ಜಹ್ನು
ಜಹ್ನು- ಚಂದ್ರವಂಶದ ರಾಜನಾದ ಅಜಮೀಢ ಮತ್ತು ಕೇಶಿನಿಯರ ಮಗ, ಸುಹೋತ್ರರಾಜನ ಪೌತ್ರ. ಕಪಿಲ ಮುನಿಯ ಕ್ರೋಧಕ್ಕೆ ತುತ್ತಾಗಿ ಭಸ್ಮ ಹೊಂದಿದ ಅರವತ್ತು ಸಾವಿರ ಸಗರಪುತ್ರರಿಗೆ ಸದ್ಗತಿ ಮತ್ತು ಸ್ವರ್ಗಪ್ರಾಪ್ತಿಯನ್ನುಂಟುಮಾಡುವುದಕ್ಕಾಗಿ ಭಗೀರಥನು ತಪಸ್ಸನ್ನಾಚರಿಸಿ ಬ್ರಹ್ಮ ಮತ್ತು ಶಿವರನ್ನು ಮೆಚ್ಚಿಸಿ ಗಂಗೆ ಧರೆಗಿಳಿಯುವಂತೆ ಅನುಗ್ರಹ ಪಡೆದನಷ್ಟೆ. ಭಗೀರಥನು ದಿವ್ಯರಥವನ್ನೇರಿ ಮುಂದೆ ಹೋಗುತ್ತಿರಲು ಅಲಕನಂದಾ ಎಂಬ ಏಳನೆಯ ಗಂಗಾಪ್ರವಾಹ ಅವನ ಹಿಂದೆ ಪ್ರವಹಿಸುತ್ತಾ ಹೋಯಿತು. ಸರ್ವಪಾಪ ನಾಶಿನಿಯಾದ ಗಂಗೆ ಹಾಗೆಯೇ ಹರಿಯುತ್ತಾ ಮಹಾತ್ಮನಾದ ಜಹ್ನು ಯಾಗಮಾಡುತ್ತಿದ್ದ ಯಜ್ಞಶಾಲೆಯನ್ನು ತೇಲಿಸಿಬಿಟ್ಟಳು. ಇದರಿಂದ ಕೋಪಗೊಂಡ ಜಹ್ನುವು ಗಂಗಾ ಪ್ರವಾಹವನ್ನೆಲ್ಲಾ ಏಕಾಪೋಶನವಾಗಿ ಕುಡಿದುಬಿಟ್ಟ. ಇದನ್ನು ವೀಕ್ಷಿಸುತ್ತಿದ್ದ ಜನ ಜಹ್ನುವನ್ನು ಸ್ತೋತ್ರ ಮಾಡಿ ಗಂಗೆಯನ್ನು ಮಗಳಂತೆ ಕಂಡು ಕ್ಷಮಿಸಬೇಕಾಗಿ ಅರಿಕೆ ಮಾಡಿದರು. ಜಹ್ನು ಪ್ರಸನ್ನನಾಗಿ ಗಂಗೆಯನ್ನು ತನ್ನ ಕಿವಿಗಳ ಮೂಲಕ ಹೊರಗೆ ಬಿಟ್ಟ. ಆದುದರಿಂದಲೇ ಗಂಗೆಯನ್ನು ಜಹ್ನುಸುತೆಯೆಂದೂ ಜಾಹ್ನವಿಯೆಂದೂ ಕರೆಯುವರು. ಗಂಗಾಸ್ಪರ್ಶದಿಂದಾಗಿ ಸಗರಪುತ್ರರಿಗೆ ಸದ್ಗತಿ ದೊರಕಿತು.