ಥಾಮಸ್ ಕಾರ್ಲೈಲ್

ಗಣಿತಜ್ಞ


ಥಾಮಸ್ ಕಾರ್ಲೈಲ್(4 ಡಿಸೆಂಬರ್ 1795 – 5 ಫೆಬ್ರವರಿ 1881) ಸ್ಕಾಟ್ಲಂಡ್‍ನ ತತ್ವಜ್ಞಾನಿ, ವಿಡಂಬನಾತ್ಮಕ ಬರಹಗಾರ,ಕಾದಂಬರಿಕಾರ,ಚರಿತ್ರಕಾರ ಮತ್ತು ಅಧ್ಯಾಪಕ.ಇಂಗ್ಲಿಷ್ ಗದ್ಯ ಸಾಹಿತಿ[೧]. ಸಾರ್ಟರ್ ರಿಸಾರ್ಟಸ್, ಫ್ರೆಂಚ್ ರೆವಲ್ಯೂಷನ್ ಮೊದಲಾದ ಗ್ರಂಥಗಳ ಕರ್ತೃ. ತನ್ನ ಕಾಲದ ಲೇಖಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವ.

Thomas Carlyle
Photo by Elliott & Fry, circa 1860s
ಜನನ(೧೭೯೫-೧೨-೦೪)೪ ಡಿಸೆಂಬರ್ ೧೭೯೫
Ecclefechan, Dumfriesshire, Scotland, United Kingdom
ಮರಣ5 February 1881(1881-02-05) (aged 85)
London, England, United Kingdom
ವೃತ್ತಿEssayist, satirist, historian, mathematician
ಸಾಹಿತ್ಯ ಚಳುವಳಿVictorian literature, Romanticism
ಪ್ರಮುಖ ಕೆಲಸ(ಗಳು)Sartor Resartus
The French Revolution: A History
On Heroes, Hero-Worship, and The Heroic in History
Carlyle circle (mathematics)

ಸಹಿ

ಬಾಲ್ಯ ಮತ್ತು ಜೀವನಸಂಪಾದಿಸಿ

 
Birthplace of Thomas Carlyle

ಹದಿನೈದನೆಯ ವಯಸ್ಸಿನಲ್ಲಿ ಎಡಿನ್‍ಬರೊ ವಿಶ್ವವಿದ್ಯಾನಿಲಯವನ್ನು ಸೇರಿದನಾದರೂ ಪದವೀಧರನಾಗಲಿಲ್ಲ. 1826ರಲ್ಲಿ ಜೇನ್ ವೆಲ್ಷಳನ್ನು ಮದುವೆಯಾದ. [೨] ಸತ್ತ್ವಶಾಲಿಯಾದ ವ್ಯಕ್ತಿತ್ವವನ್ನುಳ್ಳ ಈಕೆ ಈತನ ಕಷ್ಟ, ನಿರಾಶೆಗಳ ದಿನಗಳಲ್ಲಿ ಧೈರ್ಯವನ್ನಿತ್ತಳು. ಈಕೆಯ ಮರಣಾನಂತರ (1866) ಗಣನೀಯವಾದುದೇನನ್ನೂ ಕಾರ್ಲೈಲ್ ಬರೆಯಲಿಲ್ಲ. ಬಹು ವರ್ಷ ಬಡತನವನ್ನು ಅನುಭವಿಸಿ, ಉಪಾಧ್ಯಾಯ ವೃತ್ತಿಯನ್ನೂ ಕೈಗೊಂಡಿದ್ದು ಅನಂತರ ಕಾರ್ಲೈಲ್ ಸಾಹಿತ್ಯದತ್ತ ತಿರುಗಿದ. ಅನಾರೋಗ್ಯ, ವಿಷಣ್ಣತೆಗಳು ಈತನನ್ನು ಜೀವನದ ಉದ್ದಕ್ಕೂ ಕಾಡಿದವು. ಯಶಸ್ಸು ಕಾರ್ಲೈಲನಿಗೆ ತಡವಾಗಿ-1865 ರಿಂದಾಚೆ-ಬಂದಿತು. ಚೆಲ್ಸಿಯಲ್ಲಿ ವಾಸಿಸುತ್ತಿದ್ದ ಅವನನ್ನು ಜನರ 'ದ ಸೇಜ್ ಆಫ್ ಚೆಲ್ಸಿ' ಎಂದು ಕರೆದರು. ಆದರೂ ಕಡೆಯ ವರ್ಷಗಳನ್ನು ಈತ ಏಕಾಂತದಲ್ಲಿ ಕಳೆದ.

