ಕಮರಾಕ್ಷಿ

(ಧಾರೆ ಹುಳಿ ಇಂದ ಪುನರ್ನಿರ್ದೇಶಿತ)
Averrhoa carambola
Carambolas still on the tree
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. carambola
Binomial name
Averrhoa carambola


ಕಮರಾಕ್ಷಿ, ಒಂದು ರಸವತ್ತಾದ ಮೃದು ಹಣ್ಣು. ಇದನ್ನು ಧಾರೆ ಹುಳಿ, ಕರಂಬಳ ಹಣ್ಣು, ಕರಂಬೋಲಾ,ಕರಬಲ,ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯಯುತ್ತಾರೆ. ಆಕ್ಷೀಡೇಸಿಯೇ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು "ಅವೆರೋ ಕ್ಯಾರಂಬೋಲ". ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ [].ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.

ಕಮರಾಕ್ಷಿಯಲ್ಲಿ ಹುಳಿ ಮತ್ತು ಸಿಹಿ ಬಗೆಗಳಿವೆ. ಸಿಹಿಬಗೆಗಳ ಹಣ್ಣನ್ನು ಹಾಗೆಯೇ ತಿನ್ನುವುದು ಸಾಮಾನ್ಯ. ಅವು ಮಕ್ಕಳಿಗೆ ಬಲು ಇಷ್ಟ. ಹುಳಿ ಬಗೆಗಳ ಹಣ್ಣನ್ನು ರಸಹಿಂಡಲು, ಪೇಯ ಪಾನೀಯಗಳಲ್ಲಿ, ಪಾನಕ, ಜಾಮ್‌, ಜಲ್ಲಿ, ಪುಡ್ಡಿಂಗ್‌, ಟಾರ್ಟ್‌, ಪ್ರಿಸರ್ವ್‌, ಚಟ್ನಿ, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ.[] ಕಮರಾಕ್ಷಿ ಹಣ್ಣು ಉದ್ದದ ಐದು ಏಣುಗಳಿಂದ ಕೂಡಿದ್ದು ಅವುಗಳ ಬಣ್ಣ ಮತ್ತು ಪರಿಮಳಗಳು ಎಂತಹವರನ್ನೂ ಸಹ ಆಕರ್ಷಿಸಬಲ್ಲವು. ಆಸ್ಟ್ರೇಲಿಯಾದಲ್ಲಿ ಹಣ್ಣುಗಳ ಮೇಲಿನ ಉದ್ದ ಏಣುಗಳನ್ನು ಚಾಕುವಿನಿಂದ ಕೆ‌ರೆದು, ನಂತರ ತಿನ್ನುತಾರೆ. ಈ ಹಣ್ಣನ್ನು ಸಂಸ್ಕರಣೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಡುಗೆ ಭಕ್ಷ್ಯಗಳನ್ನು ಹೆಚ್ಚು ಆಕರ್ಷಕವಾಗಿರುವಂತೆ ಮಾಡಲು ಕಮರಾಕ್ಷಿ ಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಸಿದ್ಧಗೊಳಿಸಿದ ತೆಳು ಬಿಲ್ಲೆಗಳನ್ನು ಅವುಗಳ ಮೇಲೆ ಒಪ್ಪವಾಗಿ ಇಟ್ಟು ಸಿಂಗರಿಸುವುದುಂಟು. ಈ ಹಣ್ಣುಗಳ ರಸಕ್ಕೆ ಬಟ್ಟೆಗಳ ಮೇಲಿನ ಕಲೆಗಳನ್ನು ಹೋಗಲಾಡಿಸುವ ಗುಣವಿದೆ. ಹಿತ್ತಾಳೆ ಪಾತ್ರೆ ಪರಡಿಗಳಲ್ಲಿ ಕಿಲುಬು ಇದ್ದಲ್ಲಿ ಇವುಗಳ ಹೋಳನ್ನು ಜಜ್ಜಿ ಉಜ್ಜಿ ತೊಳೆದಲ್ಲಿ ಅದು ಇಲ್ಲವಾಗುತ್ತವೆ. ಇದರ ಬಲಿತ ಮರಗಳ ಕಟ್ಟಿಗೆ ಬಾಳಿಕೆ ಬರುವಂತಾದ್ದು. ಅದು ಬೆಳ್ಳಗಿದ್ದು ಮೃದುವಾಗಿರುತ್ತದೆ. ಕಟ್ಟಡದ ಕೆಲಸಗಳಿಗೆ, ಪೀಠೋಪಕರಣಗಳನ್ನು ತಯಾರಿಸಲು ಉಪಯುಕ್ತ. ಇವುಗಳ ಹಣ್ಣನ್ನು ಸಾರು ಮಾಡಲು ಹುಣಿಸೇ ಹಣ್ಣಿನ ಬದಲಾಗಿ ಬಳಸುವುದುಂಟು. ಮನೆಗೊಂದು ಮರವಿದ್ದರೆ ಸಾಕು ವರ್ಷವಿಡೀ ಹಣ್ಣನ್ನು ತಿನ್ನಬಹುದು.

ಪೌಷ್ಠಿಕ ಮೌಲ್ಯ

ಬದಲಾಯಿಸಿ

ಕಮರಾಕ್ಷಿ ಹಣ್ಣಿನ ಬಹುಭಾಗ ನೀರು ಆಗಿರುತ್ತದೆ. ಹುಳಿ ಬಗೆಗಳ ಹಣ್ಣುಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಸಿಹಿಬಗೆಗಳಲ್ಲಿನ ಸಕ್ಕರೆ ಅಂಶ ಗ್ಲೂಕೋಸ್‌ ಆಗಿರುತ್ತದೆ. ಹುಳಿ ಬಗೆಗಳಲ್ಲಿನ ಹುಳಿಗೆ ಆಕ್ಸಾಲಿಕ್‌ ಆಮ್ಲ ಹೆಚ್ಚು ಕಾರಣವಿರುತ್ತದೆ. ಸಿಹಿ ಬಗೆಗಳಲ್ಲಿ ಶೇ. ೦.೧೬ ಆಕ್ಸಾಲಿಕ್‌ ಮತ್ತು ಶೇ. ೦.೦೬ ಮ್ಯಾಲಿಕ್‌ ಆಮ್ಲಗಳಿರುತ್ತವೆ.[] ಹಣ್ಣುಗಳಲ್ಲಿ ಶರ್ಕರಪಿಷ್ಟ, ಪ್ರೋಟೀನ್‌, ಜಿಡ್ಡು, ಖನಿಜಪದಾರ್ಥ, ನಾರು, ಸುಣ್ಣ, ರಂಜಕ, ಕಬ್ಬಿಣ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕೆರೊಟಿನ್‌, ಕ್ಯಾಲೋರಿಸತ್ವ ಮುಂತಾದವು ವಿವಿಧ ಪ್ರಮಾಣಗಳಲ್ಲಿ ಇರುತ್ತವೆ. ಹುಳಿ ಬಗೆಗಳ ಕಮರಾಕ್ಷಿಯ ಅಪಕ್ವ ಹಣ್ಣುಗಳಲ್ಲಿ ಶೇ. ೧ರಷ್ಟು ಆಕ್ಸಾಲಿಕ್ ಅಮ್ಲವಿದ್ದು ಅವು ಪಕ್ವಗೊಂಡಾಗ ಅದರ ಪ್ರಮಾಣ ಶೇ. ೦.೫೧ಕ್ಕೆ ಕುಸಿಯುತ್ತದೆ. ಸಕ್ಕರೆಯ ಹೆಚ್ಚು ಭಾಗ ಅಪಕರ್ಷಕ ಸಕ್ಕರೆ (ಗ್ಲೂಕೋಸ್‌ ಮತ್ತು ಪ್ರುಕ್ಟೋಸ್‌) ಯಾಗಿರುತ್ತದೆ. ಜೇವಸತ್ವಗಳ ಪೈಕಿ ಸಿ ಜೇವಸತ್ವದ ಪ್ರಮಾಣ ೧೦೦ ಗ್ರಾಂಗಳಿಗೆ ೫೦ ಮಿ.ಗ್ರಾಂಗಳಷ್ಟು ಇರುತ್ತದೆ. ಅಷ್ಟೇ ಅಲ್ಲದೆ ಸೆರೈನ್‌, ಗ್ಲುಟಾಮಿನ್‌, ಅಲನೈನ್‌ ಮುಂತಾದ ಜೆಡ್ಡಾಮ್ಲಗಳೂ ಸಹ ಇರುತ್ತವೆ. ಹಣ್ಣುಗಳ ತೀಕ್ಷ್ಣರುಚಿಗೆ ಆಸ್ಕಾರ್ಬಿಕ್‌ ಆಮ್ಲ ಮತ್ತು ಟ್ಯಾನಿಕ್‌ ಅಂಶಗಳು ಕಾರಣವಿರುತ್ತವೆ. ಕಮರಾಕ್ಷಿ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಕೋಷ್ಟಕ ೨.೧ರಲ್ಲಿ ಕೊಡಲಾಗಿದೆ.

೧೦೦ ಗ್ರಾಂ ಕಮರಾಕ್ಷಿ ಹಣ್ಣುಗಳ ತಿರುಳಿನಲ್ಲಿರುವ ಪೋಷಕಾಂಶಗಳು (ಗ್ರಾಂ.ಗಳಲ್ಲಿ)

ಬದಲಾಯಿಸಿ
ಪೋಷಕಾಂಶಗಳು ಪ್ರಮಾಣ
ತೇವಾಂಶ ೯೦-೯೩.೯
ರಸ ೬೦-೭೫
ಶರ್ಕರಪಿಷ್ಟ ೪.೮
ಒಟ್ಟು ಸಕ್ಕರೆ ೩.೫-೧೧.೦
ಡಿಗ್ರಿ ಬ್ರಿಕ್ಸ್‌ ೫-೧೩
ಸಸಾರಜನಕ ೦.೫-೦.೭೫
ಜಿಡ್ಡು ೦.೨
ಕಚ್ಚಾನಾರು ೦.೭
ಖನಿಜಪದಾರ್ಥ ೦.೨
ಕಬ್ಬಿಣ ೦.೬
ಕೆರೊಟಿನ್‌ ೨೪೦-೫೬೦ ಐ.ಯು
ಹುಳಿ (ಮೈಕ್ರೊಗಳಿಗೆ ಸಮ) ೧.೯-೧೩.೧
ರಸ ಸಾರ ೨.೪-೫.೦
ಆಕ್ಸಾಲಿಕ್ ಅಮ್ಲ ೦.೦೪-೦.೭

ಔಷಧೀಯ ಗುಣಗಳು

ಬದಲಾಯಿಸಿ

ಹಣ್ಣು ಸ್ವಲ್ಪ ಒಗರು. ಅವುಗಳನ್ನು ತಿನ್ನುತ್ತಿದ್ದಲ್ಲಿ ಹಸಿವು ಹೆಚ್ಚಾಗುತ್ತದೆ. ಈ ಹಣ್ಣುಗಳಿಂದ ತಯಾರಿಸಿದ ಪಾನಕ ಮತ್ತು ಶರಬತ್ತುಗಳನ್ನು ಕುಡಿಯುತ್ತಿದ್ದಲ್ಲಿ ದಣಿವು ದೂರಗೊಂಡು ಶರಿರದಲ್ಲಿನ ಊತ, ಜ್ವರದ ತಾಪಗಳು ಉಪಶಮನಗೊಳ್ಳುತ್ತವೆ. ಈ ಪಾನೀಯಗಳು ಶೈತ್ಯಕಾರಕವಿರುತ್ತವೆ. ಮೂಲವ್ಯಾಧಿ, ಸ್ಕರ್ವಿ, ಅತಿಸಾರ, ಪಿತ್ತರಸದ ತೊಂದರೆಗಳಿಗೆ ಈ ಹಣ್ಣುಗಳ ಸೇವನೆ ಲಾಭದಾಯಕ. ಫಿಲಿಪ್ಪೈನ್ಸ್‌ನಲ್ಲಿ ಇವುಗಳ ಎಲೆ ಮತ್ತು ಚಿಗುರು ಕುಡಿಗಳನ್ನು ಅರೆದು ಸಿಡುಬು ರೋಗಿಗಳಿಗೆ ಕೊಡುವುದುಂಟು. ಅವುಗಳ ಸೇವನೆ ಹೊಟ್ಟೆಯಲ್ಲಿನ ಹುಳುಗಳಿಗೆ ಒಳ್ಳೆಯ ಔಷಧಿ, ತಲೆನೋವು ಇದ್ದಲ್ಲಿ ಎಲೆ ಮತ್ತು ಚಿಗುರುಗಳನ್ನು ತಿನ್ನುವುದು ಒಳ್ಳೆಯದು. ಹಣ್ಣುಗಳಿಗೆ ಆ‍ಯ್‌ಸ್ಕಾರ್ಬಿಕ್‌ ಆಮ್ಲದ ಆಮ್ಲಜನೀಕರಣವನ್ನು ತಡೆಹಿಡಿಯುವ ಗುಣವಿದೆ ಎನ್ನಲಾಗಿದೆ.

ಇತರ ಉಪಯೋಗಗಳು

ಬದಲಾಯಿಸಿ

ಈ ಹಣ್ಣು ಸಾರು ಮಾಡುವಲ್ಲಿ ಹುಣಿಸೇಹಣ್ಣಿನ ಬದಲಾಗಿ ಬಳಸುವುದುಂಟು. ಹಣ್ಣುಗಳಿಂದ ರುಚಿಕರ ಜಾಮ್‌, ಜೆಲ್ಲಿ, ಚಟ್ನಿ, ಉಪ್ಪಿನ ಕಾಯಿ ಮುಂತಾಗಿ ತಯಾರಿಸುತ್ತಾರೆ. ಈ ಹಣ್ಣುಗಳ ರಸಹಿಂಡಿ ಬಟ್ಟೆಗಳ ಲಿನನ್ ಬಟ್ಟೆಗಳ ಮೇಲಿನ ಕರೆಗಳನ್ನು ಹೋಗಲಾಡಿಸುವುದುಂಟು. ಹಿತ್ತಾಳೆ ಪಾತ್ರೆ ಪರಡಿಗಳನ್ನು ಬೆಳಗಿ ಅವುಗಳ ಮೇಲಿನ ಕಲೆ, ತುಕ್ಕು ಮುಂತಾಗಿ ಹೋಗಲಾಡಿಸಲು ಇವು ಬಲು ಉಪಯುಕ್ತ.[] ಮರದ ಒಳಕಟ್ಟಿಗೆಯನ್ನು ಪೀಠೋಪಕರಣಗಳನ್ನು ತಯಾರಿಸಲು ಬಳಸುತ್ತಾರೆ. ಮರಗಳಿಂದ ಉದುರಿಬಿದ್ದ ಎಲೆ, ಹೂವು ಮಣ್ಣಿಗೆ ಒಳ್ಳೆಯ ಹೊದಿಕೆಯಾಗುತ್ತವೆ. ಅವು ದಿನಕಳೆದಂತೆ ಕೊಳೆತು ಗೊಬ್ಬರವಾಗಬಲ್ಲವು. ಈ ಮರಗಳು ಒಳ್ಳೆಯ ನೆರಳು ಹಾಗೂ ಅಲಂಕಾರಕ ಸಸ್ಯಗಳಾಗಿವೆ. ಬೀಜದಿಂದ ಪಡೆದ ಸಸಿಗಳನ್ನು ತೋಟದ ಸುತ್ತಂಚಿನಲ್ಲಿ ಉದ್ದಕ್ಕೆ ನೆಟ್ಟು ಬೆಳೆಸಿದರೆ ಅವು ಒಳ್ಳೆಯ ಗಾಳಿ ತಡೆಯಾಗಬಲ್ಲವು ಮತ್ತು ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಲ್ಲವು. ಒಣಕಟ್ಟಿಗೆ ಒಳ್ಳೆಯ ಉರುವಲೂ ಹೌದು.

