ತೊಡಿಕಾನ

ಭಾರತ ದೇಶದ ಗ್ರಾಮಗಳು

ತೊಡಿಕಾನ ಕ್ಷೇತ್ರವು ಮಡಿಕೇರಿಯಿಂದ ಸುಳ್ಯದತ್ತ ಹೊರಟರೆ ಸಂಪಾಜೆ ಬಳಿಕ ಸಿಗುವ ಅರಂತೋಡು ಎಂಬಲ್ಲಿಗೆ ಹೋದರೆ ಅಲ್ಲಿಂದ ಎಡಕ್ಕೆ ಸುಮಾರು ಆರು ಕಿ.ಮೀ. ದೂರದಲ್ಲಿ ಸಿಗುತ್ತದೆ. ಸುಂದರ ಮಲ್ಲಿಕಾರ್ಜುನ ದೇಗುಲ, ಮತ್ಸ್ಯ ತಟಾಕ, ದೇವರಗುಂಡಿ ಜಲಪಾತ ಇಲ್ಲಿನ ವೈಶಿಷ್ಟ್ಯವಾಗಿದೆ.

ತೋಡಿಕಾನ
town
Country India
StateKarnataka
DistrictDakshina Kannada
Languages
 • OfficialKannada
Time zoneUTC+5:30 (IST)
Nearest cityಮಡಿಕೇರಿ

ಸುತ್ತಲೂ ಹರಡಿ ನಿಂತಿರುವ ಬೆಟ್ಟಗುಡ್ಡಗಳು, ಅವುಗಳ ನಡುವಿನ ಕಾನನಗಳು. ಅಡಿಕೆ, ತೆಂಗು, ಬಾಳೆಯ ಕಂಪು. ಜುಳುಜುಳು ಸದ್ದು ಮಾಡುತ್ತಾ ಹರಿಯುವ ಪಯಸ್ವಿನಿ ನದಿ. ಇಂತಹ ನಿಸರ್ಗ ಸೌಂದರ್ಯವನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ತನ್ನತ್ತ ಬರುವ ಪ್ರವಾಸಿಗರಿಗೆ ಉಣಬಡಿಸಲೆಂದೇ ತೊಡಿಕಾನ ಕ್ಷೇತ್ರ ನೆಲೆನಿಂತಿದೆ.+ ತೋಡಿಕಾನವು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ಇಲ್ಲಿಯ ಜನಸಂಖ್ಯೆ ೨೦೧೦ರ ಜನಗಣತಿಯಂತೆ ೨೧೮೬.

ಈ ತಾಣವು ಬೆಟ್ಟಗುಡ್ಡಗಳ ಬುಡದಲ್ಲಿದ್ದು, ದಟ್ಟವಾದ ಕಾಡಿನಿಂದ ಕೂಡಿದ ಕಾರಣ ಇದನ್ನು "ತಡಿ" ಅಂದರೆ ತಪ್ಪಲು "ಕಾನ" ಅಂದರೆ ಕಾಡು. ಒಟ್ಟಾಗಿ ತಡಿಕಾನ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಬಾಯಿಯಿಂದ ಬಾಯಿಗೆ ಉಚ್ಛಾರಣೆ ಮಾಡುವಲ್ಲಿ ತೊಡಿಕಾನವಾಯಿತೆಂದು ಹೇಳಲಾಗುತ್ತಿದೆ. ತೊಡಿಕಾನದಲ್ಲಿ ಕಣ್ವ ಮುನಿಗಳು ತಪಸ್ಸು ಮಾಡಿದ್ದರೆಂದೂ, ಶಿವ ಮತ್ತು ಅರ್ಜುನನಿಗೆ ಯುದ್ಧ ನಡೆದ ಸ್ಥಳವೆಂದೂ ಆ ಕಾರಣಕ್ಕಾಗಿಯೇ ಇದು ಇಂದಿಗೂ ಪವಿತ್ರ ಕ್ಷೇತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಐತಿಹ್ಯಗಳು

ಬದಲಾಯಿಸಿ

ಸ್ಥಳದ ಮಹಿಮೆ ಸತ್ಯಪಾಲ

ಬದಲಾಯಿಸಿ

ಇಲ್ಲಿನ ಸ್ಥಳದ ಮಹಿಮೆಗೆ ಸಂಬಂಧಿಸಿದಂತೆ ಕೆಲವು ಪುರಾಣ ಕಥೆಗಳಿರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಒಮ್ಮೆ ವನವಾಸದಲ್ಲಿದ್ದ ಪಾಂಡವರು ಕಣ್ವ ಋಷಿಗಳಿದ್ದ ಸಹ್ಯಾದ್ರಿಯ ತಪ್ಪಲಿಗೆ ಬರುತ್ತಾರೆ. ಅಲ್ಲದೆ ಕಣ್ವ ಋಷಿಯ ಆಶ್ರಮದಲ್ಲಿ ಆಹಾರವಾಗಿದ್ದ ಜಂಬೂ ವೃಕ್ಷದಿಂದ ಫಲವನ್ನು ಕೊಯ್ಯುವುದರ ಮೂಲಕ ತೊಂದರೆಗೆ ಸಿಲುಕುತ್ತಾರೆ.

ಈ ಸಂದರ್ಭದಲ್ಲಿ ಕೃಷ್ಣನಿಗೆ ಮೊರೆಯಿಡುವುದರ ಮೂಲಕ ಆತನಿಂದ ಸಹಾಯ ಬೇಡುತ್ತಾರೆ. ಕೃಷ್ಣನು ಜಂಬೂಫಲವನ್ನು ಮರಳಿ ವೃಕ್ಷದಲ್ಲಿಡುವಂತೆ ಹೇಳುತ್ತಾನೆ. ಆದರೆ ಫಲವನ್ನು ವೃಕ್ಷದಲ್ಲಿಡುವುದಾದರೂ ಹೇಗೆ? ಇದಕ್ಕೆ ಉಪಾಯವೆಂಬಂತೆ ಎಲ್ಲರೂ ತಮ್ಮ ತಮ್ಮ ಮನದಲ್ಲಿರುವ ಬಯಕೆಯನ್ನು ಮುಚ್ಚುಮರೆಯಿಲ್ಲದೆ ಹೇಳಿದರೆ ಫಲವು ವೃಕ್ಷವನ್ನು ಸೇರಿಕೊಳ್ಳುವುದಾಗಿ ಕೃಷ್ಣನು ತಿಳಿಸುತ್ತಾನೆ. ಅದರಂತೆ ಪಾಂಡವರು ತಮ್ಮ, ತಮ್ಮ, ಬಯಕೆಗಳನ್ನು ಹೇಳುತ್ತಾರೆ. ಆಗ ಫಲವು ಮೇಲೇರತೊಡಗುತ್ತದೆ.

ಆದರೆ ದ್ರೌಪದಿಯ ಸರದಿ ಬಂದಾಗ ಅರ್ಧದಲ್ಲಿಯೇ ನಿಂತುಬಿಡುತ್ತದೆ. ತನ್ನ ಮನದಲ್ಲಿರುವ ಬಯಕೆಯನ್ನು ದ್ರೌಪದಿ ಮುಚ್ಚಿಟ್ಟಿದ್ದಾಳೆ ಎಂಬುವುದು ಪಾಂಡವರಿಗೆ ಸ್ಪಷ್ಟವಾಗಿ ನೈಜ ಬಯಕೆಯನ್ನು ಹೇಳುವಂತೆ ಹಠ ಮಾಡಿದಾಗ ದ್ರೌಪದಿಯು ತನಗೆ ಒದಗಿ ಬಂದ ಸಂಕಟವನ್ನು ಪರಿಹರಿಸಲು ಐದು ಜನ ಪತಿಗಳಿದ್ದರೂ ಸಾಧ್ಯವಾಗುತ್ತಿಲ್ಲ. ಇನ್ನೊಬ್ಬ ಪತಿಯಿದ್ದಿದ್ದರೆ ಎಂಬ ಬಯಕೆ ಇದೆ ಎಂದಾಗ ಫಲ ನೇರವಾಗಿ ವೃಕ್ಷವನ್ನೇರಿತಂತೆ. ಈ ಘಟನೆ ನಡೆದ ಸ್ಥಳವನ್ನು "ಸತ್ಯಪಾಲ" ಎಂದೇ ಕರೆಯುತ್ತಾರೆ. ದೇವಾಲಯದ ಸಮೀಪವೇ ಈ ಸ್ಥಳ ಕಂಡುಬರುತ್ತದೆ.

ಮೂಕಾಸುರ ವಧೆ

ಬದಲಾಯಿಸಿ

ಮತ್ತೊಂದು ಕಥೆಯ ಪ್ರಕಾರ ಅರ್ಜುನ ತಪಸ್ಸು ಮಾಡಲೆಂದು ದ್ವೈತ ಎಂಬ ವನವನ್ನು ಸೇರುತ್ತಾನೆ. ಅಲ್ಲಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಈ ಸಂದರ್ಭದಲ್ಲಿ ಅರ್ಜುನ ಮಾಡುವ ತಪಸ್ಸನ್ನು ಪರೀಕ್ಷಿಸಲೆಂದು ಶಿವನು ಪತ್ನಿ ಪಾರ್ವತಿ ಹಾಗೂ ಗಣಗಳೊಂದಿಗೆ ಕಿರಾತಕನ ರೂಪದಲ್ಲಿ ದ್ವೈತ ವನಕ್ಕೆ ಬರುತ್ತಾನೆ. ಅಲ್ಲಿನ ಗುಹೆಯೊಂದರಲ್ಲಿದ್ದುಕೊಂಡು ಮುನಿಗಳಿಗೆ ತೊಂದರೆ ನೀಡುವ ಹಂದಿಯ ರೂಪದ ಮೂಕಾಸುರನನ್ನು ಕೊಲ್ಲಲು ಬಾಣ ಬಿಡುತ್ತಾನೆ.

ಬಾಣ ನಾಟಿಸಿಕೊಂಡ ಹಂದಿಯು ನೇರವಾಗಿ ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬರುತ್ತದೆ. ಆಗ ಅರ್ಜುನ ಬಾಣ ಬಿಡುವುದರ ಮೂಲಕ ಅದನ್ನು ಕೊಲ್ಲುತ್ತಾನೆ. ಆಗ ಸತ್ತ ಹಂದಿಗಾಗಿ ಕಿರಾತಕ ರೂಪದಲ್ಲಿದ್ದ ಶಿವನಿಗೂ ಅರ್ಜುನನಿಗೂ ಘೋರ ಯುದ್ಧ ನಡೆಯುತ್ತದೆ. ಅರ್ಜುನ ಕಿರಾತಕ ರೂಪದಲ್ಲಿದ್ದ ಶಿವನ ಮೇಲೆ ಎಲ್ಲಾ ಬಾಣಗಳನ್ನು ಬಿಡುತ್ತಾನೆ. ಕೊನೆಗೆ ತನ್ನ ಗಾಂಡೀವದಿಂದಲೇ ಹೊಡೆಯುತ್ತಾನೆ.

ಈ ಹೊಡೆತ ಕಿರಾತಕನ ಮಡದಿಯ ವೇಷದಲ್ಲಿದ್ದ ಪಾರ್ವತಿಗೆ ತಗಲುತ್ತದೆ ಆಗ ಶಿವ(ಕಿರಾತಕ)ನು ಹೆಂಡತಿಯ ಅಂದರೆ ಪಾರ್ವತಿಯ ಶುಶ್ರೂಷೆಯಲ್ಲಿ ತೊಡಗುತ್ತಾನೆ. ಆಗ ಅರ್ಜುನನು ಮರಳಿನಿಂದ ಲಿಂಗವೊಂದನ್ನು ಮಾಡಿ ಅದರ ಮೇಲೆ ಪುಷ್ಪಗಳನ್ನಿಟ್ಟು ಪೂಜೆ ಮಾಡುತ್ತಾನೆ. ಲಿಂಗದ ಮೇಲಿಟ್ಟ ಹೂ ಕಿರಾತಕನ ಹೆಂಡತಿ(ಪಾರ್ವತಿ)ಯ ತಲೆಯ ಮೇಲೆ ಕಂಡು ಬರುತ್ತದೆ. ಇದನ್ನು ನೋಡಿ ಅರ್ಜುನನಿಗೆ ಆಶ್ಚರ್ಯವಾಗುತ್ತದೆ.

ಅಲ್ಲದೆ ನಾನು ಇಷ್ಟು ಹೊತ್ತು ಯುದ್ಧ ಮಾಡಿದ್ದು ಶಿವನೊಂದಿಗೆ ಎಂದು ತಿಳಿದಾಗ ಆತನ ಕಾಲಿಗೆ ಅಡ್ಡ ಬಿದ್ದು ಮನ್ನಿಸುವಂತೆ ಬೇಡಿಕೊಳ್ಳುತ್ತಾನೆ. ಆಗ ಶಿವನು ಅರ್ಜುನನ್ನು ಕೊಂಡಾಡಿ ಆತನಿಗೆ ಪಾಶುಪತಾಸ್ತ್ರವನ್ನೂ, ಪಾರ್ವತಿಯು ಅಂಜನಾಸ್ತ್ರವನ್ನೂ ನೀಡಿ ಹರಸುತ್ತಾರೆ. ಈಗಲೂ ದೇವಾಲಯದಲ್ಲಿರುವ ಶಿವಲಿಂಗವು ಬಿರುಕು ಬಿಟ್ಟಿರುವುದನ್ನು ಕಾಣಬಹುದು.

ಮಲ್ಲಿಕಾರ್ಜುನ ದೇವಾಲಯ

ಬದಲಾಯಿಸಿ

ಇಲ್ಲಿನ ದೇವಾಲಯಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಹೇಗೆ ಬಂತೆಂಬುದಕ್ಕೂ ರೋಚಕ ಕಥೆಯಿದೆ. ಲಿಂಗರೂಪಿಯಾಗಿದ್ದ ಶಿವಲಿಂಗವು ಕಾಲಾಂತರದಲ್ಲಿ ಭೂಮಿಯನ್ನು ಸೇರಿಹೋಗಿದ್ದು, ಒಮ್ಮೆ ಮಲ್ಲಿ ಎಂಬ ಗಿರಿಜನ ಹುಡುಗಿ ಗೆಡ್ಡೆಗಳನ್ನು ಅಗೆಯುತ್ತಿದ್ದಾಗ ಲಿಂಗಕ್ಕೆ ತಗುಲಿ ರಕ್ತ ಚಿಮ್ಮಿತೆಂದೂ, ಇದರಲ್ಲಿ ಏನೋ ಶಕ್ತಿ ಎಂದರಿತ ಆಕೆ ಅದನ್ನು ತಂದು ಪ್ರತಿಷ್ಠಾಪಿಸಿದಳೆಂದೂ, ಮಲ್ಲಿ ಎಂಬುವಳಿಗೆ ಶಿವಲಿಂಗವು ದೊರೆತ ಕಾರಣ ಮಲ್ಲಿಕಾರ್ಜುನ ಎಂಬ ಹೆಸರು ಬಂದಿತೆಂದೂ ಹೇಳಲಾಗುತ್ತಿದೆ.

ಆದರೆ ಇನ್ನು ಕೆಲವರು ಹೇಳುವ ಪ್ರಕಾರ ಅರ್ಜುನನು ಮರಳಿನಿಂದ ಮಾಡಿದ ಶಿವಲಿಂಗವನ್ನು ಮಲ್ಲಿಕಾ ಎಂಬುವಳು ಪುಷ್ಪಗಳಿಂದ ಪೂಜಿಸಿದ ಕಾರಣ ಮಲ್ಲಿಕಾರ್ಜುನ ಎಂಬ ಹೆಸರು ಬಂತೆಂದು ಹೇಳುತ್ತಾರೆ. ಅದೇನೇ ಇರಲಿ ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯ ಕೇರಳೀಯ ವಾಸ್ತು ಶಿಲ್ಪವನ್ನು ಹೊಂದಿದ್ದು ಆಕರ್ಷಕವಾಗಿ ಗಮನಸೆಳೆಯುತ್ತಿದೆ. ಈ ದೇವಾಲಯದ ಆಡಳಿತವನ್ನು ಮೊಕ್ತೇಸರರೇ ನೋಡಿಕೊಳ್ಳುತ್ತಿದ್ದಾರೆ.

ಇತರ ಸ್ಥಳಗಳು

ಬದಲಾಯಿಸಿ

ಮಲ್ಲಿಕಾರ್ಜುನ ದೇವಾಲಯದ ಬಳಿಯಲ್ಲಿಯೇ ನದಿ ಹರಿಯುತ್ತದೆ. ಇಲ್ಲಿರುವ ಮತ್ಸ್ಯತಟಾಕವು ಆಕರ್ಷಕವಾಗಿದೆ. ಏಕರೂಪದ ಸಹಸ್ರಾರು ಮೀನುಗಳು ಇಲ್ಲಿದ್ದು ನೋಡುಗರ ಗಮನಸೆಳೆಯುತ್ತದೆ. ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಆಕರ್ಷಕ ಜಲಪಾತವಿದೆ.

ಪಟ್ಟಿಮಲೆ ಎಂಬಲ್ಲಿಂದ ಹರಿದು ಬರುವ ಮತ್ಸ್ಯತೀರ್ಥ ಎಂಬ ನದಿಯು ದೇವರಗುಂಡಿ ಎಂಬಲ್ಲಿ ಸುಮಾರು ಮೂವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಜಲಪಾತವನ್ನು ಸೃಷ್ಟಿಸಿದೆ. ಇದನ್ನು ದೇವರಗುಂಡಿ ಜಲಪಾತ ಎಂದೇ ಕರೆಯುತ್ತಾರೆ. ಜಲಧಾರೆಯು ಧುಮುಕಿ ಬೀಳುವಲ್ಲಿ ಬೃಹತ್ ಗುಂಡಿಯಿದ್ದು ಇಲ್ಲಿಂದ ಶಿವನು ವಿಷ್ಣುವನ್ನು ಮತ್ಸ್ಯ ವಾಹನವನ್ನಾಗಿ ಮಾಡಿಕೊಂಡು ಅಂತರ ಮಾರ್ಗದಿಂದ ತೊಡಿಕಾನದವರೆಗೆ ಬಂದಿದ್ದನು ಎಂದು ಹೇಳಲಾಗುತ್ತಿದೆ. ಆದುದರಿಂದ ಇಲ್ಲಿನ ಜಲವನ್ನು ತೀರ್ಥವೆಂದು ಸ್ವೀಕರಿಸುವುದನ್ನು ಇಂದಿಗೂ ನಾವು ಕಾಣಬಹುದಾಗಿದೆ.

ಬಸ್ ವ್ಯವಸ್ಥೆ

ಬದಲಾಯಿಸಿ

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆಯೂ ಇಲ್ಲಿದ್ದು, ಸುಳ್ಯದಿಂದ ಖಾಸಗಿ ಬಸ್ ವ್ಯವಸ್ಥೆಯೂ ಇದೆ. ಹಾಗಾಗಿ ಭಕ್ತರಿಗೆ ಸಕಾಲದಲ್ಲಿ ಭೇಟಿ ನೀಡಿ ತೆರಳಲು ಅನುಕೂಲವಾಗಿದೆ.

ಉಲ್ಲೇಖ

ಬದಲಾಯಿಸಿ


"https://kn.wikipedia.org/w/index.php?title=ತೊಡಿಕಾನ&oldid=1220457" ಇಂದ ಪಡೆಯಲ್ಪಟ್ಟಿದೆ