ತೋನ್ಸೆ ಮಾಧವ ಅನಂತ ಪೈ
ಟಿ.ಎಮ್.ಎ.ಪೈ, ತೋನ್ಸೆ ಮಾಧವ ಅನಂತ (1898-1970) . ವೈದ್ಯ, ಶಿಕ್ಷಣ ಹಾಗೂ ಆರ್ಥಿಕ ತಜ್ಞ, ಸಮಾಜ ಸುಧಾರಕ. ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ಉದ್ದಿಮೆಯನ್ನು ಸಣ್ಣದಾಗಿ ಆರಂಭಿಸಿ ಮಹತ್ತಾಗಿ ಬೆಳೆಸಿದ ಧೀರ.
ತೊನ್ಸೆ ಮಾಧವ ಅನಂತ ಪೈ | |
---|---|
ಜನನ | |
ಮರಣ | ಮೇ, ೨೯, ೧೯೭೯ |
ಶಿಕ್ಷಣ ಸಂಸ್ಥೆ | ಮಣಿಪಾಲ್ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ |
ಮಕ್ಕಳು | ರಾಮ್ದಾಸ್ ಪೈ |
ಸಂಬಂಧಿಕರು | ರಮೇಶ್ ಪೈ |
ಪ್ರಶಸ್ತಿಗಳು | ಪದ್ಮ ಶ್ರೀ (೧೯೭೨) |
ಹುಟ್ಟು ಮತ್ತು ಜೀವನ
ಬದಲಾಯಿಸಿಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ತೋನ್ಸೆ ಗ್ರಾಮದ ಕಲ್ಯಾಣಪುರದಲ್ಲಿ 1898 ಏಪ್ರಿಲ್ 30ರಂದು. ತಂದೆ ಅನಂತ ಪೈ. ತಾಯಿ ಯಶೋದಾ. ಈತ ಅವರ ಮೂರನೆಯ ಮಗ. ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಕಲ್ಯಾಣಪುರ, ಉಡುಪಿಗಳಲ್ಲಿ ನಡೆಯಿತು. 9ನೆಯ ವರ್ಷದಲ್ಲೇ ತಂದೆ ತೀರಿಕೊಂಡರು (1907). ಉಚ್ಚ ಶಿಕ್ಷಣ ಪಡೆಯಲು ತಾಯಿಯ ಹಿತವಾಕ್ಯ ಮತ್ತು ಶಿಷ್ಯವೇತನ ಪ್ರೇರಕವಾದುವು. ಮುಂದೆ ಸೇಂಟ್ ಅಲೋಸಿಯಸ್ ಕಾಲೇಜು ಸೇರಿದ್ದು 1916ರಲ್ಲಿ. ದೂರದೇಶದಿಂದ ಬಂದು ಕೆಲಸ ಮಾಡುತ್ತಿದ್ದ ಜೆಸ್ಯುಯಿಟ್ ಪಾದ್ರಿಗಳ ಕಾರ್ಯಶ್ರದ್ಧೆಗೆ ಮಾರುಹೋದ ಇವರು ತಮ್ಮ ಹುಟ್ಟೂರಿನ ಶಾಲೆಗೆ ಮುಚ್ಚುವ ಸ್ಥಿತಿ ಬಂದಾಗ ಓದು ನಿಲ್ಲಿಸಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು (1919-20) ಊರಲ್ಲಷ್ಟೇ ಅಲ್ಲದೆ ದೂರದ ಮುಂಬಯಿಗೂ ನಡೆದು ವಂತಿಗೆಗಾಗಿ ಶ್ರಮಿಸಿದರು. ಮುಂದೆ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಓದಿ (1920-1925) ಉಡುಪಿಯಲ್ಲಿ ಚಿಕಿತ್ಸಾಲಯ ತೆರೆದರು. ಮದುವೆಯಾದ್ದು 1921ರಲ್ಲಿ. ಹೆಂಡತಿ ಶ್ರೀಮತಿ ಶಾರದಾ.
ಬ್ಯಾಂಕ್
ಬದಲಾಯಿಸಿಅಣ್ಣ ಉಪೇಂದ್ರ ಪೈ ಅವರೊಡನೆ ಕೂಡಿ ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟನ್ನು (ಈಗ ಸಿಂಡಿಕೇಟ್ ಬ್ಯಾಂಕ್) ಸ್ಥಾಪಿಸಿದರು. (20, ಅಕ್ಟೋಬರ್ 1925). ಯಾವ ಮನುಷ್ಯನೂ ಬ್ಯಾಂಕಿಂಗ್ ವ್ಯವಹಾರಕ್ಕೆ ಹೊರತಲ್ಲ ಎಂದು ನಿರ್ಧರಿಸಿ ದಿನಕ್ಕೆ ಕನಿಷ್ಠ ಎರಡಾಣೆ ಉಳಿತಾಯ ಮಾಡುವ ಬಡವರಿಗೂ ಉಪಯೋಗವಾಗುವಂಥ ಪಿಗ್ಮಿ ಯೋಜನೆಯನ್ನು ಪ್ರಾರಂಭಿಸಿದರು (8, ಅಕ್ಟೋಬರ್ 1928). ಆ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ (1962ರ ತನಕ) ಹಾಗೂ ಚೇರ್‍ಮೆನ್ (1967ರ ತನಕ) ಆಗಿ ದುಡಿದರು. ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬ್ಯಾಂಕಿಂಗ್ ಸೌಕರ್ಯವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದರು. ಹಾಗೆಯೇ ಸ್ಥಳೀಯ ಕಂಪನಿಯಿಂದ ಅಗ್ಗದ ದರದಲ್ಲಿ ಜೀವವಿಮೆ ಹಾಗೂ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಒದಗುವುದನ್ನು ಮನಗಂಡು ಕೆನರಾ ಮ್ಯೂಚುಅಲ್ ಅಶ್ಯೂರೆನ್ಸ್ ಕಂಪನಿಯನ್ನು ಸ್ಥಾಪಿಸಿದರು (1935). ಮಣಿಪಾಲ ಗುಡ್ಡದಲ್ಲಿ ಭೂಮಿ ಹರಾಜಾದಾಗ (1933) ಅಲ್ಲಿ ಭೂ ಅಭಿವೃದ್ಧಿಗಾಗಿ ಕೆನರಾ ಲ್ಯಾಂಡ್ ಇನ್ವೆಸ್ಟ್‍ಮೆಂಟ್ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿ ಹೆಂಚು ತಯಾರಿಕೆ, ಮರದ ಮಿಲ್ಲು, ಕೈಮಗ್ಗ ಮುಂತಾದ ಗ್ರಾಮೋದ್ಯೋಗ ಚಟುವಟಿಕೆಗಳನ್ನು ಆರಂಭಿಸಿದುದಲ್ಲದೆ ಕಟ್ಟಡದ ಒಂದು ಕೋಣೆಯಲ್ಲಿ ಪ್ರಾಥಮಿಕ ಶಾಲೆಯನ್ನು (1936) ಆರಂಭಿಸಿದರು.
ಸಹಕಾರಿ ಮತ್ತು ಶಿಕ್ಷಣಕ್ಕೆ ಕೋಡುಗೆ
ಬದಲಾಯಿಸಿಅನುಶಂಗಿಕವಾಗಿ ಪುಸ್ತಕಕ್ಕೆರಟ್ಟು ಕಟ್ಟುವ ಕೆಲಸ, ದಾದಿಯರಿಗೆ ತರಬೇತಿ, ಬ್ಯಾಂಕ್ ಮತ್ತು ಜೀವವಿಮಾ ನೌಕರರಿಗೆ ತರಬೇತಿ, ಮುದ್ರಣ ತರಬೇತಿಗಳಂಥ ಕೆಲಸಗಳನ್ನು ಸಂಘಟಿಸಿದರು. ಉತ್ತಮ ಶಿಕ್ಷಣ ಸೌಲಭ್ಯದ ಅಗತ್ಯವನ್ನು ಮನಗಂಡು ತಮ್ಮ ಜನರ ವಿದ್ಯಾಭಿವೃದ್ಧಿಗಾಗಿ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಸಂಸ್ಥೆಯನ್ನು ಸ್ಥಾಪಿಸಿದರು (1942). ತಮ್ಮ ದೇಣಿಗೆಯೇ ಅದರ ಆರಂಭ ನಿಧಿಯಾಯಿತು. ವೃತ್ತಿಪರ ಪಾಠ ಕ್ರಮಗಳನ್ನು ಸಂಸ್ಥೆ ನೀಡತೊಡಗಿತು. ಮಣಿಪಾಲದ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲುಗಳು ಅಸ್ತಿತ್ವಕ್ಕೆ ಬಂದುವು.
ಉಡುಪಿಗೊಂದು ಕಾಲೇಜು ಬೇಕೆಂದು ನಿರ್ಣಯಿಸಿ (1947) ದೇಣಿಗೆ ಎತ್ತಿ ಯಶಸ್ವಿಯಾದಾಗ ದೇಣಿಗೆಯನ್ನು ಹಿಂತಿರುಗಿಸಿದರು. ಮತ್ತೆ ಟೊಂಕ ಕಟ್ಟಿ ನಿಧಿ ಸಂಗ್ರಹಿಸಿ ಅದು ಸಾಕಾಗದಾಗ ವಿಶ್ವವಿದ್ಯಾಲಯದ ಷರತ್ತುಗಳನ್ನು ಪೂರೈಸಲು ಸ್ವತಃ 50,000ರೂಪಾಯಿ ದೇಣಿಗೆ ಕೊಟ್ಟರಷ್ಟೇ ಅಲ್ಲ, ತಮ್ಮ ಆಸ್ತಿಯನ್ನು ಅಡವಿಟ್ಟು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಸ್ಥಾಪನೆಗೆ (1949) ಕಾರಣರಾದರು. ಅನಂತರ ಮಣಿಪಾಲದಲ್ಲಿ ಖಾಸಗಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವ ಯೋಜನೆ ಹಾಕಿದರು (1951). ವೈಯಕ್ತಿಕ ದೇಣಿಗೆ ಮಾತ್ರವಲ್ಲದೆ ಮನೆಯೊಂದನ್ನು ಬಿಟ್ಟು ಉಳಿದ ತಮ್ಮೆಲ್ಲ ಭೂಮಿಯನ್ನೂ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಟ್ಟರು. ಅದರ ಫಲವೇ ಕಸ್ತೂರ್ ಬಾ ಮೆಡಿಕಲ್ ಕಾಲೇಜು (1953). ವಿದ್ಯಾರ್ಥಿಗಳ ಸಂಪೂರ್ಣ ತರಬೇತಿಗೆ ಸಕಲ ಸೌಲಭ್ಯವುಳ್ಳ ಆಸ್ಪತ್ರೆಯೊಂದು ಮಣಿಪಾಲದಲ್ಲಿ ತಲೆ ಎತ್ತಿತು (1954). ದಕ್ಷಿಣ ಕನ್ನಡ ಜಿಲ್ಲೆಯ ಮೆಡಿಕಲ್ ರಿಲೀಫ್ ಟ್ರಸ್ಟಿನ ಸಹಾಯದಿಂದ ಪ್ರಸೂತಿ ಮತ್ತು ಶಿಶು ಸಂರಕ್ಷಣೆಯ ಗ್ರಾಮೀಣ ಕೇಂದ್ರಗಳನ್ನು ಆರಂಭಿಸಲಾಯಿತು.
ಸರಕಾರದ ಅನುದಾನ ಪಡೆಯದೆ ಎಂಜಿನಿಯರಿಂಗ್ ಕಾಲೇಜನ್ನು ಪೈ ಅವರು ತೆರೆದರು (1957). ಅದೇ ವರ್ಷ ಉಡುಪಿ ಲಾ ಕಾಲೇಜು ಪ್ರಾರಂಭವಾಯಿತು. ದೂರದ ನಗರಗಳಿಗೆ ಕಾಲೇಜು ಶಿಕ್ಷಣಕ್ಕಾಗಿ ಮಕ್ಕಳು ಹೋಗಿ ಬವಣೆ ಪಡಬಾರದೆಂದು ಯೋಚಿಸಿ ಕಾರ್ಕಳ, ಮುಲ್ಕಿ, ಕುಂದಾಪುರ, ಮೂಡಬಿದ್ರೆ, ಶೃಂಗೇರಿಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿದರು. ಮುಂದೆ ಮಣಿಪಾಲ್ ಕಾಲೇಜ್ ಆಫ್ ಎಜ್ಯುಕೇಷನ್ ಕಾಲೇಜ್ ಆಫ್ ಡೆಂಟಲ್ ಸರ್ಜರಿ ಹಾಗೂ ಕಾಲೇಜ್ ಆಫ್ ಫಾರ್ಮಸಿಗಳು ಸ್ಥಾಪನೆಯಾದುವು. ಅಕಾಡೆಮಿಯ ಮೂಲಕ ಇವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಮೂವತ್ತಮೂರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಉದ್ದಿಮೆಗಳ ಬೆಳವಣಿಗೆಗಾಗಿ ಹಾಗೂ ಅವುಗಳಲ್ಲಿ ಬಂಡವಾಳ ಹೂಡುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಪೈ ಅವರು ಮಣಿಪಾಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಪ್ರಾರಂಭಿಸಿದರು (1963).
ಸ್ವಯಂಸೇವೆಯಲ್ಲಿ ಆಸಕ್ತಿ ಹೊಂದಿದ್ದ ಪೈ ಅವರು ಉಡುಪಿ ರೋಟರಿ ಕ್ಲಬ್ಬಿನ ಸ್ಥಾಪನೆಗೆ ಕಾರಣರಾಗಿ (1957) ಅದರ ಸ್ಥಾಪಕ ಅಧ್ಯಕ್ಷರೂ ಮುಂದೆ ಅದರ ಡಿಸ್ಟ್ರಿಕ್ಟ್ ಗವರ್ನರರೂ ಆಗಿ (1964-65) ಸೇವೆ ಸಲ್ಲಿಸಿದರು. ಮಣಿಪಾಲದಲ್ಲಿ ನಡೆದ 42 ನೆಯ ಕನ್ನಡ ಸಾಹಿತ್ಯ ಸಮ್ಮೇಳನ (1960) ಅಕಾಡೆಮಿಯಿಂದ ಪ್ರಕಟಗೊಂಡ ವಿವಿಧ ಸಾಹಿತ್ಯ ಕೃತಿಗಳು, ಮಣಿಪಾಲದ ಗೀತಾ ಮಂದಿರ ಮತ್ತು ವೇಣುಗೋಪಾಲಸ್ವಾಮಿ ದೇವಾಲಯಗಳು ಪೈ ಅವರ ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿಯ ಒಲವನ್ನು ತೋರಿಸುತ್ತವೆ.
ಪ್ರಶಸ್ತಿ
ಬದಲಾಯಿಸಿ'ಅಮೆರಿಕದ ಮಿಯಾಮಿ ಬೀಚ್ ನಗರದ ಕೀಲಿಕೈ ಅರ್ಪಣೆ (1959);
- ಕರ್ನಾಟಕ ಸರ್ಕಾರ ಎರಡು ಬಾರಿ ನೀಡಿದ ಸಾರ್ವಜನಿಕ ಸೇವಾ ಪ್ರಶಸ್ತಿ (1959 ; 1962);
- ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ಮೈಸೂರು ಶಾಖೆಯ ಅಧ್ಯಕ್ಷ ಪದವಿ;
- ಭಾರತ ಸರಕಾರ ನೀಡಿದ ಪದ್ಮಶ್ರೀ ಪ್ರಶಸ್ತಿ (1965);
- ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಪದವಿ (1974).