ಸಸ್ಯ ವರ್ಣನೆ

ಬದಲಾಯಿಸಿ
 
An illustration of the fruit, leaves, and flowers of Averrhoa carambola
 
A seedling

ಕಮರಾಕ್ಷಿಯು ಮೊಲುಕ್ಕಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಇಂಡೋ ಚೈನಾಗಳ ನಿವಾಸಿ. ಪ್ರಸ್ತುತ ಇದನ್ನು ಭಾರತದ ಎಲ್ಲಾ ಕಡೆ ಕಾಣಬಹುದಾದರೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ ಹಾಗೂ ಅವುಗಳ ಕ್ಷೇತ್ರ ಮತ್ತು ಉತ್ಪಾದನೆಗಳನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಶ್ರೀಲಂಕಾ, ಬರ್ಮಾ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಪುರ, ಜಪಾನ್‌, ಚೀನ, ತೈವಾನ್, ಅಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ, ಹವಾಯ್‌, ಕಮರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪ್ರದೇಶಗಳು. ಅಮೇರಿಕಾಕ್ಕೆ ಫ್ಲೋರಿಡಾದ ಒಂದು ಹಣ್ಣಿನ ಗಿಡಗಳ ನರ್ಸರಿಯವರು ಇದನ್ನು ೧೮೯೦ರಲ್ಲಿ ಪ್ರವೇಶಪಡಿಸಿದ್ದಾಗಿ ತಿಳಿದುಬಂದಿದೆ. ಅದೇ ರೀತಿ ಆಸ್ಟ್ರೇಲಿಯಾಕ್ಕೆ ಇದು ೧೦೦ ವರ್ಷ‌ಗಳಿಗೂ ಹಿಂದೆಯೇ ಪ್ರವೇಶ ಮಾಡಿರಬಹುದೆಂದು ಅಂದಾಜು. ಕಮರಾಕ್ಷಿ ಆಕ್ಷಾಲಿಡೇಸೀ ಕುಟುಂಬದ ಅವೆರ್ರ್‌ಹೋವ ಉಪವರ್ಗಕ್ಕೆ ಸೇರಿದ ಫಲ. ಇದರ ಸಸ್ಯನಾಮ ಅವೆರ್ರ್‌ಹೋವ ಕ್ಯರಂಬೋಲ L. ಈ ಉಪವರ್ಗಕ್ಕೆ ಅವೆರ್ರ್‌ಹೋವ ಎಂಬ ಹೆಸರನ್ನು ಹೆಸರಾಂತ ಅರಬ್ಬೀ ವೈದ್ಯರಾದ ಅವೆರ್ರ್‌ಹೋಸ್‌ ಎಂಬುವರ ಜ್ಞಾಪಕಾರ್ಥ ಕೊಡಲಾಗಿದೆ. ಕಮರಾಕ್ಷಿಯನ್ನು ಸಂಸ್ಕೃತದಲ್ಲಿ ಬೃಹದ್ದಳ, ಧಾರಾಫಲ, ಮುದ್ಗರ, ಪೀತಫಲ, ಶುಕ್‌ ಪ್ರಿಯ, ಸುಜಕರ ಎಂದರೆ, ಕಮರಾಕ್ಷಿ, ಕಾಮರಂಗ, ಕೊಬ್ರಿಕಾಯಿ, ದಾರೆಹುಳಿ, ಟಮಟಂಗ ಮುಂತಾದವು ಕನ್ನಡದ ಹೆಸರುಗಳು, ಕಮ್ರಾಜ್‌, ಕ್ಯರಂಬೋಲ, ಕ್ಯರಂಬೋಲ ಆಯಪಲ, ಚೈನೀಸ್‌ ಗೂಸ್‌ಬೆರ್ರಿ, ಕೋರಮಂಡಲ್‌ ಗೂಸ್‌ಬೆರ್ರಿ, ಸ್ಟಾರ್ ಫ್ರೂಟ್‌, ಫೈವ್‌ ಕಾರ್ನರ‍್‌ಡ್‌ ಫ್ರೂಟ್‌ ಮುಂತಾದವು ಇದರ ಇಂಗ್ಲೀಷ್‌ ಹೆಸರುಗಳು. ಕಮರಾಕ್ಷಿ ಉಷ್ಣಪ್ರದೇಶಗಳ ನಿತ್ಯ ಹಸುರಿನ ಮರವಾಗಿದೆ. ಪೂರ್ಣ ಬೆಳೆದಾಗ ಕಮರಾಕ್ಷಿಯ ಮರಗಳು ೧೦-೧೫ ಮೀ. ಎತ್ತರವಿರುತ್ತವೆ ಹಾಗೂ ಅಸಂಖ್ಯಾತ ರೆಂಬೆಗಳನ್ನು ಹೊಂದಿರುತ್ತವೆ. ಅವು ಬಲಿಷ್ಠವಿದ್ದು ಸುತ್ತ ಹರಡಿ ಚಾಚಿರುತ್ತವೆ. ಕೆಳಭಾಗದ ರೆಂಬೆಗಳು ನೆಲಮಟ್ಟಕ್ಕೆ ತೀರಾ ಹತ್ತಿರದಲ್ಲಿರುತ್ತವೆ. ಮರಗಳ ನೆತ್ತಿ ವಿಶಾಲವಾಗಿ ಹರಡಿದ್ದು, ಗೋಪುರದಂತೆ ಕಾಣುವುದು. ತೊಗಟೆ ಬೂದುಬಣ್ಣವಿದ್ದು ನಯವಾಗಿರುತ್ತದೆ. ಎಳೆಯ ಗಿಡಗಳಲ್ಲಿನ ಕವಲು ರೆಂಬೆಗಳ ಮೇಲೆಲ್ಲಾ ಹಳದಿ ಬಣ್ಣದ ಮೋಟುತುಪ್ಪಳವಿದ್ದು, ದಿನಕಳೆದಂತೆಲ್ಲಾ ರೆಂಬೆಗಳು ಬರಲುಬರಲಾಗಿ ಮಾರ್ಪಡುತ್ತವೆ. ಎಲೆಗಳು ಸಂಯುಕ್ತವಿದ್ದು ಪ್ರತಿಯೂಂದರಲ್ಲಿ ೩-೫ ಜೊತೆ ಉಪ ಎಲೆಗಲಿರುತ್ತವೆ. ಉಪಎಲೆಗಳಿಗೆ ಪುಟ್ಟತೊಟ್ಟು ಇರುತ್ತದೆ. ಉಪ ಎಲೆಗಳು ಅಂಡಾಕಾರವಿದ್ದು ೨-೯ ಸೆಂ.ಮೀ. ಉದ್ದ ಮತ್ತು ೧-೪ ಸೆಂ.ಮೀ. ಅಗಲ ಇದ್ದು ತುದಿಯತ್ತ ಚೂಪಾಗಿರುತ್ತವೆ. ಎಲೆಗಳ ಬಣ್ಣ ತೆಳುಹಸಿರು; ಮೇಲೆಲ್ಲಾ ಹೊಳಪಾಗಿರುತ್ತವೆ. ಹೂವು ಬಲಿತ ರೆಂಬೆಗಳ ತುದಿಯತ್ತ, ಚಿಗುರು ರೆಂಬೆಗಳಲ್ಲಿ, ಎಲೆರಹಿತ ಬೋಳು ರೆಂಬೆಗಳಲ್ಲಿ ಹಾಗೂ ಎಲೆಗಳ ಕಂಕುಳಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತವೆ. ಸಿಹಿಬಗೆಗಳಲ್ಲಿ ಹೂವು ಕವಲುರೆಂಬೆಗಳ ತುದಿಯಲ್ಲಿ ಬಿಡುತ್ತವೆ. ಹೂಗೊಂಚಲು ಮಧ್ಯಾರಂಭಿಯಾಗಿರುತ್ತದೆ. ಗೊಂಚಲುಗಳಲ್ಲಿನ ಹೂಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ. ಗೊಂಚಲೊಂದರಲ್ಲಿ ಸರಾಸರಿ ೧೬-೩೮ ಹೂಗಳಿರುತ್ತವೆ. ಬಿಡಿಹೂವು ೮-೧೦ ಮಿ.ಮೀ. ಉದ್ದವಿದ್ದು ಬೆಳ್ಳಗೆ, ಬಿಳಿಗೆಂಪು, ಬಿಳಿಕೆನ್ನೀಲಿ ಇಲ್ಲವೇ ಕೆಂಪು ಬಣ್ಣವಿದ್ದು ಗಿಡ್ಡ ತೊಟ್ಟುಗಳಿಗೆ ಅಂಟಿಕೊಂಡಿರುತ್ತವೆ. ಪ್ರತಿ ಹೂವಿನಲ್ಲಿ ೫ ಪುಷ್ಪಪೀಠದ ಎಸಳುಗಳು, ಮತ್ತು ೫ ಹೂದಳಗಳು ಇರುತ್ತವೆ. ಕೇಸರಗಳ ಸಂಖ್ಯೆ ೧೦. ಆದರೆ ಅವುಗಳ ಪೈಕಿ ಐದು ಮಾತ್ರ ಫಲದಾಯಕವಾಗಿರುತ್ತವೆ. ತಳಿಗಳನ್ನು ಶಲಾಕೆಯ ಉದ್ದವನ್ನುನುಸರಿಸಿ ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಉದ್ದಶಲಾಕೆಯ ತಳಿಗಳು ಮತ್ತು ಗಿಡ್ಢ ಶಲಾಕೆಯ ತಳಿಗಳು. ಶಲಾಕೆ ಕೇಸರಗಳಿಗಿಂತ ಮುಂದಕ್ಕೆ ಚಾಚಿದ್ದರೆ ಅದನ್ನು ಉದ್ದ ಶಲಾಕೆಯ ಹೂವು ಎಂಬುದಾಗಿ ಮತ್ತು ಶಲಾಕೆ ಗಿಡ್ಡನಾಗಿದ್ದು ಕೇಸರಗಳಿಗಿಂತ ಕೆಳ ಮಟ್ಟದಲ್ಲಿದ್ದರೆ ಗಿಡ್ಡ ಶಲಾಕೆಯ ಹೂವು ಎಂಬುದಾಗಿ ಕರೆಯುತ್ತಾರೆ. ಉದ್ದ ಶಲಾಕೆಯ ಹೂಗಳನ್ನು ‘ಪಿನ್‌ಐ ಪ್ಲವರ್ಸ್’ ಎಂಬುದಾಗಿಯೂ ಮತ್ತು ಗಿಡ್ಡ ಶಲಾಕೆಯ ಹೂಗಳನ್ನು ‘ಥ್ರಮ್‌ಐ ಪ್ಲವರ್ಸ್’ ಎಂಬುದಾಗಿಯೂ ಕರೆಯುತ್ತಾರೆ. ಗಿಡ್ಡ ಶಲಾಕೆಯ ತಳಿಗಳು ಸ್ವ-ಫಲಪ್ರದವಿರುವುದಿಲ್ಲ ಮತ್ತು ಉದ್ದ ಶಲಾಕೆಯ ತಳಿಗಳು ಸ್ವ-ಫಲಪ್ರದವಿರುತ್ತವೆ. ಗಿಡ್ಡ ಶಲಾಕೆಯ ತಳಿಗಳು ಕಾಯಿ ಕಚ್ಚವಂತಾಗಲು ಉದ್ದ ಶಲಾಕೆಯ ತಳಿಗಳು ಬೇಕಾಗುತ್ತವೆ. ಅಂಡಾಶಯ ಉಚ್ಛಸ್ಥಿತಿಯದಿರುತ್ತದೆ. ಇವು ಅನ್ಯ-ಪರಾಗಸ್ಪರ್ಶದ ಹಣ್ಣಿನ ಬೆಳೆಗಳಾಗಿವೆ. ಹಣ್ಣನ್ನು ಬೆರ್ರಿ ಎನ್ನುತ್ತಾರೆ. ಕಮರಾಕ್ಷಿಯಲ್ಲಿ ಹಣ್ಣಿನ ಉದ್ದಕ್ಕೆ ಎದ್ದುಕಾಣುವ ಏಣುಗಳಿರುತ್ತವೆ.

