ಜಾರ್ಜ್ ಮೈನಾಟ್
ಜಾರ್ಜ್ ಮೈನಾಟ್ (1885-1950) ಅಮೆರಿಕನ್ ವೈದ್ಯ. ಆ ಕಾಲಕ್ಕೆ ಮಾರಕ ರೋಗವೆನಿಸಿದ್ದ ಪರ್ನಿಷಿಯಸ್ ಅನೀಮಿಯವನ್ನು (ಮಾರಕ ರಕ್ತಕಣ ಕೊರತೆ) ಯಕೃತ್ತಿನ ಸಾರಪ್ರಯೋಗದಿಂದ ಗುಣಪಡಿಸಬಹುದೆಂಬುದನ್ನು ಪ್ರಾಣಿಗಳ ಮೇಲಿನ ಪ್ರಾಯೋಗಿಕ ವ್ಯಾಸಂಗಗಳಿಂದ ಆವಿಷ್ಕರಿಸಿದ್ದಕ್ಕಾಗಿ ವ್ಹಿಪ್ಪಲ್ ಹಾಗೂ ಮರ್ಫಿ ಎಂಬ ಸಹವೈದ್ಯರೊಡನೆ 1934ರ ನೊಬೆಲ್ ಪಾರಿತೋಷಿಕ ಪಡೆದ.[೧]
ಜೀವನ
ಬದಲಾಯಿಸಿಬಾಸ್ಟನ್ ನಗರದಲ್ಲಿ 1885 ಡಿಸೆಂಬರ್ 2ರಂದು ಮೈನೂಟ್ ಜನಿಸಿದ.[೨] 1912 ರಲ್ಲಿ ಹಾರ್ವರ್ಡಿನ ಎಂ.ಡಿ. ಪದವಿ ಪಡೆದು ಮುಂದೆ ಮೆಸಾಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿಯೂ, ಬಾಲ್ಟಿಮೋರಿನ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯಲ್ಲಿಯೂ ಕಿರಿವೈದ್ಯನಾಗಿ ಕೆಲಸಮಾಡಿ ಅನುಭವ ಗಳಿಸಿದ. ಪ್ರಸಿದ್ಧ ಶರೀರ ಕ್ರಿಯಾ ವಿಜ್ಞಾನಿ ವಿಲಿಯಮ್ ಹೊವೆಲ್ಲನ ಕೈಕೆಳಗೆ ಸಂಶೋಧನ ವ್ಯಾಸಂಗದಲ್ಲಿ ನಿರತನಾದ. ಅನಂತರ 1915 ರಲ್ಲಿ ಮ್ಯಾಸಚೂಸೆಟ್ಸ್ ಆಸ್ಪತ್ರೆಗೆ ವೈದ್ಯನಾಗಿ ಹಿಂತಿರುಗಿದ. ಅಲ್ಲಿ ರಕ್ತರೋಗಗಳು ಮತ್ತು ರಕ್ತ ವರ್ಗಾವಣೆ ಎಂಬ ವಿಷಯದ ಬಗ್ಗೆ ಸಂಶೋಧನ ನಿರತನಾದ. 1925ರಲ್ಲಿ ಇವನಿಗೆ ಮಧುಮೂತ್ರ ರೋಗವಿರುವುದು ಪತ್ತೆ ಆಯಿತು. ಆ ತರುಣದಲ್ಲಿ ಬ್ಯಾಂಟಿಂಗ್ ಮತ್ತು ಬೆಸ್ಟ್ ಇವರುಗಳಿಂದ ಆವಿಷ್ಕಾರಗೊಂಡಿದ್ದ ಇನ್ಸುಲಿನ್ ಅನ್ನು ರೋಗಚಿಕಿತ್ಸಕವಾಗಿ ತೆಗೆದುಕೊಂಡ ಮೊದಲಿಗರಲ್ಲಿ ಮೈನೂಟ್ ಒಬ್ಬ.
ಇದೇ ಕಾಲದಲ್ಲಿ ಜಿ. ಎಚ್. ವ್ಹಿಪ್ಪಲ್ ಎಂಬ ವಿಜ್ಞಾನಿ ನಾಯಿಗಳಲ್ಲಿ ಪದೇ ಪದೇ ರಕ್ತಸ್ರಾವ ಮಾಡಿಸಿ ರಕ್ತಕಣ ಕೊರತೆಯನ್ನು (ಅನೀಮಿಯ) ಕೃತಕವಾಗಿ ಸೃಷ್ಟಿಸಿ ಯಾವ ಬಗೆಯ ಆಹಾರ ಕೊಟ್ಟರೆ ಎಷ್ಟು ಶೀಘ್ರವಾಗಿ ರಕ್ತಕಣಗಳ ಪುನರುತ್ಪತ್ತಿ ಆಗುತ್ತದೆ ಎಂಬ ವ್ಯಾಸಂಗದಲ್ಲಿ ಹಲವು ವರ್ಷಗಳಿಂದಲೂ ನಿರತನಾಗಿದ್ದ. ಮೈನೂಟ್ ಮತ್ತು ಮರ್ಫಿ ಆಹಾರ ನೀಡಿ ರಕ್ತಕಣ ಕೊರತೆ ನೀಗಿಸುವ ಯೋಜನೆಯನ್ನು ಅಳವಡಿಸಿಕೊಂಡರು. ಮಾರಕ ರಕ್ತಕಣ ಕೊರತೆಯ ರೋಗಿಗಳಿಗೆ ವಿವಿಧ ಆಹಾರಗಳನ್ನು ಊಡಿ ವ್ಯಾಸಂಗ ನಡೆಸಿದರು. ತಾವು ಅನ್ವೇಷಿಸುತ್ತಿದ್ದ ಅಗತ್ಯ ಘಟಕ ಯಕೃತ್ತಿನಲ್ಲಿ ಇರುವ ಸಂಗತಿ ಆಗ ಅವರಿಗೆ ತಿಳಿಯಿತು. ಮುಂದೆ ಮೈನೂಟ್ ಸೂಜಿಮದ್ದಾಗಿ ಕೊಡಬಲ್ಲ ಸಾರವನ್ನು ಯಕೃತ್ತಿನಿಂದ ಪ್ರತ್ಯೇಕಿಸಿದ. ಬೇರೆ ವಿಜ್ಞಾನಿಗಳು ತದನಂತರದ ವ್ಯಾಸಂಗಗಳನ್ನು ಕೈಕೊಂಡಾಗ ಮಾರಕ ರಕ್ತಕಣ ಕೊರತೆಯನ್ನು ಚಿಕಿತ್ಸೆ ಮಾಡಬಲ್ಲ ಘಟಕ ಯಕೃತ್ತಿನ ಸಾರದಲ್ಲಿರುವ ಜೀವಸತ್ತ್ವ B ಗುಂಪಿಗೆ ಸೇರಿದ ಸೈಯನೊ ಕೋಬಾಲಮೀನ್ ಅಥವಾ ಜೀವಸತ್ತ್ವ B12 ಎಂಬುದು ವೇದ್ಯವಾಯಿತು. ಇದನ್ನು ಪ್ರತ್ಯೇಕಿಸಿ ಇದರ ರಾಸಾಯನಿಕ ಸೂತ್ರ ನಿರ್ಣಯಿಸಿ ಸಂಶ್ಲೇಷಿಸುವುದು ಸಾಧ್ಯವಾಗಿರುವುದರಿಂದ ಇಂದು ಮಾರಕ ರಕ್ತಕಣ ಕೊರತೆಯ ಪೂರಕತ್ವ ಪೂರ್ಣ ನಿವಾರಣೆ ಆಗಿದೆ. ಮೈನೂಟ್ ಮ್ಯಾಸಚೂಸೆಟ್ಸಿನ ಬ್ರೂಕ್‌ಲೈನಿನಲ್ಲಿ 1950 ಫೆಬ್ರುವರಿ 25 ರಂದು ನಿಧನನಾದ.[೩]
ಉಲ್ಲೇಖಗಳು
ಬದಲಾಯಿಸಿ- ↑ The Nobel Prize in Physiology or Medicine 1934, Nobelprize.org, Nobel Media AB 2014. Retrieved December 2, 2015.
- ↑ "Obituary". New England Journal of Medicine. 242 (14): 565. April 6, 1950. doi:10.1056/NEJM195004062421414.
- ↑ Robert A. Kyle; Marc A. Shampo (November 2002). "George R. Minot—Nobel Prize for the treatment of pernicious anemia". Mayo Clinic Proceedings. 77 (11). United States: 1150. doi:10.4065/77.11.1150. ISSN 0025-6196. PMID 12440548.
ಹೊರಗಿನ ಕೊಂಡಿಗಳು
ಬದಲಾಯಿಸಿ- ಜಾರ್ಜ್ ಮೈನಾಟ್ on Nobelprize.org including the Nobel Lecture on December 12, 1934 The Development of Liver Therapy in Pernicious Anemia
- "Red-Blooded Doctors Cure Anemia"
- Pernicious Anemia, a Victory for Science
- ಜಾರ್ಜ್ ಮೈನಾಟ್ — Biographical Memoirs of the National Academy of Sciences
- George Richards Minot papers, 1891-1951. GA 55. Harvard Medical Library, Francis A. Countway Library of Medicine, Boston, Mass.