ಜೋ ಸಾಟ್ರಿಯಾನಿ (ಜನ್ಮ: ಜುಲೈ ೧೫ ೧೯೫೬ ನ್ಯೂಯಾರ್ಕ್) ಒಬ್ಬ ಪ್ರಸಿದ್ದ ಹಾಗು ಮೇಧಾವಿ ರಾಕ್ ಶೈಲಿಯ ಗಿಟಾರ್ ವಾದಕ ಮತ್ತು ಗುರು.

ಜೋ ಸಾಟ್ರಿಯಾನಿ ಬೆಂಗಳೂರಿನಲ್ಲಿ ಮೇ ೧೮ ೨೦೦೫

ಬಾಲ್ಯದಲ್ಲಿಯೆ ಶ್ರೇಷ್ಟ ಗಿಟಾರ್ ವಾದಕ ಜಿಮ್ಮಿ ಹೆಂಡ್ರಿಕ್ಸ್‌ರಿಂದ ಪ್ರಭಾವಿತರಾದ ಸಾಟ್ರಿಯಾನಿ, ಜಿಮ್ಮಿ ಹೆಂಡ್ರಿಕ್ಸ್ ಸಾವಿನ ಸುದ್ದಿ ತಿಳಿದ ನಂತರ ಗಿಟಾರ್ ವಾದಕ ಆಗಲೇಬೇಕೆಂಬ ಪಣ ತೊಟ್ಟರಂತೆ. ೧೯೮೬ರಲ್ಲಿ ನಾಟ್ ಆನ್ ದಿಸ್ ಅರ್ಥ್ ಎಂಬ ಪ್ರಥಮ ಧ್ವನಿ ಸುರುಳಿ ಬಿಡುಗಡೆ ಮಾಡಿದರು ಆದರೆ ಇವರನ್ನು ಹೆಚ್ಚಿನ ಜನಪ್ರಿಯತೆಯತ್ತ ತಲುಪಿಸಿದ್ದು ಇವರ ೧೯೮೭ರಲ್ಲಿ ಬಿಡುಗಡೆಯಾದ ಸರ್ಫಿಂಗ್ ವಿತ್ ದಿ ಎಲಿಯನ್ ಎಂಬ ಎರಡನೆ ಧ್ವನಿಸುರುಳಿ. ತದನಂತರ ರೋಲಿಂಗ್ ಸ್ಟೋನ್ಸ್‌ನ ಮಿಕ್ ಜ್ಯಾಗರ್ ಜೊತೆ ಪ್ರವಾಸ ಕೈಗೊಂಡ ಸಾಟ್ರಿಯಾನಿ ೧೯೯೪ರಲ್ಲಿ ಪ್ರತಿಷ್ಟಿತ ಡೀಪ್ ಪರ್ಪಲ್ ತಂಡದ ಪ್ರಸಿದ್ದ ಗಿಟಾರ್ ವಾದಕ ರಿಚಿ ಬ್ಲ್ಯಾಕ್‍ಮೋರ್ ಬದಲು ನಿಂತು ಜಪಾನ್ ಪ್ರವಾಸದ್ಯಾಂತ ಗಿಟಾರ್ ನುಡಿಸಿದರು. ೧೯೯೬ರಿಂದ ಸಾಟ್ರಿಯಾನಿ ಮೂವರು ಗಿಟಾರ್ ವಾದಕರು ಒಟ್ಟಿಗೆ ನುಡಿಸುವ ಜಿ3 (ಜಿ-ತ್ರೀ) ಎಂಬ ಕಚೇರಿ ಪ್ರವಾಸ ಶುರು ಮಾಡಿದರು. ಸಾಟ್ರಿಯಾನಿ ಶಿಷ್ಯ ಮತ್ತು ಸ್ನೇಹಿತರಾದ ಇನ್ನೊಬ್ಬ ಪ್ರಚಂಡ ಗಿಟಾರ್ ವಾದಕ ಸ್ಟೀವ್ ವಾಯ್ ಜಿ-ತ್ರೀ ಕಚೇರಿಯಲ್ಲಿ ಸಾಮಾನ್ಯವಾಗಿ ಭಾಗವಹಿಸುತ್ತಾರೆ. ಎರಿಕ್ ಜಾನ್ಸನ್, ಯಿಂಗ್ವೇ ಮಾಮ್‌ಸ್ಟೀನ್, ಜಾನ್ ಪೆಟ್ರೂಚಿ ಇತ್ಯಾದಿ ಮಹಾನ್ ಗಿಟಾರ್ ವಾದಕರು ಜಿ-ತ್ರೀ ಕಚೇರಿಯಲ್ಲಿ ಭಾಗವಹಿಸಿದ್ದಾರೆ. ಸಾಟ್ರಿಯಾನಿ ಶಿಷ್ಯವೃಂದದಲ್ಲಿ ಘಟಾನುಘಟಿ ಗಿಟಾರ್ ವಾದಕರಿದ್ದಾರೆ, ಸ್ಟೀವ್ ವಾಯ್‍ಯಲ್ಲದೆ ಮೆಟ್ಟಾಲಿಕಾ ತಂಡದ ಮುಖ್ಯ ಗಿಟಾರ್ ವಾದಕ ಕರ್ಕ್ ಹ್ಯಾಮೆಟ್ಟ್ ಕೂಡ ಸಾಟ್ರಿಯಾನಿ ಶಿಷ್ಯ. ಮೇ ೨೦೦೫ರಲ್ಲಿ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡ ಸಾಟ್ರಿಯಾನಿ, ೧೮ ಮೇ ೨೦೦೫ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು ೧೦,೦೦೦ ಜನರ ಮುಂದೆ ಭರ್ಜರಿ ಕಚೇರಿ ನೀಡಿದರು.