ತಳಿಗಳು ಮತ್ತು ತಳಿವಿಬೇಧಗಳು

ಬದಲಾಯಿಸಿ

ಆಕ್ಸಾಲಿಡೇಸೀ ಕುಟುಂಬದ ಜನಪ್ರಿಯ ಹಣ್ಣಿನ ಬೆಳೆಯಾದ ಕಮರಾಕ್ಷಿಯ ಸಸ್ಯನಾಮ ಅವೆರ್ರ್‌ಹೋವ ಕ್ಯರಂಬೋಲ L. ಇದರಲ್ಲಿ ಹಲವಾರು ತಳಿಗಳಿವೆ. ಹೊರದೇಶಗಳಲ್ಲಿ ಹಲವಾರು ಉತ್ಕೃಷ್ಟ ತಳಿಗಳಿರುವುದಾಗಿ ತಿಳಿದುಬಂದಿದೆ. ಅವು ಹೀಗೆವೆ: ೧. ಫ್ಲೋರಿಡಾದ ತಳಿಗಳು: ಫ್ಟಾಂಗ್‌ಟುಂಗ್‌, ಡಾಹ್‌ಪಾನ್‌, ಟೀನ್ಮ, ಆರ್ಕಿನ್‌, ಮಹಾ, ಸ್ಟಾರ್ ಕಿಂಗ್, ಥಾಯ್‌ನೈಟ್‌, ವೀಲರ್, ನ್ಯೂಕೊಂಬ್‌ ಮುಂತಾದವು. ೨. ತೈವಾನ್‌ ದೇಶದ ತಳಿಗಳು: ಲೂಥೊ, ಚೆಂಗ್‌ಟ್ಸಿ, ಡಾಹ್‌ಪಾನ್‌, ಎರ್-ಲಿನ್‌, ಸಾಫ್ಟ್‌ಸಿಹ್‌ ಮುಂತಾದವು. ೩. ಸಿಗಪುರದಲ್ಲಿನ ತಳಿಗಳು: ಲೆಂಗ್‌ಬಾಕ್‌, ಜುರಾಂಗ್‌ ಮುಂತಾದವು. ೪. ಥಾಯ್ಲೆಂಡ್‌ನಲ್ಲಿನ ತಳಿಗಳು: ಲೆಂಗ್‌ಬಾಕ್‌, ಜುರಾಂಗ್‌ ಮುಂತಾದವು. ೫. ಮಲೇಷ್ಯಾದಲ್ಲಿನ ತಳಿಗಳು: ಬಿ೧, ಬಿ೨, ಬಿ೪, ಬಿ೬, ಬಿ೮, ಬಿ೧೦, ಬಿ೧೧, ಸುಧಾರಿತ ಆಯ್ಕೆಗಳ ಜೂತೆಗೆ ಜೈಂಟ್‌ಸಯಾಂ, ಜಂಗಲ್‌ಗೋಲ್ಡ್‌, ಬಿಸಿಪಿ-೧, ಹೋಸಿ, ಚುಬುಬ ಮುಂತಾದ ಸ್ಥಳೀಯ ಆಯ್ಕೆಗಳೂ ಸಹ ಇವೆ. ಚೀನಾ ದೇಶದಲ್ಲಿನ ತಳಿವಿಬೇಧಗಳ ಹಣ್ಣು ಹೆಚ್ಚು ಸಿಹಿ ಇರುವುದಾಗಿಯೂ ಮತ್ತು ಬ್ರೆಜಿಲ್‌ ದೇಶದ ಬಗೆಗಳ ಹಣ್ಣು ಅಧಿಕ ಪ್ರಮಾಣದ ಸಿ ಜೇವಸತ್ವ ಹೊಂದಿರುವುದಾಗಿಯೂ ತಿಳಿದುಬಂದಿದೆ.

ಮಲೇಷ್ಯಾ, ಕೊಲಂಬಿಯಾ, ಕ್ವೀನ್ಸ್‌ಲ್ಯಾಂಡ್‌, ಹವಾಯ್‌ ಮುಂತಾದ ದೇಶಗಳ ಬೀಜಸಸಿಗಳಿಂದ ಆರಿಸಿ, ನಿರ್ಲಿಂಗ ರೀತಿಯಲ್ಲಿ ವೃದ್ಧಿಪಡಿಸಿ ಬೇಸಾಯಕ್ಕೆ ಬಿಡುಗಡೆ ಮಾಡಿದ ಆಯ್ಕೆಗಳಲ್ಲಿ ಇಕಂಬೋಲ, ಗೋಲ್ಡನ್‌‌ಸ್ಟಾರ್ ಮುಂತಾದವು ಬಹು ಮುಖ್ಯವಾದವು. ಕೋಷ್ಟಕ ೨.೨ ರಲ್ಲಿ ತಿಳಿಸಿರುವ ಹಣ್ಣುಗಳ ರುಚಿಯನ್ನು ಹೆಡಾನಿಕ್ ಸ್ಕೇಲ್‌ನಲ್ಲಿ ಅಳತೆ ಮಾಡಲಾಗಿದ್ದು ಅದರಲ್ಲಿ ೧ ರಿಂದ ೯ರವರೆಗೆ ಗುರುತುಗಳಿರುತ್ತವೆ. ೧ ಎಂಬುದಾಗಿ ಇದ್ದಲ್ಲಿ ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ ಎಂಬುದಾಗಿಯೂ ಮತ್ತು ೯ ಎಂಬುದಾಗಿ ಇದ್ದಲ್ಲಿ ಹಣ್ಣುಗಳನ್ನು ಬಹುವಾಗಿ ಇಷ್ಟಪಡುವುದಾಗಿಯೂ ತಿಳಿಯಬೇಕು. ಅದೇ ರೀತಿ ಹಣ್ಣುಗಳ ಮೇಲ್ಮೈ ರಚನೆಯಲ್ಲಿ ೧ ಎಂಬುದಾಗಿ ನಮೂದಿಸಿದ್ದರೆ ಮೃದು ಎಂಬುದಾಗಿಯೂ, ೨ ಎಂಬುದಾಗಿದ್ದಲ್ಲಿ ಭಾಗಶಃ ಮೃದು, ೩ ಎಂದಿದ್ದರೆ ಬಿಗುವಾಗಿದೆ ಎಂದು, ೪ ಎಂದಿದ್ದರೆ ಸ್ವಲ್ಪಮಟ್ಟಿಗೆ ಗರಿಗರಿಯಾಗಿದೆಯೆಂದೂ ಮತ್ತು ೫ ಎಂದು ಇದ್ದರೆ ತಿನ್ನಲು ಗರಿಗರಿಯಾಗಿದೆ ಎಂದು ತಿಳಿಯತಕ್ಕದ್ದು. ಇಕಂಬೋಲ ಕಮರಾಕ್ಷಿಯ ಬೀಜ ಸಸಿಗಳಲ್ಲಿನ ಉತ್ತಮ ಆಯ್ಕೆ. ಅದನ್ನು ೧೯೫೭ರಲ್ಲಿ ಕೊಲಂಬಿಯಾದ ಪಾಮೈರಾದಲ್ಲಿ ಆಯ್ಕೆ ಮಾಡಲಾಯಿತು. ಇದು ಆಕಸ್ಮಿಕವಾಗಿ ಕಂಡುಬಂದ ಉತ್ತಮ ಆಯ್ಕೆ. ಇದರ ಮರಗಳು ಸ್ವಲ್ಪ ಎತ್ತರಕ್ಕೆ ಬೆಳೆಯುತ್ತವೆ. ಇದರ ಮರಗಳಲ್ಲಿನ ಇಳುವರಿ ಇತರ ತಳಿಗಳಲ್ಲಿ ಇರುವುದಕ್ಕಿಂತ ನಾಲ್ಕುಪಟ್ಟು ಹೆಚ್ಚಾಗಿರುತ್ತದೆ. ಹಣ್ಣು ಒಂದೇ ತೆರನಾಗಿದ್ದು. ಸ್ಪರ್ಶಕ್ಕೆ ಬಿಗುವಾಗಿರುತ್ತವೆ. ರಸಸಾರ ಮತ್ತು ಒಟ್ಟು ಕರಗಿದ ಘನಪದಾರ್ಥಗಳ ಪ್ರಮಾಣ ಜಾಸ್ತಿ ಇದ್ದು ರುಚಿಯಲ್ಲಿ ಮಧುರವಾಗಿರುತ್ತವೆ; ಹಣ್ಣು ಬೇಗ ಬಿಡುತ್ತವೆ.

