ಕ್ಷೇಮೇಂದ್ರ (ಸು. ಕ್ರಿ.ಶ. 990 – 1070) ೧೧ನೇ ಶತಮಾನದ ಒಬ್ಬ ಕಾಶ್ಮೀರಿ ಸಂಸ್ಕೃತ ಕವಿ.[೧] ಕ್ಷೇಮೇಂದ್ರನು ಒಂದು ಹಳೆ, ಸುಸಂಸ್ಕೃತ, ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದನು.[೨] ಇವನ ತಂದೆ ಪ್ರಕಾಶೇಂದ್ರನು ಜಯಪೀಡನ ಮಂತ್ರಿಯಾಗಿದ್ದ ನರೇಂದ್ರನ ವಂಶಸ್ಥನು.[೩] ಕ್ಷೇಮೇಂದ್ರನ ಶಿಕ್ಷಣ ಮತ್ತು ಸಾಹಿತ್ಯಿಕ ಉತ್ಪತ್ತಿ ಎರಡೂ ವಿಶಾಲ ಮತ್ತು ವೈವಿಧ್ಯಮಯವಾಗಿದ್ದವು. ಇವನು ಸಾಹಿತ್ಯವನ್ನು ತನ್ನ ಕಾಲದ ಅಗ್ರಗಣ್ಯ ಶಿಕ್ಷಕ, ಹೆಸರಾಂತ ಶೈವ ತತ್ವಶಾಸ್ತ್ರಜ್ಞ ಮತ್ತು ಸಾಹಿತ್ಯಿಕ ಪ್ರತಿಪಾದಕ ಅಭಿನವಗುಪ್ತನ ಕೆಳಗೆ ಅಧ್ಯಯನ ಮಾಡಿದನು.[೨] ಕ್ಷೇಮೇಂದ್ರನು ಹುಟ್ಟಿದ್ದು ಶೈವನಾಗಿ, ಆದರೆ ನಂತರ ವೈಷ್ಣವನಾದನು. ಇವನು ವೈಷ್ಣವ ಪಂಥ ಮತ್ತು ಬೌದ್ಧ ಧರ್ಮ ಎರಡನ್ನೂ ಅಧ್ಯಯಿನಿಸದನು ಮತ್ತು ಅವುಗಳ ಬಗ್ಗೆ ಬರೆದನು. ಇವನ ಮಗ ಸೋಮೇಂದ್ರನು ತನ್ನ ಅವದಾನ ಕಲ್ಪಲತಾ ಮತ್ತು ಇತರ ಕೃತಿಗಳ ಪೀಠಿಕೆಯಲ್ಲಿ ತನ್ನ ತಂದೆಯ ಬಗ್ಗೆ ವಿವರಗಳನ್ನು ನೀಡುತ್ತಾನೆ. ಕ್ಷೇಮೇಂದ್ರನು ತನ್ನ ಕೃತಿಗಳಲ್ಲಿ ತನ್ನನ್ನು ವ್ಯಾಸದಾಸನೆಂದು ಹೆಸರಿಸಿಕೊಳ್ಳುತ್ತಾನೆ. ಈ ಬಿರುದನ್ನು ಬಹುಶಃ ತನ್ನ ಕೃತಿ ಭಾರತಮಂಜರಿಯ ಮುಕ್ತಾಯದ ನಂತರ ಗೆದ್ದುಕೊಂಡಿರಬಹುದು ಅಥವಾ ಅಳವಡಿಸಿಕೊಂಡಿರಬಹುದು.

ಕವಿಕಾಲ ವಿಚಾರ

ಬದಲಾಯಿಸಿ

ಕಾಶ್ಮೀರದ ಕವಿಗಳಲ್ಲಿ ಅಗ್ರಗಣ್ಯನೆನಿಸಿರುವ ಈತ ಬಹು ವಿದ್ಯಾಪಾರಂಗತನಾಗಿದ್ದು ಸಂಸ್ಕೃತ ಸಾಹಿತ್ಯದ ವಿಭಿನ್ನ ಕ್ಷೇತ್ರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಈತನ ಕಾಲ ಸುಮಾರು ೯೯೦ ರಿಂದ ೧೦೭೦ ಎನ್ನಲಾಗಿದೆ. ವಿದ್ಯಾವಿವೃತ್ತಿಯನ್ನು(ಪ್ರತ್ಯಭಿಜ್ಞಾ ವಿವೃತಿ ವಿಮರ್ಶಿನಿ) ರಚಿಸಿದ ಅಭಿನವಗುಪ್ತನಲ್ಲಿ ತಾನು ಸಾಹಿತ್ಯ ಶಾಸ್ತ್ರವನ್ನು ಕಲಿತುದಾಗಿ ತನ್ನ ಬೃಹತ್ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ. ಅಭಿನವಗುಪ್ತ ಪ್ರತ್ಯಭಿಜ್ಞಾದರ್ಶನ ವ್ಯಾಖ್ಯಾನ ಬರೆದುದು ೧೦೧೪ರಲ್ಲಿ. ಈ ಆಧಾರದ ಮೇಲೆ ಕ್ಷೇಮೇಂದ್ರ ಸುಮಾರು 990ರಲ್ಲಿ ಹುಟ್ಟಿದವನಾಗಿರಬೇಕೆಂದು ಭಾವಿಸಲಾಗಿದೆ. ಕಾಶ್ಮೀರದಲ್ಲಿ ಆಳಿದ ರಾಜಾ ಅನಂತರ (೧೦೨೨-೧೦೬೩) ಆಸ್ಥಾನದಲ್ಲಿ ತಾನು ಕವಿಯಾಗಿದ್ದುದಾಗಿಯೂ ತನ್ನ ಹಲವಾರು ಕೃತಿಗಳ ಸಮಾಪ್ತಿವಾಕ್ಯಗಳಲ್ಲಿ ಈತನೇ ಹೇಳಿಕೊಂಡಿರುವುದಲ್ಲದೆ ಬೃಹತ್ಕಥಾಮಂಜರಿ ಸಮಯಮಾತೃಕಾ ಮತ್ತು ದಶಾವತಾರ ಚರಿತಗಳಲ್ಲಿ ತಾನು ಅವನ್ನು ರಚಿಸಿದ ಕಾಲವನ್ನೂ ಬರೆದಿಟ್ಟಿದ್ದಾನೆ. ಅದರಂತೆ ಈಗ ಉಪಲಬ್ಧವಾಗಿರುವ ಕೃತಿಗಳಲ್ಲಿ ಬೃಹತ್ಕಥಾಮಂಜರಿ(೧೦೩೭) ಮೊದಮೊದಲು ರಚಿತವಾದುದೆಂದು ದಶಾವತಾರಚರಿತ(೧೦೬೬) ಕೊನೆಯಲ್ಲಿ ರಚಿತವಾದುದೆಂದೂ ಹೇಳಬೇಕು. ಆದ್ದರಿಂದ ಕ್ಷೇಮೇಂದ್ರ ಸುಮಾರು ೧೦೭೦ ರ ವೇಳೆಗೆ ಕಾಲವಾದನೆಂದು ನಂಬಲಾಗಿದೆ.

ತನ್ನ ತಂದೆ ಪ್ರಕಾಶೇಂದ್ರ ತುಂಬ ದಾನಶೀಲನೆಂದೂ ಅವನ ಮನೆ ಅನ್ನಸತ್ರವೇ ಆಗಿತ್ತೆಂದೂ ಆತ ದೇವದ್ವಿಜಮಠಾಧಿಗಳಿಗಾಗಿ ಕೋಟಿಗಟ್ಟಲೆ ಹಣವನ್ನು ನೀಡುತ್ತಿದ್ದುದಾಗಿಯೂ ಆತ ಶೈವನಾಗಿದ್ದು ಅನೇಕ ಶಿವಬಿಂಬಗಳನ್ನು ಶಿವಾಲಯಗಳಲ್ಲಿ ಪ್ರತಿಷ್ಠಿಸಿದುದಲ್ಲದೆ ಅಂಥ ಒಂದು ಬಿಂಬವನ್ನು ಪೂಜಿಸಿ ಅದನ್ನೇ ತಬ್ಬಿಕೊಂಡು ಪ್ರಾಣ ನೀಗಿದುದಾಗಿಯೂ ಬೃಹತ್ಕಥಾಮಂಜರಿಯಲ್ಲಿ ಕ್ಷೇಮೇಂದ್ರನೇ ಹೇಳಿದ್ದಾನೆ. ಇದರಿಂದ ಕ್ಷೇಮೇಂದ್ರನೂ ಜನ್ಮತಃ ಶೈವನೆಂದಂತಾಯಿತು. ಇವನ ಗುರುವಾದ ಅಭಿನವಗುಪ್ತನಂತೂ ಶೈವನೇ. ಆತ ವಾಸವಾಗಿದ್ದುದೂ ಶೈವಮಂಡಲದಲ್ಲೇ. ಹೀಗಿದ್ದರೂ ಕಾಲಕ್ರಮದಲ್ಲಿ ಆತ ವೈಷ್ಣವನಾಗಿಬಿಟ್ಟ. ಇದಕ್ಕೆ ಕಾರಣ ಪರಮ ಭಾಗವತನಾಗಿದ್ದ ಸೋಮಪಾದನ ಅನುಗ್ರಹವೇ ಎಂದು ಕ್ಷೇಮೇಂದ್ರನೇ ತನ್ನ ಬೃಹತ್ ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ.

'ತಸ್ಯಾತ್ಮಜಃ ಸರ್ವಮನೀಷಿ ಶಿಷ್ಯಃ ಶ್ರೀವ್ಯಾಸದಾಸಾಪರಪುಣ್ಯನಾಮಾ

ಎಂಬಲ್ಲಿ ಕ್ಷೇಮೇಂದ್ರ ತಾನು ಸರ್ವಮನೀಷಿಯ ಶಿಷ್ಯನೆಂದೂ ತನಗೆ ವ್ಯಾಸದಾಸ ಎಂಬ ಮತ್ತೊಂದು ಪುಣ್ಯಕರವಾದ ಹೆಸರಿತ್ತೆಂದು ತಿಳಿಸಿರುವುದರಿಂದ ಈ ಸರ್ವಮನೀಷಿಯೇ ಸೋಮಪಾದಾಚಾರ್ಯನಿರಬೇಕೆಂದೂ ಕ್ಷೇಮೇಂದ್ರ ವೈಷ್ಣವನಾದ ಮೇಲೆ (ಭಾರತಮಂಜರಿಯನ್ನು ರಚಿಸಿ?) ವ್ಯಾಸದಾಸನೆಂಬ ಹೆಸರನ್ನು ಪಡೆದಿರಬೇಕೆಂದೂ ಭಾವಿಸಲವಕಾಶವಿದೆ.

ಕೃತಿಗಳು

ಬದಲಾಯಿಸಿ

ಕ್ಷೇಮೇಂದ್ರನು ಉದ್ದದ ಪಠ್ಯಗಳ ನುರಿತ ಸಂಕ್ಷೇಪಕನಾಗಿ ಬಹಳ ಬೇಡಿಕೆಯಲ್ಲಿದ್ದನು. ಇವನ ಸಾಹಿತ್ಯಿಕ ವೃತ್ತಿಜೀವನ ಕನಿಷ್ಠಪಕ್ಷ ೧೦೩೭ರಿಂದ (ಇವನ ಅತ್ಯಂತ ಮುಂಚಿನ ಕೃತಿ ಬೃಹತ್ಕಥಾಮಂಜರಿಯ ಕಾಲ, ಇದು ಕಳೆದುಹೋದ ವಾಯವ್ಯ ಬೃಹತ್ಕಥಾದ ಒಂದು ಗದ್ಯ ಸಾರಾಂಶ, ಇದು ಸ್ವತಃ ಗುಣಾಢ್ಯನ ಕಳೆದುಹೋದ ಬೃಹತ್ಕಥಾದ ಪರಿಷ್ಕರಣೆಯಾಗಿತ್ತು) ೧೦೬೬ರ ವರೆಗೆ (ಇವನ ಕೊನೆಯ ಕೃತಿ ದಶಾವತಾರಚರಿತ, ಇದು ವಿಷ್ಣುವಿನ ಹತ್ತು ಅವತಾರಗಳ ಕುರಿತು ಇತ್ತು) ವಿಸ್ತರಿಸಿತ್ತು.

ದಶಾವತಾರಚರಿತ, ರಾಮಾಯಣಮಂಜರಿ, ಕವಿಕಂಠಾಭರಣಗಳಲ್ಲಿ ಕ್ಷೇಮೇಂದ್ರನೇ ಹೇಳಿಕೊಂಡಿರುವಂತೆ ಇವನ ತಂದೆ ಪ್ರಕಾಶೇಂದ್ರ, ತಾತ ಸಿಂಧು, ಸಹೋದರ ಚಕ್ರಪಾಲ. ಕ್ಷೇಮೇಂದ್ರನ ಮಗ ಸೋಮೇಂದ್ರ ತನ್ನ ತಂದೆ ರಚಿಸಿದ್ದ ಅವದಾನ ಕಲ್ಪತೆಗೆ ೧೦೮ನೆಯ ಪಲ್ಲವವನ್ನು ಬರೆದು ಸೇರಿಸಿ ಉಪೋದ್ಘಾತದಲ್ಲಿ ತನ್ನ ವಂಶ ವೃಕ್ಷವನ್ನು ಈ ರೀತಿ ಕೊಟ್ಟಿದ್ದಾನೆ.

(ವ್ಯಾಸದಾಸ) ಕ್ಷೇಮೇಂದ್ರನಿಂದ ರಚಿತವಾದುವೆಂದು ಈ ವರೆಗೆ ತಿಳಿದು ಬಂದಿರುವ ಗ್ರಂಥಗಳು ೩೫. ಆ ಪೈಕಿ ಉಪಲಬ್ಧವಾಗಿರುವುವು ೧೯. ಅವನ್ನು ಹೀಗೆ ವಿಂಗಡಿಸಬಹುದು:

ಉಪಲಬ್ದ ಕೃತಿಗಳು

ಬದಲಾಯಿಸಿ

ಕ್ಷೇಮೇಂದ್ರನ ಕೃತಿಗಳಲ್ಲಿ ಸುಮಾರು ಹದಿನೆಂಟು ಈಗಲೂ ಲಭ್ಯವಿವೆ ಮತ್ತು ಇನ್ನೂ ಹದಿನಾಲ್ಕು ಇತರ ಸಾಹಿತ್ಯದಲ್ಲಿನ ಉಲ್ಲೇಖಗಳ ಮೂಲಕ ಮಾತ್ರ ತಿಳಿದಿವೆ. ಕೆಳಗೆ ಪಟ್ಟಿಮಾಡಲಾದ ಪ್ರಕಾರಗಳ ಜೊತೆಗೆ, ಇವನು ನಾಟಕಗಳು, ವಿವರಣಾತ್ಮಕ ಕಾವ್ಯಗಳು, ಒಂದು ವಿಡಂಬನಾತ್ಮಕ ಕಾದಂಬರಿ, ಒಂದು ಇತಿಹಾಸ ಮತ್ತು ಪ್ರಾಯಶಃ ಕಾಮಸೂತ್ರದ ಮೇಲೆ ಒಂದು ಭಾಷ್ಯವನ್ನು ರಚಿಸಿದನು.

 1. ಮೂರು ಮಂಜರಿಗಳು-ರಾಮಾಯಣ ಮಂಜರಿ, ಭಾರತಮಂಜರಿ, ಬೃಹತ್ಕಥಾಮಂಜರಿ.
 2. ಎರಡು ಮಹಾಕಾವ್ಯಗಳು-ದಶಾವತಾರಚರಿತ, ಅವದಾನಕಲ್ಪತಾ.
 3. ಎಂಟು ಉಪದೇಶಾತ್ಮಕ ಕಾವ್ಯಗಳು-ಕಲಾವಿಲಾಸ, ಸಮಯ ಮಾತೃಕಾ, ಚಾರುಚಾರ್ಯಾಶತಕ, ಸೇವ್ಯಸೇವಕೋಪದೇಶ, ದರ್ಪದಳನ, ದೇಶೋಪದೇಶ, ನರ್ಮಮಾಲಾ, ಚತುರ್ವರ್ಗ ಸಂಗುಹ.
 4. ಸಾಹಿತ್ಯ ಶಾಸ್ತ್ರದ ಎರಡು ಕೃತಿಗಳು_ಕವಿಕಂಠಾಭರಣ, ಔಚಿತ್ಯವಿಚಾರಚರ್ಚಾ[೪]
 5. ನಾಲ್ಕು ಸಂಕೀರ್ಣ ಕೃತಿಗಳು-ಸುವೃತ್ತತಿಲಕ, ಲೋಕಪ್ರಕಾಶಕೋಶ, ನೀರಿಕಲ್ಪತರು, ವ್ಯಾಸಾಷ್ಟಕ.

ಅನುಪಲಬ್ಧ ಕೃತಿಗಳು

ಬದಲಾಯಿಸಿ
 1. ಕವಿಕಂಠಾಭರಣದಲ್ಲಿ ಉದಾಹೃತವಾಗಿರುವ ಏಳು ಕೃತಿಗಳು-ಶಶಿವಂಶ ಮಹಾಕಾವ್ಯ, ಪದ್ಯ ಕಾದಂಬರೀ, ಅಮೃತತರಂಗಮಹಾಕಾವ್ಯ, ಲಾವಣ್ಯವತೀ, ಕನಕಜಾನಕೀ, ಮುಕ್ತಾವಳೀ, ಚಿತ್ರಭಾರತ ನಾಟಕ.
 2. ಔಚಿತ್ಯವಿಚಾರಚರ್ಚೆಯಲ್ಲಿ ಉದಾಹೃತವಾಗಿರುವ ಏಳು ಕೃತಿಗಳು-ಮುನಿಮತ ಮೀಮಾಂಸಾ, ನೀತಿಲತಾ, ವಿನಯವಲ್ಲೀ, ಅವಸರಸಾರ, ಲಲಿತ ರತ್ನಮಾಲಾ, ಕವಿಕರ್ಣಿಕಾ, ವಾತ್ಸ್ಯಾಯನ ಸೂತ್ರಸಾರ.
 3. ಸುವೃತ್ತ ತಿಲಕದಲ್ಲಿ ಉದಾಹೃತವಾಗಿರುವ ಒಂದು ಕೃತಿ-ಪವನಪಂಚಾಶಿಕಾ.
 4. ಕಲ್ಹಣನ ರಾಜತರಂಗಿಣಿಯಲ್ಲಿ ಕ್ಷೇಮೇಂದ್ರ ರಚಿತವೆಂದು ಉಕ್ತವಾಗಿರುವ ಒಂದು ಕೃತಿ-ನೃಪಾವಳೀ (ರಾಜಾವಳೀ).

ಕ್ಷೇಮೇಂದ್ರನ ಮೂರು ಮಂಜರಿಗಳೂ ಸುಪ್ರಸಿದ್ಧವಾಗಿವೆ. ಸುವಿಸ್ತಾರವಾದ ರಾಮಾಯಣ ಮಹಾಭಾರತಗಳನ್ನು, ಮೂಲದಲ್ಲಿರುವ ಯಾವ ಘಟನೆಯನ್ನೇ ಆಗಲಿ ಉಪಾಖ್ಯಾನವನ್ನೇ ಆಗಲಿ ಬಿಡದಂತೆ, ಪದ್ಯಾತ್ಮಕವಾಗಿಯೇ ಸಂಗ್ರಹಿಸಿರುವುದು ಈ ಮಂಜರಿಗಳ ವೈಶಿಷ್ಟ್ಯ. ಇದರಿಂದ ಆ ಮೂಲಗ್ರಂಥಗಳು ಕ್ಷೇಮೇಂದ್ರನ ಕಾಲದಲ್ಲಿ ಯಾವ ಸ್ವರೂಪದಲ್ಲಿದ್ದುವೆಂಬುದನ್ನು ತಿಳಿಯಲವಕಾಶವಾಗಿದೆ. ಬೃಹತ್ಕಥಾಮಂಜರಿ (೧೦೩೭) ಗುಣಾಢ್ಯನ ಬೃಹತ್ಕಥೆಯ ಸಂಗ್ರಹರೂಪ. ಇದರಲ್ಲಿ 19 ಲಂಬಕಗಳಿವೆ. ಇದರ ಮೊದಲ ಐದು ಲಂಬಕಗಳೂ ಸೋಮದೇವನ ಕಥಾಸರಿತ್ಸಾಗರದ ಕ್ರಮದಲ್ಲೇ ಇದ್ದರೂ ಅಲ್ಲಿಂದ ಮುಂದಕ್ಕೆ ಲಂಬಕಗಳ ಅನುಪೂರ್ವಿ, ವಿಷಯ ಮುಂತಾದವುಗಳಲ್ಲಿ ಗಣನೀಯವಾದ ವ್ಯತ್ಯಾಸಗಳಿರುವುದರಿಂದ ಇಬ್ಬರೂ ಮೂಲ ಬೃಹತ್ಕಥೆಯನ್ನೇ ಸಂಗ್ರಹಿಸಿದ್ದಾರೆಂದು ಹೇಳಲಾಗದು.

ದಶಾವತಾರಚರಿತ ವಿಷ್ಣುವಿನ ಹತ್ತು ಅವತಾರಗಳ ಕಥೆಯನ್ನು ವಸ್ತುವಾಗಿ ಉಳ್ಳ ಹತ್ತು ಸರ್ಗಗಳ ಮಹಾಕಾವ್ಯ. ಒಂದೊಂದು ಅವತಾರದ ಕಥೆಗೂ ಇದರ ಒಂದೊಂದು ಸರ್ಗ ಮೀಸಲಾಗಿದೆ. ರಾಮಾವತಾರದ ನಿರೂಪಣೆಯಲ್ಲಿ ಕವಿಯ ಸ್ವತಂತ್ರ ಕಲ್ಪನೆ ಮನೋಹರವಾಗಿ ಮೂಡಿಬಂದಿದೆ. ವರ್ಣನೆಗಳೂ ಸುಂದರವಾಗಿವೆ. ಬುದ್ಧನನ್ನು ವಿಷ್ಣುವಿನೊಂಬತ್ತನೆಯ ಅವತಾರವೆಂದು ಹೇಳಿರುವ ಗ್ರಂಥಗಳಲ್ಲಿ, ಈಗ ತಿಳಿದಿರುವಂತೆ, ಇದೇ ಅತ್ಯಂತ ಪ್ರಾಚೀನವಾದುದು. ಇಲ್ಲಿ ಬರುವ ಬುದ್ಧನ ಕಥೆ ಬೌದ್ಧಗ್ರಂಥಗಳಲ್ಲಿರುವಂತೆಯೇ ಇದೆ. ಈ ಕಾವ್ಯ ೧೦೬೬ರಲ್ಲಿ ತ್ರಿಪುರೇಶ ಪರ್ವತದ ಮೇಲೆ ರಚಿತವಾಯಿತು.

ಅವದಾನಕಲ್ಪಲತೆಗೆ (೧೦೫೨) ಬೌದ್ಧಾವದಾನ ಕಲ್ಪಲತಾ ಎಂಬ ಹೆಸರೂ ಇದೆ. ಇದರಲ್ಲಿ ಕ್ಷೇಮೇಂದ್ರನಿಂದ ರಚಿತವಾದ ೧೦೭ ಪಲ್ಲವಗಳೂ ಒಟ್ಟು ಸಂಖ್ಯೆ ಶುಭಕರವಾಗಬೇಕೆಂದು ಇವನ ಮಗ ಸೋಮೇಂದ್ರ ರಚಿಸಿದ ಮತ್ತೊಂದು ಪಲ್ಲವವೂ ಸೇರಿ ಒಟ್ಟು ೧೦೮ ಪಲ್ಲವಗಳಿವೆ. ಇದರ ವಸ್ತು ಜಾತಕ ಕಥೆಗಳು. ಈ ಕೃತಿಯನ್ನು ಕ್ಷೇಮೇಂದ್ರ ತನ್ನ ಪರಮಮಿತ್ರನಾದ ನಕ್ಕನ ಅಪೇಕ್ಷೆಯಂತೆ ರಚಿಸಲಾರಂಭಿಸಿ ಮೂರು ಅವದಾನಗಳನ್ನು ಮಾತ್ರ ಬರೆದು ನಿಲ್ಲಿಸಿಬಿಟ್ಟುದಾಗಿಯೂ ಆಗ ಬುದ್ಧನೇ ಸ್ವಪ್ನದಲ್ಲಿ ಇವನಿಗೆ ಕಾಣಿಸಿಕೊಂಡು ಎಲ್ಲ ಅವದಾನಗಳನ್ನೂ ಬರೆಯುವಂತೆ ಸೂಚಿಸಿದುದಾಗಿಯೂ ಅದಕ್ಕೆ ಸರಿಯಾಗಿ ಬೌದ್ಧ ಧರ್ಮ ವಿಷಯಗಳಲ್ಲಿ ನಿಷ್ಣಾತನಾದ ಆಚಾರ್ಯ ವೀರಭದ್ರನ ಸಹಕಾರವೂ ಒದಗಿ ಬಂದಿತೆಂದೂ ಸೂರ್ಯಶ್ರೀ ಎಂಬಾತ ಬರವಣಿಗೆಯ ಕೆಲಸಕ್ಕೆ ನೆರವಾದನೆಂದೂ ಸೋಮೇಂದ್ರನ ಉಪೊದ್ಘಾತದಿಂದ ತಿಳಿದು ಬರುತ್ತದೆ. ೧೨೦೨ರಲ್ಲಿ ಇದನ್ನು ಶಾಕ್ಯಶ್ರೀ ಎಂಬ ಕಾಶ್ಮೀರದ ಪಂಡಿತ ಕುನ್-ಡೋ-ಋಗ್ಯಲ್-ಮ್ ತ್ಷಾನ್ ಎಂಬ ಟೆಬೆಟ್ಟಿನ ಲಾಮಾಗೆ ಕೊಟ್ಟ. ಅದನ್ನು ೭೦ ವರ್ಷಗಳ ಬಳಿಕ ಸೋನ್ ಟಾನ್ ಲೋ ಚಾಮ ಎಂಬಾತ ಟಿಬೆಟನ್ ಭಾಷೆಗೆ ಪರಿವರ್ತಿಸಿದ. ಮೂಲಗ್ರಂಥದ ಮೊದಲ ೪೦ ಅಧ್ಯಾಯಗಳು ಕಾಲ ಕ್ರಮದಲ್ಲಿ ಲುಪ್ತವಾಗಿ ಹೋದುವು. ಉಪಲಬ್ಧವಾಗಿರುವ ಭಾಗದ ಮಾತೃಕೆಯೊಂದರಲ್ಲಿ ಪೂರ್ವಾರ್ಧಂ ಕುತ್ರಚಿತ್ ನ ಪ್ರಾಪ್ತಂ ಎಂದು ಬರೆದಿದೆ. ಈಗ ಆ ಪೂರ್ವಾರ್ಧದ ಸ್ವರೂಪವನ್ನು ಅದರ ಟಬೆಟನ್ ಭಾಷೆಯ ಅನುವಾದದಿಂದಲೇ ತಿಳಿಯಬೇಕಾಗಿದೆ.

ಕ್ಷೇಮೇಂದ್ರನ ಉಪದೇಶಾತ್ಮಕ ಕಾವ್ಯಗಳೆಲ್ಲವೂ ಅತ್ಯುತ್ತಮವಾಗಿವೆ. ಹತ್ತು ಸರ್ಗಗಳ ಇವನ ಕಲಾವಿಲಾಸದಲ್ಲಿ ಗೌಡದೇಶೀಯರ ವಂಚನೆಯೂ (ಬಂಗಾಳಿ ವಿದ್ಯೆ) ಮೂಲದೇವನ ವಿಚಾರವೂ ಕಾಯಸ್ಥರ (ಕರಣಿಕ) ದುರ್ಮಾರ್ಗತನವು ಮೋಹಡಂಭ ಕಾಮ ಮುಂತಾದವುಗಳ ದುರ್ಲಕ್ಷಣಗಳೂ ಹೃದಯಂಗಮವಾಗಿ ಚಿತ್ರಿತವಾಗಿವೆ. ಸಮಯಮಾತೃಕೆ ಎಂಬ ಕೃತಿ ವೇಶ್ಯೆಯರು ಪುರುಷರನ್ನು ಆಕರ್ಷಿಸುವ ರೀತಿಗಳು, ವೇಶ್ಯಾಗೃಹಗಳಲ್ಲಿ ನಡೆಯುವ ಹೀನ ಕಾರ್ಯಗಳು, ವೇಶ್ಯಾಪ್ರಿಯರ ೮೦ ಬಗೆಗಳು, ಧನಹೀನನನ್ನು ವೇಶ್ಯೆಯರು ದೂರೀಕರಿಸುವ ೨೩ ದಾರಿಗಳು-ಮುಂತಾದುವನ್ನು ಕಲಾವತೀ ಎಂಬ ನಾಯಿಕೆಯ ಕಥೆಯ ಮೂಲಕ ಸ್ವಾರಸ್ಯವಾಗಿ ಎಂಟು ಅಧ್ಯಾಯಗಳಲ್ಲಿ ವರ್ಣಿಸುತ್ತದೆ. ಇದರಲ್ಲಿ ವಿದೇಶಿಯರ ಕೆಲವು ವೇಷ ಭಾಷೆ ಆಚಾರ ವ್ಯವಹಾರಗಳು ಚಿತ್ರಿತವಾಗಿವೆ. ಚಾರುಚರ್ಯಾಶತಕ ಅನುಷ್ಟುಪ್ ಶ್ಲೋಕಗಳಲ್ಲಿ ರಚಿತವಾದ ನೀತಿ ಗ್ರಂಥ. ಇದರ ಪ್ರತಿಯೊಂದು ಶ್ಲೋಕವೂ ಪೂರ್ವಾರ್ಧದಲ್ಲಿ ನೀತಿಯೊಂದನ್ನು ಉಲ್ಲೇಖಿಸಿ ಉತ್ತರಾರ್ಧದಲ್ಲಿ ರಾಮಾಯಣ ಭಾರತಾದಿಗಳಿಂದ ಆರಿಸಿದ ಉದಾಹರಣೆಯನ್ನು ನೀಡುತ್ತದೆ. ಈ ಶತಕದಿಂದ ಸ್ಫೂರ್ತಿಗೊಂಡೇ ದ್ಯಾದ್ವಿವೇದ (೧೪೦೪) ತನ್ನ ನೀತಿಮಂಜರಿಯನ್ನು ರಚಿಸಿದ. ಜಲ್ಹಣನ (೧೧೫೦) ಮುಗ್ಧೋಪದೇಶದಲ್ಲಿ ಕ್ಷೇಮೇಂದ್ರನ ಚಾರುಚಾರ್ಯ ಮತ್ತು ಸಮಯಮಾತೃಕೆಗಳ ಪ್ರಭಾವವನ್ನು ಕಾಣಬಹುದು. ಸೇವ್ಯಸೇವಕೋಪದೇಶ ೬೧ ಶ್ಲೋಕಗಳಲ್ಲಿ ಸೇವ್ಯರಾದ ಅಧಿಕಾರಗಳ ಉಚ್ಛೃಂಖಲ ವರ್ತನವನ್ನೂ ಸೇವಕರ ಕಷ್ಟಕಾರ್ಪಣ್ಯಗಳನ್ನೂ ದಾಕ್ಷಿಣಾತ್ಯರ ನಟನೆ, ಕಿರಾತರ ದರ್ಪ ಮುಂತಾದುವನ್ನೂ ಯಥಾವತ್ತಾಗಿ ನಿರೂಪಿಸುತ್ತದೆ. ದರ್ಪದಳನವೆಂಬುದು ವಿಚಾರಗಳೆಂಬ ಏಳು ಅಧ್ಯಾಯಗಳ ಕಾವ್ಯ. ದರ್ಪಕ್ಕೆ ಕಾರಣಗಳಾದ ಕುಲ ಧನ ರೂಪ ಮುಂತಾದುವನ್ನು ಇಲ್ಲಿನ ಅಧ್ಯಾಯಗಳು ಪ್ರತ್ಯೇಕವಾಗಿ ವಿವರಿಸಿ ಅವುಗಳ ಅನ್ವರ್ಥಕಾರಿತ್ವವನ್ನು ದೃಷ್ಟಾಂತ ರೂಪವಾದ ಒಂದೊಂದು ಕಥೆಯ ಮೂಲಕ ನಿರೂಪಿಸುತ್ತವೆ. ಇದರಲ್ಲಿ ನೀತಿ ವಾಕ್ಯಗಳೂ ಗಾದೆಗಳೂ ಹೇರಳವಾಗಿವೆ. ದೇಶೋಪದೇಶ ಆ ಕಾಲದ ದುಷ್ಟಪದ್ಧತಿಗಳನ್ನೂ ದುರ್ಜನ ಲೋಭಿ ವೇಶ್ಯ ವಿಟ ಮುಂತಾದವರನ್ನೂ ಉಪದೇಶಗಳೆಂಬ ಎಂಟು ಪ್ರಕರಣಗಳಲ್ಲಿ ಹಾಸ್ಯಾತ್ಮಕವಾಗಿ ಚಿತ್ರಿಸುತ್ತದೆ. ಇದು ಕಲಾವಿಲಾಸಕ್ಕಿಂತ ಮೊದಲೇ ರಚಿತವಾಗಿರಬೇಕು. ನರ್ಮಮಾಲಾದಲ್ಲಿ ಪರಿಹಾಸಗಳೆಂಬ ಮೂರು ವಿಭಾಗಗಳಿವೆ. ಇವುಗಳಲ್ಲಿ ಕಾಯಸ್ಥನ (ಕರಣಿಕ) ದೌರ್ಜನ್ಯವನ್ನು ಗೇಲಿ ಮಾಡಲಾಗಿದೆ; ಅವನನ್ನು 'ದಿವಿರ ನೆಂದೂ ದೈತ್ಯರ ಮನೆವಾರ್ತೆಯ ಅವತಾರವೆಂದೂ ವರ್ಣಿಸಿ, ಅವನ ಲಂಚಕೋರತನವೇ ಮುಂತಾದ ದುಃಸ್ವಭಾವಗಳನ್ನೂ ತತ್ಫಲವಾದ ಅವನ ದುರಂತವನ್ನೂ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಚತುರ್ವರ್ಗ ಸಂಗ್ರಹ ಪರಿಣಾಮಕಾರಿಯಾಗಿ ವಿವರಿಸುತ್ತದೆ.

ಕವಿಕಂಠಾಭರಣ ಅಲಂಕಾರಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಇದರಲ್ಲಿ ಕವಿತ್ವಪ್ರಾಪ್ತಿ, ಕವಿತ್ವಶಿಕ್ಷಣ, ಕವಿತ್ವಚಮತ್ಕಾರ, ಗುಣದೋಷ ವಿಭಾಗ ಪರಿಚಯ ಪ್ರಾಪ್ತಿ-ಎಂಬುದಾಗಿ ಐದು ಪ್ರಕರಣಗಳಿವೆ. ಕವಿತ್ವಪ್ರಾಪ್ತಿಗೆ ಮನುಷ್ಯಪ್ರಯತ್ನ, ದೈವಾನುಗ್ರಹ ಎರಡೂ ಅವಶ್ಯಕವೆಂಬುದು ಕ್ಷೇಮೇಂದ್ರನ ಅಭಿಪ್ರಾಯ. ಈತ ಕವಿಗಳನ್ನು ಛಾಯೋಪಜೀವಿ, ಪದಕೋಪಜೀವಿ ಪಾದೋಪಜೀವಿ, ಸಕಲೋಪಜೀವಿ, ಭುವನೋಪಜೀವಿ ಎಂದು ಐದು ಬಗೆಯಾಗಿ ವಿಂಗಡಿಸಿ ಕವಿಗೆ ಇರಲೇಬೇಕಾದ ಅನೇಕ ವಿಷಯಗಳ ಪಾಂಡಿತ್ಯವನ್ನು ಪ್ರಸ್ತಾವಿಸಿದ್ದಾನೆ. ಕವಿತ್ವಚಮತ್ಕಾರದಲ್ಲಿ ಅವಿಚಾರ್ಯಮಾಣ ರಮಣೀಯತೆ, ವಿಚಾರ್ಯಮಾಣ ರಮಣೀಯತೆ, ಸಮಸ್ತಸೂಕ್ತವ್ಯಾಹಿ, ಸೂಕ್ತೈಕದೇಶದೃಶ್ಯ, ಶಬ್ದಗತ, ಅರ್ಥಗತ, ಶಬ್ದಾರ್ಥಗತ, ಅಲಂಕಾರಗತ, ರಸಗತ, ಪ್ರಖ್ಯಾತ ವ್ಯಕ್ತಿಗತ-ಎಂಬ ಹತ್ತು ವಿಧಗಳನ್ನು ಉಲ್ಲೇಖಿಸಿ ತನ್ನ ಶಶಿವಂಶ ಮಹಾಕಾವ್ಯ, ಪದ್ಯಕಾದಂಬರೀ ಮುಂತಾದ ಕೃತಿಗಳಲ್ಲಿ ಬರುವ ಶ್ಲೋಕಗಳ ಉದಾಹರಣೆಗಳೊಡನೆ ಪ್ರತಿಪಾದಿಸಿದ್ದಾನೆ. ಕಾವ್ಯದಲ್ಲಿ ಶಬ್ದಾರ್ಥಗಳ ಕಾಲುಷ್ಯದಿಂದಲೇ ದೋಷಗಳುಂಟಾಗುವುದೆಂದೂ ಕಾವ್ಯಗಳು ಸಗುಣ, ನಿರ್ಗುಣ, ಸದೋಷ, ನಿರ್ದೋಷ, ಸುಗುಣದೋಷಗಳೆಂದು ಐದು ಬಗೆಯಾಗಿವೆಯೆಂದೂ ಗುಣದೋಷ ವಿಭಾಗದಲ್ಲಿ ಕ್ಷೇಮೇಂದ್ರ ನಿರೂಪಿಸಿದ್ದಾನೆ. ಕೊನೆಯ ಪ್ರಕರಣದಲ್ಲಿ ತರ್ಕ, ವ್ಯಾಕರಣ, ಭರತಶಾಸ್ತ್ರ, ವತ್ಸ್ಯಾಯನಶಾಸ್ತ್ರ, ರಾಮಾಯಣ, ಭಾರತ, ಮೋಕ್ಷವಿದ್ಯೆ, ರತ್ನಪರೀಕ್ಷೆ, ವೈದ್ಯ, ಜೋತಿಷ, ಧಾತುವಾದ, ಧನುರ್ವೇದ, ಗಜತುರಗಪುರುಷ ಲಕ್ಷಣ, ಇಂದ್ರಜಾಲ, ದ್ಯೂತ-ಮುಂತಾದ ಅನೇಕಾನೇಕ ವಿದ್ಯೆಗಳ ಪರಿಚಯ ಕವಿಗೆ ಇದ್ದೇ ತೀರಬೇಕೆಂದು ಸೋದಾಹರಣವಾಗಿ ಉಪಪಾದಿಸಿದ್ದಾನೆ. ಅನೇಕ ಕವಿಗಳ ಶ್ಲೋಕಗಳು ಕವಿಕಂಠಾಭರಣದಲ್ಲಿ ಉದಾಹೃತವಾಗಿರುವುದು ಆ ಕವಿಗಳ ಕಾಲ ನಿರ್ಣಯಕ್ಕೆ ಸಹಾಯಕವಾಗಿದೆ.

ಔಚಿತ್ಯವಿಚಾರಚರ್ಚೆಯಲ್ಲಿ ಕ್ಷೇಮೇಂದ್ರ 'ಔಚಿತ್ಯಂ ರಸಸಿದ್ಧಸ್ಯ ಸ್ಥಿರಂ ಕಾವ್ಯಸ್ಯ ಜೀವಿತಂ' ಎಂಬ ಔಚಿತ್ಯ ಸಂಪ್ರದಾಯವನ್ನು ನಿಷ್ಕøಷ್ಟವಾಗಿ ಪ್ರತಿಪಾದಿಸಿದ್ದಾನೆ. ಕಾವ್ಯಕ್ಕೆ ಉತ್ಕರ್ಷವುಂಟಾಗುವುದು ಅದರಲ್ಲಿನ ಪದ, ವಾಕ್ಯ, ಅರ್ಥ, ಗುಣ ಅಲಂಕಾರ, ರಸ ಮುಂತಾದವುಗಳಲ್ಲೆಲ್ಲ ಇರುವ ಔಚಿತ್ಯದಿಂದಲೇ ಎಂದು ಸಮರ್ಥಿಸಿ ಪ್ರಸಿದ್ಧ ಕವಿಗಳ ಪ್ರಯೋಗಗಳಲ್ಲೂ ಈತ ದೋಷಗಳನ್ನು ತೋರಿಸಿದ್ದಾನೆ. ಉದಾಹರಣೆಗಳನ್ನು ತನ್ನ ಮತ್ತು ಇತರರ ಕೃತಿಗಳಿಂದ ಆರಿಸಿಕೊಟ್ಟಿದ್ದಾನೆ. ಔಚಿತ್ಯ ಸಂಪ್ರದಾಯಕ್ಕೆ ಸಿದ್ಧಾಂತಸ್ವರೂಪವನ್ನು ಕೊಟ್ಟ ಕೀರ್ತಿ ಕ್ಷೇಮೇಂದ್ರನಿಗೆ ಮೀಸಲು. ಕುಂತೇಶ್ವರದೌತ್ಯವೆಂಬುದು ಕಾಳಿದಾಸ ವಿರಚಿತವೆಂದು ಈ ಗ್ರಂಥದಲ್ಲಿ ಹೇಳಿದೆ.

ಸುವೃತ್ತತಿಲಕ ಛಂದಃಶಾಸ್ತ್ರದ ಗ್ರಂಥ. ಇದರಲ್ಲಿ ವಿನ್ಯಾಸಗಳೆಂಬ ಮೂರು ಪ್ರಕರಣಗಳಿವೆ. ಮೊದಲನೆಯದರಲ್ಲಿ ೨೪ ವೃತ್ತಗಳ ಸೋದಾಹರಣ ಲಕ್ಷಣಗಳು ಎರಡನೆಯದರಲ್ಲಿ ಗುಣದೋಷ ವರ್ಣನವೂ ಮೂರನೆಯದರಲ್ಲಿ ವೃತ್ತಗಳ ಪ್ರಯೋಜನವೂ ವಿವರಿಸಲ್ಪಟ್ಟಿವೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವೃತ್ತವನ್ನು ಬಳಸಬೇಕೆಂದು ನಿರೂಪಿಸಿರುವ ಛಂದಃಶಾಸ್ತ್ರಗ್ರಂಥ ಇದೊಂದೇ.

ಲೋಕಪ್ರಕಾಶಕೋಶ ಇತರ ಕೋಶಗಳಂತೆಯೇ ಇದ್ದರೂ ನಿತ್ಯವ್ಯವಹಾರದ ಹುಂಡಿ, ಕಾಯಸ್ಥ ಮುಂತಾದ ಅನೇಕ ಶಬ್ದಗಳೂ ಕಾಶ್ಮೀರಿ ಅಧಿಕಾರಿಸ್ಥಾನಗಳು ವಿವರಗಳೂ ಕಾಶ್ಮೀರದ ಪರಗಣ ವಿಭಾಗಗಳೂ ಬಂದಿರುವುದು ಇದರ ವೈಶಿಷ್ಟ್ಯ ಇದರ ಮಾತೃಕೆಗಳು ಅಸಮಗ್ರ ಸ್ಥಿತಿಯಲ್ಲಿರುವುದರಿಂದ ಇದು ಇನ್ನೂ ಮುದ್ರಿತವಾಗಿಲ್ಲ. ನೀತಿಕಲ್ಪತರು ವ್ಯಾಸನ ರಾಜನೀತಿಯ ವ್ಯಾಖ್ಯಾನ ರೂಪವಾಗಿದೆ. ವ್ಯಾಸಾಷ್ಟಕ ಮಹಾಭಾರತದ ಕರ್ತೃವಾದ ವ್ಯಾಸಮಹರ್ಷಿಗಳ ಮೇಲೆ ರಚಿತವಾದ ಎಂಟು ಶ್ಲೋಕಗಳ ಸ್ತೋತ್ರ. ಇದನ್ನು ಭಾರತ ಮಂಜರಿಯ ಅನುಬಂಧವೆಂದು ಪರಿಗಣಿಸಬಹುದು.

ಸಂಕ್ಷೇಪಣಗಳು

ಬದಲಾಯಿಸಿ
 • ರಾಮಯಣಮಂಜರಿರಾಮಾಯಣದ ಗದ್ಯ ಸಂಕ್ಷೇಪಣ (Sanskrit)
 • ಭಾರತಮಂಜರಿಮಹಾಭಾರತದ ಗದ್ಯ ಸಂಕ್ಷೇಪಣ (Sanskrit)
 • ಬೃಹತ್ಕಥಾಮಂಜರಿ — ಬೃಹತ್ಕಥಾದ ಗದ್ಯ ಸಂಕ್ಷೇಪಣ (Sanskrit)

ಬಾಹ್ಯ ಕೊಂಡಿ

ಬದಲಾಯಿಸಿ
 1. https://www.wikiwand.com/kn/ಕಥಾಸರಿತ್ಸಾಗರ

ಉಲ್ಲೇಖಗಳು

ಬದಲಾಯಿಸಿ
 1. http://14.139.13.47:8080/jspui/bitstream/10603/110466/8/08_chapter%202.pdf[ಶಾಶ್ವತವಾಗಿ ಮಡಿದ ಕೊಂಡಿ]
 2. ೨.೦ ೨.೧ Haksar 2011, p. xv.
 3. Warder 1992, p. 365.
 4. https://lekhaki.blogspot.com/2013/11/blog-post.html
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: