ಗಂಡ (ಚಂದೇಲರ ಅರಸ)
ಗಂಡ ಎನ್ನುವವನು ಕ್ರಿ. ಶ. ಸು. 1008 ರಿಂದ 1017ರ ವರೆಗೆ ಜೇಜಕಭುಕ್ತಿಯಲ್ಲಿ (ಈಗಿನ ಬುಂದೇಲಖಂಡ) ಆಳಿದ ಚಂದೇಲವಂಶದ ಅರಸ. ಗಂಡದೇವ ಎಂದೂ ಇವನಿಗೆ ಹೆಸರಿದೆ.
ಜೀವನ
ಬದಲಾಯಿಸಿಈತನ ತಂದೆ ಧಂಗ ಸ್ವತಂತ್ರ ಚಂದೇಲ ರಾಜ್ಯದ ಸ್ಥಾಪಕ. ಅವನ ಅನಂತರ ಆಳತೊಡಗಿದ ಗಂಡನ[೧] ಕಾಲದಲ್ಲಿ ಘಜ್ನಿಯ ಮಹಮೂದ ದಂಡೆತ್ತಿ ಬಂದಿದ್ದನೆಂದೂ, ಆಗ ಈತ ಅವನನ್ನು ಎರಡು ಬಾರಿ ಎದುರಿಸಿದನೆಂದೂ ಅನೇಕ ಇತಿಹಾಸಕಾರರು ಬರೆದಿದ್ದಾರೆ. ಕನೌಜಿನ ಅರಸನಾದ ರಾಜ್ಯಪಾಲ ಯುದ್ಧ ಮಾಡದೆ ಮಹಮೂದನಿಗೆ ಶರಣಾದುದನ್ನು ಕಂಡು ಬೇಸತ್ತ ಇತರ ರಜಪೂತ ಅರಸರು ಅವನನ್ನು ದಂಡಿಸಲು ಗಂಡದೇವನ ನೇತೃತ್ವದಲ್ಲಿ ಒಟ್ಟುಗೂಡಿದರೆಂದೂ, ಇವರ ವಿರುದ್ಧ ಹೋರಾಡಲು ಬಂದ ಮಹಮೂದ ಇವರ ಸೈನ್ಯವನ್ನು ಕಂಡು ದಿಗ್ಭ್ರಾಂತನಾದನೆಂದೂ, ಆದರೆ ಕೊನೆಯ ಕ್ಷಣದಲ್ಲಿ ತನ್ನ ಬೆಂಬಲಿಗರ ನಿಷ್ಠೆಯನ್ನು ಸಂದೇಹಿಸಿದ ಗಂಡ ರಣರಂಗದಿಂದ ಕಾಲ್ತೆಗೆದನೆಂದೂ (1019) ಹೇಳಲಾಗಿದೆ. ಮಹಮೂದ ಇನ್ನೊಮ್ಮೆ (1022) ಕಾಲಿಂಜರದ ಕೋಟೆಯನ್ನು ಮುತ್ತಿದಾಗ ಗಂಡ ಅವನಿಗೆ ಹೆದರಿ 300 ಆನೆಗಳನ್ನು ಬಳುವಳಿಯಾಗಿತ್ತು, ಅವನನ್ನು ಹಿಂದಿರುಗಿಸಿದನೆನ್ನಲಾಗಿದೆ.
ಆದರೆ ಇತ್ತೀಚೆಗೆ ಈ ವಿಷಯಗಳನ್ನು ಸಂಶೋಧಕರೊಬ್ಬರು ಅಲ್ಲಗಳೆದಿದ್ದಾರೆ. ಗಂಡನಿಗೆ ಸಂಬಂಧಿಸಿದ ಶಾಸನಗಳಾವುವೂ ಇಲ್ಲ. ಅನಂತರದ ಶಾಸನಗಳಲ್ಲಿಯೂ ಅವನನ್ನು ಕುರಿತ ಉಲ್ಲೇಖದಲ್ಲಿ ವಿಶೇಷಗಳೇನೂ ಕಂಡುಬಂದಿಲ್ಲ. ಅವನು ಪಟ್ಟಕ್ಕೆ ಬಂದ ಅಥವಾ ಮರಣಿಸಿದ ವರ್ಷವೂ ಖಚಿತವಾಗಿ ಗೊತ್ತಿಲ್ಲ. ಗಂಡನ ಮಗನಾದ ವಿಧ್ಯಾಧರ 1019ರಲ್ಲಿ ಆಳುತ್ತಿದ್ದನೆನ್ನಲು ಆಧಾರಗಳಿವೆ. ಅದಕ್ಕೂ ಒಂದೆರಡು ವರ್ಷಗಳ ಮೊದಲೇ ವಿದ್ಯಾಧರ ತನ್ನ ಆಳ್ವಿಕೆಯನ್ನು ಆರಂಭಿಸಿರಬೇಕು. ಎಂದರೆ ಗಂಡನ ಆಳ್ವಿಕೆ ಸುಮಾರು 1017ಕ್ಕೆ ಮುಕ್ತಾಯವಾಗಿರಬೇಕು.[೨][೩] ಮಹಮೂದ 1019 ರಲ್ಲಿ ಕಾಲಂಜರನ್ನು ಮುತ್ತಿದಲ್ಲಿ, ಆ ವೇಳೆಯಲ್ಲಿ ಅಲ್ಲಿ ಗಂಡನ ಮಗನಾದ ವಿದ್ಯಾಧರ ಆಳುತ್ತಿದ್ದನೇ ಹೊರತು ಗಂಡನಲ್ಲ. ಮುಸ್ಲಿಂ ಇತಿಹಾಸಕಾರರು ಉಲ್ಲೇಖಿಸಿರುವ ನಂದ ಎಂಬ ಅರಸನೇ ಗಂಡ ಎಂದು ಭಾವಿಸುವುದು ತಪ್ಪು, ಎಂದು ಇತ್ತೀಚೆಗೆ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ತಂದೆಯಿಂದ ಪಡೆದ ರಾಜ್ಯವನ್ನು ಕಾಪಾಡಿಕೊಂಡು ಬಂದನೆಂಬುದಷ್ಟೇ ಗಂಡ ಗಳಿಸಿದ ಕೀರ್ತಿ.[೪]
ಉಲ್ಲೇಖಗಳು
ಬದಲಾಯಿಸಿ- ↑ Mitra 1977, pp. 71.
- ↑ Mitra 1977, pp. 72–73.
- ↑ Dikshit 1976, p. 72.
- ↑ Mitra 1977, pp. 72.
ಗ್ರಂಥಸೂಚಿ
ಬದಲಾಯಿಸಿ- Mitra, Sisirkumar (1977). The Early Rulers of Khajurāho. Motilal Banarsidass. ISBN 9788120819979.
- Dikshit, R. K. (1976). The Candellas of Jejākabhukti. Abhinav. ISBN 9788170170464.