ನಾಗಾಭರಣ

ಭಾರತೀಯ ಚಿತ್ರ ನಿರ್ದೇಶಕ, ರಂಗಕರ್ಮಿ
(ಟಿ.ಎಸ್.ನಾಗಾಭರಣ ಇಂದ ಪುನರ್ನಿರ್ದೇಶಿತ)

ಟಿ. ಎಸ್. ನಾಗಾಭರಣ (ತಲಕಾಡು ಶ್ರೀನಿವಾಸಯ್ಯ ನಾಗಾಭರಣ (ಜನನ ೨೩ ಜನವರಿ ೧೯೫೩)) ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಕಲಾತ್ಮಕ ಮತ್ತು ಮುಖ್ಯವಾಹಿನಿ ಚಿತ್ರಗಳೆರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ತಮ್ಮ ೪೦ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೬ ಕನ್ನಡ ಚಿತ್ರಗಳಲ್ಲಿ ೧೦ ಚಿತ್ರಗಳಿಗೆ ರಾಷ್ಟ್ರೀಯ, ೨೩ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿವೆ ಹಾಗು ೮ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತೀಯ ಪನಾರೋಮಕ್ಕೆ ಆಯ್ಕೆ ಆಗಿವೆ.

ಟಿ.ಎಸ್. ನಾಗಾಭರಣ
ಜನನ
ತಲಕಾಡು ಶ್ರೀನಿವಾಸಯ್ಯ ನಾಗಾಭರಣ

(1953-01-23) ೨೩ ಜನವರಿ ೧೯೫೩ (ವಯಸ್ಸು ೭೧)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಿತ್ರನಿರ್ದೇಶಕ, ನಟ, ನಿರ್ಮಾಪಕ, ರಂಗಭೂಮಿ ಕಲಾವಿದ.
ಸಕ್ರಿಯ ವರ್ಷಗಳು1978 –
ಗಮನಾರ್ಹ ಕೆಲಸಗಳುನಾಗಮಂಡಲ, ಜನುಮದ ಜೋಡಿ
ಸಂಗಾತಿನಾಗಿಣಿ ಭರಣ
ಮಕ್ಕಳುಪನ್ನಗ ಭರಣ (ಮಗ), ಶ್ರುತಾಭರಣ (ಮಗಳು)

ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ನಾಗಾಭರಣ ಅವರ ಕೊಡುಗೆ ಗಣನೀಯ. ಹೆಸರಾಂತ ರಂಗತಜ್ಞ ಪದ್ಮಶ್ರೀ ಬಿ ವಿ ಕಾರಂತ್ ಅವರ ಶಿಷ್ಯರಾಗಿ ತರಬೇತಿ ಪಡೆದು, ಕಳೆದ ನಲವತ್ತು ವರ್ಷಗಳಲ್ಲಿ ನಟ, ನಿರ್ದೇಶಕ ಮತ್ತು ಲೇಖಕರಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು ೩೬ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಕಿರುತೆರೆಯಲ್ಲಿ, ದೂರದರ್ಶನಕ್ಕೆ ಮೊಟ್ಟಮೊದಲ ಕನ್ನಡ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ ಹಿರಿಮೆ ಅವರಿಗಿದೆ. ತದನಂತರ ನಾಗಾಭರಣ ದೂರದರ್ಶನ ಹಾಗು ಇತರ ವಾಹಿನಿಗಳಿಗೆ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದರು.

ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ನಾಟಕ ತಂಡ ಹಾಗೂ ಇತರ ರೆಪರ್ಟರಿಗಳಿಗೆ ಅವರು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ನಾಗಾಭರಣ ಅವರು ಅನೇಕ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[] ಇದು ಕ್ಯಾಬಿನೆಟ್ ಮಂತ್ರಿ ಪದವಿಯ ಸಮಾನಾಂತರವಾಗಿದೆ.

ನಾಗಾಭರಣರವರು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (ರಾಜ್ಯ ಚಲನಚಿತ್ರ ಮಂಡಳಿ).[][]

ಅವರ ಕೆಲವು ಜನಪ್ರಿಯ ಚಲನಚಿತ್ರಗಳು ಹಿಂದಿ ಚಲನಚಿತ್ರಗಳಿಗೆ ಪ್ರಮುಖ ಸ್ಫೂರ್ತಿ ಎಂದು ಗುರುತಿಸಲ್ಪಟ್ಟವು. ಅವುಗಳಲ್ಲಿ ಮೈಸೂರು ಮಲ್ಲಿಗೆ ಮತ್ತು ೧೯೪೨: ಎ ಲವ್ ಸ್ಟೋರಿ ಪ್ರಮುಖವಾದವುಗಳು.[]

ಬಾಲ್ಯ ಮತ್ತು ಆರಂಭಿಕ ಜೀವನ

ಬದಲಾಯಿಸಿ

ಮೈಸೂರು ಜಿಲ್ಲೆಯ ತಲಕಾಡಿನಲ್ಲಿ ಎ ಶ್ರೀನಿವಾಸಯ್ಯ ಮತ್ತು ರುದ್ರಮ್ಮ ಅವರ ಐದು ಗಂಡುಮಕ್ಕಳಲ್ಲಿ ಎರಡನೆಯವರಾಗಿ ನಾಗಾಭರಣರವರು ೧೯೫೩ರ ಜನವರಿ ೨೩ರಂದು ಜನಿಸಿದರು. ಅವರ ಇಬ್ಬರೂ ತಾತಂದಿರಾದ ಮದ್ದಳೆ ಗಿರಿಗೌಡ ಮತ್ತು ತಿಪ್ಪೆಗೌಡ ರೈತಾಪಿ ಜನಗಳಾಗಿದ್ದರೂ ಯಕ್ಷಗಾನದಲ್ಲಿ ಪರಿಣತಿ ಹೊಂದಿದ್ದರು. ಅವರ ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಾಗಾಭರಣರವರು ಆಂಗ್ಲ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವೀಧರರೂ ಆಗಿದ್ದಾರೆ.ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಕಾಲೇಜು ದಿನಗಳಲ್ಲಿದ್ದಾಗಲೆ ನಾಗಾಭರಣ ಅವರು ಖ್ಯಾತ ನಾಟಕರಚನೆಕಾರ ಮತ್ತು ರಂಗತಜ್ಞ ಶ್ರೀರಂಗ ಅವರ ಸಂಪರ್ಕದ ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಗಾಭರಣರವರು ಏವಂ ಇಂದ್ರಜಿತ್ ಮತ್ತು ಶೋಕ ಚಕ್ರ ನಾಟಕಗಳನ್ನುನಿರ್ದೇಶಿಸಿದರು. ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳಲ್ಲಿ ತೊಡಗಿಕೊಂಡು, ಪ್ರಾರಂಭದ ಹಂತದಲ್ಲಿ ರಂಗ ತಂತ್ರಜ್ಞರಾಗಿ ಹಿನ್ನೆಲೆಯಲ್ಲಿ ಕೆಲಸವನ್ನು ಮಾಡಿ ಕ್ರಮೇಣ ನಟ, ಗಾಯಕ ಮತ್ತು ನಿರ್ದೇಶಕರಾದರು. ನಾಗಿಣಿಯವರು ನಾಗಾಭರಣರವರ ಪತ್ನಿ.

ಬಾಲ್ಯ, ಶಿಕ್ಷಣ, ಪ್ರಾರಂಭದ ಹಂತ

ಬದಲಾಯಿಸಿ

ಮೈಸೂರು ಜಿಲ್ಲೆಯ ತಲಕಾಡಿನಲ್ಲಿ, ಎ ಶ್ರೀನಿವಾಸಯ್ಯ ಮತ್ತು ರುದ್ರಮ್ಮ ಅವರ ಐದು ಗಂಡುಮಕ್ಕಳಲ್ಲಿ ಎರಡನೆಯವರಾಗಿ ನಾಗಾಭರಣ ಅವರು ೨೩ ಜನವರಿ ೧೯೫೩ ರಲ್ಲಿ ಜನಿಸಿದರು. ಅವರ ಇಬ್ಬರೂ ತಾತಂದಿರು ಮದ್ದಳೆ ಗಿರಿಗೌಡ ಮತ್ತು ತಿಪ್ಪೆಗೌಡ ರೈತಾಪಿ ಜನಗಳಾಗಿದ್ದರೂ ಯಕ್ಷಗಾನದಲ್ಲಿ ಪರಿಣತಿ ಹೊಂದಿದ್ದರು. ಬಾಲಕ ನಾಗಾಭರಣ ಅವರ ಮೇಲೆ ಇವರಿಬ್ಬರ ಪ್ರಭಾವ ದಟ್ಟವಾಗಿತ್ತು. ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಕಾಲೇಜು ದಿನಗಳಲ್ಲೇ ನಾಗಾಭರಣ ಅವರು ಖ್ಯಾತ ನಾಟಕರಚನೆಕಾರ ಮತ್ತು ರಂಗತಜ್ಞ ಶ್ರೀರಂಗ ಅವರ ಸಂಪರ್ಕ ಒದಗಿಬಂದು ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಗಾಭರಣ ಏವಂ ಇಂದ್ರಜಿತ್ ಮತ್ತು ಶೋಕ ಚಕ್ರ ನಾಟಕಗಳನ್ನು ನಿರ್ದೇಶಿಸಿದರು. ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳಲ್ಲಿ ತೊಡಗಿಸಿಕೊಂಡು, ಪ್ರಾರಂಭದ ಹಂತದಲ್ಲಿ ರಂಗ ತಂತ್ರಜ್ಞರಾಗಿ ಹಿನ್ನೆಲೆಯಲ್ಲಿ ಕೆಲಸ ಶ್ರಮಿಸಿ, ಕ್ರಮೇಣ ನಟ, ಗಾಯಕ, ನಿರ್ದೇಶಕರಾದರು.

ಈ ರಂಗಾಸಕ್ತಿಯ ದಿನಗಳಲ್ಲೇ, ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನಾಗಿಣಿ ಅವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಅವರು ೧೦, ಡಿಸೆಂಬರ್ ೧೯೭೯ ರಲ್ಲಿ ಮದುವೆಯಾದರು. ಅಂದಿನಿಂದ ಇಂದಿನವರೆಗೂ ದಂಪತಿಗಳು ಚಿತ್ರ ಹಾಗು ರಂಗಭೂಮಿಯಲ್ಲಿ ಒಟ್ಟಿಗೆ ತೊಡಗಿಕೊಂಡಿದ್ದಾರೆ. ನಾಗಿಣಿ ಭರಣ ಮಕ್ಕಳ ಚಿತ್ರ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಮತ್ತು ಕಲ್ಲರಳಿ ಹೂವಾಗಿ ಚಿತ್ರಕ್ಕೆ ಅತ್ಯುತ್ತಮ ವಸ್ತ್ರಾಲಂಕಾರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನಾಗಾಭರಣ ದಂಪತಿಗಳ ಮಕ್ಕಳು ಪನ್ನಗ ಭರಣ ಹಾಗು ಶ್ರುತಾ ಭರಣ. ಪನ್ನಗಾ ಭರಣ ಸ್ವತಃ ಚಿತ್ರ ನಿರ್ದೇಶಕರಾಗಿದ್ದು ಶ್ರುತಾ ಭರಣ “ಬಾಪ” ದಲ್ಲಿ ಶಿಕ್ಷಕಿಯಾಗಿ ತೊಡಗಿಕೊಂಡಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ನಾಗಾಭರಣ ಅವರು ಬಿ ಎಸ್ಸಿ ಪದವಿ ಪಡೆಯುವ ಮೊದಲೇ ಗಂಭೀರ ರಂಗ ನಟ ಹಾಗು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಸಂಗ್ಯಾ ಬಾಳ್ಯ , ಕತ್ತಲೆ ಬೆಳಕು, ಶಕಾರನ ಸಾರೋಟು, ಜೋಕುಮಾರ ಸ್ವಾಮಿ, ಈಡಿಪಸ್, ಸತ್ತವರ ನೆರಳು, ಕೃಷ್ಣ ಪಾರಿಜಾತ, ಟಿಂಗರ ಬುಡ್ಡಣ್ಣ , ಮುಂದೇನಾ ಸಖಿ ಮುಂದೇನಾ, ಹಯವದನ, ನೀಗಿಕೊಂಡ ಸಂಸ, ಬಕ, ಬ್ಲಡ್ ವೆಡ್ಡಿಂಗ್ ಮುಂತಾದ ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬಿಎಸ್ಸಿ ನಂತರ ನಾಗಾಭರಣ ಎಲ್ ಎಲ್ ಬಿ ಪದವಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಲಾ ಕಾಲೇಜು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಗಿರೀಶ್ ಕಾರ್ನಾಡ ಅವರ ಕಾಡು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಮತ್ತು ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತ ಅವರಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು. ಎರಡೂ ಚಿತ್ರಗಳು ಹಲವಾರು ಪ್ರಶಸ್ತಿ ಪಡೆದವು. ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಚಿತ್ರ ನಿರ್ದೇಶಿಸುವ ಹಂಬಲವಾಗಿ ಬಹಳ ಕಷ್ಟಪಟ್ಟು ತಮ್ಮ ಮೊದಲ ಚಿತ್ರ ಗ್ರಹಣ ನಿರ್ದೇಶಿಸಿದರು. ಅದಕ್ಕೆ ೧೯೭೯ ರ ರಾಷ್ಟ್ರೀಯ ಐಕ್ಯತೆಯ ಅತ್ಯುತ್ತಮ ಚಿತ್ರ ಎಂದು ನರ್ಗಿಸ್ ದತ್ ರಾಷ್ಟ್ರಪ್ರಶಸ್ತಿ ಹಾಗು ಅತ್ಯುತ್ತಮ ಚಿತ್ರಕತೆ (ನಾಗಾಭರಣ ಮತ್ತು ಟಿ ಎಸ್ ರಂಗಾ) ಪ್ರಶಸ್ತಿಗಳು ದೊರಕಿದವು. ಜೊತೆಗೆ ೧೯೭೮-೭೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಪ್ಪುಬಿಳಿ ಛಾಯಾಗ್ರಹಣ - ಎಸ್ ರಾಮಚಂದ್ರ, ನೀಡಲಾಯಿತು. ಅಲ್ಲದೆ ಈ ಚಿತ್ರ ಜರ್ಮನಿಯ ಮ್ಯಾನ್ಹೆಮ್ - ಹೈಡೆಲ್ಬರ್ಗ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು.

ರಂಗಭೂಮಿ

ಬದಲಾಯಿಸಿ
 
ತಬರನ ಕಥೆ ನಾಟಕದ ಪಾತ್ರಧಾರಿಯಾಗಿ ನಾಗಾಭರಣ
  • ವಿದ್ಯಾರ್ಥಿ ದೆಸೆಯಿಂದಲೇ ನಾಗಾಭರಣ ಅವರಿಗೆ ಪ್ರತಿಷ್ಠಿತ ರಂಗ ತಜ್ಞರಾದ ಶ್ರೀರಂಗ, ಬಿ ವಿ ಕಾರಂತ, ಶಿವರಾಮ ಕಾರಂತ, ಬಾದಲ್ ಸರ್ಕಾರ್ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ ಹಾಗು ಡಾ ಚಂದ್ರಶೇಖರ ಕಂಬಾರ ಮೊದಲಾದವರ ನಿಕಟ ಒಡನಾಟ ಲಭಿಸಿತು.
  • ಮುವತ್ತಾರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
  • ಪ್ರೇಮಾ ಕಾರಂತ್ ಅವರು ಸ್ಥಾಪಿಸಿದ ಬೆನಕ ಮಕ್ಕಳ ರಂಗ ತಂಡಕ್ಕೆ 30 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಅಂದಿನಿಂದ ಇಂದಿನವರೆಗೆ ಸತತವಾಗಿ ವರ್ಷಕ್ಕೆ ಮೂರು ಮಕ್ಕಳ ನಾಟಕ ನಿರ್ದೇಶಿಸಿದ್ದಾರೆ.
  • ಹಲವಾರು ಬಾರಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಮಂಚದಲ್ಲಿ ಅಭಿನಯಿಸಿದ್ದಾರೆ.
  • ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟಗಳಲ್ಲಿ ರಂಗ ಕಮ್ಮಟಗಳನ್ನು ನಡೆಸಿದ್ದಾರೆ.
  • ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ಹಾಗೂ ಅನೇಕ ರಂಗ ರೆಪರ್ಟರಿಗಳಿಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ಹವ್ಯಾಸಿ ರಂಗ ತಂಡದಲ್ಲಿ ನಲವತ್ತು ವರ್ಷಗಳಿಂದ ಸ್ಥಾಪಕ-ನಟ
  • ರಂಗಭೂಮಿ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ.
  • ಹಲವಾರು ಬಾರಿ ಭಾರತ ಸರ್ಕಾರದ ಸಾಂಸ್ಕೃತಿಕ ಸಮಿತಿಗಳಲ್ಲಿ ಸದಸ್ಯತ್ವ
  • ಆಹತ, ಏಕವ್ಯಕ್ತಿ ಪ್ರದರ್ಶನವನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ.
  • ಬೆಂಗಳೂರು ನಾಗರತ್ನಮ್ಮ ಅವರ ಬದುಕು ಸಾಧನೆ ಕುರಿತ ಸಂಗೀತ ಪ್ರಧಾನ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ.

