ದಸ್ತಗಿರಿ
ದಸ್ತಗಿರಿ (ಕೈದು, ಬಂಧನ) ಎಂದರೆ ಒಬ್ಬ ವ್ಯಕ್ತಿಯನ್ನು ಅಭಿರಕ್ಷೆಗೆ ಅಥವಾ ಬಂಧನಕ್ಕೆ ಒಳಪಡಿಸುವುದು (ಅರೆಸ್ಟ್). ಕಾನೂನಿಗೆ ಆತ ತಲೆಬಾಗುವಂತೆ ಕಡ್ಡಾಯಗೊಳಿಸುವುದು ಸಾಮಾನ್ಯವಾಗಿ ಇದರ ಉದ್ದೇಶ. ಕ್ರಿಮಿನಲ್ ಅಥವಾ ಸಿವಿಲ್ ಪ್ರಕ್ರಿಯೆಯ ಅಂಗವಾಗಿ ದಸ್ತಗಿರಿ ಮಾಡಬಹುದು. ಯಾವುದೇ ಕ್ರಿಮಿನಲ್ ಆರೋಪಕ್ಕೆ ಒಬ್ಬಾತ ಹೊಣೆಗಾರನೆಂದು ಅವನನ್ನು ಹಿಡಿದಿಡುವುದು ಅಥವಾ ಅವನು ಅಪರಾಧ ಎಸಗದಂತೆ ತಡೆಯುವುದು ಕ್ರಿಮಿನಲ್ ಪ್ರಕ್ರಿಯಾನುಗುಣ ದಸ್ತಗಿರಿಯ ಒಬ್ಬ ವ್ಯಕ್ತಿ ಪಾವತಿ ಮಾಡಬೇಕಾದ ಮೊಬಲಗಿಗಾಗಿ ಅವನನ್ನು ಹಿಡಿದಿಡುವುದು ಸಿವಿಲ್ ಪ್ರಕ್ರಿಯಾನುಗುಣ ಬಂಧನದ ಉದ್ದೇಶ. ಸಿವಿಲ್ ದಸ್ತಗಿರಿ ಭಾರತದ ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ವಿಧಿಸಿದಂತೆ ಇರಬೇಕು. ಒಂದು ಸಿವಿಲ್ ವ್ಯಾಜ್ಯದ ತೀರ್ಪನ್ನು ಜಾರಿ ಮಾಡುವಾಗ, ಅದನ್ನು ಪಾಲಿಸಲು ಅಸಮರ್ಥನಾದವನನ್ನು ತೀರ್ಪು ಪಡೆದ ವಾದಿ ಅಥವಾ ಪ್ರತಿವಾದಿ ದಸ್ತಗಿರಿ ಮಾಡಿಸಬಹುದು. ತೀರ್ಪಿನಲ್ಲಿ ನಮೂದಿಸಿರುವ ಮೊಬಲಗನ್ನು ಸಂದಾಯ ಮಾಡಲು ಅಸಮರ್ಥನಾಗಿದ್ದರೆ ಅವನನ್ನು ದಸ್ತಗಿರಿ ಮಾಡಿಸಿ ಆ ಮೊಬಲಗಿಗೆ ಅನುಗುಣವಾಗಿ ಒಂದು ನಿಗದಿಯಾದ ಅವಧಿಯವರೆಗೆ ಬಂಧನದಲ್ಲಿಡಿಸಬಹುದು. ಆದರೆ ಬಂಧನದಲ್ಲಿದ್ದಾಗ ಕೈದಿಗೆ ತಗಲುವ ವೆಚ್ಚವನ್ನು ಕೈದು ಮಾಡಿಸಿದ ವಾದಿ ಅಥವಾ ಪ್ರತಿವಾದಿ ಕೊಡತಕ್ಕದ್ದು.
