ಜನಪದ ಶಿಲ್ಪವೆಂದರೆ ಯಾವುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟಸಾಧ್ಯ. ಅದರ ಹರಹಿನ ಸೀಮೆ, ಲಕ್ಷಣ ಇತ್ಯಾದಿಗಳನ್ನು ನಿರೂಪಿಸುವ ಪ್ರಯತ್ನವನ್ನು ಹಲವು ವಿದ್ವಾಂಸರು ಮಾಡಿರುವರಾದರೂ ಈ ವಿಷಯದಲ್ಲಿ ಒಮ್ಮತ ಇನ್ನೂ ಮೂಡಿಲ್ಲ. ಘನವಸ್ತುಗಳಿಂದ ಆಕೃತಿಗಳನ್ನು ಮೂಡಿಸುವ ಶಿಲ್ಪಕಲೆ ನಿತ್ಯಜೀವನ ನಿರ್ವಹಣೆಯ ಅತ್ಯಾವಶ್ಯಕತೆಗಳಿಂದ ಹೊರಗಿರುವ ಒಂದು ವ್ಯಾಪಾರ. ಇದರ ನೆಲೆ ಇರುವುದು ಮಾನವನ ಸೃಷ್ಟ್ಯಾತ್ಮಕ ಮನೋವಾಂಛೆಯಲ್ಲಿ. ಹೊಸದನ್ನು ಸೃಷ್ಟಿಸಬೇಕೆಂಬ ಆಸಕ್ತಿ ನಾನಾಸ್ತರಗಳಲ್ಲಿ ಅಂದರೆ ಕೆಲವು ಬಾರಿ ಸೌಂದರ್ಯಾನುಭವಕ್ಕೆ ಪ್ರೋತ್ಸಾಹಕವಾಗಿ, ಹಲವು ಬಾರಿ ಧರ್ಮ, ಅಂತಸ್ತಿನ ಪ್ರಜ್ಞೆ, ವಿನೋದ ಮುಂತಾದ ಮನೋರಂಗದ ಇತರ ವ್ಯಾಪಾರಗಳಿಗಾಗಿ ಉಪಯೋಗವಾಗುತ್ತದೆ. ಈ ಧೋರಣೆಗಳು ಮಾನವನ ಎಲ್ಲ ವರ್ಗ-ಸ್ತರಗಳಲ್ಲೂ ಕಲಾನಿರ್ಮಾಣದ ನೆಲಗಟ್ಟಾಗಿ ಕಾಣಿಸುವುದರಿಂದ, ಧೋರಣೆಯ ಆಧಾರದ ಮೇಲೆ ಜನಪದ ಶಿಲ್ಪ ಯಾವುದು, ಅದು ಅಲ್ಲದ್ದು ಯಾವುದು ಎಂಬುದನ್ನು ನಿರ್ಧರಿಸಲಾಗುವುದಿಲ್ಲ.

ಸಂಪ್ರದಾಯ ಬದಲಾಯಿಸಿ

ಭಾರತದಲ್ಲಿ ಜನಪದ ಶಿಲ್ಪದ ಅನೂಚಾನ ಸಂಪ್ರದಾಯವಿದೆ.[೧] ಮಣ್ಣು, ಮರ ಮರದ ಹೊಟ್ಟು, ಬಟ್ಟೆ ಕೆಲವು ಬಾರಿ ಹಿತ್ತಾಳೆ ಇಂಥ ಸುಲಭವಾಗಿ ದೊರೆಯುವ ವಸ್ತುಗಳು ಶಿಲ್ಪರಚನೆಗೆ ಇಲ್ಲಿ ಉಪಯೋಗದಲ್ಲಿವೆ. ಹೆಚ್ಚಿನ ಶಿಲ್ಪಗಳು ಧಾರ್ಮಿಕ ಅಥವಾ ಮಾಟ-ಮಂತ್ರಗಳಿಗೆ ಸಂಬಂಧಿಸಿದವು. ಕೆಲವು ಅಲಂಕರಣ, ಹಾಗೂ ವಿನೋದಕ್ಕಾಗಿ ಮಾಡಿದವೂ ಕಂಡುಬರುತ್ತವೆ. ಇವುಗಳ ನಿರೂಪಣೆಯಲ್ಲೂ ಸರಳತೆ ಮತ್ತು ವಿವರಕ್ಕಿಂತ ಭಾವಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ. ನಾಗಾಲ್ಯಾಂಡಿನ ಕೋನ್ಯೂಕ್ ಆದಿವಾಸಿಗಳ ಒಂದು ಸ್ತ್ರೀವಿಗ್ರಹ ಮತ್ತು ದಂಪತಿ ವಿಗ್ರಹಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ದಕ್ಷಿಣ ಭಾರತದ ಹಿತ್ತಾಳೆಯ ಒಂದು ದೈತ್ಯ ವಿಗ್ರಹ ಭಯಂಕರತೆಯನ್ನು ಶಿಲ್ಪೀಕರಿಸಿರುವ ಉತ್ತಮ ಕೃತಿ. ಹಿಮಾಚಲ ಪ್ರದೇಶ, ಮತ್ತು ಇತರ ಹಿಮಾಲಯದ ತಪ್ಪಲು ಭಾಗಗಲಲ್ಲಿ, ಈ ವೈಶಿಷ್ಟಗಳನ್ನು ಹೊಂದಿರುವ, ನೃತ್ಯಗಳಲ್ಲಿ ಉಪಯೋಗಿಸುವ ಮುಖವಾಡಗಳು ಹಾಗೂ ಗ್ರಾಮೀಣ ದೇವ ವಿಗ್ರಹಗಳು ಬಹುಸಂಖ್ಯೆಯಲ್ಲಿ ಕಂಡುಬರುತ್ತವೆ. ಭಾರತದ ಹಲವೆಡೆಗಳಲ್ಲಿ ಅದರಲ್ಲೂ ಹೆಚ್ಚಾಗಿ ಗುಜರಾತ್, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಈ ಸುತ್ತಿನಲ್ಲಿ ಹಿತ್ತಾಳೆಯಲ್ಲಿ ಮಾಡಿದ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ವಿಶೇಷವಾಗಿ ಕಾಣಬಹುದು. ಕುಲದವರ ಮೂಲಪುರಷರನ್ನು ಪ್ರತೀಕರಿಸುವ ಈ ವಿಗ್ರಹಗಳು ಶ್ರಾದ್ಧಕ್ರಿಯೆಯಲ್ಲಿ ಉಪಯೋಗಿಸುವಂಥವು. ತಮಿಳುನಾಡು ಮತ್ತು ಕೇರಳದಲ್ಲಿ ಸುಮಾರು ಇದೇ ರೀತಿಯ ಆದರೆ ಎತ್ತರದ ವಿಗ್ರಹಗಳನ್ನು ಗ್ರಾಮಗಳ ಸಮೀಪದಲ್ಲಿ ನಿಲ್ಲಿಸಿರುತ್ತಾರೆ. ಈ ವಿಗ್ರಹಗಳು ಅಯ್ಯಪ್ಪನ್ ಮತ್ತು ಅವನ ಅನುಚರ ಕರುಪ್ಪನ್ ದೇವರುಗಳವು. ಇವು ಸಾಮಾನ್ಯವಾಗಿ ಮಣ್ಣಿನಲ್ಲಿ ಮಾಡಿ ಉತ್ತಮವಾಗಿ ಬಣ್ಣ ಹಾಕಿದ ಬೃಹತ್ ವಿಗ್ರಹಗಳು. ದನಗಳಿಗೆ ಅಥವಾ ಜನಗಳಿಗೆ ಕಾಯಿಲೆ ಬಂದಾಗ, ಮಣ್ಣಿನಲ್ಲಿ ಆಯಾ ಪ್ರತಿಕೃತಿಗಳನ್ನು ಮಾಡಿ ಈ ದೇವರ ಬಳಿ ಇಡುವ ರೂಢಿ ಇದೆ. ಇಂಥ ನೂರಾರು ಬೊಂಬೆಗಳನ್ನು ಅಯ್ಯಪ್ಪನ್ ವಿಗ್ರಹಗಳ ಬಳಿ ಕಾಣಬಹುದು. ಇವುಗಳ ನಿರೂಪಣಾತಂತ್ರ ಗಮನಾರ್ಹ. ಇವು ನೋಡುಗರ ಮೇಲೆ ಬೀರುವ ಪ್ರಭಾವ ಅಸಾಧಾರಣವಾದುದು. ಅಯ್ಯಪ್ಪನ್ ಗ್ರಾಮರಕ್ಷಕ. ಇವನ ಮಹತ್ತ್ವ ಮತ್ತು ಶಕ್ತಿ. ಈ ಸಮೂಹಗಳಲ್ಲಿ ಕ್ರೋಡೀಕೃತ ರೂಪದಲ್ಲಿ ಎದ್ದು ಕಾಣುತ್ತದೆ.[೨]

ಕರ್ನಾಟಕದಲ್ಲಿ ಜನಪದ ಶಿಲ್ಪಗಳ ಅಧ್ಯಯನ ಬದಲಾಯಿಸಿ

ಜಾನಪದ ದೃಷ್ಟಿಯಿಂದಾಗಲಿ ಕಲಾ ಇತಿಹಾಸದ ದೃಷ್ಟಿಯಿಂದಾಗಲಿ ಹೊಸದಾಗಿ ಪ್ರಾರಂಭವಾಗಬೇಕಾಗಿದೆ. ಸದ್ಯಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಪಟ್ಟಿ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಾರಾಧನೆಗೆ ಸಂಬಂಧಿಸಿದ ಹಿತ್ತಾಳೆಯ ಮುಖವಾಡಗಳು, ಆಯಾ ಭೂತದ ದೇವತೆಗಳ ಸ್ವರೂಪ ಕಲ್ಪನೆಗೆ ತಕ್ಕಂಥ ಭಾವಗಳನ್ನು ಬಹುಮಟ್ಟಿಗೆ ನಿರೂಪಿಸುತ್ತವೆ.[೩] ಇದೇ ಜಿಲ್ಲೆಯ ಮೆಕ್ಕಕಟ್ಟೆ ಎಂಬಲ್ಲಿನ ಮರದ ವಿಗ್ರಹಗಳು ಅಸಾಧಾರಣ ಕಲಾಕೃತಿಗಳು. ಮನುಷ್ಯ ಸ್ವಭಾವದಲ್ಲಿನ ಅನೇಕ ಮುಖಗಳು, ಅನೇಕ ಬಗೆಯ ಗುಣಸ್ವಭಾವಗಳು, ಪರಿಣಾಮಕಾರಿಯಾಗಿ ಶಿಲ್ಪರೂಪವನ್ನು ಧರಿಸಿ ನಿಂತಿವೆ. ಕರ್ನಾಟಕದ ಹಲವೆಡೆ ಮಾರಮ್ಮ ಇತ್ಯಾದಿ ಜನಪದ ದೇವತೆಗಳನ್ನು ಹಿತ್ತಾಳೆಯಲ್ಲಿ ಮಾಡುವ ರೂಢಿ ಇದೆ. ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿರುವಂಥ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ದಕ್ಷಿಣ ಕರ್ನಾಟಕದಲ್ಲೂ ಕಾಣಬಹುದು. ಇವನ್ನು ಬೀರೇದೇವರು ಎಂದು ಕರೆಯುತ್ತಾರೆ. ಇವು ಸಾಮಾನ್ಯವಾಗಿ ಹಿತ್ತಾಳೆಯಲ್ಲಿ ಮಾಡಿದವು. ಉತ್ತರ ಕರ್ನಾಟಕದ ಹಲವೆಡೆ ಮಾರಿಯಮ್ಮ, ಮರಗಮ್ಮ ಮುಂತಾದ ಮರದ ವಿಗ್ರಹಗಳು ಸಿಗುತ್ತವೆ. ಮಲೆನಾಡಿನಲ್ಲಿ ಬಳಕೆಯಲ್ಲಿರುವ ಮಾರಿಕಾಂಬಾ ವಿಗ್ರಹಗಳು ಹಾಗೂ ಗಡಿ ಮಾರಿ, ಉಡುಗೋಲಜ್ಜಿ, ಹಲ್ಲುಬೀರಿ, ಮುಂತಾದ ಶಿಲ್ಪಗಳನ್ನೂ, ವೀರಗಲ್ಲು ಮಾಸ್ತಿಕಲ್ಲು ಮುಂತಾದ ಶಿಲ್ಪಗಳನ್ನೂ, ಇಲ್ಲಿ ಸ್ಮರಿಸಬಹುದು. ಶಿಲ್ಪಕಲೆಯ ಯಾವ ನಿಯಮಗಳಿಗೂ ಯಾವ ಕಟ್ಟುಪಾಡುಗಳಿಗೂ ಯಾವ ವಿಧಿನಿಷೇಧಗಳಿಗೂ ಸ್ಪಂದಿಸದ ಅಪ್ಪಟ ಜನಪದ ಸೃಜನಶೀಲ ಶಕ್ತಿ ಕರ್ನಾಟಕದಾದ್ಯಂತ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ. ಇವಲ್ಲದೆ ನಾಗರಿಕ ಸಂಪ್ರದಾಯಗಳಿಂದ ಬಂದ ಗಣೇಶ, ಗೌರಿ ಇತ್ಯಾದಿಗಳನ್ನು ಗ್ರಾಮೀಣರೇ ಮಾಡಿ ಉಪಯೋಗಿಸುವುದು ಕರ್ನಾಟಕದ ಹಲವೆಡೆಯಲ್ಲಿ ಕಂಡುಬರುತ್ತದೆ. ಇವೆಲ್ಲ ಧರ್ಮ, ಸಂಪ್ರದಾಯಗಳಿಗೆ ಸಂಬಂಧಿಸಿದ್ದಾದರೆ, ಮಕ್ಕಳ ವಿನೋದಕ್ಕಾಗಿ ಮಾಡಿದ, ಮರ ಅಥವಾ ಮಣ್ಣಿನ ಆಟಿಕೆಗಳು ಅದರಲ್ಲೂ ಬಸವ ಇತ್ಯಾದಿ ಪ್ರಾಣಿಗಳ ಬೊಂಬೆಗಳು, ಕಿಸುಕಾಲು ಬೊಂಬೆಗಳು, ಇವೂ ಬಹುಸಾಮಾನ್ಯವಾಗಿ ಕಂಡುಬರುವ ಜನಪದ ಶಿಲ್ಪಗಳು, ನವರಾತ್ರಿಯ ಕಾಲದಲ್ಲಿ ಈ ರೀತಿಯ ಅನೇಕ ಬೊಂಬೆಗಳನ್ನು ಇಟ್ಟು ಅಲಂಕರಿಸುವ ಸಂಪ್ರದಾಯ ಈ ನಾಡಿನಲ್ಲಿದೆ.

ಸಮಸ್ಯೆಗಳು ಬದಲಾಯಿಸಿ

ಪರಂಪರಾನುಗಣತೆ, ಅಲಿಖಿತತೆ, ಇತ್ಯಾದಿ ಜನಪದದ ಇತರ ರಂಗಗಳಲ್ಲಿ ಉಪಯೋಗಿಸುವ ಮಾನದಂಡಗಳು, ಕಲಾರಂಗದಲ್ಲಿ ಅರ್ಥಹೀನವಾಗುತ್ತವೆ. ಶಿಲ್ಪ ಮೂಲತಃ ವೃತ್ತಿಜನ್ಯವಾದುದರಿಂದ, ಇದರ ಸೃಷ್ಟಿಗೆ ಲಿಖಿತಶಾಸ್ತ್ರಗಳ ಉಪಯೋಗ ಅಲ್ಪ; ಇದು ಬಹುಮಟ್ಟಿಗೆ ಗುರು-ಶಿಷ್ಯ ಪರಂಪರೆಯಲ್ಲಿ ಕಲಿಕೆ ಅನುಭವದ ಸೂತ್ರದ ಮೇಲೆ ಮುಂದುವರಿಯುತ್ತದೆ. ಜನಪದ ಸಮಾಜಗಳಲ್ಲಿ ಪ್ರಚಲಿತವಾಗಿರುವ ಶಿಲ್ಪ ಜನಪದ ಶಿಲ್ಪ ಎಂಬ ವಿವರಣೆ ಸಾಧುವಾಗಿ ಕಂಡರೂ ಶಿಲ್ಪಗಳ ಆಳ ಅಧ್ಯಯನಕ್ಕೆ ತೊಡಗಿದಾಗ ಈ ವಿವರಣೆ ಅನಿರ್ದಿಷ್ಟವಾಗುತ್ತದೆ. ಜನಪದದಂಥ ತೆರೆದ ಸಮಾಜದಲ್ಲಿ ಹಲವಾರೆಡೆಗಳಿಂದ ಬಂದ ಅನುಭವ, ಜ್ಞಾನ ಮತ್ತು ವಿಧಾನಗಳು ತಮ್ಮದೆ ಆದ ಮಾರ್ಗದಲ್ಲಿ ರೂಪುಗೊಂಡು ಜನಪದದ ಸ್ವತ್ತಾಗಿ ಹೋಗುತ್ತವೆ. ಹೊರಪ್ರಪಂಚದ ಸಾಂಸ್ಕøತಿಕ ಪ್ರಭಾವಗಳ ಸೊಂಕಿಲ್ಲದೆಯೇ ಕೆಲವು ವೇಳೆ ಅವನ್ನು ಪ್ರತಿಭಟಿಸಿಯೋ ನಿಂತ ಸಂಕುಚಿತ ಪ್ರದೇಶದಲ್ಲಿ ಚಿಕ್ಕ ಸಮೂಹಗಳಲ್ಲಿ ವಾಸಿಸುವ ಆದಿವಾಸಿ ಜನಾಂಗಗಳಲ್ಲಿ ಗಾಢವಾಗಿ ಕಾಣುವ ವೃತ್ತಿ, ವಿಧಾನ, ಕಲ್ಪನೆ, ಇತ್ಯಾದಿಗಳೂ ಮೂಲತಃ ಈ ವರ್ಗಗಳನ್ನೇ ಹಿನ್ನೆಲೆಯಾಗಿ ಹೊಂದಿರುವ ಜನಪದ ವರ್ಗಗಳಲ್ಲೂ ಕಂಡು ಬರುವುದರಿಂದ, ಆದಿವಾಸಿ ಶಿಲ್ಪಗಳ ಮತ್ತು ಜನಪದ ಶಿಲ್ಪಗಳ ನಡುವಿನ ವಿಭಜನ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಲಾಗುವುದಿಲ್ಲ. ಭಾರತದ ಭಿಲ್ಲರೇ ಮೊದಲಾದ ಆದಿವಾಸಿ ಜನಾಂಗಗಳು ತಮಗೆ ಅವಶ್ಯವಾದ ಶಿಲ್ಪ ನಿರ್ಮಾಣಕ್ಕೆ ಪಕ್ಕದ ಗ್ರಾಮೀಣ ಕಲೆಗಾರರನ್ನೇ ಅವಲಂಬಿಸಿರುತ್ತಾರಾಗಿ ಇಂಥ ಸಂದರ್ಭಗಳಲ್ಲಿ ಆದ ನಿರ್ಮಾಣಗಳು ಜನಪದದ್ದೋ ಆದಿವಾಸಿಗಳದೋ ಎಂದು ಹೇಳುವುದು ಅಸಾಧ್ಯವಾಗುತ್ತದೆ. ನಾಗರಿಕ ಸಮಾಜಗಳ ಕೆಲವೊಂದು ಭಾವನೆಗಳು ಸ್ವಲ್ಪಸ್ವಲ್ಪವಾಗಿ ಜನಪದ ವರ್ಗಗಳಿಗೆ ಹರಿಯುವ ಸತತಕ್ರಿಯೆಯಿಂದಾಗಿ ಹಲವಾರು ನಾಗರಿಕ ಮೂಲದ ಶಿಲ್ಪಗಳು ಅಥವಾ ಅವುಗಳ ಬಡ ಅನುಕರಣೆಗಳು ಜನಪದ ಶಿಲ್ಪಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಇವೆಲ್ಲ ಜನಪದ ಶಿಲ್ಪದ ಸ್ಪಷ್ಟ ಸೀಮೆಯನ್ನು ನಿರ್ಧರಿಸುವಲ್ಲಿ ಹಲವು ತೊಂದರೆಗಳನ್ನು ಒಡ್ಡುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. "Essay on the Traditional Indian Folk Culture". World’s Largest Collection of Essays! Published by Experts. 12 March 2012. Retrieved 11 January 2020.
  2. "ಶಬರಿಮಲೆ ಶಾಸ್ತ: ಇಲ್ಲಿದೆ ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ". Prajavani (in ಇಂಗ್ಲಿಷ್). 9 January 2019. Retrieved 11 January 2020.
  3. "exorcism items - Yahoo Search Results Image Search results". in.images.search.yahoo.com. Retrieved 11 January 2020.