ಜಾನ್ ಗೋವರ್ ಸು. 1330-1408. ಐರೋಪ್ಯ ಮಧ್ಯಯುಗದ ನಾಲ್ಕು ಪ್ರಸಿದ್ಧ ಆಂಗ್ಲ ಕವಿಗಳಲ್ಲೊಬ್ಬ. ಉಳಿದವರು ಚಾಸರ್, ಲಿಡ್ಗೇಟ್ ಮತ್ತು ಲ್ಯಾಂಗ್ಲೆಂಡ್.

John Gower shooting the world, a sphere of earth, air, and water (from a manuscript of his works ca. 1400)

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಗೋವರನ ಜೀವನದ ಬಗ್ಗೆ ಖಚಿತವಾಗಿ ಗೊತ್ತಿರುವ ವಿವರಗಳು ಹೆಚ್ಚಿಲ್ಲ. ಈತ ಕೆಂಟ್ ಎಂಬಲ್ಲಿ ಹುಟ್ಟಿದ. ಹಳ್ಳಿಯ ವತನದಾರನೋ ವರ್ತಕನೋ ಆಗಿ ಬದುಕು ನಡೆಸಿದ್ದಿರಬೇಕೆಂಬುದು ಈಚಿನ ಅಭಿಪ್ರಾಯ. ಸಾಕಷ್ಟು ಅನುಕೂಲ ಸ್ಥಿತಿಯಲ್ಲಿಯೇ ಬಾಳಿದ್ದಿರಬೇಕು. ಧರ್ಮಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡುತ್ತಿದ್ದ. ವಿರಾಗಿಯಾಗಬೇಕಿದ್ದ ಎಪ್ಪತ್ತರ ಮುಪ್ಪಿನಲ್ಲಿ ಅಗ್ನೆಸ್ ಗ್ರೌಂಡೊಲ್ಫ್‌ ಎಂಬುವಳನ್ನು ಮದುವೆಯಾದ. ಅನಂತರ ಮೂರು ವರ್ಷಗಳಲ್ಲಿಯೇ ಕುರುಡನಾಗಿ, ಅದಾದ ಏಳು ವರ್ಷಗಳಿಗೆ ಗತಿಸಿದ. ಮುಂಚೆಯೇ ಒಂದು ಮದುವೆಯಾಗಿದ್ದ, ಮುಪ್ಪಿನಲ್ಲಾದದ್ದು ಎರಡನೆಯ ಮದುವೆ ಎಂಬ ಊಹೆಯೂ ಇದೆ.

ಚಾಸರ್ ಮತ್ತು ಗೋವರ್ ತುಂಬ ಸ್ನೇಹದಿಂದಿದ್ದುದು ಕಂಡುಬರುತ್ತದೆ. ಚಾಸರ್ ಒಮ್ಮೆ ಪರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಇವನನ್ನು ತನ್ನ ಆಸ್ತಿಗೆ ಅಧಿಕಾರಿಯನ್ನಾಗಿ ನಿಯಮಿಸಿದ್ದುಂಟು. ಚಾಸರ್ ತನ್ನ ಟ್ರಾಯಿಲಸ್ ಮತ್ತು ಕ್ರಿಸಿಡೆ ಎಂಬ ಕಥೆಯ ಮುಮ್ಮಾತಿನಲ್ಲಿ ಗೋವರ್ನನ್ನು ನೀತಿಶಾಲಿ ಗೋವರ್ ಎಂದು ಶ್ಲಾಘಿಸಿದ್ದಾನೆ. ವರ್ತಕನ ಕಥೆಯ ಮುದುಕ ಜನವರಿ ಗೋವರ್‌ನ ವ್ಯಂಗ್ಯ ಚಿತ್ರವೆಂತಲೂ ಕೊಂಚ ಕಾಲ ಇವರಿಬ್ಬರಿಗೂ ಮನಸ್ತಾಪ ಉಂಟಾಗಿದ್ದಿತೆಂಬುದಕ್ಕೆ ಇದೇ ಸಾಕ್ಷಿಯೆಂತಲೂ ಒಂದು ಹೇಳಿಕೆ ಇದೆ. ಇದು ಪಾಕ್ಷಿಕ ಕಲ್ಪನೆ. ಸಲಿಗೆಯ ವಿನೋದ ಒಂದುಂಟೆಂಬುದನ್ನು ನೆನಪಿನಲ್ಲಿಡಬೇಕು.

 
The tomb of John Gower in Southwark Cathedral. For more information click on the picture

ಸಾಹಿತ್ಯ

ಬದಲಾಯಿಸಿ

ನೀತಿಶಾಲಿ ಎಂಬ ಪದ ಗೋವರನ ಕೃತಿಗಳಿಗೂ ಸಲ್ಲುತ್ತದೆ. ಈತನ ಮುಖ್ಯ ಕೃತಿಗಳು ಮೂರು - ಲ್ಯಾಟಿನ್ ಭಾಷೆಯ ವಾಕ್ಸ್‌ ಕ್ಲೆಮ್ಯಾಂಟಿಸ್ (10,000 ಸಾಲು), ಫ್ರೆಂಚ್‍ನ ಸ್ಪೆಕ್ಯುಲಂ ಮೆಡಿಟ್ಯಾಂಟಿಸ್ (20,000 ಸಾಲು) ಮತ್ತು ಇಂಗ್ಲಿಷ್‍ನ ಕನ್ಫೆಸಿಯೋ ಅಮ್ಯಾಂಟಿಸ್ (34,000 ಸಾಲು). ಅನೇಕ ಶತಮಾನಗಳು ಅನುಪಲಬ್ಧವಾಗಿದ್ದ ಈತನ ಫ್ರೆಂಚ್ ಕೃತಿ 1895 ರಲ್ಲಿ ಕೇಂಬ್ರಿಜ್‍ನಲ್ಲಿ ಸಿಕ್ಕಿತು. ಮತಧರ್ಮದ ಭಾಷೆ, ನಾಗರಿಕ ಆಡಳಿತ ಭಾಷೆ ಮತ್ತು ದೇಶೀಯ ಭಾಷೆ-ಮೂರರಲ್ಲೂ ಈತ ಕೃತಿರಚನೆ ಮಾಡಿರುವುದು ಗಮನಾರ್ಹ ಸಂಗತಿ. ಆಗ ದೇಶೀಯ ಭಾಷೆಯಾದ ಇಂಗ್ಲಿಷ್‍ಗೆ ಆದ್ಯ ಸ್ಥಾನವಿರಲಿಲ್ಲ. ಮೂರರಲ್ಲೂ ಈತ ನೀತಿಬೋಧಕ ಕಿರುಗವನಗಳನ್ನೂ ರಚಿಸಿದ್ದಾನೆ.ಲ್ಯಾಟಿನಿನ ರಚನೆಗಳು ಬಹಳಮಟ್ಟಿಗೆ, ಎರಡನೆಯ ರಿಚರ್ಡನ ಆಳಿಕೆಯ ಅಸಂತುಷ್ಟಿ, 1381ರ ರೈತ ಚಳವಳಿ ಮತ್ತು ಮುಂದೆ ಬರಲಿದೆಯೆಂದು ನಿರೀಕ್ಷಿಸಲಾಗಿದ್ದ, ನಾಲ್ಕನೆಯ ಹೆನ್ರಿಯ ಕಾಲದ, ಸುಖದಿನದ ವರ್ಣನೆಗಳಾಗಿವೆ.ಫ್ರೆಂಚ್‍ನಲ್ಲಿ ರೂಪುಗೊಂಡ ಕೃತಿ ವೈವಾಹಿಕ ಜೀವನದ ಹಿರಿಮೆಯನ್ನು ಹೊಗಳುವ ಗಂಭೀರ ರಚನೆಯಾಗಿದೆ.

ಇವನ ಕನ್ಫೆಸಿಯೊ ನಿಜಕ್ಕೂ ಬೃಹತ್ಕೃತಿ ಕೂಡ. ಇವನ ಪಾಲಿಗೆ ಮಹತ್ಕೃತಿ ಕೂಡ. ದೊರೆ ಎರಡನೆಯ ರಿಚರ್ಡನ ಅಪೇಕ್ಷೆಯಂತೆ ಇದನ್ನು ರಚಿಸಿದುದಾಗಿ ತಿಳಿಯಬರುತ್ತದೆ. ಕಾವ್ಯದ ಮುಮ್ಮಾತಿನಲ್ಲಿ, ಎಂದಿನಂತೆ ಕಾಲ ಕೆಟ್ಟಿತು, ಎಲ್ಲೆಲ್ಲೂ ಪಾಪ ತುಂಬಿತು, ಮುಂತಾಗಿ ಗೋಳಾಡಿ, ಸದ್ಯಕ್ಕಾದರೂ ಆ ವಿಷಯವನ್ನು ಬಿಟ್ಟು ಹೆಚ್ಚು ಆಹ್ಲಾದಕರವಾದ ಪ್ರೇಮದ ವಿಷಯಕ್ಕೆ ಬರೋಣವೆಂದು ಸಾರಿ ಕವಿ ಕಥೆಯನ್ನು ಪ್ರಾರಂಭಿಸುತ್ತಾನೆ. ಒಂದು ವಸಂತ ಪ್ರಾತಃಕಾಲದಲ್ಲಿ ಕವಿ ಯಾವುದೋ ವನಕ್ಕೆ ಹೋದಾಗ ಪ್ರೇಮದೇವತೆಗಳಾದ ಕ್ಯುಪಿಡ್ ಮತ್ತು ವೀನಸ್ ಎದುರಾದರಂತೆ. ಕ್ಯುಪಿಡ್ ಸುಮ್ಮನೆ ಹೊರಟು ಹೋಗಬೇಕೆಂದಿದ್ದರೂ ತನ್ನ ಆರಾಧಕನನ್ನು ಉಪೇಕ್ಷಿಸುವುದಕ್ಕೆ ಮನಸ್ಸಾಗದ ವೀನಸ್ ಇವನನ್ನು ಮಾತಾಡಿಸಿ ಆತ್ಮನಿವೇದನೆ ಮತ್ತು ಕ್ಷಮಾರ್ಜನೆಗೋಸ್ಕರ ಇವನನ್ನು ಜೀನಿಯಸ್ ಬಳಿಗೆ ಕಳಿಸಿದಳಂತೆ. ಆಗ ಜೀನಿಯಸ್ ಇವನಿಗೆ ಕೊಟ್ಟ ಉಪದೇಶದ ದೃಷ್ಟಾಂತ ಕಥೆಗಳೇ ಇದರ ತಿರುಳು. ಕೆಲವಕ್ಕೆ ಪ್ರಾಚೀನ ರೋಮನ್ ಕವಿ ಓವಿಡ್ ಆಧಾರ. ಉಳಿದವು ಆಗಿನ ಕಾಲದಲ್ಲಿ ಜನಜನಿತವಾಗಿದ್ದಂಥವು. ದಿ ಟೇಲ್ ಆಫ್ ಕಾನ್ಸ್ಟೆನ್ಸ್‌ ಮತ್ತು ದಿ ಟೇಲ್ ಆಫ್ ಫ್ಲಾರೆಂಟ್ ಚಾಸರನಲ್ಲಿ ಕ್ರಮಶಃ ದಿ ಟೇಲ್ ಆಫ್ ಸಮನರ್ (ನ್ಯಾಯಗಾರನ ಕಥೆ) ಮತ್ತು ದಿ ವೈಫ್ ಆಫ್ ಬಾತ್ಸ್‌ ಟೇಲ್ ಎಂದಾಗುತ್ತದೆ. ಆದರೆ ಇವನು ಕಥನ ಕಲೆಯಲ್ಲಿ ಚಾಸರನ ಸಮಕ್ಕೆ ಹಾಗಿರಲಿ ಹತ್ತಿರಕ್ಕೂ ಬರಲಾರ. ಇಲ್ಲಿನ ಟೈರ್ ನಗರದ ಅಪೋಲೋನಿಯಸ್ ಮುಂದೆ ಷೇಕ್ಸ್‌ಪಿಯರನ ಪೆರಿಕ್ಲೀಸ್ಗೆ ವಸ್ತುವನ್ನೊದಗಿಸಿತೆಂದು ಹೇಳಲಾಗಿದೆ.

ಗೋವರ್ ಬೃಹತ್ಸಾಹಿತಿ ಹೌದು; ಆದರೆ ಇಂದಿನ ರುಚಿಗೆ ಒಗ್ಗುವುದು ಕಷ್ಟ; ತೀರ ನೀರಸ, ಮಂದ, ಭಾರ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: