ಖಂಡೇಯ
ಖಂಡೇಯ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನಲ್ಲಿರುವ ಪ್ರಾಚೀನ ಗ್ರಾಮ. ಭದ್ರಾನದಿಯ ಬಲದಂಡೆಯಲ್ಲಿದೆ. ಕಸಬಕ್ಕೆ ಈಶಾನ್ಯದಲ್ಲಿ ಐದು ಮೈಲಿ ದೂರದಲ್ಲಿ ಭದ್ರಾನದಿ ತಿರುವು ಪಡೆದು ಆನೆ ಬಿದ್ದ ಹಳ್ಳವನ್ನು ಕೂಡುತ್ತದೆ.
ಈಗ ಪಾಳು ಬಿದ್ದಿದ್ದರೂ ಹಿಂದೆ ಈ ಗ್ರಾಮ ಒಂದು ದೊಡ್ಡ ಊರಾಗಿತ್ತೆನ್ನಲಾಗಿದೆ. ಬಹು ಹಿಂದಿನ ಕಾಲದ ಅನೇಕ ದೇವಾಲಯಗಳಿಲ್ಲಿವೆ; ಮುಖ್ಯವಾದುದು ಮಾರ್ಕಂಡೇಶ್ವರ ದೇವಾಲಯ.[೧] ಹೊಯ್ಸಳ ಮತ್ತು ವಿಜಯನಗರದ ಅರಸರ ಕಾಲದ ಶಿಲಾಶಾಸನಗಳನ್ನಿಲ್ಲಿ ಕಾಣಬಹುದು. ಈ ಊರು ಮಾರ್ಕಂಡ (ಮೃಕಂಡು) ಋಷಿಯ ತಪೋವನವಾಗಿತ್ತೆಂದು ಹೇಳಲಾಗಿದೆ. ಈತನ ಪ್ರಸಿದ್ಧ ಪುತ್ರನಾದ ಮಾರ್ಕಂಡೇಯ ಶಿವಸಾನಿಧ್ಯವನ್ನು ಪಡೆದುದು ಇಲ್ಲಿಯೇ ಎನ್ನಲಾಗಿದೆ. ಮಾರ್ಕಂಡೇಯನ ಬದಲು ತನ್ನನ್ನು ಒಪ್ಪಿಸಿದ ಜನಾರ್ಧನನ ಮತ್ತು ಕೃಪೆಗೈದ ಮೃತ್ಯುಂಜಯನ ದೇವಾಲಯಗಳು ಇಲ್ಲಿವೆ. ಖಾಂಡೇಯ ಎಂಬುದು ಮಾರ್ಕಂಡೇಯ ಎಂಬುದರ ಸಂಕ್ಷಿಪ್ತ ರೂಪವಿರಬಹುದು. ಬಳಕೆಯಲ್ಲಿ ಇದನ್ನು ಖಾಂಡ್ಯ ಎನ್ನುವರು.
ಹಳ್ಳಿಯ ಸಮೀಪದಲ್ಲಿ ಹರಿಯುವ ಭದ್ರಾನದಿಯ ನೀರಿನ ರಭಸದಿಂದಾಗಿ ನದೀ ಪಾತ್ರದ ಕರೀಕಲ್ಲು ನೆಲದಲ್ಲಿ ಉಂಟಾಗಿರುವ ಆಳುದ್ದನೆಯ ನುಣುಪಾದ ಗುಣಿಗಳು ಪ್ರೇಕ್ಷಣೀಯವಾಗಿವೆ.