ಕೊಂದೆ (ಕಕ್ಕೆ, ಸ್ವರ್ಣಪುಷ್ಪ) ಎಂಬ ಹೆಸರಿನಿಂದ ಕರೆಯಲ್ಪಡುವ ಮರವು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಮಾರ್ಚ್-ಮೇ ತಿಂಗಳಲ್ಲಿ ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ Golden Shower Treeಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯಪುಷ್ಪ. ಅಂತೆಯೇ ಕೇರಳರಾಜ್ಯದ ರಾಜ್ಯಪುಷ್ಪವಾಗಿದೆ. ತಮಿಳಿನಲ್ಲಿ ಈ ಹೂವನ್ನು "ಕೊಂಡ್ರೈ" ಎಂದು ಕರೆಯುತ್ತಾರೆ. ತಮಿಳಿನ ಪ್ರಾಚೀನ 'ಸಂಗಂ ಸಾಹಿತ್ಯ'ದಲ್ಲಿ ಕೊಂಡ್ರೈ ಹೂವಿನ ಪ್ರಸ್ತಾಪವಿದೆ. ಅದರ ಪ್ರಕಾರ ಇದು ಶಿವನಿಗೆ ತುಂಬಾ ಪ್ರಿಯವಾದ ಹೂವಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ಫಬಸಿಯೆ ಕುಟುಂಬದಲ್ಲಿaesalpinieaeಉಪ ಕುಟುಂಬಕ್ಕೆ ಸೇರಿದ್ದು, ಕಾಸಿಯ ಫಿಸ್ಟುಲ (Cassia fistula)ಎಂದು ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತಭಾಷೆಯಲ್ಲಿ 'ಸುವರ್ಣಕ'ಮಲೆಯಾಳಮ್ಭಾಷೆಯಲ್ಲಿ 'ಕೊನ್ನೆ' ಮುಂತಾಗಿ ಹೆಸರು ಇದೆ. ಇದಕ್ಕೆ ಇಂಡಿಯನ್ ಲಬರ್ನಮ್ ಎಂಬ ಹೆಸರೂ ಉಂಟು.

 
ಕೊಂದೆ ಹೂ

ಸಸ್ಯದ ಗುಣಲಕ್ಷಣಗಳು

ಬದಲಾಯಿಸಿ

ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಸಂಯುಕ್ತಪರ್ಣಿ ಎಲೆಗಳು ಚಿಗುರಿದಾಗ ಉಜ್ವಲ ಹಸಿರು ಬಣ್ಣದ ಎಲೆಗಳು ಮತ್ತು ತೂಗಾಡುವ ಹಳದಿ ಬಣ್ಣದ ಹೂಗಳು ಅಂದವಾಗಿ ಕಾಣುತ್ತದೆ. ಉದ್ದವಾದ ಬೀಜಕೋಶಗಾಯಿ(Pods)ಜೋಲಾಡುತ್ತಿರುತ್ತದೆ. ಇದರ ದಾರುವು ಗಡುಸಾಗಿದ್ದು, ಬಾಳಿಕೆಯುತವಾಗಿದೆ. ಕಕ್ಕೆ ಮರ 15'-20' ಎತ್ತರಕ್ಕೆ ಬೆಳೆಯುತ್ತದೆ. ಅತ್ಯಲ್ಪಕಾಲ ಎಲೆ ಉದುರಿದ್ದು ಏಪ್ರಿಲ್-ಮೇ ತಿಂಗಳುಗಳಲ್ಲಿ ಹೊಸ ಚಿಗುರು ಬರುವುದು. ಚಿಗುರಿನೊಂದಿಗೇ ಉದ್ದನೆ ಜೋಲಾಡುವ ಹಳದಿಯ ಹೂಗೊಂಚಲುಗಳು ಮೂಡಿ ಗಿಡ ನೋಡಲು ಅತ್ಯಂತ ಸುಂದರವೂ ಆಕರ್ಷಣೀಯವೂ ಆಗುತ್ತದೆ. ಹೂಗಳು ಹಳದಿ ಅಥವಾ ನಸುಗೆಂಪಾಗಿದ್ದು ಸುವಾಸನೆ ಬೀರುತ್ತಿರುತ್ತವೆ. ಜನವರಿ-ಮಾರ್ಚಿ ತಿಂಗಳುಗಳಲ್ಲಿ ಬಲಿಯುವ ಕಾಯಿಗಳು ಒಂದರಿಂದ ಎರಡು ಮೀ ಉದ್ದವಿದ್ದು, ಕಂದುಬಣ್ಣದ ಉರಳೆ ಆಕಾರದಲ್ಲಿ ನೇತಾಡುತ್ತಿರುತ್ತವೆ. ಮರ ಕತ್ತರಿಸಿದಾಗ ಹೊಸ ಚಿಗುರು, ಬೇರುಸಸಿಗಳು ಧಾರಾಳವಾಗಿ ಬರುತ್ತವೆ. ಕೋತಿ, ಕರಡಿ, ಹಂದಿ ಇತ್ಯಾದಿ ಪ್ರಾಣಿಗಳು ಕಾಯಿಯ ತಿರುಳನ್ನು ತಿಂದು ಮಲದಲ್ಲಿ ವಿಸರ್ಜಿಸಿದ ಬೀಜ ಸುಲಭವಾಗಿ ಮೊಳೆತು ಹೊಸ ಗಿಡಗಳು ಹುಟ್ಟುತ್ತವೆ. ಇದರ ಚೌಬೀನೆ ಗಡುಸಾಗಿದ್ದು, ಬಾಳಿಕೆ ಬರುವುದರಿಂದ ಮನೆ ಕಂಬಗಳಿಗೂ ಗಾಡಿಸಾಮಾನುಗಳಿಗೂ ವ್ಯವಸಾಯದ ಉಪಕರಣಗಳಿಗೂ ಉಪಯೋಗವಾಗುತ್ತದೆ. ಕಾಯ ತಿರುಳನ್ನು (ಪಲ್ಪ್‌) ತೀಕ್ಷ್ಣವಾದ ಹಾಗೂ ಸುಖವಿರೇಚಕವಾಗಿ ಬಳಸುವುದುಂಟು. ಈ ಮರದ ಒಣತೊಗಟೆಯನ್ನು ಚರ್ಮ ಹದಮಾಡಲು ಉಪಯೋಗಿಸುತ್ತಾರೆ. ಕರ್ನಾಟಕ ರಾಜ್ಯದ ಅರಣ್ಯಗಳಲ್ಲಿ ಇದನ್ನು ಗೌಣಸಸ್ಯಗಳಲ್ಲಿ ಮುಖ್ಯವಾದುದೆಂಬ ಕಾರಣದಿಂದ ಚೆನ್ನಾಗಿ ಕೃಷಿಮಾಡುತ್ತಿದ್ದಾರೆ.

ಉಪಯೋಗಗಳು

ಬದಲಾಯಿಸಿ

ಅಲಂಕಾರಕ್ಕೆ ಬೆಳೆಸುತ್ತಾರೆ. ದಾರುವು ಮನೆ ಕಂಬಗಳು, ಕೃಷಿ ಉಪಕರಣಗಳ ತಯಾರಿಯಲ್ಲಿ ಬಳಸಲ್ಪಡುತ್ತದೆ. ಕಾಯಿ ಹಾಗೂ ಹೂ ಆಯುರ್ವೇದಔಷಧಗಳಲ್ಲಿ ಬಳಕೆಯಲ್ಲಿದೆ. ಮುಖ್ಯವಾಗಿ ವಿರೇಚಕವಾಗಿ, ವಾತ ಸಂಬಂಧಿ ಔಷಧಗಳಲ್ಲಿ ಉಪಯೋಗದಲ್ಲಿದೆ.

  • ಬಹುಮೂತ್ರ ಮತ್ತು ಬಾಯಾರಿಕೆ ಕಕ್ಕೆ ಗಿಡದ ಎಲೆ,ತಿರುಳು ಕಾಯಿ ಹೂವು ಬೇರು ಸಮತೂಕ ತಂದು ನೆರಳಿನಲ್ಲಿ ಒಣಗಿಸಿ ನಯವಾಗಿ ಚೂರ್ಣಿಸುವುದು.2ಗ್ರಾಂ ಈ ಚೂರ್ಣಕ್ಕೆ 2ಗ್ರಾಂ ನೆಲ್ಲಿಚೆಟ್ಟಿನ ಚೂರ್ಣ, 2 1\2 ಗ್ರಾಂ ಅರಿಶಿಣದ ಚೂರ್ಣ ಸೇರಿಸಿ ಚೂರ್ಣ ಮಾಡುವುದು. 2ಗ್ರಾಂ ಚೂರ್ಣವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕದಡಿ ಕುಡಿಸುವುದು.ಹೀಗೆ5-7ದಿವಸಗಳು ಮುಂದುವರಿಸಬೇಕು.
  • ವರೇಚಕವಾಗಿ ಮತ್ತು ಕೆಮ್ಮಿಗೆ ಸುಮಾರು 5ಗ್ರಾಂ ಕಕ್ಕೆ ಗಿಡದ ಅಂಟನ್ನು ತಂದು ಎರಡು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕುವುದು ಬೆಳಿಗ್ಗೆ ಈ ಅಂಟನ್ನು ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಕೊಳ್ಳುವುದು ,5ಗ್ರಾಂ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು ಇದರಿಂದ ಒಂದೆರಡು ಸಲ ಬೇದಿ ಆಗಿ .ಅಜೀರ್ಣ ಹೊಟ್ಟೆಯುಬ್ಬರ ಮಲಬದ್ದತೆ ಪರಿಹಾರವಾಗುತ್ತದೆ.
  • ಗಂಟಲು ಬೇನೆ ಒಳಗಡೆ ಗಂಟಲು ಊದಿಕೊಂಡಿರುವುದು ಮತ್ತು ನುಂಗಲು ಕಷ್ಟವಾಗಿರುವುದು.10ಗ್ರಾಂ ಕಕ್ಕೆ ಅಂಟನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ಮಾಡಿ ತಣ್ಣಗಾದ ಮೇಲೆ ಬಾಯಿ ಮುಕ್ಕಳಿಸುವುದು ಪ್ರತಿ ದಿನ 3ರಿಂದ 4ಬಾರೀ ಅಥವಾ ಅರ್ಧ ಲೀಟರ್ ಹಸುವಿನ ಹಾಲಿನಲ್ಲಿ 10ಗ್ರಾಂ ಕಕ್ಕೆ ಅಂಟನ್ನು ಹಾಕಿ ಚೆನ್ನಾಗಿ ಮರಳಿಸುವುದು. ಬಿಸಿಯಾದಾಗ ಬರುವ ಆವಿಯನ್ನು ಬಾಯಲ್ಲಿ ಸ್ವಲ್ಪ ಸೇದಿ ಗಂಟಲಿಗೆ ತಾಗಿಸುವುದು .ಕಂಟಕಾರಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ ರಸವನ್ನು ಗಂಟಲಿನ ಮೇಲೆ ಮಂದವಾಗಿ ಲೇಪಿಸುವುದು.
  • ಕೆಮ್ಮಿನಲ್ಲಿ ಕಕ್ಕೆ ಕಾಯಿಯನ್ನು ಚೆನ್ನಾಗಿ ಒಣಗಿಸಿ ಸುಟ್ಟು ಬೂದಿ ಮಾಡುವುದು ಕಾಲು ಟೀ ಚಮಚ ಈ ಬೂದಿಯೊಂದಿಗೆ ಒಂದು ಚಿಟಿಕೆ ಉಪ್ಪಿನ ಪುಡಿ ಮತ್ತು ಒಂದು ಟೀ ಚಮಚ ಜೇನು ಕಲಸಿ ನೆಕ್ಕುವುದು. ದಿವಸಕ್ಕೆ 2 ರಿಂದ 3 ಬಾರಿ. ಮಲಬದ್ಧತೆ. 5ಗ್ರಾಂ ಕಕ್ಕೆ ಕಾಯಿಯ ಒಳಗಡೆಯ ತಿರುಳನ್ನು ರಾತ್ರಿ ಶುದ್ಧವಾದ ಒಂದು ಬಟ್ಟಲು ನೀರಿನಲ್ಲಿ ನೆನೆಹಾಕುವುದು. ಬೆಳಗ್ಗೆ ಶೋಧಿಸಿದ ಈ ನೀರಿಗೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಒಂದೆರಡು ಬೇದಿ ಆಗಿ ಪರಿಸ್ಥಿತಿ ಸುಧಾರಿಸುವುದು. ಹೀಗೆ ಪರಿಹಾರ ಸಿಗುವವರೆಗೂ ಸೇವಿಸುವುದು.
  • ರಕ್ತ ಪಿತ್ತಕ್ಕೆ ಕಕ್ಕೆ ಅಂಟು ಮತ್ತು ನೆಲಿ ಚೆಟ್ಟು ಚೂರ್ಣವನ್ನು ಸಮಭಾಗ ಚೂರ್ಣಿಸಿ 10ಗ್ರಾಂ ಚೂರ್ಣವನ್ನು ಕಾಲು ಲೀಟರು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಅಷ್ಟಾಂಶ ಕಷಾಯ ಮಾಡುವುದು. ಒಂದು ಟೀ ಚಮಚ ಕಷಾಯಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಪುಡಿ ಮತ್ತು ಜೇನು ಸೇರಿಸಿ ಸೇವಿಸುವುದು. ಹೀಗೆ 7 ದಿವಸ.
  • ಕುಷ್ಟರೋಗಕ್ಕೆ ಕಕ್ಕೆಯ ಅಂಟು, ಆಡುಸೋಗೆ, ಅಮೃತಬಳ್ಳಿ ಸಮತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಚತುಷ್ಟಾಂಶ ಕಷಾಯ ಮಾಡುವುದು. ಕಾಲು ಬಟ್ಟಲು ಕಷಾಯಕ್ಕೆ ಸ್ವಲ್ಪ ಹರಳೆಣ್ಣೆ ಸೇರಿಸಿ ಸೇವಿಸಲು ಕೊಡುವುದು. ಕೆಲವು ವಾರಗಳು ಚಿಕಿತ್ಸೆಯನ್ನು ಮುಂದುವರಿಸುವುದು.
  • ಕೊರಳು ಬಾವಿನಲ್ಲಿ ಅಕ್ಕಿ ಅಕ್ಕಚ್ಚಿನಲ್ಲಿ ಬಲಿತ ಕಕ್ಕೆ ಗಿಡದ ಬೇರನ್ನು ತೇದು ಕೊರಳಬಾವಿಗೆ ಮಂದವಾಗಿ ಲೇಪಿಸುವುದು.

ಛಾಯಾಂಕಣ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

  Media related to Cassia fistula at Wikimedia Commons Database on state of environment, Kerala (2008): Kerala Symbols Archived 2008-03-07 ವೇಬ್ಯಾಕ್ ಮೆಷಿನ್ ನಲ್ಲಿ.

ಆಧಾರ ಗ್ರಂಥಗಳು

ಬದಲಾಯಿಸಿ

ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೊಂದೆ&oldid=1223001" ಇಂದ ಪಡೆಯಲ್ಪಟ್ಟಿದೆ