ಆರಂಭಿಕ ಬರವಣಿಗೆಸಂಪಾದಿಸಿ

1820-21ರ ಹೊತ್ತಿಗೆ ಕಾರ್ಲೈಲನ ಗಮನ ಜರ್ಮನ್ ಸಾಹಿತ್ಯದತ್ತ ಹೊರಳಿತು.ಗಯಟೆಯ ಫೌಸ್ಟ್ ಮೇಲಿನ ಪ್ರಬಂಧ ಮತ್ತು ಷಿಲರ್‍ನ ಜೀವನಚರಿತ್ರೆ ಇವು ಕಾರ್ಲೈಲನ ಪ್ರಾರಂಭದ ಕೃತಿಗಳು. ಗಯಟೆಯಲ್ಲಿ ಇವನಿಗೆ ಅಸಾಧಾರಣ ಮೆಚ್ಚಿಕೆಯಿತ್ತು. ಜರ್ಮನ್ ಸಸ್ಯಶಾಸ್ತ್ರದ ಅಭ್ಯಾಸದಿಂದ ಭಾರತೀಯ ಚಿಂತನೆಯ ಪರಿಚಯವೂ ಆಯಿತು. ಕಾರ್ಲೈಲನದು ಅಸಾಧಾರಣ ವ್ಯಕ್ತಿತ್ವ. ಸ್ವಭಾವತಃ ಯೋಚನಾಪರನೂ ನೈತಿಕ ಶ್ರದ್ಧೆಯುಳ್ಳವನೂ ಆದ ಈತ ಜೀವನದಲ್ಲಿ ಹಲವು ಕಷ್ಟಗಳನ್ನೂ ಸೋಲನ್ನೂ ಕಂಡ. ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಎದುರಾದ ಶೂನ್ಯವನ್ನೂ ದಿಗ್ಭ್ರಮೆಯನ್ನೂ ಎದುರಿಸಿದ. ತನ್ನದೇ ಆದ ದರ್ಶನವನ್ನು ಸಾಧಿಸಿದ. ಗಡಸೂ ಶಕ್ತಿಯುತವೂ ಆದ ಈತನ ವ್ಯಕ್ತಿತ್ವ ಈತನ ಬರೆವಣಿಗೆಯಲ್ಲೆಲ್ಲ ಅಭಿವ್ಯಕ್ತವಾಗಿದೆ.

ಸಾಹಿತ್ಯ ವೈವಿಧ್ಯತೆಸಂಪಾದಿಸಿ

ಕಾರ್ಲೈಲನ ಸಾಹಿತ್ಯ ವೈವಿಧ್ಯಪೂರ್ಣವಾದುದು. ಸಾಹಿತ್ಯ ವಿಮರ್ಶೆಯಿಂದ ಈತನ ಗಣನೀಯ ಸಾಹಿತ್ಯಸೃಷ್ಟಿ ಪ್ರಾರಂಭವಾಯಿತು. ಈತನಿಗೆ ಉತ್ತಮ ವಿಮರ್ಶಕನ ಸೂಕ್ಷ್ಮಪರಿಜ್ಞಾನ ಉಂಟು. ಸ್ಕಾಟ್‍ಲೆಂಡಿನ ಬರೆಹಗಾರರಾದ ಬನ್ರ್ಸ್ ಮತ್ತು ಸರ್ ವಾಲ್ಟರ್ ಸ್ಕಾಟರನ್ನು ಕುರಿತ ಈತನ ವಿಮರ್ಶೆ ಹೊಸಬೆಳಕು ಚೆಲ್ಲುವಂಥದು. ಪಾಸ್ಟ್ ಅಂಡ್ ಪ್ರೆಸೆಂಟ್ (1843) ಎಂಬ ಕೃತಿಯಲ್ಲಿ ಈತನ ಮಧ್ಯಯುಗದ ದೃಷ್ಟಿ ಎದ್ದುಕಾಣುತ್ತದೆ. ಆದರೆ ವಿಕ್ಟೋರಿಯ ಯುಗದ ಈತನ ಟೀಕೆ ರಸ್ಕಿನ್ ಮುಂತಾದ ಹಲವರ ಮೇಲೆ ಪ್ರಭಾವವನ್ನು ಬೀರಿತು. ಸಾರ್ಟರ್ ರಿಸಾರ್ಟಸ್ ಎಂಬ ಈತನ ಕೃತಿಯನ್ನು ಯಾವ ಗುಂಪಿಗೆ ಸೇರಿಸುವುದೂ ಕಷ್ಟ. ಫ್ರೆಂಚ್ ರೆವಲ್ಯೂಷನ್ (1837), ಫ್ರೆಡರಿಕ್ ದಿ ಗ್ರೇಟ್, ಹೀರೋಸ್ ಅಂಡ್ ಹೀರೊ ವರ್ಷಿಪ್ (1841)-ಇವು ಕಾರ್ಲೈಲನ ಇತರ ಗಣ್ಯಕೃತಿಗಳು. ಬರಿಯ ದೈಹಿಕಶಕ್ತಿಯನ್ನು ಆಧರಿಸಿದ ಹಿರಿಮೆಗೂ ಆಧ್ಯಾತ್ಮಿಕ ಮತ್ತು ಕಲಾಶಕ್ತಿಯನ್ನು ಆಧರಿಸಿದ ಹಿರಿಮೆಗೂ ಭೇದವನ್ನು ಕಾರ್ಲೈಲ್ ಸ್ಪಷ್ಟವಾಗಿ ಗುರುತಿಸದಿರುವುದರಿಂದ, ಪ್ರಶಂಸೆಗೆ ಸಲ್ಲದ ವ್ಯಕ್ತಿಗಳು ಮತ್ತು ಕೃತಿಗಳು ಈತನ ಹೊಗಳಿಕೆಗೆ ಪಾತ್ರವಾಗಿವೆ. ಈ ಪ್ರವೃತ್ತಿ ಇರುವುದರಿಂದಲೇ ಕ್ರಾಮ್‍ವೆಲ್ ಮತ್ತು ಫ್ರೆಡರಿಕರನ್ನು ಕಾರ್ಲೈಲ್ ಆದರ್ಶ ವ್ಯಕ್ತಿಗಳೆನ್ನುತ್ತಾನೆ. ಫ್ರೆಂಚ್ ರೆವಲ್ಯೂಷನ್ ಎಂಬ ಉದ್ಗ್ರಂಥದಲ್ಲಿ ಕ್ರಾಂತಿಯ ವಾಸ್ತವಿಕ ಅಂಶಗಳಿಗಿಂತ ಅದರ ಐತಿಹ್ಯಕ್ಕೆ ಹೆಚ್ಚು ಪ್ರಾಧಾನ್ಯ ಬಂದಿದೆ. ಆದರೂ ಕ್ರಾಂತಿಯ ಅನೇಕ ಮುಖ್ಯ ಘಟನಾವಳಿಗಳ ಹೃದಯಸ್ಪರ್ಶಿ ಚಿತ್ರಗಳು, ಅಧಿಕಾರಿಗಳ ದಬ್ಬಾಳಿಕೆ, ಅದನ್ನೆದುರಿಸಿದ ಜನನಾಯಕರ ಧೈರ್ಯ ಸಾಹಸಗಳು_ಇವುಗಳ ವರ್ಣನೆಗಳು ಮೈನವಿರೇಳುವಂತೆ ಚಿತ್ರಿತವಾಗಿವೆ. ಇಡೀ ಕೃತಿಯಲ್ಲಿ ಜ್ವಾಲಾಮುಖಿಯ ಶಕ್ತಿಯುಂಟು. ತನ್ನ ಹೃದಯದಿಂದ ಜ್ವಾಲೆಯಂತಹ ಈ ಕೃತಿ ಹೊಮ್ಮಿತೆಂದು ಕಾರ್ಲೈಲ್ ತನ್ನ ಹೆಂಡತಿಗೆ ಹೇಳಿದನಂತೆ. ಆಲಿವರ್ ಕ್ರಾಮ್‍ವೆಲ್‍ನ ಪತ್ರಗಳು ಮತ್ತು ಭಾಷಣಗಳು (1845) ಎಂಬುದು ಕಾರ್ಲೈಲ್‍ನ ಬಹು ಯಶಸ್ವಿಯಾದ ಚಾರಿತ್ರಿಕ ಕೃತಿ. ಇಲ್ಲಿ ಬರುವ ಕ್ರಾಮ್‍ವೆಲ್ಲನ ಚಿತ್ರ ಅಸಾಧಾರಣವಾದುದು, ಜೀವಂತವಾದುದು. ಎಡಿನ್‍ಬರೊ ಭಾಷಣ (1866) ಎಂಬ ಕೃತಿ ಇಂದಿಗೂ ಸ್ಛೂರ್ತಿದಾಯಕವಾಗಿದೆ.

ಕಾರ್ಲೈಲ್ ಯಾವ ರಾಜಕೀಯ ಪಂಗಡಕ್ಕೂ ಸೇರಿದವನಲ್ಲ. ಜರ್ಮನ್ ಸಾಹಿತ್ಯವನ್ನು ಒಲಿದಿದ್ದ ಗಯಟೆಯನ್ನು ತನ್ನ ಗುರುವೆಂದು ಭಾವಿಸಿದ್ದರೂ ಕಾರ್ಲೈಲನದು ಸ್ವತಂತ್ರ ವಿಚಾರವೃತ್ತಿ, ಸ್ವತಂತ್ರ ವ್ಯಕ್ತಿತ್ತ್ವ. ಮನಶ್ಶಾಂತಿಯ ಅನ್ವೇಷಣೆಯಲ್ಲಿ ತೊಳಲಿ ಕೊನೆಗೆ ಫಲದ ನಿರೀಕ್ಷಣೆ ಇಲ್ಲದ ಕರ್ಮವೇ ಶಾಂತಿಯ ಸಾಧನ ಎಂದು ಕಂಡು ಕೊಂಡವನೀತ. ಗೀತೆ ಬೋಧಿಸಿದ ಪಾಠವೇ_ಫಲವನ್ನು ಬೇಡದ ಶ್ರದ್ದಾವಂತ ಕಾಯಕವೇ_ಇವನ ಜೀವನ ಮಂತ್ರ. ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿ, ಬ್ರಿಟಿಷ್ ಸಾಮ್ರಾಜ್ಯದ ಅಭಿವೃದ್ಧಿಗಳಿಗೆ ಹೆಸರಾದ ಯುಗದಲ್ಲಿ ಕಾರ್ಲೈಲ್ ಬೌದ್ಧಿಕ ಶಕ್ತಿಯನ್ನು ಅಲ್ಲಗಳೆದ; ಕ್ರಿಯಾಶೀಲತೆ, ತ್ಯಾಗ, ಕಾಯಕಗಳನ್ನು ಬೋಧಿಸಿದ; ಅವತಾರ ಪುರುಷರಲ್ಲಿ ತನಗಿದ್ದ ನಂಬಿಕೆಯನ್ನು ಸಮರ್ಥಿಸಿದ. ವಿಜ್ಞಾನ ಮತ್ತು ಪ್ರಜಾಪ್ರಭುತ್ವಗಳ ಹುಲುವಿಗ್ರಹಗಳನ್ನು ಜರೆದ. ಸಾಹಿತಿಯಾಗಿ ಕಾರ್ಲೈಲ್ ಅಸಾಧಾರಣ ವೈಯಕ್ತಿಕ ಶೈಲಿಯನ್ನು ಸಾಧಿಸಿದ. ಈತನ ಭಾಷೆ ಲಲಿತವಾಗಿ ಹರಿಯದು. ತಡೆದು ತಡೆದು ಅದು ಸಾಗುತ್ತದೆ. ಅದರದು ಆವೇಶಪೂರ್ಣ, ಕ್ಲಿಷ್ಟ. ಆರ್ನಲ್ಡನಂಥ ಪ್ರಾಚೀನಮನೋಧರ್ಮದ ವಿಮರ್ಶಕನಿಗೆ ಒಪ್ಪಿಗೆಯಾಗದ ಶೈಲಿಯಾಗಿದ್ದರೂ ಸತ್ತ್ವಪೂರ್ಣ, ಪುಳುಕಿತಗೂಳಿಸಬಲ್ಲದ್ದು, ಸ್ಛೂರ್ತಿನೀಡಬಲ್ಲದ್ದು. ಈತನ ಶೈಲಿ ಸ್ಕಾಟ್ ಜನರಿಗೆ ಸಹಜವಾದ ದೃಢತನದ ಪ್ರತೀಕವಷ್ಟೆ. ಈತ ಏನನ್ನು ವರ್ಣಿಸಿದರೂ ಅದು ಕಣ್ಣ ಮುಂದೆ ನಡೆದಷ್ಟು ಸುಸ್ಪಷ್ಟವಾಗಿರುತ್ತದೆ, ರೋಮಾಂಚಕಾರಿಯಾಗುತ್ತದೆ. ಅತಿ ಶ್ರದ್ಧಾವಂತವೂ ಸೂಕ್ಷ್ಮವೂ ಆಗಿದ್ದು ಪ್ರಪಂಚವನ್ನೇ ಮಾರ್ಪಡಿಸಿ ಉದ್ಧರಿಸಲು ಹಂಬಲಿಸುವ ಮಹಾಪ್ರವಾದಿಯ ಚೇತನ_ಕಾರ್ಲೈಲನದು.

ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ 'ಹೀರೊ ಅಂಡ್ ಹೀರೊವರ್ಷಿಸ್' ಕೃತಿಯಲ್ಲಿ ಕಾರ್ಟೈಲ್, ಇತಿಹಾಸವು ವೀರರ ಕಥೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಾನೆ. (ಇಲ್ಲಿ ವೀರರೆಂದರೆ ದೈಹಿಕ ಶಕ್ತಿ ಅಥವಾ ಕೆಚ್ಚನ್ನು ಮೆರೆಯುವವರಲ್ಲಿ ಇವರು ವಿಭೂತಿಪುರುಷರು. ಜನ್ಮಸಹಜವಾದ ಅಸಾಧಾರಣ ಶಕ್ತಿಯಿಂದ ಸಮುದಾಯದ ಬದುಕನ್ನು ರೂಪಿಸಬಲ್ಲವನು ವೀರ.) ವೀರನು ರಾಜನಾಗಬಹುದು, ಧರ್ಮಾಧಿಕಾರಿಯಾಗಿರಬಹುದು, ಪ್ರವಾದಿಯಾಗಿರಬಹುದು, ಕವಿಯಾಗಿರಬಹುದು ಕಾರ್ಲೈಲನಿಗೆ ಪ್ರಜಾಪ್ರಭುತ್ವದಲ್ಲಿ ಮತ್ತು ಸರ್ವಸಮಾನತೆಯಲ್ಲಿ ನಂಬಿಕೆ ಇಲ್ಲ.

