ಮಹರ್ಷಿ ವೇದವ್ಯಾಸರಿಂದ ವಿರಚಿತಗೊಂಡ, ದೇವನಾಗರಿ ಲಿಪಿಯಲ್ಲಿರುವ, ಶ್ರೀಕೃಷ್ಣ-ಅರ್ಜುನರ ಸಂವಾದ ರೂಪದ ಶ್ರೀಮದ್ಭಗವದ್ಗೀತೆಯು ಭಾರತದ ಹಲವಾರು ಭಾಷೆಗಳಿಗಲ್ಲದೆಯೆ ಪ್ರಪಂಚದ ಅದೆಷ್ಟೋ ಭಾಷೆಗಳಿಗೆ ಅನುವಾದಗೊಂಡಿದೆ. ಶ್ರೀಮದ್ಭಗವದ್ಗೀತೆಯು ಸಂಕಷ್ಟಗಳಿಂದ ಪಾರಾಗಲು, ಸಾಧನೆಯತ್ತ ಪ್ರೇರೇಪಿಸಲು ಸಹಕಾರಿ ಎಂದು ಭಾರತೀಯ ಹಾಗೂ ಪಾಶ್ಚಾತ್ಯ ಚಿಂತಕರು ಹೇಳಿರುವರು.

ಗೀತಾಪರಿವಾರದ ಜನನ

ಬದಲಾಯಿಸಿ

ರಾಮಜನ್ಮಭೂಮಿ ಟ್ರಸ್ಟ್ ನ ಕೋಶಾಧಿಕಾರಿಯಾಗಿರುವ, ಮಹರ್ಷಿ ವೇದವ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಶ್ರೀ ಗೋವಿಂದದೇವ್ ಗಿರಿಜೀ ಮಹಾರಾಜ್ ಎಂಬವರು ೧೯೮೬ ರಲ್ಲಿ ಮಹಾರಾಷ್ಟ್ರದ ಸಂಗಮನೇರ್ ಎಂಬಲ್ಲಿ ಗೀತಾಪರಿವಾರ ವನ್ನು ಸ್ಥಾಪಿಸಿದರು. ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುವುದು ಮುಖ್ಯ ಉದ್ದೇಶವೂ ಆಗಿತ್ತು. ಇದು ಸರಕಾರೇತರ ಸಂಸ್ಥೆಯಾಗಿದೆ. ಪ್ರಸ್ತುತ ಶ್ರೀ ಗೋವಿಂದದೇವ್ ಗಿರಿಜೀ ಮಹಾರಾಜ್ ರವರು ಅಧ್ಯಕ್ಷರಾಗಿ, ಡಾ. ಸಂಜಯ್ ಓಂಕಾರ್ ನಾಥ್ ಮಾಲ್ಪಾಣಿಯವರು ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ, ಡಾ.ಆಶುತೋಷ್ ಗೋಯಲ್ ಅವರು ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೧]

