ಗೌತಮ ಕ್ಷೇತ್ರ

ಭಾರತ ದೇಶದ ಗ್ರಾಮಗಳು

ಬೆಟ್ಟದಾಸನಪುರ ಬೆಂಗಳೂರು ದಕ್ಷಿಣಜಿಲ್ಲೆಯಲ್ಲಿರುವ ಬೆಂಗಳೂರು ದಕ್ಷಿಣ ತಾಲೂಕಿನ ಒಂದು ಇತಿಹಾಸ ಪ್ರಸಿದ್ಧ ಸ್ಠಳ. ಇದು ಗೌತಮ ಕ್ಷೇತ್ರವೆಂದು ಗುರುತಿಸಲ್ಪಟ್ಟಿದೆ. ಗೌತಮ ಕ್ಷೇತ್ರವು ಇತಿಹಾಸದ ಪುಟಗಳಲ್ಲಿ ಮರೆಯಾಗಿರಬಹುದು, ಆದರೆ ಕನ್ನಡದ ಅರಸು ಮನೆತನವಾದ ಗಂಗರ ಆಳ್ವಿಕೆಯಲ್ಲಿ ಕಟ್ಟಿದ ಕೋಟೆ ಬೆಂಗಳೂರಿನ ಪ್ರಸಿದ್ದ ಸ್ಥಳಗಳಲ್ಲಿ ಒಂದಾಗಿದೆ ಹಾಗು ಅಂದಿನ ಗೌತಮ ಕ್ಷೇತ್ರವೇ ಇಂದಿನ ಬೆಟ್ಟದಾಸನಪುರ ಎಂದು ಕರೆಯಲ್ಪಟ್ಟಿದೆ. ಇಲ್ಲಿನ ಕೋಟೆಯು ವಿಶಾಲವಾದ ಕಲ್ಲಿನ ಬಂಡೆಯ ಮೇಲೆ ಇದ್ದು ಕೋಟೆಯ ಒಳಗೆ ಎರಡು ಪುರಾತನ ದೇವಸ್ಥಾನಗಳಿವೆ. ಮೊದಲನೆಯದು ಶ್ರೀ ಭೂದೇವಿ - ಶ್ರೀ ದೇವಿ ಸಮೇತ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ ಮತ್ತು ಎರಡನೇಯದು ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನವಿದ್ದು ಇದು ದೇಶದಲ್ಲೇ ಎರಡನೇಯ ಹರಿಹರರ ಸಂಗಮ ಕ್ಷೇತ್ರವೆಂದೇ ಪ್ರತೀತಿ (ಮೊದಲನೇಯದು ಕಾಶಿ ಕ್ಷೇತ್ರ).

ಬೆಟ್ಟದಾಸನಪುರ
ಹಳ್ಳಿ
Bettadasanapura is in Bangalore district
Bettadasanapura is in Bangalore district
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು
TalukasBengaluru south
Government
 • BodyVillage Panchayat
Languages
 • Officialಕನ್ನಡ
Time zoneUTC+5:30 (IST)
Nearest cityBangalore
Civic agencyVillage Panchayat

ಇತಿಹಾಸ

ಬದಲಾಯಿಸಿ
  • ಈ ಬೆಟ್ಟದಲ್ಲಿ ಸುಮಾರು ವರ್ಷಗಳ ಕೆಳಗೆ ದಾಸಪ್ಪನಾಯಕನೆಂಬ ಪಾಳೆಗಾರ ಆಳುತ್ತಿದ್ದುದ್ದರಿಂದ ಈ ಊರಿಗೆ ಬೆಟ್ಟದಾಸನಪುರ, ಅಂದರೆ ಬೆಟ್ಟ +ದಾಸನ + ಪುರ (ಊರು) ಎಂಬ ಹೆಸರು ಬಂದಿರುವುದುಂಟು. ಗೌತಮ ಕ್ಷೇತ್ರವೆಂದರೆ ರಾಮಾಯಣ ಮಹಾಭಾರತದ ಕಾಲದಲ್ಲಿ ಕರ್ನಾಟಕವನ್ನು ದಂಡಕಾರಣ್ಯ ಎಂದು ಕರೆದಿದ್ದಾರೆ, ಅಂದಿನ ಕಾಲದಲ್ಲಿ ಇದ್ದಂತಹ ಗೌತಮಿ ಎಂಬ ಮಹರ್ಷಿಯು ದಂಡಕಾರಣ್ಯದ ಕೆಲವು ಪ್ರದೇಶಗಳಲ್ಲಿ ಅವರು ಧ್ಯಾನನಿರತರಾಗುತ್ತಿದ್ದರು ಗೌತಮಿ ಮಹರ್ಷಿ ಧ್ಯಾನ ಮಾಡಿದ ಸ್ಥಳಗಳಲ್ಲಿ ಇಂದಿನ ಬೆಟ್ಟದಾಸನಪುರವೂ ಒಂದಾಗಿದ್ದುದರಿಂದ ಗೌತಮ ಕ್ಷೇತ್ರ ಎಂಬ ಹೆಸರು ಬಂದಿರಬಹುದು. ಅದು ಅಲ್ಲದೆ ಈ ಊರಿಗೆ ಹಲವಾರು ಹೆಸರುಗಳಿದ್ದು ಇಲ್ಲಿ ನೆಲೆಸಿರುವಂತಹ ದೇವರುಗಳು ಸುತ್ತಮುತ್ತಲಿನ ಮೂವತ್ತಮೂರು ಹಳ್ಳಿಗಳಿಗೂ ಮನೆದೇವರಾಗಿರುವುದೇ ಒಂದು ವಿಶೇಷ. ಈ ಕೋಟೆಯ ಒಳಗೆ ಒಂದು ಪ್ರಮುಖ ಕಲ್ಯಾಣಿ ಇದೆ.ವಿಶೇಷವೆಂದರೆ ನಮ್ಮ ಹಿಂದಿನ ಮೂರು ತಲೆಮಾರಿನವರು (ಹಿರಿಯರು ) ಹೇಳಿರುವಂತೆ ಈ ಕಲ್ಯಾಣಿಯಲ್ಲಿ ನೀರು ಸದಾಕಾಲ ಇರುವಂತೆಯೂ ಮತ್ತು ಯಾವುದೇ ಸಂದರ್ಭಗಳಲ್ಲಿ ಖಾಲಿಯಾಗದೆ ಇದ್ದುದ್ದೆಂದು ಹೇಳೀರುತ್ತಾರೆ.

ಕೋಟೆಯ ಇತಿವೃತ್ತ

ಬದಲಾಯಿಸಿ
  • ಈ ಕೋಟೆಯು ಗಂಗರ ರಾಜರುಗಳು ಕಟ್ಟಿದ್ದರೆಂದು ತಿಳಿದು ಬಂದಿದೆ. ಬೆಟ್ಟವು ಇಪ್ಪತ್ತೆರೆಡು ಎಕರೆ ಇಪ್ಪತ್ತೆರೆಡು ಗುಂಟೆ ವಿಸ್ತೀರ್ಣ ಹೊಂದಿದ್ದು ಕೋಟೆಯನ್ನು ಬೆಟ್ಟದ ಮೇಲೆ ಕಟ್ಟಲಾಗಿದೆ. ಕೋಟೆಯು ಚೌಕಕಾರವಾಗಿದ್ದು ಸುತ್ತಲೂ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಕೋಟೆಗೆ ಮುಖ್ಯದ್ವಾರ ವು ಪೂರ್ವದ ಈಶಾನ್ಯಕ್ಕಿದ್ದು ಹಾದು ಹೋಗುವ ಬಾಗಿಲು ಸಹ ಕಲ್ಲಿನಿಂದ ನಿರ್ಮಿತವಾಗಿದೆ. ಈ ಕೋಟೆಗೆ ದಕ್ಷಿಣ ಗೋಡೆಗೆ ಹೊಂದಿ ಕೊಂಡಿರುವಂತೆ ಮೂರು ಕೊತ್ತಲುಗಳು ಮತ್ತು ಉತ್ತರದ ಗೋಡೆಗೆ ಹೊಂದಿಕೊಂಡಿರುವಂತೆ ಮೂರು ಕೊತ್ತಲುಗಳು ಇವೆ. ಈ ಕೊತ್ತಲುಗಳನ್ನು ಶತ್ರು ಗಳಿಂದ ಕೋಟೆಯನ್ನು ರಕ್ಷಿಸಿಕೊಳ್ಳಲು ಕಟ್ಟಿಕೊಂಡಿರಬಹುದು. ಉತ್ತರದ ಗೋಡೆಯ ವಾಯುವ್ಯ ದಿಕ್ಕಿಗೆ ಒಂದು ಸಣ್ಣ ಕಿರಿದಾದ ಬಾಗಿಲೂ ಸಹ ಇದೆ. ಇಲ್ಲಿಂದ ಕೋಟೆಯ ಹೊರಗೆ ಹೋಗಲು ಈ ದ್ವಾರವನ್ನು ಮಾಡಿಕೊಂಡಿರಬಹುದು.
  • ಕೋಟೆಯ ಮಧ್ಯಭಾಗದಲ್ಲಿ ಒಂದು ಗೋಡೆಯಿದ್ದು ಇದಕ್ಕೂ ಒಂದು ಒಳ ಹೋಗುವ ದ್ವಾರವಿದೆ. ಈ ಕೋಟೆಯ ಒಳಗೆ ಮೇಲೆ ಹೇಳಿರುವ ದೇವಸ್ಥಾನಗಳು ನಿರ್ಮಿಸಲ್ಪಟ್ಟಿರುತ್ತವೆ. ಪೂರ್ವಕ್ಕೆ ಮುಖ್ಯವಾಗಿ ಬಲಭಾಗಕ್ಕೆ ಹರಿ ಮತ್ತು ಎಡಭಾಗಕ್ಕೆ ಹರನ ದೇವಸ್ಥಾನಗಳಿವೆ. ಈ ಎರಡು ದೇವಸ್ಥಾನಗಳನ್ನು ಹೊರಗಡೆಯಿಂದ ಪ್ರದಕ್ಷಿಣೆ ಮಾಡಬಹುದಾಗಿದೆ. ಹರಿಯ ದೇವಾಲಯದ ಒಳಗೆ ವಿಶಾಲವಾದ ಎರಡು ಪ್ರಾಂಗಣಗಳಿದ್ದು ಪ್ರಾಂಗಣಗದ ಬಲಕ್ಕೆ ನವಗ್ರಹಗಳ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದೆ. ಎರಡನೇಯ ಪ್ರಾಂಗಣದ ಮುಂದೆ ಮುಖ್ಯ ಗರ್ಭಗುಡಿಗೆ ಹೊಂದಿ ಕೊಂಡಂತೆ ಎಡಕ್ಕೆ ಬಲಕ್ಕೆಇನ್ನೆರಡು ಗರ್ಭಗುಡಿಗಳು ಇವೆ. ತಿಮ್ಮರಾಯಸ್ವಾಮಿಯನ್ನು ಮುಖ್ಯ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲಾಗಿದ್ದು ಬಲಕ್ಕೆ ಆಂಜನೇಯಸ್ವಾಮಿಯು ಮತ್ತು ಎಡಕ್ಕೆ ಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಟಾಪಿಸಿರುತ್ತಾರೆ.
  • ಒಳ ಪ್ರಾಂಗಣದಲ್ಲಿಯೇ ಗರ್ಭಗುಡಿಗಳನ್ನು ಪ್ರದಕ್ಷಿಣೆ ಮಾಡಬಹುದಾಗಿದೆ. ದೇವಾಲಯದ ಮುಂಬಾಗದಲ್ಲಿ ಗರುಡ ವೀರಣ್ಣನ ಸುಂದರ ಕೆತ್ತನೆಯ ಮೂರ್ತಿ ಇದ್ದು ಅದರ ಹಿಂದೆ ಉದ್ದನೆಯ ಧ್ವಜಸ್ಥಂಭವಿದೆ. ನಂತರ ಬಲಿಪೀಠವಿದ್ದು ಅನಂತರ ಗರುಡಸ್ಥಂಭ ಇರುತ್ತದೆ. ಶ್ರೀ ಕಾಶಿ ವಿಶ್ವೇಶ್ವ ರ ಸ್ವಾಮಿ ದೇವಸ್ಥಾನದಲ್ಲಿ ವಿಶಾಲವಾದ ಪ್ರಾಂಗಣವಿದ್ದು ಪ್ರಾಂಗಣದ ಮುಂದೆ ಇಲ್ಲಿಯು ಕೂಡ ಮೂರು ಗರ್ಭ ಗುಡಿಗಳಿರುತ್ತವೆ. ಮಧ್ಯದಲ್ಲಿ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಗಿದ್ದು, ಬಲಕ್ಕೆ ಗಣಪತಿಯನ್ನೂ ಮತ್ತು ಎಡಕ್ಕೆ ಶ್ರೀ ವಿಶಾಲಾಕ್ಷಿಯನ್ನು ಪ್ರತಿಷ್ಟಾಪಿಸಲಾಗಿದೆ. ವಿಶ್ವೇಶ್ವರನ ಮುಂದೆ ಮಹಾನಂದಿಯನ್ನು ಪ್ರತಿಷ್ಟಾಪಿಸಲಾಗಿದ್ದೂ, ಈ ನಂದಿಯ ಮೇಲೆ ಅಂದರೆ ಮೇಲ್ಛಾವಣಿಯ ಕೆಳಗಡೆ ಸುಂದರವಾದ ಕೆತ್ತನೆಯಿಂದ ಕೂಡಿದ ನಾಗ ಸರ್ಪವಿದೆ.
  • ದೇವಾಲಯದ ಮುಂದೆ ನಂದಿಪೀಠವಿದ್ದು ನಂತರ ಧ್ವಜಸ್ಥಂಭವಿದೆ. ಹರಿಯ ದೇವಾಲಯದಲ್ಲಿ ದ್ವಾರಪಾಲಕರಾಗಿ ಜಯ -ವಿಜಯರ ಮೂರ್ತಿಗಳಿದ್ದರೆ, ಹರನ ದೇವಾಲಯದಲ್ಲಿ ಗಂಗೆ ಮತ್ತು ಬೃಂಗಿಯರ ಮನಮೋಹಕವಾಗಿ ಕೆತ್ತಿರುವ ಮೂರ್ತಿಗಳಿವೆ. ಈ ಮೇಲಿನ ಎರಡು ದೇವಾಲಯ ಗಳ ಮುಂದಿನ ಬಯಲಿನಲ್ಲಿ ಬೃಹದಾಕಾರವಾಗಿ ಬೆಳೆದ ಅರಳಿ ಮರವಿದ್ದು ಆ ಮರದ ಸುತ್ತಲು ಕಟ್ಟೆಯನ್ನು ನಿರ್ಮಿಸಿ ಕಟ್ಟೆಯ ಮೇಲೆ ನಾಗರ ಕಲ್ಲುಗಳನ್ನು ಪ್ರತಿಷ್ಟಾಪಿಸಲಾಗಿದೆ. ಈ ಅರಳಿ ಮರದಲ್ಲಿ ಆಲದಮರದ ಗಿಡವೊಂದು ಬೆಳೆದಿರುವುದು ಸೃಷ್ಟಿಕರ್ತನ ಕೈಚಳಕವೇ ಸರಿ. ಕೋಟೆಯ ಮಧ್ಯ ಗೋಡೆಯ ಪಕ್ಕದಲ್ಲಿ ವಿಶ್ವೇಶ್ವರ ಸ್ವಾಮಿಯ ನೇರಕ್ಕೆ ಬಿಲ್ವಪತ್ರೆಯ ಮರವಿದ್ದು, ಅರಳೀಕಟ್ಟೆಯ ಉತ್ತರಕ್ಕೆ ಕಲ್ಯಾಣಿಯು ಇರುತ್ತದೆ. ಈ ಕಲ್ಯ್ಯಾಣಿಯು ದಕ್ಷಿಣದ ಕೋಟೆಯ ಗೋಡೆಗೆ ಹೊಂದಿಕೊಂಡಿದ್ದು ಕಲ್ಯಾಣಿಯ ದಕ್ಷಿಣಕ್ಕೆ ಮೆಟ್ಟಿಲುಗಳಿರುತ್ತವೆ.
  • ಪಶ್ಚಿಮಕ್ಕೆ ಬಂಡೆಯ ಇಳಿಜಾರು ಇದ್ದು ಪೂರ್ವಕ್ಕೆ ಚಿಕ್ಕದಾದ ಮೆಟ್ಟಿಲುಗಳಿರುತ್ತವೆ. ಒಮ್ಮೆ ಕಲ್ಯಾಣಿಯಲ್ಲಿ ಹೂಳು ತೆಗೆಯುವ ಕಾರ್ಯಕ್ರಮವಿತ್ತು. ನೀರನ್ನು ಖಾಲಿ ಮಾಡುತ್ತಾ ಹೋದಂತೆ ಕಲ್ಯಾಣಿಯ ಒಳಗೆ ಮತ್ತೊಂದು ಕಲ್ಯಾಣಿ ಇರುವುದು ಗೋಚರಿಸಿತು. ಇನ್ನೇನು ಹೂಳು ತೆಗೆಯ ಬೇಕು ಎನ್ನುವಷ್ಟರಲ್ಲಿ ಮತ್ತೆ ನೀರು ಹೆಚ್ಚಾಯಿತು. ಹಾಗಾಗಿ ಕಲ್ಯಾಣಿಯಲ್ಲಿ ನೀರು ಖಾಲಿಯಾಗಿರುವುದನ್ನು ಈವರೆಗೆ ಯಾರು ಕಾಣಲಿಲ್ಲ. ಕೋಟೆಯ ಹೊರಗೆ ದಕ್ಷಿಣಕ್ಕೆ ಮತ್ತು ಉತ್ತರಕ್ಕೆ ಎರಡೂ ಕಡೆಯು ಕೋಟೆಯ ವಿನ್ಯಾಸದ ನೀಲನಕ್ಷೆ ಇದ್ದು, ಈ ವಿನ್ಯಾಸದಲ್ಲಿ ದೇವಸ್ಥಾನವು ಕೇಂದ್ರ ದಲ್ಲಿದ್ದೂ ಸುತ್ತಲೂ ಏಳು ಗೋಡೆಗಳನ್ನುನಿರ್ಮಿಸುವಂತಹ ನಕ್ಷೆಯಾಗಿದ್ದು, ಈ ನಕ್ಷೆಯಲ್ಲಿ ಒಳ ಹೋಗಲು ಮಾತ್ರ ದ್ವಾರವಿದ್ದು ಹೊರಬರಲು ದ್ವಾರವಿರುವುದಿಲ್ಲ. ಈ ಒಂದು ನಕ್ಷೆಗೆ ಬೆಟ್ಟದ ಮೇಲಿನ ಸ್ಥಳವು ಚಿಕ್ಕದಾಗಿರಬಹುದು ಹಾಗಾಗಿ ನಕ್ಷೆ ನಕ್ಷೆಯಾಗಿಯೇ ಉಳಿದುಕೊಂಡಿದೆ.

ಗಂಗರ ಆಳ್ವಿಕೆಯ ಒಂದು ಕಿರು ಪರಿಚಯ

ಬದಲಾಯಿಸಿ
  • ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ, ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದವರು, ಗಂಗರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದಲ್ಲಿ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ಪ್ರಾರಂಬಿಸಿದನು.
  • ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಡಿಸಿಕೊಂಡಿದ್ದನು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗವಾಗಿತ್ತು. ಗಂಗ ನಾಡಿನ ತಿರುಳು ಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು. ಇದು ೯೬೦೦೦ ಗ್ರಾಮಗಳ ಘಟಕ ಎಂದು ಶಾಸನಗಳಲ್ಲಿ ಗಂಗವಾಡಿ ತೊಂಭತ್ತಾರು ಸಾಸಿರ ಎಂದೇ ಉಲ್ಲೇಖವಿದೆ. ಗಂಗವಾಡಿಯ ನಾಗರಿಕರೆ ಗಂಗವಾಡಿಕಾರರು, ಈ ಹೆಸರು ಇಂದಿಗೂ ಗಂಗಡಿಕಾರ ಎಂದಾಗಿ ಉಳಿದಿಕೊಂಡು ಬಂದಿದೆ.

ಸ್ಥಳದ ವಿಳಾಸ

ಬದಲಾಯಿಸಿ
  • ಬೆಟ್ಟದಾಸನಪುರವು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ( ಮೆಜೆಸ್ಟಿಕ್)ದಿಂದ ಎಲೆಕ್ಟ್ರಾನಿಕ್ ಸಿಟಿ ನಂತರ ಕೆಂಗೇರಿ ಮಾರ್ಗದಲ್ಲಿ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇರುವಂತಹ ಒಂದು ಊರು.
  • ಪಶ್ಚಿಮದ ಎಡಭಾಗದಲ್ಲಿ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿಯ ದೇವಸ್ಥಾನವಿರುತ್ತದೆ.

ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು

ಬದಲಾಯಿಸಿ
  • ಈ ಊರಿನಲ್ಲಿ ಅನಾದಿ ಕಾಲದಿಂದಲೂ ಜಾತ್ರೆಗಳು ಬಹಳ ಮನಮೋಹಕವಾಗಿ ನಡೆದುಕೊಂಡು ಬಂದಿದ್ದು, ಚೈತ್ರ ಮಾಸದ ಮೊದಲ ವಾರ ಅಂದರೆ, ಯುಗಾದಿ ಹಬ್ಬದ ನಂತರ ಮೂರನೇಯ ದಿನದಿಂದ ಆರಂಭಗೊಂಡು, ಈ ಜಾತ್ರೆಯು ಮೂರು ದಿನಗಳ ಕಾಲ ಎಲ್ಲಾ ಧಾರ್ಮಿಕ ವರ್ಗದವರಿಂದಲೂ ಆಚರಿಸಲ್ಪಡುವುದೇ ಒಂದು ವಿಶೇಷ.
  • ಈ ಒಂದು ಉತ್ಸವಕ್ಕೆ ಊರಿನ ಮುಸ್ಲಿಂ ಹಾಗು ಕ್ರೈಸ್ತ ಬಾಂಧವರಿಂದಲೂ ಪಲ್ಲಕ್ಕಿ ಹಾಗು ಪೂಜಾ ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದು, ಅಷ್ಟೇ ಅಲ್ಲದೆ ಪಕ್ಕದ ಗ್ರಾಮಗಳಿಂದಲೂ ಸಹ ಜಾತ್ರೆಗೆ ಪಲ್ಲಕ್ಕಿಗಳು ಬರುತ್ತವೆ. ಈ ದಿನಗಳಲ್ಲಿ ಊರಿನ ಸಮಸ್ತ ದೇವತೆಗಳಿಗೂ ಬಹಳ ವಿಜ್ರಂಭಣೆಯಿಂದ ಪೂಜಾ ವಿಧಾನಗಳಿಂದ ಆರತಿಗಳನ್ನು ಬೆಳಗುತ್ತಾರೆ.

ಶ್ರಾವಣ ಮಾಸ

ಬದಲಾಯಿಸಿ
  • ಶ್ರಾವಣ ಮಾಸವು ಹಿಂದು ಸಂಪ್ರದಾಯದಲ್ಲಿ ಬಹಳ ಮಹತ್ವ ಪಡೆದಿರುವಂತಹ ತಿಂಗಳು ಎಂದರೆ ತಪ್ಪೇನಿಲ್ಲ. ಯಾಕೆಂದರೆ ಈ ತಿಂಗಳಲ್ಲಿ ಇಷ್ಟ ದೇವರುಗಳಿಗೆ ಸಂಪ್ರದಾಯಸ್ಥರ ಪ್ರತೀ ಕುಟುಂಬದಲ್ಲೂ ಉಪವಾಸ ವ್ರತ ನಿಷ್ಟೆ ನಿಯಮಗಳಿಂದ ಪೂಜೆ ಸಲ್ಲಿಸುತ್ತಾರೆ. ಪ್ರತೀ ದೇವಾಲಯ ಗಳಲ್ಲಿಯೂ ಭಜನೆ ಸಂಗೀತವನ್ನು ಮಾಡಿ ದೇವರ ಕೃಪೆಯನ್ನು ಪಡೆಯುತ್ತಾರೆ. ಹಾಗೆಯೇ ಇಲ್ಲಿಯೂ ಸಹ ಶ್ರಾವಣ ಮಾಸದ ಮೂರನೇಯ ಶನಿವಾರದಂದು, ದೇವರುಗಳನ್ನು ಊರಿನ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ.
  • ದೇವಾಲಯಕ್ಕೆ ಸೇರಿದ ಮೂವತ್ತ ಮೂರು ಹಳ್ಳಿ ಗಳಿಂದಲೂ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಮಾಡಿದಂತಹ ಅಡಿಗೆಗಳನ್ನು ತೆಗೆದುಕೊಂಡು ಬಂದು, ಕೋಟೆಯ ದೇವಸ್ಥಾನದ ಮುಂದೆ ರಾಶಿ ಮಾಡಿ, ಸಕಲ ಶಾಸ್ತ್ರಗಳಿಂದ ದೇವರುಗಳಿಗೆ ಪೂಜೆ ಸಲ್ಲಿಸಿ, ನಂತರ ಅನ್ನದ ರಾಶಿಗೂ ಪೂಜೆ ಸಲ್ಲಿಸಿ, ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಮಾಡುತ್ತಾರೆ. ಈ ಸಂಪ್ರದಾಯವು ಸುಮಾರು ಶತಮಾನಗಳಿಂದಲೂ ನಡೆದು ಬಂದಿರುತ್ತದೆ. ಈ ಒಂದು ಕಾರ್ಯಕ್ರಮಕ್ಕೆ ಭಕ್ತರು ಸ್ಥಳಿಯರಲ್ಲದೆ ಮೂಲೆ ಮೂಲೆಯಿಂದಲೂ ದೇವರ ದರ್ಶನಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಹಿರಿಯರ ಪ್ರಕಾರ ಅಂದಿನ ದಿನ ಸ್ವಲ್ಪವಾದರು ಮಳೆ ಭೂಮಿಯನ್ನು ನೆನೆಸುವುದೆಂದು ನಂಬಿಕೆ ಇದೆ.

ಪಿರಿಯಾ ಪಟಾಲಮ್ಮನ ದೇವಸ್ಥಾನ

ಬದಲಾಯಿಸಿ
  • ಈ ದೇವಸ್ಥಾನವು ಕೋಟೆಯಿಂದ ಉತ್ತರಕ್ಕೆ ಬೆಟ್ಟದ ಕೆಳಗೆ ಇದ್ದೂ, ಇಲ್ಲಿನ ಒಂದು ವಿಶೇಷತೆ ಏನೆಂದರೆ, ಇದೂ ಕೂಡ ತಲತಲಾಂತರಗಳಿಂದ ಪೂಜೆ ಮಾಡಿಕೊಂಡು ಬಂದಿರುವಂತಹ ಒಂದು ದೇವಸ್ಥಾನ. ಇಲ್ಲಿ ಪಿರಿಯಾ ಪಟಾಲಮ್ಮನೇ ಅಧಿದೇವತೆ. ಇಲ್ಲಿಯೂ ಒಂದು ಸಣ್ಣ ಕಥೆ ಇದೆ. ಅದೇನೆಂದರೆ ಸುಮಾರು ದಶಕಗಳ ಹಿಂದೆ ಇಲ್ಲಿನ ಉತ್ತರದ ಕೋಟೆಯ ಬಂಡೆಯಲ್ಲಿ ಗಣಿಗಾರಿಕೆ ಮಾಡಲು ಕೆಲವರು ಪ್ರಾರಂಭಿಸಿದ್ದರು.
  • ಪ್ರಾರಂಭಿಸಿದ ಸ್ವಲ್ಪ ಹೊತ್ತಿನ ಬಳಿಕವೇ ಪ್ರಾರಂಭಿಸಿದವರಲ್ಲಿ ಸ್ವಲ್ಪ ಜನ ರಕ್ತ ಕಾರಿಕೊಂಡು ಸತ್ತರಂತೆ. ಇದಾದ ನಂತರ ಉಳಿದವರು ಪ್ರಾಣ ಭೀತಿಯಿಂದ ಗಣಿಗಾರಿಕೆ ನಿಲ್ಲಿಸಿ, ಬೆಟ್ಟದ ಕೆಳಗಿನ ದೇವಿಯ ಮೊರೆ ಹೋದರಂತೆ. ನಂತರ ಮತ್ತೆ ಯಾವುದೆ ಅನಾಹುತ ಸಂಭವಿಸಿಲ್ಲವಂತೆ. ಇಂದಿಗೂ ಸಹ ಈ ದೇವಿಯನ್ನು ಭಯ, ಭಕ್ತಿ, ಶ್ರದ್ಧೆಯಿಂದ ಪೂಜೆಗಳನ್ನು ಮಾಡಿದರೆ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆ ಇದೆ.

ಗ್ರಾಮ ದೇವತೆ ಮಾರಿಯಮ್ಮ

ಬದಲಾಯಿಸಿ

ಈ ತಾಯಿಯ ಬಗ್ಗೆ ಎಷ್ಟು ಹೇಳಿದರು ಸಾಲದು. ಯಾಕೆಂದರೆ ನಮ್ಮ ಊರು ಸುಮಾರು ಧಾರ್ಮಿಕ ವರ್ಗದವರಿಂದ ಕೂಡಿದೆ. ಇಲ್ಲಿ ನಂಬಿಕೆಯೇ ಹೆಚ್ಚು ಪ್ರಾಧಾನ್ಯತೆ ಪಡೆದಿದೆ. ಇಲ್ಲಿ ಯಾರಿಗಾದರು ಅಮ್ಮ ಮೊದಲಾದಂತಹ ಖಾಯಿಲೆಗಳು ಬಂದರೆ, ಯಾವುದೇ ಧರ್ಮದವರಾದರೂ ಸಹ ಇಲ್ಲಿ ಬಂದು ದೇವಿಗೆ ಪೂಜೆ ಸಲ್ಲಿಸಿ, ದೇವಿಗೆ ತನಿ ಎರೆದು ಹೋದರೆ, ಬಂದಿರುವಂತಹ ಅಮ್ಮ ಇಲ್ಲದಂತಾಗುವುದೆಂಬ ನಂಬಿಕೆ ಇದೆ. ಈ ದೇವಸ್ಥಾನವು ಊರಿನ ಒಳಗೆ ಉತ್ತರದ ದಿಕ್ಕಿಗಿದೆ.

ಹುಸ್ಕೂರು ಮದ್ದೂರಮ್ಮ ದೇವಿ

ಬದಲಾಯಿಸಿ
  • ಈ ದೇವಸ್ಥಾನವು ಬೆಟ್ಟದಾಸನಪುರದಿಂದ ಪೂರ್ವಕ್ಕೆ ಒಂಭತ್ತು ಕಿಲೋ ಮೀಟರ್ ದೂರದಲ್ಲಿದೆ. ಈ ಶಕ್ತಿ ದೇವತೆಯ ಬಗ್ಗೆ ಹೇಳಲೇಬೇಕು. ಯಾಕೆಂದರೆ ಇಲ್ಲಿ ನಡೆಯುವ ಜಾತ್ರೆ ಸುತ್ತ ಮುತ್ತಲೂ ಎಲ್ಲೂ ನಡೆಯುವುದಿಲ್ಲ. ಹುಸ್ಕೂರಿನ ಜಾತ್ರೆ ಎಂದರೆ ಒಂದು ರೀತಿಯಲ್ಲಿ ಬೆಂಗಳೂರಿನ ಹಬ್ಬವೆಂದೇ ಹೇಳಬಹುದು. ಹುಸ್ಕೂರಿನ ಸುತ್ತಲೂ ಇರುವಂತಹ ಊರುಗಳಿಂದ ಕುರ್ಜುಗಳೆಂದು ಕಟ್ಟುತ್ತಾರೆ. ಕುರ್ಜುಗಳೆಂದರೆ ಮರದ ಹಲಗೆಗಳು, ಗಟ್ಟಿಯಾದ ಕಡ್ಡಿಗಳು ಹಾಗು ರಂಗು ರಂಗಿನ ಬಟ್ಟೆಗಳಿಂದ ಕಟ್ಟಿದ ಅತೀ ಉದ್ದನೆಯ ತೇರು. ಈ ತೇರಿಗೆ ಮರದ ಚಕ್ರಗಳಿರುತ್ತವೆ ಮತ್ತು ಪ್ರತೀ ತೇರಿನಲ್ಲೂ ದೇವರುಗಳ ವಿಗ್ರಹಗಳಿರುತ್ತವೆ. ತೇರುಗಳು ಸುಮಾರು ಎಂಭತ್ತರಿಂದ ನೂರು ಅಡಿಗಳ ಎತ್ತರದಲ್ಲಿರುತ್ತವೆ. ಈ ಕುರ್ಜುಗಳನ್ನು ಎಳೆಯುವುದಕ್ಕೆ ಸುಮಾರು ಎಪ್ಪತ್ತು ಜೊತೆ ಎತ್ತುಗಳನ್ನು ಕಟ್ಟುತ್ತಾರೆ.
  • ಕುರ್ಜಿಯ ಮೇಲೆ ಕಟ್ಟಿದ ಕಳಸದ ಅಡಿಯಿಂದ ದೊಡ್ಡ ದೊಡ್ದ ಹಗ್ಗಗಳನ್ನು ಕಟ್ಟಿ ಕುರ್ಜು ಬರುವ ಸಮಯದಲ್ಲಿ ಯಾವ ಕಡೆಯೂ ವಾಲದಂತೆ ಸುತ್ತಲೂ ಭಕ್ತರು ಹಗ್ಗಗಳನ್ನು ಹಿಡಿದುಕೊಂಡು ಬರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಹಿಂದಿನಿಂದಲೂ ಸಹ ಕುರ್ಜುಗಳು ಬರು ವ ದಾರಿಯಲ್ಲಿ ಯಾವುದೇ ರೀತಿಯ ಅಡೆ-ತಡೆಗಳು ಇಲ್ಲದಂತೆ ಹಾಗು ವಿದ್ಯುತ್ ತಂತಿಗಳನ್ನೂ ತೆಗೆಯುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಹುಸ್ಕೂರಿನಲ್ಲಿ ನೆಲೆಸಿರುವಂತಹ ಶ್ರೀ ಮದ್ದೂರಮ್ಮ ದೇವಿ ಮೊದಲಿಗೆ ಮಂಡ್ಯದ ಮದ್ದೂರಿನಲ್ಲಿ ಇದ್ದರಂತೆ ಆಗಿನ ಕಾಲದಲ್ಲಿ ಮದ್ದೂರಿನ ದನಗಳ ಜಾತ್ರೆ ಎಂದರೆ ಬಹಳ ಪ್ರಸಿದ್ಧಿ. ಅಲ್ಲಿಗೆ ಹುಸ್ಕೂರಿನಿಂದ ಎತ್ತುಗಳನ್ನು ಕೊಳ್ಳಲು ಒಬ್ಬ ಆದಿ ಕರ್ನಾಟಕದ ರೈತ ಹೋಗಿದ್ದನಂತೆ.
  • ಜಾತ್ರೆಯಲ್ಲಿ ಎತ್ತುಗಳಿಗೋಸ್ಕರ ಹುಡುಕಾಡುವಾಗ ಬಹಳ ಬಾಯಾರಿಕೆಯಾಗಿ ಸ್ವಲ್ಪ ದೂರದಲ್ಲಿ ಹರಿಯುತ್ತಿದ್ದ ಹೊಳೆಗೆ ಬಂದು ಕೈಕಾಲು ತೊಳೆದು ನೀರು ಕುಡಿದು ಇನ್ನೇನು ತಿರುಗಬೇಕು ಎನ್ನುವಷ್ಟರಲ್ಲಿ, ಹೊಳೆಯಿಂದ ಪ್ರತಿಧ್ವನಿಯೊಂದು ಕೇಳಿಸಿತಂತೆ. "ನೋಡು ಮಗು ನಾನು ಮದ್ದೂ ರಮ್ಮನೆಂದು, ನಿನ್ನ ಜೊತೆಯೇ ನಿನ್ನ ಊರಾದ ಹುಸ್ಕೂರಿಗೆ ಬಂದು ಅಲ್ಲಿ ನೆಲೆಸುವೆನೆಂದು" ಹೇಳಿ ಆ ಹೊಳೆಯಿಂದ ಹಿತ್ತಾಳೆಯ ವಿಗ್ರಹಗಳು ರೈತನ ಕೈಯೊಳಗೆ ಬಂದವಂತೆ. ಅದೇ ರೀತಿ ರೈತನು ವಿಗ್ರಹಗಳನ್ನು ತನ್ನೂರಾದ ಹುಸ್ಕೂರಿಗೆ ತಂದು ಊರಿನ ಸಭಿಕರು ಮತ್ತು ಮುಖಂ ಡರನ್ನು ಒಂದೆಡೆ ಸೇರಿಸಿ ನಡೆದ ವಿಷಯವನ್ನು ತಿಳಿಸಲು ಅಚ್ಚರಿ ಹಾಗು ಭಯ ಭಕ್ತಿಗಳಿಂದ ಚಿಕ್ಕದಾದ ಗುಡಿಯೊಂದನ್ನು ಕಟ್ಟಿ, ಅಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರಂತೆ. ನಂತರ ದೇವತೆ ಹೇಳಿದಂತೆ ಹುಸ್ಕೂರಿನಲ್ಲಿ ಬಂದು ನೆಲೆಗೊಂಡರಂತೆ.
  • ಅದೇ ಸಮಯದಲ್ಲಿ ಮೈಸೂರಿನ ಸಾಮ್ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ್, ತನ್ನ ಸೈನ್ಯ ಸಮೇತ ಈಗಿನ ಬಯಲು ಬಸವೇಶ್ವರ ಸ್ವಾಮಿ ಇರುವ ಸುತ್ತ ಮುತ್ತಲೂ ಸ್ಥಳದಲ್ಲಿ, ಬೀಡು ಬಿಟ್ಟಿದ್ದ. ಬ್ರಿಟೀಷರ ಸೈನ್ಯದೊಂದಿಗೆ ಯುದ್ಧವನ್ನು ಮಾಡಿ ಸೋತು ಹೋದರು. ಟಿಪ್ಪು ಸುಲ್ತಾನನು ಉಳಿದ ಸೈನ್ಯದೊಂದಿಗೆ ಮೈಸೂರಿಗೆ ಹೊರಡುವಾಗ, ದಾರಿಯ ಮಧ್ಯದಲ್ಲಿ ಅಶರೀರವಾಣಿಯೊಂದು ಕೇಳಿಸಿತಂತೆ." ಮಗು ಭಯ ಪಡಬೇಡ. ನಾನು ಮದ್ದೂರಮ್ಮನೆಂದು ಈ ಪ್ರದೇಶದಲ್ಲಿ ನೆಲೆಸಿದ್ದೇನೆ. ಯುದ್ಧದಲ್ಲಿ ಸೋತೆ ಎಂದು ಚಿಂತಿಸಬೇಡ. ನೀನು ಈಗಲೇ ಹುಸ್ಕೂರಿನ ಗ್ರಾಮಕ್ಕೆ ಹೋಗು. ಅಲ್ಲಿ ನನಗಾಗಿ ಒಂದು ದೇವಾಲಯವನ್ನು ನಿರ್ಮಿಸಿ, ನನ್ನ ವಜ್ರಾಂಗಿ ಪ್ರತಿಮೆಗಳನ್ನು ಅಲ್ಲಿ ನೀನು ಪ್ರತಿಷ್ಟಾಪಿಸು. ಅನಂತರ ಯುದ್ಧಕ್ಕೆ ಹೋಗು ನೀನು ಜಯಗಳಿಸುವೆ" ಎಂದು ಹೇಳಿದರಂತೆ.
  • ಈ ಮಾತುಗಳನ್ನು ಕೇಳಿದ ಟಿಪ್ಪು ಹುಸ್ಕೂರಿಗೆ ಬಂದು ಗ್ರಾಮದ ಉಸ್ತುವಾರಿ ನೋಡಿಕೊಳ್ಳುವವರನ್ನು ಕರೆದು ದೇವಾಲಯವನ್ನು ನಿರ್ಮಿಸಿ, ವಜ್ರಾಂಗಿ ಪ್ರತಿಮೆಗಳನ್ನು ಪ್ರತಿಷ್ಟಾಪಿಸಿ, ಅನಂತರ ಬ್ರಿಟೀಷರ ಸೈನ್ಯದೊಂದಿಗೆ ಯುದ್ಧ ಮಾಡಿದನಂತೆ. ಯುದ್ಧದಲ್ಲಿ ಟಿಪ್ಪುವಿಗೆ ಜಯವಾಗಲು ಟಿಪ್ಪು ಮತ್ತೇ ಹುಸ್ಕೂರಿನ ಶ್ರೀ ಮದ್ದೂರಮ್ಮನ ದೇವಾಲಯಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸಿ, ಮೈಸೂರಿಗೆ ಹಿಂದಿರುಗಿದನಂತೆ. ಇಂದಿಗೂ ಸಹ ಜಾತ್ರೆ ನಡೆಯುವ ಮೂರು ದಿನಗಳ ಸಮಯದಲ್ಲಿ ಮಾತ್ರ, ಟಿಪ್ಪು ಮಾಡಿಸಿದಂತಹ ವಜ್ರಾಂಗಿ ದೇವರುಗಳನ್ನು, ಆನೇಕಲ್ ತಹಸಿಲ್ದಾರ್ ರವರ ನೇತೃತ್ವದಲ್ಲಿ ಮತ್ತು ಸಕಲ ಪೋಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ತಂದು ಪೂಜೆ ಸಲ್ಲಿಸಿ, ಮತ್ತೆ ಯತಾಸ್ಥಾನದಲ್ಲಿ ಭದ್ರವಾಗಿ ಇಡುತ್ತಾರೆ. ಈ ದೇವಿಯು ನಂಬಿದವರನ್ನು ಕೈ ಹಿಡಿಯುತ್ತಾರೆ ಹಾಗು ಅವರ ಕಷ್ಟಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯಿದೆ.
  • (ಮೂಲ :ಸತೀಶ್ ಕುಮಾರ್ ಕೆ ಪಿ ಅವರಿಂದ ವಿಕಿಪಿಡಿಯಾ ಕರ್ನಾಟಕ ಇತಿಹಾಸಕ್ಕೆ ).