ಗೋವಿಂದ (ರಾಷ್ಟ್ರಕೂಟ)
ಕರ್ನಾಟಕವನ್ನಾಳಿದ ರಾಷ್ಟ್ರಕೂಟ ಅರಸರಲ್ಲಿ ಗೋವಿಂದ ಎಂಬ ಹೆಸರಿನ ದೊರೆಗಳು ನಾಲ್ವರು. ಒಂದನೆಯ ಗೋವಿಂದನ ಆಳಿಕೆಯ ಕಾಲ ಮತ್ತು ಇತರ ವಿವರಗಳು ತಿಳಿದಿಲ್ಲ. ರಾಷ್ಟ್ರಕೂಟ ರಾಜವಂಶವನ್ನು ಸ್ಥಾಪಿಸಿದ ದಂತಿದುರ್ಗನ ಎಲ್ಲೋರ ಶಾಸನದಲ್ಲಿ ಅವನ ಪೂರ್ವಿಕರ ಹೆಸರುಗಳನ್ನು ಕೊಟ್ಟಿದೆ. ಅವರಲ್ಲಿ ಮೊದಲಿಗ ದಂತಿವರ್ಮ. ಅವನ ಮಗ 1ನೆಯ ಇಂದ್ರ. ಇಂದ್ರನ ಮಗ ಗೋವಿಂದರಾಜ. ಇವನೇ 1ನೆಯ ಗೋವಿಂದನೆಂದು ಪರಿಗಣಿಸಲಾಗಿದೆ. ಗೋವಿಂದನ ಮಗ, ಮೊಮ್ಮಗ, ಮರಿಮಗ ಅನುಕ್ರಮವಾಗಿ 1ನೆಯ ಕರ್ಕ, 2ನೆಯ ಇಂದ್ರ ಮತ್ತು ದಂತಿದುರ್ಗ. ಅನಂತರ ಆಳಿದ ಅರಸರಲ್ಲಿ ಗೋವಿಂದ ಎಂಬ ಹೆಸರಿನವರು ಮೂವರು. ಇವರು ಅನುಕ್ರಮವಾಗಿ 2ನೆಯ, 3ನೆಯ ಮತ್ತು 4ನೆಯ ಗೋವಿಂದ ಎನಿಸಿಕೊಂಡಿದ್ದಾರೆ. ಇವರನ್ನು ಕುರಿತ ಮುಖ್ಯ ಅಂಶಗಳನ್ನು ಮುಂದೆ ಕೊಡಲಾಗಿದೆ.
ಗೋವಿಂದ ೨
ಬದಲಾಯಿಸಿರಾಷ್ಟ್ರಕೂಟ ವಂಶದ ದೊರೆ (ಸು.774-80). ಒಂದನೆಯ ಕೃಷ್ಣರಾಜನ ಜ್ಯೇಷ್ಠ ಪುತ್ರ. ಈತನಿಗೆ ಪ್ರಭೂತವರ್ಷ, ವಿಕ್ರಮಾವಲೋಕ, ಪ್ರತಾಪಾವಲೋಕ ಎಂಬ ಬಿರುದುಗಳಿದ್ದುವುಗೋವಿಂದ ತನ್ನ ತಂದೆ ಕೃಷ್ಣರಾಜನ ಕಾಲದಲ್ಲೇ ಗಂಗರು ಮತ್ತು ವೆಂಗಿ ಚಾಳುಕ್ಯರ ಮೇಲೆ ಹೋರಾಡಿ ವೀರಯೋಧನೆಂದು ಖ್ಯಾತಿ ಹೊಂದಿದ್ದ. ತಾನೇ ರಾಜನಾದ ಮೇಲೆ ಗೋವರ್ಧನ ಪ್ರಾಂತವನ್ನು (ನಾಸಿಕ ಜಿಲ್ಲೆ) ವಶಪಡಿಸಿಕೊಂಡನೆಂದೂ ಪಾರಿಜಾತ ರಾಜನನ್ನು ಸೋಲಿಸಿದನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಹಿಂದೆ ರಾಷ್ಟ್ರಕೂಟ ರಾಜ್ಯದ ಒಳಗೆ ಇದ್ದ ಗೋವರ್ಧನ ಪ್ರಾಂತವನ್ನೇಕೆ ಇವನು ವಶಪಡಿಸಿಕೊಳ್ಳಬೇಕಾಯಿತು ಮತ್ತು ಪಾರಿಜಾತ ಯಾರು ಎಂಬುದು ತಿಳಿಯದು. ಗೋವಿಂದ ಚಕ್ರಾಧಿಪತ್ಯವನ್ನು ವಹಿಸಿಕೊಂಡ ಪ್ರಾರಂಭದಲ್ಲಿ ರಾಜ್ಯ ಸಂಘಟನಾಕಾರ್ಯದಲ್ಲಿ ಉತ್ಸಾಹ ತೋರಿಸಿದರೂ ಕ್ರಮೇಣ ರಾಜ್ಯ ಪರಿಪಾಲನೆಯಲ್ಲಿ ಅನಾಸಕ್ತನಾಗಿ, ಸುಖಲೋಲುಪನಾಗಿದ್ದ. ಅಷ್ಟೇ ಅಲ್ಲದೆ ಇವನ ಆಳಿಕೆಯ ಬಹುಕಾಲ ಪೂರ್ತ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದರಲ್ಲೇ ಕಳೆಯಿತು. ಅಧಿಕಾರ ಮದದಿಂದ ದುಶ್ಚಟಗಳಿಗೆ ಬಲಿಯಾದ ಗೋವಿಂದ ಪ್ರಜೆಗಳ ಹಾಗೂ ಸಾಮಂತರ ಕೋಪಕ್ಕೆ ಬೇಗನೆ ಗುರಿಯಾದ. ನಾಸಿಕ ಪ್ರಾಂತದಲ್ಲಿ ಇವನ ಅಧೀನನಾಗಿ ಆಳುತ್ತಿದ್ದ ಇವನ ತಮ್ಮ ಧ್ರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯಾಡಳಿತದ ಸೂತ್ರವನ್ನು ಕಸಿದುಕೊಳ್ಳಲು ಹವಣಿಸಿದ. ಅಣ್ಣನನ್ನು ಧಿಕ್ಕರಿಸಿ ತನ್ನ ಹೆಸರಿನಲ್ಲಿಯೇ ಶಾಸನವನ್ನು ಹೊರಡಿಸಲು ಪ್ರಾರಂಭಿಸಿದ. ಇದನ್ನರಿತ ಗೋವಿಂದ ಧ್ರುವನನ್ನು ಅಧಿಕಾರ ಸ್ಥಾನದಿಂದ ತಳ್ಳಿ ತಾನೇ ಅಧಿಕಾರವನ್ನು ವಹಿಸಿಕೊಂಡ. ಧ್ರುವ ಅಣ್ಣನ ವಿರುದ್ಧ ದಂಗೆ ಎದ್ದ. ಗೋವಿಂದ ಕಂಚಿ, ಗಂಗವಾಡಿ, ವೆಂಗಿ, ಮಾಳವ ಮೊದಲಾದ ರಾಜರುಗಳ ನೆರವನ್ನು ಯಾಚಿಸಿ ಧ್ರುವನೊಡನೆ ಯುದ್ಧಕ್ಕೆ ಸಿದ್ಧನಾದ. ಆದರೆ ರಾಷ್ಟ್ರಕೂಟ ವೈರಿಗಳತ್ತ ಇವನು ನೆರವಿಗೆ ಕೈಚಾಚಿದ್ದರಿಂದ ಇವನ ಮಂತ್ರಿ ಸಾಮಂತರೂ ಧ್ರುವನ ಪಕ್ಷ ವಹಿಸಿದರು. ವೆಂಗಿಯ ವಿಷ್ಣುವರ್ಧನ ಧ್ರುವನ ಮಾವನಾದುದರಿಂದ ಗೋವಿಂದನ ನೆರವಿಗೆ ಬರಲಿಲ್ಲ. ಉಳಿದ ರಾಜರ ಸಹಾಯ ಬರುವುದಕ್ಕೆ ಮೊದಲೇ ಧ್ರುವ ಗೋವಿಂದನನ್ನು ಸೋಲಿಸಿ ರಾಜ್ಯಾಧಿಕಾರವನ್ನು ಕಿತ್ತುಕೊಂಡು ರಾಷ್ಟ್ರಕೂಟ ಸಾಮ್ರಾಜ್ಯದ ಅಧಿಪತಿಯಾದ. ಗೋವಿಂದ 780ರಲ್ಲಿ ಯುದ್ಧರಂಗದಲ್ಲೇ ಅಸುನೀಗಿರಬೇಕೆಂದು ತೋರುವುದು. [೧]
ಗೋವಿಂದ ೩
ಬದಲಾಯಿಸಿರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಜನವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ. ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಂಬವಾಡಿಯ ಚಾರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಭನ ಪರವಾಗಿದ್ದರು. 788ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಂದಿದಾಗ ಅವನ ಅನಂತರ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋಕನನ್ನು ಸದೆಬಡಿಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡುಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಸ್ತಂಭನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಳ್ಳಿದ. ಅನಂತರ ಗೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗತನಾದ. 796ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ.
ಇತ್ತ ತನ್ನ ಅಧಿಕಾರ ನಿರ್ಬಾಧಿತವಾದ ಮೇಲೆ ಗೋವಿಂದ ತನ್ನ ದೃಷ್ಟಿಯನ್ನು ಉತ್ತರ ಭಾರತಕ್ಕೆ ಹರಿಸಿದ (ಸು.798-800). ಗೋವಿಂದನ ತಂದೆ ಧ್ರುವ ಉತ್ತರ ಭಾರತದ ದಂಡಯಾತ್ರೆಯಿಂದ ಹಿಂತಿರುಗಿ ಬಂದಮೇಲೆ ಬಂಗಾಲದ ಧರ್ಮಪಾಲ ಕನೂಜನ್ನು ಗೆದ್ದುಕೊಂಡು ಚಕ್ರಾಯುಧನನ್ನು ಕನೂಜಿನ ರಾಜನನ್ನಾಗಿ ಮಾಡಿ ತಾನು ಉಚ್ಛ್ರಾಯಸ್ಥಿತಿಗೆ ಏರಿದ್ದ. ಆದರೆ ಸ್ವಲ್ಪಕಾಲದಲ್ಲಿಯೇ ಗೂರ್ಜರ ಪ್ರತೀಹಾರ ರಾಜ ಇಮ್ಮಡಿ ನಾಗಭಟ ಪುನಃ ಕನೂಜನ್ನು ಗೆದ್ದುಕೊಂಡು ಚಕ್ರಾಯುಧನನ್ನು ಓಡಿಸಿದನಲ್ಲದೆ, ಆತನ ಸಹಾಯಕ್ಕೆ ಬಂದ ಧರ್ಮಪಾಲನನ್ನೂ ಹಿಮ್ಮೆಟ್ಟಿಸಿದ್ದ. ಈ ಸಮಯದಲ್ಲಿ ಗೋವಿಂದ ಕನೂಜಿನ ಮೇಲೆ ದಂಡೆತ್ತಿಹೋದ. ನಾಗಭಟನಿಗೂ ಮತ್ತು ಗೋವಿಂದನಿಗೂ ಪ್ರಾಯಶಃ ಝಾನ್ಸಿ, ಗ್ವಾಲಿಯರ್ ಪ್ರಾಂತಗಳ ನಡುವೆ ಯುದ್ಧವಾಯಿತು. ಚಕ್ರಾಯುಧ, ಧರ್ಮಪಾಲ ಇಬ್ಬರೂ ಗೋವಿಂದನಿಗೆ ಶರಣಾದರು. ಅನಂತರ ಗೋವಿಂದನ ಸೈನ್ಯ ಹಿಮಾಲಯದ ತಪ್ಪಲಿನವರೆಗೂ ದಂಡೆತ್ತಿ ಹೋಗಿ ನಾನಾ ರಾಜವಂಶಗಳ ರಾಜರನ್ನು ಸದೆಬಡಿದು, ಕರ್ನಾಟಕದ ಕೀರ್ತಿ ಪ್ರತಾಪಗಳನ್ನು ಹಿಮಾಲಯಪರ್ಯಂತ ಹರಡಿತು. ಗೋವಿಂದ ಕೈಗೊಂಡ ಉತ್ತರ ಭಾರತದ ದಂಡಯಾತ್ರೆ ಕೇವಲ ದಿಗ್ವಿಜಯ ರೂಪವಾಗಿತ್ತು. ಕೀರ್ತಿ ಮತ್ತು ಕೋಶವೃದ್ಧಿಯಾಯಿತೆ ವಿನಾ ರಾಜ್ಯವಿಸ್ತಾರವೇನೂ ಆದಂತೆ ತೋರುವುದಿಲ್ಲ. ಈ ಹಿಂದಿನಿಂದಲೂ ರಾಷ್ಟ್ರಕೂಟಾಧೀನದಲ್ಲಿದ್ದ ಮಾಳವ ಗುಜರಾತ್ ಪ್ರದೇಶಗಳನ್ನು ಭದ್ರಪಡಿಸಿಕೊಳ್ಳಲೋಸುಗ ಸಮರ್ಥ ಯೋಧನಾಗಿದ್ದ ತನ್ನ ತಮ್ಮ ಇಂದ್ರನಿಗೆ ಆ ಪ್ರಾಂತಗಳ ಅಧಿಕಾರವನ್ನು ವಹಿಸಿದ. ಈ ದಂಡಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಮಾಳವದೇಶದ ಶ್ರೀಭವನ ಎಂಬಲ್ಲಿ ತಂಗಿದ್ದ. ಆಗ ಮಗ ಅಮೋಘವರ್ಷ (ನೃಪತುಂಗ) ಜನಿಸಿದ.
ಗೋವಿಂದ ದೀರ್ಘಕಾಲ ರಾಜಧಾನಿಯಿಂದ ಹೊರಗೆ ಇದ್ದ ಅವಕಾಶವನ್ನು ಉಪಯೋಗಿಸಿಕೊಂಡು ದಕ್ಷಿಣದ ಪಲ್ಲವ, ಪಾಂಡ್ಯ, ಕೇರಳ, ಗಂಗರಾಜರು ಗೋವಿಂದನ ಪ್ರಭುತ್ವವನ್ನು ಮುರಿಯಲು ಸಿದ್ಧತೆ ಮಾಡತೊಡಗಿ ರಾಷ್ಟ್ರಕೂಟರ ಕೆಲವು ಪ್ರಾಂತಗಳನ್ನು ಆಕ್ರಮಿಸಿದರು. ಈ ವಾರ್ತೆಯನ್ನು ಕೇಳಿದೊಡನೆಯೇ ಈತ ತುಂಗಭದ್ರಾ ತಟಕ್ಕೆ ಧಾವಿಸಿ (ಸು.802) ಅಲ್ಲಿ ಬೀಡುಬಿಟ್ಟಿದ್ದ ದಕ್ಷಿಣ ರಾಜರ ಸೈನ್ಯಗಳನ್ನು ಪರಾಭವಗೊಳಿಸಿದ. ಅನೇಕ ಗಂಗಸೇನಾಧಿಕಾರಿಗಳನ್ನು ಮರುಕ ತೋರಿಸದೆ ಬಲಿ ತೆಗೆದುಕೊಂಡ. ಈ ವಿಜಯದ ಅನಂತರ ಪಲ್ಲವರ ರಾಜಧಾನಿಯಾದ ಕಂಚಿಯನ್ನು ಸೂರೆಮಾಡಿ ಸ್ವಾಧೀನಪಡಿಸಿಕೊಂಡ. ಅನಂತರ ಪಾಂಡ್ಯ, ಕೇರಳ ರಾಜರುಗಳನ್ನು ಸೋಲಿಸಿದ. ಗೋವಿಂದ ಕಂಚಿಯ ರಾಜ್ಯವನ್ನು ಜಯಿಸಿದನೆಂಬ ಸುದ್ದಿಯನ್ನು ಕೇಳಿದೊಡನೆಯೆ ಸಿಂಹಳದ ರಾಜ ತಾನಾಗಿಯೇ ವಿನಮ್ರನಾಗಿ ಬಂದು ಗೋವಿಂದನಿಗೆ ತನ್ನ ಹಾಗೂ ತನ್ನ ಅಮಾತ್ಯನ ಪ್ರತಿಮೆಗಳನ್ನು ಕಪ್ಪವಾಗಿ ಸಲ್ಲಿಸಿದ.
ನಾಲ್ವಡಿ ವಿಷ್ಣುವರ್ಧನ ಜೀವಿಸಿರುವವರೆಗೂ ಪೂರ್ವ ಚಾಳುಕ್ಯ ಮತ್ತು ರಾಷ್ಟ್ರಕೂಟರ ಸಂಬಂಧ ಸ್ನೇಹದಿಂದ ಕೂಡಿತ್ತು. ಅವನ ಅನಂತರ ಪಟ್ಟಕೆ ಬಂದ ಇಮ್ಮಡಿ ವಿಜಯಾದಿತ್ಯ ಸಾಮಂತನಾಗಿರಲು ಒಪ್ಪದೆ ಪ್ರತ್ಯಕ್ಷವಾಗಿ ಗೋವಿಂದನನ್ನು ವಿರೋಧಿಸತೊಡಗಿದ. ಈ ನಡುವೆ ವಿಜಯಾದಿತ್ಯನಿಗೂ ಅವನ ತಮ್ಮ ಭೀಮನಿಗೂ ಪಟ್ಟಕ್ಕಾಗಿ ಹೋರಾಟ ಪ್ರಾರಂಭವಾಯಿತು. ಭೀಮ ಗೋವಿಂದನ ಮೊರೆಹೊಕ್ಕ. ಗೋವಿಂದ ಸೇನಾಸಮೇತನಾಗಿ ವೆಂಗಿಗೆ ನಡೆದು ವಿಜಯಾದಿತ್ಯನನ್ನು ಸೋಲಿಸಿ ವೆಂಗಿ ರಾಜ್ಯವನ್ನು ಗಳಿಸಿಕೊಟ್ಟ.
ಸು.810ರಲ್ಲಿ ಗಂಗರಾಜ್ಯದ ಮಾಂಡಲಿಕನಾಗಿದ್ದ ರಣಾವಲೋಕಸ್ತಂಭ ಸತ್ತ. ಗೋವಿಂದ ತನ್ನ ತಮ್ಮ ಇಂದ್ರನ ಜ್ಯೇಷ್ಠ ಪುತ್ರನಾದ ದಂತಿವರ್ಮನನ್ನು ಗಂಗರಾಜ್ಯದ ಮಾಂಡಲಿಕನಾಗಿ ನೇಮಿಸಿದ. ಆದರೆ ದಂತಿವರ್ಮ ಅಕಾಲ ಮರಣಕ್ಕೆ ತುತ್ತಾದ್ದರಿಂದ ಕೊನೆಗೆ ಗೋವಿಂದ ಅದುವರೆಗೆ ಸೆರೆಯಲ್ಲಿದ್ದ ಶಿವಮಾರನನ್ನು ಬಿಡುಗಡೆಮಾಡಿ ಗಂಗರಾಜ್ಯವನ್ನು ಅವನಿಗೇ ಮರಳಿ ನೀಡಿದ.
ಭಾರತದ ಇತಿಹಾಸದ ಪುಟಗಳಲ್ಲಿ ಗಣ್ಯಸ್ಥಾನ ಪಡೆದಿರುವ ರಾಜರುಗಳಲ್ಲಿ ಗೋವಿಂದನೂ ಒಬ್ಬ. ಇವನ ರಾಜಕೀಯ ಪ್ರಭಾವ ಕನೂಜಿನಿಂದ ಕನ್ಯಾಕುಮಾರಿಯ ವರೆಗೂ ವ್ಯಾಪಿಸಿದ್ದಿತು. ಇವನ ಕೊನೆಗಾಲ ಶಾಂತಿ, ಸಮೃದ್ಧಿಯ ಕಾಲ. ಆ ದಿನಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಪ್ರಾಬಲ್ಯ, ಘನತೆ, ಗೌರವಗಳ ಉತ್ತುಂಗ ಶಿಖರವನ್ನು ಮುಟ್ಟಿತ್ತು.
ಸು.814ರಲ್ಲಿ ಇವನ ಅವಸಾನವಾಯಿತು. ಗಾಮುಂಡಬ್ಬೆ ಈತನ ಪತ್ನಿ. ಅಮೋಘವರ್ಷ ನೃಪತುಂಗ ಈತನ ಮಗ.
ಗೋವಿಂದ ೪
ಬದಲಾಯಿಸಿರಾಷ್ಟ್ರಕೂಟ ದೊರೆ (930-35). 3ನೆಯ ಇಂದ್ರನ ಕಿರಿಯ ಮಗ. ಪ್ರಭೂತವರ್ಷ, ಸುವರ್ಣವರ್ಷ, ನೃಪತುಂಗ, ನೃಪತಿತ್ರಿಣೇತ್ರ, ಸಾಹಸಾಂಕ, ರಟ್ಟಕಂದರ್ಪ ಎಂಬುವು ಇವನ ಬಿರುದುಗಳು. ನಾಲ್ವಡಿ ಗೋವಿಂದ ಅಣ್ಣನಾದ ಇಮ್ಮಡಿ ಅಮೋಘವರ್ಷನನ್ನು ಪ್ರಾಯಶಃ ಕೊಲ್ಲಿಸಿ ಪಟ್ಟಕ್ಕೆ ಬಂದ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾದ. ಆದರೂ ಯೌವನಮದ ಮತ್ತು ರಾಜ್ಯಮದದಿಂದ ಜನಾನುರಾಗಿಯಾಗದೆ ತನ್ನನ್ನು ತಾನೇ ನಾಶಪಡಿಸಿಕೊಂಡ.
ರಾಷ್ಟ್ರಕೂಟರ ಬೆಂಬಲದಿಂದ ವೆಂಗಿ ಸಿಂಹಾಸನಾಧಿಕಾರಿಯಾಗಿದ್ದ ಇಮ್ಮಡಿ ಯುದ್ಧಮಲ್ಲನನ್ನು 934ರಲ್ಲಿ ಇಮ್ಮಡಿ ಭೀಮ ಓಡಿಸಿ ತಾನೇ ರಾಜನಾದ. ಆದರೂ ಈ ಸಮಯದಲ್ಲಿ ನಾಲ್ಕನೆಯ ಗೋವಿಂದ ವೆಂಗಿಯ ಮೇಲೆ ರಾಷ್ಟ್ರಕೂಟರ ಪ್ರಭಾವವನ್ನು ಉಳಿಸಿಕೊಳ್ಳುವ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯದ ಹೊರಗೆ ತನ್ನ ಪರಾಕ್ರಮವನ್ನು ತೋರಿಸಲು ಅಸಮರ್ಥನಾದ ಗೋವಿಂದ ವೆಂಗಿಯ ಸಿಂಹಾಸನದ ಹಕ್ಕುದಾರರಲ್ಲೊಬ್ಬ ನಾಗಿದ್ದ ಐದನೆಯ ವಿಜಯಾದಿತ್ಯನಿಗೆ ತನ್ನ ಚಾಳುಕ್ಯ ಸಾಮಂತ ಇಮ್ಮಡಿ ಅರಿಕೇಸರಿ ಆಶ್ರಯವನ್ನಿತ್ತನೆಂಬ ನೆಪದಲ್ಲಿ ಅರಿಕೇಸರಿಯನ್ನು ಕೆಣಕಿದ. ಅವನು ವಿಜಯಾದಿತ್ಯನನ್ನು ಒಪ್ಪಿಸಲು ನಿರಾಕರಿಸಿದ. ಇಮ್ಮಡಿ ಅರಿಕೇಸರಿ ಸಮರ್ಥ ವೀರನಾಗಿದ್ದುದೇನೋ ನಿಜ. ಆದರೆ ದೊಡ್ಡ ಸೈನ್ಯದಿಂದ ಕೂಡಿದ್ದ ಚಕ್ರವರ್ತಿಯನ್ನು ಒಬ್ಬ ಸಾಮಂತ ಎದುರಿಸುವುದು ಅಸಾಮಾನ್ಯ ಕೆಲಸವೆಂದು ಅವನು ತಿಳಿದಿದ್ದ. ಇದೇ ಸಮಯಕ್ಕೆ ಸರಿಯಾಗಿ ಗೋವಿಂದನ ಉಚ್ಚಾಟನೆಗೆ ಗೋವಿಂದನ ಅತ್ಯಾಚಾರ ಮತ್ತು ದುರಾಚಾರಗಳಿಂದ ಕೋಪಗೊಂಡಿದ್ದ ಸಾಮಂತರು ಒಟ್ಟಾಗಿ ಸೇರಿ ಮೂರನೆಯ ಅಮೋಘವರ್ಷನ ಬಳಿಗೆ ಓಡಿ ಗೋವಿಂದನ ದುರಾಡಳಿತದಿಂದ ವಿಮುಕ್ತಗೊಳಿಸುವಂತೆ ಬೇಡಿಕೊಂಡರು. ಒಳ್ಳೆಯ ನಡೆನುಡಿಗಳಿಗೂ ಸಂಸ್ಕೃತಿಗೂ ಮತ್ತು ಪ್ರಜಾವಾತ್ಸಲ್ಯಕ್ಕೂ ಹೆಸರಾಗಿದ್ದ ಅಮೋಘವರ್ಷ ಈ ಸಮಯದಲ್ಲಿ ತ್ರಿಪುರಿಯಲ್ಲಿದ್ದ. ಇಮ್ಮಡಿ ಅರಿಕೇಸರಿ ಗೋವಿಂದನ ಮೇಲೆ ಯುದ್ಧಕ್ಕೆ ಸಿದ್ಧನಾದಾಗ, ಅಮೋಘವರ್ಷನ ಪರವಾಗಿದ್ದ ಅವನ ಅಳಿಯ ಗಂಗ 2ನೆಯ ಬೂತುಗ ಮುಂತಾದ ಉಳಿದ ಸಾಮಂತರಾಜರು ಅರಿಕೇಸರಿಗೆ ತಮ್ಮ ಬೆಂಬಲವನ್ನು ನೀಡಿದರು. ಗೋವಿಂದ ಚೋಳ 1ನೆಯ ಪರಾಂತಕನಿಂದ ನೆರವನ್ನು ಬಯಸಿದರೂ ಸಕಾಲಕ್ಕೆ ಸಿಗಲಿಲ್ಲ. 935ರಲ್ಲಿ ಸಂಭವಿಸಿದ ಯುದ್ಧದಲ್ಲಿ ಅರಿಕೇಸರಿ ಗೋವಿಂದನನ್ನು ಸೋಲಿಸಿದ. ಗೋವಿಂದ ರಣರಂಗದಲ್ಲೇ ಪ್ರಾಣ ಕಳೆದುಕೊಂಡ. ಅನಂತರ ಮೂರನೆಯ ಅಮೋಘವರ್ಷ ಪಟ್ಟಕ್ಕೆ ಬಂದ. ಈ ವಿಚಾರ ಪಂಪನ ವಿಕ್ರಮಾರ್ಜುನವಿಜಯದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ.