ಟಪೀರ್ - ಪೆರಿಸ್ಸೊಡ್ಯಾಕ್ಟಿಲ ಗಣದ ಟಪಿರಿಡೀ ಕುಟುಂಬಕ್ಕೆ ಸೇರಿದ ಒಂದು ವನ್ಯ ಸ್ತನಿ. ಟ್ಯಾಪಿರಸ್ ಇದರ ವೈಜ್ಞಾನಿಕ ನಾಮ.

ದಕ್ಷಿಣ ಅಮೇರಿಕದ ಟಪೀರ್-ಟ್ಯಾ. ಟೆರೆಸ್ಟ್ರಿಸ್

ಪ್ರಭೇಧಗಳುಸಂಪಾದಿಸಿ

ಇದರಲ್ಲಿ ನಾಲ್ಕು ಪ್ರಭೇಧಗಳುಂಟು:

ಟ್ಯಾ. ಟೆರೆಸ್ಟ್ರಿಸ್ (ಬ್ರಜಿಲಿನ ಟಪೀರ್)ಸಂಪಾದಿಸಿ

ಬ್ರೆಜಿಲ್, ಕೊಲಂಬಿಯ, ವೆನಿಜೂಲ. ಪರಗ್ವೆಯ ಗ್ರ್ಯಾನ್ ಚಾಕೊ ಪ್ರದೇಶಗಳಲ್ಲಿ ಕಾಣಬಹುದು.

ಟ್ಯಾ. ರೌಲಿನ (ಆಂಡಿಯನ್ ಅಥವಾ ಬೆಟ್ಟದ ಟಪೀರ್)ಸಂಪಾದಿಸಿ

ಕೊಲಂಬಿಯದಲ್ಲಿನ ಆಂಡೀಸ್ ಪರ್ವತ. ಈಕ್ಟಡಾರ್, ಉತ್ತರ ಪೆರು ಮತ್ತು ಪಶ್ಚಿಮ ವೆನೆಜೂಲಗಳಲ್ಲಿ ಜೀವಿಸುತ್ತದೆ,

ಟ್ಯಾ.ಬೇರ್ಡಿ (ಬೇರ್ಡ ಟಪೀರ್)ಸಂಪಾದಿಸಿ

ದಕ್ಷಿಣ ಮೆಕ್ಸಿಕೋದಿಂದ ಮಧ್ಯ ಅಮೆರಿಕ ಮೂಲಕ ಕೊಲಂಬಿಯ ಮತ್ತು ಈಕ್ವಡಾರುಗಳ ವರೆಗಿನ ಪ್ರದೇಶದಲ್ಲಿ ವಾಸಿಸುವುದು,

ಟ್ಯಾ. ಇಂಡೀಸ್ (ಏಷ್ಯದ ಟಪೀರ್)ಸಂಪಾದಿಸಿ

ಬರ್ಮ, ಥಾಯ್ಲೆಂಡ್, ಮಲಯ ಭೂಪ್ರದೇಶ ಹಾಗೂ ಸುಮಾತ್ರಗಳಲ್ಲಿ ಇದರ ವಾಸ. ಎಲ್ಲ ಬಗೆಯ ಟಪೀರುಗಳು ತಾವಿರುವ ನೆಲಗಳಲ್ಲಿ ಸಮುದ್ರ ಮಟ್ಟದಿಂದ ಹಿಡಿದು 4500 ಮೀ ಎತ್ತರದ ಬೆಟ್ಟಪ್ರದೇಶಗಳಲ್ಲಿ ಶಾಶ್ವತ ನೀರಿನ ಆಸರೆಗಳು, ಅರಣ್ಯ ಮತ್ತು ಹುಲ್ಲುಗಾವಲು ತಾಣಗಳಲ್ಲಿ ವಾಸಿಸುತ್ತವೆ.

ವಿವರಣೆಸಂಪಾದಿಸಿ

ಹೆಚ್ಚು ಕಡಿಮೆ ಕತ್ತೆಯ ಗಾತ್ರದ ಪ್ರಾಣಿಗಳಿವು: ದೇಹದ ಉದ್ದ 1.8-2.5 m.; ಭುಜದ ಬಳಿಯ ಎತ್ತರ ಸುಮಾರು 1ಮೀ. ತೂಕ 225-300 ಕೆ.ಗ್ರಾಂ. ದೇಹದ ಹಿಂಭಾಗದಲ್ಲಿ ಗುಂಡಾಗಿದ್ದು ಮೂತಿಯೆಡೆಗೆ ಸಾಗುತ್ತ ಚೂಪಾಗುವುದರಿಂದ ಕಾಡಿನದಟ್ಟ ಪೊದೆಗಳಲ್ಲಿ ವೇಗವಾಗಿ ನಡೆದಾಡಲು ಅನುಕೂಲವಾಗಿದೆ. ದೇಹದ ಮೇಲೆಲ್ಲ ಮೋಟಾದ ಕೂದಲುಗಳಿವೆ. ಬೆಟ್ಟದ ಟಪೀರಿನಲ್ಲಿ ಇವು ಹೆಚ್ಚು ದಟ್ಟವಾಗಿದೆ. ಬೇರ್ಡಿ ಮತ್ತು ಟೆರಸ್ಟ್ರಿಸ್ ಪ್ರಭೇದಗಳಲ್ಲಿ ಕುತ್ತಿಗೆಯ ಮೇಲೆ ಎತ್ತರವಲ್ಲದ ಅಯಾಲು ಉಂಟು, ದೇಹದ ಬಣ್ಣ ಕಗ್ಗಂದು ಇಲ್ಲವೆ ಕೆಂಗಂದು. ಏಷ್ಯದ ಟಪೀರಿನಲ್ಲಿ ಮಾತ್ರ ದೇಹದ ಮುಂಭಾಗ ಮತ್ತು ಹಿಂಗಾಲುಗಳೂ ಸೇರಿದಂತೆ ಪೃಷ್ಠದ ಬುಡಭಾಗಗಳು ಕಪ್ಪಾಗಿವೆ. ಬೆನ್ನು ಮತ್ತು ಪಾಶ್ರ್ವಗಳು ಬೆಳ್ಳಗಿವೆ. ಮರಿ ಟಪೀರುಗಳ ಮೈ ಕಪ್ಪಾಗಿದ್ದು ಉದ್ದುದ್ದನೆಯ ಬಿಳಿಪಟ್ಟೆಗಳಿಂದ. ಕೂಡಿದೆ. ಮರಿಗೆ 6-8 ತಿಂಗಳು ವಯಸ್ಸಾದ ತರುವಾಯ ಈ ವಿನ್ಯಾಸ ಮರೆಯಾಗಿ ವಯಸ್ಕ ಬಣ್ಣ ಬರುತ್ತದೆ. ಟಪೀರಿನ ಮೂತಿ ಮತ್ತು ಮೇಲ್ದುಟಿಗಳು ಮಾಂಸಲವಾದ ಒಂದು ಮೋಟು ಸೊಂಡಿಲಿನಂತೆ ಚಾಚಿಕೊಂಡಿವೆ. ಕಣ್ಣುಗಳು ಚಿಕ್ಕವು. ಕಿವಿಗಳು ಅಂಡಾಕಾರದವು; ನೆಟ್ಟಗೆ ನಿಂತಿವೆ. ಕಾಲುಗಳು ಮೋಟು ಹಾಗು ದೇಹದ ಗಾತ್ರಕ್ಕೆ ಹೋಲಿಸಿದರೆ ತೆಳುವಾದುವು ಮುಂಗಾಲಿನ ಪಾದದಲ್ಲಿ ಮೂರು ಪ್ರಧಾನ ಬೆರಳುಗಳೂ ಒಂದು ಚಿಕ್ಕ ಬೆರಳು (ಐದನೆಯದು) ಇವೆ. ಹಿಂಗಾಲಿನ ಪಾದದಲ್ಲಿ 3 ಬೆರಳುಗಳುಂಟು. ಟಪೀರಿಗೆ ಮೊಟಕಾದ ಮತ್ತು ದಪ್ಪವಾದ ಬಾಲ ಇದೆ. ಹೆಣ್ಣಿನಲ್ಲಿ ಒಂದೇ ಒಂದು ಜೊತೆ ಮೊಲೆತೊಟ್ಟು ಇದೆ.

ಬದುಕುಸಂಪಾದಿಸಿ

ಟಪೀರುಗಳು ಸಾಮಾನ್ಯವಾಗಿ ಒಂಟಿಯಾಗಿ ಇಲ್ಲವೆ ಜೋಡಿಗಳಲ್ಲಿ ಜೀವಿಸುತ್ತವೆ. ನೆಲದಮೇಲೂ (ಬಯಲಾಗಲಿ ಇಲ್ಲವೆ ಪೊದೆಗಳಿಂದ ಕೂಡಿರಲಿ) ನೀರನಲ್ಲೂ ಬಲು ಸುಟಿಯಾಗಿ ಓಡಾಡಬಲ್ಲವು. ಬೆಟ್ಟಗುಡ್ಡಗಳನ್ನು ಹತ್ತುವುದರಲ್ಲಿ, ಓಡುವುದರಲ್ಲಿ ಎಷ್ಟು ಚುರುಕಾಗಿವೆಯೋ ಅಷ್ಟೇ ಚೆನ್ನಾಗಿ ನೀರಿನಲ್ಲಿ ಈಜಬಲ್ಲವು. ನಡೆದಾಡುವಾಗ ತಮ್ಮ ಮೂತಿಯನ್ನು ನೆಲಕ್ಕೆ ಸಮೀಪವಾಗಿ ಇಟ್ಟುಕೊಳ್ಳುವುದು ಇವುಗಳ ಲಕ್ಷಣ. ಇವು ನಾಚಿಕೆಯ ಮತ್ತು ಸಾಧುಸ್ವಭಾವದವು. ಅಪಾಯವೊದಗಿದಾಗ ನೀರಿಗೆ ಹಾರುವುದೊ ಇಲ್ಲವೆ ಪೊದೆಗಳಲ್ಲಿ ಅವಿತಿಟ್ಟುಕೊಳ್ಳುವುದೊ ಇವುಗಳ ವಾಡಿಕೆ. ಆದರೆ ಪ್ರಸಂಗವೊದಗಿದಾಗ ವ್ಶೆರಿಗಳನ್ನೆದುರಿಸಿ ಅವನ್ನು ಕಚ್ಚುವುದು ಉಂಟು. ಇವುಗಳ ಕಿವಿ ಮತ್ತು ಕಣ್ಣು ಬಹಳ ಚುರುಕು. ಜಾಗ್ವಾರುಗಳು, ಹುಲಿಗಳು ಚಿರತೆಗಳು ಇವುಗಳ ಪ್ರಮುಖ ವೈರಿಗಳು. ಟಪೀರ್‍ಗಳು ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು, ಮರಗಿಡಗಳ ಎಳೆಚಿಗುರು, ಹಣ್ಣುಗಳನ್ನು ತಿಂದು ಬದುಕುತ್ತವೆ. ಕೆಲವು ಸಲ ಹೊಲ ಗದ್ದೆಗಳಿಗೆ ನುಗ್ಗಿ ಹಾನಿ ಮಾಡುವುದೂ ಉಂಟು.

ಸಂತಾನೋತ್ಪತ್ತಿಗೆ ನಿರ್ದಿಷ್ಟ ಪ್ರಾಯವಿಲ್ಲ. ಗರ್ಭಧಾರಣೆಯ ಅವಧಿ 300-400 ದಿವಸಗಳು. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಮರಿ ಹುಟ್ಟುತ್ತದೆ. ಟಪೀರಿನ ಆಯಸ್ಸು ಸುಮಾರು 30 ವರ್ಷಗಳು. ಇವನ್ನು ಸುಲಭವಾಗಿ ಸಾಕಬಹುದು. ಸಂಗ್ರಹಾಲಯಗಳ ಜೀವನಕ್ಕೆ ಬಲುಬೇಗ ಹೊಂದಿಕೊಳ್ಳುತ್ತವೆ. ಇವನ್ನು ಮಾಂಸಕ್ಕಾಗಿ, ಷೋಕಿಗಾಗಿ ಬೇಟೆಯಾಡುವುದಿದೆ. ಕೃಷಿಗಾಗಿ ಅರಣ್ಯ ಪ್ರದೇಶಗಳು ಕುಗ್ಗುತ್ತಿರುವುದರಿಂದ ಇವುಗಳ ಸಂತತಿಯೂ ಕ್ಷೀಣವಾಗುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಪೀರ್&oldid=1085494" ಇಂದ ಪಡೆಯಲ್ಪಟ್ಟಿದೆ