ಗುರುನಾನಕ್
ಸಿಖ್ಖ್‌ಧರ್ಮದ ಸಂಸ್ಥಾಪಕ ಗುರುನಾನಕ್ ಪಶ್ಚಿಮ ಪಂಜಾಬ್‌ನ (ಈಗಿನ ಪಾಕಿಸ್ತಾನ) ತಳವಂಡಿಯಲ್ಲಿ,ಏಪ್ರಿಲ್ ೧೫, ೧೪೬೯ರಂದು ಹುಟ್ಟಿದರು.ಸಾಮಾನ್ಯ ಹಿಂದೂ ಕುಟುಂಬದ ಕಲ್ಯಾಣ್ ದಾಸ್ ಮತ್ತು ಮೆಹ್ತಾ ತೃಪ್ತ ದಂಪತಿಗಳ ಮಗನಾಗಿ ಜನಿಸಿದರು.ತಮ್ಮ ೧೬ನೇ ವಯಸ್ಸಿನಲ್ಲಿ ಸುಲಾಖನಿಯವರೊಂದಿಗೆ ವಿವಾಹ.ಶ್ರೀಚಂದ್ ಮತ್ತು ಲಕ್ಷ್ಮಿದಾಸ್ ಮಕ್ಕಳು.
ಕಾರ್ತಿಕ ಮಾಸದ ಪೌರ್ಣಮಿಯ ದಿನವನ್ನು ಗುರುನಾನಕ್ ಅವರ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ತುಂಬಾ ಸಹಜ ಮತ್ತು ಸರಳವಾಗಿದ್ದ, ಪವಾಡ ಮಾಡುತ್ತೇನೆಂದು ಹೇಳಿಕೊಳ್ಳದ, ಜನರ ಮಧ್ಯದ ಜೀವ ಗುರುನಾನಕ್.
ಚಿಕ್ಕಂದಿನಿಂದಲೇ ಹಿಂದೂ ಮತ್ತು ಮುಸ್ಲಿಮ್ ಸ್ನೇಹಿತರುಗಳ ಒಡನಾಟದಿಂದ ಆ ಧರ್ಮಗಳ ಪ್ರಭಾವ ಇವರ ಮೇಲೆ ಆಯಿತು.ಶಾಲೆಯ ಪಾಠ,ಪ್ರವಚನಗಳೊಂದಿಗೆ,ಮುಸ್ಲಿಮ್ ಸಾಹಿತ್ಯ,ಪರ್ಷಿಯನ್ ಹಾಗೂ ಹಿಂದಿಯನ್ನು ಕಲಿತರು.ಹಿಂದೂ,ಮುಸ್ಲಿಮ್ ಮುಖಂಡರೊಂದಿಗೆ ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದರು.ತಮ್ಮ ೧೩ನೇ ವಯಸ್ಸಿನಲ್ಲಿಯೇ ಹೊಸಧರ್ಮವನ್ನು ಕಂಡುಕೊಂಡರು.ದೇವರ ಸಂದೇಶವನ್ನು ಪ್ರಪಂಚಕ್ಕೆ ಸಾರಲು,ಪ್ರಪಂಚ ಪರ್ಯಟನೆ ಕೈಗೊಂಡರು.
ಸಿಖ್ಖರ ೧೦ ಗುರುಗಳಲ್ಲಿ ಗುರುನಾನಕ್ ಮೊದಲನೆಯವರು.ಇವರ ಹೆಸರು ಭಾರತದಲ್ಲಿ ಮಾತ್ರವಲ್ಲದೆ,ಅರೇಬಿಯಾ,ಶ್ರೀಲಂಕಾ,ಬರ್ಮಾ,ಟಿಬೆಟ್ ಮೊದಲಾದ ಕಡೆ ವ್ಯಾಪಿಸಿತ್ತು.ಗುರುನಾನಕ್ ೧೫೩೯ರಲ್ಲಿ ನಿಧನರಾದರು.[೧]
ಗುರುವನ್ನು ನಂಬಿದ ಪಂಥ
ಬದಲಾಯಿಸಿಗುರುನಾನಕ್ ಅವರಿಂದ ಮೊದಲ್ಗೊಂಡಂತೆ ಗುರುಪರಂಪರೆಗೆ ಸೇರಿದ ಹತ್ತು ಜನ ಗುರುಗಳ ಸಾಮೂಹಿಕ ಸೃಷ್ಟಿಯಾದ ಸಿಖ್ ಪಂಥ ‘ಗುರು’ ಎಂಬ ಮಾನವರೂಪಿಯನ್ನೇ ಮುಖ್ಯವಾಗಿ ನಂಬಿದ್ದು.
ಸಿಖ್ ಧರ್ಮಗುರುಗಳು ಸರಳ ಸಾಮಾನ್ಯ ಜನ. ಗುರು ಹರಿಕೃಷ್ಣರನ್ನು ಬಿಟ್ಟರೆ ಇತರ ಎಲ್ಲ ಗುರುಗಳೂ ವೈವಾಹಿಕ ಜೀವನ ನಡೆಸಿದವರು. ತಮ್ಮ ಶಿಷ್ಯರಿಗೆ ದುಡಿದು ಸ್ವಾವಲಂಬೀ ಜೀವನ ನಡೆಸಲು ಹೇಳಿದವರು. ತಾವೂ ಹಾಗೇ ಬದುಕಿದವರು. ಇವರಿಗೆ ಮಕ್ಕಳಿದ್ದರು. ಆದರೆ ಅನಗತ್ಯವಾಗಿ ಅವರು ಉತ್ತರಾಧಿಕಾರಿಗಳನ್ನು ಮಾಡಿದವರಲ್ಲ.
ಇವರಲ್ಲಿ ಯಾರೂ ಉದ್ದುದ್ದನೆಯ ಭರವಸೆಗಳನ್ನು, ಆಶೀರ್ವಾದಗಳನ್ನು ನೀಡಿದವರಲ್ಲ. ಸ್ವರ್ಗದ ಅಮೃತದ ಬಗ್ಗೆ, ಸುಂದರಿಯರ ಬಗ್ಗೆ ಎಂದೂ ಇವರು ಕನಸು ಕಟ್ಟಿಕೊಡಲಿಲ್ಲ. ಇವರ ಪ್ರಕಾರ ಎಲ್ಲಾ ಮನುಷ್ಯರೂ ಸಮಾನರು. ಜಾತಿ, ಮತಗಳೆಲ್ಲಾ ಅನಗತ್ಯ ಕಿರಿಕಿರಿಗಳು. ಎಲ್ಲಾ ಸೇರಿ ಒಟ್ಟಿಗೆ ಊಟ ಮಾಡುವ, ಕೂಡಿ ಹಾಕುವ ಪರಿಪಾಠಗಳನ್ನು ಜನಪ್ರಿಯಗೊಳಿಸಿದರು. ಮೌಢ್ಯದಿಂದ ಕೂಡಿದ ಆಚರಣೆಗಳನ್ನು ತಿರಸ್ಕರಿಸಿದರು.
ಗುರುಗ್ರಂಥ ಸಾಹೇಬ್
ಬದಲಾಯಿಸಿಬದುಕಿಗೆ ಹೊಸ ಹಾದಿ, ಆಶಯಗಳನ್ನು ಒಳಗೊಂಡ ಗುರುವಿನ ವಿಚಾರ ಸಿಖ್ ಧರ್ಮೀಯರಿಗೆ ದೇವರು. ದೇವರು-ಗುರು ಬೇರೆ ಬೇರೆ ಅಲ್ಲ. ಹತ್ತು ಜನ ಗುರುಗಳ ಒಟ್ಟು ವಿಚಾರಗಳ ಕೃತಿಯಾದ ‘ಗುರು ಗ್ರಂಥ್ ಸಾಹೇಬ್’ ಇವರಿಗೆ ಗುರು. ದೇವರು ಎಲ್ಲಾ ‘ಇದೇ ಅಮರ ಗುರು’. ಮೂರ್ತಿ, ಆಕೃತಿ ಪೂಜೆ ಧರ್ಮದಿಂದ ದೂರ. ಉಪವಾಸದ ಅಗತ್ಯವಿಲ್ಲ. ದಕ್ಷಿಣೆ ಕೊಡುವ ಕಷ್ಟವಿಲ್ಲ. ಮಧ್ಯವರ್ತಿಗಳ ಕಾಟವಿಲ್ಲ. ಪವಿತ್ರ ಸ್ಥಳಗಳಿಗೆ ಯಾತ್ರೆ ಹೋಗಲೇಬೇಕೆಂಬ ಕಡ್ಡಾಯವಿಲ್ಲ. ಗುರುವಿನಲ್ಲಿ ನಂಬಿಕೆ ಇದ್ದರೆ ಅಷ್ಟೇ ಸಾಕು. ಆ ನಂಬಿಕೆ ಸಮಾಧಾನ ಶಾಂತಿ ನೀಡಬಲ್ಲದು. ಹೀಗೆ ಗುರುಗ್ರಂಥ್ ಸಾಹೇಬ್ ‘ಅಮರಗುರು’ ಇದು ಸಿಖ್ ನಂಬಿಕೆ. ಬಹುಶಃ ಗುರುಗ್ರಂಥ್ ಸಾಹೇಬ್ ಪ್ರಪಂಚದಲ್ಲಿಯೇ ವಿಶಿಷ್ಟ ಗ್ರಂಥ. ಇದು ಸಿಖ್ ಗುರುಗಳ ಪದ್ಯಗಳು, ವಿಚಾರಗಳ ಜೊತೆಗೆ ಹಿಂದೂ-ಮುಸ್ಲಿಂ ಸನ್ಯಾಸಿಗಳ, ವಿಚಾರಶೀಲರ ಅಭಿಪ್ರಾಯಗಳ, ರಾಜರ – ಜನಸಾಮಾನ್ಯರ, ಶ್ರೀಮಂತರ-ಬಡವರ ಒಲವು ನಿಲುವುಗಳಿಂದ ಕ್ರೋಡೀಕೃತಗೊಂಡು ಐತಿಹಾಸಿಕ ಮಹತ್ವ ಪಡೆದಿದೆ. ಇದರಿಂದ ‘ಪವಿತ್ರ’ ಎಂಬ ಪದಕ್ಕೆ ಹೊಸ ಅರ್ಥ ಸೃಷ್ಟಿಯಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಜೀವನ
ಬದಲಾಯಿಸಿಗುರುನಾನಕ್ ಅವರು ಹುಟ್ಟಿದ್ದು ೧೪೬೯ರ ವರ್ಷದ ಏಪ್ರಿಲ್ ೧೫ರಂದು. ಊರು ರಾವಿ ಮತ್ತು ಚೀನಾಬ್ ನದಿಯ ಮಧ್ಯದಲ್ಲಿರುವ ಗ್ರಾಮ ‘ತಳವಂಡಿ’. ತಳವಂಡಿಯಲ್ಲಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಪದ್ಯ ರಚಿಸುವ ಮತ್ತು ಅವುಗಳನ್ನು ಅರ್ಥೈಸಿ ಹೇಳುವ ಸಾಮರ್ಥ್ಯ ನಾನಕ ಸಂಪಾದಿಸಿದ್ದರು. ಆದರೂ ಶಾಲೆ ಇವರನ್ನು ಆಕರ್ಷಿಸುವುದರಲ್ಲಿ ವಿಫಲವಾಯಿತು. ಹೆಚ್ಚು ಕಾಲ ಕಾಡು ಮೇಡುಗಳಲ್ಲಿ ಅಲೆಯುತ್ತಾ ಹಾಡುವುದು ಇವರಿಗೆ ಇಷ್ಟವಾಗಿತ್ತು. ಹಾಗಾಗಿ ಧನ ಕಾಯಲೂ ಕೂಡಾ ನೇಮಿಸಲ್ಪಟ್ಟರು. ಆದರೆ ತನ್ನದೇ ಲೋಕದ ವಿಹಾರಿಯಾದ ಈತ ಯಾವೊಂದನ್ನೂ ಗಮನವಿಟ್ಟು ಮಾಡಲಾರದವರಾಗಿದ್ದರು.
ಹನ್ನೊಂದನೆಯ ವಯಸ್ಸಿನಲ್ಲಿ ಯಜ್ಞೋಪವೀತ ಮಾಡಲು ಹೋದರೆ
ಕರುಣೆ ಕನಿಕರಗಳು ಹತ್ತಿಯಾಗಿ ಸಹನೆ ಸಂತೃಪ್ತಿಗಳು ದಾರವಾಗಿ ಸತ್ಯ ಸಂಯಮಗಳು ಹುರಿಗೊಂಡ ದಾರ
ತುಂಡಾಗದ, ಮಣ್ಣಾಗದ, ಸುಟ್ಟು ಬೂದಿಯಾಗದ, ಕಳೆದು ಹೋಗದ ದಾರ ನಿಮ್ಮ ಬಳಿ ಇದ್ದರೆ, ಪುರೋಹಿತರೇ, ಕೊಡಿ ಅದ ನನಗೆ, ಧರಿಸುವೆ....
ಇಲ್ಲದಿದ್ದರೆ ಬೇಡ ಅಂದ. ಹೀಗೆ ಪ್ರತಿಯೊಂದರಲ್ಲೂ ಅರ್ಥ ಹುಡುಕಿ ಅದು ಕಾಣದಿದ್ದರೆ ಅದನ್ನು ಪ್ರಶ್ನಿಸುವ ನಾನಕನಿಗೆ ಆರೋಗ್ಯ ಸರಿಯಿಲ್ಲ ಎಂದು ಡಾಕ್ಟರಿಗೆ ತೋರಿದರು. ಕಡೆಗೆ ಮದುವೆಯೇ ಮದ್ದು ಎಂದು ಮದುವೆ ಮಾಡಿದರು. ಎರಡು ಮಕ್ಕಳಾಯಿತು. ಸ್ವಯಂ ಉದ್ಯೋಗ ಮಾಡು ಎಂದು ಅಂಗಡಿ ಇಟ್ಟುಕೊಟ್ಟರೆ ಎಲ್ಲವನ್ನೂ ಬಡಬಗ್ಗರಿಗೆ ದಾನ ಮಾಡಿ ಬರಿಗೈಲಿ ಬಂದು ಬೈಗುಳ ತಿಂದ. ಪರಿಸರ ಬದಲಾಗಲಿ ಎಂದು ಸಹೋದರಿಯ ಊರಾದ ಸುಲ್ತಾನ್ ಪುರಕ್ಕೆ ಕಳುಹಿಸಿದರು. ಅಲ್ಲಿ ಆಹಾರ ಪದಾರ್ಥ ವಿತರಣಾ ಇಲಾಖೆಯಲ್ಲಿ ಎರಡು ವರ್ಷ ಪ್ರಾಮಾಣಿಕ ಎಂದು ಎನಿಸಿಕೊಂಡು ಮುಂದೆ ಹೇಳದೆ ಕೇಳದೆ ಊರು ಬಿಟ್ಟು ಊರೂರು ತಿರುಗಿದ. ಹೀಗೆ ಪರಿವ್ರಾಜಕತನ ಆತನಲ್ಲಿ ನಿರಂತರವಾಗಿ ಪ್ರಾರಂಭವಾಯ್ತು.
ಕಾಲಮಾನಗಳನ್ನು ನೋಡಿದ ಬಗೆ
ಬದಲಾಯಿಸಿನಾನಕ್ ತನ್ನ ಕಾಲದ ವಿದ್ಯಮಾನಗಳನ್ನು ಕಾಣುವುದು ಹೀಗೆ
“ಈ ಕಲಿಯುಗ ಕತ್ತು ಕೊಯ್ಯುವ ಕತ್ತಿ ರಾಜ ಕೊಲೆಗಡುಕ ಧರ್ಮಕ್ಕೆ ರೆಕ್ಕೆ ಬಂದು ಮಂಗಮಾಯ ಕಪ್ಪು ಕತ್ತಲ ನಡುವೆ ನಿಜದ ಬೆಳಕು ಕಾಣುತ್ತಿಲ್ಲ
ಪ್ರಜೆಗಳ ಬಗ್ಗೆ
ಬದಲಾಯಿಸಿಇನ್ನು ಪ್ರಜೆಗಳ ಬಗೆಗೆ ಅವರ ನಿಲುವು ಹೀಗಿತ್ತು
ಪ್ರಜೆಗಳೋ ಕುರುಡರು, ಬುದ್ಧಿ ಅಡವಿಟ್ಟವರು, ಗುಲಾಮ ಸ್ವಭಾವದವರು, ಸುಳ್ಳು ನಂಬಿ ಖುಷಿ ಪಡುವವರು, ಗುರು ಕುಣಿದರೆ, ಶಿಷ್ಯ ನೆಗೆಯುವನು
ಕರುಣೆಯೇ ಮಸೀದಿ, ಭಕ್ತಿಯೇ ಚಾಪೆ.....
ಬದಲಾಯಿಸಿಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮ ಇವೆರಡರ ಆಚರಣೆಗಳಲ್ಲಿ ಇದ್ದ ಲೋಪದೋಷಗಳು ಡಂಭಾಚಾರಗಳೂ ಅವರಿಗೆ ಸರಿ ಬರಲಿಲ್ಲ. ಆತನ ಮುಸ್ಲಿಂ ಗೆಳೆಯ ಖಾಜಿ ನಾನಕರನ್ನು ಪ್ರಶ್ನಿಸಿದನಂತೆ “ನಿನ್ನ ದೃಷ್ಟಿಯಲ್ಲಿ ಮುಸ್ಲಿಂ ಕಲ್ಪನೆ ಏನು?”
ಕರುಣೆಯೇ ಮಸೀದಿ, ಭಕ್ತಿಯೇ ಚಾಪೆ, ಮನುಷ್ಯತ್ವ ಕುರಾನು, ಸಹನೆ ಸನ್ನಡತೆಗಳೆ ಉಪವಾಸ, ನಡೆವ ಒಳ್ಳೆಯ ದಾರಿ, ಕೃತಿ ‘ಕಾಬಾ’ ಯಾತ್ರೆ ಪ್ರಾರ್ಥನೆಯೇ ಜಪ ಮಣಿ......
ಎಲ್ಲ ಧರ್ಮೀಯರೊಡನೆ ಒಡನಾಟ
ಬದಲಾಯಿಸಿಹಲವು ಧರ್ಮೀಯ ಪಂಥದ, ಭಕ್ತಿ ಪಂತದ, ಸೂಫಿ ಆಚರಣೆಯ ಸಾಧು ಸಂತರು, ಮೌಲ್ವಿಗಳು, ದಾಸರು ಹೀಗೆ ಹಲವರೊಡನೆ ಬೆರೆತರು, ವಿಚಾರ ವಿನಿಮಯ ನಡೆಸಿದರು. ತಮ್ಮ ವಾದವನ್ನು ನಿಲುವನ್ನು ಸ್ಪಷ್ಟಪಡಿಸಿದರು.
ಧರ್ಮ ಕಾವಿಯಲ್ಲಿಲ್ಲ, ಅವ ಹಿಡಿಯುವ ದಂಡದಲ್ಲೂ ಇಲ್ಲ, ಅವ ಬಳಿಯುವ ಬೂದಿಯಲೂ ಇಲ್ಲ, ತಪಸ್ಸು ಕಿವಿಯ ಉಂಗುರದಲ್ಲಿಲ್ಲ, ಬೋಳಿಸಿದ ತಲೆಯಲ್ಲಿಲ್ಲ, ಶಂಖನಾದದಲ್ಲಿಲ್ಲ; ಧರ್ಮವಿದೆ ಬದುಕಿನೊಳಗಿನ ದೋಷಗಳ ಮಧ್ಯದೊಳಗಿದ್ದು ಗೆಲ್ಲುವುದರಲ್ಲಿ, ಒಣಮಾತುಗಳಲ್ಲಿಲ್ಲ ತಪಸ್ಸು, ಇಲ್ಲಿರುವ ಎಲ್ಲರನು ಸಮಾನವೆಂದೆಣಿಸುವವ ತಪಸ್ವಿ ಹೆಣ ಸುಡುವ ಸ್ಮಶಾನದೊಳಗಿಲ್ಲ ಧರ್ಮ ಪವಿತ್ರ ಯಾತ್ರೆ, ಪವಿತ್ರ ಸ್ನಾನಗಳಲ್ಲಿಲ್ಲ ಗುರುವಿನೊಂದಿಗಿನ ಸಮರ್ಪಣೆ ಭೀತಿ ಅನುಮಾನಗಳ ಚಿತ್ತ ಚಾಂಚಲ್ಯಗಳ ಕೊನೆ. ಧರ್ಮವಿದೆ ಬದುಕಿನೊಳಗಿನ ದೋಷಗಳ ಮಧ್ಯದೊಳಗಿದ್ದು ಗೆಲ್ಲುವುದರಲ್ಲಿ.
ಇಡೀ ಭಾರತದ ಎಲ್ಲಾ ಭಾಗಗಳು, ಸಿಂಹಳ, ಅರೇಬಿಯಾ, ಮೆಖ್ಖಾ, ಮದೀನ ಹೀಗೆ ಎಲ್ಲಾ ಸ್ಥಳಗಳನ್ನೂ ತಿರುಗಿದರು. ಹೋದೆಡೆಗಳಲ್ಲಿ ಇವರ ಚಿಂತನೆಗಳನ್ನು ಇಷ್ಟಪಟ್ಟವರು ಇವರ ಅನುಯಾಯಿಗಳೂ ಆದರು. ಒಮ್ಮೆ ಪುರಿಯಲ್ಲಿ ಬಂದಾಗ ಅಲ್ಲಿ ಪೂಜಾರಿಗಳಲ್ಲಿ, ಭಕ್ತರಲ್ಲಿ ಎಲ್ಲೂ ಭಕ್ತಿಯನ್ನು ಕಾಣದಿದ್ದಾಗ ಅವರು ಹಾಡಿದ್ದು ಹೀಗೆ
ಅಧ್ಬುತ ಆರತಿ
ಬದಲಾಯಿಸಿಆಕಾಶ ಆರತಿತಟ್ಟೆ ಸೂರ್ಯ ಚಂದ್ರ ಹಣತೆ, ನಕ್ಷತ್ರಗಳೇ ಆಭರಣ, ಗಂಧದ ಮರಗಳ ಮೇಲಿನ ಬೀಸುಗಾಳಿಯೇ ಚಾಮರ ಇಡೀ ಕಾಡು ಹೂವು, ಎಂಥ ಅದ್ಭುತ ಆರತಿ ಇದು!
ಹೀಗೆ ನಾನಕರ ಬೋಧನೆಗಳು ಮಂತ್ರಗಳ ರೂಪದಲ್ಲಿರಲಿಲ್ಲ. ಸರಳ ಆಡುಮಾತಿನಲ್ಲಿರುತ್ತಿದ್ದವು. ನಾನಕರ ಬೋಧನೆಗಳು ಹೇರಿಕೆಯ ಸ್ವಭಾವದವಾಗಿರಲಿಲ್ಲ. ಮನನೀಯ ಪ್ರೀತಿ ಮಾತುಗಳಾಗಿದ್ದವು.
ಬಾಬರನ ಸೆರೆಯಲ್ಲಿ
ಬದಲಾಯಿಸಿಬಾಬರನ ದಾಳಿಯ ಸಮಯದಲ್ಲಿ ನಾನಕ್ ಮತ್ತು ಆತನ ಸ್ನೇಹಿತರು ಬಂಧಿಗಳಾದರು. ಆದರೆ ತಮ್ಮ ಹಾಡುಗಳ ಮಹಾಪೂರವನ್ನು ಹರಿಸುತ್ತಲೇ ಇದ್ದರು. ಇದರಿಂದ ಪ್ರಭಾವಿತನಾದ ಅಧಿಕಾರಿ ಬಾಬರನ ಬಳಿ ನಾನಕರನ್ನು ಕರೆತಂದನು. ನಾನಕರ ಮಹಿಮೆಯನ್ನು ಅರಿತು ಆತ ನಾನಕರನ್ನೂ ಅವರ ಸಂಗಡಿಗರೆಲ್ಲರನ್ನೂ ಬಿಡುಗಡೆ ಮಾಡಿದನಂತೆ.
ಈ ಲೋಕಕ್ಕೆ ವಿದಾಯ ಹೇಳಿದ ಅಸಾಮಾನ್ಯ ಗುರು
ಬದಲಾಯಿಸಿ1539ರ ವರ್ಷದ ಸೆಪ್ಟೆಂಬರ್ 22ರಂದು ಗುರುನಾನಕ್ ಅವರು ಪ್ರಾರ್ಥನೆಗೆ ಕುಳಿತವರು ಏಳಲಿಲ್ಲ. ತಮ್ಮ ಬದುಕು ಮುಗಿಸಿದ್ದರು. ಇವರ ನೆನಪಿಗಾಗಿ ಮುಸ್ಲಿಮರು ಹಿಂದೂಗಳು ರಾವಿ ನದಿ ದಂಡೆಯಲ್ಲಿ ಸ್ಮಾರಕ ನಿರ್ಮಿಸಿದರು. ಪಂಜಾಬಿನ ಜನ ನಾನಕರನ್ನು ನೆನೆಯುವುದು ಹೀಗೆ:
ನಾನಕ್, ಸತ್ಯದೇವರು, ಹಿಂದೂಗಳ ಗುರು, ಮುಸಲ್ಮಾನರ ಮೌಲ್ವಿ
ಹೀಗೆ ಎಲ್ಲರಿಂದ ಆದರಿಸಲ್ಪಟ್ಟು ಜನಸಾಮಾನ್ಯರ ನಡುವೆ ಬದುಕಿದ್ದ ಅಸಾಮಾನ್ಯ ಗುರು ಈ ನಾನಕರು.
ಉಲ್ಲೇಖಗಳು
ಬದಲಾಯಿಸಿ
- ಗುರುನಾನಕ್' ಕಿರುಗ್ರಂಥ, ಲೇಖಕರು: ಕೃಷ್ಣಮೂರ್ತಿ ಬಿಳಿಗೆರೆ ಪ್ರಕಟಣೆ: ಕರ್ನಾಟಕ ಸಾಹಿತ್ಯ ಅಕಾಡೆಮಿ