ಚಂದ್ರದೇವ
ಆಳ್ವಿಕೆ 1089-1103. ಗಾಹದ್ವಾಲ ಮನೆತನದ ಮೊದಲ ಅರಸ. 1089-90ರ ಇವನ ಮೊದಲ ಶಾಸನದಲ್ಲಿ ತಿಳಿಸಿರುವ ಪರಮಭಟ್ಟಾರಕ, ಮಹಾರಾಜಾಧಿರಾಜ, ಪರಮೇಶ್ವರ ಇತ್ಯಾದಿ ಬಿರುದುಗಳಿಂದ ಇವನು ಸ್ವತಂತ್ರ ಅರಸನಾಗಿದ್ದನೆಂಬುದು ಸ್ಪಷ್ಟಪಡುತ್ತದೆ. ಕಳಚುರಿ ಅರಸ ಲಕ್ಷ್ಮೀಕರ್ಣನ ಪರಾಜಯ ಮತ್ತು ಪರಮಾರ ಭೋಜನ ಮರಣಾನಂತರ ಮುಸ್ಲಿಮರ ಆಕ್ರಮಣಗಳಿಂದಾಗಿ ಉತ್ತರ ಭಾರತದ ಪರಿಸ್ಥಿತಿ ಗಂಭೀರವಾಗಿದ್ದ ಸಮಯದಲ್ಲಿ ಇವನು ಅಧಿಕಾರಕ್ಕೆ ಬಂದಂತೆ ತೋರುತ್ತದೆ.
ಅಧಿಕಾರಕ್ಕೆ ಏರಿಕೆ
ಬದಲಾಯಿಸಿಚಂದ್ರದೇವ ಶತ್ರುಮಂಡಲವನ್ನು ಜಯಿಸಿದವನೆಂದು ಗಾಹದ್ವಾಲ ಶಾಸನಗಳು ತಿಳಿಸುತ್ತವೆ. 1093ರ ಶಾಸನವೊಂದು ಇವನು ನರಪತಿ, ಗಜಪತಿ, ಗಿರಿಪತಿ[೧] ಮತ್ತು ತ್ರಿಶಂಕುಪತಿಗಳನ್ನು ಜಯಿಸಿದನೆಂದು ತಿಳಿಸುತ್ತದೆ. ಇವು ವಿವಿಧ ಸಾಮಂತವರ್ಗಗಳ ಹೆಸರುಗಳಾಗಿರಬೇಕೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನರಪತಿ ಮತ್ತು ಗಜಪತಿ ಎಂಬುದು ಕಳಚುರಿ ಅರಸರು ಧರಿಸುತ್ತಿದ್ದ ಬಿರುದುಗಳೂ ಆಗಿದ್ದುದರಿಂದ ಪ್ರಾಯಶಃ ಚಂದ್ರದೇವ ಹಾಗೂ ಕಳಚುರಿ ಯಶಃಕರ್ಣರ ನಡುವಣ ತಿಕ್ಕಾಟವನ್ನು ಈ ಶಾಸನಗಳು ಸೂಚಿಸುತ್ತವೆಂದು ಹೇಳಬಹುದು. ಲಕ್ಷ್ಮೀಕರ್ಣನ ಅಧೀನದಲ್ಲಿದ್ದ ಅಂತರ್ವೇದಿ ಮತ್ತು ವಾರಾಣಸಿ ಪ್ರದೇಶಗಳು ಸು. 1090ರ ಹೊತ್ತಿಗೆ ಚಂದ್ರದೇವನ ವಶವಾಗಿದ್ದವು[೨] . ಗೋವಿಂದಚಂದ್ರನ ಪತ್ನಿ ಕುಮಾರದೇವಿಯ ಸಾರನಾಥ ಶಾಸನ ಉಲ್ಲೇಖಿಸುವ, ಚಂದ್ರದೇವನಿಂದ ಯಮುನಾತೀರದಲ್ಲಿ ಪರಾಜಿತರಾದ ಅರಸರಲ್ಲಿ ಕಳಚುರಿ ಯಶಃಕರ್ಣ, ಚಂದ್ರಾತ್ರೇಯ ವಂಶದ ಸಲ್ಲಕ್ಷಣಸಿಂಹರೂ ಸೇರಿರಬೇಕು. ಆದರೆ, ಚಂದ್ರದೇವನ ಮುಖ್ಯ ಸಾಧನೆ ಎಂದರೆ ಹರ್ಷ ಮತ್ತು ಪ್ರತೀಹಾರರ ರಾಜಧಾನಿಯಾಗಿದ್ದ ಕಾನ್ಯಕುಬ್ಜ ಅಥವಾ ಮಹೋದಯದ ಮೇಲಿನ ದಿಗ್ವಿಜಯ. ಕಾನ್ಯಕುಬ್ಜವೂ ಸ್ವಲ್ಪಕಾಲ ಚಂದ್ರದೇವನ ರಾಜಧಾನಿಯಾಗಿದ್ದಂತೆ ತೋರುತ್ತದೆ. ಇವನ ರಾಜ್ಯ ದಕ್ಷಿಣದಲ್ಲಿ ಯಮುನಾತೀರದವರೆಗೂ ಪಶ್ಚಿಮದಲ್ಲಿ ಕಾನ್ಯಕುಬ್ಜ ಮತ್ತು ಸುತ್ತಮುತ್ತಲಿನ ಪ್ರದೇಶದವರೆಗೂ ಉತ್ತರದಲ್ಲಿ ಪಾಂಚಾಲ ಮತ್ತು ಉತ್ತರ ಕೋಸಲದ (ಈಗಿನ ಔಧ್-ಗೋರಖಪುರ ಪ್ರದೇಶ) ವರೆಗೂ ಪುರ್ವದಲ್ಲಿ ಬಹುಕಾಲದವರೆಗೆ ಅವನ ರಾಜಧಾನಿಯಾಗಿ ಮೆರೆದ ವಾರಾಣಸಿಯವರೆಗೂ ವ್ಯಾಪಿಸಿತ್ತು. ಈತ ಪುರ್ವದಲ್ಲಿ ರಾಜ್ಯ ವಿಸ್ತರಿಸಲು ಯತ್ನಿಸಿದನಾದರೂ ಈ ಪ್ರಯತ್ನದಲ್ಲಿ ಖಚಿತವಾದ ವಿಜಯವೇನನ್ನೂ ಸಾಧಿಸಲಿಲ್ಲ[೩]. ವಾರಾಣಸಿಯಿಂದ ದೆಹಲಿಯವರೆಗಿನ ಪ್ರದೇಶವನ್ನು ಪಡೆಯಲು ಇವನು ಅನೇಕ ಹೋರಾಟಗಳನ್ನು ನಡೆಸಬೇಕಾಯಿತು.
ಚಂದ್ರದೇವ ತನ್ನ ಪ್ರತಾಪದಿಂದ ಪ್ರಜೆಗಳ ತೊಂದರೆಗಳನ್ನು ಪರಿಹರಿಸುತ್ತಿದ್ದವನೆಂದೂ ಉದಾರ ಗುಣವುಳ್ಳವನೆಂದೂ ಗಾಹದ್ವಾಲ ಶಾಸನಗಳು ವರ್ಣಿಸುತ್ತವೆ. ಇವನು ತುಲಾಪುರುಷ ಮಹಾದಾನ ಮುಂತಾದ ಧರ್ಮಕಾರ್ಯಗಳನ್ನು ಮಾಡಿದ. ಕಾಶಿ, ಕುಶಿಕ (ಕಾನ್ಯಕುಬ್ಜ), ಉತ್ತರ ಕೋಸಲ (ಅಯೋಧ್ಯಾ), ಇಂದ್ರಸ್ಥಾನೀಯಕ (ಇಂದ್ರಪ್ರಸ್ಥ) ಮುಂತಾದ ಪುಣ್ಯಸ್ಥಳಗಳನ್ನು ಈತ ರಕ್ಷಿಸಿದ. ಚಂದ್ರದೇವ ಸಕಲ ಶಾಸ್ತ್ರಪಾರಂಗತನಾಗಿದ್ದ, ವೇದಾಧ್ಯಯನಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಕಾಶಿಯಲ್ಲಿರುವ ಚಂದ್ರಮಾಧವ ಮತ್ತು ಆದಿಕೇಶವ ದೇವಾಲಯಗಳನ್ನು ಇವನು ಕಟ್ಟಿಸಿದಂತೆ ತೋರುತ್ತದೆ.
ಉಲ್ಲೇಖನಗಳು
ಬದಲಾಯಿಸಿ- ↑ Roma Niyogi 1959, p. 47.
- ↑ Roma Niyogi 1959, p. 45.
- ↑ Roma Niyogi 1959, p. 43.