ಸಸ್ಯಾಭಿವೃದ್ಧಿ ಪದ್ಧತಿಗಳು

ಬದಲಾಯಿಸಿ
 
Fruits, leaves and trunk

ಕಮರಾಕ್ಷಿಯನ್ನು ಬೀಜ ಊರಿ ಹಾಗೂ ನಿರ್ಲಿಂಗ ಪದ್ಧತಿಗಳಲ್ಲಿ ವೃದ್ಧಿ ಮಾಡಬಹುದು. ಈಗ ಕಂಡುಬರುವ ಬಹುತೇಕ ಮರಗಳು ಬೀಜ ಊರಿ ಬೆಳೆದಂತಹುಗಳೇ ಆಗಿವೆ. ಆದರೆ ಅಂತಹ ಮರಗಳು ತಾಯಿ ಪೀಳಿಗೆಯಂತೆ ಇರುವುದಿಲ್ಲ ಮತ್ತು ಅವು ಬಹುದೊಡ್ಡಗಾತ್ರಕ್ಕೆ ಬೆಳೆಯುತ್ತವೆ. ಅವು ಬಲು ಎತ್ತರಕ್ಕೆ ಬೆಳಿಯುವ ಕಾರಣ ಹಣ್ಣನ್ನು ಕೊಯ್ಲು ಮಾಡುವ ಕೆಲಸ, ಸಸ್ಯಸಂರಕ್ಷಣೆ ಮುಂತಾದವು ಕಷ್ಟವಾಗುತ್ತವೆ. ಅವುಗಳಲ್ಲಿ ಕೆಲವು ಒಳ್ಳೆಯ ಗುಣಗಳೂ ಇರುತ್ತವೆ. ಅವುಗಳೆಂದರೆ ಬಹು ದೀರ್ಘಕಾಲ ಇದ್ದು ಹೆಚ್ಚು ಫಸಲನ್ನು ಬಿಡುವುದು. ಆಳವಿರುವ ಬೇರುಸಮೂಹದಿಂದಾಗಿ ಬರಗಾಲ ಪರಿಸ್ಥಿತಿಗಳನ್ನು ಹೆಚ್ಚು ಸಮರ್ಥವಾಗಿ ತಡೆದುಕೊಳ್ಳುವುದು ಮತ್ತು ಅಪರೂಪವಾಗಿ ವಿಶಿಷ್ಟ ಗುಣಗಳಿಂದ ಕೂಡಿದ ಆಕಸ್ಮಿಕ ಸಸಿಗಳನ್ನು ಉತ್ಪಾದಿಸುವುದು. ಆದರೆ ಬೀಜ ಸಸಿಗಳು ಚೊಚ್ಚಲ ಫಸಲು ಬಿಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಅಂತಹ ಸಸಿಗಳನ್ನು ಕಸಿಮಾಡುವಲ್ಲಿ ಬೇರು ಸಸಿಗಳನ್ನಾಗಿ ಬಳಸಿಕೊಳ್ಳಬಹುದು. ೧. ಬೀಜಪದ್ಧತಿ ಇದಕ್ಕೆ ಸೀಡ್‌ ಪ್ರಾಪಗೇಷನ್, ಸೆಕ್ಷಯಲ್ ಪ್ರಾಪಗೇಷನ್ ಮುಂತಾಗಿ ಕರೆಯುತ್ತಾರೆ. ಈ ಉದ್ದೇಶಕ್ಕೆ ಹೆಚ್ಚು ಫಸಲುಬಿಡುವ ಹಾಗೂ ಕೀಟ ಮತ್ತು ರೋಗಗಳಿಂದ ಮುಕ್ತವಿರುವ ಮರಗಳಲ್ಲಿನ ಪೂರ್ಣಬಲಿತು ಪಕ್ವಗೊಂಡ ಹಣ್ಣುಗಳನ್ನು ಬಿಡಿಸಿ ತೆಗೆದು, ನೀರಿನಲ್ಲಿ ಕಿವುಚಿ, ಸಿಪ್ಪೆ, ನಾರು, ತಿರುಳುಗಳನ್ನು ಬಿಡಿಸಿದಲ್ಲಿ ಬೀಜ ತಳದಲ್ಲಿ ಸಂಗ್ರಹಗಳ್ಳತ್ತವೆ. ನೀರನ್ನು ಬಸಿದು ಬೀಜವನ್ನು ಹೊರತೆಗೆದು ನೆರಳಿನಲ್ಲಿ ತೆಳ್ಳಗೆ ಹರಡಿ ಒಂದೆರಡು ದಿನಗಳ ಕಾಲ ಚೆನ್ನಾಗಿ ಒಣಗಿಸಬೇಕು. ಅನಂತರ ಕ್ಯಾಪ್ಟಾನ್‌ ಅಥವಾ ಮತ್ತಾವುದಾದರೂ ಸೂಕ್ತ ತಾಮ್ರಯುಕ್ತ ಶಿಲೀಂಧ್ರನಾಶಕದ ದ್ರಾವಣದಲ್ಲಿ ಅದ್ದಿ ಉಪಚರಿಸಿ ಬಿತ್ತಬೇಕು. ಬೀಜವನ್ನು ಸಿದ್ಧಗೊಳಿಸಿದ ಒಟ್ಲುಪಾತಿಗಳಲ್ಲಿ, ಮಾಧ್ಯಮ ತುಂಬಿದ ಅಗಲ ಬಾಯಿಯ ಮಣ್ಣಿನ ಕುಂಡಗಳಲ್ಲಿ ಇಲ್ಲವೇ ಪ್ಲಾಸ್ಟಿಕ್‌ ಚೀಗಳಲ್ಲಿ ಬಿತ್ತಬಹುದು.

(ಅ) ಒಟ್ಲು ಪಾತಿಗಳನ್ನು ಸಿದ್ಧಗೊಳಿಸಿ, ಬೀಜವನ್ನು ಬಿತ್ತುವುದು: ಒಟ್ಲು ಬಿಡುವ ಜಾಗವನ್ನು ಚೆನ್ನಾಗಿ ಅಗೆತ ಮಾಡಿ, ಹೆಂಟೆಗಳನ್ನು ಒಡೆದು ಪುಡಿಮಾಡಿ ಕೂಳೆಗಳು, ಕಳೆಕಸ, ಕಲ್ಲುಗಳು ಮುಂತಾಗಿ ಆರಿಸಿ ತೆಗೆದು, ಪಾತಿಗಳನ್ನು ಮಾಡಬೇಕು. ಪಾತಿಗಳ ಗಾತ್ರ ೧.೨ ಮೀ. ಅಗಲ, ೧೫ ಸೆಂ.ಮೀ. ಎತ್ತರ ಮತ್ತು ಅಗತ್ಯಕ್ಕೆ ತಕ್ಕ ಉದ್ದ ಇರುವಂತೆ ಸಿದ್ಧಗೊಳಿಸಿ ಪ್ರತಿ ಚದರ ಮೀಟರ್‌ಗೆ ೧೦ ಕಿ.ಗ್ರಾಂ.ಗಳಷ್ಟು ಚಿನ್ನಾಗಿ ಕೊಳೆತ ಸಗಣಿ ಗೊಬ್ಬರ ಅಥವಾ ಎಲೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರಮಾಡಬೇಕು. ಬೀಜ ಗಾತ್ರದಲ್ಲಿ ಸಣ್ಣವಿರುತ್ತವೆ. ಅವುಗಳನ್ನು ಬಿತ್ತುವ ಮುಂಚೆ ಒಂದೆರಡು ತಾಸು ನೀರಿನಲ್ಲಿ ನೆನೆಸಿಟ್ಟು ಅವು ಬೇಗ ಮೊಳೆಯುತ್ತವೆ. ಒಟ್ಲುಪಾತಿಗಳಲ್ಲಿ ೧೦-೧೫ ಸೆಂ.ಮೀ. ಅಂತರದಲ್ಲಿ ಅಡ್ಡಗೀರುಗಳನ್ನು ಮಾಡಿ ೧೦ ಸೆಂ.ಮೀ.ಗೆ ಒಂದರಂತೆ ಬೀಜವನ್ನು ಬಿತ್ತಿ ಮೇಲೆ ಪುಡಿ ಗೊಬ್ಬರ ಅಥವಾ ಮರಳನ್ನು ಉದುರಿಸಿ ನೀರು ಹನಿಸುವ ಡಬ್ಬಿಯಿಂದ ನೀರು ಹಾಕಬೇಕು. ಬೀಜವನ್ನು ಹೆಚ್ಚು ಆಳಕ್ಕೆ ಬಿತ್ತಬಾರದು. ಒಂದು ವೇಳೆ ಹಾಗೇನಾದರೂ ಬಿತ್ತಿದ್ದೇ ಆದರೆ ಅವು ಕೊಳೆಯುವ ಸಾಧ್ಯತೆ ಇರುತ್ತದೆ. ಬೀಜವನ್ನು ೦.೫ ರಿಂದ ೧ ಸೆಂ.ಮೀ. ಆಳಕ್ಕೆ ಬಿತ್ತಿದರೆ ಸಾಕು. ಅದೇ ರೀತಿ ತೀರಾ ಹಳೆಯ ಬೀಜವನ್ನು ಬಿತ್ತನೆಗೆ ಬಳಸಬಾರದು. ಏಕೆಂದರೆ ಅಂತಹ ಬೀಜ ತಮ್ಮ ಮೊಳೆಯುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ. ಪ್ರತಿದಿನ ಹದವರಿತು ನೀರು ಹಾಕಿದಲ್ಲಿ ಅವು ಮೂರು ನಾಲ್ಕು ವಾರಗಳಲ್ಲಿ ಮೊಳೆಯುತ್ತವೆ.


(ಆ) ಅಗಲಬಾಯಿಯ ಮಣ್ಣಿನ ಕುಂಡಗಳಲ್ಲಿ ಬಿತ್ತುವುದು: ಇವುಗಳನ್ನು ಸೀಡ್‌ಪ್ಯಾನ್‌ಗಳೆನ್ನುತ್ತಾರೆ ಅವುಗಳ ತಳಭಾಗದ ಅಂಚಿನ ಮೂಲೆಯಲ್ಲಿ ಬಸಿರಂಧ್ರವಿದ್ದು ಹೆಚ್ಚುವರಿ ನೀರು ಅದರ ಮೂಲಕ ಹೊರಬೀಳುತ್ತದೆ. ಅದರಿಂದಾಗಿ ಬೀಜ ಕೊಳೆಯುವುದಾಗಲೀ ಅಥವಾ ಎಳೆಯ ಸಸಿಗಳು ಸಾಯುವುದಾಗಲೀ ಇರುವುದಿಲ್ಲ. ಕುಂಡಗಳಿಗೆ ೧:೧:೧ ರಂತೆ ಮಣ್ಣು. ಮರಳು ಮತ್ತು ಕೊಳೆತ ಸಗಣಿ ಗೊಬ್ಬರ ಇಲ್ಲವೇ ಎಲೆಗೊಬ್ಬರಗಳನ್ನು ಬೆರೆಸಿ ಮಾಧ್ಯಮವಾಗಿ ತುಂಬಬೇಕು. ಅನಂತರ ಅಡ್ಡಗೀರುಗಳನ್ನು ಎಳೆದು ಅವುಗಳಲ್ಲಿ ಬೀಜವನ್ನು ಒಂದೊಂದಾಗಿ ೧೦ ಸೆಂ.ಮೀ. ಅಂತರದಲ್ಲಿ ಬಿತ್ತಿ, ಮೇಲೆ ಪುಡಿಗೊಬ್ಬರ ಉದುರಿಸಿ, ನೀರು ಹನಿಸುವ ಡಬ್ಬಿಯಿಂದ ನೀರು ಕೊಡಬೇಕು.


(ಇ) ಪ್ಲಾಸ್ಟಿಕ್‌ ಚೀಲಗಳಲ್ಲಿ ಬೀಜ ಬಿತ್ತುವುದು: ಈ ಉದ್ದೇಶಕ್ಕೆ ೧೫ x ೧೦ ಸೆಂ.ಮೀ. ಉದ್ದಗಲಗಳ ೧೫೦ ಗೇಜ್‌ ದಪ್ಪದ ಪ್ಲಾಸ್ಟಿಕ್‌ ಚೀಲಗಳನ್ನು ಆರಿಸಿಕೊಂಡು ಅವುಗಳ ತಳಭಾಗ ಮತ್ತು ಪಾರ್ಶ್ವಗಳಲ್ಲಿ ರಂಧ್ರಗಳನ್ನು ಮಾಡಿ, ಮಾಧ್ಯಮ ತುಂಬಿ ತಲಾ ಒಂದರಂತೆ ಬೀಜ ಊರಿ, ನೀರು ಕೊಡಬೇಕು. ಒಟ್ಲುಪಾತಿಗಳಲ್ಲಿನ ಹಾಗೂ ಮಣ್ಣಿನ ಕುಂಡಗಳಲ್ಲಿನ ಸಸಿಗಳಲ್ಲಿ ೪-೬ ಎಲೆಗಳಿದ್ದಾಗ ಅವುಗಳನ್ನು ಜೋಪಾನವಾಗಿ ಕಿತ್ತುತೆಗೆದು ಮಾಧ್ಯಮ ತುಂಬಿದ ಪ್ಲಾಸ್ಟಿಕ್‌ ಚೀಲಗಳಿಗೆ ವರ್ಗಾಯಿಸಿ, ನೀರು ಕೊಡುತ್ತಿದ್ದಲ್ಲಿ ಅವು ಮುಂದಿನ ಮುಂಗಾರಿನ ಹೊತ್ತಿಗೆ ಸುಮಾರು ೩೦-೪೫ ಸೆಂ.ಮೀ ಎತ್ತರೆಕ್ಕೆ ಬೆಳೆದು ನೆಡಲು ಅಥವಾ ಕಸಿಮಾಡಲು ಸಿದ್ಧವಿರುತ್ತವೆ. ಆ ಸಮಯಕ್ಕೆ ಅವುಗಳ ಕಾಂಡ ಒಂದು ಸೆಂ.ಮೀ. ದಪ್ಪವಿರುತ್ತದೆ.



೨. ನಿರ್ಲಿಂಗಪದ್ಧತಿ ಇದಕ್ಕೆ ಏಸಿಕ್ಷುಯಲ್‌ ಅಥವಾ ವೆಜೆಟೇಟಿವ್‌ ಪ್ರಾಪಗೇಷನ್‌ ಎನ್ನುತ್ತಾರೆ. ಈ ವಿಧಾನದಲ್ಲಿ ವೃದ್ಧಿಪಡಿಸಿದ ಸಸಿಗಳು ತಾಯಿ ಪೀಳಿಗೆಯಂತಿದ್ದು, ಗಿಡ್ಡ ಮರಗಳನ್ನು ಉತ್ಪಾದಿಸುತ್ತವೆ. ಮತ್ತು ಚೊಚ್ಚಲ ಫಸಲು ಬೇಗ ಪ್ರಾರಂಭಗೊಳ್ಳುತ್ತವೆ. ಈ ಪದ್ಧತಿಯಲ್ಲಿ ಹಲವಾರು ವಿಧಾನಗಳಿವೆ. ಅವುಗಳೆಂದರೆ ಕಸಿವಿಧಾನ, ಕಣ್ಣು ಕೂಡಿಸಿ ಕಸಿಮಾಡುವುದು, ಗೂಟಿಕಟ್ಟುವುದು, ರೆಂಬೆಗಳನ್ನು ನೆಲದಲ್ಲಿ ಊರಿ ಬೇರು ಬರುವಂತೆ ಮಾಡುವುದು, ರೆಂಬೆಯ ತುಂಡುಗಳನ್ನು ನೆಟ್ಟು ಬೇರುಬರುವಂತೆ ಮಾಡುವುದು ಹಾಗೂ ಅಂಗಾಂಶ ವಿಧಾನದಲ್ಲಿ ವೃದ್ಧಿಮಾಡುವುದು.


i. ಕಸಿ ವಿಧಾನ ಇದು ಸರಳ ಮತ್ತು ಸುಲಭವಾದ ವಿಧಾನವಾಗಿದೆ. ಇದನ್ನು ‌ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಫ್ಲೋರಿಡಾದಲ್ಲಿ ಇದು ವಾಣಿಜ್ಯ ವಿಧಾನವಾಗಿದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಅವುಗಳೆಂದರೆ ಬೇರು ಸಸಿ ಮತ್ತು ಕಸಿಕೊಂಬೆ. ಕಸಿಮಾಡಿದ ನಂತರ ಅವರೆಡೂ ಒಂದರಲ್ಲೊಂದು ಬೆಸೆದು ಒಂದುಗಿಡವಾಗಿ ಬೆಳದಾಗ ಅದನ್ನು ಕಸಿ ಗಿಡ ಎನ್ನುತ್ತೇವೆ. ಬೇರು ಸಮೂಹವನ್ನು ಒದಗಿಸುವ ಭಾಗ ಬೀಜ ಸಸಿಯಾಗಿರುತ್ತದೆ. ಅದು ಆಳಕ್ಕೆ ಇಳಿದು ಬಲಿಷ್ಠವಿರುವ ಬೇರು ಸಮೂಹವನ್ನು ಒದಗಿಸಿದರೆ, ಕಸಿಗಂಟಿನ ಮೇಲ್ಭಾಗದಲ್ಲಿನ ಭಾಗ ಹೂವು ಹಣ್ಣು ಬಿಟ್ಟು ನೆತ್ತಿಯ ಚೌಕಟ್ಟನ್ನು ಒದಗಿಸುವ ಅಪೇಕ್ಷಿತ ತಳಿಯ ಕಸಿಕೊಂಬೆಯಾಗಿರುತ್ತದೆ. ಇದರಲ್ಲಿ ಸಾಮೀಪ್ಯಕಸಿ ವಿಧಾನ, ವೆನೀರ್ ಕಸಿ ವಿಧಾನ, ಪಾರ್ಶ್ವ ಕಸಿ ವಿಧಾನ, ಮೆತುಕಟ್ಟಿಗೆ ಕಸಿವಿಧಾನ ವುಂತಾದವು ಇರುತ್ತವೆ.


(ಅ) ಸಾಮೀಪ್ಯ ಕಸಿ ವಿಧಾನ: ಇದಕ್ಕೆ ಪಪ್ರೋಚ್‌ ‌ಗ್ರ್ಯಾಫ್ಟಿಂಗ್, ಇನಾರ್ಚಿಂಗ್‌ ಮುಂತಾಗಿ ಕರೆಯುತ್ತಾರೆ. ಇದಕ್ಕೆ ಒಂದು ವರ್ಷವಯಸ್ಸಿನ ಹಾಗೂ ಒಂದೇ ದಪ್ಪದ ಬೇರು ಸಸಿ ಮತ್ತು ಕಸಿಕೊಂಬೆಗಳು ಬೇಕು. ಅವುಗಳ ದಪ್ಪ ೧-೨ ಸೆಂ.ಮೀ. ಇದ್ದರೆ ಸಾಕು. ಈ ಕೆಲಸಕ್ಕೆ ಜನವರಿ, ಜೂನ್‌ ಮತ್ತು ಅಕ್ಟೋಬರ್ ಹೆಚ್ಚು ಸೂಕ್ತವಿರುತ್ತವೆ. ಪ್ಲಾಸ್ಟಿಕ್‌ ಚೀಲ ಅಥವಾ ಕುಂಡದಲ್ಲಿನ ಬೇರು ಸಸಿಯನ್ನು ತಾಯಿಮರದ ರೆಂಬೆಯ ಪಕ್ಕಕ್ಕೆ ಸರಿಸಬೇಕು. ನೆಲಮಟ್ಟದಿಂದ ೧೫-೨೦ ಸೆಂ.ಮೀ. ಎತ್ತರದಲ್ಲಿನ ರೆಂಬೆಗಳಾದಲ್ಲಿ ಅನುಕೂಲ. ಒಂದು ವೇಳೆ ಅವು ಸ್ವಲ್ಪ ಎತ್ತರದಲ್ಲಿದ್ದರೆ ಅಟ್ಟಣಿಗೆಗಳನ್ನು ನಿರ್ಮಿಸಿ, ಅವುಗಳ ಮೇಲೆ ಬೇರು ಸಸಿಗಳನ್ನಿಟ್ಟು ಕಸಿ ಮಾಡಬಹುದು. ಬೇರು ಸಸಿಯ ಕಾಂಡದ ನಯವಾದ ಜಾಗದಲ್ಲಿ ಅಂದರೆ ೧೫-೨೨ ಸೆಂ.ಮೀ. ಎತ್ತರದಲ್ಲಿ ಹರಿತವಿರುವ ಚಾಕುವಿನಿಂದ ೨ ರಿಂದ ೨.೫ ಸೆಂ.ಮೀ. ಉದ್ದ ಇರುವಂತೆ ಅಂಡಾಕಾರದ ಕಚ್ಚುಕೊಟ್ಟು ತೊಗಟೆ ಚೆಕ್ಕೆಯನ್ನು ಬಿಡಿಸಿ ತೆಗೆಯಬೇಕು. ಅದೇ ರೀತಿ ಕಸಿಕೊಬೆಯಲ್ಲೂ ಸಹ ಅಷ್ಟೇ ಉದ್ದಗಲಗಳ ತೊಗಟೆ ಚಕ್ಕೆಯನ್ನು ಬಿಡಿಸಿ ತೆಗೆದು, ಎರಡೂ ಕಚ್ಚುಭಾಗಗಳನ್ನು ಎದುರುಬದುರಾಗಿ ಜೋಡಿಸಿ ಪ್ಲಾಸ್ಟಿಕ್‌ ಪಟ್ಟಿ ಇಲ್ಲವೇ ನೀರಿನಲ್ಲಿ ಅದ್ದಿದ ಬಾಳೆ ನಾರಿನಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಕಸಿಮಾಡಿದ ನಾಲ್ಕರಿಂದ ಆರು ವಾರಗಳಲ್ಲಿ ಅವು ಬೆಸೆದು ಒಂದಾಗುತ್ತವೆ. ಕಸಿ ಮಾಡಿದ ಸುಮಾರು ೪೫ ದಿನಗಳ ನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಅಡ್ಡಕಚ್ಚುಕೊಟ್ಟು ಕತ್ತರಿಸಬೇಕು. ಅದೇ ರೀತಿ ಕಸಿಕೊಂಬೆಯನ್ನು ಕಸಿಗಂಟಿನ ಸ್ವಲ್ಪ ಕೆಳಗೆ ಅದರ ದಪ್ಪದ ಮೂರನೇ ಒಂದರಷ್ಟು ಆಳಕ್ಕೆ ಕಚ್ಚುಕೊಟ್ಟು ಅದಾದ ೧೫ ದಿನಗಳ ನಂತರ ಅದನ್ನು ಮತ್ತಷ್ಟು ಆಳಮಾಡಿ, ಕಡೆಗೆ ಪೂರ್ಣವಾಗಿ ಬೇರ್ಪಡಿಸಬೇಕು. ಅವುಗಳನ್ನು ನೆರಳಿನಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಬೇಗ ಚೇತರಸಿಕೊಂಡು ಬೆಳೆಯವಲ್ಲವು. ತಮಿಳುನಾಡಿನ ಕಲ್ಲಾರ್ ಮತ್ತು ಬರ‍್ಲಿಯಾರ್ ಸಂಶೋಧನಾ ಕೇಂದ್ರಗಳಲ್ಲಿ ಈ ಪದ್ದತಿಯನ್ನು ಅನುಸರಿಸಿ ಜೂನ್‌ ಹಾಗೂ ಜನವರಿ ತಿಂಗಳುಗಳಲ್ಲಿ ಕಸಿಮಾಡಿದಾಗ ಶೇ. ೮೦ ರಿಂದ ೧೦೦ರಷ್ಟು ಯಶಸ್ಸು ಲಭಿಸಿದ್ದಾಗಿ ತಿಳಿದುಬಂದಿದೆ. ಕಸಿ ಮಾಡಲು ಕಮರಾಕ್ಷಿ ಬೀಜ ಸಸಿಗಳನ್ನೇ ಬಳಸಬೇಕು. ಸಿಂಗಪುರದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಬೀಜ ಊರಿ ಎಬ್ಬಿಸಿದ ೬ ರಿಂದ ೮ ತಿಂಗಳುಗಳ ವಯಸ್ಸಿನ ಬೇರು ಸಸಿಗಳನ್ನು ಈ ಉದ್ದೇಶಕ್ಕೆ ಬಳಸುತ್ತಾರೆ.

 
Fruit


(ಆ) ವೆನೀರ್ ವಿಧಾನ: ಇದಕ್ಕೆ ೦.೬ ರಿಂದ ೧.೩ ಸೆಂ.ಮೀ. ದಪ್ಪದ ಕಾಂಡ ಇರುವಂತಹ, ಒಂದು ವರ್ಷವಯಸ್ಸಿನ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಬೇರು ಸಸಿಯ ಕಾಂಡ ಕಸಿಕಡ್ಡಿಗಿಂತ ಸ್ವಲ್ಪ ದಪ್ಪ ಇದ್ದರೂ ಅಡ್ಡಿಯಿಲ್ಲ. ಕಸಿ ಕಡ್ಡಿಯಲ್ಲಿನ ಎಲೆಗಳನ್ನು ೧೦-೧೫ ದಿನ ಮುಂಚಿತವಾಗಿ ಸ್ವಲ್ಪ ತೊಟ್ಟು ಭಾಗ ಇರುವಂತೆ ಸವರಬೇಕು. ಹೀಗೆ ಮಾಡುವುದರೆಂದ ಅದರ ತುದಿಯಲ್ಲಿನ ಮೊಗ್ಗುಗಳು ಚೆನ್ನಾಗಿ ಉಬ್ಬುತ್ತವೆ ಹಾಗೂ ತೊಟ್ಟುಗಳ ಉಳಿಕೆ ಭಾಗಗಳು ತಮ್ಮಷ್ಟಕ್ಕೆ ತಾವೇ ಕಳಚಿಬೀಳುತ್ತವೆ. ಕಸಿ ಮಾಡುವ ದಿನ ತಂಪು ಹೊತ್ತಿನಲ್ಲಿ ಕಸಿಕಡ್ಡಿಗಳನ್ನು ತಾಯಿ ಮರದಿಂದ ಬೇರ್ಪಡಿಸಿ ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿಟ್ಟು ಕಸಿಮಾಡುವ ಜಾಗಕ್ಕೆ ತರಬೇಕು. ಬೇರು ಸಸಿಯಲ್ಲಿ ಸುಮಾರು ೧೫-೨೨ ಸೆಂ.ಮೀ. ಎತ್ತರದಲ್ಲಿ ಹರಿತವಿರುವ ಕಸಿಚಾಕುವಿನಿಂದ ೨.೫ ಸೆಂ.ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಅದರ ಬುಡದಲ್ಲಿ ಅದರ ಕಾಲು ಭಾಗದಷ್ಟು ಉದ್ದದ ಅಡ್ಡ ಕಚ್ಚು ಸ್ವಲ್ಪ ಓರೆಯಾಗಿರುವಂತೆ ಕೊಟ್ಟು ತೊಗಟೆ ಚಕ್ಕೆಗಳನ್ನು ಬಿಡಿಸಿ ತೆಗೆಯಬೇಕು. ಅದೇ ರೀತಿ ಕಸಿಕಡ್ಡಿಯ ಬುಡದ ಒಂದುಮಗ್ಗುಲಲ್ಲಿ ಸ್ವಲ್ಪ ಉದ್ದನಾದ ಇಳಿಜಾರು ಕಚ್ಚನ್ನು ಕೊಟ್ಟು ಅದರ ಮತ್ತೊಂದು ಮಗ್ಗುಲಲ್ಲಿ ಕಡಿಮೆ ಉದ್ದದ ಇಳಿಕಚ್ಚನ್ನು ಕೊಡಬೇಕು. ಹೀಗೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡವನ್ನು ಬೇರುಸಸಿಯ ಕಚ್ಚುಗಳಲ್ಲಿ ನೆಟ್ಟಗೆ ಇಳಿಸಿ ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಸುಮಾರು ಮೂರು ನಾಲ್ಕುವಾರಗಳಲ್ಲಿ ಅವು ಬೆಸೆದು ಒಂದಾಗುತ್ತವೆ. ಕಸಿಕಡ್ಡಿಯಲ್ಲಿ ಸಾಕಷ್ಟು ಚಿಗುರುಮೂಡಿ ಬೆಳೆದಾಗ, ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಕತ್ತರಿಸಿಹಾಕಬೇಕು. ಹದವರಿತು ನೀರು ಕೊಡುತ್ತಿದ್ದಲ್ಲಿ ಕಸಿಗಿಡಗಳು ಬೆಳೆದು ಮಳೆಗಾಲದ ಹೊತ್ತಿಗೆ ನೆಡಲು ಸಿದ್ದವಿರುತ್ತವೆ.


(ಇ) ಪಾರ್ಶ್ವಕಸಿ ವಿಧಾನ: ಇದಕ್ಕೆ ಸೈಡ್‌ಗ್ರ್ಯಾಪ್ಟಿಂಗ್‌ ಎನ್ನುತ್ತಾರೆ. ಫ್ಲೋರಿಡಾದಲ್ಲಿ ಈ ವಿಧಾನ ಬಹಳ ಯಶಸ್ವಿಯಾಗಿ ಕಂಡುಬಂದಿದೆ. ಇದರಲ್ಲಿ ಸಹ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ. ಸ್ವಲ್ಪ ದೊಡ್ಡವಿರುವ ಮರಗಳಲ್ಲಿಯೂ ಸಹ ಈ ವಿಧಾನವನ್ನು ಅನುಸರಿಸಬಹುದು. ಬೇರು ಸಸಿಯ ಕಾಂಡ ದಪ್ಪನಾಗಿದ್ದರೂ ಅಡ್ಡಿಯಿಲ್ಲ. ಕಸಿಮಾಡುವ ಕಾಲಕ್ಕೆ ಅದರಲ್ಲಿ ಕೂಡುಪದರ ರಸವತ್ತಾಗಿರುವುದು ಬಹು ಮುಖ್ಯ. ಕಸಿಕಡ್ಡಿಗಳ ಉಪಚಾರ ವೆನೀರ್ ವಿಧಾನದಲ್ಲಿ ಇದ್ದಂತೆ. ಅವುಗಳನ್ನು ಕಸಿ ಮಾಡುವ ದಿನ ತಂಪುಹೊತ್ತಿನಲ್ಲಿ ತಾಯಿಮರದಿಂದ ಬೇರ್ಪಡಿಸಿ ತಂದು ಕಸಿ ಮಾಡಲು ಬಳಸಬೇಕು. ಕಸಿಕಡ್ಡಿಯ ಬುಡದಲ್ಲಿ ಎರಡೂ ಮಗ್ಗುಲಲ್ಲಿ ಇಳಿಜಾರು ಕಚ್ಚುಕೊಟ್ಟು ಚೂಪುಮಾಡಬೇಕು. ಬೇರು ಸಸಿಯ ಕಾಂಡದಲ್ಲಿ, ಸೂಕ್ತ ಎತ್ತರದಲ್ಲಿ ಇಳಿಕಚ್ಚುಕೊಟ್ಟು ತೊಗಟೆ ಮತ್ತು ಕಟ್ಟಿಗೆ ಭಾಗಗಳನ್ನು ಹಿಗ್ಗಿಸಿ, ಆ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡಭಾಗವನ್ನು ನೆಟ್ಟಗೆ ಇಳಿಬಿಟ್ಟು, ಕಚ್ಚುಗಳು ಒಮದಕ್ಕೊಂದು ಆತುಕೊಳ್ಳುವಂತೆ ಒತ್ತಿ ಹಿಡಿದು ಪ್ಲಾಸ್ಟಿಕ್‌ ಪಟ್ಟಿಯಿಂದ ಸುತ್ತಿ ಬಿಗಿಯಾಗಿ ಕಟ್ಟಬೇಕು. ಸುಮಾರು ಒಂದು ತಿಂಗಳಲ್ಲಿ ಕಸಿಕಡ್ಡಿಯು ಬೇರು ಸಸಿಯೊಂದಿಗೆ ಬೆಸೆದುಕೊಳ್ಳುತ್ತದೆ. ಅದರಲ್ಲಿ ಸಾಕಷ್ಟು ಚಿಗುರು ಕಾಣಿಸಿಕೊಂಡ ನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಬೇಕು. ಅದಾದ ಒಂದೆರಡು ತಿಂಗಳುಗಳನಂತರ ಕಸಿ ಗಂಟಿನ ಮೇಲೆ ಸುತ್ತಿರುವ ಪ್ಲಾಸ್ಟಿಕ್‌ ಸುರುಳಿಯನ್ನು ಬಿಚ್ಚಿ ತೆಗೆಯಬೇಕು.


(ಈ) ಮೆತುಕಟ್ಡಿಗೆ ಕಸಿ ವಿಧಾನ: ಇದನ್ನು ಸಾಫ್ಟ್‌ವುಡ್‌ ಗ್ರ್ಯಾಪ್ಟಿಂಗ್‌ ಎನ್ನುತ್ತಾರೆ. ಬೇರು ಸಸಿಯ ಕಾಂಡ ಬಲಿತಿರುತ್ತದೆ ಆದರೆ ಅದು ಇನ್ನೂ ಹಸಿರಾಗಿರುತ್ತದೆ. ಅದರಲ್ಲಿನ ಕೆಂಬಯಂ ಅಂಗಾಂಶ ಚುರುಕಾಗಿದ್ದು ಕಸಿ ಮಾಡಿದಾಗ ಬೇಗಕೂಡಿಕೊಳ್ಳಲು ನೆರವಾಗುತ್ತದೆ. ಈ ಉದ್ದೇಶಕ್ಕೆ ಒಂದು ವರ್ಷವಸ್ಸಿನ ಹಾಗೂ ೧.೨೫ ಸೆಂ.ಮೀ. ದಪ್ಪ ಇರುವ ಕಾಂಡದ ಬೇರುಸಸಿಗಳನ್ನು ಆರಿಸಿಕೊಳ್ಳಲಾಗುತ್ತದೆ. ಮೊದಲೇ ಎಲೆಗಳನ್ನು ಸವರಿ ಉಪಚರಿಸಿದ, ಅಷ್ಟೇ ದಪ್ಪವಿರುವ ಕಸಿಗಡ್ಡಿಗಳನ್ನು ಬಳಸಿಕೊಂಡು ಕಸಿಮಾಡಬೇಕು. ಕಸಿಕಡ್ಡಿಯ ಬುಡದ ಎರಡೂ ಮಗ್ಗುಲಲ್ಲಿ ೨ ಸೆಂ.ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಚೂಪು ಮಾಡಬೇಕು. ಅದೇ ರೀತಿ ಬೇರು ಸಸಿಯ ತಲೆಯನ್ನು ೧೫-೨೨ ಸೆಂ.ಮೀ ಅಥವಾ ಇನ್ನೂ ಹೆಚ್ಚು ಎತ್ತರದಲ್ಲಿ ಅಡ್ಡಕ್ಕೆ ಸವರಿ, ಅದರ ಮಧ್ಯಭಾಗದಲ್ಲಿ ಇಳಿಕಚ್ಚುಕೊಟ್ಟು ಸೀಳಬೇಕು. ಈ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿಕಡ್ಡಿಯ ಬುಡದ ಚೂಪು ಭಾಗವನ್ನು ನೆಟ್ಟಗೆ ಇಳಿಸಿ, ಪ್ಲಾಸ್ಟಿಕ್‌ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಕಚ್ಚುಗಳೊಳಕ್ಕೆ ನೀರು ಇಳಿಯದಂತೆ ಮೇಲೆ ಪ್ಲಾಸ್ಟಿಕ್‌ ಚೀಲವನ್ನು ಇಳಿಬಿಟ್ಟು, ಕಸಿಗಂಟಿನ ಕೆಳಗೆ ದಾರದಿಂದ ಕಟ್ಟಬೇಕು. ಸುಮಾರು ೧೫-೨೦ ದಿನಗಳಲ್ಲಿ ಅವು ಬೆಸೆದುಕೊಳ್ಳುತ್ತವೆ. ಸಾಕಷ್ಟು ಚಿಗುರು ಕಾಣಿಸಿಕೊಂಡಾಗ ಪ್ಲಾಸ್ಟಿಕ್‌ ಚೀಲವನ್ನು ಬಿಚ್ಚಿ ತೆಗೆಯಬೇಕು. ಈ ರೀತಿಯಲ್ಲಿ ಸಿದ್ಧಗೊಳಿಸಿದ ಗಿಡಗಳು ಮುಂಗಾರಿನ ಹೊತ್ತಿಗೆ ನೆಡಲು ಬಳಸಬಹುದು. ಗಿಡಗಳನ್ನು ಒಪ್ಪವಾಗಿ ಜೋಡಿಸಿ, ಸ್ವಲ್ಪ ನೆರಳನ್ನು ಒದಗಿಸಿ, ನೀರು ಕೊಡುವುದನ್ನು ಮರೆಯಬಾರದು.


(ಉ) ಹಳೆಯ ಮರಗಳ ಪುನರುಜ್ಜೀವನ: ಇದಕ್ಕೆ ರೆಜುವಿನೇಷನ್‌ ಎನ್ನುತ್ತಾರೆ. ಸಾಕಷ್ಟು ಫಸಲು ಬಿಡದಂತಹ, ತೀರಾ ಹಳೆಯದಾದ ಅಥವಾ ಬೀಜಸಸಿಗಳನ್ನು ಕಸಿಮಾಡುವ ಮೂಲಕ ಸರಿಪಡಿಸಬಹುದು. ಅಂತಹ ಮರದ ಪ್ರಧಾನ ರೆಂಬೆಗಳನ್ನು ಸೂಕ್ತ ಉದ್ದಕ್ಕೆ ಕತ್ತರಿಸಬೇಕು. ಮೋಟು ಭಾಗಗಳಿಂದ ಹಲವಾರು ಚಿಗುರು ಪುಟಿದು ಬೆಳೆಯುತ್ತವೆ. ಅವುಗಳಲ್ಲಿ ಚೆನ್ನಾಗಿರುವ ೩-೪ ಚಿಗುರು ರೆಂಬೆಗಳನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಚಿವುಟಿ ಹಾಕಬೇಕು. ಅವು ೧.೫ ರಿಂದ ೨ ಸೆಂ.ಮೀ. ದಪ್ಪವಿದ್ದಾಗ ಅವುಗಳ ತಲೆಯನ್ನು ಅಡ್ಡಕ್ಕೆ ಸವರಿ, ಮೊದಲೇ ಸಿದ್ಧಗೊಳಿಸಿದ ಕಸಿಕಡ್ಡಿಗಳನ್ನು ಬಳಸಿ ಮೆತುಕಟ್ಟಿಗೆ ಕಸಿ ವಿಧಾನದಲ್ಲಿದ್ದಂತೆ ಕಸಿಮಾಡಬೇಕು. ಹೀಗೆ ಕಸಿಮಾಡಿದ ಒಂದೆರಡು ವರ್ಷಗಳಲ್ಲಿ ಅವು ಫಸಲು ಬಿಡಲು ಪ್ರಾರಂಭಿಸುತ್ತವೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಚಿತ್ರಗಳು

ಬದಲಾಯಿಸಿ


ಉಲ್ಲೇಖಗಳು

ಬದಲಾಯಿಸಿ