ಕ್ರಿಮಿನಲ್ ದಸ್ತಗಿರಿ ಭಾರತದ ಸಂವಿಧಾನದ ಹಾಗೂ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ನಿಯಮಾವಳಿಯಂತೆ ನಡೆಯಬೇಕು. ಪೋಲಿಸ್ ಅಧಿಕಾರಿ ದಂಡಾಧೀಶನ (ಮ್ಯಾಜಿಸ್ಟ್ರೇಟ್) ವಾರಂಟ್ ಇಲ್ಲದೆ ಅಥವಾ ವಾರಂಟ್ ದ್ವಾರ ಕೈದು ಮಾಡಬಹುದು. ಕ್ರಿಮಿನಲ್ ಪ್ರಕ್ರಿಯಾಸಂಹಿತೆಯಲ್ಲಿ ಸಂಜ್ಞೇಯವೆಂದು (ಕಾಗ್ನಿಸಬಲ್) ವರ್ಣಿಸಲಾದ ಅಪರಾಧದ ಸಂಬಂಧವಾಗಿ ಒಬ್ಬನನ್ನು ಅವನು ವಾರಂಟ್ ಇಲ್ಲದೆ ಬಂಧಿಸಬಹುದು. ಒಬ್ಬನಿಗೆ ಸಂಜ್ಞೇಯ ಅಪರಾಧವೊಂದರಲ್ಲಿ ಇರುವ ಸಂಬಂಧದ ಬಗ್ಗೆ ಸಮಂಜಸವಾದ ಫಿರ್ಯಾದು ಬಂದಿದ್ದರೆ, ಅಥವಾ ವಿಶ್ವಸನೀಯ ಸಮಾಚಾರ ದೊರಕಿದ್ದರೆ, ಅಥವಾ ಸಕಾರಣ ಸಂಶಯವಿದ್ದರೆ ಅಂಥವನನ್ನು ವಾರಂಟ್ ಇಲ್ಲದೆ ಪೋಲಿಸ್ ಅಧಿಕಾರಿ ದಸ್ತಗಿರಿ ಮಾಡಬಹುದು. ಕಳವು, ದರೋಡೆ, ಡಕಾಯಿತಿ, ಕಳವು ಮಾಲಿನ ಸ್ವೀಕಾರ, ಕೊಲೆ, ತೀವ್ರಗಾಯ, ದೊಂಬಿ, ಕಾನೂನುಬಾಹಿರ ಸಭಾಸದಸ್ಯತ್ವ ಮುಂತಾದವು ಸಂಜ್ಞೇಯ ಅಪರಾಧಗಳು. ತನ್ನ ಕೊರೆಯುವ ಅಥವಾ ಮನೆಯ ಬೀಗ ಮುರಿದು ಒಳನುಗ್ಗುವ ಸಾಧನ ಹೊಂದಿರುವವನನ್ನೂ ಪೋಲಿಸ್ ಅಧಿಕಾರಿ ದಸ್ತಗಿರಿ ಮಾಡಬಹುದು. ಆದರೆ ಸಂಜ್ಞೇಯವಲ್ಲದ ಅಪರಾಧವೊಂದನ್ನು ಎಸಗಿದ್ದಾನೆಂಬ ಸಂಶಯದಿಂದ ಒಬ್ಬನನ್ನು ದಂಡಾಧಿಕಾರಿಯ ವಾರಂಟ್ ಇಲ್ಲದೆ ಅವನು ದಸ್ತಗಿರಿ ಮಾಡತಕ್ಕದ್ದಲ್ಲ. ಸರ್ಕಾರದ ವಿರುದ್ಧ ಯುದ್ಧ, ದೇಶದ್ರೋಹ (ಸೆಡಿಷನ್), ಸುಳ್ಳುಸಾಕ್ಷ್ಯ, (ಪರ್ಜರಿ), ಸೃಷ್ಟನೆ (ಫೋರ್ಜರಿ), ಲಘುಗಾಯ (ಸಿಂಪ್ಲ್ ಹರ್ಟ್), ಆಕ್ರಮಣ (ಅಸಾಲ್ಟ್) ಇವು ಅಸಂಜ್ಞೇಯ ಅಪರಾಧದ ನಿದರ್ಶನಗಳು. ಇದನ್ನು ಎಸಗಿದನೆಂಬ ಸಂಶಯಕ್ಕೆ ಒಳಗಾದವನು ತನ್ನ ಹೆಸರು ವಿಳಾಸಗಳನ್ನು ಕೊಡಲು ನಿರಾಕರಿಸಿದರೆ, ಅಥವಾ ಕೊಟ್ಟರೂ ಅವು ಸುಳ್ಳೆಂದು ಎನಿಸಿದರೆ, ಅವನ ನಿಜವಾದ ಹೆಸರು ವಿಳಾಸಗಳನ್ನು ಅರಿಯುವ ಸೀಮಿತ ಉದ್ದೇಶದಿಂದ ಮಾತ್ರ ಅವನನ್ನು ವಾರಂಟ್ ಇಲ್ಲದೆ ದಸ್ತಗಿರಿ ಮಾಡಬಹುದು. ಒಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡುವಾಗ ಅನುಸರಿಸಬೇಕಾದ ಕ್ರಮವನ್ನನುಸರಿಸಲು ಆತ ಸಮ್ಮತಿಸದಿದ್ದರೆ ಆ ವ್ಯಕ್ತಿಯನ್ನು ಹಿಡಿದು ಬಂಧಿಸಬಹುದು. ಬಂಧನಕ್ಕೆ ಸಮ್ಮತಿಸದಿದ್ದರೆ, ಬಲಪ್ರಯೋಗ ಮಾಡಿದರೆ ಅಥವಾ ತಪ್ಪಿಸಿಕೊಳ್ಳಲೆತ್ನಿಸಿದರೆ ಆತನನ್ನು ಬಲವಂತವಾಗಿ ಹಿಡಿದು ಬಂಧಿಸಬೇಕು. ಮುಖ್ಯವಾಗಿ ಕನಿಷ್ಠ ಬಲಪ್ರಯೋಗ ಮಾಡುವ ಅಧಿಕಾರ ಮಾತ್ರ ಇರುತ್ತದೆ. ಅಪರಾಧಿಯನ್ನು ಬಂಧಿಸಲು ಅವನು ಇರುವ ಸ್ಥಳವನ್ನು ಆರಕ್ಷಕರು ಪ್ರವೇಶಿಸಲು ಮತ್ತು ನಿರ್ಗಮಿಸಲು ಎಲ್ಲ ಸೌಲಭ್ಯಗಳನ್ನೂ ಆ ಸ್ಥಳದ ಸ್ವಾಧೀನ ಪಡೆದವರು ನೀಡಬೇಕು. ಇಲ್ಲದಿದ್ದರೆ ಮನೆಯ ಬಾಗಿಲು, ಕಿಟಕಿ ಮುಂತಾದವನ್ನು ಒಡೆದು ಪ್ರವೇಶಿಸುವ ಅಧಿಕಾರ ಅವರಿಗಿದೆ. ಪ್ರವೇಶಿಸಿದಾಗ ಆರಕ್ಷಕರನ್ನೇ ಬಾಗಿಲು ಮುಚ್ಚಿ ಬಂಧಿಸಿದರೆ ಬಾಗಿಲನ್ನು ಒಡೆದು ಹೊರಗೆ ಬರುವ ಅಧಿಕಾರವೂ ಅವರಿಗಿದೆ. ಬಂಧಿತನನ್ನು ಝಡತಿ ಮಾಡಬಹುದು. ಆಯುಧವೇ ಮುಂತಾದುವು ಇದ್ದರೆ ಅವನ್ನು ಸ್ವಾಧೀನಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಹಾಜರ್ಪಡಿಸಬೇಕು.
ಬಂಧನ ಈ ನಿಯಮಗಳಿಗೆ ಅನುಗುಣವಾಗಿರದೆ ಆಕ್ರಮವೆಂದು ರುಜುವಾತಾದರೆ ಹೇಬಿಯಸ್ ಕಾರ್ಪಸ್ ದ್ವಾರಾ ಬಿಡುಗಡೆ ಹೊಂದುವ ಹಕ್ಕು ಬಂಧಿತನಿಗಿದೆ. ಸಂಜ್ಞೇಯ ಪ್ರಕರಣವೊಂದರಲ್ಲಿ ದಸ್ತಗಿರಿಗೆ ಒಳಗಾದವನನ್ನು ಅನಾವಶ್ಯಕ ವಿಳಂಬವಿಲ್ಲದೆ ದಂಡಾಧಿಕಾರಿಯ ಬಳಿಗೆ ಅಥವಾ ಆರಕ್ಷಕ (ಪೋಲಿಸ್) ಠಾಣೆಯ ಅಧಿಕಾರಿಯ ಬಳಿಗೆ ಕರೆದೊಯ್ಯಬೇಕು, ಇಲ್ಲವೇ ಕಳುಹಿಸಬೇಕು. ದಂಡಾಧಿಕಾರಿಯ ವಾರಂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ಆ ಪ್ರಕರಣದಲ್ಲಿ ಸಕಾರಣವೆನ್ನಬಹುದಾದ್ದಕ್ಕಿಂತ ಹೆಚ್ಚು ಕಾಲ ಸ್ಥಾನಬದ್ಧತೆಯಲ್ಲಿಡುವಂತಿಲ್ಲ. ದಸ್ತಗಿರಿ ಮಾಡಿದ ಸ್ಥಳದಿಂದ ದಂಡಾಧಿಕಾರಿಯ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಬೇಕಾಗುವ ಕಾಲದ ಮೇಲೆ ಇಪ್ಪತ್ನಾಲ್ಕು ಗಂಟೆಗಳು ಪರಮಾವಧಿ. ಇದಕ್ಕಿಂತ ಹೆಚ್ಚು ಕಾಲ, ಹದಿನೈದು ದಿನಗಳ ಪರಿಮಿತಿಯವರೆಗೆ, ಅವನನ್ನು ಸ್ಥಾನಬದ್ಧತೆಯಲ್ಲಿಡಲು ದಂಡಾಧಿಕಾರಿ ಅನುಮತಿ ನೀಡಬಹುದು. ತನ್ನ ದಸ್ತಗಿರಿಗೆ ಕಾರಣ ತಿಳಿಯುವ ಹಕ್ಕು, ತಾನು ಆಯ್ಕೆ ಮಾಡಿಕೊಂಡ ನ್ಯಾಯವಾದಿಯ ಸಲಹೆ ಪಡೆಯುವ ಹಾಗೂ ಪ್ರತಿವಾದಿಸಲು ಅವನನ್ನು ನೇಮಿಸಿಕೊಳ್ಳುವ ಹಕ್ಕು ಮುಂತಾದ ಕೆಲವು ಹಕ್ಕುಗಳನ್ನು ಭಾರತ ಸಂವಿಧಾನ ಪ್ರತಿಯೊಬ್ಬನಿಗೂ ನೀಡುತ್ತದೆ. ಸಂಜ್ಞೇಯ ಅಪರಾಧವೊಂದು ನಡೆಯದಂತೆ ತಡೆಯುವ ಉದ್ದೇಶದಿಂದ, ಅಂಥ ಅಪರಾಧ ಎಸಗಲು ಹಂಚಿಕೆ ಹಾಕಿರುವವನನ್ನು ದಸ್ತಗಿರಿ ಮಾಡಲು ಆರಕ್ಷಕ ಅಧಿಕಾರಿಗೆ ಅಧಿಕಾರವುಂಟು.
ಒಬ್ಬ ಖಾಸಗಿ ವ್ಯಕ್ತಿಯೂ ತನ್ನ ಸ್ವಂತ ಜವಾಬ್ದಾರಿಯ ಮೇಲೆ ಹಾಗೂ ದಂಡಾಧಿಕಾರಿಯ ವಾರಂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡಬಹುದು. ತನ್ನ ಸಮಕ್ಷದಲ್ಲಿ ಆತ ಜಾಮೀನು ಕೊಡಲಾಗದ (ನಾನ್-ಬೇಲಬಲ್) ಹಾಗೂ ಸಂಜ್ಞೇಯ ಅಪರಾಧವೊಂದನ್ನು ಎಸಗಿದಾಗ ಅಥವಾ ಅವನು ಘೋಷಿತ ಅಪರಾಧಿಯಾಗಿದ್ದಾಗ ಹೀಗೆ ಮಾಡಲು ಅವಕಾಶವುಂಟು. ಕಳವು, ದರೋಡೆ, ಡಕಾಯಿತಿ, ಕಳವು ಮಾಲಿನ ಸ್ವೀಕಾರ, ಕೊಲೆ, ಕೊಲೆ ಎಸಗಲು ಪ್ರಯತ್ನ, ಅಪಾಯಕರ ಅಸ್ತ್ರದಿಂದ ತೀವ್ರಗಾಯ, ಅಗ್ನಿಸ್ಪರ್ಶ, ಮನೆ ಮುರಿದು ಅತಿಕ್ರಮಪ್ರವೇಶ, ಈ ಅಪರಾಧಗಳಲ್ಲಿ ಸಾಮೀಲಾಗುವುದು-ಇವು ಇಂಥ ಅಪರಾಧಗಳ ಕೆಲವು ನಿದರ್ಶನಗಳು. ಭಾರತೀಯ ದಂಡ ಸಂಹಿತೆಯಲ್ಲಿ ನಮೂದಾದ ಈ ಅಪರಾಧಗಳಲ್ಲದೆ ಇತರ ಕೆಲವು ಅಧಿನಿಯಮಗಳ (ಎನಾಕ್ಟ್‍ಮೆಂಟ್ಸ್) ಅಡಿಯಲ್ಲಿ ಅವನ ಸಮ್ಮುಖದಲ್ಲಿ ಎಸಗಲಾದ, ಹಾಗೂ ಮರಣದಂಡನೆ, ಜೀವಾವಧಿ ಶಿಕ್ಷೆ ಮುಂತಾದ ಶಿಕ್ಷೆಗಳಿಗೆ ಒಳಗಾಗಬಹುದಾದ, ಅಪರಾಧಗಳ ಪ್ರಕರಣಗಳಲ್ಲೂ ಅವನು ದಸ್ತಗಿರಿ ಮಾಡಬಹುದು. ರೈಲು ಗಾಡಿಗೆ ಅಥವಾ ರೈಲುಮಾರ್ಗಕ್ಕೆ ಎಸಗಲಾದ ಜಖಂ ಒಂದು ಉದಾಹರಣೆ. ಆದರೆ ಜಾಮೀನು ಕೊಡಲಾಗದ್ದಲ್ಲದ, ಹಾಗೂ ಅಸಂಜ್ಞೇಯವಾದ ಅಪರಾಧ ಎಂಥದೇ ಆಗಿರಲಿ, ಆ ಕಾರಣಕ್ಕಾಗಿ ಒಬ್ಬನನ್ನು ದಸ್ತಗಿರಿ ಮಾಡಲು ಖಾಸಗಿ ವ್ಯಕ್ತಿಗೆ ಯಾವ ಸಂದರ್ಭದಲ್ಲೂ ಅಧಿಕಾರವಿಲ್ಲ. ಹಾಗೇನಾದರೂ ಮಾಡಿದ ಪಕ್ಷದಲ್ಲಿ ಆತ ಅಕ್ರಮ (ರಾಂಗ್‍ಫುಲ್) ದಸ್ತಗಿರಿ ಮಾಡಿದನೆಂದು ಆ ವ್ಯಕ್ತಿಯಿಂದ ಹಾನಿಪೂರ್ತಿ (ಡ್ಯಾಮೇಜ್) ದಾವೆಗೆ ಬಾಧ್ಯನಾಗಬಹುದು. ಅದಕ್ಕಾಗಿ ಅವನು ಶಿಕ್ಷೆಗೆ ಒಳಗಾಗಬಹುದು. ದಸ್ತಗಿರಿಯಾದವನು ಆ ಸಂದರ್ಭದಲ್ಲಿ ಅದನ್ನು ಪ್ರತಿಭಟಿಸಿ ಬಲಪ್ರಯೋಗ ಮಾಡಿದ್ದಲ್ಲಿ ಆಕ್ಷೇಪಿಸುವಂತಿಲ್ಲ. ಕಾನೂನಿನ ಅಜ್ಞಾನ ಅವನಿಗೆ ರಕ್ಷಣೆ ನೀಡುವುದಿಲ್ಲ. ದಸ್ತಗಿರಿ ಮಾಡಿದ ಮೇಲೆ ಅನಾವಶ್ಯಕ ವಿಳಂಬವಿಲ್ಲದೆ ಕೈದಿಯನ್ನು ಆರಕ್ಷಕ ಅಧಿಕಾರಿಗೆ ಇಲ್ಲವೇ ಅತ್ಯಂತ ಹತ್ತಿರದ ಆರಕ್ಷಕ ಠಾಣೆಗೆ ಒಪ್ಪಿಸಬೇಕು. ಅವನನ್ನು ಪುನರ್ಬಂಧಿಸಬೇಕೇ, ಇಲ್ಲವೇ ವಿಮೋಚನೆಗೊಳಿಸಬೇಕೇ ಎಂಬುದು ಆರಕ್ಷಕ ಅಧಿಕಾರಿಯ ವಿವೇಚನೆಗೆ ಒಳಪಡುವ ವಿಚಾರ.