ಚಂದ್ರ (ದೇವತೆ)

ಚಂದ್ರ ಹಿಂದೂ ಧರ್ಮದಲ್ಲಿ ಒಬ್ಬ ದೇವತೆ

ಚಂದ್ರ ಹಿಂದೂ ಧರ್ಮದಲ್ಲಿ ಒಬ್ಬ ದೇವತೆ ಮತ್ತು ನವಗ್ರಹಗಳಲ್ಲಿಯೂ ಒಬ್ಬನು. ಸಮಾನಾರ್ಥಕವಾಗಿ ಚಂದ್ರನನ್ನು ಸೋಮ ಎಂದು ಸೂಚಿಸಲಾಗುತ್ತದೆ. ಇಂದು, ಅತ್ರಿಸುತ, ಸಚಿನ, ತಾರಾಧಿಪ ಮತ್ತು ನಿಶಾಕರ ಚಂದ್ರನ ಕೆಲವು ಇತರ ಹೆಸರುಗಳು.[]

ಚಂದ್ರನನ್ನು ಯುವ ಮತ್ತು ಸುಂದರ, ಎರಡು ಬಾಹುಗಳಿರುವವನು, ಮತ್ತು ಗದೆ ಹಾಗೂ ಕಮಲವನ್ನು ಹೊತ್ತಿರುವವನು ಎಂದು ವರ್ಣಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ, ಚಂದ್ರನು ಬುಧನ ತಂದೆ. ಚಂದ್ರನು ದಕ್ಷನ ೨೭ ಪುತ್ರಿಯರನ್ನು ಮದುವೆಯಾಗಿದ್ದಾನೆ, ಇವರಿಂದಲೇ ಹಿಂದೂ ಜ್ಯೋತಿಷ್ಯ ದಲ್ಲಿನ ನಕ್ಷತ್ರಗಳನ್ನು ಹೆಸರಿಸಲಾಗಿದೆ.

ಸೋಮ ಮತ್ತು ಇಂದು ಎಂದು ಕರೆಯಲ್ಪಡುವ ಚಂದ್ರನಿಂದ ಹಿಂದೂ ಪಂಚಾಂಗದಲ್ಲಿನ ಒಂದು ವಾರದ ಹೆಸರಾದ ಸೋಮವಾರ ಮತ್ತು ಇಂದುವಾಸರಮ್ (ಸಂಸ್ಕೃತ) ಹುಟ್ಟಿಕೊಂಡಿವೆ.

ಹಿಂದೂ ಪುರಾಣದಲ್ಲಿ, ಚಂದ್ರನ ಬಗ್ಗೆ ಅನೇಕ ಕಥೆಗಳಿವೆ. ಒಂದರಲ್ಲಿ, ಚಂದ್ರನು ಬೃಹಸ್ಪತಿಯ ಪತ್ನಿಯಾದ ತಾರಾಳನ್ನು ಭೇಟಿಯಾಗುತ್ತಾನೆ. ಅವರ ಮಿಲನದಿಂದ, ತಾರಾ ಗರ್ಭಿಣಿಯಾಗಿ ಬುಧನಿಗೆ ಜನ್ಮ ನೀಡಿದಳು. ಬೃಹಸ್ಪತಿಯು ನಿರಾಸೆಗೊಂಡು ಯುದ್ಧ ಘೋಷಿಸುತ್ತಾನೆ. ದೇವತೆಗಳು ಮಧ್ಯ ಪ್ರವೇಶಿಸುತ್ತಾರೆ ಮತ್ತು ತಾರಾ ಬೃಹಸ್ಪತಿ ಇದ್ದಲ್ಲಿಗೆ ಮರಳುತ್ತಾಳೆ.

