ಜಾನ್ ರೇ (1627-1705) ಇಂಗ್ಲೆಂಡಿನ ಪ್ರಕೃತಿವಿಜ್ಞಾನಿ, ಅಲ್ಲಿಯ ಪ್ರಕೃತಿ ವಿಜ್ಞಾನದ ಜನಕ ಎಂದು ಪ್ರಸಿದ್ಧನಾದವ.

ಜಾನ್ ರೇ

ಬಾಲ್ಯ ಮತ್ತು ವಿದ್ಯಾಭ್ಯಾಸ ಬದಲಾಯಿಸಿ

ಇಂಗ್ಲೆಂಡಿನ ಆಗ್ನೇಯ ಭಾಗದಲ್ಲಿರುವ ಎಸೆಕ್ಸ್ ಪ್ರದೇಶದ ಬ್ಲ್ಯಕ್ ನಾಟ್ಲ್ ಎಂಬಲ್ಲಿ 1627 ನವೆಂಬರ್ 29ರಂದು ಜನಿಸಿದ. ತಂದೆ ರೋಗರ್ ರೇ ಕಮ್ಮಾರನಾಗಿದ್ದ. ತಾಯಿ ಎಲಿಜ಼ಬತ್ ನಾಟಿವೈದ್ಯಳಾಗಿದ್ದಳು. ಈತ ಸಣ್ಣ ವಯಸ್ಸಿನಿಂದಲೇ ಸಸ್ಯವಿಜ್ಞಾನದಲ್ಲಿ ಆಸಕ್ತಿ ತಳೆದಿದ್ದ. ಇದಕ್ಕೆ ಮನೆಯ ವಾತಾವರಣವೂ ಕಾರಣವಾಗಿತ್ತು. ಇವನ ಪ್ರಾಥಮಿಕ ವಿದ್ಯಾಭ್ಯಾಸ ಬ್ರೈಸ್‌ಟ್ರೀ ಎಂಬಲ್ಲಿ ನಡೆಯಿತು. ಬಳಿಕ ಕಾಲೇಜಿನ ವ್ಯಾಸಂಗವನ್ನು ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ನಡೆಸಿದ.[೧] ಬಿ.ಎ. ಹಾಗೂ ಎಂ.ಎ ಪದವಿ ಪಡೆದ. ಇವನ ಸಾಮರ್ಥ್ಯವನ್ನು ಗಮನಿಸಿ ಎಫ್.ಆರ್.ಎನ್. ಪ್ರಶಸ್ತಿಯನ್ನು ಇವನಿಗೆ ನೀಡಲಾಯಿತು(1867).

ನಂತರದ ಜೀವನ ಬದಲಾಯಿಸಿ

ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನಗಳಲ್ಲಿ ಕೆಲಸ ಮಾಡಲು ಇವನಿಗೆ ಫ್ರಾನ್ಸಿಸ್ ವಿಲೂಗ್‍ಬೇ ಎಂಬವನ ನೆರವು ಒದಗಿತು.[೨][೩] 1663ರಿಂದ 1666ರ ತನಕ ಈ ಇಬ್ಬರೂ ಫ್ರಾನ್ಸ್, ಸ್ವಿಟ್‌ಜ಼ರ್‌ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದರು. ಆ ಸಮಯದಲ್ಲಿ ಈತ ರಚಿಸಿದ ಫಿಲಾಸಫಿಕಲ್ ಟ್ರಾನ್‌ಜ್ಯಾಕ್ಷನ್ಸ್ ಎಂಬ ಪುಸ್ತಕ ಪ್ರಕಟವಾಯಿತು. 1672ರಲ್ಲಿ ಇವನ ಆತ್ಮೀಯ ಗೆಳೆಯನಾಗಿದ್ದ ವಿಲೂಗ್‍ಬೇ ನಿಧನನಾದ. ಅದೇ ವರ್ಷ ಈತ ಮಾರ್ಗರೇಟ್ ಓಕ್ಲೆ ಎಂಬಾಕೆಯನ್ನು ವಿವಾಹವಾದ. ಗೆಳೆಯ ವಿಲೂಗ್‍ಬೇ ಪೂರ್ಣಮಾಡದೆ ಬಿಟ್ಟು ಹೋದ ಸಂಶೋಧನೆಯನ್ನು ಈತ ಸಂಗ್ರಹಿಸಿ ಇಟ್ಟಿದ್ದ ಹಣದಿಂದಲೇ ಮುಂದುವರಿಸಿದ. ಇಂಗ್ಲೆಂಡಿನ ಸುತ್ತಲೂ ಪ್ರವಾಸ ಮಾಡಿ ಸಸ್ಯಗಳಿಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಕಲೆಹಾಕಿದ. ಅವನ್ನು ಅಭ್ಯಸಿಸಿ ಕ್ರಮಬದ್ಧವಾಗಿ ಕೋಷ್ಟಕರೂಪದಲ್ಲಿ ನಿರೂಪಿಸಿ ವರ್ಗೀಕರಿಸಿದನಲ್ಲದೆ ಅವಕ್ಕೆ ಬೇರೆ ಬೇರೆ ಹೆಸರುಗಳನ್ನೂ ನೀಡಿದ. ಸಸ್ಯಗಳನ್ನು ಈ ಕ್ರಮದಲ್ಲಿ ವರ್ಗೀಕರಿಸಿ ರಚಿಸಿದ ಕೋಷ್ಟಕ ಕೇಂಬ್ರಿಜ್ ಕ್ಯಾಟಲಾಗ್ ಎಂದು ಹೆಸರಾಗಿದೆ. ಇದರ ಅನಂತರ ರೇನ ಆಸಕ್ತಿ ಪ್ರಕೃತಿವಿಜ್ಞಾನ, ಆಕೃತಿ ವಿಜ್ಞಾನ ಮತ್ತು ವರ್ಗೀಕರಣ ವಿಜ್ಞಾನಗಳ ಕಡೆಗೆ ಹರಿಯಿತು. ಸಸ್ಯವರ್ಗೀಕರಣದ ತತ್ತ್ವಗಳ ಚಿಂತನೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಸಸ್ಯಗಳ ಪ್ರಜನನಕ್ರಿಯೆಯಲ್ಲಿ ಈತ ವಿಶೇಷ ಕೆಲಸ ಮಾಡಿದ. ಏಕದಳ ಮತ್ತು ದ್ವಿದಳಸಸ್ಯಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಿದ. ಈ ಸಂಶೋಧನೆ ಇವನ ಮುಂದಿನ ಅಧ್ಯಯನಗಳಿಗೆ ಮೂಲ ಅಡಿಪಾಯ ಒದಗಿಸಿತು. ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ರೂಪುಗೊಳ್ಳುವ ಕ್ರಿಯೆಯನ್ನು ಕುರಿತು ವಿಶೇಷವಾಗಿ ಅಧ್ಯಯನ ನಡೆಸಿದ. ಹೂಗಳು, ಗಿಡದ ಇತರ ಭಾಗಗಳೊಡನೆ ಹೊಂದಿರುವ ಸಂಬಂಧವನ್ನು ಕುರಿತಂತೆ ಇವನ ಅಧ್ಯಯನ ಸಾಗಿತ್ತು. ಇದರ ಫಲಿತಾಂಶವನ್ನು ಸಸ್ಯಗಳ ವರ್ಗೀಕರಣದಲ್ಲಿ ಈತ ಬಳಸಿಕೊಂಡ. ಏಕದಳ, ದ್ವಿದಳ ಧಾನ್ಯಗಳ ವ್ಯತ್ಯಾಸದ ಆಧಾರದ ಮೇಲೆ ಮಾಡಿದ ವರ್ಗೀಕರಣ ಮರಗಳ ಮತ್ತು ಕುರುಚಲುಗಿಡಗಳ ವರ್ಗೀಕರಣದ ದೃಷ್ಟಿಯಿಂದ ಅಷ್ಟಾಗಿ ಸಮರ್ಪಕವಾಗಿರಲಿಲ್ಲ ಎಂದು ಕಂಡುಬಂತಾದ ಕಾರಣ ಮುಂದೆ ಇದನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಿ ತಾನು ಮಾಡಿದ ಸಸ್ಯಗಳ ವರ್ಗೀಕರಣವನ್ನು ಮೂರು ಸಂಪುಟಗಳಲ್ಲಿ ಹೊರತಂದ (1686-1704). ಈ ಸಂಪುಟಗಳಲ್ಲಿ 18,600 ಬೇರೆ ಬೇರೆ ಸಸ್ಯವರ್ಗಗಳನ್ನು ವಿಂಗಡಿಸಿರುವ ಕ್ರಮಬದ್ಧ ಜೋಡಣೆ ಕಂಡುಬರುತ್ತದೆ.

ಇವನ ಆಸಕ್ತಿ ಪ್ರಾಣಿಪ್ರಪಂಚದ ಕಡೆಗೂ ಸಾಗಿತ್ತು. ಪ್ರಾಣಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಇದಕ್ಕೆ ಸಂಬಂಧಿಸಿದ ಒಂದು ಕೃತಿಯನ್ನು 1693ರಲ್ಲಿ ಹೊರ ತಂದ. ಪ್ರಾಣಿಗಳ ಪಾದ, ಹಲ್ಲು ಮತ್ತು ಕಾಲ್ಬೆರಳುಗಳನ್ನು ಆಧಾರವಾಗಿಟ್ಟುಕೊಂಡು ಈ ವರ್ಗೀಕರಣವನ್ನು ಮಾಡಿದ್ದ. ಬಳಿಕ ಈತನ ಆಸಕ್ತಿ ಅಕಷೇರುಕಗಳ ಅಧ್ಯಯನದ ಕಡೆ ವಾಲಿತ್ತು. ಮೆಥಡೂಸ್ ಇನ್ ಸೆಕ್ಟೊರೋಮ್ (1705) ಎಂಬ ಇವನ ಗ್ರಂಥದಲ್ಲಿ ಕೀಟಗಳನ್ನು ಕುರಿತ ವಿವರವಾದ ಅಧ್ಯಯನವಿದೆ. ಚಿಟ್ಟೆ, ಜೇನುಹುಳು, ಪತಂಗ, ಕಣಜ, ರೆಕ್ಕೆಹುಳುಗಳನ್ನು ಕುರಿತೂ ಅಭ್ಯಸಿಸಿದ್ದ. ಇವನ ಪ್ರಕಟಿತ ಕೃತಿಗಳು ನೇರವಾಗಿ ಪ್ರಕೃತಿವಿಜ್ಞಾನಕ್ಕೆ ಸಂಬಂಧಿಸಿದವುಗಳಾಗಿವೆ. ಈತನ ದ ವಿಸ್ಡಮ್ ಆಫ್ ಗಾಡ್ ಎಂಬ ಕೃತಿ ಇವನ ಕೃತಿಗಳ ಪೈಕಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತು. ಇದು ನಾಲ್ಕು ಮುದ್ರಣಗಳನ್ನು ಕಂಡಿದೆ. ಈತ ಈ ಪುಸ್ತಕದಲ್ಲಿ ಸೌರವ್ಯೂಹದ ವಿಚಾರದಿಂದ ತನ್ನ ವಿಚಾರಧಾರೆಯನ್ನು ಪ್ರಾರಂಭಿಸಿ ವಸ್ತುಸಿದ್ಧಾಂತ, ಭೂವಿಜ್ಞಾನ, ಸಸ್ಯ, ಪ್ರಾಣಿ ಮತ್ತು ಮನುಷ್ಯನ ಅಂಗರಚನೆ, ಶರೀರವಿಜ್ಞಾನದವರೆಗೂ ಅನೇಕ ವಿಚಾರಗಳನ್ನು ಮಂಡಿಸಿದ್ದಾನೆ. ಇದು ಇವನ ಸ್ವಂತಿಕೆಯನ್ನು ಮತ್ತು ವೈಶಿಷ್ಟ್ಯವನ್ನು ಎತ್ತಿ ತೋರಿಸುತ್ತದೆ. ಈತ ಬ್ಲ್ಯಾಕ್‌ನಾತ್ಲೆಯಲ್ಲಿ 1705 ಜನವರಿ 17 ರಂದು ನಿಧನನಾದ.

ಉಲ್ಲೇಖಗಳು ಬದಲಾಯಿಸಿ

  1. "Ray, John (RY644J)". A Cambridge Alumni Database. University of Cambridge.
  2. Mullens, W.H. (1909). "Some early British Ornithologists and their works. VII. John Ray (1627-1705) and Francis Willughby (1635-1672)" (PDF). British Birds. 2 (9): 290–300. Archived from the original (PDF) on 2015-04-02. Retrieved 2023-04-25.
  3. Birkhead, Tim (2018). The Wonderful Mr Willughby: The First True Ornithologist. London: Bloomsbury. pp. 24–25. ISBN 978-1-4088-7848-4.


ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾನ್_ರೇ&oldid=1200065" ಇಂದ ಪಡೆಯಲ್ಪಟ್ಟಿದೆ