ಟ್ವಿಸ್ಟರ್ (೧೯೯೬ರ ಚಲನಚಿತ್ರ)
ಟ್ವಿಸ್ಟರ್ ೧೯೯೬ ನೆಯ ಇಸವಿಯಲ್ಲಿ ಅಮೆರಿಕದಲ್ಲಿ ತೆರೆಕಂಡ ಒಂದು ದಾರುಣ/ರೋಚಕ ಚಲನಚಿತ್ರ. ಇದರಲ್ಲಿಹೆಲನ್ ಹಂಟ್ ಮತ್ತು ಬಿಲ್ ಪ್ಯಾಕ್ಸ್ ಟನ್ "ಚಂಡಮಾರುತ ಬೆಂಬತ್ತುವವರ" ಪಾತ್ರವಹಿಸಿದ್ದು ಸುಂಟರಗಾಳಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದವರಾಗಿರುತ್ತಾರೆ. ಈ ಚಿತ್ರದ ನಿರ್ದೇಶಕರು ಜ್ಯಾನ್ ಡಿ ಬಾಂಟ್. ಈ ಚಲನಚಿತ್ರವು ಮೈಕಲ್ ಕ್ರಿಕ್ಟನ್ ಮತ್ತು ಅನ್ನೆ-ಮೇರಿ ಮಾರ್ಟಿನ್ ಬರೆದ ಕಥಾವಸ್ತುವನ್ನು ಅವಲಂಬಿಸಿದೆ. ಇದರ ಕಾರ್ಯಕಾರಿ ನಿರ್ಮಾಪಕರಾಗಿದ್ದವರು ಸ್ಟೀವನ್ ಸ್ಪೀಲ್ ಬರ್ಗ್, ವಾಲ್ಟರ್ ಪಾರ್ಕ್ಸ್, ಲಾರಿ ಮೆಕ್ ಡೊನಾಲ್ಡ್ ಮತ್ತು ಜೆರಾಲ್ಡ್ ಆರ್. ಮೋಲೆನ್. ಟ್ವಿಸ್ಟರ್ ೧೯೯೬ ರಲ್ಲಿ ಸ್ವದೇಶದಲ್ಲಿ ಗರಿಷ್ಠ ಗಳಿಕೆ ಹೊಂದಿದ ಚಿತ್ರಗಳ ಪೈಕಿ ಎರಡನೆಯ ಸ್ಥಾನದಲ್ಲಿದ್ದಿತು; ಒಂದು ಅಂದಾಜಿನ ಪ್ರಕಾರ ಯುಎಸ್ ನಲ್ಲಿ ಆ ಚಿತ್ರದ ೫೫ ಮಿಲಿಯನ್ ಟಿಕೆಟ್ ಗಳು ಮಾರಾಟವಾದವು.
Twister | |
---|---|
ಚಿತ್ರ:Twistermovieposter.jpg | |
Directed by | Jan de Bont |
Written by | Michael Crichton Anne-Marie Martin |
Produced by | Ian Bryce Steven Spielberg Michael Crichton Kathleen Kennedy |
Starring | Helen Hunt Bill Paxton Jami Gertz Cary Elwes Philip Seymour Hoffman Alan Ruck Zach Grenier |
Cinematography | Jack N. Green |
Edited by | Michael Kahn |
Music by | Mark Mancina Eddie Van Halen |
Production company | |
Distributed by | Warner Bros. (US) Universal Studios (International) |
Release date | ಮೇ 10, 1996 |
Running time | ೧೧೩ minutes |
Country | United States |
Language | English |
Budget | $೭೫ million |
Box office | $೪೯೪,೪೭೧,೫೨೪ |
ಈ ಚಿತ್ರದಲ್ಲಿ ಬಿರುಗಾಳಿ ಬೆಂಬತ್ತುವವರ ಒಂದು ತಂಡವು ಇದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಸಾಧನವೊಂದನ್ನು ಕರಾರುವಾಕ್ಕಾಗಿಸಲು ಪ್ರಯತ್ನಿಸುತ್ತಾರೆ; ಈ ಸಾಧನವನ್ನು ಸುಂಟರಗಾಳಿಯ ಮಧ್ಯಭಾಗದಲ್ಲಿನ ನಳಿಕೆಯಂತಹ ಭಾಗದಲ್ಲಿ ಸೇರಿಸಲು ಅನುವಾಗುವಂತೆ ರೂಪಿಸುವುದು ಅವರ ಯೋಜನೆ. ಓಕ್ಲಹೋಮಾದ ಅಡ್ಡಗಲಕ್ಕೆ ಉಂಟಾದ ಚಂಡಮಾರುತದ ಸಂದರ್ಭದಲ್ಲಿ ಇದೇ ರೀತಿಯ ಮತ್ತೊಂದು ಸಲಕರಣೆಯನ್ನು ಹೊಂದಿದ್ದ, ಇವರಿಗಿಂತಲೂ ಹೆಚ್ಚಿನ ಬಂಡವಾಳ ಹೊಂದಿದ್ದ ತಂಡದವರೊಡನೆ ಈ ಬಾಬ್ತಿನಲ್ಲಿ ಪೈಪೋಟಿ ನಡೆದಿತ್ತು. ಈ ಚಲನಚಿತ್ರದ ಕಥೆಯು NOAAಯ VORTEXನಂತಹ ಯೋಜನೆಗಳ ನಾಟಕರೂಪಕ್ಕಿಳಿಸಿದ ಕ್ರಮವಾಗಿದೆ ಹಾಗೂ ಡೊರೋತಿ ಎಂದು ಕರೆಯಲ್ಪಡುವ ಸಾಧನವು ೧೯೮೦ ರಲ್ಲಿ NSSL ಬಳಸಿದ TOTOದ ತದ್ರೂಪವಾಗಿದೆ.
ಟ್ವಿಸ್ಟರ್ DVD ವಿಧ[೧] ದಲ್ಲಿ ಬಿಡುಗಡೆ ಕಂಡ ಮೊದಲ ಹಾಲಿವುಡ್ ಸಾಕ್ಷ್ಯಚಿತ್ರ ಹಾಗೂHD DVDಯಲ್ಲಿ ಬಿಡುಗಡೆಗೊಂಡ ಕೊನೆಯ ಚಿತ್ರವಾಗಿರುವುದು ಗಮನಾರ್ಹವಾದ ಅಂಶವಾಗಿದೆ.[೨] ನಂತರದ ದಿನಗಳಲ್ಲಿ ಟ್ವಿಸ್ಟರ್ ಅನ್ನು ಬ್ಲೂ-ರೇ ಡಿಸ್ಕ್ ನಲ್ಲೂ ಬಿಡುಗಡೆ ಮಾಡಲಾಗಿದೆ. ೧೯೯೭ ರಲ್ಲಿ ಈ ಚಿತ್ರವು ಎರಡು ಅಕಾಡೆಮಿ ಪುರಸ್ಕಾರಗಳಿಗಾಗಿ - ಶ್ರೇಷ್ಠ ಪರಿಣಾಮಕಾರಿ ದೃಶ್ಯಗಳು ಹಾಗೂ ಶ್ರೇಷ್ಠ ಸದ್ದು ವಿಭಾಗಗಳಡಿಯಲ್ಲಿ - ನಾಮನಿರ್ದೇಶಿತವಾಗಿತ್ತು.
ಕಥಾವಸ್ತು
ಬದಲಾಯಿಸಿಜೂನ್ ೧೯೬೯ರಲ್ಲಿ ಒಂದು ಸಣ್ಣವಯಸ್ಸಿನವನ್ನೊಳಗೊಂಡ ಕುಟುಂಬವು ಚಂಡಮಾರುತದಿಂದ ತಪ್ಪಿಸಿಕೊಳ್ಳಲು ಒಂದು ಆಶ್ರಯವಿರುವೆಡೆ ಸೇರುತ್ತಾರೆ. ತನ್ನ ಕುಟುಂಬವನ್ನು ಉಳಿಸುವ ಸಲುವಾಗಿ, ತಂದೆಯು ಆ ನೆಲಮಾಳಿಗೆಯ ಬಾಗಿಲನ್ನು ತೆರೆದುಕೊಳ್ಳದ ರೀತಿಯಲ್ಲಿ ಅದುಮಿಟ್ಟುಕೊಳ್ಳಲು ಯತ್ನಿಸುತ್ತಾರೆ, ಆದರೆ ಚಂಡಮಾರುತದ ಸುಳಿಯಲ್ಲಿ ಸೆಳೆಯಲ್ಪಟ್ಟು ಸಾವನ್ನಪ್ಪುತ್ತಾರೆ. ಈ ದಾರುಣವಾದ ದೃಶ್ಯವನ್ನು ಆ ವ್ಯಕ್ತಿಯ ಸತಿ ಮತ್ತು ಮಗಳಾದ ಜೋ ಭೀತಿಯಿಂದ ನೋಡುತ್ತಿರುತ್ತಾರೆ; ತಂದೆಯನ್ನು ಚಂಡಮಾರುತದ ಅಪ್ಪಳಿಸುವಿಕೆಯಿಂದ ಕಳೆದುಕೊಂಡರೂ, ಆ ದಾರುಣವಾದ ದೃಶ್ಯದ ನಡುನಡಯವೆಯೂ ಜೋಗೆ ಚಂಡಮಾರುತದ ನಳಿಕೆಯ ಬಗ್ಗೆ ವಿಶೇಷ ಆಸಕ್ತಿ ಮೂಡುತ್ತದೆ. ಈ ದೃಶ್ಯವು ಮಾಸುತ್ತಾ ಸಾಗಿ, ಆ ಸ್ಥಳದಲ್ಲಿ ಪ್ರಸ್ತುತದಲ್ಲಿ ಕಕ್ಷೆಯಲ್ಲಿರುವ ವಾತಾವರಣಸಂಬಂಧಿ ಉಪಗ್ರಹವಾದ GOES ೮ ಮೂಡಿಬರುತ್ತದೆ; ದೃಶ್ಯದಲ್ಲಿ ನ್ಯಾಷನಲ್ ಸಿವಿಯರ್ ಸ್ಟಾರ್ಮ್ಸ್ ಲೆಬಾರೇಟರಿ (NSSL)ಯ ವಾತಾವರಣಶಾಸ್ತ್ರತಜ್ಞರು ಓಕ್ಲಹೋಮಾದಲ್ಲಿ ಏಳುತ್ತಿರುವ ಬಿರುಗಾಳಿಯ ಬಗ್ಗೆ ಚರ್ಚಿಸುತ್ತಾ ಅದರಿಂದ ಸುಂಟರಗಾಳಿಗಳ ಸರಣಿಗಳೇ ಉಂಟಾಗಬಹುದೆಂದು ಮಾತನಾಡಿಕೊಳ್ಳುತ್ತಿರುವುದು ಕಂಡುಬರುತ್ತದೆ.
ಏತನ್ಮಧ್ಯೆ ನಿವೃತ್ತ ಬಿರುಗಾಳಿ ಬೆಂಬತ್ತುವವರಾದ ಬಿಲ್ ಹಾರ್ಡಿಂಗ್ (ಬಿಲ್ ಪ್ಯಾಕ್ಸ್ ಟನ್) ಮತ್ತು ಅವರ ಭಾವಿ ಪತ್ನಿ ಡಾ. ಮೆಲಿಸಾ ರೀವ್ಸ್ (ಜೇಮಿ ಗೆರ್ಟ್ಝ್) ಬಿಲ್ ರವರ ಮಾಜಿ ಬಿರುಗಾಳಿ ಬೆಂಬತ್ತುವ ತಂಡವನ್ನು ಭೇಟಿಯಾಗಿ ಆ ತಂಡದಲ್ಲಿನ ಬಿಲ್ ರಿಂದ ಸಧ್ಯದಲ್ಲೇ ವಿಚ್ಛೇದನಗೊಳ್ಳಲಿದ್ದ ಡಾ. ಜೋ ಹಾರ್ಡಿಂಗ್ (ಹೆಲೆನ್ ಹಂಟ್) ರಿಂದ ಅಂತಿಮ ವಿಚ್ಛೇದನ ಪತ್ರಗಳನ್ನು ಪಡೆಯಲು ಸಾಗುತ್ತಿದ್ದಾರೆ. ಜೋ ತನ್ನ ತಂದೆಯ ಮರಣವಾದಂದಿನಿಂದ ಸಾಧ್ಯವಾದಷ್ಟೂ ಸುಂಟರಗಾಳಿಗಳನ್ನು ಬೇಟೆಯಾಡಿ, ತನ್ನ ತಂದೆಗಾದ ಪರಿಸ್ಥಿತಿ ಇನ್ನಾರಿಗೂ ಆಗದಿರುವಂತೆ ಮಾಡುವ ಯತ್ನದಲ್ಲಿದ್ದರು. ಆ ತಂಡದಲ್ಲಿ ಜೋ ಅಲ್ಲದೆ ವಿಲಕ್ಷಣ ಬುದ್ಧಿಯ ಡಸ್ಟಿ ಡೇವಿಸ್ (ಫಿಲಿಪ್ ಸೈಮರ್ ಹಾಫ್ ಮನ್), ಚಾಲಕರಾದ ರಾಬರ್ಟ್ "ರ್ಯಾಬಿಟ್" ನ್ಯುರಿಕ್ (ಅಲನ್ ರಕ್) ಛಾಯಾಗ್ರಾಹಕರಾದ ಲಾರೆನ್ಸ್ (ಜೆರೆಮಿ ಡೇವೀಸ್) ಜೋಯಿ (ಜೋಯಿ ಸ್ಲ್ಯಾಟ್ನಿಕ್), ರ್ಯಾಬಿಟ್ ರ ಚಾಲಕ ಅಲನ್ ಸ್ಯಾಂಡರ್ಸ್(ಸೀನ್ ವೇಲೆನ್), ಟಿಮ್ "ಬೆಲ್ಟ್ ಝರ್" ಲೂಯಿಸ್ (ಟಾಡ್ ಫೀಲ್ಡ್), ಬೆಲ್ಟ್ ಝರ್ ರೊಡನೆ ಪ್ರಯಾಣ ಮಾಡುವ ಹೇಯ್ನ್ಸ್(ವೆಂಡೀ ಜೋಸ್ಪೆಹರ್) ಮತ್ತು ಜೇಸನ್ "ಪ್ರೀಚರ್" ರೋವ್ (ಸ್ಕಾಟ್ ಥಾಮ್ಸನ್) ಇದ್ದರು.
ಬಿಲ್ ಬಗ್ಗೆ ಇನ್ನೂ ಪ್ರೀತಿ ಹೊಂದಿದ್ದ ಜೋ ತಮ್ಮ ವಿವಾಹವು ಕೊನೆಗೊಳ್ಳುವುದನ್ನು ಬಯಸದೆ ಕಾಲವನ್ನು ಮುಂದೂಡಲು ಯತ್ನಿಸುತ್ತಾರೆ. ಬಿಲ್ ರ ಚಿಂತನೆಗೆ ಪೂರಕವಾದ ಸುಂತರಗಾಳಿ ವಿಶ್ಲೇಷಕ ಸಾಧನವಾದ 'ಡೊರೋತಿ'ಯು ನಿರ್ಮಿತವಾಗಿರುವುದರಿಂದ ಬಿಲ್ ತಮ್ಮೊಡನೆ ಬರಬೇಕೆಂಬುದು ತನ್ನ ಆಸೆ ಎಂದು ಜೋ ಹೇಳುತ್ತಾರೆ. ಆ ಸಾಧನವನ್ನು ಸುಂಟರಗಾಳಿಯ ಪಥದಲ್ಲಿಡುವುದರ ಮೂಲಕ ಅದನ್ನು ಒಳಗಿನಿಂದ ಅಳೆಯುವ ಹಂಚಿಕೆ ಇರುತ್ತದೆ. "ಡೊರೋತಿ" ಎಂದು ಕರೆಸಿಕೊಳ್ಳುವ ನಾಲ್ಕು ವಾತಾವರಣ ಮಾಪಕ ಯಂತ್ರಗಳನ್ನು ನಿರ್ಮಿಸಲಾಗಿತ್ತು. ಹೇಯ್ನ್ಸ್ ಸುಂಟರಗಾಳಿಯ ಚಟುವಟಿಕೆಗಳ ಬಗ್ಗೆ ಅವರಿಗೆ ಹೇಳುತ್ತಾರೆ ಮತ್ತು ಅವರೆಲ್ಲರೂ ಹೊರಹೊರಡುತ್ತಾರೆ. ಡಾ. ಜೊನಾಸ್ ಮಿಲ್ಲರ್(ಕ್ಯಾರಿ ಎಲ್ವೆಸ್) ಮುಖಂಡತ್ವದ ಬಿಲ್ ರ ಪ್ರತಿಸ್ಪರ್ಧಿ ತಂಡವು ಜೊನಾಸ್ ರ ಸಹಾಯಕರಾದ ಎಡ್ಡಿ (ಝಾಕ್ ಗ್ರೆನಿಯರ್) ರೊಡನೆ ಆಗಮಿಸುತ್ತದೆ.
ಬಿಲ್ ರ ಪ್ರಕಾರ ಜೊನಾಸ್ ಬಿರುಗಾಳಿ ಬೆಂಬತ್ತುವ ವಿಷಯದಲ್ಲಿ ತೊಡಗಿಕೊಂಡಿರುವುದು "ಹಣಕ್ಕಾಗಿಯೇ ಹೊರತು ವಿಜ್ಞಾನಕ್ಕಾಗಿ ಅಲ್ಲ". ಜೊನಾಸ್ ಒಂದು ಸ್ಥಳೀಯ ಪತ್ರಿಕೆಗೆ ಸಂದರ್ಶನ ನೀಡುತ್ತಿರುವುದನ್ನು ಬಿಲ್ ನೋಡುತ್ತಾರೆ ಹಾಗೂ ಜೊನಾಸ್ ತನ್ನ ಡೊರೋತಿ ವಾತಾವರಣ ಯಂತ್ರದ ಯೋಚನೆಗಳನ್ನು ಕದ್ದು, ತಮ್ಮದೇ ಆದ D.O.T. ಅಥವಾ ಡಿಜಿಟಲ್ ಆರ್ಫಾಗ್ರಾಫಿಕ್ ಟೆಲಿಮೀಟರ್ ಎಂಬ ಆವೃತ್ತಿಯನ್ನು ನಿರ್ಮಿಸದ್ದಾರೆ ಎಂಬುದನ್ನು ಆ ಸಂದರ್ಶನದ ಮೂಲಕ ಅರಿಯುತ್ತಾರೆ. ಬಿಲ್ ತಮ್ಮ ಆಲೋಚನೆಯನ್ನು ಜೊನಾಸ್ ಕದ್ದಿರುವರೆಂದು ಆರೋಪಿಸುತ್ತಾರೆ, ಆದರೆ ಜೊನಾಸ್ ಆ ಆಲೋಚನೆಯು "ಸಾಕಾರಗೊಳ್ಳದ ಆಲೋಚನೆ"ಯಾಗಿತ್ತು ಎನ್ನುತ್ತಾರೆ. ಜೊನಾಸ್ ರನ್ನು ಸೋಲಿಸುವ ಸಲುವಾಗಿ ಬಿಲ್ ತಂಡದೊಡನೆ ಒಂದು ದಿನದ ಮಟ್ಟಿಗೆ ಉಳಿಯಲು ನಿರ್ಧರಿಸುತ್ತಾರೆ.
ಬಿಲ್ ರ ತಂಡ ಹೊರಹೊರಡುತ್ತದೆ ಮತ್ತು ಬಿಲ್ ಮತ್ತು ಜೋ ತಮ್ಮ ಮದುವೆಯ ಜೀವನದ ಬಗ್ಗೆ ಮುಕ್ತವಾದ ಚರ್ಚೆ ನಡೆಸುತ್ತಾರೆ. ಬೆಲ್ಟ್ ಝರ್ F೧ ದರ್ಜೆಯ ಒಂದು ಸುಂಟರಗಾಳಿಯು ಹತ್ತಿರದ ಮೈದಾನದಲ್ಲಿ ಸುಳಿಯುತ್ತಿರುವುದನ್ನು ಗಮನಿಸುತ್ತಾರೆ ಮತ್ತು ತಂಡದ ಗಮನವನ್ನು ಅತ್ತ ಸೆಳೆಯುತ್ತಾರೆ. ಆ ಸುಂಟರಗಾಳಿಯ ಮುಂಭಾಗಕ್ಕೆ ತಲುಪುವ ಸುಲುವಾಗಿ ಬಿಲ್ ಮತ್ತು ಜೋ ಒಂದು ಹಳ್ಳಕ್ಕೆ ಧುಮುಕುತ್ತಾರೆ, ಆದರೆ ಸುಂಟರಗಾಳಿ ಸಮೀಪಿಸುತ್ತಿದ್ದಂತೆ ಅವರು ಹಳ್ಳದಿಂದ ಏರಿ ಬರುವುದರಲ್ಲಿ ವಿಫಲರಾಗುತ್ತಾರೆ. ಅವರು ಒಂದು ಸಣ್ಣ ಮರದ ಸೇತುವೆಗೆ ಡಿಕ್ಕಿ ಹೊಡೆದು, ಅದರ ಕೆಳಗೇ ರಕ್ಷಣೆ ಪಡೆಯುತ್ತಾರೆ. ಜೋ ಸುಂಟರಗಾಳಿಯನ್ನು ಹತ್ತಿರದಿಂದ ನೋಡಲು ಬಯಸುತ್ತಾರೆ, ಆದರೆ ಬಿಲ್ ಅವರನ್ನು ತಡೆಯುತ್ತಾರೆ; ಅದೇ ಕ್ಷಣದಲ್ಲಿ ಸುಂಟರಗಾಳಿಯು ಜೋ ರ ಟ್ರಕ್ ಅನ್ನು ನೆಲದಿಂದ ಮೇಲಕ್ಕೆ ಎತ್ತೊಯ್ಯುತ್ತದೆ. ಜೋ ರ ಟ್ರಕ್ ಬಿಲ್ ರ ಟ್ರಕ್ ಅನ್ನು ಓಡಿಸುತ್ತಿರುವ ಮೆಲಿಸಾರ ಮುಂದೆ ಬೀಳುತ್ತದೆ. ಮೆಲಿಸಾ ಅದನ್ನು ಸುತ್ತುವರಿದು ವಾಹನ ಚಲಾಯಿಸಿ ಡಿಕ್ಕಿಯಾಗುವುದನ್ನು ಗುಲಗಂಜಿಯಷ್ಟು ಅಂತರದಿಂದ ತಪ್ಪಿಸುತ್ತಾರೆ.
ಜೋ ಆಗಿರುವ ಜಖಂ ಅನ್ನು ಪರೀಕ್ಷಿಸುತ್ತಿದ್ದಂತೆಯೇ ಬಿಲ್ ಅವರಿಗೆ ಸಮಾಧಾನ ಹೇಳುತ್ತಾರೆ ಮತ್ತು ನಾಶಗೊಂಡ ಡೊರೋತಿ ೧ ಯಂತ್ರದಿಂದ ಕೆಲವು ಸೆನ್ಸರ್ ಗಳನ್ನು ತೆಗೆದುಕೊಳ್ಳುತ್ತಾರೆ. ಆ ವೇಳೆಗೆ ಜೊನಾಸ್ ತ ತಂಡ ಅಲ್ಲಿಗೆ ತಲುಪುತ್ತದೆ, ಆದರೆ ಸುಂಟರಗಾಳಿಯನ್ನು ನೋಡಲು ಬಹಳವೇ ತಡವಾಗಿ ಬಂದುದರಿಂದ ತಮ್ಮ ವಾಹನವನ್ನು ಮುಂದಕ್ಕೆ ಚಲಿಸುತ್ತಾರೆ. ತನ್ನ ಸ್ವಂತ ಟ್ರಕ್ ಇಲ್ಲದ ಜೋ ಡೊರೋತಿ ಯಂತ್ರವನ್ನು ಸಾಗಿಸಿಕೊಂಡುಹೋಗಲು ಬಿಲ್ ರ ಹೊಸ ಟ್ರಕ್ ಅನ್ನೇ ಬಳಸಲು ಮನವೊಲಿಸುತ್ತಾರೆ.
ಬಿಲ್ ರ ತಂಡ ಮತ್ತೆ ಹೊರಡುತ್ತದೆ; ಜೋ, ಬಿಲ್ ಮತ್ತು ಮೆಲಿಸಾ ಬಿಲ್ ರ ಟ್ರಕ್ ನಲ್ಲೇ ಪ್ರಯಾಣ ಮುಂದುವರಿಸುತ್ತಾರೆ. ಮತ್ತೊಂದು ಸುಂಟರಗಾಳಿ, ಈ ಬಾರಿ ಮೊದಲಿನದಕ್ಕಿಂತಲೂ ಕೊಂಚ ದೊಡ್ಡದಾದ F೨, ಧರೆಗಿಳಿದಿರುತ್ತದೆ; ಬಿಲ್ ಮತ್ತು ಜೊನಾಸ್ ಇಬ್ಬರ ತಂಡಗಳೂ ಅದನ್ನು ಮಧ್ಯದಲ್ಲೇ ಸಂಧಿಸಲು ಸಾಗುತ್ತಿರುತ್ತಾರೆ. ಸುಂಟರಗಾಳಿ ತನ್ನ ಪಥವನ್ನು ಬದಲಾಯಿಸುತ್ತದೆ ಎಂದು ಬಿಲ್ ಭಾವಿಸುತ್ತಾರೆ ಹಾಗೂ ಅವರ ತಂಡವು ಒಂದು ಹಿಂಬದಿಯ ರಸ್ತೆಯತ್ತ ಸಾಗುತ್ತದೆ. ಬಿಲ್ ಅನತಿಕಾಲದಲ್ಲಿ ಒಂದು ಸೇತುವೆಯನ್ನು ತಲುಪುತ್ತಾರೆ ಹಾಗೂ ಅವರೆಲ್ಲರೂ ಒಂದು ನೀರಿನ ಬುಗ್ಗೆಯಲ್ಲಿ ಸಿಲುಕಿಕೊಳ್ಳುತ್ತಾರೆ ಮತ್ತು ಆ ಬುಗ್ಗೆಯು ಅವರನ್ನು ಗಿರ್ರನೆ ತಿರುಗಿಸುತ್ತದೆ. ಅವರ ತಂಡವು ಈ ಘಟನೆ ಜರುಗಿದ ಮರುಕ್ಷಣ ಬರುತ್ತದೆ ಹಾಗೂ ಜೋ ತಂಡದೊಂದಿಗೆ ಆ ಆನಂದವನ್ನು ಹಂಚಿಕೊಳ್ಳುತ್ತಿರುವಂತೆಯೇ ಮೆಲಿಸಾ ಅಳತೊಡಗಿ ಬಿಲ್ ರ ಹಿಂದಿನ ಜೀವನಶೈಲಿಯ ಬಗ್ಗೆ ಪ್ರಶ್ನೆಗಳನ್ನೆಸೆಯುತ್ತಾರೆ.
ತಂಡದವರೆಲ್ಲರೂ ಜೋ ರ ಚಿಕ್ಕಮ್ಮ ಮೆಗ್ ಗ್ರೀನ್ (ಲೂಯಿಸ್ ಸ್ಮಿತ್) ರನ್ನು ಭೇಟಿಯಾಗಲು ಸಮೀಪದ ಪಟ್ಟಣವಾದ ವಕೀಟಾ, ಓಕ್ಲಹೋಮಾಗೆ ತೆರಳಿ, ಅಲ್ಲಿಯೇ ಆಹಾರ ಸೇವಿಸಿ, ವಿಶ್ರಮಿಸುತ್ತಾರೆ. ಮೆಗ್ ಜೋ ರನ್ನು ಪ್ರತ್ಯೇಕವಾಗಿ ಕರೆದು ಜೋ ಮತ್ತು ಬಿಲ್ ರ ವಿವಾಹವು ಕೊನೆಗೊಂಡಿದೆ, ಏಕೆಂದರೆ "ಬಿಲ್ ತಾನು ಹೇಳಿದಂತೆ ನಡೆದುಕೊಳ್ಳಲಿಲ್ಲ" ಎನ್ನುತ್ತಾರೆ.
ತಂಡವು ಟಿವಿ ವೀಕ್ಷಿಸುತ್ತಿರುವಾಗ, ಟಿವಿಯಲ್ಲಿ ಒಂದು F೩ ಸುಂಟರಗಾಳಿಯು ಕ್ರಿಯಾಶೀಲವಾಗಿದೆ ಎಂಬ ಸುದ್ದಿ ಕೇಳಿದ ತಂಡ ಮತ್ತೆ ಅದನ್ನು ಕಾಣಲು ಹೊರಡುತ್ತದೆ. ಬಿಲ್ ಮತ್ತು ಜೋ ಬಿಲ್ ರ ಟ್ರಕ್ ನಲ್ಲಿ ಒಟ್ಟಿಗೆ ಹೊರಡುತ್ತಾರೆ ಮತ್ತು ಮೆಲಿಸಾ ಡಸ್ಟಿಯೊಡನೆ ಡಸ್ಟಿಯ ಪರಿವರ್ತಿತ ಶಾಲಾ ಬಸ್ ನಲ್ಲಿ ಹೊರಡುತ್ತಾರೆ. ಜೊನಾಸ್ ರ ತಂಡವನ್ನು ಹಿಂದಿಕ್ಕುವ ಯತ್ನದಲ್ಲಿ ಅವರಿಗೇ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದಲ್ಲೇ ಪಾರಾಗುತ್ತಾರೆ. ತಮ್ಮ ಕಂಪ್ಯೂಟರ್ ನ ಪ್ರಕಾರ ಸುಂಟರಗಾಳಿಯು ಅದೇ ದಾರಿಯಲ್ಲಿ ತಮ್ಮತ್ತಲೇ ಸಾಗುತ್ತಿರುವುದರಿಂದ, ಬಿಲ್ ರ ತಂಡವು ಅದು ಎಲ್ಲಿರಬುದೆಂದು ಊಹಿಸಲು ಯತ್ನಿಸುತ್ತದೆ. ಸುಂಟರಗಾಳಿಯು ಬೆಟ್ಟದ ಮೇಲೆ ಇದೆಯೆಂದು ಬಿಲ್ ಮತ್ತು ಜೋ ಅರಿತುಕೊಳ್ಳುತ್ತಾರೆ ಹಾಗೂ ಅದನ್ನು ಸಮೀಪಿಸುವ ಸಲುವಾಗಿ ಅವರು ಆಲಿಕಲ್ಲಿನ ಮಳೆಗಳಯನ್ನೂಹಾದು ಸಾಗುತ್ತಾರೆ. ಸುಂಟರಗಾಳಿಯನ್ನು ಕಾಣುತ್ತಿದ್ದಂತೆಯೇ ಬಿಲ್ ಮತ್ತು ಜೋ ಡೊರೋತಿ ೨ ಅನ್ನು ಸ್ಥಾಪಿಸಲು ಯತ್ನಿಸುತ್ತಾರೆ, ಆದರೆ ವಿಳಂಬವಾಗಿಬಿಡುತ್ತದೆ. ವಿದ್ಯುತ್ ಕಂಬವೊಂದು ಟ್ರಕ್ ನ ಮೇಲೆ ಬೀಳುತ್ತದೆ ಮತ್ತು ಡೊರೋತಿ ೨ ಹಾಳಾಗುತ್ತದೆ. ಸುಂಟರಗಾಳಿಯು ಮತ್ತೆ ಮೋಡಗಳತ್ತ ಸಾಗುತ್ತದೆ. ಜೋ ಚೆಲ್ಲಾಪಿಲ್ಲಿಯಾದ ಸೆನ್ಸರ್ ಗಳನ್ನು ಹೆಕ್ಕಿ ಜೋಡಿಸಿಕೊಳ್ಳಲು ಯತ್ನಿಸುತ್ತಾರೆ, ಆದರೆ ಸುಂಟರಗಾಳಿಯು ಕೇವಲ ಕಡಿಮೆಯಾಗಿದೆಯಷ್ಟೆ, ಮತ್ತೆ ಆ ಸ್ಥಳವನ್ನು ಅಪ್ಪಳಿಸಲು ಸಜ್ಜಾಗುತ್ತಿದೆ ಎಂಬುದನ್ನು ಅರಿತ ಬಿಲ್, ಜೋ ರನ್ನು ಟ್ರಕ್ ನೊಳಕ್ಕೆ ಎಳೆದುಕೊಳ್ಳುತ್ತಾರೆ; ಆ ಸಮಯಕ್ಕೆ ಸರಿಯಾಗಿ ಸುಂಟರಗಾಳಿ ಮತ್ತೆ ನೆಲವನ್ನು ಅಪ್ಪಳಿಸುತ್ತದೆ.
ಅವರು ಒಂದು ಸುರಕ್ಷಿತವೆನಿಸುವಷ್ಟು ದೂರಕ್ಕೆ ಚಲಿಸುತ್ತಾರೆ; ಅಲ್ಲಿ ಜೋ ಟ್ರಕ್ ನಿಂದ ಕೆಳಹಾರಿ ಮತ್ತೆ ಚೆಲ್ಲಾಪಿಲ್ಲಿಯಾದ ಸೆನ್ಸರ್ ಗಳನ್ನು ಸಂಗ್ರಹಿಸತೊಡಗುತ್ತಾರೆ. ಬಿಲ್ ತನ್ನನ್ನು ಆ ಯತ್ನದಿಂದ ತಡೆಯಲು ಯತ್ನಿಸಿದುದಕ್ಕಾಗಿ ಜೋ ಕೋಪಗೊಳ್ಳುತ್ತಾರೆ, ಆದರೆ ಬಿಲ್ ಜೋ ರ ಕುಟುಂಬಕ್ಕೆ ಆದ ದುರಂತವು ಮತ್ತೆ ಯಾರಿಗೂ ಆಗದಿರಲೆಂಬ ಯತ್ನದಲ್ಲಿ ಜಯಗಳಿಸಲು ಜೋ ಮನೋವಿಕಲ್ಪಿತರಾಗಿದ್ದಾರೆ ಎನ್ನುತ್ತಾರೆ. ಅಲ್ಲದೆ ಜೋ ಬಗ್ಗೆ ತಮ್ಮಲ್ಲಿ ಇನ್ನೂ ಭಾವನೆಗಳು ಉಳಿದಿವೆ ಎಂದು ಹೇಳುತ್ತಾರೆ. ಮೆಲಿಸಾ ಮತ್ತು ಜೋ ರ ಇಡೀ ತಂಡವು ಈ ಮಾತುಕತೆಯನ್ನು CB ರೇಡಿಯೋ ಮೂಲಕ ಕೇಳಿಸಿಕೊಳ್ಳುತ್ತದೆ.
ಬಿಲ್ ರ ತಂಡವು ಒಂದು ಡ್ರೈವ್-ಇನ್ ರಂಗಮಂದಿರವನ್ನು ತಲುಪುತ್ತದೆ, ಅಲ್ಲಿ ಜೋ ವಿಚ್ಛೇದನದ ಪತ್ರಗಳಿಗೆ ಸಹಿ ಹಾಕುತ್ತಾರೆ; ಇದೇ ಸಮಯದಲ್ಲಿ ಮೆಲಿಸಾ ರಸ್ತೆಯ ಆ ಬದಿಯಲ್ಲಿನ ಮೋಟೆಲ್ ನಲ್ಲಿ ಕುಳಿತು ಹತ್ತಿರದಲ್ಲಿನ ಇನ್ನಷ್ಟು ಸುಂಟರಗಾಳಿಗಳ ಬಗ್ಗೆ ವಾತಾವರಣ ವರದಿಯನ್ನು ವೀಕ್ಷಿಸುತ್ತಿದ್ದಾರೆ. ಡಸ್ಟಿ ರೆಡಾರ್ ಅನ್ನು ಗಮನಿಸುತ್ತಿದ್ದಾರೆ. ಡಸ್ಟಿ F೪ ಸುಂಟರಗಾಳಿಯು ತಮ್ಮತ್ತಲೇ ನೇರವಾಗಿ ಬರುತ್ತಿದೆ ಎಂದು ಬಿಲ್ ಗೆ ಎಚ್ಚರಿಕೆ ನೀಡುವಷ್ಟರಲ್ಲಿ ಮೆಲಿಸಾರ ಟಿವಿ ಮತ್ತು ಸೋಡಿ ನಿಲ್ದಾಣದಲ್ಲಿನ ಟಿವಿ ಎರಡೂ ತರಂಗಸ್ವೀಕೃತಿವಿಹೀನವಾಗುತ್ತವೆ. ಪ್ರತಿಯೊಬ್ಬರೂ ಒಂದು ಕಾರ್ ಮೆಕಾನಿಕ್ ನ ಗ್ಯಾರೇಜ್ ನ ಹಳ್ಳದಲ್ಲಿ ರಕ್ಷಣೆ ಪಡೆಯುತ್ತಾರೆ; ಜೋ ತನ್ನ ತಂದೆ ಸುಂಟರಗಾಳಿಗೆ ಸಿಲುಕಿ ತೀರಿಕೊಂಡಾಗ ಹೇಗೆ ಮಗುವಾಗಿ ಸುಂಟರಗಾಳಿಯನ್ನು ಕಂಡಿದ್ದರೋ, ಅದೇ ರೀತಿ ಮಂತ್ರಮುಗ್ಧಳಾಗಿ ಆ ಸುಂಟರಗಾಳಿ ಬರುವುದನ್ನು ವೀಕ್ಷಿಸುತ್ತಾರೆ; ಬಿಲ್ ರ ಕೂಗು ಅವರನ್ನು ಈ ಲೋಕದಿಂದ ಹೊರತರುತ್ತದೆ ಹಾಗೂ ಜೋ ರಂಗಮಂದಿರದ ಸಿಬ್ಬಂದಿಯನ್ನೂ ಅವರೂ ರಕ್ಷಣೆ ಪಡೆಯಲು ಕರೆತರುತ್ತಾರೆ. ಸುಂಟರಗಾಳಿ ರಂಗಮಂದಿರವನ್ನು ಸರ್ವನಾಶ ಮಾಡುತ್ತದೆ, ತಂಡದ ಹಲವಾರು ವಾಹನಗಳನ್ನು ಧ್ವಂಸ ಮಾಡುತ್ತದೆ ಮತ್ತು ಹಾರುವ ಒಂದು ಹಬ್ ಕ್ಯಾಪ್ (ಚಕ್ರದ ಹಬ್ ನ ಕವಚ) ತಲೆಗೆ ತಗುಲಿದುದರ ಪರಿಣಾಮವಾಗಿ ಪ್ರೀಚರ್ ಗಾಯಗೊಳ್ಳುತ್ತಾರೆ.
ಸುಂಟರಗಾಳಿ ಮುಂದೆ ಹೋಗುತ್ತದೆ, ಹಾಗೂ ತಂಡವು ಹಳ್ಳದಿಂದ ಹೊರಬಂದು ಆಗಿರುವ ನಷ್ಟದ ವೀಕ್ಷಣೆಯಲ್ಲಿ ತೊಡಗುತ್ತದೆ. ಡಸ್ಟಿ ರೆಡಾರ್ ನತ್ತ ನೋಡಿದಾಗ ಅದೇ ಸುಂಟರಗಾಳಿಯು ಈಗ ವಕೀಟಾದತ್ತ ಸಾಗುತ್ತಿರುವುದು ತಿಳಿಯುತ್ತದೆ - ಜೋ ಭಯಗ್ರಸ್ತರಾಗುತ್ತಾರೆ. ಚಿಕ್ಕಮ್ಮ ಮೆಗ್ ರ ಯೋಗಕ್ಷೇಮ ವಿಚಾರಿಸಲು ತಾವು ತೆರಳುತ್ತಿರುವುದಾಗಿ ಬಿಲ್ ಮೆಲಿಸಾಗೆ ಹೇಳುತ್ತಾರೆ; ಮೆಲಿಸಾ ಶಾಂತಚಿತ್ತದಿಂದ ಬಿಲ್ ರಿಂದ ಬೀಳ್ಕೊಳ್ಳುತ್ತಾ ಬಿಲ್ ಸುಂಟರಗಾಳಿಗಳನ್ನು ಬೆಂಬತ್ತುವುದಕ್ಕೆ ಸ್ಪರ್ಧಿಯಾಗಿ ತನ್ನ ಹಿಂದೆ ಬರುವುದನ್ನು ತಾನು ಬಯಸುವುದಿಲ್ಲವೆಂದು ಹೇಳುತ್ತಾರೆ. "ನಿಮ್ಮಿಂದ ದೂರ ಹೋಗಲು ನನಗೆ ಯಾವುದೇ ವಿಧವಾದ ಬೇಸರವಿಲ್ಲ, ನಮ್ಮ ಸಂಬಂಧವು ಇಂದಲ್ಲದಿದ್ದರೆ ನಾಳೆ ಮುರಿದುಬೀಳುವಂತಹದ್ದೇ ಆಗಿದ್ದಿತು, ನನಗಿಂತಲೂ ಜೋ ಗೆ ನಿಮ್ಮ ಅಗತ್ಯವಿದೆ" ಎಂದು ಮೆಲಿಸಾ ಹೇಳುತ್ತಾರೆ.
ಇಬ್ಬರೂ ವಕೀಟಾ ಸೇರುವ ವೇಳೆಗೆ ಆ ಪಟ್ಟಣವು ಸಂಪೂರ್ಣವಾಗಿ ಧ್ವಂಸವಾಗಿರುವುದನ್ನು ಕಾಣುತ್ತಾರೆ ಹಾಗೂ ಆ ಪಟ್ಟಣದವರಿಗೆ ಸುಂಟರಗಾಳಿಯ ಬಗ್ಗೆ ಎಚ್ಚರವನ್ನೂ ನೀಡಿರಲಿಲ್ಲವೆಂದು ಜೋ ಗೆ ಅರಿವಾಗುತ್ತದೆ. ಬಿಲ್ ಮತ್ತು ಜೋ ಮೆಗ್ ರ ಮನೆ ಇನ್ನೇನು ಕುಸಿದುಬೀಳಲಿರುವುದನ್ನು ಕಾಣುತ್ತಾರೆ. ಒಳಸರಿದಂತೆ, ಮೆಗ್ ಒಂದು ಪುಸ್ತಕದ ಕಪಾಟಿನ ಕೆಳಗೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣುತ್ತಾರೆ. ಮೆಗ್ ಮತ್ತು ಆಕೆಯ ನಾಯಿ ಮೋಸ್ ರನ್ನು ಜೋ ಮತ್ತು ಬಿಲ್ ರಕ್ಷಿಸುತ್ತಿದ್ದಂತೆಯೇ ಮನೆ ಕುಸಿದುಬೀಳುತ್ತದೆ. ಮೆಗ್ ಗೆ ಸುಂಟರಗಾಳಿಯು ಕೇವಲ "ಹಣೆಯ ಮೇಲೊಂದು ಬೋರೆ" ಹಾಗೂ ಒಂದು ಮುರಿದ ಮಣಿಕಟ್ಟಿನಷ್ಟು ಮಾತ್ರ ನಷ್ಟ/ನೋವು ಉಂಟುಮಾಡುತ್ತದೆ; ಮೆಗ್ ರನ್ನು ಆಸ್ಪತ್ರೆಗೆ ಕರೆದುಕೊಂಡುಹೋಗುತ್ತಾರೆ. ಹೊರಡುವ ಮುನ್ನ ಮೆಗ್ ಗೆ ವಕೀಟಾದಲ್ಲಿ ನಡೆದದ್ದು ಮತ್ತೆ ನಡೆಯದಿರುವಂತೆ ಎಚ್ಚರ ವಹಿಸಲು ಜೋ ಯಶಸ್ವಿಯಾಗಲೇಬೇಕೆಂದು ಒತ್ತಿಹೇಳುತ್ತಾರೆ. ಡಸ್ಟಿ ರೇಡಿಯೋದಲ್ಲಿ ವಾತಾವರಣತಜ್ಞರು ಬಹಳ ಅಪರೂಪದ F೫ ಸುಂಟರಗಾಳಿಗಳು ಸಂಭವಿಸುತ್ತವೆಂದು ಹೇಳುವುದನ್ನು ಕೇಳಿಸಿಕೊಳ್ಳುತ್ತಾರೆ. ಕೆಲವು ಪವಮಾನದ ಏಕತಾಳಗಳನ್ನು ವೀಕ್ಷಿಸುತ್ತಾ ಜೋ ಡೊರೋತಿ ಮತ್ತೆ ಕಾರ್ಯಶೀಲವಾಗುವ ದಾರಿಯನ್ನು ಕಂಡುಕೊಳ್ಳುತ್ತಾರೆ. ಬಿಲ್ ರ ತಂಡದವರಿಂದ ಅಲ್ಯುಮಿನಿಯಮ್ ಡಬ್ಬಿಗಳಿಂದ ಪಿನ್ ವೀಲ್ ಗಳನ್ನು ತಯಾರಿಸಿಕೊಂಡು, ಅವುಗಳನ್ನು ಸ್ಕ್ರೂಗಳ ಸಹಾಯದಿಂದ ಡೊರೋತಿಯ ಸೆನ್ಸರ್ ಗಳಿಗೆ ಹೊಂದಿಸಿ, ಅವುಗಳು ಹಾರುವಂತೆ ಮಾಡುತ್ತಾರೆ.
ಹಳ್ಳಿಗಾಡಿನಲ್ಲಿ ಬಿಲ್ ಮತ್ತು ಜೋ ಒಂದು ಮೈಲಿ ಅಗಲದ, ಬೃಹತ್ತಾದ F೫ ಸುಂಟರಗಾಳಿಯ ಪಕ್ಕಕ್ಕೇ ಸರಿದು ಬರುತ್ತಾರೆ. ಅವರು ಡೊರೋತಿ ೩ ಅನ್ನು ಸುಂಟರಗಾಳಿಯ ಪಥದಲ್ಲಿ, ಅದರ ಮುಂದೆ ಇಡುತ್ತಾರೆ ಹಾಗೂ ನಂತರ ಹಿಂದಕ್ಕೆ ಸರಿಯುತ್ತಾರೆ; ಅದರೆ ಗಾಳಿಯು ಡೊರೋತಿಯನ್ನು ಹಿಂದುಮುಂದಲಾಗಿ ತಿರುಗಿಸುತ್ತದೆ ಹಾಗೂ ನಂತರ ಒಂದು ಮರವು ಡೊರೋತಿ ೩ ಅನ್ನು ಅಪ್ಪಳಿಸುತ್ತದೆ; ಡೊರೋತಿ ೩ ರ ಸೆನ್ಸರ್ ಗಳು ಚೆಲ್ಲಾಪಿಲ್ಲಿಯಾಗುತ್ತವೆ. ಸುಂಟರಗಾಳಿಯು ಬಿಲ್ ಮತ್ತು ಜೋ ರತ್ತ ತಿರುಗುತ್ತದೆ ಮತ್ತು ಇಬ್ಬರೂ ತಮ್ಮ ವಾಹನವನ್ನು ದೂಕ್ಕೆ ಒಯ್ಯಲು ಯತ್ನಿಸುತ್ತಾರೆ. ಆದರೆ ಒಂದು ಮರವು ಟ್ರಕ್ ನ ಹಿಂಭಾಗದ ತುದಿಯ ಕೆಳಭಾಗದಲ್ಲಿ ಬೆಣೆಯಂತೆ ಸಿಕ್ಕಿಕೊಂಡ ಕಾರಣ ಅವರು ಅಲುಗಾಡಲಾಗದೆ ನಿಲ್ಲುತ್ತಾರೆ. ಅಷ್ಟರಲ್ಲಿ ಇಂಧನಭರಿತ ಟ್ಯಾಂಕರ್ ಟ್ರಕ್ ಒಂದು ಸುಂಟರಗಾಳಿಗೆ ಸಿಲುಕಿ ರಸ್ತೆಯಲ್ಲಿ ಸಾಗುತ್ತಾ ತಮ್ಮ ಟ್ರಕ್ ನತ್ತಲೇ ಬಂದು, ಡಿಕ್ಕಿ ಹೊಡೆದು, ಆ ಮರದಿಂದ ಇವರ ಟ್ರಕ್ ಬಿಡುಗಡೆಯಾಗಲು ಸಹಾಯಕವಾಗುತ್ತದೆ. ಡಿಕ್ಕಿ ಹೊಡೆದ ಟ್ಯಾಂಕರ್ ಸ್ಫೋಟಗೊಳ್ಳುತ್ತದೆ. ಬಿಲ್ ಅವಶೇಷಗಳ ಸುತ್ತ, ಸ್ಫೋಟದ ಬೆಂಕಿಯುಂಡೆಯನ್ನು ದಾಟುತ್ತಾ, ವಿನಾಶವನ್ನು ಗುಲಗಂಜಿಯಷ್ಟು ಅಂತರದಿಂದ ತಪ್ಪಿಸಿಕೊಳ್ಳುತ್ತಾರೆ. ಬಿಲ್ ಸುಂಟರಗಾಳಿಗಿಂತಲೂ ಮುಂದಕ್ಕೆ ತಮ್ಮ ವಾಹನವನ್ನು ಚಲಾಯಿಸುತ್ತಾರೆ; ಅಲ್ಲಲ್ಲಿ ಆಕಾಶದಿಂದ ತೋಟದ ವಾಹನಗಳನ್ನು ತಮ್ಮ ಪಥದಲ್ಲೇ ಉದುರಿಸುತ್ತಿದ್ದ ಸುಂಟರಗಾಳಿಯ ಅಟ್ಟಹಾಸವನ್ನು ತಪ್ಪಿಸಿಕೊಂಡು ಬಿಲ್ ಮುಂದಕ್ಕೆ ಸಾಗುತ್ತಾರೆ. ಕಡೆಗೆ ಅವರು ಸುಂಟರಗಾಳಿಯು ರಸ್ತೆಗೇ ಉರುಳಿಸಿದ ಒಂದು ಸಣ್ಣ ಮನೆಯ ಮೂಲಕ ತಮ್ಮ ಟ್ರಕ್ ಓಡಿಸಿಕೊಂಡು ಹೋಗುತ್ತಾರೆ.
ಬಿಲ್ ಮತ್ತು ಜೋ ದೂರ ಸಾಗುತ್ತಿದ್ದಂತೆಯೇ, ಜೊನಾಸ್ ಮತ್ತು ಎಡ್ಡಿ ಸುಂಟರಗಾಳಿಯ ಪಥದಲ್ಲಿ ಬಂದು ತಮ್ಮ D.O.T. ೩ ಪೊಟ್ಟಣವನ್ನು ಅದರ ಪಥದಲ್ಲಿ ಇಡುವುದಕ್ಕಾಗಿ ಮುಂದುವರಿಯುತ್ತಾರೆ. ಜೊನಾಸ್ ಸುಂಟರಗಾಳಿಗೆ ಬಹಳ ಸಮೀಪದಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಿದ ಜೋ ಮತ್ತು ಬಿಲ್ ತನ್ನ ಪಥವನ್ನು ಬದಲಾಯಿಸಿಕೊಳ್ಳಲು ಜೊನಾಸ್ ರನ್ನು ಎಚ್ಚರಿಸುತ್ತಾರೆ, ಆದರೆ ಜೊನಾಸ್ ಇವರ ಮಾತನ್ನು ತಿರಸ್ಕರಿಸುತ್ತಾರೆ. ಎಡ್ಡಿ ಬಿಲ್ ರ ಎಚ್ಚರಿಕೆಯ ಮಾತುಗಳಿಗೆ ಓಗೊಡಲು ಬಯಸುತ್ತಾರೆ, ಆದರೆ ಜೊನಾಸ್ ಅವರಿಗೆ ಮುಂದೆ ಚಲಿಸುವಂತೆ ಅಪ್ಪಣೆ ನೀಡುತ್ತಾರೆ. ಸುಂಟರಗಾಳಿಯು ಟಿವಿ ಟವರ್ ನ ಒಂದು ಭಾಗವನ್ನು ಅವರ ಟ್ರಕ್ ನ ವಿಂಡ್ ಷೀಲ್ಡ್ ನ ಮೂಲಕ ಒಳಕ್ಕೆ ಎಸೆಯುತ್ತದೆ, ಎಡ್ಡಿ ತಮ್ಮ ಸೀಟ್ ನಲ್ಲಿಯೇ ಹುಗಿದು ಕೂರುತ್ತಾರೆ. ಎರಡೂ ತಂಡಗಳು ತಲ್ಲಣಿಸುತ್ತಾ ವೀಕ್ಷಿಸುತ್ತಿರುವಂತೆಯೇ ಸುಂಟರಗಾಳಿಯು ಜೊನಾಸ್ ತ ಟ್ರಕ್ ಅನ್ನು ಗಾಳಿಯಲ್ಲಿ ಎತ್ತಿಕೊಂಡು, ನಂತರ ನೆಲಕ್ಕೆ ಬಿಸುಡುತ್ತದೆ; ಬಿದ್ದ ಸ್ಥಳದಲ್ಲೇ ಟ್ರಕ್ ಸ್ಫೋಟಗೊಳ್ಳುತ್ತದೆ, ಎಡ್ಡಿ ಮತ್ತು ಜೊನಾಸ್ ಸ್ಥಳದಲ್ಲೇ ಮೃತರಾಗುತ್ತಾರೆ.
ಆಗ ಬಿಲ್ ಮತ್ತು ಜೋ ತಮಗೆ ಉಳಿದಿರುವುದು ಇನ್ನೊಂದೇ ದಾರಿಯೆಂದು ತೀರ್ಮಾನಿಸುತ್ತಾರೆ. ಸುಂಟರಗಾಳಿಯನ್ನು ಮತ್ತೆ ಸಂಧಿಸುವ ಸ್ಥಳದತ್ತ ಸಾಗುತ್ತಾ, ಡೊರೋತಿ ೪ ಅನ್ನು ಸಕ್ರಿಯಗೊಳಿಸಿ, ಅದನ್ನು ಟ್ರಕ್ ನ ನೆಲಹಾಸಿನಲ್ಲೇ ಭದ್ರವಾಗಿರುವಂತೆ ಇರಿಸುತ್ತಾರೆ. ನಂತರ ತಮ್ಮ ಟ್ರಕ್ ಅನ್ನು ನೇರವಾಗಿ ಸುಂಟರಗಾಳಿಯತ್ತ ಓಡಿಸುತ್ತಾರೆ. ಟ್ರಕ್ ಸ್ವಯಂಚಾಲನೆಯ ಕ್ರಮದಲ್ಲಿರುವಂತೆ ಮಾಡಿ, ಜೋ ಮತ್ತು ಬಿಲ್ ಟ್ರಕ್ ನಿಂದ ಹೊರಕ್ಕೆ ಹಾರಿಕೊಳ್ಳುತ್ತಾರೆ. ಟ್ರಕ್ ಸುಂಟರಗಾಳಿಯ ಮಧ್ಯಕ್ಕೇ ಸಾಗುತ್ತದೆ; ಅಲ್ಲಿ ಡೊರೋತಿ ೪ ಅನ್ನು ಅದು ಯಶಸ್ವಿಯಾಗಿ ಕಾರ್ಯಶೀಲವಾಗಿಸುತ್ತದೆ.
ಡೊರೋತಿಯ ಸೆನ್ಸರ್ ಗಳು ಕಾರ್ಯಗತವಾಗುತ್ತಿದ್ದಂತೆಯೇ ತಂಡವು ಸಂತೋಷದಿಂದ ಕುಣಿಯಲಾರಂಭಿಸುತ್ತದೆ; ಸೆನ್ಸರ್ ಗಳು ಸುಂಟರಗಾಳಿಯ ಒಳಭಾಗವನ್ನು ವಿಶ್ಲೇಷಿಸತೊಡಗುತ್ತವೆ; ಆದರೆ, ಅಷ್ಟರಲ್ಲಿ ಸುಂಟರಗಾಳಿ ಸ್ಥಳಾಂತರಗೊಳ್ಳುತ್ತಿರುವುದನ್ನು ತಂಡವು ಗಮನಿಸುತ್ತದೆ. ಬಿಲ್ ಮತ್ತು ಜೋ ಸಹ ಇದನ್ನು ಗಮನಿಸುತ್ತಾರೆ ಮತ್ತು ಹತ್ತಿರದ ತೋಟದಮನೆಗೆ ಓಡಿ ಸೇರುತ್ತಾರೆ. ಅವರು ಮೊದಲು ಒಂದು ಹಗೇವಿನಲ್ಲಿ ರಕ್ಷಣೆ ಪಡೆಯುತ್ತಾರೆ, ಆದರೆ ಆ ಹಗೇವು ಚೂಪಾದ ಲೋಹದ ಸಲಕರಣೆಗಳಿಂದ ತುಂಬಿರುತ್ತದೆ. ಸುಂಟರಗಾಳಿಯು ಹಗೇವನ್ನು ನಾಶಗೊಳಿಸುತ್ತದೆ, ಇಬ್ಬರೂ ಅವಶೇಷಗಳನ್ನು ದಾಟುತ್ತಾ, ಅವುಗಳಿಂದ ಪಕ್ಕಕ್ಕೆ ಸರಿಯುತ್ತಾ, ಓಡಿ ಹಿಂಬದಿಯ ಕಟ್ಟಡವೊಂದರಲ್ಲಿ ರಕ್ಷಣೆ ಪಡೆಯುತ್ತಾರೆ. ಈ ನೆಲೆಯಲ್ಲಿ ಅವರು ಲೋಹದ ಕೊಳವೆಗಳಿರುವುದನ್ನು ಕಾಣುತ್ತಾರೆ ಹಾಗೂ ಚರ್ಮದ ಬೆಲ್ಟ್ ಗಳಿಂದ ತಮ್ಮನ್ನು ಈ ಲೋಹದ ಕೊಳವೆಗಳಿಗೆ ತಮ್ಮನ್ನು ತಾವೇ ಬಂಧಿಸಿಕೊಳ್ಳುತ್ತಾರೆ. ಸುಂಟರಗಾಳಿ ಈ ಕಟ್ಟಡವನ್ನೂ ನಾಶಗೊಳಿಸುತ್ತದೆ, ಹಾಗೂ ಆ ರಭಸಕ್ಕೆ ಇವರು ಕೊಳವೆಗೆ ಆತುಕೊಂಡಂತೆಯೇ ತಲೆಕೆಳಗಾಗಿ ಸೆಳೆಯಲ್ಪಡುತ್ತಾರೆ. ಆದರೆ ಕಟ್ಟಲ್ಪಟ್ಟದ್ದರಿಂದ ಹಾಗೂ ಕೊಳವೆಗಳು ಭೂಮಿಗೆ ಬಲವಾಗಿ ಕಚ್ಚಿಕೊಂಡದ್ದರಿಂದ ಸುಳಿಯೊಳಗೆ ಸಿಲುಕದೆ ಉಳಿಯುತ್ತಾರೆ. F೫ ಅವರ ಮೇಲಿನಿಂದ ಹಾದು ಹೋದಾಗ ಅವರು ಅದರ ಒಳಭಾಗವನ್ನು ಕಾಣಲು ಸಾಧ್ಯವಾಗುತ್ತದೆ. ಅದರ ಮಧ್ಯಭಾಗದಲ್ಲಿ ಒಂದು ಚಿಕ್ಕ ಸುಂಟರಗಾಳಿ ಮತ್ತು ಮಿಂಚು ತುಂಬಿರುತ್ತದೆ. ಕ್ಷಣಗಳ ನಂತರ, ಇಡೀ ಚಂಡಮಾರುತದ ರಭಸ ತಗ್ಗಿ ತಣ್ಣಗಾಗುತ್ತದೆ ಹಾಗೂ ಆ ತೋಟದಮನೆಯ ಕುಟುಂಬದವರು ತಮ್ಮ ನೆಲಮಾಳಿಗೆಯ ಚಂಡಮಾರುತದಿಂದ ರಕ್ಷಣಿಪಡೆಯುವ ನೆಲೆಯಿಂದ ಹೊರಬರುತ್ತಾರೆ ಮತ್ತು ತಮ್ಮ ಧ್ವಂಸಗೊಂಡ ತೋಟದಮನೆಯನ್ನು ವೀಕ್ಷಿಸುತ್ತಾರೆ. ಬಿಲ್ ಮತ್ತು ಜೋ ಯಾರು ಪ್ರಯೋಗಾಲಯವನ್ನು ನಡೆಸಬೇಕು ಮತ್ತು ಯಾರು ಡೊರೋತಿಯಿಂದ ದೊರೆತ ನೂತನ ಮಾಹಿತಿಯನ್ನು ವಿಶ್ಲೇಷಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಾರೆ; ಆ ವೇಳೆಗೆ ತಂಡದ ಉಳಿದ ಸದಸ್ಯರೂ ಅಲ್ಲಿಗೆ ಬರುತ್ತಾರೆ. ಬಿಲ್ ಮತ್ತು ಜೋ ತಮ್ಮ ಸಂಬಂಧವನ್ನು ಮತ್ತೆ ದೃಢಗೊಳಿಸಿಕೊಳ್ಳಲು ಪರಸ್ಪರ ಚುಂಬಿಸುವ ಹಾಗೂ ಇತರ ತಂಡದ ಸದಸ್ಯರು ತಮ್ಮ ಸಾಧನೆಯನ್ನು ವಿಜೃಂಭಣೆಯಿಂದ ಆಚರಿಸುವ ದೃಶ್ಯದ ಮೂಲಕ ಈ ಚಿತ್ರವು ಕೊನೆಗೊಳ್ಳುತ್ತದೆ.
ಪಾತ್ರವರ್ಗ
ಬದಲಾಯಿಸಿ- ಡಾಕ್ಟರ್ ಜೋ ಹಾರ್ಡಿಂಗ್ ಪಾತ್ರದಲ್ಲಿ ಹೆಲನ್ ಹಂಟ್: ಚಂಡಮಾರುತವನ್ನೇ ಬೆಂಬತ್ತುವ ಸಂಶೋಧನಾ ತಂಡದ ಮುಖ್ಯಸ್ಥೆ.
- ಬಿಲ್ ಪ್ಯಾಕ್ಸ್ ಟನ್ ಬಿಲ್ ಹಾರ್ಡಿಂಗ್ ಪಾತ್ರದಲ್ಲಿ (ಅಲಿಯಾಸ್ ದ ಎಕ್ಸ್ ಟ್ರೀಮ್): ಜೋ ಳಿಂದ ದೂರಸರಿದ ಪತಿ ಹಾಗೂ ಬಿರುಗಾಳಿ ಬೆಂಬತ್ತಲು ಮೊದಲು ಜೊತೆಗಿದ್ದ ಸಂಗಾತಿ.
- ಡಾ. ಮೆಲಿಸಾ ರೀವ್ಸ್ ರ ಪಾತ್ರದಲ್ಲಿ ಜೇಮಿ ಗೆರ್ಟ್ಝ್:ಬಿಲ್ ರ ಭಾವಿಪತ್ನಿ; ಅವರೂ ಸುಂಟರಗಾಳಿ-ಬೆಂಬತ್ತುವ ಕಾರ್ಯದಲ್ಲಿ ತೊಡಗಿಕೊಂಡಾಗ ಬಿಲ್ ಬಗ್ಗೆ ಅವರಿಗಿದ್ದ ಪ್ರೀತಿಗೆ ಕುಂದುಂಟಾಗುತ್ತದೆ.
- ಫಿಲಿಪ್ ಸೈಮರ್ ಹಾಫ್ ಮನ್ ಡಸ್ಟಿನ್ 'ಡಸ್ಟಿ' ಡೇವಿಸ್ ರ ಪಾತ್ರದಲ್ಲಿ: ಜೋ ರ ಬೆಂಬತ್ತುವ ತಂಡದ ಹಾಸ್ಯದ ನುಡಿಗಳನ್ನು ನುಡಿಯುವ ಸದಸ್ಯ.
- ಅಲನ್ ರಕ್ ರಾಬರ್ಟ್ 'ರ್ಯಾಬಿಟ್' ನ್ಯುರಿಕ್ ರ ಪಾತ್ರದಲ್ಲಿ: ಜೋ ರ ತಂಡದ ಮಾರ್ಗದರ್ಶಕ.
- ಲಾರೆನ್ಸ್ ರ ಪಾತ್ರದಲ್ಲಿ ಜೆರೆಮಿ ಡೇವೀಸ್: ತಂಡದ ಸದ್ದುಗದ್ದಲವಿಲ್ಲದ ಸದಸ್ಯ; ಸುಂಟರಗಾಳಿಗಳ ಛಾಯಾಚಿತ್ರಗಳನ್ನು ತೆಗೆಯುವ ಕಾರ್ಯಕ್ಕೆ ನಿಯಮಿತವಾದವರು.
- ಜೋಯಿ ಸ್ಲಾಟ್ನಿಕ್ ಜೋಯಿ ಪಾತ್ರದಲ್ಲಿ: ವಾಯುಮಾಪನ ಮತ್ತು ತಮ್ಮ ಡಾಪಲ್ ರೆಡಾರ್ ನ ಸುರಕ್ಷೆಯ ಜವಾಬ್ದಾರಿ ಹೊತ್ತವರು.
- ಸೀನ್ ವಾಲೆನ್ ಅಲನ್ ಸ್ಯಾಂಡ್ರಸ್ ಪಾತ್ರದಲ್ಲಿ: ರ್ಯಾಬಿಟ್ ರ ಚಾಲಕ, ಸಾಮಾನ್ಯವಾಗಿ ನಕ್ಷೆಗಳನ್ನು ಸುತ್ತುವುದರ ಬದಲು ಮಡಚುವುದಕ್ಕೆಂದು ರ್ಯಾಬಿಟ್ ರಿಂದ ನಿಂದಿಸಲ್ಪಡುವವರು.
- ಟಾಢ್ ಫೀಲ್ಡ್ ಟಿಮ್ 'ಬೆಲ್ಟ್ ಝರ್' ಲೂಯಿಸ್ ರ ಪಾತ್ರದಲ್ಲಿ: ಡಾಪ್ಲರ್ ಅನ್ನು ಇಟ್ಟಿರುವ ವ್ಯಾನ್ ನ ಚಾಲಕ ಹಾಗೂ ತಂಡದ ಹೆಚ್ಚು ಒರಟಾದ ಹಾಗೂ ಅರ್ಪಣಾಭಾವದ ಸದಸ್ಯ.
- ಹೇಯ್ನ್ಸ್ ಪಾತ್ರದಲ್ಲಿ ವೆಂಡಲ್ ಜೋಸೆಫರ್: ತಂಡದ ಅತಿ ಕಿರಿಯ (ಹಾಗೂ ಏಕೈಕ ಇತರ ಹೆಣ್ಣು) ಸದಸ್ಯೆ, ಬೆಲ್ಟ್ ಝರ್ ರೊಡನೆ ಪ್ರಯಾಣಿಸುತ್ತಾರೆ.
- ಸ್ಕಾಟ್ ಥಾಮ್ಸನ್, ಜೇಸನ್ 'ಪ್ರೀಚರ್; ರೋವ್ ರ ಪಾತ್ರದಲ್ಲಿ: ಜೋ ರ ತಂಡದ ಸದಸ್ಯ, ಅವರು ಹಲವಾರು ಧಾರ್ಮಿಕ ಉಲ್ಲೇಖಗಳನ್ನು ನೀಡುವುದರಿಂದ ಅವರನ್ನು ಪ್ರೀಚರ್ ಎಂದು ಕರೆಯುತ್ತಾರೆ.
- ಚಿಕ್ಕಮ್ಮ ಮೆಗ್ ಗ್ರೀನ್ ರ ಪಾತ್ರದಲ್ಲಿ ಲಾಯಿಸ್ ಸ್ಮಿತ್: ಜೋ ರ ಚಿಕ್ಕಮ್ಮ ಮತ್ತು ಇಡೀ ತಂಡಕ್ಕೆ ಮಾತೃಸ್ವರೂಪಿ.
- ಕ್ಯಾರಿ ಎಲ್ವೆಸ್ ಡಾ. ಜೊನಾಸ್ ಮಿಲ್ಲರ್ ರ ಪಾತ್ರದಲ್ಲಿ: ಪ್ರತಿಸ್ಪರ್ಧಿ ಸುಂಟರಗಾಳಿ ಬೆಂಬತ್ತುವ ತಂಡದ ನಾಯಕ; ಬಿಲ್ ರ ಡೊರೋತಿಯ ಕಲ್ಪನೆಯು ತನ್ನದೇ ಎಂದು ಪ್ರತಿಷ್ಠಾಪಿಸಲು ಬಯಸುವ, ಖ್ಯಾತಿ ಮತ್ತು ಲಾಭದ ಬೆನ್ನು ಹತ್ತಿರುವ ವ್ಯಕ್ತಿ.
- ಝಾಕ್ ಗ್ರೆನಿಯರ್ ಎಡ್ಡಿಯ ಪಾತ್ರದಲ್ಲಿ: ಜೊನಾಸ್ ರ ಮನಸ್ಸಿಲ್ಲದ ಮನಸ್ಸಿನ ಸಹಾಯಕ.
- ಅಲೆಕ್ಸಾ ವೆಗಾ ಚಿಕ್ಕ ಜೋ ಳ ಪಾತ್ರದಲ್ಲಿ: ತನ್ನ ತಂದೆಯು ಪ್ರಬಲವಾದ ಸುಂಟರಗಾಳಿಯ ಸೆಳೆತಕ್ಕೆ ಸಿಲುಕಿ ನಿಧನರಾಗುವುದನ್ನು ವೀಕ್ಷಿಸುತ್ತಾಳೆ.
ಚಿತ್ರೀಕರಣ
ಬದಲಾಯಿಸಿಟ್ವಿಸ್ಟರ್ ವಾರ್ನರ್ ಬ್ರದರ್ಸ್. ಮತ್ತು ಯೂನಿವರ್ಸಲ್ ಸ್ಟುಡಿಯೋಸ್ ರವರ ಜಂಟಿ ನಿರ್ಮಾಣದ ಚಿತ್ರವಾಗಿತ್ತು. ಈ ವಾಸ್ತವಾಂಶವು ಈ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಗೋಚರಿಸುವ ಒಂದು ಡ್ರೈವ್-ಇನ್ ಥಿಯೇಟರ್ ನ ಗುಡಾರದ ಮೇಲೆ ನಿಚ್ಚಳವಾಗಿ ಗೋಚರಿಸುತ್ತದೆ: ದ ಶೈನಿಂಗ್ , ಒಂದು ವಾರ್ನರ್ ಬ್ರದರ್ಸ್ ರವರ ಬಿಡುಗಡೆಯ ಚಿತ್ರ, ಮತ್ತು, ಸೈಕೋ , ಒಂದು ಯೂನಿವರ್ಸಲ್ ಪ್ರೊಡಕ್ಷನ್ಸ್ ರವರ ಚಿತ್ರ ಎಂಬುದು ಎದ್ದುಕಾಣುತ್ತದೆ. ಈ ಎರಡೂ ಕಂಪನಿಗಳು ಆಗಾಗ್ಗೆ ಮತ್ತೊಂದು ಚಲನಚಿತ್ರ ನಿರ್ಮಾಣ ಕಂಪನಿಯೊಡನೆ ಕೈಜೋಡಿಸಿದ್ದವು: ಈ ಚಿತ್ರಕ್ಕೆ ಮುಂಚೆ; ಆ ಕಂಪನಿಯ ಹೆಸರು ಆಂಬ್ಲಿನ್ ಎಂಟರ್ಟೈನ್ಮೆಂಟ್.
ಇದರ ಮೂಲ ಕಲ್ಪನೆ ಮತ್ತು ಹತ್ತು ಪುಟಗಳ ಸುಂಟರಗಾಳಿ-ಬೆಂಬತ್ತುವ ಕಥೆಯನ್ನು ೧೯೯೨ ರಲ್ಲಿ ಮೋಷನ್ ಪಿಕ್ಚರ್ ನ ವ್ಯವಹಾರ ಸಲಹೆಗಾರ ಮತ್ತು ಪ್ರಶಸ್ತಿವಿಜೇತ ಚಿತ್ರಕಥೆಗಾರರಾದ ಜೆಫ್ರಿ ಹಿಲ್ಟನ್ ಆಂಬ್ಲಿನ್ ಎಂಟರ್ಟೈನ್ಮೆಂಟ್ ಗೆ ಇತ್ತರು. ಸ್ಪೀಲ್ ಬರ್ಗ್ ನಂತರ ಈ ಕಲ್ಪನೆಯನ್ನು ಲೇಖಕ ಮೈಕಲ್ ಕ್ರಿಕ್ಟನ್ ರಿಗೆ ತಲುಪಿಸಿದರು.
ಗಾಡ್ಝಿಲ್ಲಾ ಚಿತ್ರ ನಿರ್ಮಾಣದ ನಿರ್ಮಾಣಪೂರ್ವ ಹಂತದಲ್ಲೇ ಆರು ತಿಂಗಳಿಗಿಂತಲೂ ಹೆಚ್ಚು ಕಾಲವ್ಯಯ ಮಾಡಿದ ಜ್ಯಾನ್ ಡಿ ಬಾಂಟ್ ಆ ಚಿತ್ರದ ಹಣಕಾಸಿನ ಬಾಬ್ತಿನಲ್ಲಿ ಬೆಳೆದ ಭಿನ್ನಾಭಿಪ್ರಾಯದ ಕಾರಣ ಆ ಚಿತ್ರದಿಂದ ಹೊರಬಂದರು ಹಾಗೂ ಬೇಗನೆ ಟ್ವಿಸ್ಟರ್ ಚಿತ್ರನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿದರು.[೩] ಈ ಚಿತ್ರನಿರ್ಮಾಣವು ಹಲವಾರು ತೊಡರುಗಳನ್ನು ಎದುರಿಸಬೇಕಾಯಿತು. ಮೈಕಲ್ ಕ್ರಿಕ್ಟನ್ ಮತ್ತು ಅವರ ಪತ್ನಿ ಅನ್ನೆ-ಮೇರಿ ಮಾರ್ಟಿನ್ ರಿಗೆ ಈ ಚಿತ್ರದ ಚಿತ್ರಕಥೆ ಬರೆಯಲು $೨.೫ ಮಿಲಿಯನ್ ನೀಡಿಲಾಯಿತೆಂಬ ವರದಿಯಿದೆ. ೧೯೯೫ ರ ಬೇಸಿಗೆಯ ಆದಿಯಲ್ಲಿ ಜಾಸ್ ವೆಡನ್ ರನ್ನು ಚಿತ್ರಕಥೆಯ ಮರುಲೇಖನಕ್ಕಾಗಿ ಕರೆಸಿಕೊಳ್ಳಲಾಯಿತು. ವೆಡನ್ ಬ್ರಾಂಕೈಟಿಸ್ ನಿಂದ ನರಳತೊಡಗಿದಾಗ, ಸ್ಟೀವ್ ಝೈಲ್ಲಿಯನ್ ರನ್ನು ಕಥೆ ಬರೆಯಲು ಕರೆಯಲಾಯಿತು. ವೆಡನ್ ಗುಣಮುಖಗಾಗಿ ಹಿಂತಿರುಗಿಬಂದು ಚಿತ್ರಕಥೆಯ ಪುನರಾವರ್ತನೆಯ ಕಾರ್ಯವನ್ನು ಮೇ ೧೯೯೫ ರಲ್ಲಿ ಚಿತ್ರೀಕರಣ ಆರಂಭವಾದಂದಿನಿಂದ ಕೈಗೊಂಡರು. ಅವರು ಮದುವೆಯಾದನಂತರ ಈ ಚಿತ್ರದ ಕೆಲಸಕ್ಕೆ ತಿಲಾಂಜಲಿಯಿತ್ತರು ಹಾಗೂ ಚಿತ್ರ ನಿರ್ಮಾಣ ಆರಂಭವಾಗಿ ಇನ್ನೂ ಎರಡು ವಾರವಾಗಿದ್ದ ಅಂದಿನ ದಿನದಲ್ಲಿ ಜೆಫ್ ನಾಥನ್ಸನ್ ರನ್ನು ಚಿತ್ರೀಕರಣಸ್ಥಳಕ್ಕೆ ವಿಮಾನದಲ್ಲಿ ಕರೆಸಿಕೊಳ್ಳಲಾಯಿತು; ಅವರು ಪ್ರಮುಖ ಛಾಯಾಗ್ರಹಣ ಕೊನೆಯಾಗುವವರೆಗೆ ಚಿತ್ರಕಥೆಯನ್ನು ಬರೆದುಕೊಟ್ಟರು.[೩]
ಚಿತ್ರೀಕರಣ ಅರ್ಧಭಾಗ ಪೂರ್ಣಗೊಂಡಿದ್ದಾಗ ಬಿಲ್ ಪ್ಯಾಕ್ಸ್ ಟನ್ ಮತ್ತು ಹೆಲೆನ್ ಹಂಟ್ ಇಬ್ಬರೂ ತಾತ್ಕಾಲಿಕವಾಗಿ ಕುರುಡರಾಗಿದ್ದರು; ಹೊರಗೆ ಬಹಳವೇ ಬೆಳಕಿದ್ದುದರಿಂದ ಈ ಇಬ್ಬರು ನಟ ನಟಿಯರ ಹಿಂದಿನ ಆಕಾಶವು ಕಪ್ಪಗೆ ಹಾಗೂ ಬಿರುಗಾಳಿಕೂಡಿದಂತೆ ಕಾಣಬೇಕೆಂಬ ಕಾರಣದಿಂದ ಹೊರಗಿನ ಬೆಳಕಿಗಿಂತಲೂ ಹೆಚ್ಚಿನ ಬೆಳಕನ್ನು ಬಳಸಿ ಇದ್ದ ಪ್ರಕಾಶವನ್ನು ತಗ್ಗಿಸುವ ಸಲುವಾಗಿ ಉಪಯೋಗಿಸಿದ ಪ್ರಜ್ವಲವಾದ ಲ್ಯಾಂಪ್ ಗಳಿಗೆ ತಮ್ಮನ್ನು ಒಡ್ಡಿಕೊಂಡದ್ದರಿಂದ ಈ ರೀತಿಯ ತಾತ್ಕಾಲಿಕ ದೃಷ್ಟಿಬಾಧೆ ಉಂಟಾಯಿತು. "ಈ ಲ್ಯಾಂಪ್ ಗಳು ನಮ್ಮ ಕಣ್ಣುಗೊಂಬೆಗಳನ್ನೇ ಅಕ್ಷರಶಃ ಸುಟ್ಟುಬಿಟ್ಟವು. ನಾನು ನನ್ನ ಕೊಠಡಿಗೆ ಹಿಂತಿರುಗಿದಾಗ ನನಗೆ ಏನೇನೂ ಕಾಣಿಸುತ್ತಿರಲಿಲ್ಲ" ಎಂದು ಸ್ಮರಿಸುತ್ತಾರೆ ಪ್ಯಾಕ್ಸ್ ಟನ್.[೩] ಈ ಸಮಸ್ಯೆನ್ನು ಬಗೆಹರಿಸಲು ಈ ಕಿರಣಗಳ ಮುಂದೆ ಒಂದು ಪ್ಲೆಕ್ಸಿ ಗಾಜಿನ ಫಿಲ್ಟರ್ ಒಂದನ್ನು ಇಡಲಾಯಿತು. ನಟನಟಿಯರು ಈ ರಾಚುವ ಬೆಳಕಿನಿಂದ ಸುಧಾರಿಸಿಕೊಳ್ಳಲು ಕಣ್ಣಿಗೆ ಹಾಕಿಕೊಳ್ಳುವ ಹನಿಗಳನ್ನು ಹಾಕಿಕೊಂಡರು ಮತ್ತು ವಿಶೇಷ ಕನ್ನಡಕಗಳನ್ನು ಹಲವು ದಿನಗಳವರೆಗೆ ಧರಿಸಿದರು. ಬ್ಯಾಕ್ಟೀರಿಯಾಗಳಿದ್ದ ಒಂದು ಹಳ್ಳದಲ್ಲಿ ಚಿತ್ರೀಕರಣ ಮಾಡಿದ ನಂತರ ಹಂಟ್ ಮತ್ತು ಪ್ಯಾಕ್ಸ್ ಟನ್ ಹೆಪಟೈಟಿಸ್ ಬಾರದಂತೆ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಬೇಕಾಯಿತು. ಅದೇ ದೃಶ್ಯದಲ್ಲಿ ಹಂಟ್ ಪದೇ ಪದೇ ತಮ್ಮ ತಲೆಯನ್ನು ತಗ್ಗಾದ ಮರದ ಸೇತುವೆಗೆ ತಗುಲಿಸಿಕೊಂಡರು; ಬಹಳವೇ ಪ್ರಯಾಸಕರವಾದ ಚಿತ್ರೀಕರಣದಿಂದ ಅವರು ಬಳಲಿದ್ದುದರಿಂದ ಸೇತುವೆ ಹೆಚ್ಚು ಎತ್ತರದಲ್ಲಿಲ್ಲ, ಏಳುವಾಗ ತಲೆ ತಗ್ಗಿಸದಿದ್ದರೆ ತಲೆಗೆ ಹೊಡೆಯುತ್ತದೆ ಎಂಬುದನ್ನು ಅವರು ಪುನಃ ಪುನಃ ಮರೆಯುತ್ತಿದ್ದರು.[೩] ಹಂಟ್ ಈ ಚಿತ್ರದಲ್ಲಿ ಒಂದು ಸ್ಟಂಟ್ ಮಾಡಿದರು; ಒಂದು ಜೋಳದ ಹೊಲದಲ್ಲಿ ವಾಹನವು ವೇಗವಾಗಿ ಚಲಿಸುತ್ತಿರುವಾಗ ಅವರು ವಾಹನದ ಬಾಗಿಲನ್ನು ತೆಗೆದರು, ಪ್ರಯಾಣಿಕನ ಬದಿಯ ಸ್ಥಳದಲ್ಲಿ ನಿಂತರು, ಹಾಗೂ ಆ ಬಾಗಿಲನ್ನು ಕ್ಷಣಕಾಲ ಕೈಬಿಟ್ಟಾಗ ತಮ್ಮ ತಲೆಯ ಪಾರ್ಶ್ವಭಾಗಕ್ಕೆ ಆ ಬಾಗಿಲಿನಿಂದ ಹೊಡೆತ ತಿಂದರು ಪರಿಣಾಮವಾಗಿ ಹಂಟ್ ರ ಮೆದುಳಿಗೆ ಪೆಟ್ಟು ಬಿದ್ದಿತೆಂದು ಕೆಲವು ಮೂಲಗಳು ಹೇಳುತ್ತವೆ. "ನಾನು ಹೆಲೆನ್ ರನ್ನು ಸಾಯುವಷ್ಟು ಪ್ರೀತಿಸುತ್ತೇನೆ, ಆದರೆ, ನಿಮಗೆ ತಿಳಿದಿರಲಿ, ಆಕೆ ಕೆಲವೊಮ್ಮೆ ಕೊಂಚ ಅಡನಾಡಿಯಂತಿರುತ್ತಾರೆ" ಎಂದರು ಡಿ ಬಾಂಟ್. ಹಂಟ್ "ನಾನು ಅಡನಾಡಿಯೇ? ಆ ವ್ಯಕ್ತಿ ನನ್ನ ಅಕ್ಷಿಪಟಲವನ್ನೇ ಸುಟ್ಟರು, ಆದರೆ ನಾನು ಅಡನಾಡಿ... ನಾನು ಒಳ್ಳೆಯವಳೆಂದು ನಾನು ತಿಳಿದಿದ್ದೆ. ಜ್ಯಾನ್ ಕಡೆಗೂ ನನ್ನನ್ನು ಹಾಗೆಂದುಕೊಳ್ಳುವರೋ ಇಲ್ಲವೋ ತಿಳಿಯದು, ಆದರೆ ಹಾಗೆಂದುಕೊಳ್ಳುವರು ಎಂಬ ಭರವಸೆಯನ್ನಂತೂ ಹೊಂದುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದರು.[೩]
ಕೆಲವು ಸಿಬ್ಬಂದಿ ವರ್ಗದವರು ಡಿ ಬಾಂಟ್ "ಹತೋಟಿಯಲ್ಲಿ ಇಲ್ಲದವರು" ಎಂಬ ಅಭಿಪ್ರಾಯ ಹೊಂದಿ ಚಿತ್ರೀಕರಣ ಆರಂಭವಾದ ಐದು ವಾರಗಳಲ್ಲಿ ಚಿತ್ರೀಕರಣವನ್ನು ತೊರೆದು ಹೋದರು.೦/} ಡಾನ್ ಬರ್ಜೆಸ್ ರ ಮುಖಂಡತ್ವದ ಛಾಯಾಗ್ರಾಹಕರ ತಂಡವು ಡಿ ಬಾಂಟ್ ಬಗ್ಗೆ "ಅವರು ನೋಡುವವರೆಗೆ ಅವರಿಗೆ ಏನು ಬೇಕೆಂಬುದು ಅವರಿಗೇ ತಿಳಿದಿರುವುದಿಲ್ಲ. ಅವರು ಒಂದು ದಿಕ್ಕಿನಲ್ಲಿ ಚಿತ್ರೀಕರಣ ಮಾಡುತ್ತಾರೆ, ಈ ಕ್ಯಾಮೆರಾದ ದೃಶ್ಯದ ಹಿಂದೆಯೇ ಎಲ್ಲಾ ಛಾಯಾಗ್ರಹಣ ಸಲಕರಣೆಗಳನ್ನು ಇರಿಸಿಕೊಂಡು ಚಿತ್ರೀಕರಿಸುತ್ತಾರೆ, ಮರುಕ್ಷಣದಲ್ಲೇ ಆ ದೃಶ್ಯವನ್ನು ಬೇರೆ ಕೋನದಿಂದ ಚಿತ್ರೀಕರಿಸಬೇಕೆಂದು ಹೇಳುತ್ತಾರೆ; ಆ ದೃಶ್ಯವನ್ನು ಆ ದಿಕ್ಕಿನಿಂದ ಸೆರೆಹಿಡಿಯಲು ನಾವು ಎಲ್ಲಾ ಸಲಕರಣೆಗಳನ್ನೂ ಸ್ಥಳಾಂತರಿಸಬೇಕು, ನಾವು ಅವನ್ನು ಸ್ಥಳಾಂತರಿಸುತ್ತಿರುವಾಗಲೇ ನಾವು ಬಹಳ ವಿಳಂಬ ಮಾಡುತ್ತಿದ್ದೇವೆಂದು ಕ್ರುದ್ಧರಾಗುತ್ತಾರೆ ... ತಪ್ಪೆಲ್ಲಾ ಎಂದೂ ಬೇರೆಯವರದೇ, ಅವರದು ಎಂದೂ ಯಾವುದೂ ತಪ್ಪಿಲ್ಲ" ಎನ್ನುತ್ತಾ ನಿರ್ಮಾಣತಂಡದಿಂದ ಐದು ವಾರಗಳ ನಂತರ ಹೊರನಡೆದರು.[೩] "ಹವಾಗುಣದಲ್ಲಿ ಬಹಳ ಬೇಗ ಬದಲಾವಣೆಗಳಾಗುತ್ತಿದ್ದವು, ನಾವು ದಿನಕ್ಕೆ ಮೂರು ದೃಶ್ಯಗಳನ್ನಾದರೂ ಚಿತ್ರೀಕರಿಸಬೇಕೆಂಬ ಹಂಚಿಕೆ ಇದ್ದಿತು. ಅಷ್ಟು ದೃಶ್ಯಗಳಿಗೆ, ಬದಲಾಗುತ್ತಿರುವ ಹವಾಗುಣದ ವೇಗಕ್ಕೆ ತಕ್ಕಂತೆ ಡಾನ್ ಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು" ಎನ್ನುತ್ತಾರೆ ಡಿ ಬಾಂಟ್.[೩] ಹೇಳಿದುದನ್ನು ಅರ್ಥ ಮಾಡಿಕೊಳ್ಳದ ಒಬ್ಬ ಕ್ಯಾಮರಾ ಸಹಾಯಕನನ್ನು ಡಿ ಬಾಂಟ್ ಹೊಡೆದು ಬೀಳಿಸಿದ ದಿನ ಬರ್ಜೆಸ್ ಮತ್ತು ಅವರ ತಂಡ ಚಿತ್ರೀಕರಣದಿಂದ ಹೊರನಡೆದರು, ಚಿತ್ರತಂಡವು ಸ್ಥಂಭೀಭೂತವಾಯಿತು. ಬರ್ಜೆಸ್ ಮತ್ತು ಅವರ ಸಿಬ್ಬಂದಿವರ್ಗ ಮತ್ತೊಂದು ತಂಡವು ಬರುವವರೆಗೆ, ಮತ್ತೊಂದು ವಾರದವರೆಗೆ, ಮುಂದುವರೆಯಿತು; ನಂತರ ಈ ತಂಡದ ಸ್ಥಾನವನ್ನು ಜ್ಯಾಕ್ ಎನ್. ಗ್ರೀನ್ ತುಂಬಿದರು. ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದಾಗ, ಸುಳಿವು ನೀಡಿದಾಕ್ಷಣ ಕುಸಿದುಬೀಳುವಂತೆ ಏರ್ಪಡಿಸಿದ್ದ ಹೈಡ್ರಾಲಿಕ್ ಮನೆಯ ಸೆಟ್ ಒಂದನ್ನು ಗ್ರೀನ್ ಆ ಸೆಟ್ ನ ಒಳಗೆ ಇರುವಾಗಲೇ ಅಚಾತುರ್ಯದಿಂದ ಬೀಳಿಸಿಬಿಡಲಾಯಿತು. ಹೊರೆಯಿದ್ದ ಚಾವಣಿಯು ಕುಸಿದಾಗ ಗ್ರೀನ್ ರ ತಲೆ ಮತ್ತು ಬೆನ್ನಿಗೆ ಪೆಟ್ಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗ್ರೀನ್ ಕಡೆಯ ಎರಡು ದಿನಗಳ ಪ್ರಮುಖ ಚಿತ್ರೀಕರಣದಿಂದ ದೂರ ಉಳಿಯಬೇಕಾಯಿತು; ಆ ಅವಧಿಯಲ್ಲಿ ಡಿ ಬಾಂಟ್ ರೇ ಛಾಯಾಗರಹಣ ನಿರ್ದೇಶನದ ಹೊಣೆಯನ್ನೂ ಹೊತ್ತರು.[೩]
ಮೋಡಕವಿದ ವಾತಾವರಣವಿಲ್ಲದಿದ್ದಾಗ ಡಿ ಬಾಂಟ್ ಚಿತ್ರದಲ್ಲಿನ ಸುಂಟರಗಾಳಿಯನ್ನು ಬೆಂಬತ್ತುವ ದೃಶ್ಯಗಳನ್ನು ಪ್ರಜ್ವಲಿಸುವ ಸೂರ್ಯನ ಬೆಳಕಿನಲ್ಲಿಯೇ ಚಿತ್ರಿಸಬೇಕಾಯಿತು; ಇದಕ್ಕಾಗಿ ಅವರು ಇಂಡಸ್ಟ್ರಿಯಲ್ ಲೈಟ್ & ಮ್ಯಾಜಿಕ್ ಸಂಸ್ಥೆಯನ್ನು ಮೊದಲು ಕೇಳಿದ್ದ ೧೫೦ "ಡಿಜಿಟಲ್ ಆಕಾಶ-ಬದಲಾವಣೆ" ದೃಶ್ಯಗಳನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಸರಬರಾಜು ಮಾಡಲು ಕೇಳಿದರು.[೩] ಪ್ರಮುಖ ಛಾಯಾಗ್ರಹಣಕ್ಕೂ ಒಂದು ಕಾಲಮಿತಿ ಇದ್ದಿತು, ಏಕೆಂದರೆ ಹಂಟ್ ಮ್ಯಾಡ್ ಎಬೌಟ್ ಯೂ ಸರಣಿಯ ಮತ್ತೊಂದು ಋತುವಿನ ಚಿತ್ರೀಕರಣಕ್ಕೆ ತೆರಳಬೇಕಿತ್ತು; ಆದರೆ ಟ್ವಿಸ್ಟರ್ ನ ಚಿತ್ರೀಕರಣವು ವಿಳಂಬಗೊಂಡಾಗ ಪಾಲ್ ರೀಯ್ಸರ್ ತಮ್ಮ ಚಿತ್ರೀಕರಣವನ್ನು ಎರಡೂವರೆ ವಾರಗಳ ವರೆಗೆ ಮುಂದಕ್ಕೆ ಹಾಕಿಕೊಳ್ಳಲು ಒಪ್ಪಿಕೊಂಡರು. ಡಿ ಬಾಂಟ್ ಅನೇಕ ಕ್ಯಾಮರಾಗಳ ಬಳಕೆ ಬೇಕೇಬೇಕೆಂದು ಹಠ ಹಿಡಿದುದರಿಂದ ಚಿತ್ರೀಕರಣಕ್ಕೆ೧.೩ ಮಿಲಿಯನ್ ಅಡಿಗಳಷ್ಟು ಕಚ್ಛಾ ಫಿಲ್ಮ್ ಖರ್ಚಾಯಿತು (ಸಾಮಾನ್ಯವಾಗಿ ಒಂದು ಚಿತ್ರದ ಚಿತ್ರೀಕರಣದಲ್ಲಿ ಬಳಸುವ ಫಿಲ್ಮ್ ನ ಉದ್ದ ೩೦೦,೦೦೦ ಅಡಿಗಳು).[೩]
ಟ್ವಿಸ್ಟರ್ ನ ಚಿತ್ರೀಕರಣದ ಖರ್ಚು ಸುಮಾರು $೭೦ ಮಿಲಿಯನ್, ಅದರಲ್ಲಿ $೨–೩ ಮಿಲಯನ್ ಅನ್ನು ನಿರ್ದೇಶಕರಿಗೆ ನೀಡಲಾಯಿತು ಎನ್ನುತ್ತಾರೆ ಡಿ ಬಾಂಟ್. ೧೯೯೬ ರ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಡೆದು ಕೊನೆಯ ಘಳಿಗೆಯ ಮರುಚತ್ರೀಕರಣಗಳು (ಜೋ ಮಗುವಾಗಿದ್ದಾಗಿನ ದೃಶ್ಯದ ಬಗ್ಗೆ ಸರಿಯಾದ ವಿವರಣೆ ನೀಡುವಂತಹ ದೃಶ್ಯವನ್ನು ತೆಗೆಯಲು) ಹಾಗೂ ನಿರ್ಮಾಣಾನಂತರದ ದಿನಗಳಲ್ಲಿ ILM ನಲ್ಲಿ ಅಗತ್ಯವಾದಂತಹ ಹೆಚ್ಚುವರಿ ಸಮಯಕ್ಕೆ ತೆತ್ತ ಹಣ, ಎಲ್ಲಾ ಸೇರಿ ಚಿತ್ರದ ಖರ್ಚು $೯೦ ಮಿಲಿಯನ್ ಮುಟ್ಟಿತೆಂದು ಅಂದಾಜಿಸಲಾಗಿತ್ತು.[೩] ಮಿಷನ್ ಇಂಪಾಸಿಬಲ್ ಚಿತ್ರವು ಬಿಡುಗಡೆಗೊಳ್ಳುವುದಕ್ಕೆ ಮುನ್ನ ಎರಡು ವಾರಾಂತ್ಯಗಳಾದರೂ ಸಿಗಲೆಂಬ ಉದ್ದೇಶದಿಮದ ಈ ಚಿತ್ರವನ್ನು ವಾರ್ನರ್ ಬ್ರದರ್ಸ್ ಮೇ ೧೭ ರ ಬದಲಿಗೆ ಮೇ ೧೦ ರಂದೇ ಬಿಡುಗಡೆ ಮಾಡಿದರು.
ಈ ಚಿತ್ರಕ್ಕ ನ್ಯೂಝಿಲೆಂಡ್ ನಲ್ಲಿ PG ಮನ್ನಣೆ ದೊರೆಯಿತು ಹಾಗೂ "ಬಹಳ ದುರ್ಜಯವಾದ ವಾತಾವರಣವನ್ನು ತೀವ್ರತರವಾಗಿ/ಬಹಳ ಸ್ಪಷ್ಟವಾಗಿ ತೋರಿಸಿದುದಕ್ಕೆ" USAಯಲ್ಲಿ PG-೧೩ ಮನ್ನಣೆಯನ್ನು ಪಡೆಯಿತು.
ಧ್ವನಿಪಥ
ಬದಲಾಯಿಸಿಟ್ವಿಸ್ಟರ್ ನಲ್ಲಿ ಸಾಂಪ್ರದಾಯಿಕ ಚಿತ್ರಸಂಗೀತದ ಹಾಡುಗಳು ( ಮಾರ್ಕ್ ಮ್ಯಾನ್ಸಿನಾರಿಂದ) ಇದೆ, ಅಲ್ಲದೆ ಹಲವಾರು ರಾಕ್ ಸಂಗೀತದ ಹಾಡುಗಳೂ ಇವೆ. ಈ ವಿಧದಲ್ಲಿ ಒಂದು ವಾದ್ಯಗಳಲ್ಲೇ ನುಡಿಸಲ್ಪಟ್ಟ ಶೀರ್ಷಿಕಾಗೀತೆಯೂ ಇದೆ; ಈ ಶೀರ್ಷಿಕಾಗೀತೆಯ ರಚನೆ ಮತ್ತು ನುಡಿಸುವಿಕೆಯು ವ್ಯಾನ್ ಹಾಲೆನ್ ರದಾಗಿದೆ. ರಾಕ್ ಧ್ವನಿಮುದ್ರಣ ಮತ್ತು ಸಂಗೀತಭರಿತ ಹಾಡುಗಳನ್ನು ಪ್ರತ್ಯೇಕವಾಗಿ ಕಾಂಪ್ಯಾಕ್ಟ್ ಡಿಸ್ಕ್ ಗಳಲ್ಲಿ ಬಿಡುಗಡೆ ಮಾಡಲಾಯಿತು.
ರಾಕ್ ಧ್ವನಿಮುದ್ರಣ
ಬದಲಾಯಿಸಿ- ವ್ಯಾನ್ ಹಾಲೆನ್ - "ಹ್ಯೂಮನ್ಸ್ ಬೀಯಿಂಗ್"
- ರಸ್ಟೆಡ್ ರೂಟ್ - "ವರ್ಚುಯಲ್ ರಿಯಾಲಿಟಿ"
- ಟೋರಿ ಅಮೋಸ್ - "ಟಾಲೂಲಾ (BTಯ ಟಾರ್ನಡೋ ಮಿಕ್ಸ್)"
- ಆಲಿಸನ್ ಕ್ರಾಸ್ - "ಮೊಮೆಂಟ್ಸ್ ಲೈಕ್ ದಿಸ್"
- ಮಾರ್ಕ್ ನಾಪ್ ಫ್ಲರ್ - "ಡಾರ್ಲಿಂಗ್ ಪ್ರೆಟಿ"
- ಸೌಲ್ ಅಸೈಲಂ - "ಮಿಸ್ ದಿಸ್"
- ಬೆಲ್ಲಿ - "ಬ್ರೋಕನ್"
- ಕೆ.ಡಿ. ಲ್ಯಾಂಗ್ - "ಲವ್ ಅಫೇಯ್ರ್"
- ನೈನ್ ಸ್ಟೋರೀಸ್ ಫೀಟ್. ಲಿಸಾ ಲೋಯೆಬ್ - "ಹೌ"
- ರೆಡ್ ಹಾಟ್ ಚಿಲಿ ಪೆಪರ್ಸ್ - "ಮೆಲಾಂಕಲಿ ಮೆಕ್ಯಾನಿಕ್ಸ್"
- ಗೂ ಗೂ ಡಾಲ್ಸ್ - "ಲಾಂಗ್ ವೇ ಡೌನ್"
- ಶಾನಿಯಾ ಟ್ವೈನ್ - "ನೋ ಒನ್ ನೀಡ್ಸ್ ಟು ನೋ"
- ಸ್ಟೀವೀ ನಿಕ್ಸ್ ಫೀಟ್. ಲಿಂಡ್ಸೇ ಬಕಿಂಗ್ ಹ್ಯಾಂ - "ಟ್ವಿಸ್ಟೆಡ್"
- ಎಡ್ವರ್ಡ್ & ಅಲೆಕ್ಸ್ ವ್ಯಾನ್ ಹಾಲೆನ್ - "ರೆಸ್ಪೆಕ್ಟ್ ದ ವಿಂಡ್"
ಸಂಗೀತದಲ್ಲಿನ ಗೀತೆಗಳು
ಬದಲಾಯಿಸಿ- ಓಕ್ಲಹೋಮಾ: ವೀಟ್ ಫೀಲ್ಡ್
- ಓಕ್ಲಹೋಮಾ: ವೇರ್ ಈಸ್ ಮೈ ಟ್ರಕ್?
- ಓಕ್ಲಹೋಮಾ: ಫ್ಯುಟಿಲಿಟಿ
- ಓಕ್ಲಹೋಮಾ: ಡೌನ್ ಡ್ರ್ಯಾಫ್ಟ್
- ಇಟ್ಸ್ ಕಮಿಂಗ್: ಡ್ರೈವ್ ಇನ್
- ಇಟ್ಸ್ ಕಮಿಂಗ್: ದ ಬಿಗ್ ಸಕ್
- ದ ಹಂಟ್: ಗೋಯಿಂಗ್ ಗ್ರೀನ್ (ಗಿಟಾರ್ ನಲ್ಲಿ ಟ್ರೆವರ್ ರೇಬಿನ್)
- ದ ಹಂಟ್:ಸ್ಕಲ್ಪ್ ಚರ್ಸ್
- ದ ಹಂಟ್: ಕೌ
- ದ ಹಂಟ್: ಡಿಚ್
- ದ ಡ್ಯಾಮೇಜ್: ವಕೀಟಾ
- ಹೇಯ್ಲ್ ಸ್ಟಾರ್ಮ್ ಹಿಲ್: ಬಾಬ್ಸ್ ರೋಡ್
- ಹೇಯ್ಲ್ ಸ್ಟಾರ್ಮ್ ಹಿಲ್: ವಿ ಆರ್ ಆಲ್ಮೋಸ್ಟ್ ದೇರ್
- F೫: ಡೊರೋತಿ IV
- F೫: ಮೊಬೈಲ್ ಹೋಮ್
- F೫: ಗಾಡ್ಸ್ ಫಿಂಗರ್
- ಇತರೆ:ವಿಲಿಯಮ್ ಟೆಲ್ ಓವರ್ಚರ್/ಓಕ್ಲಹೋಮಾಸ್ ಮೆಡ್ಲೀ
- ಇತರೆ: ಕಡೆಯ ಶೀರ್ಷಿಕೆ/ರೆಸ್ಪೆಕ್ಟ್ ದ ವಿಂಡ್ - ರಚನೆ ಎಡ್ವರ್ಡ್ & ಅಲೆಕ್ಸ್ ವ್ಯಾನ್ ಹಾಲೆನ್
ಚಿತ್ರದಲ್ಲಿದ್ದು, ಧ್ಚನಿಮುದ್ರಣವಾಗಿ ಅಥವಾ ಹಾಡುಗಳ ಸಿಡಿಯಲ್ಲಾಗಲಿ ಬಿಡುಗಡೆಯಾಗದ ಕೆಲವು ಹಾಡುಗಳಿದ್ದವು; ಅದರಲ್ಲಿ ಗಮನಾರ್ಹವಾದುದೆಂದರೆ ಹ್ಯೂಮನ್ಸ್ ಬೀಯಿಂಗ್ ಗೆ ಪರಿಚಯಿಸುವಂತಹ ವಾದ್ಯಸಂಗೀತ - ಜೋ ರ ತಂಡವು ವಕೀಟಾ ಬಿಟ್ಟು ಹೇಯ್ಲ್ ಸ್ಟಾರ್ಮ್ ಹಿಲ್ ಸುಂಟರಗಾಳಿಯನ್ನು ಬೆಂಬತ್ತುವಾಗ ಈ ಹಾಡು ಹಿನ್ನೆಲೆಯಲ್ಲಿ ನುಡಿಸಲಾಗಿದೆ. ಇತರ, ಕಡಿಮೆ ಪ್ರಸಿದ್ಧಿ ಪಡೆದ ಹಾಗೂ ಸಿಡಿಗಳಿಂದ ಹೊರತಾದ ಹಾಡುಗಳ ಪೈಕಿ ಮೊದಲು ಜೊನಾಸ್ ರನ್ನು ಭೇಟಿಯಾದಾಗ ಇರುವ "ಗೋಯಿಂಗ್ ಗ್ರೀನ್" ನ ವಿಸ್ತೃತ ಆವೃತ್ತಿಯ ಹಾಡು ಮತ್ತು ಸುಂಟರಗಾಳಿಯನ್ನು ಮೊದಲು ಕಂಡಾಗ ನುಡಿಸಿರುವ ಒಂದು ಸಣ್ಣ ಗೀತೆ. ವಿಪರ್ಯಾಸವೆಂದರೆ ಚಿತ್ರದಲ್ಲೇ ಇಲ್ಲದ ಕೆಲವು ಹಾಡಿನ ತುಣುಕುಗಳನ್ನು ಸಿಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ತುಣುಕುಗಳ ಪೈಕಿ - ಆದರೆ ಈ ತುಣುಕುಗಳಿಗಷ್ಟೇ ಸೀಮಿತವಾಗದೆ - ಸಿಡಿಯಲ್ಲಿ ಕಾಣಿಸಿಕೊಂಡಿರುವ ಹಾಡುಗಳೆಂದರೆ "ವೇರ್ಸ್ ಮೈ ಟ್ರಕ್," "ಡಿಚ್" ನ ಉತ್ತರಾರ್ಧ, "ವಿ ಆರ್ ಆಲ್ಮೋಸ್ಟ್ ದೇರ್" ನ ಉತ್ತರಾರ್ಧ ಮತ್ತು "ಮೊಬೈಲ್ ಹೋಂ." ನ ಪೂರ್ವಾರ್ಧ
ಶಕ್ಯವಾದ ಮುಂದುವರಿದ ಭಾಗಗಳು
ಬದಲಾಯಿಸಿHBO ವಾಹಿನಿಯ ಬಿಗ್ ಲವ್ ನ ಹೊಸ ಋತುವಿಗೆ ಪ್ರಚಾರ ನೀಡಲು ಬುಲ್ಝ್-ಐ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಾ ಬಿಲ್ ಪ್ಯಾಕ್ಸ್ ಟನ್ ತಾವು ಚಿತ್ರ ನಿರ್ಮಾಪಕಿಯಾದ ಕ್ಯಾಥ್ಲೀನ್ ಕೆನೆಡಿಯವರನ್ನು ಭೇಟಿಯಾದಾಗ ಅವರುಟ್ವಿಸ್ಟರ್ ೨ ಚಿತ್ರ ತೆಗೆಯಲು ಬಯಸಿದರೆಂದು ಹೇಳಿದರು. ಇದು ೧೯೯೬ ರ ಚಿತ್ರ ಟ್ವಿಸ್ಟರ್ ನ ಮುಂದುವರಿದ ಭಾಗವಾಗಿರುತ್ತದೆ ಮೂಲ ಚಿತ್ರದಲ್ಲಿ ಹೆಲೆನ್ ಹಂಟ್, ಬಿಲ್ ಪ್ಯಾಕ್ಸ್ ಟನ್, ಕ್ಯಾರಿ ಎಲ್ವೆಸ್ ಮತ್ತು ಜೇಮಿ ಗೆರ್ಟ್ಝ್ ಅಭಿನಯಿಸಿದ್ದರು. ಈ ಮುಂದುವರಿದ ಭಾಗವು ಒಂದು ವೇಳೆ ನಿರ್ಮಾಣಗೊಳ್ಳುವುದಾದರೆ ತಾವು ಅದನ್ನು ನಿರ್ದೇಶಿಸಲು ಬಯಸುವುದಾಗಿ ಪ್ಯಾಕ್ಸ್ ಟನ್ ನುಡಿದರು.
ಸ್ವೀಕೃತಿ
ಬದಲಾಯಿಸಿಟ್ವಿಸ್ಟರ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು; ರಾಟನ್ ಟೊಮ್ಯಾಟೋಸ್ ಅದಕ್ಕೆ ೫೮% ಅಂಕಗಳನ್ನು ನೀಡಿತು,[೪] ಮತ್ತು score of ೬೮ at ಮೆಟಾಕ್ರಿಟಿಕ್ ಅದಕ್ಕೆ ಒಂದು ತೂಗಿನೀಡಿದ ಸರಾಸರಿ ೬೮ ಅಂಕಗಳನ್ನು ನೀಡಿತು.[೫]
ರೋಜರ್ ಎಲ್ಬರ್ಟ್ ಈ ಚಿತ್ರಕ್ಕೆ ಗರಿಷ್ಠ ನಾಲ್ಕರಲ್ಲಿ ಎರಡೂವರೆ ಸ್ಟಾರ್ ಗಳನ್ನು ನೀಡುತ್ತಾ "ನಿಮಗೆ ಕಿವಿಗಡಚಿಕ್ಕುವ, ಬುದ್ಧಿಗೆ ಕೆಲಸವಿಲ್ಲದ, ಕೌಶಲ್ಯಯುತ, ಸತ್ಯದಿಂದ ದೂರವಾದ ವಿನೋದ ಬೇಕೆ? ಹಾಗಿದ್ದರೆ ಟ್ವಿಸ್ಟರ್ ನೋಡಿ. ಆಲೋಚನೆಗೆ ಹಚ್ಚಬೇಕೆ? ಹಾಗಾದರೆ ಇದನ್ನು ನೋಡುವ ಮುನ್ನ ಮತ್ತೊಮ್ಮೆ ಯೋಚಿಸಿ" ಎಂದು ಬರೆದರು.[೬] ನ್ಯೂ ಯಾರ್ಕ್ ಟೈಮ್ಸ್ ಗಾಗಿ ಜಾನೆಟ್ ಮಸ್ಲಿನ್ ಬರೆದ ವಿಮರ್ಶೆಯಲ್ಲಿ ಅವರು "ಅದು ಹೇಗೋ ಏನೋ, ಟ್ವಿಸ್ಟರ್ ರೋಲರ್-ಕೋಸ್ಟರ್ ರೈಡ್ ನಂತೆ ಸೊಂಪಾಗಿಯೂ, ಮೇಲುಸ್ತರದಲ್ಲಿಯೂ ಉಳಿದುಕೊಂಡು, ನಿಜವಾದ ಅಪಾಯದ ಚಿಂತೆಯನ್ನು ಸರಿಸುಮಾರು ಇಲ್ಲದಿರುವಂತೆಯೇ ತೋರಿಸುತ್ತದೆ" ಎಂದು ಬರೆದರು.[೭] . ಎಂಟರ್ಟೈನ್ಮೆಂಟ್ ವೀಕ್ಲಿ ಈ ಚಿತ್ರಕ್ಕೆ B ಮನ್ನಣೆ ನೀಡಿತು ಹಾಗೂ ಲಿಸಾ ಷ್ವಾರ್ಝ್ ಬಾಮ್ "ಆದರೂ ನನ್ನ ಮನದಲ್ಲಿ ಬಹಳ ಕಾಲದವರೆಗೆ ಉಳಿಯುವುದು ಗಾಳಿಯಹೊಡೆತಕ್ಕೆ ಸಿಲುಕಿದ ಜಾನುವಾರುಗಳು. ಹಾಗೂ ಈ ದೃಶ್ಯಗಳೇ, ಹ್ರಸ್ವರೂಪದಲ್ಲಿಯೇ ಹೇಳುವುದಾದರೆ, ಒಳಿತು ಮತ್ತು ಕೆಡಕುಗಳನ್ನು ಒಟ್ಟಾಗಿ ತೋರಿಸುತ್ತದೆ; ಇದು ಇಷ್ಟಪಡುವಷ್ಟು ಗದ್ದಲದಿಂದ ಕೂಡಿದೆ ಹಾಗೂ ಈ ಬೇಸಿಗೆಯ ಅತ್ಯಂತ ಯಶಸ್ವಿ ಚಿತ್ರವಾಗಿದೆ" ಎಂದು ಬರೆದರು.[೮] ಲಾಸ್ ಏಂಜಲೀಸ್ ಟೈಮ್ಸ್ ನ ಕೆನೆತ್ ಟ್ಯುರನ್ ತಮ್ಮ ವಿಮರ್ಶೆಯಲ್ಲಿ "ಆದರೆ ಈ ಸರ್ಕಸ್ ನ ರಿಂಗ್ ಮಾಸ್ಟರ್, ಯಾರಿಲ್ಲದೆ ಏನೂ ಸಾಧ್ಯವಿಲ್ಲವೋ, ಅವರು ಡಿ ಬಾಂಟ್. ಅವರನ್ನು ಈಗಲಾದರೂ ಹಾಲಿವುಡ್ ನ ಶ್ರೇಷ್ಠ ಸಾಹಸ ಪರಿಣಿತರೆಂದು ಪರಿಗಣಿಸಬೇಕು. ವೀಕ್ಷಕರು ಕುಳಿತಲ್ಲೇ ತಿರುಗುವಂತೆ ಮತ್ತು ತಿಣುಕುವಂತೆ ಮಾಡುವುದರಲ್ಲಿ ವಿಶೇಷ ಹಿಡಿತವನ್ನು ಇವರು ಸಾದಿಸಿರುವರು, ನಟರೊಡನೆಯೇ ನಾವೂ ಆ ಅನುಭವಗಳನ್ನು ಹೊಂದುತ್ತಿರುವಂತೆ ಭಾಸವಾಗುವ ಹಾಗೆ ಮಾಡಬಲ್ಲ ಕುಶಲಕರ್ಮಿ, ಡಿ ಬಾಂಟ್ ಸಾಹಸ ಮತ್ತು ಕೌತುಕವನ್ನೂ ನೃತ್ಯನಿರ್ದೇಶಿಸುವಂತೆ ನಿರ್ದೇಶಿಸಬಲ್ಲರು, ಇದೆಲ್ಲವನ್ನೂ ಅವರು ಒಂದು ಚಿಟಿಕೆ ಹೊಡೆಯುವಷ್ಟೇ ಸುಲಭವಾಗಿ ಸಾಧಿಸಬಲ್ಲರು" ಎಂದು ಬರೆದರು.[೯] ಟೈಮ್ ಮ್ಯಾಗಝೀನ್ ನ ರಿಚರ್ಡ್ ಸ್ಖಿಕ್ಕೆಲ್ "ಸಾಹಸದ ದೃಶ್ಯಗಳಲ್ಲಿ ಮಾರಣಾಂತಿಕವಾದ ಅಥವಾ ದಯನೀಯವಾದ ಪರಿಸ್ಥಿತಿಗಳನ್ನು ತೋರಿಸದಿದ್ದರೆ ಅದು ಚಿತ್ತಚಾಂಚಲ್ಯವನ್ನು ಮೂಡಿಸುವುದು. ಸ್ವಲ್ಪ ಸಮಯ ಕಳೆಯುತ್ತಲೇ ನೀವು ಸುಂಟರಗಾಳಿಯನ್ನು ವೀಕ್ಷಿಸುತ್ತಿರುವುದಿಲ್ಲ, ವಿಶೇಷ-ಪರಿಣಾಮಗಳನ್ನು (ಸ್ಪೆಷಲ್ ಎಫೆಕ್ಟ್ಸ್) ವೀಕ್ಷಿಸುತ್ತಿರುತ್ತೀರಿ" ಎಂದು ಬರೆದರು.[೧೦] ವಾಷಿಂಗ್ಟನ್ ಪೋಸ್ಟ್ ಗಾಗಿ ಡೆಸ್ಸನ್ ಹೋವ್ ಹೀಗೆ ವಿಮರ್ಶಿಸಿದ್ದಾರೆ "ಇದು ಕಥಾನಕ ಮತ್ತು ನಟರ ಕೌಶಲಗಳ ಮೇಲೆ ತಾಂತ್ರಿಕತೆಯು ಸಾಧಿಸಿರುವ ವಿಜಯ. ಇಲ್ಲಿ ಪಾತ್ರಧಾರಿಗಳು ಸುಮ್ಮನೆ ಕೆಲವು ಜೋಕ್ ಗಳನ್ನು ಹೇಳಲು, ಬಿರುಗಾಳಿ, ಮಳೆ ಬಂದಾಗ ಹೆದರಿ ಅಡಗಿ ಕುಳಿತುಕೊಳ್ಳಲು ಹಾಗೂ ಸುಂಟರಗಾಳಿಗಳು ಬರುವ ಮಧ್ಯಂತರದಲ್ಲಿ ಸುಮ್ಮನೆ ಕಾಲ ಕಳೆಯಲು ಮಾತ್ರ ಇದ್ದಾರೆ".[೧೧]
ನಗರ ದಂತಕತೆ
ಬದಲಾಯಿಸಿಮೇ ೨೪, ೧೯೯೬ ರಂದು ನಯಾಗರಾ ಫಾಲ್ಸ್, ಆಂಟಾರಿಯೋದಲ್ಲಿದ್ದ ಒಂದು ಡ್ರೈವ್-ಇನ್ ಥಿಯೇಟರ್ ಟ್ವಿಸ್ಟರ್ ಚಿತ್ರವನ್ನು ತೆರೆಗಾಣಿಸಬೇಕೆನ್ನುವ ಸಂದರ್ಭದಲ್ಲಿಯೇ ಸುಂಟರಗಾಳಿಯೊಂದು ಧ್ವಂಸ ಮಾಡಿತು; ನಿಜಜೀವನದಲ್ಲಿಯೂ ಈ ಹಿಂದೆ ಚಿತ್ರದಲ್ಲಿ ತೋರಿಸಿದಂತಹ ದೃಶ್ಯಕ್ಕೆ ಸಮಾನವಾದ ದೃಶ್ಯ ಮರುಕಳಿಸಿದುದು ಸೋಜಿಗವೇ ಸೈ. ಚಿತ್ತದಲ್ಲಿ ಸುಂಟರಗಾಳಿಯೊಂದು ದ ಶೈನಿಂಗ್ ಚಿತ್ರವನ್ನು ಡ್ರೈವ್-ಇನ್ ಥಿಯೇಟರ್ ನವರು ತೋರಿಸುತ್ತಿರುವಾಗ ಥಿಯೇಟರನ್ನು ಅಪ್ಪಳಿಸಿ ಧ್ವಂಸ ಮಾಡುವ ದೃಶ್ಯವಿದೆ.[೧೨] ಈ ವಾಸ್ತವಕ್ಕೆ ಬಣ್ಣಕಟ್ಟಿದ ನಾಗರಿಕ ದಂತಕಥೆಯೊಂದು ಹುಟ್ಟಿಕೊಂಡು ಆ ಥಿಯೇಟರ್ ಸುಂಟರಗಾಳಿ ಬಡಿದಾಗ ನಿಜಕ್ಕೂ ಟ್ವಿಸ್ಟರ್ ಚಿತ್ರವನ್ನೇ ತೋರಿಸುತ್ತಿದ್ದಿತೆಂಬ ಸುದ್ದಿ ಹರಡಿತು.[೧೩]
ಮೇ ೧೦, ೨೦೧೦ ರಂದು ಫೇಯ್ರ್ ಫಾಕ್ಸ್, ಓಕ್ಲಹೋಮಾದಲ್ಲಿನ, ಟ್ವಿಸ್ಟರ್ ಚಿತ್ರದ ಹಲವಾರು ದೃಶ್ಯಗಳನ್ನು ಚಿತ್ರೀಕರಿಸಿದ, ತೋಟದಮನೆಯೊಂದು ಸುಂಟರಗಾಳಿಗೆ ಸಿಲುಕಿ ನಾಶವಾಯಿತು. ಮಾಜಿ ಓಕ್ಲಹೋಮಾದ ಸೆನೇಟರ್ ಮತ್ತು ಆ ತೋಟದ ಮನೆಯ ಮಾಲಿಕರಾದ ಜೆ, ಬೆರಿ ಹ್ಯಾರಿಸನ್ ಆ ಸುಂಟರಗಾಳಿಯು ಚಿತ್ರದಲ್ಲಿ ತೋರಿಸಿದಂತಹ ಸುಂಟರಗಾಳಿಯನ್ನೇ ಬೆಚ್ಚಿಬೀಳುವಷ್ಟು ಮಟ್ಟಕ್ಕೆ ಹೋಲುತ್ತಿತ್ತೆಂದು ಹೇಳಿದರು. ಹ್ಯಾರಿಸನ್ ೧೯೭೮ ನೆಯ ಇಸವಿಯಿಂದ ಆ ಮನೆಯಲ್ಲಿ ವಾಸವಾಗಿದ್ದರು.[೧೪]
ಥೀಮ್ ಪಾರ್ಕ್ ನ ಆಕರ್ಷಣೆ
ಬದಲಾಯಿಸಿಈ ಚಿತ್ರವನ್ನು {1}ಯೂನಿವರ್ಸಲ್ ಸ್ಟುಡಿಯೋ, ಫ್ಲೋರಿಡಾ{/1}ದಲ್ಲಿನ ಪ್ರಮುಖ ಆಕರ್ಷಣೆಯಾದ ಟ್ವಿಸ್ಟರ್... ರೈಡ್ ಇಟ್ ಔಟ್ ಗೆ ಪ್ರಮುಖವಾಗಿ ಬಳಸಿಕೊಳ್ಳಲಾಯಿತು; ಇಲ್ಲಿನ ಈ ಪ್ರಮುಖ ಆಕರ್ಷಣೆಗೆ ಹೆಲೆನ್ ಹಂಟ್ ಮತ್ತು ಬಿಲ್ ಪ್ಯಾಕ್ಸ್ ಟನ್ ರ ಚಿತ್ರೀಕೃತ ಪರಿಚಯನುಡಿಗಳೂ ಇವೆ.
ಉಲ್ಲೇಖಗಳು
ಬದಲಾಯಿಸಿ- ↑ ಟ್ವಿಸ್ಟರ್ (1996) - ಸಣ್ಣಪುಟ್ಟ ವಿಷಯಗಳು
- ↑ HD DVD ಡಿಸ್ಕ್ ಗಳು ಬಿಡುಗಡೆಗೊಂಡ ಚರಿತ್ರಾರ್ಹ ದಿನಗಳು| ಹೈ ಡೆಫ್ ಡೈಜೆಸ್ಟ್
- ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ Daly, Steve (May 17, 1996). "The War of the Winds". Entertainment Weekly. Archived from the original on 2014-08-09. Retrieved 2009-06-14.
- ↑ ಟ್ವಿಸ್ಟರ್ ಚಲನಚಿತ್ರದ ವಿಮರ್ಶೆಗಳು, ಚಿತ್ರಗಳು - ರಾಟನ್ ಟೊಮ್ಯಾಟೋಸ್
- ↑ ಟ್ವಿಸ್ಟರ್ ವಿಮರ್ಶಕರು Archived 2009-11-13 ವೇಬ್ಯಾಕ್ ಮೆಷಿನ್ ನಲ್ಲಿ. ವಾರ್ನರ್ ಬ್ರದರ್ಸ್
- ↑ Ebert, Roger (May 10, 1996). "Twister". Chicago Sun-Times. Archived from the original on 2013-03-11. Retrieved 2009-09-03.
- ↑ Maslin, Janet (May 10, 1996). "Twister". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-09-03.
- ↑ Schwarzbaum, Lisa (May 24, 1996). "Twister". Entertainment Weekly. Archived from the original on 2009-06-16. Retrieved 2009-09-03.
- ↑ Turan, Kenneth (May 10, 1996). "Twister". Los Angeles Times. Retrieved 2009-09-03. [ಮಡಿದ ಕೊಂಡಿ]
- ↑ Schickel, Richard (May 20, 1996). "Twister". Time. Archived from the original on 2012-11-05. Retrieved 2009-09-03.
- ↑ Howe, Desson (May 10, 1996). "Twister: Special Effects and Hot Air". Washington Post. Retrieved 2009-09-03.
- ↑ "Tornado Destroys Twister Theater". Associated Press. May 22, 1996.
- ↑ Steyn, Mark (May 24, 1996). "A Nobody in My Neck of the Woods". Daily Telegraph.
- ↑ "ಟ್ವಿಸ್ಟರ್ ಚಿತ್ರದಲ್ಲಿ ಚಿತ್ರೀಕರಣಕ್ಕೆಂದು ಬಳಸಿದ್ದ ಓಕ್ಲಹೋಮಾದ ತೋಟದಮನೆಯು ಕಳೆದ ವಾರ ನಿಜವಾದ ಸುಂಟರಗಾಳಿಗೆ ಸಿಲುಕಿ ಧ್ವಂಸವಾಯಿತುm". Archived from the original on 2011-07-03. Retrieved 2011-06-11.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಚಿತ್ರದ ಅಧಿಕೃತ ಜಾಲತಾಣ
- Twister @ ಐ ಎಮ್ ಡಿ ಬಿ
- Twister at AllMovie
- Twister at Rotten Tomatoes
- ಟ್ವಿಸ್ಟರ್ ವಸ್ತುಸಂಗ್ರಹಾಲಯ Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ. ವಕೀಟಾ, ಓಕ್ಲಹೋಮಾ
- ಶೀರ್ಷಿಕಾಗೀತೆಯನ್ನು ಕೇಳಿರಿ