಊಳಿಗಮಾನ್ಯ ಪದ್ಧತಿಯ ಚಿತ್ರವನ್ನು ಲೋಕದರ್ಶನ್ ಎಂಬ ಕೃತಿಯಲ್ಲಿಯೂ ಕೊಡುವುದರ ಮೂಲಕ ಹೊಸ ಅಲೆಯ ಸ್ಪಷ್ಟ ಪ್ರತಿನಿಧಿಯಾಗಿದ್ದಾರೆ.
ಪಂಜಾಬಿ ಸಾಹಿತ್ಯದ ಆಧುನಿಕ ಯುಗದಲ್ಲಿ, ರಾಷ್ಟ್ರದ ಇತರ ದೇಶೀ ಭಾಷೆಗಳಲ್ಲಿ ಹೇಗೊ ಹಾಗೆಯೆ ಗದ್ಯರಚನೆ ಅದ್ಭುತ ಪ್ರಗತಿಯನ್ನು ಸಾಧಿಸಿದೆ. ಈ ಕಾಲದಲ್ಲಿ ಕಾದಂಬರಿ, ಸಣ್ಣಕತೆ, ನಾಟಕ, ಪತ್ರಿಕೋದ್ಯಮ ಮತ್ತಿತರ ಗದ್ಯ ಮಾಧ್ಯಮಗಳು ತೀವ್ರಗತಿಯಲ್ಲಿ ಅಭ್ಯುದಯ ಸಾಧಿಸಿವೆ. ಈ ಶತಮಾನದ ಆದಿಯಲ್ಲಿ ಐ.ಸಿ. ನಂದಾ ಮತ್ತು ಗುರಭಕ್ಷಸಿಂಗ್ ಅವರ ಸುಭದ್ರಾ, ಪೂರಬ್ ತೇ ಪಚಮ್ (ಪೂರ್ವ ಮತ್ತು ಪಶ್ಚಿಮ) ಮತ್ತು ನವಾ ಜನಮ್ (ಹೊಸಜನ್ಮ) ಮುಂತಾದ ಸೃಷ್ಟ್ಯಾತ್ಮಕ ಕೃತಿಗಳೊಡನೆ ನಾಟಕ ಪ್ರಕಾರ ಅಗ್ರಸ್ಥಾನ ಪಡೆದುಕೊಂಡಿತು. ಕಿರ್ಪಾಸಿಂಗ್ ರಣಜಿತ್‍ಸಿಂಗ್ ಎಂಬ ಐತಿಹಾಸಿಕ ನಾಟಕವನ್ನು ರಚಿಸಿದ ನಾನಕ್‍ಸಿಂಗ್‍ನ ಹಿಂದೀ ಮತ್ತು ಪಂಜಾಬಿ ಕೃತಿಗಳು ತುಂಬಾ ಜನಪ್ರಿಯವಾಗಿವೆ. ಅದೇ ರೀತಿ ಅಮ್ರೀಕ್‍ಸಿಂಗ್ ಮತ್ತು ಬಲವಂತ್ ಗಾರ್ಗೀ ಇಬ್ಬರೂ ಪಂಜಾಬಿ ಕಥಾಸಾಹಿತ್ಯವನ್ನು, ಅದರಲ್ಲಿಯೂ ವಿಶೇಷವಾಗಿ ನಾಟಕ ಮತ್ತಿತರ ಅಭಿನಯಾತ್ಮಕ ಕಲೆಗಳನ್ನು ಶ್ರೀಮಂತಗೊಳಿಸುತ್ತಿದ್ದಾರೆ.
ಇಂದಿನ ಪಂಜಾಬಿ ಭಾಷೆ ಮತ್ತು ಸಾಹಿತ್ಯಗಳನ್ನು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸಲಾಗುತ್ತಿದೆ. ಹಿಂದಿಯ ಜೊತೆಗೆ ಪಂಜಾಬಿ ಭಾಷೆಯೂ ರಾಜ್ಯದ ಅಧಿಕೃತ ಭಾಷೆಯೆಂದು ಮನ್ನಣೆ ಪಡೆದಿದೆ. ಗುರುಮುಖಿ ಲಿಪಿಗೆ ಸರ್ಕಾರದಿಂದ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಮನ್ನಣೆ ದೊರೆತಿದೆ. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಆಶ್ರಯದಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲೂ ಪಂಜಾಬಿ ಭಾಷೆ ಮತ್ತು ಸಾಹಿತ್ಯದ ಬಗೆಗ ಸಂಶೋಧನೆ ನಡೆಸಲಾಗುತ್ತಿದೆ. ಈ ಪ್ರೋತ್ಸಾಹದ ಪರಿಣಾಮವಾಗಿ ಪಂಜಾಬಿ ಸಾಹಿತ್ಯ ಸರ್ವತೋಮುಖವಾಗಿ ಆಭಿವೃದ್ದಿ ಹೊಂದುತ್ತಿದೆ. ಇಂದು ಮಾನವನ ಯಾವುದೇ ಅನ್ವೇಷಣಾಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಪಂಜಾಬಿ ಭಾಷೆಯಲ್ಲಿ ಪುಸ್ತಕಗಳಿಲ್ಲವೆಂದು ಹೇಳುವಂತಿಲ್ಲ. ಶಬ್ದಕೋಶಗಳು, ವಿಶ್ವಕೋಶಗಳು, ಶಿಶುಸಾಹಿತ್ಯ, ತತ್ತ್ವಶಾಸ್ತ್ರ ಗ್ರಂಥಗಳು, ಕಲೆ, ವಿಜ್ಞಾನ, ಜನಪದ, ಕಲೆ, ನಾಟಕ, ಸೃಷ್ಟ್ಯಾತ್ಮಕ ಕಾವ್ಯ, ಕಲ್ಪನಾತ್ಮಕ ಸಾಹಿತ್ಯ, ಸಣ್ಣ ಕತೆಗಳು ಮುಂತಾದವು ಪ್ರಚಂಡವೇಗದಲ್ಲಿ ಪ್ರಕಟವಾಗುತ್ತಿವೆ. ಐತಿಹಾಸಿಕವಾಗಿ ಅಸ್ಥಿರವೂ, ರಾಜಕೀಯವಾಗಿ ಹರಿಹಂಚಾದ ಸಂಪ್ರದಾಯಗಳೇ ಅಳಿದುಳಿದ ಆಸ್ತಿಯಾದರೂ ಪಂಜಾಬಿಗಳು ತಾವು ಹೊಟ್ಟೆಪಾಡಿಗಾಗಿ ಮಾತ್ರ ಬದುಕುತ್ತಿಲ್ಲವೆಂಬುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ. ಆಹಾರ ಸಾಮಗ್ರಿಗಳ ಕ್ಷೇತ್ರದಲ್ಲಿ ಹೇಗೊ ಹಾಗೆಯೆ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲೂ ಪಂಜಾಬ್ ಸರಿಸಮನಾಗಿಯೇ ಕೃತಕೃತ್ಯತೆಯನ್ನು ಪಡೆದಿದೆ. ಈ ಆಶಾದಾಯಕ ಪರಿಸ್ಥಿತಿಯಿಂದಾಗಿ ಪಂಜಾಬಿ ಸಾಹಿತ್ಯಕ್ಕೆ ಉಜ್ಜ್ವಲ ಭವಿಷ್ಯವಿದೆ.
ಆಧುನಿಕ ಪಂಜಾಬಿ ಸಾಹಿತ್ಯವನ್ನು ಓದುವಾಗ ಗಮನಿಸಬೇಕಾದ ಒಂದು ಬಹು ಮುಖ್ಯ ಅಂಶವಿದೆ. ದೇಶದ ವಿಭಜನೆ, ಭಾರತ ಸ್ವತಂತ್ರವಾದ ನಂತರ ನಡೆದ ಯುದ್ಧಗಳು-ಎರಡೂ ಈ ಜನರ ಮೇಲೆ ಅಗಾಧ ಪರಿಣಾಮವನ್ನು ಮಾಡಿವೆ. ವಿಭಜನೆಯಾದಾಗ ಹಲವು ಪಂಜಾಬಿ ಕುಟುಂಬಗಳ ನಂಟರು ಗಡಿಯ ಬೇರೆ ಬೇರೆ ಪಕ್ಕಗಳಲ್ಲಿ ಸಿಕ್ಕಿಕೊಂಡರು. ಆಗ ನಡೆದ ಮಾರಣ ಹೋಮದ ಬೇಗೆ ಇನ್ನೂ ಆದಿಲ್ಲ. ಪಂಜಾಬಿನವರು ಬಹು ಸಂಖ್ಯೆಯಲ್ಲಿ ಸೈನ್ಯದಲ್ಲಿದ್ದಾರೆ. ನಾಡಿನ ರಕ್ಷಣೆಗಾಗಿ ಪಂಜಾಬ್ ಬಹು ದೊಡ್ಡ ಸಂಖ್ಯೆಯಲ್ಲಿ ತರುಣರನ್ನು ಅರ್ಪಿಸಿದೆ. ದೇಶದ ವಿಭಜನೆಯ ಯಾತನೆಯಲ್ಲಿ ಅಮೃತಾ ಪ್ರೀತಮರು ಬರೆದ “ಆಚ್ ಆಖಾನ್ ವಾಂಸ್ ಷಾ ನುಹ್ ಮತ್ತು ಮೋಹನ ಸಿಂಗರ ಪಂಜಾಬ್ ದಿ ವಾರ್ ಸ್ವಾತಂತ್ಸ್ಯೋತ್ತರ ಕಾಲದ ಶ್ರೇಷ್ಠ ಮತ್ತು ಅತ್ಯಂತ ಜನಪ್ರಿಯ ಕವನಗಳಲ್ಲಿ ಸೇವಿಸಿ. ವಿಭಜನೆಯನ್ನು ಕುರಿತು ಡಾ. ಹರಜರಣ ಸಿಂಗ್ ಬರೆದ ತೋಬಾ ತೇಕ್ ಸಿಂಗ್ ಎನ್ನುವ ಸಣ್ಣ ಕಥೆಯನ್ನು 1980ರ ದಶಕದಲ್ಲಿ ನಾಟಕವಾಗಿ ರೂಪಾಂತರಿಸಲಾಯಿತು. 1948ರಲ್ಲಿಯೇ ದೇಶ ವಿಭಜನೆಯನ್ನು ಕುರಿತು ನಾನಕ್ ಸಿಂಗ್‍ರ “ಬೂನ್ ಡೆ ಸೊ ಹ್ಲೆ” (ರಕ್ತದ ಮಹಾಕಾವ್ಯ) ಪ್ರಕಟವಾಯಿತು. ಇಂದೂ ಇದೇ ವಸ್ತುವನ್ನು ಕುರಿತು ಹೊಸ ಹೊಸ ನಿರೂಪಣೆಗಳು ಬರುತ್ತಿಲೇ ಇವೆ. ಅಮೃತ ಪ್ರೀತಮರ ಸಿಂಜಾರ್ (ಆಸ್ತಿ ಪಂಜರ) ಪಂಜಾಬಿ ಸ್ತ್ರೀಯರ ಯಾತನೆಯನ್ನು ನಿರೂಪಿಸುತ್ತದೆ.
ಪ್ರಗತಿಶೀಲ ಮನೋಧರ್ಮ ಪಂಜಾಬಿ ಸಾಹಿತ್ಯದಲ್ಲಿ ಪ್ರಕಟವಾದದ್ದು 19ನೆಯ ದಶಕದಲ್ಲಿ. ಮೋಹನ್‍ಸಿಂಗ್ ಮತ್ತು ಅಮೃತಾ ಪ್ರಿತಮ್ ಪ್ರಗತಿಶೀಲ ಕವಿಗಳೆನ್ನಿಸಿಕೊಂಡರು. ಬಹು ಶಕ್ತಿಯುತವಾಗಿ ಕಾವ್ಯರಚನೆ ಮಾಡಿದ ಪ್ರಗತಿಶೀಲ ಕವಿ ಬಾವಾ ಬಲವಂತ್. ಸಾಮಾಜಿಕ ಸಮಸ್ಯೆಗಳನ್ನು ಆರಿಸಿಕೊಂಡು ಸುರೀಂದರ ಸಿಂಗ್ ನರುಲ, ಸಂತ್ ಸಿಂಗ್ ಸಖಾನ್, ಜಸ್ವಂತ್ ಸಿಂಗ್ ಕನ್ವಾಲ್, ಸೋಹನ ಸಿಂಗ್ ಸಿತಾಳ್ ಮತ್ತು ಕೇಸರ ಸಿಂಗ್ ಕಾದಂಬರಿಗಳನ್ನು ಬರೆದರು. ಇವರಲ್ಲಿ ಹಲವರು ಶ್ರೇಷ್ಠ ಸಣ್ಣ ಕಥೆಗಳನ್ನು ಬರೆದರು. ಬಲವಂತ ಗಾರ್ಗಿ ಬಹು ಶ್ರೇಷ್ಠ ನಾಟಕಕಾರ. ಅರುಬಕ್ಷ್ ಸಿಂಗ್ ಪ್ರಸಿದ್ಧ ಪ್ರಬಂಧಕಾರರು.
1960ರ ದಶಕದ ಹೊತ್ತಿಗೆ ಪ್ರಗತಿಶೀಲ ಕಾವು ಕಡಮೆಯಾಗಿ ಪ್ರಯೋಗಾತ್ಮಕ ಚಳವಳಿ ಪ್ರಾರಂಭವಾಯಿತು. ಇದರ ಅಧ್ಯಯನ, ಕವಿ-ವಿಮರ್ಶಕ ಡಾ. ಜಸಬೀರ್ ಸಿಂಗ್ ಅಹ್ಲುವಾಲಿಯ. ಈ ಪಂಥವು ಸಾಮಾಜಿಕ ಸಮಸ್ಯೆಗಳನ್ನು ಬದಿಗಿರಿಸಿ ವ್ಯಕ್ತಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿತು. ಸಾಹಿತ್ಯ ಕೃತಿಯ ತಿರುಳು, ರೂಪ ಎರಡರಲ್ಲಿಯೂ ಈ ಪಂಥವು ಪ್ರಯೋಗಗಳನ್ನು ಮಾಡಿತು. ಪಂಜಾಬಿ ಲಿಟರೇಚರ್ ಎಕ್ಸ್‍ಪರಿಮೆಂಟ್ ಅಕಾಡೆಮಿ ಎಂಬ ಸಂಸ್ಥೆಯೇ ಪ್ರಾರಂಭವಾಯಿತು. ಶಿವ ಬಟಲ್‍ದಿ, ಸತಿಕುಮಾರ್, ಡಾ. ಹರಿಭಜನ ಸಿಂಗ್, ತಾರಾಸಿಂಗ್, ಎಸ್ ಎಸ್ ಮಿಶ್ರ, ಮೊಹಿಂದರ್ ಸಿಂಗ್ ಸರಣ, ಅಮರಿಕ್ ಸಿಂಗ್, ಹರಶರಣ್ ಸಿಂಗ್ ಮೊದಲಾದವರು ಈ ಪಂಥದ ಪ್ರಮುಖ ಸಾಹಿತಿಗಳು.
1960ರ ದಶಕ ಮುಗಿಯುವ ಹೊತ್ತಿಗೆ ಈ ಪಂಥವೂ ಹಿಂದುಳಿದು, ಪ್ರಗತಿಶೀಲ ಪಂಥದ ಅಂಶಗಳನ್ನು ಉಳಿಸಿಕೊಂಡ ತೀವ್ರಗಾಮಿ ಪಂಥ ಗರಿಗೆದರಿತು. ಬಂಗಾಳ ಮತ್ತು ಆಂಧ್ರ ಪ್ರದೇಶಗಳ ರೈತ ಚಳವಳಿ ಪಂಜಾಬಿ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ಅಮೃತ ಚಂದನ್ ಮತ್ತು ಅಮಿತಾಜ್ ಈ ಹೊಸ ಮನೋಧರ್ಮದ ಕವಿಗಳು. ಈ ಪಂಥದ ಪ್ರಮುಖ ಕಾದಂಬರಿಕಾರ, ಗುರುದಯಾಳ್ ಸಿಂಗ್. ಈ ತೀವ್ರಗಾಮಿ ಮನೋಧರ್ಮ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಪ್ರಕಟವಾಗಿದೆ. ಗುರುಶರಣ ಸಿಂಗರ ನಾಟಕಗಳು ಸುಮಾರು ಪ್ರದರ್ಶನಗಳನ್ನು ಕಂಡಿವೆ.
1983ರಲ್ಲಿ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರನ್ನೂ ಭಯೋತ್ಪಾದಕರು ಹೊರಗೆಳೆದು ಕೊಂದರು. ಇಂಥ ಪ್ರಕರಣಗಳು ಹೆಚ್ಚಿದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮತ್ತು ಪಂಜಾಬ್ ವಿಶ್ವವಿದ್ಯಾನಿಲಯದ ಪಂಜಾಬಿ ಸಾಹಿತ್ಯದ ಪ್ರಾಧ್ಯಾಪಕ ಡಾ. ವಿಶ್ವನಾಥ ತಿವಾರಿ, ಕವಿ ಪಾಶ್, ವಿಮರ್ಶಕ ರವೀಂದರ್ ಸಿಂಗ್ ರವಿ ಮೊದಲಾಗಿ ಹಲವರು ಸಾಹಿತಿಗಳೂ ಪತ್ರಕರ್ತರೂ ಭಯೋತ್ಪಾದಕರಿಗೆ ಬಲಿಯಾದರು. ಆದರೂ ಪಂಜಾಬಿ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಸಾಗಿದೆ.