ದೊರೆಸ್ವಾಮಿ ಅಯ್ಯಂಗಾರ್

[]ಮೈಸೂರು ದೊರೆಸ್ವಾಮಿ ಅಯ್ಯಂಗಾರ್ [](ಅಕ್ಟೋಬರ್ ೨೪, ೧೯೨೦ - ಅಕ್ಟೋಬರ್, ೧೯೯೭) ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ವೈಣಿಕರು. ಅವರು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಎಂದೇ ಪ್ರಸಿದ್ದರಾಗಿದ್ದು ಪದ್ಮವಿಭೂಷಣ ಗೌರವ ಸಮ್ಮಾನಿತರು.

ದೊರೆಸ್ವಾಮಿ ಅಯ್ಯಂಗಾರ್
ಮೈಸೂರು ದೊರೆಸ್ವಾಮಿ ಅಯ್ಯ೦ಗಾರ್
ಜನನಅಕ್ಟೋಬರ್ ೨೪, ೧೯೨೦
ಮೈಸೂರು
ಮರಣಅಕ್ಟೋಬರ್ ೧೯೯೭
ಗಮನಾರ್ಹ ಕೆಲಸಗಳುಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣಾವಾದಕರು

ಅಕ್ಟೋಬರ್ ೨೪, ೧೯೨೦ ದೊರೆಸ್ವಾಮಿ ಅಯ್ಯಂಗಾರ್ ಅವರು ಹುಟ್ಟಿದ ದಿನ. ಮೈಸೂರಿನ ವೀಣೆಗೆ ಕರ್ನಾಟಕ ಸಂಗೀತದಲ್ಲಿ ಮಹತ್ವದ ಸ್ಥಾನವಿದ್ದು, ಹಲವಾರು ಪರಿಣಿತರನ್ನು ಸಂಗೀತ ಲೋಕಕ್ಕೆ ನೀಡಿದೆ. ಮೈಸೂರು ಅರಸರು ಸಂಗೀತಕ್ಕೆ ಮಹತ್ವದ ಪೋಷಕರಾಗಿದ್ದು, ೧೬೪೫-೧೭೦೪ರ ಅವಧಿಯಲ್ಲಿ ಜೀವಿಸಿದ್ದ ಚಿಕ್ಕದೆವರಾಯರು ಸ್ವಯಂ ಪ್ರಸಿದ್ಧ ವೀಣಾಪಟುಗಳಾಗಿದ್ದರಂತೆ. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತಗಳೆರಡಕ್ಕೂ ಪ್ರೋತ್ಸಾಹವನ್ನು ನೀಡಿ ಅನೇಕ ಸಂಗೀತ ವಿದ್ವಾಂಸರಿಗೆ ಆಶ್ರಯಧಾತರಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅಯ್ಯಂಗಾರ್ ಅವರಿಗೆ ಮಹಾರಾಜರಿಂದ ಪ್ರೋತ್ಸಾಹ ದೊರೆಯಿತು.

ತಮ್ಮ ಆರನೇ ವಯಸ್ಸಿನಲ್ಲೇ ಪ್ರಬುದ್ಧ ವೀಣಾವಾದಕರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ [] ಅವರು ತಮ್ಮ ಹತ್ತನೇ ವಯಸ್ಸಿನಲ್ಲೇ ಮಹಾಜರೆದುರು ವೀಣೆ ನುಡಿಸಿ 50 ಬೆಳ್ಳಿರೂಪಾಯಿಗಳ ಬಹುಮಾನ ಪಡೆದಿದ್ದರು. ದೊರೆಸ್ವಾಮಿ ಅಯ್ಯಂಗಾರ್ಯರು ವೀಣೆ ಮತ್ತು ಕೊಳಲುಗಳೆರಡರಲ್ಲೂ ಪರಿಣತಿ ಹೊಂದಿದ್ದು, ರಾಜ ಕುಟುಂಬದವರಿಗೆ ವೀಣೆ ಮತ್ತು ಕೊಳಲುವಾದನದ ಪಾಠ ಹೇಳುತ್ತಿದ್ದರು. ಅವರ ಕಿರಿಯ ಸಹೋದರ ದೇಶಿಕಾಚಾರ್ ಅವರು ಪ್ರಸಿದ್ಧ ಕೊಳಲುವಾದಕರು. ದೊರೆಸ್ವಾಮಿ ಅವರು, ತಂದೆ ವೆಂಕಟೇಶ ಅಯ್ಯಂಗಾರ್ ಅವರಿಂದಲೇ ಸಂಗೀತ ಪಾಠ ಪಡೆದು ಬಹಳ ಬೇಗ ತಂದೆಯವರನ್ನೇ ಮೀರಿಸಿದರು. ತಮ್ಮ ಮಗನಲ್ಲಿರುವ ಸಂಗೀತ ಬೆಳವಣಿಗೆಯನ್ನು ಗಮನಿಸಿದ ವೆಂಕಟೇಶ ಅಯ್ಯಂಗಾರ್ಯರು ಅವನಿಗೆ ಪ್ರಸಿದ್ಧ ವೈಣಿಕ ವಿದ್ವಾಂಸ ವೀಣೆ ಶೇಷಣ್ಣನವರ ನೇರ ಶಿಷ್ಯರಾದ ವೆಂಕಟಗಿರಿಯಪ್ಪನವರ ಬಳಿ ಶಿಕ್ಷಣಕ್ಕೆ ಏರ್ಪಾಡು ಮಾಡಿದರು. ದೊರೆಸ್ವಾಮಿ ಅವರು ಹದಿನೈದು ವರ್ಷಗಳ ಕಾಲ ವೆಂಕಟಗಿರಿಯಪ್ಪನವರಿಂದ ಕಠಿಣ ಪರಿಶ್ರಮದ ಶಿಕ್ಷಣ ಪಡೆಯುವುದರ ಜೊತೆಗೆ ಗುರುಗಳ ಸಂಗೀತ ಕಚೇರಿಗಳಲ್ಲಿ ಜೊತೆಗಾರರಾಗಿರುತ್ತಿದ್ದರು.

ಕಿರಿಯ ವಯಸ್ಸಿನಲ್ಲೇ ಆಸ್ಥಾನ ವಿದ್ವಾನ್

ಬದಲಾಯಿಸಿ

ಹದಿನಾರನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾನ್ ಸ್ಥಾನ ದೊರೆಸ್ವಾಮಿ ಅಯ್ಯಂಗಾರ್ಯರಿಗೆ ಸಂದಿತ್ತು. ಅವರಿಗೆ ಅಂದಿನ ಮಾಸಿಕ ಸಂಬಳ ರೂ. ೭೫. ಅದು ತಮಗೆ ಸಂತೃಪ್ತಿ ಮತ್ತು ಸಂತೋಷವನ್ನು ಕೊಡುತ್ತಿತ್ತು ಎಂದು ದೊರೆಸ್ವಾಮಿ ಅಯ್ಯಂಗಾರ್ ಅವರು ಹೇಳುತ್ತಿದ್ದರು.

ಆಕಾಶವಾಣಿಯಲ್ಲಿ

ಬದಲಾಯಿಸಿ

ಮೈಸೂರು ರೇಡಿಯೋ ನಿಲಯವು ಆಕಾಶವಾಣಿಯೊಂದಿಗೆ ವಿಲೀನವಾದಾಗ ದೊರೆಸ್ವಾಮಿ ಅಯ್ಯಂಗಾರ್ ಅವರಿಗೆ ಆಕಾಶವಾಣಿಯಲ್ಲಿ ಕಾರ್ಯನಿರ್ವಾಹಕರಾಗುವ ಅವಕಾಶ ಒದಗಿ ಬಂತು. ಇಪ್ಪತ್ತೊಂದು ವರ್ಷಗಳ ಕಾಲ ಆಕಾಶವಾಣಿಯಲ್ಲಿ ದುಡಿದ ಅಯ್ಯಂಗಾರ್ಯರು ರೇಡಿಯೋದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಜನಪ್ರಿಯತೆ ತರುವಲ್ಲಿ ಅಪಾರವಾದ ಶ್ರಮವಹಿಸಿದವರು. ಹಲವಾರು ಉತ್ತಮ ಸಾಹಿತ್ಯಗಳಿಗೆ, ವಾದ್ಯ ಗೋಷ್ಠಿಗಳಿಗೆ ಮತ್ತು ಸಂಗೀತ ವೈವಿಧ್ಯಗಳಿಗೆ ಸಂಗೀತ ಸಂಯೋಜಕರಾಗಿ ಅಯ್ಯಂಗಾರ್ಯರು ಮಹತ್ವದ ಕಾರ್ಯ ನಿರ್ವಹಿಸಿದರು. ಅವರ ಈ ಶ್ರದ್ಧೆಯ ದುಡಿತದಿಂದ ಹಲವಾರು ಸಂಗೀತ ಪ್ರತಿಭೆಗಳು ಬೆಳಕಿಗೆ ಬರುವಂತಾಯಿತು

ವಿಶ್ವದಾದ್ಯಂತ ಕಾರ್ಯಕ್ರಮಗಳು

ಬದಲಾಯಿಸಿ

ದೊರೆಸ್ವಾಮಿ ಅಯ್ಯಂಗಾರ್ ಅವರು ತಮ್ಮ ಸಂಗೀತ ಜೀವನದಲ್ಲಿ ವೈಯಕ್ತಿಕವಾಗಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆ ಪಿಟೀಲು ಚೌಡಯ್ಯ, ಲಾಲ್ಗುಡಿ ಜಯರಾಮನ್ ಮೊದಲಾದ ಸಂಗೀತಗಾರರ ಜೊತೆಯಲ್ಲಿ ವಾದ್ಯ ಕಛೇರಿಗಳಲ್ಲಿ ಭಾಗವಹಿಸಿದ್ದರು. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕಛೇರಿ ನೀಡಿ ಪ್ರಸಿದ್ಧರಾದ ಇವರು ಹಿಂದೂಸ್ಥಾನಿ ಸಂಗೀತದ ದಿಗ್ಗಜರಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಂದಿಗೆ ಹಲವಾರು ಜುಗಲ್ ಬಂದಿ ಕಾರ್ಯಕ್ರಮಗಳನ್ನು ನೀಡಿದ್ದರು.

ಚಲನಚಿತ್ರ ಸಂಗೀತ

ಬದಲಾಯಿಸಿ

‘ಸುಬ್ಬಾಶಾಸ್ತ್ರಿ’ ಚಲನ ಚಿತ್ರಕ್ಕೆ ದೊರೆಸ್ವಾಮಿ ಅಯ್ಯಂಗಾರ್ [] ಅವರು ನೀಡಿದ ಸಂಗೀತ ಸಂಯೋಜನೆಯನ್ನು ಕನ್ನಡದ ಸಿನಿಮಾ ಪ್ರೇಕ್ಷಕರು ಮರೆಯುವಂತೆಯೇ ಇಲ್ಲ. ಡಾ. ಎ. ಎನ್. ಮೂರ್ತಿರಾಯರ ‘ಆಷಾಢಭೂತಿ’ ನಾಟಕವನ್ನು ಆಧರಿಸಿ ಎಂ.ವಿ ಕೃಷ್ಣಸ್ವಾಮಿ ಅವರು ನಿರ್ದೇಶಿಸಿದ ಈ ಚಲನಚಿತ್ರಕ್ಕೆ ದೊರೆಸ್ವಾಮಿ ಅಯ್ಯಂಗಾರ್ ಅವರು ಬಾಲಮುರಳಿಕೃಷ್ಣ, ಶ್ರೀರಂಗಂ ಗೋಪಾಲರತ್ನಂ ಅಂತಹ ಶ್ರೇಷ್ಠ ಗಾಯಕರನ್ನು ಬಳಸಿ ಸಂಯೋಜಿಸಿದ ಹಾಡುಗಳು ಕನ್ನಡ ಚಿತ್ರರಂಗದ ಅತ್ಯುತ್ಕೃಷ್ಟ ಚಲನಚಿತ್ರ ಗೀತೆಗಳ ಸಾಲಿನಲ್ಲಿ ನಿರಂತರವಾಗಿ ವಿರಾಜಿಸುವಂತದ್ದಾಗಿದೆ.

ಸಾಹಿತ್ಯ ಲೋಕದಲ್ಲಿ

ಬದಲಾಯಿಸಿ

ಕವಿ ಪು. ತಿ. ನ ಅವರ ಆತ್ಮೀಯರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ ಅವರು ಕರ್ನಾಟಕ ಸರ್ಕಾರವು ಪು. ತಿ. ನ ಅವರ ಹೆಸರಿನಲ್ಲಿ ಸ್ಥಾಪಿಸಿದ್ದ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯುತ್ತಮ ಬರಹಗಾರರೂ ಆಗಿದ್ದು ‘ವೀಣೆಯ ನೆರಳಿನಲ್ಲಿ’ ಎಂಬುದು ಅವರ ಪ್ರಸಿದ್ಧ ಕೃತಿಯಾಗಿದೆ. ದೊರೆಸ್ವಾಮಿ ಅಯ್ಯಂಗಾರ್ಯರ ಲಲಿತ ಬರಹಗಳು ನಾಡಿನಾದ್ಯಂತ ಮೆಚ್ಚುಗೆ ಗಳಿಸಿದ್ದವು. ಅಂದಿನ ತಲೆಮಾರಿನ ಸಂಗೀತಜ್ಞರ ಕುರಿತು ಅವರಲ್ಲಿ ಜ್ಞಾನ ಭಂಡಾರವೇ ತುಂಬಿತ್ತು.

ಸಾಮಾನ್ಯರಲ್ಲಿ ಸಾಮಾನ್ಯ

ಬದಲಾಯಿಸಿ

ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರಂತೆ ತಮ್ಮ ಮಲ್ಲೇಶ್ವರದ ಮನೆಯಲ್ಲಿ ಜೀವನ ನಡೆಸಿದರು.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಇವರಿಗೆ ಮೈಸೂರು ವಿಶ್ವವಿದ್ಯಾಲಯವು ೧೯೭೫ರ ವರ್ಷದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸಹಾ ದೊರೆಸ್ವಾಮಿ ಅಯ್ಯಂಗಾರ್ ಅವರು ಕಾರ್ಯ ನಿರ್ವಹಿಸಿದ್ದರು. ೧೯೮೫ರ ವರ್ಷದಲ್ಲಿ ಅಖಿಲ ಭಾರತ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಪುತ್ರ ಬಾಲಕೃಷ್ಣ

ಬದಲಾಯಿಸಿ

ದೊರೆಸ್ವಾಮಿ ಅಯ್ಯಂಗಾರ್ ಅವರ ಪುತ್ರ ವಿದ್ವಾನ್ ಡಿ. ಬಾಲಕ್ರಿಷ್ಣ ಅವರೂ ವೀಣಾವಾದನದಲ್ಲಿ ಪ್ರಖ್ಯಾತರಾಗಿದ್ದಾರೆ.

೧೯೯೭ರ ಅಕ್ಟೋಬರ್ ಮಾಸದಲ್ಲಿ ಡಾ. ದೊರೆಸ್ವಾಮಿ ಅಯ್ಯಂಗಾರ್ಯರು ನಿಧನರಾದರು. ಅವರ ಹೆಸರಿನಲ್ಲಿ ಅಕಾಡೆಮಿಯನ್ನು ತೆರೆಯಲಾಗಿದ್ದು, ಮೈಸೂರು ಶೈಲಿಯ ವೀಣಾವಾದನವನ್ನು ಉಳಿಸಿ ಬೆಳೆಸುವ ಕೆಲಸ ನಡೆಸಲಾಗುತ್ತಿದೆ.

ಮಾಹಿತಿ ಆಧಾರ

ಬದಲಾಯಿಸಿ
  1. ೧.೦ ೧.೧ http://www.hindu.com/mag/2007/07/01/stories/2007070150130500.htm[ಶಾಶ್ವತವಾಗಿ ಮಡಿದ ಕೊಂಡಿ]
  2. http://www.frontline.in/navigation/?type=static&page=flonnet&rdurl=fl1423/14230990.htm
  3. http://chowdaiahandparvati.blogspot.in/2010/03/jewel-in-mysore-crown-ashthana-vidwan.html

ಜ್ಯೋತ್ಸ್ನಾ ಕಾಮತ್ ಅವರ ದೊರೆಸ್ವಾಮಿ ಅಯ್ಯಂಗಾರ್ ಅವರ ಲೇಖನ