ಗೋಲ್ಕೊಂಡ ವಜ್ರಗಳು

ಗೋಲ್ಕೊಂಡದ ವಜ್ರಗಳು ಎಂದರೆ ಗೋಲ್ಕೊಂಡ ಪ್ರದೇಶದಲ್ಲಿ ಗಣಿಗಾರಿಕೆಯಿಂದ ದೊರೆತ ವಜ್ರಗಳು. ಇವು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿವೆ. ಗೋಲ್ಕೊಂಡ ನಗರದ ಬಳಿಯಲ್ಲೇ ವಜ್ರಗಳ ಗಣಿಗಳು ಇಲ್ಲದಿದ್ದರೂ ಬಹುಶಃ ಇದು ವಜ್ರಗಳ ಮಾರುಕಟ್ಟೆಯಾಗಿದ್ದು, ಬೆಲೆಬಾಳುವ ಹಲವಾರು ವಜ್ರಗಳು ಇಲ್ಲಿಂದ ಹೊರಕ್ಕೆ ಹೋಗಿದ್ದಿರಬೇಕು. ಗೋಲ್ಕೊಂಡ ಸಂಸ್ಥಾನದಲ್ಲಿ, ಸುತ್ತಮುತ್ತಲ ಹಲವಾರು ಕಡೆಗಳಲ್ಲಿ ವಜ್ರದ ಗಣಿಗಳಿದ್ದುವು.

ಉತ್ತರದಲ್ಲಿ ಗೋದಾವರಿ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ನದಿಯವರೆಗೆ ಹಬ್ಬಿದ್ದ ಗೋಲ್ಕೊಂಡ ಸಂಸ್ಥಾನದ ದಕ್ಷಿಣ ಜಿಲ್ಲೆಗಳಲ್ಲೇ ಹೆಚ್ಚು ಗಣಿಗಳಿದ್ದವು. ಕೃಷ್ಣಾ ನದಿಯ ಉದ್ದಕ್ಕೂ ಹಲವಾರು ಕಡೆ ಚರಿತ್ರಾರ್ಹವಾದ ಅನೇಕ ವಜ್ರಗಳು ಸಿಕ್ಕಿದ್ದುವು. ಗೋಲ್ಕೊಂಡದ ವಜ್ರಗಣಿಗಳಲ್ಲಿ 60,000 ಜನರನ್ನು ಕೆಲಸಕ್ಕೆ ನೇಮಿಸಿದ್ದರೆಂದು ಭಾರತದಲ್ಲಿ ಸಂಚರಿಸಿದ ಫ್ರೆಂಚ್ ವ್ಯಾಪಾರಿ ಜೆ.ಬಿ.ಟ್ಯಾವರ್ನಿಯರ್ 1665ರಲ್ಲಿ ಬರೆದಿದ್ದಾನೆ.

ಪ್ರಖ್ಯಾತ ವಜ್ರಗಳು ಬದಲಾಯಿಸಿ

  1. ಜಗತ್ಪ್ರಸಿದ್ಧವಾದ ಕೋಹಿನೂರ್ ವಜ್ರವು ಕೃಷ್ಣಾ ನದಿಯ ಪಕ್ಕದಲ್ಲಿದ್ದ ಕೊಲ್ಲೂರು ಗಣಿಗಳಿಂದ (ಗುಂಟೂರು ಜಿಲ್ಲೆ) ಬಂದದ್ದು. ಈ ವಜ್ರ 1739ರ ವರೆಗೂ ಮೊಗಲ್ ಚಕ್ರವರ್ತಿಗಳ ಬಳಿ ಇತ್ತು. ಅನಂತರ ಇದು ಬ್ರಿಟಿಷ್ ಈಸ್ಟ್‌ ಇಂಡಿಯ ಕಂಪನಿಗೆ ಸೇರಿತು. ಆ ಕಂಪನಿ 1849ರಲ್ಲಿ ಇದನ್ನು ವಿಕ್ಟೋರಿಯ ರಾಣಿಗೆ ಒಪ್ಪಿಸಿತು. ಇದರ ತೂಕ ಆಗ ಸುಮಾರು 186 ಕ್ಯಾರಟ್. ಕಟ್ಟಡ ಚನ್ನಾಗಿಲ್ಲದಿದ್ದುದರಿಂದ 1852ರಲ್ಲಿ ಆಮ್ಸ್‌ಟರ್‌ಡ್ಯಾಮಿನಲ್ಲಿ ಇದಕ್ಕೆ ಮತ್ತೆ ಸಾಣೆ ಹಿಡಿಸಲಾಯಿತು. ಇದರ ತೂಕ 105.6 ಕ್ಯಾರಟ್ಗಳಿಗೆ ಇಳಿಯಿತು. ಈಗ ಇದು ಬ್ರಿಟಿಷ್ ರಾಜ ಮನೆತನದ ಹಕ್ಕಿನಲ್ಲಿದ್ದು ವಿಂಡ್ಸರ್ ಅರಮನೆಯಲ್ಲಿ ಇದನ್ನು ಇಡಲಾಗಿದೆ.
  2. ಪಿಟ್ ಅಥವಾ ರೀಜೆಂಟ್ ಈಗ ಪ್ರಪಂಚದಲ್ಲಿರುವ ಶ್ರೇಷ್ಠ ವಜ್ರಗಳಲ್ಲೊಂದು. ಇದು 1701ರಲ್ಲಿ ಕೃಷ್ಣಾ ನದಿಯ ಉತ್ತರಭಾಗದಲ್ಲಿ ಗೋಲ್ಕೊಂಡಕ್ಕೆ 46 ಕಿಮೀ ದೂರದಲ್ಲಿ ಸಿಕ್ಕಿತು. ಅನಂತರ ಇದು ಜಾನ್ಚಂದ್ ಎಂಬ ವರ್ತಕನ ಕೈಸೇರಿತು. ಆಗ ಮದರಾಸಿನ ಗವರ್ನರ್ ಆಗಿದ್ದ ಥಾಮಸ್ಪಿಟ್ ಇದನ್ನು ೩ ಲಕ್ಷ ರೂಪಾಯಿಗಳಿಗೆ ಕೊಂಡ. ಆಗ ಇದರ ತೂಕ 410 ಕ್ಯಾರಟ್. ಇದನ್ನು ಮತ್ತೆ ಸಾಣೆ ಹಿಡಿಸಿ ಮೆರಗು ಕೊಟ್ಟ ಅನಂತರ ಇದರ ತೂಕ 140.64 ಕ್ಯಾರಟುಗಳಿಗೆ ಇಳಿಯಿತು. 1717 ರಲ್ಲಿ ಫ್ರಾನ್ಸಿನ ರೀಜೆಂಟ್ ಆಗಿದ್ದ ಆರ್ಲೀನ್ಸ್‌ನ ಡ್ಯೂಕನಿಗೆ 20 ಲಕ್ಷ ರೂಪಾಯಿಗಳಿಗೆ ಪಿಟ್ ಇದನ್ನು ಮಾರಿದ. ಅನಂತರ ಈ ವಜ್ರಕ್ಕೆ ರೀಜೆಂಟ್ ಎಂಬ ಹೆಸರು ಬಂತು. 1722ರಲ್ಲಿ 15ನೆಯ ಲೂಯಿ ತನ್ನ ಕಿರೀಟಧಾರಣ ಮಹೋತ್ಸವದಲ್ಲಿ ಈ ವಜ್ರವನ್ನು ಧರಿಸಿದ್ದ. ಈಗ ಇದು ಫ್ರೆಂಚ್ ರಾಜರ ಅರಮನೆಯಲ್ಲಿದೆ.
  3. ದಿ ಗ್ರೇಟ್ ಮೊಗಲ್ ವಜ್ರ ಭಾರತದಲ್ಲಿ ಸಿಕ್ಕಿರುವ ವಜ್ರಗಳಲ್ಲೆಲ್ಲ ಅತ್ಯಂತ ದೊಡ್ಡದು. ಕೊಲ್ಲೂರು ಗಣಿಗಳಲ್ಲಿ ಸುಮಾರು 1650ರಲ್ಲಿ ಈ ವಜ್ರ ಸಿಕ್ಕಿತು. 1655 ರಲ್ಲಿ ಶಹಜಹಾನ್ ಚಕ್ರವರ್ತಿಯ ಕೈಸೇರಿತು. ಆಗ ಇದರ ತೂಕ 787.5 ಕ್ಯಾರಟ್; ಸಾಣೆ ಹಿಡಿಸಿದ ಅನಂತರ ಇದು 280 ಕ್ಯಾರಟುಗಳಿಗೆ ಇಳಿಯಿತು. ಟ್ಯಾವರ್ನಿಯರ್ 1665ರಲ್ಲಿ ಇದನ್ನು ಔರಂಗಜೇ಼ಬನ ಅರಮನೆಯಲ್ಲಿ ನೋಡಿದ್ದುದಾಗಿ ಹೇಳಿದ್ದಾನೆ. ಅನಂತರ ಇದು ಎಲ್ಲಿಗೆ ಹೋಯಿತೆಂಬುದನ್ನು ತಿಳಿಯಲಾಗಿಲ್ಲ. ಇದನ್ನು ನಾದಿರ್ ಷಾ ಪರ್ಷಿಯಕ್ಕೆ ಕೊಂಡೊಯ್ದನೆಂದೂ ಈಗಲೂ ಅಲ್ಲೇ ಇರಬೇಕೆಂದೂ ಕೆಲವರ ಊಹೆ. ಈ ವಜ್ರವನ್ನು ಒಡೆದು ಕೋಹಿನೂರ್ ಮತ್ತು ಓರ್ಲಾಫ್ ಎಂಬ ಎರಡು ವಜ್ರಗಳನ್ನು ಪಡೆದರೆಂಬುದು ಇನ್ನು ಕೆಲವರ ಊಹೆ.
  4. ನಿಜಾಂ ಎಂಬ ವಜ್ರವೂ ಗೋಲ್ಕೊಂಡ ಗಣಿಗಳಲ್ಲಿ ಸಿಕ್ಕಿದ್ದು. ಇದರ ಈಗಿನ ತೂಕ 277 ಕ್ಯಾರಟ್. ಇದು ಇನ್ನೂ ಹೆಚ್ಚಿತ್ತೆಂದು ಕೆಲವರ ಅಭಿಪ್ರಾಯ. ಈಗ ಈ ವಜ್ರ ಹೈದರಾಬಾದಿನ ನಿಜಾಂ ವಂಶದವರ ವಶದಲ್ಲಿದೆ. ಇದು ಇನ್ನೂ ದೊಡ್ಡದಾಗಿತ್ತೆಂದೂ 1857ರ ಬಂಡಾಯದ ಕಾಲದಲ್ಲಿ ಇದು ಸ್ವಲ್ಪ ಮುರಿಯಿತೆಂದೂ ಹೇಳುತ್ತಾರೆ.
  5. ಯೂಜಿನೀ ಒಂದು ಸಣ್ಣ ವಜ್ರವಾದರೂ ಸೊಗಸಾದ್ದು. ಇದರ ತೂಕ 51 ಕ್ಯಾರಟ್. ಈಗ ಇದು ಬರೋಡದ ಗಾಯಕವಾಡರ ವಂಶಸ್ಥರ ಬಳಿ ಇದೆ. ಇದರ ಪೂರ್ವ ವೃತ್ತಾಂತ ಸರಿಯಾಗಿ ಗೊತ್ತಿಲ್ಲ. ವಜ್ರಕರೂರ್ ಪ್ರದೇಶದಲ್ಲಿ ಇದು ಒಬ್ಬ ರೈತನಿಗೆ ಸಿಕ್ಕಿತೆಂಬುದು ಒಂದು ಕಥೆ. ತನ್ನ ನೇಗಿಲನ್ನು ಸರಿಮಾಡಿದ ಕಮ್ಮಾರನಿಗೆ ಅವನು ಇದನ್ನು ಕೊಟ್ಟ. ಆತ ಮದರಾಸಿನಲ್ಲಿ ವರ್ತಕನೊಬ್ಬನಿಗೆ 6000 ರೂಪಾಯಿಗಳಿಗೆ ಮಾರಿದ. ಆ ವರ್ತಕನಿಂದ 3ನೆಯ ನೆಪೋಲಿಯನ್ ಕೊಂಡನೆಂದು ಪ್ರತೀತಿ. ಇದು ಮೊದಲು ರಷ್ಯದಲ್ಲಿ 2ನೆಯ ಕ್ಯಾಥರೀನ್ ಬಳಿ ಇತ್ತೆಂದು ಇನ್ನೊಂದು ಕಥೆಯಿದೆ. ಆಕೆ ತನ್ನ ಆಪ್ತನಾದ ಪೊಟೆಮ್ಕಿನನಿಗೆ ಇದನ್ನು ಕೊಟ್ಟಳು. ಕೊನೆಗೆ 3ನೆಯ ನೆಪೋಲಿಯನ್ ಇದನ್ನು ಕೊಂಡು ತನ್ನ ರಾಣಿಯಾದ ಯೂಜಿನೀಗೆ ಅರ್ಪಿಸಿದ. ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಕೊನೆಗೆ ಬರೋಡದ ಗಾಯಕವಾಡರು ಇದನ್ನು ಕೊಂಡರು.
  6.  
    The Hope Diamond
    ದಿ ಹೋಪ್ ಸೊಗಸಾದ ನೀಲಿಬಣ್ಣದ ಕಮಲ. ತೂಕ 112.25 ಕ್ಯಾರಟ್ ಇತ್ತು. ಬಣ್ಣದ ವಜ್ರಗಳಲ್ಲಿ ಇದೇ ದೊಡ್ಡದು. ಇದು ಕೊಲ್ಲೂರು ಗಣಿಗಳಲ್ಲಿ ಸಿಕ್ಕಿತು. 1642ರಲ್ಲಿ ಟ್ಯಾವರ್ನಿಯರ್ ಇದನ್ನು ಕೊಂಡು, 1668ರಲ್ಲಿ 14ನೆಯ ಲೂಯಿಗೆ ಮಾರಿದ. ಸಾಣೆ ಹಿಡಿಸಿದ ಅನಂತರ ಇದರ ತೂಕ 671/8 ಕ್ಯಾರಟಿಗೆ ಇಳಿಯಿತು. 1762ರಿಂದ 1830ರ ವರೆಗೆ ಇದು ಮಾಯವಾಗಿತ್ತು. ಲಂಡನಿನ ಥಾಮಸ್ ಹೋಪ್ ಎಂಬ ಸಾಹುಕಾರ 1830ರಲ್ಲಿ ಇದನ್ನು ಐಲೇಸನ್ ಎಂಬ ವರ್ತಕನಿಂದ 2,70,000 ರೂಪಾಯಿಗಳಿಗೆ ಕೊಂಡ. ಅಂದಿನಿಂದ ಈ ವಜ್ರಕ್ಕೆ ದಿ ಹೋಪ್ ಎಂದು ಹೆಸರು ಬಂತು. ಇದರ ತೂಕ 45.52 ಕ್ಯಾರಟ್ ಇದ್ದುದರಿಂದ ಲೂಯಿಯ ಬಳಿ ಇದ್ದದ್ದು ಈ ವಜ್ರವೋ ಬೇರೆಯೋ ಎಂಬ ಸಂದೇಹ ತಲೆದೋರಿತು. ಇದೇ ಬಣ್ಣದ ಎರಡು ವಜ್ರಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಹೋಪ್ ವಜ್ರದ ಒಡೆದ ಭಾಗಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಮೂರರ ತೂಕ 67 ಕ್ಯಾರಟ್ ಆಗುವುದರಿಂದ ಯಾರೋ ದೊಡ್ಡ ನೀಲಿವಜ್ರವನ್ನು ತುಂಡು ಮಾಡಿರಬೇಕೆಂದು ಊಹಿಸಲಾಗಿದೆ. ಇದು ಹಲವಾರು ಬಾರಿ ಮಾರಾಟವಾಗಿ, ಹೋದ ಕಡೆಯಲ್ಲೆಲ್ಲ ದುರದೃಷ್ಟಕರವೆಂಬ ಹೆಸರು ಸಂಪಾದಿಸಿದ್ದರೂ ಇದರ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಈಗ ಇದು ವಾಷಿಂಗ್ಟನ್ನಿನ ಸ್ಮಿತ್ಸೋನಿಯನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿದೆ.

ಇವಲ್ಲದೆ ಇನ್ನೂ ಹಲವು ಉತ್ತಮ ವಜ್ರಗಳು ಗೋಲ್ಕೊಂಡದ ಗಣಿಗಳಲ್ಲಿ ಸಿಕ್ಕಿದ್ದು, ಅವು ರಾಜರಲ್ಲಿ ಮತ್ತು ಶ್ರೀಮಂತರಲ್ಲಿ ಸೇರಿರಬಹುದು.

ಇವನ್ನೂ ನೋಡಿ ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: