ಗುಪ್ತ ರಾಜವಂಶದ ಮೂಲ

ಗುಪ್ತ ರಾಜವಂಶದ ಇತಿಹಾಸ ಕ್ರಿ.ಶ. ೨೪೦ರ ಸುಮಾರು ಶ್ರೀ ಗುಪ್ತನಿಂದ ಅದರ ಸ್ಥಾಪನೆಯೊಂದಿಗೆ ಆರಂಭವಾಯಿತು, ಆದರೆ ದಿನಾಂಕಗಳು ಸುವ್ಯವಸ್ಥಿತವಾಗಿಲ್ಲ. ಈ ಸಾಮ್ರಾಜ್ಯವು ಉತ್ತರ ಭಾರತ ಮತ್ತು ಪೂರ್ವ ಪಾಕಿಸ್ತಾನದ ಬಹುತೇಕ ಭಾಗ, ಗುಜರಾತ್ ಮತ್ತು ರಾಜಸ್ಥಾನದ ಭಾಗಗಳು ಮತ್ತು ಈಗಿನ ಪೂರ್ವ ಭಾರತ ಮತ್ತು ಬಾಂಗ್ಲಾದೇಶವನ್ನು ಆವರಿಸಿತ್ತು. ಪಾಟಲಿಪುತ್ರ ಗುಪ್ತರ ರಾಜಧಾನಿಯಾಗಿತ್ತು.

ಗುಪ್ತ ರಾಜವಂಶವು ಸುಮಾರು ಕ್ರಿ.ಶ. ೩೨೦ರಲ್ಲಿ ಸಿಂಹಾಸನವೇರಿ ಕ್ರಿ.ಶ. ೫೫೦ರ ವರೆಗೆ ಮುಂದುವರಿದು, ಕುಷಾಣ ಸಾಮ್ರಾಜ್ಯದ ಪತನದ ನಂತರ ಸ್ವತಂತ್ರವಾಗಿದ್ದ ಸ್ಥಳೀಯ ಹಾಗೂ ಪ್ರಾಂತೀಯ ಶಕ್ತಿಗಳನ್ನು ಸೋಲಿಸಿ ಉತ್ತರ ಭಾರತವನ್ನು ಏಕೀಕರಿಸಿತು. ಗುಪ್ತ ಸಾಮ್ರಾಜ್ಯದ ಅವಧಿಯನ್ನು ಭಾರತದ ಸುವರ್ಣ ಯುಗವೆಂದು ಉಲ್ಲೇಖಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಶಿಲ್ಪಕಲೆ ಮತ್ತು ಶಿಕ್ಷಣವನ್ನು ಅಂತರ್ನಿಹಿತಗೊಳಿಸಲಾಯಿತು.

ಗುಪ್ತರ ಮೂಲ ತಾಯಿ ನಾಡಿನ ಬಗ್ಗೆ ವಿರುದ್ಧ ಸಿದ್ಧಾಂತಗಳಿವೆ. ರಾಯ್‍ಚೌಧರಿ ಪ್ರಕಾರ, ಗುಪ್ತರು ಈಗ ಬಾಂಗ್ಲಾದೇಶದ ರಂಗ್‍ಪುರ್ ಹಾಗೂ ರಾಜ್‍ಷಾಹಿ ವಿಭಾಗದ ಭಾಗವಾಗಿರುವ ವರೇಂದ್ರಿ ಪ್ರದೇಶದಿಂದ ಮೂಲ ಹೊಂದಿದರು. ಮತ್ತೊಂದೆಡೆ ಸುತ್ತಲಿನ ಮುರ್ಷೀದಾಬಾದ್ ಪ್ರದೇಶ ಗುಪ್ತರ ಮೂಲ ನಾಡು ಎಂದು ಗಾಂಗೂಲಿ ಪರಿಗಣಿಸುತ್ತಾರೆ.[೧]

ಗುಪ್ತರ ವಂಶಾವಳಿ ಬದಲಾಯಿಸಿ

ಗುಪ್ತರ ವಂಶಾವಳಿ ವಿವಾದದಲ್ಲಿ ಸಿಲುಕಿದೆ ಮತ್ತು ಅಸ್ಪಷ್ಟವಾಗಿದೆ. ಶುಂಗ ಮತ್ತು ಸಾತವಾಹನ ದಾಖಲೆಗಳು ಗುಪ್ತ ಎಂಬ ಹೆಸರನ್ನು ಉಲ್ಲೇಖಿಸಿವೆ ಆದರೆ ೪ನೇ ಶತಮಾನದ ಗುಪ್ತರೊಂದಿಗೆ ಸಂಬಂಧ ಹೊಂದಿಲ್ಲ. ಅನೇಕ ಇತಿಹಾಸಕಾರರ ಪ್ರಕಾರ ಗುಪ್ತ ರಾಜವಂಶವು ವೈಶ್ಯ ರಾಜವಂಶವಾಗಿತ್ತು. ಇತಿಹಾಸಕಾರ ಶರ್ಮಾ ಪ್ರಕಾರ, ಗುಪ್ತರು ದಬ್ಬಾಳಿಕೆಯ ಆಡಳಿತಗಾರರ ವಿರುದ್ಧದ ಪ್ರತ್ರಿಕ್ರಿಯೆಯಾಗಿ ಕಾಣಿಸಿಕೊಂಡಿರಬಹುದಾದ ವೈಶ್ಯ ವಂಶದವರಾಗಿದ್ದರು.[೨] ಗುಪ್ತರ ನಾಣ್ಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಇತಿಹಾಸಕಾರ ಮತ್ತು ಪುರಾತತ್ವಶಾಸ್ತ್ರಜ್ಞ ಆಲ್ಟೇಕರ್ ಕೂಡ, ಪ್ರಾಚೀನ ಭಾರತೀಯ ನ್ಯಾಯ ಪಠ್ಯಗಳನ್ನು ಆಧರಿಸಿ, ಗುಪ್ತರ ಜಾತಿ ವೈಶ್ಯ ಎಂದು ಪರಿಗಣಿಸುತ್ತಾರೆ. ಈ ಪಠ್ಯಗಳು ಗುಪ್ತ ಹೆಸರಿನಿಂದ ಕೊನೆಗೊಳ್ಳುವವರು ವೈಶ್ಯ ಜಾತಿಯ ಸದಸ್ಯರೆಂದು ನಿಗದಿ ಮಾಡುತ್ತವೆ. ಪ್ರಸಿದ್ಧ ಕಲಾ ಇತಿಹಾಸಕಾರ ಅಗರವಾಲಾರ ಅಭಿಪ್ರಾಯದಲ್ಲಿ, ಗುಪ್ತರು ವೈಶ್ಯ ಸಮುದಾಯದವರು. ಗುಪ್ತರು ಧಾರಣ ಗೋತ್ರಕ್ಕೆ ಸೇರಿದವರು ಎಂದು ಕೂಡ ಇತಿಹಾಸಕಾರ ರಾಯ್‍ಚೌಧರಿ ಭಾವಿಸುತ್ತಾರೆ. ಇವರ ಪ್ರಕಾರ, ಗುಪ್ತರು ಪುಷ್ಯಮಿತ್ರ ಶುಂಗನ ಪುತ್ರನ ಹೆಂಡತಿ ರಾಣಿ ಧಾರಿಣಿಗೆ ಸಂಬಂಧಿಸಿದ್ದರು. ಎರಡನೇ ಚಂದ್ರಗುಪ್ತನ ಮಗಳು ಪ್ರಭಾವತಿಗುಪ್ತಳ ರಿದ್ಧಪುರ ತಾಮ್ರಫಲಕ ಶಾಸನವನ್ನು ಆಧರಿಸಿ ರಾಯ್‍ಚೌಧರಿ ಗುಪ್ತರ ವಂಶಾವಳಿ ಬಗ್ಗೆ ಈ ಸಿದ್ಧಾಂತವನ್ನು ಊಹಿಸಿದರು. ಅವಳ ದಾಖಲೆಗಳಲ್ಲಿ ಅವಳು ಧಾರಣ ಗೋತ್ರದ ವಂಶಜೆ ಎಂದು ಸಾಧಿಸಿದಳು.

ಉಲ್ಲೇಖಗಳು ಬದಲಾಯಿಸಿ

  1. "Gupta Rule". banglapedia.org.
  2. "Early Medieval Indian Society (pb)". google.co.in.