ಕೈದಾಳ ಗ್ರಾಮವು ತುಮಕೂರಿನಿಂದ ಸುಮಾರು ೭ ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗಣೇಶನ ದೇವಾಲಯವಿರುವ ಗೂಳೂರು ಸಿಗುತ್ತದೆ. ಗೂಳೂರಿನಿಂದ ಬಲಕ್ಕೆ ತಿರುಗಿ ೧ ಕಿ.ಮೀ ಚಲಿಸಿದರೆ ಕೈದಾಳ ತಲುಪಬಹುದು.

ಹತ್ತಿರದ ಐತಿಹಾಸಿಕ ಪುಣ್ಯಕ್ಷೇತ್ರಗಳು: ೧.ಗೂಳೂರು, ೨.ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ,

ಚರಿತ್ರೆ

ಬದಲಾಯಿಸಿ

ಹಿಂದೆ ಇದು ಒಂದು ಪುಟ್ಟ ರಾಜ್ಯದ ಮುಖ್ಯನಗರವಾಗಿತ್ತೆಂದೂ ಇದಕ್ಕೆ ಕ್ರೀಡಾಪುರವೆಂಬ ಹೆಸರಿತ್ತೆಂದೂ ತಿಳಿದುಬರುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿಯ ಜನ್ಮಸ್ಥಳವಾಗಿತ್ತೆಂದೂ ಐತಿಹ್ಯವುಂಟು. ಜಕಣಾಚಾರಿಯ ಮಗ ಡಕಣಾಚಾರಿ ಬೇಲೂರು ಚೆನ್ನಿಗರಾಯಮೂರ್ತಿಯ ಶಿಲ್ಪವಿಷಯದಲ್ಲಿ ತಂದೆಯನ್ನು ಸೋಲಿಸಿದಾಗ ಆತ ತನ್ನ ಬಲಗೈಯನ್ನು ಕತ್ತರಿಸಿಕೊಂಡನೆಂದೂ ಅವನಿಗೆ ಕನಸಿನಲ್ಲಿ ಬಂದ ಆದೇಶದ ಪ್ರಕಾರ ಸ್ವಸ್ಥಳವಾದ ಕೈದಾಳಕ್ಕೆ ಹಿಂದಿರುಗಿ ಅಲ್ಲಿ ಚೆನ್ನಿಗರಾಯನ ದೇವಾಲಯ ನಿರ್ಮಿಸಲು ಅವನಿಗೆ ಪುನಃ ಕೈ ಬಂತೆಂದೂ ಆದ್ದರಿಂದ ಆ ಊರಿಗೆ ಕೈದಾಳವೆಂಬ ಹೆಸರಾಯಿತೆಂದೂ ಐತಿಹ್ಯವಿದೆ.

ವಾಸ್ತುಶೈಲಿ

ಬದಲಾಯಿಸಿ

ಇಲ್ಲಿ ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿತವಾಗಿರುವ ಚೆನ್ನಕೇಶವ ದೇವಾಲಯದ ಬಳಿಯಲ್ಲಿರುವ ಗಂಗಾಧರೇಶ್ವರ ದೇವಾಲಯದಲ್ಲಿ ಒಂದು ಶಾಸನ ದೊರಕಿದೆ. 1150-51ರಲ್ಲಿ ಹೊಯ್ಸಳ 1ನೆಯ ನರಸಿಂಹನ ಸಾಮಂತನಾಗಿದ್ದ ಬಾಚಿ ಅಥವಾ ಗುಳೇ-ಬಾಚಿ ಎಂಬವನು ಈ ದೇವಸ್ಥಾನವನ್ನೂ ಇತರ ವಿಷ್ಣು ಜಿನ ದೇವಾಲಯಗಳನ್ನೂ ಕಟ್ಟಿಸಿದನೆಂದು ಆ ಶಾಸನದಿಂದ ತಿಳಿದುಬರುತ್ತದೆ. ಈ ದೇವಾಲಯದ ಮಹಾದ್ವಾರದ ಮೇಲಿನ ಸುಂದರವಾದ ಗೋಪುರ ವಿಜಯನಗರ ಕಾಲದಲ್ಲಿ ನಿರ್ಮಿತವಾದ್ದು. ಚೆನ್ನಿಗರಾಯನ ಮೂಲವಿಗ್ರಹ ಬಹಳ ಸುಂದರವಾಗಿದೆ; ೫ ೧/೨' ಎತ್ತರವಿದೆ. ೨ ೧/೨' ಎತ್ತರದ ಪೀಠದ ಮೇಲೆ ಅದನ್ನು ನಿಲ್ಲಿಸಲಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳಿವೆ. ಮಹಾದ್ವಾರದ ಬಲಬದಿಯ ಕಂಬವೊಂದರ ಮೇಲೆ ಪತ್ನೀಸಹಿತನಾದ ಚೆನ್ನಕೇಶವನನ್ನೂ ಎಡಗಡೆಯ ಕಂಬದ ಮೇಲೆ ಅಂಜಲಿಬದ್ಧನೂ ಉತ್ತರೀಯಧಾರಿಯೂ ಖಡ್ಗಭೂಷಿತನೂ ಆದ ಮೂರ್ತಿಯನ್ನು ಚಿತ್ರಿಸಲಾಗಿದೆ. ಇದು ಜಕಣಾಚಾರಿಯ ಮೂರ್ತಿಯೆಂದು ಹೇಳಲಾಗಿದೆ. ಆದರೆ ಇದು ದೇವಾಲಯವನ್ನು ನಿರ್ಮಿಸಿದ ಬಾಚಿ ಸಾಮಂತನ ಮೂರ್ತಿಯಾಗಿರಬಹುದು.

ಚೆನ್ನಕೇಶವ ಮಂದಿರದ ಪೂರ್ವದಲ್ಲಿರುವ ಗಂಗಾಧರೇಶ್ವರ ದೇವಾಲಯ ದ್ರಾವಿಡ ಶೈಲಿಗೆ ಸೇರಿದ್ದು. ಅದರ ನವರಂಗದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲಾದ, ಕರಿಕಲ್ಲಿನ, ನಯವಾದ ನಾಲ್ಕು ಕಂಬಗಳುಂಟು. ಈ ಕಂಬಗಳ ತಳಭಾಗದ ನಾಲ್ಕು ಪಕ್ಕಗಳಲ್ಲೂ ಶಿವ, ಬ್ರಹ್ಮ, ವಿಷ್ಣು, ಭೈರವ, ಕೃಷ್ಣ, ಗಣಪತಿ, ವೀರಭದ್ರ ಮುಂತಾದ ದೇವತೆಗಳ ಉಬ್ಬುಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಗೋಡೆಗಳ ಹೊರವಲಯ ಆನೆ ಮತ್ತು ಹೂವಿನ ಚಿತ್ರಣಗಳ ಪಟ್ಟಿಕೆಗಳಿಂದ ಅಲಂಕೃತವಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈದಾಳ&oldid=1000020" ಇಂದ ಪಡೆಯಲ್ಪಟ್ಟಿದೆ