 
ಗೀತಾಪರಿವಾರದ ಸಂಸ್ಥಾಪಕರು

ಆನ್ಲೈನ್ ತರಗತಿಗಳ ಆರಂಭ

ಬದಲಾಯಿಸಿ

೨೦೨೦ ರಲ್ಲಿ ಕೋವಿಡ್ ಆರಂಭವಾಗಿ ಜನರೆಲ್ಲರೂ ಗೃಹಬಂಧನದಲ್ಲಿರುವಂತೆ, ಮನೆಯಾಚೆ ಹೊರಹೋಗುವುದಕ್ಕೆ ಅಸಾಧ್ಯವಾದಾಗ,ಗೀತಾಪರಿವಾರದ ಸ್ವಯಂಸೇವಕರು ಜನರಿಗೆ ಆನ್ಲೈನ್ ಮೂಲಕ ಭಗವದ್ಗೀತೆ ಯನ್ನು ಕಲಿಸುವತ್ತ ಯೋಚಿಸಿದರು. ಅದಕ್ಕಾಗಿ ಒಂದು ಅಂತರಜಾಲ ತಾಣವನ್ನು( website) ಪ್ರಾರಂಭಿಸಿ, ೨೦೨೦ ರ ಜೂನ್ ತಿಂಗಳಿನಲ್ಲಿ ಆನ್ಲೈನ್ ಮೂಲಕ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆಯೆಂದು ಪ್ರಕಟಿಸಿದಾಗ ಉತ್ತಮ ರೀತಿಯ ಸ್ಪಂದನೆ ದೊರಕಿತು. ಸ್ವಯಂಸೇವಕರು ಹಾಗೂ ಸಂಸ್ಕೃತ ಶಿಕ್ಷಕರ ನೆರವಿನೊಂದಿಗೆ ಮೊದಲ ಆನ್ಲೈನ್ ತರಗತಿಯೂ ಆರಂಭಗೊಂಡಿತು. ಸುಮಾರು ೨೫೦೦ ಉತ್ಸಾಹಿಗಳು ನೋಂದಾಯಿಸಿಕೊಂಡಿದ್ದರು. ಸರಳತೆ, ಸ್ಪಷ್ಟತೆ, ಉತ್ತಮ ರೀತಿಯ ಕಲಿಸುವಿಕೆಯಿಂದಾಗಿ ಇನ್ನಷ್ಟು ತರಗತಿಗಳ ಆರಂಭಕ್ಕೆ ಬೇಡಿಕೆ ಬಂದಿತು. ಆನ್ಲೈನ್ ಮೂಲಕವಾದುದರಿಂದ ಭಾರತ ದಲ್ಲಷ್ಟೇ ಅಲ್ಲದೆ ಹೊರದೇಶಗಳಲ್ಲಿದ್ದ ಭಾರತೀಯರೂ ಭಗವದ್ಗೀತೆಯನ್ನು ಕಲಿಯುವಲ್ಲಿ ಆಸಕ್ತಿ ತೋರಿಸಿದರು. ಹಿಂದಿ ಭಾಷೆ ಹಾಗೂ ಇಂಗ್ಲೀಷ್ ಭಾಷೆಗಳಲ್ಲಷ್ಟೇ ಆರಂಭಗೊಂಡಿದ್ದ ತರಗತಿಗಳು, ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲೂ ಆರಂಭಗೊಂಡವು.

ಕನ್ನಡದ ತರಗತಿ ಪ್ರಥಮವಾಗಿ ಆರಂಭಗೊಂಡದ್ದು ೨೦೨೦ ರ ನವಂಬರ ೫ ರಂದು ಸುಮಾರು ೪೦ ಮಂದಿ ಉತ್ಸಾಹಿಗಳೊಂದಿಗೆ. ಆರಂಭದಲ್ಲಿ, ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿನ ತರಗತಿಗಳು ಕಡಿಮೆ ಎನ್ನುವಂತಿದ್ದವು. ಗೀತಾಪರಿವಾರದಲ್ಲಿ ಸ್ವಯಂಸೇವಕರಾಗಿದ್ದ, ಕರ್ನಾಟಕ-ಹೊರರಾಜ್ಯ-ಹೊರದೇಶಗಳಲ್ಲಿ ವಾಸಿಸುತ್ತಿದ್ದ ಕನ್ನಡಿಗರು ಸೇರಿಕೊಂಡು ಕರ್ನಾಟಕ ಗೀತಾಪರಿವಾರ ವೆಂಬ ವಾಟ್ಸಾಪ್ ಗ್ರೂಪ್ (whatsapp) ಮಾಡಿಕೊಂಡು ಕನ್ನಡಿಗರಿಗೆ ಗೀತಾಪರಿವಾರವನ್ನು ಪರಿಚಯಿಸುವ ಅವಿರತ ಪ್ರಯತ್ನದ ಫಲವಾಗಿ ಕನ್ನಡದ ತರಗತಿಗಳು ಹೆಚ್ಚಿದವು.[]

ಗೀತಾಪರಿವಾರಕ್ಕೆ ಸೇರ್ಪಡೆ

ಬದಲಾಯಿಸಿ

learngeeta.com ಮೂಲಕ ಗೀತಾಪರಿವಾರವನ್ನು ಸೇರಿಕೊಳ್ಳಬಹುದು. ಇಲ್ಲಿ ಸೇರ್ಪಡೆಗೊಂಡ ನಂತರ PRN (Participant Registration Number) ಸಿಗುತ್ತದೆ. ನಮ್ಮ ಹೆಸರಿನೊಂದಿಗೆ ನಮ್ಮ ಗುರುತಿನ ಸೂಚಕ. ಇದು ಗೀತಾಪರಿವಾರದಲ್ಲಿನ ಎಲ್ಲಾ ಕಲಿಕೆಗಾಗಲೀ, ಸೇವೆ ನೀಡುವುದಕ್ಕಾಗಲೀ ಅಗತ್ಯವಾಗಿರುತ್ತದೆ.

learngeeta.com ನ ಮೂಲಕ ಒಳಹೊಕ್ಕಾಗ ಅಲ್ಲಿ ಬೇಕಾದ ಭಾಷೆ, ಸಮಯಗಳನ್ನು ಆಯ್ದುಕೊಳ್ಳುವ ಅವಕಾಶಗಳು ಕಾಣಸಿಗುತ್ತವೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆ, ಮರಾಠಿ, ಗುಜರಾತಿ ಭಾಷೆ, ತೆಲುಗು, ಬಾಂಗ್ಲಾ (ಬಙ್ಗ), ಒಡಿಯಾ, ತಮಿಳು ಮಲಯಾಳಂ, ಅಸ್ಸಾಮಿ, ನೇಪಾಳಿ ಭಾಷೆ ಹಾಗೂ ಸಿಂಧಿ ಭಾಷೆ....ಈ ೧೩ ಭಾಷೆಗಳಲ್ಲಿ ಬೆಳಗ್ಗೆ ೫ ರಿಂದ ರಾತ್ರೆ ೨ರ ತನಕ ತರಗತಿಗಳು ಸಾಗುತ್ತವೆ. Zoom meeting ಮೂಲಕ ನಡೆಯುವ ೪೦ ನಿಮಿಷಗಳ ತರಗತಿಯಿದು. ಭಗವದ್ಗೀತೆಯ ೧೮ ಅಧ್ಯಾಯಗಳ ೭೦೦ ಶ್ಲೋಕಗಳನ್ನು ನಾಲ್ಕು ಸ್ತರಗಳಲ್ಲಿ ಕಲಿಸಿಕೊಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದ ತನಕ ವಾರದಲ್ಲಿ ಐದು ದಿನಗಳ ತರಗತಿ. ಆನ್ಲೈನ್ ಮೂಲಕ ತರಗತಿಗಳು ಸಾಗುತ್ತವೆಯಾದುದರಿಂದ ಆಯಾಯ ತರಗತಿಗಳಿಗೆ Whatsapp group ಗಳನ್ನು ಮಾಡಿಕೊಂಡು, ತರಗತಿಗಳ ಮಾಹಿತಿಗಳನ್ನು ಈ ಗುಂಪುಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಈ ಗುಂಪಿನಲ್ಲಿ ಸಮೂಹ ಸಂಯೋಜಕರು (Batch coordinator), ಗುಂಪು ಸಂಯೋಜಕರು ( Group coordinator), ಪ್ರಶಿಕ್ಷಕರು (Trainer), ತಾಂತ್ರಿಕ ಸಹಾಯಕರು (Technical assistant), ಹಾಗೂ ಪ್ರಶಿಕ್ಷಣಾರ್ಥಿಗಳು ( ಸಾಧಕರು) ಇರುತ್ತಾರೆ.

ಕಲಿಕಾ ಹಂತ/ವಿಧಾನಗಳು

ಬದಲಾಯಿಸಿ
  1. ಸ್ತರ೧ ( Level 1) ಇದು ಪ್ರವೇಶ ಹಂತ. ೨೦ ಪಾಠದ ತರಗತಿಗಳ ಸುಮಾರು ಒಂದು ತಿಂಗಳ ಅವಧಿಯ ಈ ಹಂತದಲ್ಲಿ ಭಗವದ್ಗೀತೆಯ ೧೨ ಮತ್ತು ೧೫ ನೆಯ ಅಧ್ಯಾಯಗಳ ಕಲಿಕೆಯಿರುತ್ತದೆ.
  2. ಸ್ತರ ೨ ( Level 2 ) ೪೦ ಪಾಠದ ತರಗತಿಗಳ ಎರಡರಿಂದ ಎರಡೂವರೆ ತಿಂಗಳ ಈ ಅವಧಿಯಲ್ಲಿ ೯, ೧೪, ೧೬ ಹಾಗೂ ೧೭ ನೆಯ ಅಧ್ಯಾಯಗಳ ಕಲಿಕೆ ಸಾಗುತ್ತದೆ.
  3. ಸ್ತರ ೩ ( Level 3 ) ೧೨೦ ಪಾಠದ ತರಗತಿಗಳ ಸುಮಾರು ಐದು ತಿಂಗಳ ಅವಧಿಯ ಇಲ್ಲಿ ೧,೨,೪,೫,೬ ಮತ್ತು ೭ ನೆಯ ಅಧ್ಯಾಯಗಳ ಕಲಿಕೆ.
  4. ಸ್ತರ ೪ ( Level 4) ೧೬೦ ಪಾಠದ ಅವಧಿಯ ಇಲ್ಲಿ ಇನ್ನುಳಿದ ಆರು ಅಧ್ಯಾಯಗಳಾದ ೨,೮,೧೦,೧೧,೧೩ ಹಾಗೂ ೧೮ ನೆಯ ಅಧ್ಯಾಯಗಳೊಂದಿಗೆ ನ್ಯಾಸ, ಧ್ಯಾನ ಶ್ಲೋಕಗಳು, ಗೀತಾ ಮಾಹಾತ್ಮ್ಯಮ್ ಶ್ಲೋಕಗಳೊಡನೆ ಕ್ಷಮಾ ಯಾಚನೆಯ ಶ್ಲೋಕಗಳನ್ನು ಕಲಿಸಿಕೊಡಲಾಗುತ್ತದೆ.

ದೇವನಾಗರಿ ಲಿಪಿಯಲ್ಲಿರುವ ಭಗವದ್ಗೀತೆಯ ಶ್ಲೋಕಗಳನ್ನು ಸಂಸ್ಕೃತ ತಿಳಿಯದಿದ್ದವರೂ ಸಹ ನಿರಾಯಾಸವಾಗಿ ಪಠಿಸುವುದನ್ನು ಕಲಿಸಿಕೊಡುತ್ತಾರೆ. ಗೀತಾಪರಿವಾರದವರು ಕಲಿಕೆಯನ್ನು ಸರಳೀಕರಿಸುವುದಕ್ಕಾಗಿ ಪ್ರತಿಯೊಂದು ಅಧ್ಯಾಯದ ಶ್ಲೋಕಗಳನ್ನು ( ತಾತ್ಪರ್ಯ ಸಹಿತ) ಆಯಾಯ ಭಾಷೆ ಗಳಲ್ಲಿ ಮುದ್ರಿಸಿ pdf ಗಳಾಗಿಸಿ, ವಾಟ್ಸಾಪ್ ಗುಂಪಿನಲ್ಲಿ ಸಿಗುವಂತಹ ವ್ಯವಸ್ಠೆಯನ್ನು ಮಾಡಿರುತ್ತಾರೆ. ಇದರ ಇನ್ನೊಂದು ಲಾಭವೆಂದರೆ ಪ್ರಶಿಕ್ಷಕರು ಶ್ಲೋಕಗಳನ್ನು ಪಠಿಸಿದ ನಂತರ ಸಾಧಕರು ಪುನರುಚ್ಚರಿಸುವಾಗ ಈ pdf ನ ಮುದ್ರಿತ ಪ್ರತಿಗಳನ್ನು ನೋಡಿಕೊಳ್ಳಬಹುದು ಹಾಗೂ ಇದರಲ್ಲಿ ಆಘಾತ, ಅನುಸ್ವಾರ, ವಿಸರ್ಗಗಳನ್ನು ಯಾವ ರೀತಿಯಲ್ಲಿ ಉಚ್ಚರಿಸಬೇಕೆಂಬುದನ್ನೂ ಗುರುತುಮಾಡಿರುವುದರಿಂದ ಉಚ್ಚಾರಣೆಯೂ ಸ್ಪಷ್ಟಗೊಳ್ಳುತ್ತದೆ. ಶ್ಲೋಕಗಳ ಪಠಣವನ್ನು ಸಾಧಕರು audio ಮುಖಾಂತರ ಗುಂಪಿನಲ್ಲಿ ಹಂಚಿಕೊಳ್ಳುವುದು, ಅದಕ್ಕೆ ತಿದ್ದುಪಡಿಗಳೇನಾದರೂ ಇದ್ದರೆ ಪ್ರಶಿಕ್ಷಕರು ಸೂಚಿಸುವ ವ್ಯವಸ್ಥೆಯೂ ಇಲ್ಲಿದೆ. ಶ್ಲೋಕಗಳ ಹ್ರಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ, ಆಘಾತ (ದ್ವಿತ್ವ) ಅವಗ್ರಹ, ಅನುಸ್ವಾರ, ವಿಸರ್ಗ....ಎಲ್ಲವುಗಳ ಶುದ್ಧವಾದ-ಸ್ಪಷ್ಟವಾದ ಉಚ್ಚಾರಣೆಗಳು ವಾರದ ೫ ದಿನಗಳ ತರಗತಿಗಳಲ್ಲಾದರೆ, ವಾರಾಂತ್ಯದಲ್ಲಿ ಆಯಾಯ ಅಧ್ಯಾಯಗಳ ಅರ್ಥವಿವೇಚನೆಗಳೂ ( ಪ್ರಸ್ತುತ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ) ಆಯ್ದ ಭಾನುವಾರಗಳಂದು ತಜ್ಞರಿಂದ ವ್ಯಾಕರಣ ತರಗತಿಗಳೂ ( ಕನ್ನಡ ದಲ್ಲೂ ಇದೆ) ನಡೆಯುತ್ತವೆ. ಸಂಶಯಗಳಿಗೆ ಪರಿಹಾರವೂ ಅಲ್ಲೇ ದೊರಕುತ್ತದೆ.

ಸ್ತರ ೧ ರಲ್ಲಿ ಅಭ್ಯಾಸ ಮಾಡುತ್ತಿರುವ ಸಾಧಕರು ೧೨ ಹಾಗೂ ೧೫ ನೆಯ ಅಧ್ಯಾಯದ ಪಠಣೆ ಮಾಡುತ್ತಿರುವ ವಿಡಿಯೋ ಮಾಡಿ ಕಳುಹಿಸಿದರೆ ಅವರಿಗೆ ""ಗೀತಾಗುಂಜನ್’" ಎಂಬ ಇ-ಪ್ರಮಾಣಪತ್ರ ದೊರೆಯುತ್ತದೆ. ೧೨, ೧೫ ಹಾಗೂ ೧೬ ನೆಯೆ ಅಧ್ಯಾಯದ ಶ್ಲೋಕಗಳೆಲ್ಲವನ್ನು ಕಂಠಸ್ಥವಾಗಿಸಿ ಶುದ್ಧ ಉಚ್ಚಾರಣೆಯೊಂದಿಗೆ ಗೀತಾಪರಿವಾರದವರು ಕೈಗೊಳ್ಳುವ ಪರೀಕ್ಷೆಯನ್ನೆದುರಿಸಿ ತೇರ್ಗಡೆಗೊಂಡರೆ ""ಗೀತಾ ಜಿಜ್ಞಾಸು’" ಪ್ರಮಾಣ ಪತ್ರ ದೊರೆಯುತ್ತದೆ. ಇದೇ ರೀತಿ ೬ ಅಧ್ಯಾಯಗಳ ಕಂಠಪಾಠ ಮಾಡಿ ತೇರ್ಗಡೆಗೊಂಡರೆ ’"ಗೀತಾ ಪಾಠಕ್’"., ೧೨ ಅಧ್ಯಾಯಗಳ ಕಂಠಪಾಠದ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದರೆ ’"ಗೀತಾ ಪಥಿಕ್’" ಹಾಗೂ ಎಲ್ಲಾ ೧೮ ಅಧ್ಯಾಯಗಳ ಪರೀಕ್ಷೆ ಉತ್ತೀರ್ಣರಾದರೆ ’"ಗೀತಾವ್ರತಿ’" ಎಂಬ ಪ್ರಮಾಣಪತ್ರಗಳು ದೊರಕುತ್ತವೆ. ಇವಲ್ಲದೆ ಶ್ಲೋಕಗಳನ್ನು ಹಿಮ್ಮುಖವಾಗಿ ಹೇಳುವ ’"ವಿಚಕ್ಷಣ’" ,ಶ್ಲೋಕಾಂಕಗಳನ್ನು ನೆನಪಿಸಿಕೊಂಡು ಹೇಳುವ,ಅರ್ಥ ಸಹಿತವಾಗಿ ಹೇಳುವ ಪರೀಕ್ಷೆಗಳೂ ಇವೆ. ಪರೀಕ್ಷೆಗಳಿಗೆ ಅಗತ್ಯವಾಗಿರುವಂತಹ ತರಬೇತಿಗಳೂ ಇವೆ. ಯಾವ ಪರೀಕ್ಷೆಗಳೂ ಇಲ್ಲಿ ಕಡ್ಡಾಯವಲ್ಲ.ಐಚ್ಛಿಕ.

ಪ್ರತಿಯೊಂದು ತರಗತಿಗಳ ಆರಂಭಕ್ಕೆ ಮುನ್ನ ಪ್ರಾರಂಭೋತ್ಸವ ವೆಂಬ ಸ್ವಾಗತವೂ, ಮುಕ್ತಾಯಕ್ಕೆ ಮುನ್ನ ಆನಂದೋತ್ಸವವೆಂಬ ಬೀಳ್ಕೊಡುಗೆ ಕಾರ್ಯಕ್ರಮವೂ ಆನ್ಲೈನ್ ನಲ್ಲೇ ಜರಗುತ್ತದೆ.

ಸೇವೆಗಳ ವಿಭಾಗ

ಬದಲಾಯಿಸಿ

ಸುಮಾರು ೩೫ ಕ್ಕೂ ಮಿಕ್ಕಿದ ಸೇವಾ ವಿಭಾಗಗಳು ಇಲ್ಲಿವೆ. ಲಕ್ಷಾಂತರ ಜನರ ಕಲಿಕೆಗೆ ಇದರ ಅಗತ್ಯವೂ ಇದೆ. ಉದಾಹರಣೆಗಾಗಿ ....

  • Calling and support.....ಕರೆ ಮಾಡಿ ಹೊಸಬರ ಸ್ವಾಗತವನ್ನು ಮಾಡುವ ಈ ವಿಭಾಗವನ್ನು ತಳಪಾಯವೆನ್ನಬಹುದು.
  • Technical assistance and communication.....ಆನ್ಲೈನ್ ಮೂಲಕ ವಾಟ್ಸಾಪ್ ನಲ್ಲಿ ನಡೆಯುವ ತರಗತಿಗಳು ಸುಸೂತ್ರವಾಗಿ ಸಾಗಲು ಇವರ ಸೇವೆ ಅಗತ್ಯ. ತರಗತಿಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಿಸುವುದು, ಗುಂಪಿನಲ್ಲಿ ಕೊಂಡಿ ( class link) ಕಳುಹಿಸುವುದು, ಆಡಿಯೋ ಕಳುಹಿಸುವುದು...ಇತ್ಯಾದಿ.
  • Group coordinator.....ಗೀತಾ ಸೇವಿಗಳ ಮಧ್ಯೆ ಸಂವಹನ ನಡೆಸುವುದು. ತಂತ್ರಜ್ಞಾನದ ಇವರಿಗಿರುವುದು ಉತ್ತಮ.
  • Admission department.....ಗೀತಾಪರಿವಾರವನ್ನು ಸೇರುವವರ ದಾಖಲಾತಿಯನ್ನು ಮಾಡುವುದು.
  • Graphic and animation.....ಗೀತಾಪರಿವಾರದ ಪ್ರಕಟಣೆಗಳಿಗೆ ಹೊಂದುವಂತಹ ಆಡಿಯೋ -ವಿಡಿಯೋ ಸಂಯೋಜನೆ ಮಾಡುವುದು.
  • Creative writing.....ಗೀತಾಪರಿವಾರದ ಅಧಿವೇಶನಗಳಿಗೆ ಬೇಕಾಗುವಂತಹ ಸೃಜನಾತ್ಮಕ ಬರವಣಿಗೆಯನ್ನು ವಿವಿಧ ಭಾಷೆಗಳಲ್ಲಿ ಬರೆಯುವುದು.
  • Geeta pracharak department.....ಪ್ರಚಾರ ಕೈಗೊಳ್ಳುವುದು, ಕರಪತ್ರ ಹಂಚುವುದು ಮುಂತಾದ ಕಾರ್ಯಗಳನ್ನು ಮಾಡುವುದು..
  • Offline stores.....ಇಲ್ಲಿ ಪ್ರಕಟಗೊಳ್ಳುವ ಪುಸ್ತಕಗಳ ಮಳಿಗೆಯಿದು.[೨]
  • Trainers.....ಶ್ಲೋಕಗಳ ಸ್ಪಷ್ಟ ಉಚ್ಚಾರಣೆಯನ್ನು ಹೇಳಿಕೊಡುವವರು.

ಪ್ರಶಿಕ್ಷಕರಾಗಲು ಕನಿಷ್ಠವೆಂದರೆ ಜಿಜ್ಞಾಸು ಪರೀಕ್ಸ್ಷೆಯಲ್ಲಿ ೮೫ % ಕ್ಕಿಂತ ಮೇಲ್ಪಟ್ಟ ಅಂಕಗಳಿಂದತೇರ್ಗಡೆಯಾಗಿರಬೇಕು. ಪ್ರತಿಯೊಂದು ವಿಭಾಗದ ಸೇರ್ಪಡೆಗೂ ಮೊದಲು ತರಬೇತಿಯನ್ನು ನೀಡಿ ಸಿದ್ಧಗೊಳಿಸುತ್ತಾರೆ. Mentoring team ತರಗತಿಗಳನ್ನು ಪರಿಶೀಲಿಸುತ್ತಾ, ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತಾರೆ.

ಇತರ ಸೇವೆಗಳು

ಬದಲಾಯಿಸಿ

ಮಹಾರಾಷ್ಟ್ರ ರಾಜಸ್ಥಾನ, ಮಧ್ಯ ಪ್ರದೇಶ ಮುಂತಾದ ಕೆಲವೊಂದು ರಾಜ್ಯಗಳಲ್ಲಿ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಭಗವದ್ಗೀತೆಯನ್ನು zoom ಆನ್ಲೈನ್ ತರಗತಿಗಳ ಮೂಲಕ ಕಲಿಸಿಕೊಡುವಂತಹ ಕಾರ್ಯವನ್ನು ಗೀತಾಪರಿವಾರವು ಮಾಡುತ್ತಿದೆ. ಕೈದಿಗಳೂ ಸಹ ಉತ್ಸಾಹದಿಂದ ಕಲಿಯುತ್ತಿದ್ದು, ಕೆಲವರು ಶ್ಲೋಕಗಳ ಕಂಠಸ್ಥೀಕರಣ ಮಾಡಿಕೊಂಡು ಗೀತಾ ಜಿಜ್ಞಾಸು , ಗೀತಾ ಪಾಠಕ್ ಅರ್ಹತಾಪತ್ರವನ್ನೂ ಪಡೆದುಕೊಂಡಿರುತ್ತಾರೆ.

ಗೀತಾಪರಿವಾರದ ಪ್ರಶಿಕ್ಷಕರ ತಂಡವೊಂದು ಶ್ರೀಮದ್ಭಗವದ್ಗೀತೆಯ offline ತರಗತಿಯನ್ನು ಬೆಂಗಳೂರಿನ ಕನಕಪುರ ರಸ್ತೆಯ, ಬ್ರೂಕ್ಲಿನ್ ಪಬ್ಲಿಕ್ ಶಾಲೆಯ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ (೨೦೨೩–೨೦೨೪ ರ ಶೈಕ್ಷಣಿಕ ವರ್ಷದಲ್ಲಿ) ಕಲಿಸುವಲ್ಲಿ ಸಫಲವಾಯಿತು. ದಿನಾಂಕ ೦೬-೦೩-೨೦೨೪ ಆನಂದೋತ್ಸವವನ್ನು ಶಾಲೆಯಲ್ಲಿ ಆಚರಿಸಿ, ಸ್ತರ ೧ ರ ಅರ್ಹತಾಪತ್ರವನ್ನೂ ಆ ವಿದ್ಯಾರ್ಥಿಗಳಿಗೆ ನೀಡಲಾಯಿತು.

 
ಬ್ರೂಕ್ಲಿನ್ ಪಬ್ಲಿಕ್ ಶಾಲೆಯಲ್ಲಿ ಆನಂದೋತ್ಸವ

ಗೀತಾಮೈತ್ರಿಮಿಲನವೆಂಬ ಕಾರ್ಯಕ್ರಮಗಳನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಹೊರದೇಶಗಳಲ್ಲಿಯೂ ಹಮ್ಮಿಕೊಳ್ಳಲಾಗುತ್ತಿದೆ.[] ಗೀತಾಸೇವಿಗಳೊಂದಿಗೆ ಸಂವಹನ ಇದರಿಂದ ಸಾಧ್ಯವಾಗುತ್ತದೆ. ೨೦೨೪ ರ ಮಾರ್ಚ್ ೩ ರಂದು ಗೀತಾಪರಿವಾರದ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಡಾ.ಆಶುತೋಷ್ ಗೋಯಲ್ (ಎಲ್ಲರ ಮೆಚ್ಚಿನ ಆಶು ಭಯ್ಯಾ) ಅವರು ಬೆಂಗಳೂರಿನಲ್ಲಿ ಗೀತಾಪರಿವಾರದ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

 
ಆಶು ಭಯ್ಯಾ ರೊಂದಿಗೆ ಗೀತಾಸೇವಿಗಳು ಬೆಂಗಳೂರಿನಲ್ಲಿ

ಅರ್ಜುನನಿಗೆ ಶ್ರೀಕೃಷ್ಣನು ಬೋಧಿಸಿದ ಗೀತಾ ತತ್ವವು ಸುಮಾರು ೫೦೦೦ ವರ್ಷಗಳ ಮೊದಲು ಮೋಕ್ಷದಾ ಏಕಾದಶಿಯಂದು ಎಂಬುದನ್ನಾಧರಿಸಿ ಗೀತಾಜಯಂತಿಯನ್ನು ಆಚರಿಸಲಾಗುತ್ತಿದೆ. ೨೦೨೩ ರ ದಶಂಬರ ೨೩ ರ ಮೋಕ್ಷದಾ ಏಕಾದಶಿಯಂದು ಒಂದು ಲಕ್ಷ ಗೀತಾಪ್ರೇಮಿಗಳು ನಿರಂತರವಾಗಿ ೪೨ ಗಂಟೆಗಳ ಕಾಲ ಅಖಂಡ ಗೀತಾಪಾರಾಯಣವನ್ನು ನಡೆಸಿದ್ದರು. ಜಗತ್ತಿನೆಲ್ಲೆಡೆಯ ೧೮೦ ದೇಶಗಳ ಗೀತಾಪ್ರೇಮಿಗಳು ಶ್ರೀಮದ್ಭಗವದ್ಗೀತೆಯ ೧೮ ಅಧ್ಯಾಯಗಳನ್ನು ೧೮ ಬಾರಿ ೧೩ ಭಾಷೆಗಳಲ್ಲಿ ದಶಂಬರ ೨೩ ರ ಪ್ರಾತಃಕಾಲ೬ ಗಂಟೆಯಿಂದ ಆರಂಭಿಸಿ ದಶಂಬರ ೨೪ ರ ಮಧ್ಯರಾತ್ರಿ ೧೨ ಗಂಟೆಯ ತನಕ ನಿರಂತರವಾಗಿ ನಡೆಸಿದ್ದರು.[]

ಪ್ರತೀ ಭಾನುವಾರಗಳಂದು ಸಂಪೂರ್ಣಗೀತಾಪಾರಾಯಣವು ಆನ್ಲೈನ್ ಮೂಲಕ ಸಾಗುತ್ತಿದೆ. ಪ್ರಾರ್ಥನೆ, ದೀಪಪ್ರಜ್ವಲನೆ, ನ್ಯಾಸ, ಗೀತಾಮಹಾತ್ಮ್ಯೆ, ಧ್ಯಾನಮ್ ಸಹಿತ ೧೮ ಅಧ್ಯಾಯಗಳ ಪಠಣ ಹಾಗೂ ಕೊನೆಯಲ್ಲಿ ಕ್ಷಮಾ ಯಾಚನೆ, ಗೀತಾ ಆರತಿ, ಹನುಮಾನ್ ಚಾಲೀಸ್ ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಏಕಾದಶಿ, ದಸರಾದಂತಹ ಪರ್ವಕಾಲಗಳಲ್ಲೂ ಭಗವದ್ಗೀತೆಯ ಪಾರಾಯಣ ನಡೆಯುತ್ತದೆ.

ವಿಶ್ವದ ಅತಿ ದೊಡ್ಡ ಜಾಲತಾಣವಾದ ಈ ಗೀತಾಪರಿವಾರದಲ್ಲಿ ೮೦೦೦ ಕ್ಕೂ ಅಧಿಕ ಗೀತಾಸೇವಿಗಳಿದ್ದು, ೮ ಲಕ್ಷಕ್ಕೂ ಅಧಿಕ ಮಂದಿ ಗೀತೆಯನ್ನು ಕಲಿಯುತ್ತಿದ್ದಾರೆ. ಗೀತಾ ಪರಿವಾರವುಇಂದು ೨೧ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಹೊಂದಿದ್ದು ಸುಮಾರು ಐದು ಲಕ್ಷ ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದೆ. ಅಸಂಖ್ಯಾತ ಕಾರ್ಯಕರ್ತರು ರಾಷ್ಟ್ರದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.ನಗರ ಹಾಗೂ ಹಳ್ಳಿಗಳಲ್ಲಿರುವ ಗೀತಾಪರಿವಾರದ ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ.ಶ್ರೀ ಗೋವಿಂದದೇವ್ ಗಿರಿಜೀ ಮಹಾರಾಜ್ ರವರ ಪಂಚಸೂತ್ರಗಳಾದ ಭಗವದ್ಭಕ್ತಿ, ಭಗವದ್ಗೀತೆ, ಭಾರತಮಾತೆ, ವೈಜ್ಞಾನಿಕ ದೃಷ್ಟಿ, ಸ್ವಾಮಿ ವಿವೇಕಾನಂದ...ಇವುಗಳೇ ಗೀತಾಪರಿವಾರದ ಕಾರ್ಯಗಳಿಗೆ ಆಧಾರವಾಗಿರುತ್ತದೆ.

ಗೀತಾಪರಿವಾರದಲ್ಲಿ ಎಲ್ಲಾ ಕಲಿಕೆಗಳಾಗಲೀ ಸೇವೆಗಳಾಗಲೀ ಉಚಿತ....ನಿಃಶುಲ್ಕವಾಗಿ ನಡೆಯುವಂತಹುದು.

ಗೀತೆ ಕಲಿಯಿರಿ....ಕಲಿಸಿರಿ....ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬುದೇ ಗೀತಾಪರಿವಾರದ ಧ್ಯೇಯವಾಕ್ಯ.

ಬಾಹ್ಯಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2024-03-17. Retrieved 2024-03-17.
  2. https://www.vijayavani.net/gita-maithri-milana-by-gita-parivara-at-bangalore
  3. https://tv9kannada.com/spiritual/geeta-jayanti-akhand-geeta-parayana-by-1-lakh-people-for-42-hours-national-news-akp-746161.html