ಪ್ರಮುಖ ಕೃತಿಗಳುಸಂಪಾದಿಸಿ

 
Watercolor sketch of Thomas Carlyle, age 46, by Samuel Laurence

ಕಾರ್ಲೈಲನ ಪ್ರಮುಖ ಕೃತಿ ಸಾರ್ಟರ್ ರಿಸಾರ್ಟಸ್ ಮೊದಲಿಗೆ ಫ್ರೇಝರ್ಸ್ ಮ್ಯಾಗಜೀನ್ ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು[೨] . ಜರ್ಮನ್ ತತ್ತ್ವಶಾಸ್ತ್ರದ, ಅದರಲ್ಲೂ ಮುಖ್ಯವಾಗಿ ಜೀನ ಪಾಲ್ ರಿಕ್ಟರನ, ಪ್ರಭಾವ ಇದರಲ್ಲಿ ಸ್ಪಷ್ಟ.`ದರ್ಜಿಗೆ ತೇಪೆ' ಎಂದು ಪುಸ್ತಕದ ಹೆಸರಿನ ಅರ್ಥ. ಇದರಲ್ಲಿ ಎರಡು ಭಾಗಗಳುಂಟು. ಕಾಲ್ಪನಿಕ ವ್ಯಕ್ತಿಯಾದ ಪ್ರೂಫೆಸರ್ ಟ್ರೂಫೆಲ್ಸ್‍ಡ್ರಾಕ್‍ನ ಅಭಿಪ್ರಾಯಗಳನ್ನು ಆಧರಿಸಿದ ಬಟ್ಟೆಗಳ ವೇದಾಂತ ಒಂದು. ಮಾನವ ಸಮಾಜದ ಎಲ್ಲ ಸಂಕೇತಗಳೂ ಸಂಸ್ಥೆಗಳೂ ಮನುಷ್ಯನ ಉಡುಪಿನಂತೆ ಮತ್ತೆ ಮಾರ್ಪಾಡಿಗೆ ಒಳಪಡುತ್ತವೆ ಎನ್ನುವ ಸಿದ್ಧಾಂತವನ್ನು ಮುಟ್ಟುತ್ತಾನೆ, ಕಾರ್ಲೈಲ್. ಎರಡನೆ ಭಾಗ ಟ್ರೂಫೆಲ್‍ಡ್ರಾಕನ ಜೀವನಚರಿತ್ರೆ. ಇದು ಬಹುಮಟ್ಟಿಗೆ ಕಾರ್ಲೈಲ್‍ನ ಆತ್ಮವೃತ್ತ. ಟ್ರೂಫೆಲ್‍ಡ್ರಾಕನಿಗೆ ವಿವೇಕೂೀದಯವಾದ ಅನುಭವ ತನಗೆ 1821ರ ಜೂನ್ ತಿಂಗಳಿನ ಒಂದು ಮಧ್ಯಾಹ್ನ ಆಯಿತೆಂದು ಕಾರ್ಲೈಲ್ ಹೇಳಿದ್ದಾನೆ. ದಿ ಎವರ್ ಲಾಸ್ಟಿಂಗ್ ನೊ, ದಿ ಸೆಂಟರ್ ಅಫ್ ಇನ್‍ಡಿಫರೆನ್ಸ್ ಎಂಬ ಅಧ್ಯಾಯಗಳಲ್ಲಿ ಕಾರ್ಲೈಲ್ ತನ್ನ ಆಧ್ಯಾತ್ಮಿಕ ಆಂದೋಳನ, ದಿಗ್ಬ್ರಮೆ ಮತ್ತು ನಿರಾಸೆಗಳನ್ನು ಚಿತ್ರಿಸುತ್ತಾನೆ. ದಿ ಎವರ್ ಲಾಸ್ಟಿಂಗ್ ನೋ ನಲ್ಲಿ ಮನುಷ್ಯನ ಅಶಾಂತಿಗೆ ಮೂಲ ಅವನ ಫಲದ ಬಯಕೆಯೆಂಬುದನ್ನೂ ಯಾವ ನೀರಿಕ್ಷೆಯೂ ಇಲ್ಲದ ನಿಷ್ಕಾಮಕರ್ಮದಿಂದ ಮನುಷ್ಯ ಪ್ರಪಂಚವನ್ನೇ ಗೆಲ್ಲಬಹುದೆಂಬುದನ್ನೂ ವಿವರಿಸಿದ್ದಾನೆ. 'ಏನನ್ನೂ ನಿರೀಕ್ಷಿಸಬೇಡ, ಆಗ ಜಗತ್ತೇ ನಿನ್ನ ಪಾದದಡಿಯಲ್ಲಿ ಇರುತ್ತದೆ.' ಎನ್ನುವುದು ನಾಯಕನಾದ ಪ್ರೊಫೆಸರ್ ಕಂಡುಕೊಳ್ಳುವ ಸತ್ಯ. ಈ ಕೃತಿಯಲ್ಲಿ ವಾಲ್ಟೇರ್ ಮತ್ತು ಗಿಬನ್ನರಂಥ ಸಂಶಯವಾದಿಗಳ (ಸ್ಕೆಪ್ಟಿಕ್ಸ್) ಪ್ರಭಾವ ಕಾಣುತ್ತದೆ. ಭಾರತೀಯ ದರ್ಶನವೂ ಜರ್ಮನಿಯ ಮೂಲಕ ವರ್ಡ್ವವರ್ತ್, ಷೆಲ್ಲಿ, ಕಾರ್ಲೈಲ್ ಮೊದಲಾದ ಇಂಗ್ಲಿಷ್ ಸಾಹಿತಿಗಳಿಗೆ ಪರಿಚಯವಾಗಿತ್ತು. ಕಾರ್ಲೈಲನ ದರ್ಶನ ಭಗವದ್‍ಗೀತೆಯ ಉಪದೇಶಕ್ಕೆ ಎಷ್ಟು ಸಮೀಪ ಎನ್ನುವುದು ಆಶ್ಚರ್ಯಕರ. ಸಾರ್ಟರ್ ಓದಲು ಕ್ಲಿಷ್ಟವಾದ ಕೃತಿ. ಕಾರ್ಲೈಲ್ ಆರಿಸಿದ ಜರ್ಮನ್ ಪ್ರೊಫೆಸರನ ಕೃತಿ ಮತ್ತು ಬಾಳಿನ ಹಂದರ ಗ್ರಂಥದ ಕ್ಲಿಷ್ಟತೆಯನ್ನು ಇನ್ನೂ ಹೆಚ್ಚಿಸಿವೆ. ಶೈಲಿಯ ವೈಚಿತ್ರ್ಯವೂ ಒಂದು ಅಡ್ಡಿ ಎನ್ನಿಸಬಹುದು. ಆದರೆ ಸಾರ್ಟರ್ ಕ್ರಿಯಾತ್ಮಕ ಕಲ್ಟನೆಯ ಅದ್ಭುತ ಸೃಷ್ಟಿ. ಇದರ ಆಧ್ಯಾತ್ಮಿಕ ಮತ್ತು ಆಂತರಿಕ ಪ್ರಾಮಾಣಿಕತೆ, ವಿಶಿಷ್ಟವಾದ ಹಾಸ್ಯ, ಕಲ್ವನಾತ್ಮಕ ಕಲ್ಪನೆಯ ದರ್ಶನ ಓದುಗರ ಶ್ರಮವನ್ನು ಸಾರ್ಥಕಗೂಳಿಸುತ್ತವೆ.

ಉಲ್ಲೇಖಗಳುಸಂಪಾದಿಸಿ

  1. "Thomas Carlyle" (bio), Dumfries-and-Galloway, 2008, webpage: dumfries-and-galloway.co.uk-carlyle.
  2. ೨.೦ ೨.೧ "Thomas Carlyle" (bio), Dumfries-and-Galloway, 2008, webpage: dumfries-and-galloway.co.uk-carlyle.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: