ನೇಮಿಚಂದ್ರ (ಲೇಖಕಿ)

ನೇಮಿಚಂದ್ರ (ಜನನ:ಜುಲೈ ೧೬, ೧೯೫೯) ಕನ್ನಡದ ವೈಶಿಷ್ಟ್ಯಪೂರ್ಣ ಬರಹಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಹೆಸರಾಗಿದ್ದಾರೆ.

ನೇಮಿಚಂದ್ರ ಮಲ್ಹೋತ್ರ
ಜನನಜುಲೈ 16, 1959
ಚಿತ್ರದುರ್ಗ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ ಇ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಮೈಸೂರು), ಎಂ.ಎಸ್. ಪದವಿ(ಭಾರತೀಯ ವಿಜ್ಞಾನ ಸಂಸ್ಥೆ)
ತಂದೆಪ್ರೊ. ಜಿ. ಗುಂಡಣ್ಣ
ತಾಯಿತಿಮ್ಮಕ್ಕ

ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬, ೧೯೫೯ರಂದು ಜನಿಸಿದರು. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಎಂ.ಎಸ್. ಪದವಿ. ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.[] ಕನ್ನಡದಲ್ಲಿ ಚಿಂತನಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ.

ಬರಹದ ಬದುಕು

ಬದಲಾಯಿಸಿ
  • ನೇಮಿಚಂದ್ರ ಅವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ವೈಶಿಷ್ಟ್ಯಪೂರ್ಣ ಬರಹಗಳನ್ನು ನೀಡುತ್ತಾ ಬಂದಿದ್ದಾರೆ. ‘ನೇಮಿಚಂದ್ರರ ಕಥೆಗಳು’ ಒಂದು ದೊಡ್ಡ ಸಂಕಲನವಾಗಿ ಹೊರಬಂದಿದೆ. ಹಿಂದೆ ಬಿಡಿ ಸಂಕಲನಗಳಾಗಿ ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’ ಇತ್ಯಾದಿ ರೂಪಗಳಲ್ಲಿ ಬಂದ ಈ ಸಂಕಲನದಲ್ಲಿನ ಕಥೆಗಳು ಓದುಗರನ್ನು ಅಪಾರವಾಗಿ ಸೆಳೆದಿವೆ.
  • ನೇಮಿಚಂದ್ರರ ಕಾದಂಬರಿಗಳೂ ಜನಪ್ರಿಯತೆ ಗಳಿಸಿಕೊಂಡಿವೆ. ವಿಜ್ಞಾನದ ವಸ್ತುಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ. ಯಾವುದೇ ಒಂದು ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಮೆಚ್ಚುವಂತದ್ದು. ಇದಕ್ಕೊಂದು ಉದಾಹರಣೆ ಕನ್ನಡಿಗರ ಮಾನಸದಲ್ಲಿ ಭಿತ್ತಿಗೊಂಡಿರುವ ನೇಮಿಚಂದ್ರರ ‘ಯಾದ್ ವಶೇಮ್’. ಮಹಾಯುದ್ಧ ಕಾಲದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು ಚಿಂತನಪೂರ್ಣ ಮತ್ತು ಅದು ಓದಿಸಿಕೊಂಡು ಹೋಗುವ ರೀತಿಯಲ್ಲಿಯೇ ಹೇಳುವುದಾದರೆ ರೋಚಕ ಚಿತ್ರಣವಾಗಿದೆ. ಇದಕ್ಕಾಗಿ ನೇಮಿಚಂದ್ರರು ಸಂಬಂಧಪಟ್ಟ ದೇಶಗಳಿಗೆ, ಸ್ಥಳಗಳಿಗೆ ಅಲೆದಿದ್ದಾರೆ.
  • ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. ‘ಮೇರಿ ಕ್ಯೂರಿ’, ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ ‘ಡಾ. ಇದಾಸ್ಕಡರ್’, ‘ಥಾಮಸ್ ಆಲ್ವ ಎಡಿಸನ್’, ‘ನೊಬೆಲ್ ವಿಜೇತ ಮಹಿಳೆಯರು’, ‘ಮಹಿಳಾ ವಿಜ್ಞಾನಿಗಳು’ ಜನಪ್ರಿಯವೆನಿಸಿವೆ.
  • ನೇಮಿಚಂದ್ರರ ಚಿಂತನಶೀಲ ಮನಸ್ಸು ವೈವಿಧ್ಯಪೂರ್ಣವಾಗಿದ್ದು ಸಾಮಾಜಿಕ ಚಿಂತನೆಗಳಲ್ಲೂ ಅಪಾರವಾದ ಪಾತ್ರ ನಿರ್ವಹಿಸಿವೆ. ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಈ ನಿಟ್ಟಿನಲ್ಲಿ ಒಂದು ಗಮನಾರ್ಹ ಕೃತಿ. ‘ನನ್ನ ಕಥೆ-ನಮ್ಮ ಕಥೆ’ ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ.
  • ಹೇಮಲತಾ ಮಹಿಷಿ ಅವರೊಡನೆ ಅವರು ನಿರೂಪಿಸಿರುವ ‘ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ’ ಪುಸ್ತಕವು ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾನು ಮಾಡಿದ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕೆಲಸಕ್ಕಾಗಿ, ರಾಕ್ಷಸೀಯ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ಅವರು ನ್ಯಾಯಕ್ಕಾಗಿ ಕಾದು ಕುಳಿತ ಕಥೆ. ನಮ್ಮ ಸಮಾಜದ ಹಿತ್ತಲಿನ ಸಾಮ್ರಾಜ್ಯದ ಕರಾಳತೆಯನ್ನು ರಾಚಿಸುವಂತಿದೆ.
  • ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯತ್ರಿ ‘ಬೆಳೆಗೆರೆ ಜಾನಕಮ್ಮ’, ‘ನೋವಿಗದ್ದಿದ ಕುಂಚ’ ಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಇನ್ನಿತರ ವಿಶಾಲ ಆಸಕ್ತಿಗಳನ್ನು ತೋರುತ್ತವೆ. *‘ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಕೃತಿಗಳು ನೇಮಿಚಂದ್ರರ ಪ್ರವಾಸ ಕಥನಗಳಾಗಿವೆ.
  • ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ ‘ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ದುಡಿವ ಹಾದಿಯಲ್ಲಿ ಜೊತೆಯಾಗಿ’, ‘ಮಹಿಳಾ ಅಧ್ಯಯನ’, ‘ನಿಮ್ಮ ಮನೆಗೊಂದು ಕಂಪ್ಯೂಟರ್, ‘ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್’ , ‘ಮಹಿಳಾ ಲೋಕ’ (ಸಂಪಾದಿತ) ಇವೆಲ್ಲಾ ನೇಮಿಚಂದ್ರರ ಚಿಂತನಪೂರ್ಣ ಬರಹಗಳ ಮತ್ತಷ್ಟು ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ. ನೇಮಿಚಂದ್ರರು 'ತರಂಗ' ಮುಂತಾದ ನಿಯತಕಾಲಿಕೆಗಳಲ್ಲಿ ಆಗಾಗ ನಡೆಸಿರುವ ಸಂದರ್ಶನ ಲೇಖನಗಳು, ‘ಉದಯವಾಣಿ’ ಮುಂತಾದ ಪತ್ರಿಕೆಗಳಲ್ಲಿ ಮೂಡುತ್ತಿರುವ ಅಂಕಣಗಳು ಕೂಡಾ ಸುದೀರ್ಘ ವ್ಯಾಪ್ತಿಯ ಆಳದ್ದಾಗಿವೆ.

ಸಾಹಿತ್ಯ/ಕೃತಿಗಳು

ಬದಲಾಯಿಸಿ

ಕಾದಂಬರಿ

ಬದಲಾಯಿಸಿ
  • ಯಾದ್ ವಶೇಮ್ (ನವಕರ್ನಾಟಕ ಪಬ್ಲಿಕೇಶನ್ಸ್, ೨೦೦೭)

ಕಥಾಸಂಕಲನ

ಬದಲಾಯಿಸಿ
  • ನಮ್ಮ ಕನಸುಗಳಲ್ಲಿ ನೀವಿದ್ದೀರಿ
  • ಮತ್ತೆ ಬರೆದ ಕಥೆಗಳು
  • ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
  • ನೇಮಿಚಂದ್ರರ ಕಥೆಗಳು

ಜೀವನ ಚರಿತ್ರೆ

ಬದಲಾಯಿಸಿ
  • ಬೆಳಗೆರೆ ಜಾನಕಮ್ಮ ಬದುಕು-ಬರಹ (ಸಂಪಾದಿತ)
  • ನೋವಿಗದ್ದಿದ ಕುಂಚ - ವ್ಯಾನ್ ಗೋ ಜೀವನ ಚಿತ್ರ
  • ಬೆಳಕಿಗೊಂದು ಕಿರಣ ಮೇರಿ ಕ್ಯೂರಿ
  • ಥಾಮಸ್ ಆಲ್ವಾ ಎಡಿಸನ್
  • ಡಾ.ಈಡಾ ಸ್ಕಡರ್
  • ಜೇನ್ ಗುಡಾಲ್
  • ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಙಾನಿಗಳು
  • ನನ್ನ ಕಥೆ... ನಮ್ಮ ಕಥೆ...
  • ಕಾಲು ಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು
  • ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು
  • ಗುಬ್ಬಿಯ ಕರೆಯಿರಿ ಮನೆಯಂಗಳಕ್ಕೆ - ಮೊಹಮ್ಮದ್ ದಿಲಾವರ್

ಪ್ರವಾಸ ಕಥನ

ಬದಲಾಯಿಸಿ
  • ಒಂದು ಕನಸಿನ ಪಯಣ
  • ಪೆರುವಿನ ಪವಿತ್ರ ಕಣಿವೆಯಲ್ಲಿ
  • ಸಾಹಿತ್ಯ ಮತ್ತು ವಿಜ್ಞಾನ
  • ಬದುಕು ಬದಲಿಸಬಹುದು (ಅಂಕಣ ಸಂಗ್ರಹ -1)
  • ಸಾವೇ, ಬರುವುದಿದ್ದರೆ ನಾಳೆ ಬಾ (ಅಂಕಣ ಸಂಗ್ರಹ - ೨)
  • ಸೋಲೆಂಬುದು ಅಲ್ಪ ವಿರಾಮ್ (ಅಂಕಣ ಸಂಗ್ರಹ - ೩)
  • ಸಂತಸ, ನನ್ನೆದೆಯ ಹಾ‍ಡು ಹಕ್ಕಿ (ಅಂಕಣ ಸಂಗ್ರಹ - ೪)
  • ದುಡಿವ ಹಾದಿಯಲಿ ಜೊತೆಯಾಗಿ (ದುಡಿವ ದಂಪತಿಗಳಿಗಾಗಿ)
  • ಮಹಿಳಾ ಅಧ್ಯಯನ
  • ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್
  • ನಿಮ್ಮ ಮನೆಗೊಂದು ಕಂಪ್ಯೂಟರ್
  • ಮಹಿಳಾ ಲೋಕ (ಸಂಪಾದಿತ)
  • ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ (ಹೇಮಲತಾ ಮಹಿಷಿ ಅವರೊಡನೆ)

ಪ್ರಶಸ್ತಿ ಗೌರವಗಳು

ಬದಲಾಯಿಸಿ
  • 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.
  • ‘ಯಾದ್ ವಶೇಮ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2007ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 ‘ಅಕ್ಕ’ ಪ್ರಶಸ್ತಿ.
  • 'ಮತ್ತೆ ಬರೆದ ಕಥೆಗಳು' ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ 'ಸಂದೇಶ ಪ್ರಶಸ್ತಿ' ದೊರೆತಿದೆ.
  • 'ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜೀಸ್ ಅಂಡ್ ಇಂಡಸ್ಟ್ರೀಸ್' ನೀಡುವ 'ವಿಮೆನ್ ಅಚೀವರ್ ಇನ್ ಏರೋಸ್ಪೇಸ್' ಪ್ರಶಸ್ತಿ
  • 'ಏರೋ ಇಂಡಿಯಾ ೨೦೧೯'ರಲ್ಲಿ ಏರೋಸ್ಪೇಸ್ ರಂಗಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.
  • ಇಂಡಿಯನ್ ಎಕ್ಸ್ ಪ್ರೆಸ್ ನ 'ದೇವಿ' ಪುರಸ್ಕಾರ
  • 'ಒಂದು ಕನಸಿನ ಪಯಣ' ಕೃತಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿ.[]
  • ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ []
  • ಅತ್ತಿಮಬ್ಬೆ ಪ್ರಶಸ್ತಿ, ೨೦೧೫ []

ಉಲ್ಲೇಖಗಳು

ಬದಲಾಯಿಸಿ
  1. It is no longer a man’s world, ದ ಹಿಂದೂ, June 18, 2008
  2. Compelled to write! Archived 2017-02-02 ವೇಬ್ಯಾಕ್ ಮೆಷಿನ್ ನಲ್ಲಿ., ಡೆಕ್ಕನ್ ಹೆರಾಲ್ಡ್, December 21, 2003
  3. ಪ್ರವಾಸದಲ್ಲಿಯ ಜೀವನದರ್ಶನವೇ ಬರವಣಿಗೆಗೆ ಪ್ರೇರಣೆ, ವಿಜಯವಾಣಿ ಸುದ್ದಿಜಾಲ, 08.01.2017
  4. ಸಂಸ್ಕೃತಿ ಸಲ್ಲಾಪ ನೇಮಿಚಂದ್ರ

ಹೊರಕೊಂಡಿಗಳು

ಬದಲಾಯಿಸಿ