ಚಲನಚಿತ್ರ

ಬದಲಾಯಿಸಿ
  • ತಮ್ಮ ಚಿತ್ರಗಳಿಂದ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಉದಾಹರಣೆಗೆ ಜನುಮದ ಜೋಡಿ ಚಿತ್ರ ಕರ್ನಾಟಕದಲ್ಲಿ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಬೆಳ್ಳಿ ಹಬ್ಬ ಆಚರಿಸಿದ ಚಿತ್ರ. ಕೆಲವು ಥಿಯೇಟರ್ ಗಳಲ್ಲಿ ೩೬೫ ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿತು. ಒಂದು ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಈ ಚಿತ್ರ ಪಠ್ಯ ವಿಷಯವಾಗಿದೆ.
  • ಒಟ್ಟು ೩೬ ಚಿತ್ರಗಳನ್ನು ನಿರ್ದೇಶಿಸಿದ್ದು ಅವುಗಳಲ್ಲಿ ೧೮ ಚಿತ್ರಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
  • ನಾಲ್ಕು ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
  • ಫಿಲಂ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ೭ ಬಾರಿ.
  • ರಾಷ್ಟ್ರ ಪ್ರಶಸ್ತಿಗಳು ೧೦, ಅದರಲ್ಲಿ ೩ ರಾಷ್ಟ್ರೀಯ ಐಕ್ಯತೆಗಾಗಿ.
  • ರಾಜ್ಯ ಪ್ರಶಸ್ತಿಗಳು ೨೩, ವಿವಿಧ ವಿಭಾಗಗಳಲ್ಲಿ
  • ಅವರ ೮ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾರತೀಯ ಪನೋರಮಾಗೆ ಆಯ್ಕೆಯಾಗಿವೆ.
  • ರಾಷ್ಟ್ರೀಯ ಚಿತ್ರ ಪ್ರಶಸ್ತಿ ತೀರ್ಪುಗಾರರ ಸಮಿತಿಯಲ್ಲಿ ೪ ಬಾರಿ ಸದಸ್ಯ.
  • ಮ್ಯಾನ್ ಹೇಮ್, ಮಿಲಾನ್, ಇರಾನ್, ಚಿಕಾಗೋ , ಅರ್ಮೇನಿಯಾ ಮತ್ತು ಕಾರ್ಲೋವಿ ವಾರಿ ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೀರ್ಪುಗಾರರ ಸಮಿತಿಯಲ್ಲಿ ಭಾರತದ ಪ್ರತಿನಿಧಿ.
  • ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳು ಪ್ರದರ್ಶಿತಗೊಂಡಿವೆ.
  • ಹನ್ನೆರಡನೆಯ ಶತಮಾನದ ಸಂತ ಕವಿ ಅಲ್ಲಮನ ಕುರಿತಾದ ಚಿತ್ರ ಅಂತರರಾಷ್ಟ್ರೀಯ ಯು ಎನ್ ಗಾಂಧೀ ಪದಕಕ್ಕಾಗಿ ಭಾರತದ ಆಯ್ಕೆಯಾಗಿ ಪ್ರದರ್ಶಿತಗೊಂಡಿತು.
  • ಭಾರತ ಸರ್ಕಾರದ ಫಿಲಂಸ್ ಡಿವಿಷನ್ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾಕ್ಷ್ಯಚಿತ್ರಗಳು.
  • ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಜೀವಮಾನ ಸಾಧನೆಗಾಗಿ.

ಕಿರುತೆರೆ

ಬದಲಾಯಿಸಿ

ನಾಗಾಭರಣರವರು ಕೆಲವು ಕಿರುತೆರೆ ಧಾರವಾಹಿಗಳನ್ನೂ ಕೂಡ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಧಾರಾವಾಹಿಗಳಾದ ಬೆಂಗಳೂರು ದೂರದರ್ಶನದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ ಮತ್ತು ತಿರುಗುಬಾಣ. ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧ರಲ್ಲಿ ತೆನಾಲಿ ರಾಮ (ಕಿರುತೆರೆ ಧಾರಾವಾಹಿ) ಹಾಗೂ ಉದಯ ಟಿವಿಸಂಕ್ರಾಂತಿ, ಮಹಾಮಾಯಿ, ಅಪ್ಪ ಇತ್ಯಾದಿ ಧಾರವಾಹಿಗಳನ್ನು ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ನೆಟ್ ವರ್ಕ್

ಬದಲಾಯಿಸಿ
  • ದೂರದರ್ಶನ ಪ್ರಾರಂಭವಾದಂದಿನಿಂದ ಧಾರಾವಾಹಿಗಳ ನಿರ್ಮಾಣ, ನಿರ್ದೇಶನ
  • ಶಸ್ರಫನ್, ಧಾರಾವಾಹಿ, ಮಾಜಿ ಪ್ರಧಾನಮಂತ್ರಿ ಪಿ ವಿ ನರಸಿಂಹರಾವ್ ಅವರ ರಚನೆ
  • ಸ್ಟೋನ್ ಬಾಯ್, ಇಂಡೋ-ಮರುಷಿಯಸ್ ಕೋ-ಪ್ರೊಡಕ್ಷನ್
  • ಸಂಸ್ಮರಣ್, ಪ್ರವಾಸಕಥನ, ಗೊರೂರು ರಾಮಸ್ವಾಮಿ ಅಯಂಗಾರ್ ಅವರ ಕೃತಿ, ಅಮೇರಿಕಾದಲ್ಲಿ ಚಿತ್ರೀಕರಣ
  • ತೆನಾಲಿ ರಾಮ, ಆರಾಧನಾ, ಗಾನಯೋಗಿ ಪಂಚಾಕ್ಷರಿ ಧಾರಾವಾಹಿಗಳು

ಪ್ರಾಂತೀಯ ನೆಟ್ ವರ್ಕ್

ಬದಲಾಯಿಸಿ
  • ದೂರದರ್ಶನ, ಉದಯ ಟಿವಿ, ಸನ್ ಟಿವಿ ಮುಂತಾದ ವಾಹಿನಿಗಳಿಗೆ ಧಾರಾವಾಹಿಗಳು ಮತ್ತು ಇತರ ಕಾರ್ಯಕ್ರಮಗಳು.
  • ಓ ನನ್ನ ಬೆಳಕೇ
  • ಮುಸ್ಸಂಜೆ
  • ನಮ್ಮ ನಮ್ಮಲ್ಲಿ
  • ತಿರುಗು ಬಾಣ
  • ಸಂಕ್ರಾಂತಿ (ಮೆಗಾ ಧಾರಾವಾಹಿ)
  • ಗೆಳತೀ
  • ಜೀವನ್ಮುಖಿ

ಚಲನಚಿತ್ರಗಳು

ಬದಲಾಯಿಸಿ

ನಿರ್ದೇಶಕನಾಗಿ

ಬದಲಾಯಿಸಿ
ವರ್ಷ ಚಿತ್ರ ಶೀರ್ಷಿಕೆ ಟಿಪ್ಪಣಿ
1978 ಗ್ರಹಣ ರಾಷ್ಟ್ರಪ್ರಶಸ್ತಿ - ರಾಷ್ಟ್ರೀಯ ಐಕ್ಯತೆ ಕುರಿತ ಅತ್ಯುತ್ತಮ ಚಿತ್ರಕ್ಕೆ ನರ್ಗಿಸ್ ದತ್ ಪ್ರಶಸ್ತಿ 1978
ಅತ್ಯುತ್ತಮ ಚಿತ್ರಕಥೆಗೆ ರಾಷ್ಟ್ರ ಪ್ರಶಸ್ತಿ - ಟಿ ಎಸ್ ನಾಗಾಭರಣ ಮತ್ತು ಟಿ ಎಸ್ ರಂಗಾ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ 1978-79 - ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ಛಾಯಾಗ್ರಹಣ (ಕಪ್ಪುಬಿಳಿ) ಎಸ್ ರಾಮಚಂದ್ರ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ಆಯ್ಕೆ
1980 ಬಂಗಾರದ ಜಿಂಕೆ
1982 ಅನ್ವೇಷಣೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 1982-83 - ಮೂರನೇ ಅತ್ಯುತ್ತಮ ಚಿತ್ರ
1982 ಪ್ರಾಯ ಪ್ರಾಯ ಪ್ರಾಯ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - – 1982-83 ಅತ್ಯುತ್ತಮ ಪೋಷಕ ನಟಿ - ಮಮತಾ ರಾವ್
1983 ಬ್ಯಾಂಕರ್ ಮಾರ್ಗಯ್ಯ ರಾಷ್ಟ್ರ ಪ್ರಶಸ್ತಿ - ಕನ್ನಡದ ಅತ್ಯುತ್ತಮ ಚಿತ್ರ
ಆರ್ ಕೆ ನಾರಾಯಣ್ ಅವರ 1952 ಕಾದಂಬರಿ The Financial Expert ಆಧಾರಿತ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಲೋಕೇಶ್ ಅತ್ಯುತ್ತಮ ನಟ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ
1983 ಪ್ರೇಮ ಯುದ್ಧ
1984 ಒಂಟಿ ಧ್ವನಿ
1984 ಮಕ್ಕಳಿರಲವ್ವ ಮನೆತುಂಬಾ
1985 ಆಹುತಿ
1985 ನೇತ್ರ ಪಲ್ಲವಿ ಬಿಡುಗಡೆಯಾಗಿಲ್ಲ
1986 ನೆನಪಿನ ದೋಣಿ
1987 ರಾವಣ ರಾಜ್ಯ
1987 ಸೇಡಿನ ಸಂಚು ಚಿತ್ರಕಥೆ, ನಿರ್ದೇಶನ
1987 ಆಸ್ಫೋಟ ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಪೋಷಕ ನಟ ದತ್ತಣ್ಣ ಅವರಿಗೆ,
ಫಿಲಂ ಫೇರ್ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ
ಮನು (ಪಿ ಎನ್ ರಂಗನ್ ) ಅವರ ಆಯನ ಕಾದಂಬರಿ ಆಧಾರಿತ
1989 ಸಂತ ಶಿಶುನಾಳ ಶರೀಫ ರಾಷ್ಟ್ರಪ್ರಶಸ್ತಿ - ರಾಷ್ಟ್ರೀಯ ಐಕ್ಯತೆ ಕುರಿತ ಅತ್ಯುತ್ತಮ ಚಿತ್ರಕ್ಕೆ ನರ್ಗಿಸ್ ದತ್ ಪ್ರಶಸ್ತಿ ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ದ್ವಿತೀಯ ಅತ್ಯುತ್ತಮ ಚಿತ್ರ
ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ
ನೂರಕ್ಕೂ ಹೆಚ್ಚು ದಿನ ಪ್ರದರ್ಶನ
1989 ಸುರಸುಂದರಾಂಗ
1989 ಪ್ರೇಮಾಗ್ನಿ
1991 ಮೈಸೂರ ಮಲ್ಲಿಗೆ ರಾಷ್ಟ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ ಕನ್ನಡ
ಫಿಲಂ ಫೇರ್ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ ಕನ್ನಡ,
1942: A Love Story ಇದಕ್ಕೆ ಸ್ಫೂರ್ತಿ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ದ್ವಿತೀಯ ಅತ್ಯುತ್ತಮ ಚಿತ್ರ
ನೂರಕ್ಕೂ ಹೆಚ್ಚು ದಿನ ಪ್ರದರ್ಶನ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ
1991 ಸ್ಟೋನ್ ಬಾಯ್ ಟಿವಿ ಧಾರಾವಾಹಿ ಮತ್ತು ಚಲನಚಿತ್ರ
1993 ಚಿನ್ನಾರಿ ಮುತ್ತ ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಕನ್ನಡ ಚಿತ್ರ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಹಿನ್ನೆಲೆ ಗಾಯನ
ಇಪ್ಪತ್ತೈದಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಇಪ್ಪತ್ತೈದು ವಾರ ಪ್ರದರ್ಶನ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ
1993 ಆಕಸ್ಮಿಕ ತರಾಸು ಅವರ ಆಕಸ್ಮಿಕ - ಅಪರಾಧಿ - ಪರಿಣಾಮ ಮೂರೂ ಕಾದಂಬರಿಗಳನ್ನು ಆಧರಿಸಿದ ಚಿತ್ರ
ಅತಿಥಿ ನಟ
ಡಾ ರಾಜ್ ಕುಮಾರ್ ಅವರು ಬಹಳ ಕಾಲದ ನಂತರ ಮತ್ತೆ ಅಭಿನಯಿಸಿದ ಚಿತ್ರ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಿತ್ರ
ಫಿಲಂ ಫೇರ್ ಅತ್ಯುತ್ತಮ ಚಿತ್ರ
ನೂರಕ್ಕೂ ಹೆಚ್ಚು ದಿನ ಪ್ರದರ್ಶನ
1994 ಸಾಗರ ದೀಪ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ
1995 ನಾವಿದ್ದೇವೆ ಎಚ್ಚರಿಕೆ ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
1995 ಜನುಮದ ಜೋಡಿ ಫಿಲಂ ಫೇರ್ - ಅತ್ಯುತ್ತಮ ನಿರ್ದೇಶಕ -ಕನ್ನಡ, ಅತ್ಯುತ್ತಮ ಚಿತ್ರ - ಕನ್ನಡ
ಪನ್ನಾಲಾಲ್ ಪಟೇಲ್ ಅವರ ಗುಜರಾತಿ ಕಾದಂಬರಿ ಮಲೇಲ ಜೀವ ಆಧಾರಿತ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ – ವಿಶೇಷ ತೀರ್ಪುಗಾರರ ಪ್ರಶಸ್ತಿ
ಇಪ್ಪತ್ತೈದಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಇಪ್ಪತ್ತೈದು ವಾರ ಪ್ರದರ್ಶನ
1996 ನಾಗಮಂಡಲ ಗಿರೀಶ್ ಕಾರ್ನಾಡ್ ಅವರ ಇದೇ ಹೆಸರಿನ ನಾಟಕ ಆಧಾರಿತ
ಹಿಂದಿಯ ಪಹೇಲಿ ಚಿತ್ರಕ್ಕೆ ಸ್ಫೂರ್ತಿ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಿತ್ರ
ಫಿಲಂ ಫೇರ್ ಅತ್ಯುತ್ತಮ ಚಿತ್ರ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ
1997 ವಿಮೋಚನೆ ನಿರ್ದೇಶನ, ನಟ ಮತ್ತು ಚಿತ್ರಕಥೆ
1999 ಜನುಮದಾತ
2001 ನೀಲಾ ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ.
2002 ಸಿಂಗಾರೆವ್ವ ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಕನ್ನಡ ಚಿತ್ರ
ಚಂದ್ರಶೇಖರ ಕಂಬಾರ ಅವರ ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿ ಆಧಾರಿತ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ – ಅತ್ಯುತ್ತಮ ಕಲಾನಿರ್ದೇಶನ ಶಶಿಧರ ಅಡಪ
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ.
2003 ಚಿಗುರಿದ ಕನಸು ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ
ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಸಂಗೀತ
ಡಾ ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧಾರಿತ
ಹಿಂದಿಯ ಸ್ವದೇಶ್ ಚಿತ್ರಕ್ಕೆ ಸ್ಫೂರ್ತಿ
2006 ಕಲ್ಲರಳಿ ಹೂವಾಗಿ ರಾಷ್ಟ್ರಪ್ರಶಸ್ತಿ - ರಾಷ್ಟ್ರೀಯ ಐಕ್ಯತೆ ಕುರಿತ ಅತ್ಯುತ್ತಮ ಚಿತ್ರಕ್ಕೆ ನರ್ಗಿಸ್ ದತ್ ಪ್ರಶಸ್ತಿ
ಬಿ ಎಲ್ ವೇಣು ಅವರ ಅದೇ ಹೆಸರಿನ ಕಾದಂಬರಿ ಆಧಾರಿತ
ಹಿಂದಿಯ ಭಜರಂಗಿ ಭಾಯ್ ಜಾನ್ ಗೆ ಸ್ಫೂರ್ತಿ
ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ – ಅತ್ಯುತ್ತಮ ವಸ್ತ್ರಾಲಂಕಾರ, ಅತ್ಯುತ್ತಮ ಕಲಾನಿರ್ದೇಶನ, ಅತ್ಯುತ್ತಮ ಸಂಕಲನ
2009 ನಮ್ ಯಜಮಾನ್ರು
2012 ಕಂಸಾಳೆ ಕೈಸಾಳೆ ಕರ್ನಾಟಕ ರಾಜ್ಯ ಚಿತ್ರ ಪ್ರಶಸ್ತಿ - ಅತ್ಯುತ್ತಮ ಮಕ್ಕಳ ಚಿತ್ರ
2014 ವಸುಂಧರಾ
2017 ಅಲ್ಲಮ ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಸಂಗೀತ - ಅತ್ಯುತ್ತಮ ಹಿನ್ನೆಲೆ ಸಂಗೀತ - ಬಾಪು ಪದ್ಮನಾಭ
ಅತ್ಯುತ್ತಮ ಮೇಕಪ್ - ಎನ್ ಕೆ ರಾಮಕೃಷ್ಣ
ಫಿಲಂ ಫೇರ್ - ಅತ್ಯುತ್ತಮ ನಟ - ಧನಂಜಯ - ತೀರ್ಪುಗಾರರ ಪ್ರಶಸ್ತಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಗೆ ಆಯ್ಕೆ.
2018 ಕಾನೂರಾಯಣ

ನಟನಾಗಿ

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಟಿಪ್ಪಣಿ
1983 ಆದಿ ಶಂಕರಾಚಾರ್ಯ ಮೃತ್ಯು
1985 ಆಕ್ಸಿಡೆಂಟ್ ರಾಮಣ್ಣ
2001 ನೀಲಾ ಡಾಕ್ಟರ್
2008 ಮಿಸ್ಟರ್ ಗರಗಸ ಶರತ್
2011 ಕಿರಾತಕ ಯಶ್ ತಂದೆ
2012 ಕಂಸಾಳೆ ಕೈಸಾಲೆ ನಾಯಕನ ತಂದೆ
2014 ವಸುಂಧರಾ ಖಳ ನಟ
2014 ಜೈ ಲಲಿತಾ ಶ್ರೀಕಂಠಯ್ಯ
2016 ಉಪ್ಪಿನ ಕಾಗದ ಪ್ರಧಾನ ಪಾತ್ರ
2018 ಕೆ ಜಿ ಎಫ್ ಚಾಪ್ಟರ್ 1 ಟಿ.ವಿ. ಚಾನಲ್ ಮಾಲಿಕರು
2020 ಕೆ ಜಿ ಎಫ್ ಚಾಪ್ಟರ್ 2 ಪೂರ್ವ ತಯಾರಿ

ಅಲಂಕರಿಸಿದ ಸ್ಥಾನಗಳು

ಬದಲಾಯಿಸಿ
  • ತೀರ್ಪುಗಾರ ಸಮಿತಿ ಅಧ್ಯಕ್ಷ, ಬ್ರಿಕ್ಸ್ ಅಂತರ ರಾಷ್ಟ್ರೀಯ ಚಿತ್ರೋತ್ಸವ, ೨೦೧೬
  • ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಸದಸ್ಯ.
  • ಮೂರು ಬಾರಿ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಕಾರಿ ಸಮಿತಿ ಸದಸ್ಯ .
  • ಅಧ್ಯಕ್ಷರು, ಚಲನಚಿತ್ರಗಳ ಸಬ್ಸಿಡಿ ಸಮಿತಿ, ಕರ್ನಾಟಕ ಸರ್ಕಾರ
  • ಅಧ್ಯಕ್ಷರು, ಕರ್ನಾಟಕ ಚಿತ್ರ ನಿರ್ದೇಶಕರ ಸಂಘ
  • CIFEJ, ಅಂತರ ರಾಷ್ಟ್ರೀಯ ಮಕ್ಕಳು ಮತ್ತು ಯುವಜನತೆಯ ಚಿತ್ರ ಕೇಂದ್ರ, ಕಳೆದ ೧೩ ವರ್ಷಗಳಿಂದ ಬೋರ್ಡ್ ಸದಸ್ಯರು.
  • ಪ್ರಿನ್ಸಿಪಾಲ್ ಮತ್ತು ಶಿಕ್ಷಕರು, ಆದರ್ಶ ಫಿಲಂ ಇನ್ಟಿಟ್ಯೂಟ್ , ಬೆಂಗಳೂರು
  • ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ, ಬೆಂಗಳೂರು
  • ಅಧ್ಯಕ್ಷರು, ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ , 2012 ರಿಂದ ಇಲ್ಲಿಯವರೆಗೆ
  • ಬೋರ್ಡ್ ಮೆಂಬರ್, ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್, ಭಾರತ ಸರ್ಕಾರ.

ಪ್ರಶಸ್ತಿಗಳು

ಬದಲಾಯಿಸಿ

ಅವರು ಇಲ್ಲಿಯವರೆಗೆ ನಿರ್ದೇಶಿಸಿದ ೩೦ ಚಲನಚಿತ್ರಗಳಲ್ಲಿ, ೧೪ ಚಿತ್ರಗಳು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ. ಅವರ ನಿರ್ದೇಶನದ ಆರು ಚಿತ್ರಗಳು ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿದೆ. ಅವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ನಿರ್ದೇಶಕ ಪ್ರಶಸ್ತಿಯನ್ನು ಏಳು ಬಾರಿ ಗಳಿಸಿದ್ದಾರೆ.

  • ಗ್ರಹಣ (೧೯೭೮–೭೯) ರಾಷ್ಟ್ರೀಯ ಸಮನ್ವಯತೆಯನ್ನು ಸಾರುವ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚಿತ್ರ ಚಿನ್ನದ ಪದಕ
  • ಅನ್ವೇಷಣೆ (೧೯೮೨–೮೩) ಕರ್ನಾಟಕ ಸರ್ಕಾರದ ವತಿಯಿಂದ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ
  • ಆಸ್ಫೋಟ (೧೯೮೭–೮೮) ರಾಜ್ಯ ಸರ್ಕಾರದ ವತಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಚಿನ್ನದ ಪದಕ
  • ಬ್ಯಾಂಕರ್ ಮಾರ್ಗಯ್ಯ (೧೯೮೩–೮೪) ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ
  • ಸಂತ ಶಿಶುನಾಳ ಶರೀಫಾ (೧೯೮೯–೯೦) ಭಾರತ ಸರ್ಕಾರದ ವತಿಯಿಂದ ನರ್ಗಿಸ್ ದತ್ತ್ ರಾಷ್ಟ್ರೀಯ ಏಕತಾ ಪ್ರಶಸ್ತಿ
  • ಕಲ್ಲರಳಿ ಹೂವಾಗಿ (೨೦೦೬) ರಾಷ್ಟ್ರೀಯ ಐಕ್ಯತೆಯನ್ನು ಸಾರುವ ಅತ್ಯುತ್ತಮ ಚಲನಚಿತ್ರ
  • ೧೯೭೯ರಲ್ಲಿ ಗ್ರಹಣ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ರಾಷ್ಟ್ರೀಯ ಪ್ರಶಸ್ತಿ.
  • ಕಾಡು ಚಿತ್ರದ ವಸ್ತ್ರಾಲಂಕಾರಕ್ಕಾಗಿ ಅತ್ಯುತ್ತಮ ವಸ್ತ್ರವಿನ್ಯಾಸಕಾರ ರಾಷ್ಟ್ರೀಯ ಪ್ರಶಸ್ತಿ
  • ಶ್ರುತಾಲಯ ಸಂಸ್ಥೆ ಸ್ಥಾಪನೆ - ಚಿತ್ರ ಸಂಬಂಧಿತ ಸಕಲ ಚಟುವಟಿಕೆಗಳ ನಿರ್ವಹಣೆಯ ಸಂಸ್ಥೆ
  • ಭರಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (BAPA) ಸ್ಥಾಪನೆ ಮತ್ತು ಮ್ಯಾನೇಜಿಂಗ್ ಟ್ರಸ್ಟಿ
  • ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ಪ್ರವಾಸೋದ್ಯಮ ಇಲಾಖೆಗಳಿಗೆ ಮೈಸೂರು, ಹಂಪಿ, ಕಿತ್ತೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ ಧ್ವನಿ ಬೆಳಕು ( Sound and Light) ಕಾರ್ಯಕ್ರಮದ ನಿರ್ದೇಶನ.
  • ನಾಗಾಭರಣ ಅವರ ಚಿತ್ರಗಳನ್ನು ಕುರಿತ ಅಧ್ಯಯನಕ್ಕೆ ಎನ್ ಕೆ ಪದ್ಮನಾಭ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
  • ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಅವರಿಗೆ ಸ್ಮರಣ ಸಂಚಿಕೆಯ ಗೌರವ ಅರ್ಪಿಸಲಾಗಿದೆ.
  • ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಉಲ್ಲೇಖಗಳು‌

ಬದಲಾಯಿಸಿ
  1. https://www.deccanherald.com/state/nagabharana-appointed-kda-chief-768660.html
  2. "ಆರ್ಕೈವ್ ನಕಲು". Archived from the original on 2020-07-22. Retrieved 2020-07-21.
  3. http://kannada.webdunia.com/article/kannada-cinema-news/%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B2%BE%E0%B2%97%E0%B2%BF-%E0%B2%A8%E0%B2%BE%E0%B2%97%E0%B2%BE%E0%B2%AD%E0%B2%B0%E0%B2%A3-%E0%B2%86%E0%B2%AF%E0%B3%8D%E0%B2%95%E0%B3%86-109022800077_1.htm
  4. https://web.archive.org/web/20180701165115/http://prekshaa.in/contributions-of-kannada-cinema-to-historical-dramas/#.WzkGtqiwSh-

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ನಾಗಾಭರಣ&oldid=1132547" ಇಂದ ಪಡೆಯಲ್ಪಟ್ಟಿದೆ