ಚಂದ್ರನು ದಕ್ಷನ ಇಪ್ಪತ್ತೇಳು ಪುತ್ರಿಯರನ್ನು ವಿವಾಹವಾಗುತ್ತಾನೆ. ಇತರ ಎಲ್ಲ ಪತ್ನಿಯರಿಗಿಂತ ಚಂದ್ರನು ಶತಭಿಶ, ರೋಹಿಣಿ ಮತ್ತು ಆಶ್ಲೇಷಾರಿಗೆ ಪಕ್ಷಪಾತ ತೊರಿಸುತ್ತಾನೆ. ಇತರ ಪತ್ನಿಯರು ನಿರಾಸೆಗೊಂಡು ದಕ್ಷನಿಗೆ ದೂರು ನೀಡುತ್ತಾರೆ. ದಕ್ಷನು ಚಂದ್ರನನ್ನು ಶಪಿಸುತ್ತಾನೆ. ಚಂದ್ರನು ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡಾಗ ಶಾಪ ವಿಮೋಚನೆಯಾಗುತ್ತದೆ. ಶಿವನು ಚಂದ್ರನನ್ನು ಶಾಪದಿಂದ ಭಾಗಶಃ ಬಿಡುಗಡೆ ಮಾಡುತ್ತಾನೆ.

ಇನ್ನೊಂದು ಪುರಾಣ ಕಥೆಯ ಪ್ರಕಾರ, ಒಂದು ಹುಣ್ಣಿಮೆ ರಾತ್ರಿ ಕುಬೇರ ಕೊಟ್ಟ ಭಾರಿ ಸವಿಯೂಟ ಮುಗಿಸಿಕೊಂಡು ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಮನೆಗೆ ಮರಳುತ್ತಿದ್ದನು. ವಾಪಾಸು ಪ್ರಯಾಣದಲ್ಲಿ, ಅವರ ದಾರಿಗೆ ಒಂದು ಹಾವು ಅಡ್ಡಬಂದು, ಅವನ ವಾಹನವಾದ ಇಲಿ ಹೆದರಿ ಓಡಿ ಹೋಯಿತು. ಆಗ ಗಣೇಶನು ಕೆಳಗೆ ಬಿದ್ದುಬಿಟ್ಟನು. ಹೊಟ್ಟೆಬಿರಿದ ಗಣೇಶನ ಹೊಟ್ಟೆ ಒಡೆದುಹೋಯಿತು ಮತ್ತು ಅವನು ತಿಂದಿದ್ದ ಮೋದಕಗಳು ಆಚೆ ಚೆಲ್ಲಿಬಿಟ್ಟವು. ಇದನ್ನು ನೋಡಿ, ಚಂದ್ರನು ನಕ್ಕುಬಿಟ್ಟ. ಗಣೇಶನಿಗೆ ಸಿಟ್ಟುಬಂದು ತನ್ನ ಒಂದು ದಂತವನ್ನು ಮುರಿದು ಚಂದ್ರನತ್ತ ಎಸೆದನು. ಇದರಿಂದ ಚಂದ್ರನಿಗೆ ಪೆಟ್ಟಾಯಿತು. ಜೊತೆಗೆ ಚಂದ್ರನಿಗೆ ಇನ್ಯಾವತ್ತೂ ಪೂರ್ಣವಾಗಿರಲಾರೆ ಎಂದು ಶಾಪಕೊಟ್ಟನು. ಹಾಗಾಗಿ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷಿದ್ಧ. ಈ ಪುರಾಣಕಥೆ ಚಂದ್ರನ ವರ್ಧಿಸುವಿಕೆ ಮತ್ತು ಕ್ಷೀಣಿಸುವಿಕೆಯನ್ನು ಹಾಗೂ ಭೂಮಿಯಿಂದಲೂ ಕಾಣುವ ಚಂದ್ರನ ಮೇಲಿನ ಒಂದು ದೊಡ್ಡ ಕುಳಿಯನ್ನು ವಿವರಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Roshen Dalal (2010). Hinduism: An Alphabetical Guide. Penguin Books India. p. 394. ISBN 978-0-14-341421-6.