ತಿಪ್ಪೇಸ್ವಾಮಿ.ಪಿ.ಆರ್
ತಿಪ್ಪೇಸ್ವಾಮಿ.ಪಿ.ಆರ್(ಜನನ: ೧೨ ಆಗಸ್ಟ್ ೧೯೨೨ ಮರಣ: ಎಪ್ರಿಲ್ 7, 2000) ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯಲ್ಲಿ ಜನ್ಮತಳೆದ ಪಿ.ಆರ್. ತಿಪ್ಪೇಸ್ವಾಮಿಯವರಿಂದ ಜಾನಪದ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ಸಂದಿದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಜಾನಪದ ವಸ್ತುಸಂಗ್ರಹಾಲಯದ ಕ್ಯುರೇಟರ್ ಆಗಿ 1977 ರಿಂದ 1983ರ ವರೆಗೆ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.ಇವರು ಧರ್ಮಸ್ಥಳದಲ್ಲಿರುವ ಮಂಜೂಷಾ ವಸ್ತುಸಂಗ್ರಹಾಲಯದ ಕ್ಯುರೇಟರ್ ಆಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಪಿ.ಆರ್.ತಿಪ್ಪೇಸ್ವಾಮಿಯವರು ಒಬ್ಬ ಸಾಹಸಿ, ಕಷ್ಟಜೀವಿ, ಸಂಘಟನಾಕಾರ, ಸ್ವಾತಂತ್ರ್ಯ ಹೋರಾಟಗಾರ, ಅನ್ಯಾಯಕ್ಕೆ ಪ್ರತಿಭಟಿಸುವಾತ, ಜನಪ್ರಿಯ, ಅಲೆಮಾರಿ, ಸರಳ, ವಿದ್ಯಾರ್ಥಿಗಳಿಗೆ ಆಶ್ರಯದಾತ, ಹುಡುಕು ಕಣ್ಣುಗಳ ಸಂಶೋಧಕ, ವಸ್ತು ಸಂಗ್ರಹಾಲಯಗಳ ರೂವಾರಿ, ಜನಪದ ಕಲಾತಜ್ಞ, ಬ್ರಹ್ಮಚಾರಿ, ಇವೆಲ್ಲಕ್ಕಿಂತ ಮಿಗಿಲಾಗಿ ಕಲಾವಿದ, ಕಲಾಲೇಖನಗಳ ಸಾಹಿತಿಯಾಗಿದ್ದವರು.
ತಿಪ್ಪೇಸ್ವಾಮಿ.ಪಿ.ಆರ್ | |
---|---|
Born | ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ August ೧೨, ೧೯೨೨ ಹರ್ತಿಕೋಟೆ,ಹಿರಿಯೂರ್ ತಾಲೂಕು ಚಿತ್ರದುರ್ಗ ಜಿಲ್ಲೆ |
Died | April 7, 2000 Mysore, Karnataka | (aged 77)
Occupation(s) | ಕಲಾವಿದ,ಜಾನಪದ ತಜ್ಞ |
Parent(s) | Patel Rudrappa, Lakshmamma |
ಜನನ ಮತ್ತು ಬಾಲ್ಯ
ಬದಲಾಯಿಸಿಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ ಅವರು ಚಿತ್ರದುರ್ಗದ ಹರ್ತಿಕೋಟೆಯಲ್ಲಿ ಆಗಸ್ಟ್ 12, 1922 ರಂದು ಜನಿಸಿದರು. ತಂದೆ ಪಟೇಲ್ ರುದ್ರಪ್ಪ, ತಾಯಿ ಲಕ್ಷ್ಮಮ್ಮ; ತಾತ ಪಟೇಲ್ ತಿಪ್ಪಯ್ಯ. ಸುತ್ತ ಹತ್ತು ಗ್ರಾಮಗಳ ಪಟೇಲರಾಗಿದ್ದ ವಂಶದಲ್ಲಿ ಹಿರಿಯ ಮಗನಾಗಿ ಹುಟ್ಟಿ, ತಾತನವರ ಪಟೇಲ್‍ಗಿರಿಯನ್ನು ಮುಂದುವರಿಸಬೇಕೆಂದಿದ್ದವರು, ಚಿತ್ರಕಲೆಯತ್ತ ಒಲವುದೋರಿ ಮೈಸೂರಿನ ಚಾಮ ರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿ ವಿಶೇಷವಾಗಿ ಕಲಾವಿದ ಎಸ್.ನಂಜುಂಡಸ್ವಾಮಿ ಅವರಲ್ಲಿ ನಿಸರ್ಗ ಚಿತ್ರ ರಚನೆ ಯನ್ನೂ ಅಭ್ಯಸಿಸಿ ಅದನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಇರಿಸಿಕೊಂಡವರು.
ಇವರು ಕಲಾವಿದರಾಗಲು ಮಾಜಿ ಮುಖ್ಯಮಂತ್ರಿ ಮುತ್ಸದ್ಧಿ ಎಸ್. ನಿಜಲಿಂಗಪ್ಪನವರೇ ಕಾರಣ ಎಂದರೆ ತಪ್ಪಾಗಲಾರದು. ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರು ಜಿಲ್ಲಾ ಬೋರ್ಡ್ ಸದಸ್ಯರಾಗಿದ್ದ ಪಟೇಲ್ ರುದ್ರಪ್ಪನವರ ಮನೆಗೆ ಕಾರಣಾಂತರಗಳಿಂದ ಬಂದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಲ್ಲಿ ಪಿ.ಆರ್. ತಿಪ್ಪೇಸ್ವಾಮಿಯವರು ರಚಿಸಿದ್ದ ಗಾಂಧೀಜಿ ಭಾವಚಿತ್ರ ಸೇರಿದಂತೆ ಹಲವು ಚಿತ್ರಗಳು ಮನಸೆಳೆದವು. ಆಗ ಅವರು ಈ ಚಿತ್ರಗಳನ್ನು ರಚಿಸಿದ್ದು ಯಾರು ಎಂದು ರುದ್ರಪ್ಪನವರನ್ನು ಕೇಳಿದರು. ಆಗ ರುದ್ರಪ್ಪನವರು ಇವನೇ ನನ್ನ ದೊಡ್ಡ ಮಗ, ಮೆಟ್ರಿಕ್ ಫೇಲಾಗಿದ್ದಾನೆ, ಯಾವಾಗಲೂ ಚಿತ್ರ ಗೀಚುತ್ತ ಕುಳಿತಿರುತ್ತಾನೆ ಎಂದು ವಿಷಾದದಿಂದ ಹೇಳಿದರು. ಆಗ ನಿಜಲಿಂಗಪ್ಪನವರು ಅದಕ್ಕೆ ಯಾಕೆ ಬೇಸರಿಸುತ್ತೀರಾ ಮೈಸೂರಿನಲ್ಲಿ ಕಲಾವಿದರಿಗೆಂದೇ ಕಲಾ ಶಾಲೆ ಇದೆ. ಇವನು ಅಲ್ಲಿ ವಿದ್ಯಾಭ್ಯಾಸ ಮಾಡಲಿ ಅಲ್ಲಿನ ಪ್ರಾಂಶುಪಾಲರಿಗೆ ನಾನು ಪಾತ್ರ ಕೊಡುತ್ತೇನೆ ಎಂದು ಹೇಳಿ ತಿಪ್ಪೇಸ್ವಾಮಿಯವರನ್ನು ಮೈಸೂರಿಗೆ ಕಳುಹಿಸಿದರು. ನಿಜಲಿಂಗಪ್ಪನವರ ಪತ್ರ ಹಿಡಿದು ಮೈಸೂರಿಗೆ ಬಂದು ಆಗಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ (ಈಗಿನ ಕಾವ) ಸೇರಿದ ತಿಪ್ಪೇಸ್ವಾಮಿಯವರು ಆಮೇಲೆ ಇತಿಹಾಸ ಸೃಷ್ಟಿಸಿದರು.
ಪ್ರಸಿದ್ಧ ದೇವಾಲಯ, ಕೋಟೆ ಕೊತ್ತಳಗಳಲ್ಲದೆ ಅಲಕ್ಷಿತವಾದ ಭಗ್ನವಾದ ಅವಶೇಷಗಳ ಹಿನ್ನೆಲೆಯಲ್ಲಿ ಪ್ರಕೃತಿ ದೃಶ್ಯಗಳನ್ನು ಚಿಕ್ಕ ಅಳತೆಯಲ್ಲಿ, ಶುದ್ಧವಾದ ವರ್ಣಗಾರಿಕೆಯಲ್ಲಿ, ಸರಳ ಹಿತ, ಮಿತ, ಮೃದುವರ್ಣಗಳಲ್ಲಿ ನೆರಳು ಬೆಳಕಿನಾಟಗಳಲ್ಲಿ ಸಾಕಾರಗೊಳಿಸುತ್ತಿದ್ದು ಅದು ಅವರದೇ ಆದ ಶೈಲಿಯೆಂಬಂತೆ ಪ್ರಖ್ಯಾತವಾಯಿತು.
ಸ್ವಾತಂತ್ರ್ಯ ಹೋರಾಟ
ಬದಲಾಯಿಸಿಮೈಸೂರಿಗೆ ಬರುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರು ಸಾಹಿತಿಗಳು, ನಾಟಕಕಾರರು ಜನಪದ ತಜ್ಞರು ಹಾಗೂ ಸಹಜವಾಗಿ ಕಲಾವಿದರುಗಳ ಪರಿಚಯವಾಯಿತು. ಪರಿಣಾಮ ಬೀರಿತು, ಜೀವನದ ಮುಂದಿನ ಗುರಿ ಸ್ಪಷ್ಟ ವಾಯಿತು. ವಿವಾಹದ ಬಗೆಗೆ ಯೋಚಿಸಲೂ ವೇಳೆ ಇಲ್ಲದಂತೆ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಕಲಾ ಲೋಕದಲ್ಲೇ ತೊಡಗಿಕೊಳ್ಳುವಂತಾಯಿತು. ಅವರ ಎಲ್ಲ ಚಟುವಟಿಕೆಗಳ ಹಿಂದೆ ಚಿತ್ರಕಲೆ ಪ್ರಮುಖ ಪಾತ್ರವಾಗಿತ್ತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭೂಗತ ಚಟುವಟಿಕೆಗಳೊಂದಿಗೆ ವ್ಯಂಗ್ಯ ಚಿತ್ರಗಳನ್ನು ರಚನೆ ಮಾಡಿ ಹಂಚಿದರು; ಆಳರಸರನ್ನು ಕಲೆಯ ಮೂಲಕ ಟೀಕಿಸಿದರು, ಅರಮನೆಯ ಕೃಪಾಶ್ರಯದಿಂದ ದೂರವೇ ಉಳಿದರು.
ಜಾನಪದ ತಜ್ಞ
ಬದಲಾಯಿಸಿಜನಪದ ಸಾಹಿತ್ಯದ ಸಂಗ್ರಹ, ವಿಶ್ಲೇಷಣೆ, ಹಾಗೂ ಪ್ರಕಟಣೆಗಳು ಭರದಿಂದ ನಡೆಯುತ್ತಿದ್ದ ಕಾಲವದು. ಈ ಕ್ಷೇತ್ರದ ತಜ್ಞರ ಒಡನಾಟದಿಂದ ತಿಪ್ಪೇಸ್ವಾಮಿಯವರು ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವಂತಾಯಿತು. ಅಲ್ಲಿಯ ದೈನಂದಿನ ಉಪಕರಣಗಳೂ ಕಲಾತ್ಮಕವಾಗಿರುವುದಲ್ಲದೆ ನಿರುಪಯೋಗಿ, ಮೂಲೆಗುಂಪಾಗಿ ನಾಶ ವಾಗುತ್ತಿದ್ದುದನ್ನು ಕಂಡು ಅವುಗಳ ಸಂಗ್ರಹಣೆಗೂ ತೊಡಗಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ರಾಷ್ಟ್ರದಲ್ಲೇ ಪ್ರಥಮವೆಂಬಂತೆ, ಜನಪದ ಉಪಕರಣಗಳು, ಆಟಿಕೆಗಳು, ತೊಗಲುಗೊಂಬೆ ಸೂತ್ರದಗೊಂಬೆ ಇತ್ಯಾದಿ ಗ್ರಾಮೀಣ ಪ್ರದೇಶದ ವಸ್ತುಗಳಿಗಾಗಿ ವ್ಯವಸ್ಥಿತವಾದ ಸಂಗ್ರಹಾಲಯವೊಂದನ್ನು ರೂಪಿಸಿದರು. ಅದರ ಮೇಲ್ವಿಚಾರಕವಾಗಿ ದುಡಿದು ನಿವೃತ್ತರಾದರು. ಸಂಗ್ರಹ ಹಾಗೂ ಜೋಡಣೆಗಳ ಕಾರ್ಯದಲ್ಲಿ ಸಿದ್ಧಹಸ್ತರೆನಿಸಿದರು. ಧರ್ಮಸ್ಥಳ ಹಾಗೂ ಈಚೆಗೆ ಸುತ್ತೂರಿನಲ್ಲಿ ಇದೇ ಬಗೆಯ ಸರ್ವವಸ್ತು ಸಂಗ್ರಹಾಲಯಗಳನ್ನು ರೂಪಿಸಿಕೊಟ್ಟರು. ಚಿತ್ರದುರ್ಗದಲ್ಲಿಯೂ ಇಂತಹ ದೊಂದು ಕಾರ್ಯನಡೆಸುತ್ತಿದ್ದರು.
ತಿಪ್ಪೇಸ್ವಾಮಿಯವರು ಕಲೆಯ ಕ್ಷೇತ್ರಕ್ಕೆ ಬರುವ ವೇಳೆಗೆ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಕಾಲ ಮುಗಿದ್ದಿದ್ದು, ಅಂದಿಗೆ ಹೊಸದೆನಿಸಬಹುದಾದ `ನೈಜವಾದದ (ರಿಯಲಿಸಂ) ಹಾಗೂ ಭಾವಮುದ್ರಾ ಪಂಥದ (ಇಂಪ್ರೆಷನಿಸಂ) ಪಾಶ್ಚಿಮಾತ್ಯ ಕಲೆಯ ಪ್ರಭಾವ ಮುಂಬಯಿಯ ಜೆ.ಜೆ.ಶಾಲೆಯ ಮೂಲಕ ಬಂದಿತ್ತು. ಇವುಗಳ ಪ್ರಚಾರ ಕಾರ್ಯಕ್ಕಾಗಿ ಮೈಸೂರಿನಲ್ಲಿ ಚಿತ್ರಶಿಲ್ಪ ಅಕಾಡೆಮಿಯೊಂದು ಸ್ಥಾಪಿತವಾಗಿ ಆ ಮೂಲಕ ಅಂದಿನ ಕ್ರಿಯಾಶೀಲ ಕಲಾವಿದರ ಕೃತಿಗಳ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ ಇತ್ಯಾದಿಗಳನ್ನು ಹಮ್ಮಿಕೊಂಡು ಕಲಾ ಸಂಘಟನೆಯನ್ನೂ ಮಾಡಿದರು. ಅದೇ ವೇಳೆಯಲ್ಲಿ `ಕಲಾಕ್ಷೇತ್ರ ಎಂಬ ಕೈಬರಹದ ಪತ್ರಿಕೆಯನ್ನು ಗೆಳೆಯರೊಂದಿಗೆ ಆರಂಭಿಸಿದರು ಮುಂದೆ ಅದೊಂದು ಪ್ರಕಾಶನ ಸಂಸ್ಥೆಯಾಗಿ ಹಲವಾರು ಪುಸ್ತಕಗಳು ಹೊರಬಂದವು.
ಲೇಖಕ
ಬದಲಾಯಿಸಿಕನ್ನಡದಲ್ಲಿ ಕಲೆಯನ್ನು ಕುರಿತು ಕಲಾವಿದನೇ ಬರೆದರೆ ಹೆಚ್ಚು ಅಧಿಕೃತವಾಗುವುದು ಸಹಜ. ಹಾಗೆಂದೇ ತಿಪ್ಪೇಸ್ವಾಮಿಯವರು ಕುಂಚದ ಜೊತೆಗೆ ಲೇಖನಿಯನ್ನು ಹಿಡಿದರು. ಲೇಖನಗಳ ವ್ಯಾಪ್ತಿ ವಾಚಕರವಾಣಿಗೆ ಪತ್ರ ಬರೆ ಯುವುದರಿಂದ ಹಿಡಿದು ಕಲೆ ಹಾಗೂ ಕಲಾವಿದರ ಪರಿಚಯ ಕಲಾ ಗ್ರಂಥಗಳು ಹಾಗೂ ಕಲಾ ಪ್ರದರ್ಶನಗಳ ವಿಮರ್ಶೆ, ಐತಿಹಾಸಿಕ ಭಿತ್ತಿ ಚಿತ್ರಗಳ ಹಾಗೂ ಕಲಾ ಸಂಗ್ರಹಾಲಯಗಳ ಪರಿಚಯ ಇತ್ಯಾದಿಯಾಗಿ ಕಲೆಯ ನಾನಾ ಮುಖಗಳ ಕುರಿತು ಬರೆದರು. ನಿಯತಕಾಲಿಕೆ, ವಿಶೇಷ ಸಂಚಿಕೆಗಳಿಂದ ಹಿಡಿದು ಸಂಭಾವನಾ ಗ್ರಂಥಗಳ ವರೆಗೆ ನೂರಾರು ಲೇಖನಗಳನ್ನು ಬರೆದರು. ಕಲೆಯನ್ನೂ ಕುರಿತು ಹೊರಬಂದ ಎಲ್ಲಾ ಪತ್ರಿಕೆಗಳಿಗೂ ಲೇಖನಗಳನ್ನು ಕಳುಹಿಸಿ ಪ್ರೋತ್ಸಾಹಿಸಿದ್ದರು. ವ್ಯಕ್ತಿಚಿತ್ರ ಅವರಿಗೆ ಪ್ರಿಯವಾದ ಸಂಗತಿ. ಯಾವುದಾದರೂ ಒಂದು ಘಟನೆಯ ಮೂಲಕ ಕಲಾವಿದನನ್ನು ಪರಿಚಯ ಮಾಡಿಕೊಡುತ್ತಾ ಆತನ ಕೃತಿಗಳು, ಕಲೆಯ ಬಗ್ಗೆಯ ಅಭಿಪ್ರಾಯಗಳು, ಆತನ ಮುಂದಿನ ಹಾದಿ ಇತ್ಯಾದಿಗಳನ್ನು ನುಡಿ ಚಿತ್ರವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾ ಹೋಗುವ ರೀತಿ ಅನನ್ಯವಾದುದು. ಈ ಬಗೆಯ ಚಿತ್ರ ಕಲಾವಿದರ ಲೇಖನಗಳನ್ನು ಸೇರಿಸಿ `ಕಲೋಪಾಸಕರು ಎಂಬ ಹೆಸರಿನಲ್ಲಿಯೂ ಅವರು ಶಿಲ್ಪ ಕಲಾವಿದರನ್ನು ಕುರಿತು `ಶಿಲ್ಪಿ ಸಂಕುಲವನ್ನು ಶಿಲ್ಪಕಲಾ ಅಕಾಡೆಮಿಯಿಂದಲೂ ಹೊರತರಲಾಗಿದೆ. ಉಳಿದಂತೆ ಬೆಳೆದು ಬಂದ ಭಾರತೀಯಕಲೆ ಕನ್ನಡ ಚಿತ್ರಕಲೆಯ ಇತಿಹಾಸ ಕಲಾವಿದನ ನೆನಪುಗಳು, ಇತ್ಯಾದಿಗಳು ಲೇಖನ ಸಂಗ್ರಹಗಳು. `ಕಲಾವಿದ ಕಂಡ ಫ್ರಾನ್ಸ್ ತಿಪ್ಪೇಸ್ವಾಮಿಯವರು ಗೊಂಬೆಯಾಟದ ತಂಡವೊಂದರ ಜೊತೆಯಲ್ಲಿ ಫ್ರಾನ್ಸ್ ದೇಶಕ್ಕೆ ಹೋಗಿದ್ದ ಅನುಭವದ ಪ್ರವಾಸ ಕಥನ. ಎನ್.ಬಿ.ಟಿ ಅವರಿಗೆ ಸಿ.ಶಿವರಾಮಮೂರ್ತಿಯವರು ಬರೆದು ಕೊಟ್ಟಿದ್ದ ಗ್ರಂಥದ ಕನ್ನಡ ಅನುವಾದ `ಭಾರತೀಯ ಚಿತ್ರಕಲೆಯನ್ನು ಬಹಳ ಹಿಂದೆಯೇ ಮಾಡಿದ್ದರಾದರೂ 1998ರಲ್ಲಿ ಪ್ರಕಟವಾಯಿತು.
1991-94ರ ಅವಧಿಯಲ್ಲಿ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಪಾತ್ರ ಗಟ್ಟಿ ಯಾಗಿ ನಿಲ್ಲುವಂತಹದು.`ಚಿತ್ರಕಲಾ ಪ್ರಪಂಚ `ಶಿಲ್ಪಕಲಾಪ್ರಪಂಚ, `ಕಲಾಕೋಶಗಳಂತಹ ಹೆಬ್ಬೊತ್ತಿಗೆಗಳು, ಆಧುನಿಕ ಕಲೆ, ಹಾಗೂ ಶುಭರಾಯರನ್ನು ಕುರಿತು ವಿಚಾರ ಸಂಕಿರಣ ಹಾಗೂ ಪುಸ್ತಕ ರೂಪದಲ್ಲಿ ಪ್ರಕಟಣೆಗಳಲ್ಲದೆ ಕಾವಿಕಲೆ, ಫ್ರಾನ್ಸ್ ಇತಿಹಾಸಕಲೆ, ಚಿತ್ರಕಲಾ ದರ್ಪಣ ಇತ್ಯಾದಿಯಾಗಿ ಮೂರು ವರ್ಷಗಳ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಕ್ಷರ ಮುಖ್ಯ ಸಂಪಾದಕತ್ವದಲ್ಲಿ ಹೊರತರಲಾಯಿತು. ವಿವಿಧ ಕಾರಣಗಳಿಂದ ಆವರೆಗೆ ಅಕಾಡೆಮಿ ಗುರುತಿಸದೇ ಇದ್ದ ಅನೇಕ ಹಿರಿಯ, ಪ್ರಸಿದ್ಧ ಕಲಾವಿದರಿಗೆ ಈ ಅವಧಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕದ ಎಲ್ಲ ಭಿತ್ತಿಚಿತ್ರಗಳ ಛಾಯಾಚಿತ್ರ, ವರ್ಣಪಾರದರ್ಶಿಕೆ ಹಾಗೂ ಚಿತ್ರಸುರಳಿ (ವಿಡಿಯೊ) ಮಾಡಿಸಿ ಅಕಾಡೆಮಿಯಲ್ಲಿ ಸಂಗ್ರಹಿಸಲಾಯಿತು. ಛಾಯಾ ಚಿತ್ರ ಕಲೆಗೂ ವಿಶೇಷ ಮನ್ನಣೆ ನೀಡಿ ಅಖಿಲಭಾರತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಏಕವ್ಯಕ್ತಿ ಪ್ರದರ್ಶನ
ಬದಲಾಯಿಸಿತಿಪ್ಪೇಸ್ವಾಮಿಯವರು ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದು ಕಡಿಮೆ. 1961-74ರಲ್ಲಿ ಚಿತ್ರದುರ್ಗದಲ್ಲಿ, 1961, 74, 75ರಲ್ಲಿ ಮೈಸೂರಿನಲ್ಲಿ, 1974ರಲ್ಲಿ ಬೆಂಗಳೂರಿನಲ್ಲಿ, 1980ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಇತ್ಯಾದಿ ಕೆಲವೇ ಸ್ಥಳೀಯ ಪ್ರದೇಶದಲ್ಲಿ ಏಕವ್ಯಕ್ತಿ ಪ್ರದರ್ಶನ ಮಾಡಿದ್ದರು. ಸಾಮೂಹಿಕ ಪ್ರದರ್ಶನಗಳಲ್ಲಿ 1956ರಿಂದಲೇ ದಸರಾ ಪ್ರದರ್ಶನಕ್ಕೆ ಕೃತಿಗಳನ್ನು ಕಳಿಸುತ್ತಿದ್ದರಾದರೂ, ತಾವು ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಂಡಿರಲಿಲ್ಲ ವಾಗಿ ಚಿತ್ರಕಲಾ ಪರಿಷತ್ತಿನಂತಹ ಕೆಲವೇ ಪ್ರದರ್ಶನಗಳಲ್ಲಿ ಶ್ರೀಯುತರ ಕೃತಿಗಳನ್ನು ಕಾಣಬಹುದಿತ್ತು. ಅಲ್ಲದೆ ಕೃತಿ ಗಳನ್ನು ಮಾರಾಟಕ್ಕೆಂಬಂತೆ ರಚಿಸದೆ ಹವ್ಯಾಸವಾಗಿ ಇರಿಸಿಕೊಂಡಿದ್ದು ತಾವೇ ತಮ್ಮ ಕೃತಿಗಳನ್ನು ಉದಾರವಾಗಿ, ಬಹು ಮಾನವಾಗಿ ಇಲ್ಲವೆ ಸಾಂಕೇತಿಕ ಬೆಲೆಗೆ ನೀಡುತ್ತಿದ್ದರು. ಕವಿ ಕುವೆಂಪುರವರೇ ಇಷ್ಟಪಟ್ಟು ತಮ್ಮ ಬಾಲ್ಯದ ಕುಪ್ಪಳ್ಳಿಯ ಪರಿಸರದ ಚಿತ್ರಗಳನ್ನು ತಿಪ್ಪೇಸ್ವಾಮಿಯವರಿಂದ ಬರೆಯಿಸಿದರು. ಕವಿ ಸಾಕಷ್ಟು ಸಂಭ್ರಮಿಸಿದ್ದಲ್ಲದೆ, ಆ ಚಿತ್ರಗಳನ್ನು ಮುಂದಿರಿಸಿಕೊಂಡು ಕವಿತೆಗಳನ್ನೂ ರಚಿಸಿದರು. ಇದೇ ರೀತಿ ಇನ್ನೂ ಹಲವಾರು ಅಭಿಮಾನಿಗಳಲ್ಲಿ ಚಿತ್ರಕಲಾ ಪರಿಷತ್, ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಜಗನ್ಮೋಹನ ಅರಮನೆ, ದೆಹಲಿಯ ಕೆಂಪು ಕೋಟೆಯ ಅತಿಥಿಗೃಹ ಇವೇ ಮೊದಲಾದ ಸ್ಥಳಗಳಲ್ಲಿ ಕೃತಿಗಳು ಚದುರಿಹೋಗಿವೆ. ಅಮೆರಿಕಾ, ಇಂಗ್ಲೆಂಡ್, ರಷ್ಯಾ, ಡೇನ್‍ಮಾರ್ಕ್‍ಗಳಲ್ಲೂ ಶ್ರೀಯುತರ ಕೃತಿಗಳು ಸಂಗ್ರಹಿತವಾಗಿರುವುದಾಗಿ ತಿಳಿದು ಬರುತ್ತದೆ.
ಮೈಸೂರಿನಲ್ಲಿ 1964-65ರ ವೇಳೆಯಲ್ಲಿ `ಚಿತ್ರಶಿಲ್ಪ ಅಕಾಡೆಮಿಯೊಂದನ್ನು ಆರಂಭಿಸಿ ಕಲಾ ಪ್ರದರ್ಶನ, ಕಲಾ ಪುಸ್ತಕ ಪ್ರಕಟಣೆ, ಉಪನ್ಯಾಸ, ಪುಸ್ತಕವಾಚನ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅಲ್ಲದೆ ಕೆಲವು ಕಲಾಸಂಸ್ಥೆಗಳಲ್ಲಿ ದಸರಾ ಪ್ರದರ್ಶನ ಸಮಿತಿ ಇತ್ಯಾದಿಗಳಲ್ಲಿ ವಿವಿಧ ಸ್ಥಾನಗಳಲ್ಲಿದ್ದರು. ಲಲಿತಕಲಾ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಫೋಕ್‍ಲೋರ್ ಫೆಲೋಸ್ ಆಫ್ ಇಂಡಿಯ, ಇಚಿಡಿಯಾನ್ ಕಮಿಟ ಫಾರ್ ಇಚಿಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ Indian National Committee for International Council of Museums, New Delhi ಇತ್ಯಾದಿ ಸಂಸ್ಥೆಗಳಲ್ಲಿ ಸದಸ್ಯ ರಾಗಿದ್ದರು. ತಿಪ್ಪೇಸ್ವಾಮಿಯವರಿಗೆ `ಕಲಾಕೋವಿದ ಚಿತ್ರಲೇಖನ ಚದುರ, `ಚಿತ್ರಕಲಾರತ್ನ ಚಿತ್ರಕಲಾಪ್ರವೀಣ' ಇತ್ಯಾದಿ ಬಿರುದುಗಳಲ್ಲದೆ ಕರ್ನಾಟಕ ರಾಜ್ಯ ಪ್ರಶಸ್ತಿ 1974, ಲಲಿತಕಲಾ ಅಕಾಡೆಮಿ ಪ್ರಶಸ್ತಿ (1981), ಎಂಟಿವಿ ಅಚಾರ್ಯ ಪ್ರಶಸ್ತಿ. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ (1997) ಗಳು ಬಂದಿದ್ದವು.
ನಿಧನ
ಬದಲಾಯಿಸಿತಿಪ್ಪೇಸ್ವಾಮಿಯವರು 7.4.2000 ರಂದು ನಿಧನರಾದರು.
2007ನೇ ಇಸವಿಯಲ್ಲಿ ಅವರ ನೆನಪಿಗಾಗಿ 'ಹರತಿ ಜ್ಯೋತಿ' ಎನ್ನುವ ಬೃಹತ್ ಸಂಸ್ಮರಣ ಗ್ರಂಥವನ್ನು ಪ್ರೊ. ಪರಮೇಶ ಅವರ ಸಂಪಾದಕತ್ವದಲ್ಲಿ ಹೊರ ತರಲಾಯಿತು. ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ಸಿದ್ದರಾಮಯ್ಯ, ಶ್ರೀ ಎಚ್. ವಿಶ್ವನಾಥ್, ಶ್ರೀ ಎಚ್.ಎಂ. ರೇವಣ್ಣ ಮುಂತಾದವರು ಭಾಗವಹಿಸಿದ್ದರು.
2013ರಲ್ಲಿ ಅವರ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಕಾgರ್ಯಕ್ರಮಗಳನ್ನು ನಡೆಸಿ ಮತ್ತು ಕಲೆ ಮತ್ತು ಜಾನಪದ ವಿಭಾಗದಲ್ಲಿ ಸಾಧನೆ ಮಾಡಿದ ಇಬ್ಬರಿಗೆ ಪ್ರಶಸ್ತಿ ಕೊಟ್ಟು ಪ್ರೋತ್ಸಾಹಿಸುವ ಉದ್ದೇಶದಿಂದ 'ಪಿ.ಆರ್. ತಿಪ್ಪೇಸ್ವಾಮಿ ಟ್ರಸ್ಟ್' ಅನ್ನು ಸ್ಥಾಪಿಸಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮ 'ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ', ಮೈಸೂರಿನ 'ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್' ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 25 ಕಲಾವಿದರಿಂದ ಮೂರು ದಿನಗಳ ಕಾಲ ಕಲಾ ಶಿಬಿರ ನಡೆಸಲಾಯಿತು. ಮಕ್ಕಳಿಗಾಗಿ ಚಿತ್ರ ಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲ ಕಲೆ ಮತ್ತು ಜಾನಪದಕ್ಕೆ ಸಂಬಂಧಪಟ್ಟಂತೆ ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಹಿರಿಯ ಕಲಾವಿದ ಎ. ಎಸ್. ಪಾಟೀಲ್ ಅವರಿಗೆ ಈ ಸಂಧರ್ಭದಲ್ಲಿ ಪಿ.ಆರ್.ಟಿ. ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂರು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಅಂದಿನ ಸುತ್ತೂರು ಮಠದ ಶ್ರೀ ಶ್ರೀ ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು, ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ, ಮಹದೇವ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್, ಹಿರಿಯ ಸಾಹಿತಿಗಳಾದ ದೇಜಗೌ ಮುಂತಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಿ.ಆರ್.ಟಿ. ಅವರ ನೆನಪಿನಲ್ಲಿ 'ಕಾಯಕ ಯೋಗಿ' ಎನ್ನುವ ಸ್ಮರಣ ಸಂಚಿಕೆಯನ್ನು ಶ್ರೀ ಮಾನಸ ಅವರ ಸಂಪಾದಕತ್ವದಲ್ಲಿ ಹೊರ ತರಲಾಯಿತು.
ಆ ನಂತರ ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಉದಾ; ಚಿತ್ರದುರ್ಗ, ಗುಲ್ಬರ್ಗ, ಬೆಳಗಾವಿ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಮುಂತಾದ ಕಡೆಗಳಲ್ಲಿ 'ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ' ಕಾರ್ಯಕ್ರಮವನ್ನು ಏರ್ಪಡಿಸಿ ಹಿರಿಯ ಚಿತ್ರ ಕಲಾವಿದರು ಮತ್ತು ಜಾನಪದ ಕಲಾವಿದರಿಗೆ ಕಲೆ ಮತ್ತು ಜಾನಪದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ತುಮಕೂರಿನಲ್ಲಿ ಅವರ ಹೆಸರಿನಲ್ಲಿ, ಅವರ ಅಭಿಮಾನಿಗಳು ಕಲಾಗ್ಯಾಲರಿಯೊಂದನ್ನು ಸ್ಥಾಪಿಸಿ ರುವುದಲ್ಲದೆ ಪ್ರತಿ ವರ್ಷ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Drawings
- Fan Page Archived 2013-07-30 ವೇಬ್ಯಾಕ್ ಮೆಷಿನ್ ನಲ್ಲಿ.
- P.R. Thippeswamy Balaga (Facebook Account
- Article
- Tribute Archived 2013-01-03 at Archive.is
- Poem in his Memory
- Kannada News
- PRT Kala Sambhrama Archived 2016-05-27 ವೇಬ್ಯಾಕ್ ಮೆಷಿನ್ ನಲ್ಲಿ.