ವಾದನ ಶೈಲಿ ಹಾಗು ಪ್ರಭಾವ

ಬದಲಾಯಿಸಿ

ಸಾಟ್ರಿಯಾನಿ ತಾಂತ್ರಿಕವಾಗಿ ನಿಷ್ಣಾತ ರಾಕ್ ಗಿಟಾರ್ ವಾದಕ ಎಂದು ಎಲ್ಲೆಡೆ ಗುರುತಿಸಲ್ಪಡುತ್ತಾರೆ. ಗಿಟಾರ್ ವಾದನದ ಎಲ್ಲಾ ಕ್ಷೇತ್ರಗಳಲ್ಲಿ ಪಾರಂಗತರಾಗಿರುವ ಸಾಟ್ರಿಯಾನಿ, ಗಿಟಾರ್ ತಂತ್ರಗಳಾದ ಡಬ್ಬಲ್ ಹ್ಯಾಂಡ್ ಟ್ಯಾಪಿಂಗ್, ಸ್ವೀಪ್ ಪಿಕ್ಕಿಂಗ್ ಇತ್ಯಾದಿ ತಂತ್ರಗಳಲ್ಲಿ ಪಳಗಿದ್ದಾರೆ. 'ಸ್ಯಾಚ್' ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಸಾಟ್ರಿಯಾನಿ ಈವರೆಗೆ ೧೩ ಬಾರಿ ಗ್ರ್ಯಾಮಿ ಪ್ರಶಸ್ತಿಗಾಗಿ ನಿರ್ವಾಚಿಸಲ್ಪಟ್ಟಿದ್ದಾರೆ ಹಾಗು ಇವರ ಧ್ವನಿಸುರುಳಿಗಳ ೭ ಮಿಲಿಯನ್ ಅಥವಾ ೭೦ ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇವರ ಕೃತಿಗಳು ಬಹಳ ಕ್ಲಿಷ್ಟಕರ ಹಾಗು ನಿಷ್ಣಾತ ಗಿಟಾರ್ ವಾದಕರಿಗೆ ಮಾತ್ರ ಎಂಬ ಟೀಕೆ ಇದ್ದರೂ ಎಲಕ್ಟ್ರಿಕ್ ಗಿಟಾರ್ ಅಭಿಮಾನಿಗಳು ಇವರ ಹೃದಯ ತಟ್ಟುವ ಮತ್ತು ಇಂಪಾದ ಕೃತಿಗಳನ್ನು ಉನ್ನತ ದರ್ಜೆಯ ಕೆಲಸವೆಂದು ಪರಿಗಣಿಸುತ್ತಾರೆ . ಸಾಟ್ರಿಯಾನಿ ಐಬನೇಜ್ ಛಾಪಿನ ಅವರ ಹಸ್ತಾಕ್ಷರವಿರುವ ಜೆಎಸ್ ಸರಣಿಯ ಗಿಟಾರ್ ಮತ್ತು ಪೀವಿಯವರ ಜೆಎಸ್ಎಕ್ಸ್ ಆಂಪ್ಲಿಫೈಯರ್ ಅನುಮೋದಿಸುತ್ತಾರೆ.

ಧ್ವನಿಸುರುಳಿಗಳು

ಬದಲಾಯಿಸಿ
  • ನಾಟ್ ಆನ್ ದಿಸ್ ಅರ್ಥ್
  • ಸರ್ಫಿಂಗ್ ವಿಥ್ ದಿ ಎಲಿಯನ್ (೧೯೮೭)
  • ಡ್ರೀಮಿಂಗ್#೧೧ (೧೯೮೮)
  • ಫ್ಲೈಯಿಂಗ್ ಇನ್ ಎ ಬ್ಲೂ ಡ್ರೀಂ (೧೯೮೯)
  • ದಿ ಎಕ್ಸ್ಟ್ರೀಮಿಸ್ಟ್ (೧೯೯೨)
  • ಟೈಮ್ ಮಷೀನ್ (೧೯೯೩)
  • ದಿ ಬ್ಯೂಟಿಫುಲ್ ಗಿಟಾರ್ (೧೯೯೩)
  • ಜೋ ಸಾಟ್ರಿಯಾನಿ (೧೯೯೫)
  • ಜಿ-ತ್ರೀ: ಲೈವ್ ಇನ್ ಕಾನ್ಸರ್ಟ್ (೧೯೯೭)
  • ಕ್ರಿಸ್ಟಲ್ ಪ್ಲ್ಯಾನೆಟ್ (೧೯೯೮)
  • ಇಂಜಿನ್ಸ್ ಆಫ್ ಕ್ರಿಯೇಷನ್ಸ್ (೨೦೦೦)
  • ಆಡಿಷನಲ್ ಕ್ರಿಯೇಷನ್ಸ್ (ಇಂಜಿನ್ಸ್ ಆಫ್ ಕ್ರಿಯೇಷನ್ಸ್ ಜೊತೆ ಉಚಿತ) (೨೦೦೦)
  • ಲೈವ್ ಇನ್ ಸ್ಯಾನ್ ಫ್ರಾನ್ಸಿಸ್ಕೊ (೨೦೦೧)
  • ಸ್ಟ್ರೇಂಜ್ ಬ್ಯೂಟಿಫುಲ್ ಮ್ಯೂಸಿಕ್ (೨೦೦೨)
  • ದಿ ಎಲಕ್ಟ್ರಿಕ್ ಜೋ ಸಾಟ್ರಿಯಾನಿ: ಆನ್ ಆಂಥಾಲಜಿ (೨೦೦೩)
  • ಜಿ-ತ್ರೀ ಲೈವ್: ರಾಕಿಂಗ್ ಇನ್ ದಿ ಫ್ರೀ ವರ್ಲ್ಡ್ (2004)
  • ಇಸ್ ದೇರ್ ಲವ್ ಇನ್ ಸ್ಪೇಸ್ (೨೦೦೪)
  • ಜಿ-ತ್ರೀ: ಲೈವ್ ಇನ್ ಟೋಕಿಯೊ(೨೦೦೫)

ಬಾಹ್ಯ ಸಂಪರ್ಕ ಕೊಂಡಿಗಳು

ಬದಲಾಯಿಸಿ