ಗೋರಿಕಾಯಿ
ಗೋರಿಕಾಯಿ Cyamopsis tetragonoloba | |
---|---|
Guar bean cluster | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. tetragonoloba
|
Binomial name | |
Cyamopsis tetragonoloba | |
Synonyms | |
Cyamopsis psoralioides L. |
ಗೋರಿಕಾಯಿ ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಚವಳೀಕಾಯಿ ಪರ್ಯಾಯನಾಮ. ಸಯಮಾಪ್ಸಿಸ್ ಟೆಟ್ರಗೋನೊಲೋಬ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್ ಎಂದು ಕರೆಯಲಾಗುತ್ತದೆ. ಗೋರಿಕಾಯಿ ಭಾರತದ ಮೂಲವಾಸಿ ಎಂದು ಹೇಳಲಾಗಿದೆ. ಕಾಡುಗಿಡವಾಗಿ ಇದು ಎಲ್ಲೂ ಬೆಳೆಯದು. ಭಾರತಾದ್ಯಂತ ಇದನ್ನು ಕಾಯಿಗಳಿಗಾಗಿ, ಬೀಜಕ್ಕಾಗಿ ಬೆಳೆಸಲಾಗುತ್ತಿದೆ.
ಪೋಷಕಾಂಶಗಳು
ಬದಲಾಯಿಸಿ೧೦೦ ಗ್ರಾಂ ಗೋರಿಕಾಯಿಯಲ್ಲಿ ದೊರಕುವ ಪೋಷಕಾಂಶಗಳು
ತೇವಾಂಶ | ೮೧.೦ | ಗ್ರಾಂ |
ಸಸಾರಜನಕ | ೩.೯ | ಗ್ರಾಂ |
ಮೇದಸ್ಸು | ೦.೪ | ಗ್ರಾಂ |
ಖನಿಜಾಂಶ | ೩.೨ | ಗ್ರಾಂ |
ನಾರಿನಾಂಶ | ೧.೪ | ಗ್ರಾಂ |
ಕಾರ್ಬೋಹೈಡ್ರೇಟ್ | ೯ | ಗ್ರಾಂ |
ಕ್ಯಾಲ್ಸಿಯಂ | ೧೨೯ | ಮಿಲಿಗ್ರಾಂ |
ಫಾಸ್ಫರಸ್ | ೪೬ | ಮಿಲಿಗ್ರಾಂ |
ಕಬ್ಬಿಣ | ೪.೫ | ಮಿಲಿಗ್ರಾಂ |
ಥಯಾಮಿನ್ | ೦.೦೯ | ಮಿಲಿಗ್ರಾಂ |
ರೈಬೋಫ್ಲೇವಿನ್ | ೦.೦೩ | ಮಿಲಿಗ್ರಾಂ |
ಎ- ಜೀವಸತ್ವ | ೫೦ | ಐ. ಯು. |
ಸಿ- ಜೀವಸತ್ವ | ೨೩ | ಎಂ. ಸಿ. ಜಿ. |
ಪ್ರಬೇಧಗಳು
ಬದಲಾಯಿಸಿಗೋರಿಕಾಯಿ ಗಿಡದಲ್ಲಿ ಕುಳ್ಳು ಮತ್ತು ದೈತ್ಯ ಎಂಬ ಎರಡು ಬಗೆಗಳಿವೆ. ಎರಡೂ ನೆಟ್ಟಗೆ ಬೆಳೆಯುವ ಏಕವಾರ್ಷಿಕ ಸಸ್ಯಗಳು. ಕುಳ್ಳು ಬಗೆಯದು 60-90 ಸೆಂಮೀ ಎತ್ತರಕ್ಕೆ ಬೆಳೆದರೆ ದೈತ್ಯಬಗೆಯದು 2.5-3 ಮೀ ಎತ್ತರಕ್ಕೆ ಬೆಳೆಯುತ್ತದೆ.
ಲಕ್ಷಣಗಳು
ಬದಲಾಯಿಸಿಕಾಂಡ ಮತ್ತು ಎಲೆಗಳ ಮೇಲೆ ನಸು ಉದಾಬಣ್ಣದ ಕೂದಲುಗಳಿವೆ. ಗಿಡವನ್ನು ಮುಟ್ಟಿದರೆ ನವೆ ಉಂಟಾಗುವುದಕ್ಕೆ ಕಾರಣ ಈ ಕೂದಲುಗಳು. ಎಲೆಗಳು ಸಂಯುಕ್ತ ಬಗೆಯವು; ಇವು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ; ಪ್ರತಿ ಎಲೆಯಲ್ಲಿ 3 ಕಿರುಎಲೆಗಳಿವೆ. ಹೂಗಳು ಎಲೆಗಳ ಕಂಕುಳುಗಳಲ್ಲಿರುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿಗಳು ಪಾಡ್ ಮಾದರಿಯವು.
ವ್ಯವಸಾಯ
ಬದಲಾಯಿಸಿಗಿಡವನ್ನು ಸಾಮಾನ್ಯವಾಗಿ ಎಲ್ಲ ಬಗೆಯ ಮಣ್ಣುಗಳಲ್ಲೂ ಬೆಳೆಸಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದದ್ದು. ಜೂನ್-ಜುಲೈ ಇಲ್ಲವೆ ಜನವರಿ-ಫೆಬ್ರುವರಿ ತಿಂಗಳುಗಳು ಬೇಸಾಯಕ್ಕೆ ಸೂಕ್ತ. ಎಕರೆಗೆ 15-20 ಗಾಡಿ ಕೊಟ್ಟಿಗೆ ಗೊಬ್ಬರ, 125 ಕಿಗ್ರಾಂ ಅಮೋನಿಯಂ ಸಲ್ಫೇಟ್, 250 ಕಿಗ್ರಾಂ ಸೂಪರ್ಫಾಸ್ಫೇಟ್, 60 ಕಿಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ಗಳನ್ನು ಹಾಕಿ, 5-7 ದಿವಸಗಳಿಗೊಮ್ಮೆ ನೀರನ್ನು ಹಾಯಿಸುತ್ತಿರಬೇಕು. ಬೀಜ ಬಿತ್ತಿದ 2.5 ತಿಂಗಳ ಅನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಇಳುವರಿ ಎಕರೆಗೆ 2,500 ರಿಂದ 3,500 ಕಿಗ್ರಾಂಗಳಷ್ಟು ಇರುತ್ತದೆ.
ಗಿಡಕ್ಕೆ ತಗಲುವ ರೋಗಗಳಲ್ಲಿ ಬ್ಯಾಕ್ಟೀರಿಯಲ್ ಬ್ಲೈಟ್ ಎಂಬುದು ಬಹಳ ಮುಖ್ಯವಾದದ್ದು. ಮೊದಲು ಎಲೆಗಳ ಮೇಲೆ ಬಹಳ ಸಣ್ಣ, ಪಾರದರ್ಶಕ, ನೀರುಗೂಡಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ನಾಳದ ಒಳಗಿರುವ ಕಣ ಸಮೂಹ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸತ್ತುಹೋಗುತ್ತದೆ. ಕ್ರಮೇಣ ರೋಗ ಮುಂದುವರಿದು ಕಾಂಡಕ್ಕೂ ಅಂಟುತ್ತದೆ. ಕೊನೆಗೆ ಪೂರ್ತಿ ಗಿಡವೇ ಸತ್ತುಹೋಗುತ್ತದೆ. ಈ ರೋಗ ಬೀಜ ಮತ್ತು ಮಣ್ಣಿನಿಂದ ಪ್ರಸಾರವಾಗುತ್ತದೆ. ರೋಗರಹಿತ ಬೀಜಗಳನ್ನು ಉಪಯೋಗಿಸುವುದು, ಸೀರಸಾನ್ ಅಥವಾ ಆಗ್ರಸಾನ್ ಎಂಬ ಔಷಧಿಗಳಿಂದ ಬೀಜಗಳನ್ನು ತೊಳೆಯುವುದು ಮತ್ತು ರೋಗ ನಿರೋಧಕ ಜಾತಿಗಳನ್ನೇ ಬಿತ್ತಲು ಉಪಯೋಗಿಸುವುದು-ಇವು ರೋಗನಿಯಂತ್ರಣದ ಕೆಲವು ಕ್ರಮಗಳು.
ಉಪಯೋಗಗಳು
ಬದಲಾಯಿಸಿಗೋರಿಕಾಯಿ ತರಕಾರಿ ಮಾತ್ರವಾಗಿ ಅಲ್ಲದೆ ಇನ್ನಿತರ ಕಾರಣಗಳಿಂದಾಗಿಯೂ ಉಪಯುಕ್ತವೆನಿಸಿದೆ. ಇದು ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಮೇವು. ಬೀಜಗಳನ್ನು ಬೇಯಿಸಿ, ಕೊಂಚ ಸಾಸಿವೆ ಎಣ್ಣೆಯೊಂದಿಗೆ ಸೇರಿಸಿ ದನಗಳಿಗೆ ತಿನ್ನಿಸುವುದುಂಟು. ಅಲ್ಲದೆ ಬೀಜಗಳಿಂದ ಒಂದು ರೀತಿಯ ಗೋಂದನ್ನು ತಯಾರಿಸಿ ಕಾಗದ ಮತ್ತು ಬಟ್ಟೆ ಕೈಗಾರಿಕೆಗಳಲ್ಲಿ ಉತ್ಪನ್ನಗಳಿಗೆ ಬಲವನ್ನು ಕೊಡುವ ವಸ್ತುವಾಗಿ ಬಳಸುತ್ತಾರೆ. ಹದವಾಗಿ ಬೆಳೆದ ಕಾಯಿಗಳನ್ನು ಸುಗ್ಗಿಯಲ್ಲಿ ಕಿತ್ತು ಒಣಗಿಸಿಟ್ಟುಕೊಂಡು ಬೇಕಾದಾಗ ತರಕಾರಿಯಾಗಿ ಬಳಸುತ್ತಾರಲ್ಲದೆ ಕರಿದು ಬಾಳಕ ಮಾಡುವುದೂ ಉಂಟು.
ಆರೋಗ್ಯ ಪ್ರಯೋಜನಗಳು
ಬದಲಾಯಿಸಿಗರ್ಭಿಣಿಯರಿಗೆ
ಬದಲಾಯಿಸಿ- ಗರ್ಭಿಣಿಯರಿಗೆ ಗರ್ಭಾವಸ್ಥೆಯ ತಮ್ಮ ಮೊದಲ ತ್ರೈಮಾಸಿಕದಲ್ಲಿ ಸ್ತ್ರೀ ರೋಗ ತಜ್ಞರು ಗೋರಿಕಾಯಿ ರೀತಿಯ ಹಲವು ಬಗೆಯ ತರಕಾರಿಗಳನ್ನು ತಿನ್ನಲು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಗರ್ಭಿಣಿಯರು ದೇಹಕ್ಕೆ ಅಗತ್ಯವಾಗಿ ಬೇಕಾದ ಫೋಲೇಟ್ ಅಂಶ ಮತ್ತು ಕಬ್ಬಿಣದ ಅಂಶ ಅಡಗಿದೆ.
- ಇದು ತಾಯಿಯ ಆರೋಗ್ಯಕ್ಕೂ ಮತ್ತು ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಭ್ರೂಣದ ಅಭಿವೃದ್ಧಿಗೂ ತುಂಬಾ ಸಹಕಾರಿ. ಜೊತೆಗೆ ಗರ್ಭಿಣಿಯರಿಗೆ ಮಲಬದ್ಧತೆ ಸಮಸ್ಯೆ ಆಗಾಗ ಕಾಡುವುದ ರಿಂದ ನಾರಿನ ಅಂಶ ಹೆಚ್ಚಿರುವ ಗೋರಿಕಾಯಿ ಸೇವನೆ ಗರ್ಭಾವಸ್ಥೆಯಲ್ಲಿ ಅತ್ಯಗತ್ಯ ಎಂದು ಹೇಳಬಹುದು.
ಜೀರ್ಣಾಂಗದ ಆರೋಗ್ಯ ಮತ್ತು ಮೂತ್ರಪಿಂಡಗಳ ಆರೋಗ್ಯ
ಬದಲಾಯಿಸಿ- ನಾವು ಸೇವಿಸಿದ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ನಮ್ಮ ದೇಹಕ್ಕೆ ಸರಿಯಾಗಿ ಸಿಗಬೇಕೆಂದರೆ ಮೊದಲಿಗೆ ನಮ್ಮ ಜೀರ್ಣಾಂಗದಲ್ಲಿ ಆಹಾರ ಚೆನ್ನಾಗಿ ಜೀರ್ಣವಾಗಿ ಉಳಿದಂತಹ ತ್ಯಾಜ್ಯ ಮೂತ್ರ ಪಿಂಡಗಳ ಮೂಲಕ ದೇಹದಿಂದ ಹೊರ ಹೋಗಬೇಕು.
- ಇದು ಸರಿಯಾದ ಆಹಾರ ಜೀರ್ಣ ಕ್ರಿಯೆಯ ಪದ್ಧತಿ. ಆದರೆ ಕೆಲವೊಮ್ಮೆ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ತ್ಯಾಜ್ಯಗಳು ಶೇಖರಣೆಯಾಗಿ ನಾವು ನಂತರ ಸೇವಿಸುವ ಯಾವುದೇ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣತೆಗೆ ಸಮಸ್ಯೆಯ ಜೊತೆಗೆ ಮಲಬದ್ಧತೆ ಉಂಟಾಗುತ್ತದೆ.
- ಇದರಿಂದ ಸಂಪೂರ್ಣ ಆರೋಗ್ಯ ಹದಗೆಡುತ್ತದೆ. ಆದರೆ ಗೋರಿಕಾಯಿಯಲ್ಲಿ ನಾರಿನ ಅಂಶ ಇರುವುದರಿಂದ ನಮ್ಮ ಇಂತಹ ಹಲವು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ.
ಹೃದಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿ
ಬದಲಾಯಿಸಿ- ಗೋರಿಕಾಯಿಯಲ್ಲಿ ನಾರಿನ ಅಂಶ ಅಧಿಕವಾಗಿದೆ ಇದು ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ.
- ಜೊತೆಗೆ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣ ಅಂಶ ದೇಹದಲ್ಲಿ ರಕ್ತ ಸಂಚಾರವನ್ನು ಎಲ್ಲಾ ಅಂಗಾಂಗಗಳಿಗೆ ಸರಾಗವಾಗಿ ಹರಿಯುವಂತೆ ಮಾಡಿ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಿ ಹೃದಯ ರಕ್ತ ನಾಳದ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.[೧]
- ಹೃದಯದ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿರುವವರು ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಹೊಂದಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಗೋರಿಕಾಯಿಯನ್ನು ಸೇರಿಸಿಕೊಳ್ಳುವುದು ಒಳ್ಳೆಯದು.
ಮೂಳೆಗಳು ಸದೃಢವಾಗಿರುತ್ತವೆ
ಬದಲಾಯಿಸಿಗೋರಿಕಾಯಿಯಲ್ಲಿ ಪ್ರೋಟೀನ್ ಅಂಶ, ಕ್ಯಾಲ್ಶಿಯಂ ಅಂಶ ಮತ್ತು ಫಾಸ್ಪರಸ್ ಅಂಶ ಸಕಾರಾತ್ಮಕ ಪ್ರಮಾಣದಲ್ಲಿ ಇರುವ ಕಾರಣ ನಿಮ್ಮ ಮೂಳೆಗಳಿಗೆ ಈ ಪೌಷ್ಟಿಕ ಸತ್ವಗಳನ್ನು ಒದಗಿಸುವ ಮೂಲಕ ಗೋರಿಕಾಯಿ ನಿಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.[೨]
ಉಲ್ಲೇಖಗಳು
ಬದಲಾಯಿಸಿ- ↑ "Benefits Of Guar Beans: ಈ ಮೂರು ಅದ್ಬುತ ಪ್ರಯೋಜನಗಳಿಗಾಗಿ ತಿನ್ನಲೇ ಬೇಕು ಗೋರಿಕಾಯಿ". Zee News Kannada. 27 September 2021. Retrieved 31 August 2024.
- ↑ "ಗೋರಿಕಾಯಿಯ ಪ್ರಯೋಜನಗಳ ಬಗ್ಗೆ ತಿಳಿದ್ರೆ, ಖಂಡಿತ ಅಚ್ಚರಿಪಡುವಿರಿ!". Vijay Karnataka. Retrieved 31 August 2024.
- ↑ "Gorikai palya recipe | How to make cluster beans stir fry | Chavalikai palya | Gawar ki sabzi".
- ↑ "Cluster Beans Chutney Recipe / Gorikayi Chutney / Gawar Ki Chutney". 6 August 2015.
- ↑ "Gorikayi Bhaat | Cluster Beans Bhaat | Chavlikayi Bhaat". 31 October 2016.